ಮೂರು ತಲೆಮಾರುಗಳ ಸಾಂಸಾರಿಕ ಜೀವನದ ಚಿತ್ರಣ 'ನೀರಿನೊಳಗಿನ ಮಂಜು’ : ಅಮಿತ್ ಕಾಮತ್


ಭೂ ವ್ಯಾಜ್ಯ,ದಾಯಾದಿ ಕಾಳಗ,ವೃದ್ಧಾಪ್ಯ ಜೀವನದ ಸವಾಲುಗಳು,ಸ್ತ್ರೀ ಸಹಜ ಮಾತ್ಸರ್ಯದ ಕುರಿತಾದ ಅನೇಕ ಒಳಸುಳಿಗಳನ್ನು ಕೃತಿಯು ಚರ್ಚಿಸುತ್ತದೆ. ಎಷ್ಟೇ ಆತ್ಮೀಯ ಸಂಬಂಧಗಳಿರಲಿ ನಮಗೆ ತಿಳಿಯದ ಅಥವಾ ಗ್ರಹಿಕೆಗೆ ನಿಲುಕದ ಅನೇಕ ವಿಚಾರಗಳು ನೀರಿನೊಳಗಿನ ಮಂಜಿನಂತೆ ಅವ್ಯಕ್ತವಾಗಿರುತ್ತವೆ ಮತ್ತು ಯಾರೂ ಇದಕ್ಕೆ ಹೊರತಲ್ಲ ಎಂಬುದನ್ನು ಬಹಳ ಮಾರ್ಮಿಕವಾಗಿ ಚಿತ್ರಿಸಲಾಗಿದೆ ಎನ್ನುತ್ತಾರೆ ಬರಹಗಾರ ಅಮಿತ್ ಕಾಮತ್. ಲೇಖಕ, ಕಾದಂಬರಿಕಾರ ನಾ.ಮೊಗಸಾಲೆಯವರ ನೀರಿನೊಳಗಿನ ಮಂಜು ಕೃತಿಯ ಬಗ್ಗೆ ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..

ಕೃತಿ: ನೀರಿನೊಳಗಿನ ಮಂಜು
ಲೇಖಕರು: ನಾ.ಮೊಗಸಾಲೆ
ಪ್ರಕಾಶಕರು: ಅಂಕಿತ ಪುಸ್ತಕ ಬೆಂಗಳೂರು

ಹಾಗೆ ನೋಡಿದರೆ ಕಾದಂಬರಿಯ ಶೀರ್ಷಿಕೆಯು ಇಡೀ ಕೃತಿಯ ಅಂತರಂಗವನ್ನು ಧ್ವನಿಸುತ್ತದೆ. ಯಾವುದೇ ವ್ಯಕ್ತಿ ಅಥವಾ ವಿಚಾರಗಳಿರಲಿ ಕಂಡದ್ದಕ್ಕಿಂತ ಕಾಣದಿರುವ ಒಳಸುಳಿಗಳೇ ಹೆಚ್ಚು ಎಂಬುದನ್ನು ಇಡೀ ಕಾದಂಬರಿಯು ತೆರೆದಿಡುತ್ತದೆ. ಮೊಗಸಾಲೆ ಅವರ "ಧಾತು" ಕೃತಿಯನ್ನು ಓದಿದವರಿಗೆ ಇದೂ ಅದೇ ಜಾಡಿನ ಕೃತಿ ಎನಿಸಿದರೂ ಒಬ್ಬ ಲೇಖಕರಾಗಿ ಅವರು ಹೊಸತನಕ್ಕೆ ತೆರೆದುಕೊಳ್ಳಬಲ್ಲ ಪ್ರಯೋಗಶೀಲ ಲೇಖಕರಾಗಿ ಕಾಣುತ್ತಾರೆ.

ಕಾದಂಬರಿಯ ಪೂರ್ವಾರ್ಧ ಸಾಹಿತಿ ನಿವೃತ್ತ ಪ್ರಾಧ್ಯಾಪಕ ಶ್ರೀನಿವಾಸರಾಯರು ದೇವರ ಅಸ್ತಿತ್ವದ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಮಾಡಿದ ವ್ಯಾಖ್ಯಾನವೊಂದರ ನಂತರ ಅವರ ಮೇಲೆ ನಡೆದ ಬಲಪ್ರಯೋಗ ಮತ್ತು ಬೆದರಿಕೆಯ ಮೂಲಕ ಪ್ರಾರಂಭವಾಗುತ್ತದೆ. ಒಂದು ತರಹ ಧಾರ್ಮಿಕ ಮತಾಂಧರ ಕೃತ್ಯದ ಜಾಡನ್ನು ಇದೇನು ಹಿಡಿಯುತ್ತದೆ ಎನ್ನುವಷ್ಟರಲ್ಲಿ ಇತರ ಪಾತ್ರಗಳಾದ ಸದಾಶಿವ ಶೆಟ್ಟರು, ರಾಯರ ಪತ್ನಿ ಸರೋಜ, ನಿವೃತ್ತ ಮಿಲಿಟರಿ ಉದ್ಯೋಗಿ ಸುಧೀರ ಶೆಟ್ಟರ ವೈಯಕ್ತಿಕ ಜೀವನದ ಅನೇಕ ಮಜಲುಗಳನ್ನು ತೆರೆದಿಡುತ್ತದೆ. ಭೂ ವ್ಯಾಜ್ಯ,ದಾಯಾದಿ ಕಾಳಗ,ವೃದ್ಧಾಪ್ಯ ಜೀವನದ ಸವಾಲುಗಳು,ಸ್ತ್ರೀ ಸಹಜ ಮಾತ್ಸರ್ಯದ ಕುರಿತಾದ ಅನೇಕ ಒಳಸುಳಿಗಳನ್ನು ಕೃತಿಯು ಚರ್ಚಿಸುತ್ತದೆ. ಎಷ್ಟೇ ಆತ್ಮೀಯ ಸಂಬಂಧಗಳಿರಲಿ ನಮಗೆ ತಿಳಿಯದ ಅಥವಾ ಗ್ರಹಿಕೆಗೆ ನಿಲುಕದ ಅನೇಕ ವಿಚಾರಗಳು ನೀರಿನೊಳಗಿನ ಮಂಜಿನಂತೆ ಅವ್ಯಕ್ತವಾಗಿರುತ್ತವೆ ಮತ್ತು ಯಾರೂ ಇದಕ್ಕೆ ಹೊರತಲ್ಲ ಎಂಬುದನ್ನು ಬಹಳ ಮಾರ್ಮಿಕವಾಗಿ ಹೇಳುತ್ತಾರೆ ಲೇಖಕರು.

ಉತ್ತರಾರ್ಧದಲ್ಲಿ ಕೃತಿಯು ಬೇರೆಯೇ ತಿರುವನ್ನು ಪಡೆದುಕೊಂಡು ಕೊಂಚ ವೇಗವನ್ನು ಪಡೆದುಕೊಳ್ಳುತ್ತಾ ಮುಂದಕ್ಕೆ ಸಾಗುತ್ತದೆ. ಶ್ರೀನಿವಾಸರಾಯರ ಹಳೆಯ ಸಹೋದ್ಯೋಗಿ ಜಯಂತಿ ಕುಲಕರ್ಣಿಯ ಮಗಳ ಸಾಂಸಾರಿಕ ಜೀವನದಲ್ಲಿ ಎದ್ದ ಬಿರುಗಾಳಿಯನ್ನು ಶಮನ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವ ರಾಯರು,ಲೈಂಗಿಕ ಜೀವನದ ವಿಚಾರದಲ್ಲಿ ನಮ್ಮಲ್ಲಿರುವ ಅಪನಂಬಿಕೆಗಳು,ತಪ್ಪು ತಿಳುವಳಿಕೆಗಳು, ಅರ್ಧಂಬರ್ಧ ಜ್ಞಾನದಿಂದುಂಟಾಗುವ ತಪ್ಪು ಕಲ್ಪನೆಗಳನ್ನು ಬಿಚ್ಚಿಡುತ್ತಾರೆ. ಒಟ್ಟು ಮೂರು ತಲೆಮಾರುಗಳ ಸಾಂಸಾರಿಕ ಜೀವನವನ್ನು ಚಿತ್ರಿಸುವ ಮೂಲಕ "ಕಾಮ" ಎಂಬುದರ ವ್ಯಾಖ್ಯಾನ ಸಂಕುಚಿತವಾಗುತ್ತಿರುವುದನ್ನು ಚೆನ್ನಾಗಿ ಮನದಟ್ಟಾಗುವಂತೆ ನಿರೂಪಿಸಿದ್ದಾರೆ. "ಕಾಮ" ಎಂದರೆ ಬರೀ ಲೈಂಗಿಕ ಆಸಕ್ತಿಯ ವಿಚಾರವಲ್ಲ, ನಮ್ಮನ್ನು ನಾವೇ ಪ್ರೀತಿಸುವ ಕಲೆ ಎಂಬ ಸಾಲುಗಳನ್ನು ಓದುವಾಗ ಆ ಒಂದು ಶಬ್ದವನ್ನು ನಮ್ಮ ಸಮಾಜ ಯಾವ ರೀತಿ ಕುಲಗೆಡಿಸಿದೆ ಎಂಬುದನ್ನು ಮನಗಾಣಬಹುದು. ಲೈಂಗಿಕತೆ ಎನ್ನುವುದು ಕೊಂಡುಕೊಳ್ಳುವ ಪ್ರಕ್ರಿಯೆ, ಗಂಡು ಹೆಣ್ಣು ಅದನ್ನು ಸಮನಾಗಿ ಹಂಚಿಕೊಳ್ಳಲು ಬಾಧ್ಯಸ್ಥರು,ಅಲ್ಲಿ ಯಾವುದೇ ತರಹದ ಆಕ್ರಮಣಕಾರಿ ಮನೋಭಾವ ಸಲ್ಲದು ಮುಂತಾದ ಅನೇಕ ಹೊಸ ವಿಚಾರಗಳು ಎರಡನೇ ಭಾಗದಲ್ಲಿವೆ.

ಕಾದಂಬರಿಯ ಮುಕ್ತಾಯ ನನ್ನನ್ನು ಚಕಿತಗೊಳಿಸಿತು. ಅದು ಲೇಖಕರ ಜೀವನಾನುಭವ ಮತ್ತು ಒಟ್ಟು ಸಮಾಜದಲ್ಲಿ ಗಂಡಿನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದುದರ ಫಲಶ್ರುತಿ ಇರಬಹುದು. ಪ್ರಸ್ತುತ ಸಮಾಜದಲ್ಲಿ ಗಂಡಸು ಮತ್ತು ಹೆಂಗಸು ಇಬ್ಬರೂ ಪರಿಸ್ಥಿತಿಯ ಲಾಭವನ್ನು ಪಡೆಯಲು ಇಚ್ಛಿಸುವವರೇ. ಪರಿಸ್ಥಿತಿಯ ಪ್ರಯೋಜನವನ್ನು ಪಡೆದುಕೊಳ್ಳುವ ಪ್ರಮಾಣ ಹೆಚ್ಚು ಕಮ್ಮಿ ಇರಬಹುದು ಅಷ್ಟೇ. ಹಾಗಾಗಿ ಕೃತಿಯ ಮುಕ್ತಾಯವನ್ನು ಒಪ್ಪಿಕೊಳ್ಳುವುದು ಅಥವಾ ಒಪ್ಪದಿರುವುದು ವೈಯಕ್ತಿಕ ವಿಚಾರ. ಆದರೆ ವಿದ್ಯಾವಂತ ಸಮಾಜದಲ್ಲೂ ಲೈಂಗಿಕತೆಯ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳು ಮತ್ತು ಅದಕ್ಕೆ ಪರಿಹಾರವನ್ನು ಈ ಕಾದಂಬರಿಯು ತೆರೆದಿಡುತ್ತದೆ. ಸರಳ ಶೈಲಿಯ ಕಾದಂಬರಿಯಾದರೂ ವಿಭಿನ್ನ ವಿಚಾರಗಳನ್ನೊಳಗೊಂಡ ಗಹನವಾದ ಕೃತಿ ಇದು.

ನಮಸ್ಕಾರ,
ಅಮಿತ್ ಕಾಮತ್

MORE FEATURES

ಬೊಗಸೆಯಲ್ಲಿ ವಿಷಮ ಕಾಲಘಟ್ಟದ ನೆನಪುಗಳು

20-04-2024 ಬೆಂಗಳೂರು

“ದೇಹಕ್ಕೆ ಗಾಯವಾದರೆ ಮೌನವಾಗಿದ್ದರೂ ವಾಸಿಯಾಗುತ್ತದೆ. ಆದರೆ, ದೇಶಕ್ಕೆ ಗಾಯವಾದಾಗ ಮೌನವಾಗಿದ್ದಷ್ಟು ಜಾಸ್ತಿಯಾಗು...

ಕಮಲಾದಾಸ್ ಭಾರತೀಯ ಸಾಹಿತ್ಯ ಜಗತ್ತಿನಲ್ಲಿಯೇ ಖ್ಯಾತ ಹೆಸರು

20-04-2024 ಬೆಂಗಳೂರು

'ನಿನಗೆ ನನ್ನ ಅನುಮತಿ ಬೇಕಾಗಿಲ್ಲ. ನೀನು ನನ್ನ ಯಾವ ಕತೆಯನ್ನಾದರೂ ಅನುವಾದಿಸಿ ಪತ್ರಿಕೆಗಳಿಗೆ ಕಳಿಸ್ಕೊ' ಎಂದ...

ಸಾಹಿತ್ಯದ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರಿಗೆ ಈ ಗ್ರಂಥ ಉಪಯುಕ್ತ

20-04-2024 ಬೆಂಗಳೂರು

‘ಈ ವಿಮರ್ಶಾ ಗ್ರಂಥವು ಡಾ. ಪೂರ್ಣಿಮಾ ಶೆಟ್ಟಿ ಇವರ ಅಪಾರ ಓದನ್ನು ಮಾತ್ರ ತೋರಿಸುವುದಲ್ಲದೆ ಅವರಿಗೆ ವಿವಿಧ ಸಾಹಿತ...