ನಾವ್ಯಾಕೆ ಇನ್ನೊಬ್ಬರನ್ನು ಕಾಳಜಿಯಿಂದ ಓದಲಾರೆವು...

Date: 05-02-2024

Location: ಬೆಂಗಳೂರು


"ಅದೆಷ್ಟೋ ಹೆಸರಿಡಲಾಗದ ಸಂಬಂಧಗಳು ನಮ್ಮನ್ನು ತಾಕುತ್ತವೆ, ತಡವುತ್ತವೆ. ಆದರೆ ನಾವೇ ಕಟ್ಟಿಕೊಂಡ ಸಮಾಜ ಮೊಹರು ಒತ್ತಿರುವ ಕೆಲವೇ ಸಂಬಂಧಗಳು ಇಲ್ಲಿ ಊರ್ಜಿತವಾಗುತ್ತವೆ. ಸಮಾಜದ ಚೌಕಟ್ಟಿನಾಚೆಯ ಸಂಬಂಧಗಳು ಮಾತ್ರ ಯಾರಿಗೂ ಕಾಣದಂತೆ ಮನಸಿನ ಪುಸ್ತಕದ ಕೊನೆಪುಟದ ಕೊನೇ ಸಾಲಿನ ಕೊನೆಯ 'ವಿಷಾದ' ಎನ್ನುವ ಶಬ್ದದಲ್ಲಿ ಇಂಗಿ ಹೋಗಿಬಿಡುತ್ತವೆ... ಅವನ್ನು ಓದಿ ಅರ್ಥಮಾಡಿಕೊಳ್ಳಲೂ ಒಂದು ಅಂತಃಕರಣ ಬೇಕು," ಎನ್ನುತ್ತಾರೆ ಆಶಾ ಜಗದೀಶ್. ಅವರು ತಮ್ಮ ‘ಚಿತ್ತ ಪೃಥವಿಯಲ್ಲಿ’ ಅಂಕಣಕ್ಕೆ ಬರೆದ ಲೇಖನವಿದು.

ನಾವು ಯಾರೂ ಯಾರಿಗೂ ಅರ್ಥವೇ ಆಗುವುದಿಲ್ಲ. ಅರ್ಥವಾಗದೇ ಉಳಿದು, ಒಂದು ದಿನ ಇಲ್ಲವಾಗಿಬಿಡುತ್ತೇವೆ. ಹತ್ತಿರದ ಒಂದಷ್ಟು ಜನ, ಒಂದಷ್ಟು ದಿನ ನಮ್ಮ ನೆನಹನ್ನು ನೇವರಿಸಿ, ನಂತರ ಅದರ ಕಾಡುವಿಕೆಯ ತೀವ್ರತೆಯನ್ನು ತಪ್ಪಿಸಿಕೊಂಡು ಉಳಿಯಲು ಆ ನೆನಹುಗಳನ್ನು ಉಜ್ಜಿ ಉಜ್ಜಿ ಅಳಿಸತೊಡಗುತ್ತಾರೆ. ಮತ್ತೆ ಆ ಒಂದು ಸುದಿನ ಬಂದೇ ಬಿಡುತ್ತದೆ. ಕೊನೆಯ ಚುಕ್ಕಿಯೂ ಇಲ್ಲದಂತೆ ನಾವು ಇಲ್ಲವಾಗುತ್ತೇವೆ. ಹುಡುಕಿದರೂ ನಮ್ಮದೊಂದು ವಾಸನೆಯೂ ಸಿಗುವುದಿಲ್ಲ. ಇದೆಲ್ಲ ನಮಗೆ ಗೊತ್ತು. ಜಗತ್ತಿಗೆ ಬಂದ ಎಲ್ಲರಿಗೂ ಅರಿವಾಗುವ ಸತ್ಯ. ಬಂದವರನ್ನು ಸ್ವಾಗತಿಸುವಷ್ಟೇ ಸಲೀಸಾಗಿ ಹೋಗುವವರನ್ನು ಕಳಿಸಿಕೊಡುತ್ತೇವೆ. ಆದರೆ ಇರುವ ಕಾಲವನ್ನು ತಳ್ಳಿಬಿಡುವ ಮುನ್ನ ನಿಂತು ಯೋಚಿಸದೇ ಹೋಗುತ್ತೇವಲ್ಲ ಯಾಕೆ... ಯಾತಕ್ಕಾಗಿ ಈ ಧಾವಂತ, ಅವಸರ...

ನಾವ್ಯಾಕೆ ನಮ್ಮನ್ನು ತೆರೆದು ತೋರಿಸಲಾರೆವು... ನಾವ್ಯಾಕೆ ಇನ್ನೊಬ್ಬರನ್ನು ಕಾಳಜಿಯಿಂದ ಓದಲಾರೆವು... ಹಾಗೊಂದು ವೇಳೆ ಓದಿದ್ದಿದ್ದರೆ ಬಹುಶಃ ನಾವಿಂದು ಹೇಗಿದ್ದೇವೋ ಹಾಗೆ ಇರುತ್ತಿರಲಿಲ್ಲ ಅನಿಸುತ್ತದೆ. ಮತ್ತಷ್ಟು ಮೃದುವಾಗಿ, ಇತ್ತಷ್ಟು ನವಿರಾಗಿ ನರುಗಂಪಿನಂತೆ ಸೂಸುತ್ತಿದ್ದೆವು ಬಹುಶಃ... ಮತ್ತಾ ಕಂಪಿನ ನೆನಪು ಜಗತ್ತಿನಿಂದ ಮಾಸದಷ್ಟು ಗಾಢವಾಗಿ ಆವರಿಸುತ್ತಿದ್ದೆವು... ಮನುಷ್ಯ ಮನುಷ್ಯನನ್ನು ಪ್ರೀತಿಯಿಂದ ಓದಬೇಕು. ಈ ತಿಳುವಳಿಕೆ ನಮ್ಮನ್ನು ಸಲಹುವಷ್ಟು ಬಲಿಷ್ಠವಾಗಿಲ್ಲ. ಅದಕ್ಕೆ ಮತ್ತಷ್ಟು ಪೋಷಣೆಯ ಅಗತ್ಯವಿದೆ.

ಅದೆಷ್ಟೋ ಹೆಸರಿಡಲಾಗದ ಸಂಬಂಧಗಳು ನಮ್ಮನ್ನು ತಾಕುತ್ತವೆ, ತಡವುತ್ತವೆ. ಆದರೆ ನಾವೇ ಕಟ್ಟಿಕೊಂಡ ಸಮಾಜ ಮೊಹರು ಒತ್ತಿರುವ ಕೆಲವೇ ಸಂಬಂಧಗಳು ಇಲ್ಲಿ ಊರ್ಜಿತವಾಗುತ್ತವೆ. ಸಮಾಜದ ಚೌಕಟ್ಟಿನಾಚೆಯ ಸಂಬಂಧಗಳು ಮಾತ್ರ ಯಾರಿಗೂ ಕಾಣದಂತೆ ಮನಸಿನ ಪುಸ್ತಕದ ಕೊನೆಪುಟದ ಕೊನೇ ಸಾಲಿನ ಕೊನೆಯ 'ವಿಷಾದ' ಎನ್ನುವ ಶಬ್ದದಲ್ಲಿ ಇಂಗಿ ಹೋಗಿಬಿಡುತ್ತವೆ... ಅವನ್ನು ಓದಿ ಅರ್ಥಮಾಡಿಕೊಳ್ಳಲೂ ಒಂದು ಅಂತಃಕರಣ ಬೇಕು.

ಹೀಗೆ ಮನಸು ಕನಲಿದಾಗೆಲ್ಲಾ ಇರುವುದೊಂದೆ ದಾರಿ ಎನ್ನುವಂತೆ ಕವಿತೆಗಳು ಬಂದು ಮೆಲುವಾಗಿ ಮಾತನಾಡತೊಡಗುತ್ತವೆ. ವೀಣಾ ಬಡಿಗೇರರ ಕವಿತೆಯೊಂದರ ಸಾಲುಗಳನ್ನೇ ನೋಡಿ, ಮನಸ್ಸು ನಿಜವಾಗಲೂ ಏನನ್ನು ಬಯಸುತ್ತದೆ ಎಂಬುದನ್ನು ತಿಳಿಸಲೇಬೇಕಾದವರಿಗೂ ದಾಟಿಸಲಾಗದೆ ಉಳಿಯುವುದು, ನಡುವೆ ನಿರ್ವಾತದ ಗೋಡೆ ಕಟ್ಟಿಕೊಂಡು ಒಬ್ಬರಿಗೊಬ್ಬರು ಹೇಗೆ ಅರ್ಥವಾಗದೆ ಉಳಿಯುತ್ತೇವೆ?! ಇದು ಅಚ್ಚರಿಯಾದರೂ ನಿತ್ಯ ಸತ್ಯವೂ ಹೌದು...

"ನಾ ಓದುತ್ತಿರುವ ಪುಸ್ತಕ, ನೋಡುತ್ತಿರುವ ಸಿನೆಮಾ,ಕಥೆಯ ಸೂಕ್ಷ್ಮ, ಕೇಳುತ್ತಿರುವ ರಾಗ-ಹಾಡು, ಹಾಡಿನ ಹಿಮ್ಮೇಳ, ಹಿಮ್ಮೇಳದಲ್ಲಿ ಬಳಸಿರುವ ಅದಾವುದೋ ಆದಿವಾಸಿಗಳ ಸಂಗೀತ ಉಪಕರಣ , ಹಾಡಿನ ಸಾಹಿತ್ಯದ ಓಘ.. ಹೀಗೆ ಎಲ್ಲ, ಎಲ್ಲವನ್ನೂ ತೀರ ಅಪ್ಯಾಯವಾಗಿ, ಸೊಗಸಾಗಿ ನನ್ನೊಡನೆ ಚರ್ಚಿಸುವ ಹುಂಬನೊಬ್ಬ ಮೋಹಿಸಬೇಕಿತ್ತು‌ ನನ್ನ ಹೀಗೆ ಸುಮ್ಮನೆ ಖಾಲಿ‌ ಸಂಜೆಗಳಲ್ಲಿ, ಟೇರೆಸಿನ ಮೇಲೆ ಕೈ- ಕೈ‌ಹಿಡಿದು ಕೂತು, ಬಾನು ಬದಲಿಸುತ್ತಿರುವ ಒಂದೊಂದು ರಂಗಿಗೂ ಒಂದೊಂದು ವ್ಯಾಖ್ಯಾನ ಕೊಟ್ಟು, ಸೂರ್ಯ ಅತ್ತಕಡೆ ಮುಳುಗುತ್ತಿದ್ದಂತೆಯೇ, ನನ್ನನ್ನೂ ತನ್ನ ಮುತ್ತಿನೊಳಗೆ ಮುಳುಗಿಸುವ ಖಾಸಾ ಅಲೆಮಾರಿಯೊಬ್ಬ ಪ್ರೇಮಿಸಬೇಕಿತ್ತು ನನ್ನ.."(ವೀಣಾ ಬಡಿಗೇರ)

ನಾವು ಎಷ್ಟೊಂದು ಅರಿತೆವು ಎಂದುಕೊಂಡಾಗಲೂ ಇಷ್ಟೇನಾ ಅರಿತದ್ದು ಎನಿಸಿಬಿಡುವ ಕ್ಷಣಗಳು ಮತ್ತೆ ಮತ್ತೆ ಹಾಜರಾಗುವುದರ ಬಗ್ಗೆ ಸಣ್ಣ ಮುನಿಸಿದೆ. ಕಾರಣ ನಾವು ದೈಹಿಕವಾಗಿ, ಮಾನಸಿಕವಾಗಿ ಒಂದಾದ ಮೇಲೂ ಅರಿತೆವು ಎನ್ನುವ ಮಾತೇ ಸಾಪೇಕ್ಷವಾದಾಗ ಯಾವುದು ಇಲ್ಲಿ ಸ್ಥಾಯಿ ಭಾವ?! ನಮ್ಮನ್ನು ಕಾಪಾಡುವ ಹಲವಾರು ತತ್ವಗಳಿವೆ ಇಲ್ಲಿ... ನಾವೇ ಮಾಡಿಕೊಂಡಂಥವು! ಎಷ್ಟು ಸುರಕ್ಷಿತ ನೋಡಿ ನಾವು ನಮ್ಮ ಜಗದಲ್ಲಿ... ಏನೇ ಮಾಡಿರಿ ಅದನ್ನು ಸಮರ್ಥಿಸುವ ಸಾಕ್ಷಿಗಳು ನಮ್ಮ ಬೆನ್ನಿಗೆ ಸಾದಾ ಇರುತ್ತವೆ! ನಾವು ಅರಿತಿಲ್ಲದಿರುವುದಕ್ಕೂ ಸಮರ್ಥನೆಗಳಿವೆ. ಅರಿಯುವಿಕೆ ಎಂಬುದಾದರೂ ದ್ವಿಮುಖ ಕ್ರಿಯೆ. ಓದಬೇಕು ಮತ್ತು ತೆರೆದುಕೊಳ್ಳಬೇಕು ಎಂಬ ಎರಡು ಕ್ರಿಯೆಗಳ ನಡುವಿನ ಪರಾವರ್ತಗೊಳಿಸಬಹುದಾದ ಕ್ರಿಯೆ. ಅದು ಯಾಕೆ ನಮ್ಮ ನಡುವೆ ಸಾಧ್ಯವಾಗದೇ ಹೋಗುತ್ತದೆ?! ನಮ್ಮ ಈಗೋಗಳು ಯಾಕೆ ಹಾಗೆ ಮಾಡದಂತೆ ತಡೆಯುತ್ತವೆ?! ನಾವು ನಮ್ಮವರಿಂದಲೇ ಯಾಕೆ ಕೊಸರಿಕೊಂಡು ದೂರ ನಿಲ್ಲುತ್ತೇವೆ... ಅಲ್ಲಿರುವ ಕಳೆಯನ್ನು ಕಿತ್ತು ಒಗೆಯದೇ ನೀರು ಗೊಬ್ಬರವನ್ನೇಕೆ ಉಣಿಸುತ್ತೇವೆ...

ನಿಶ್ಯಬ್ದವಷ್ಟೇ ಉತ್ತರ...

-ಆಶಾ ಜಗದೀಶ್

MORE NEWS

ಕನ್ನಡ ಮತ್ತು ತಮಿಳು ಸಹಸಂಬಂದ

27-07-2024 ಬೆಂಗಳೂರು

"ಕನ್ನಡ ಮತ್ತು ತಮಿಳು ಬಾಶೆಗಳು ಪರಸ್ಪರ ಬಿನ್ನವಾಗುವ ಪ್ರಕ್ರಿಯೆಯಲ್ಲಿ ಪರಸ್ಪರ ದೂರ ಇರುವ ಎರಡೂ ಬಾಶೆಯ ಒಳನುಡಿಗಳ...

ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ

26-07-2024 ಬೆಂಗಳೂರು

"ಸೋಜಿಗವೆಂದರೆ ಬಹುತೇಕ ಅನಕ್ಷರಸ್ಥ ಗ್ರಾಮೀಣ ಕಲಾವಿದರ ಈ ರಂಗಉಮೇದು, ಸಿನೆಮಾ ಮತ್ತು ಕಿರು ತೆರೆಗಳಿಗೆ ಅಡಸ್ಯಾಡುವ...

ತುಳುವಿನೊಡನೆ ಸಹಸಂಬಂದ

20-07-2024 ಬೆಂಗಳೂರು

"ತುಳುವಿನ ಕುರಿತು ಮಾತನಾಡಬೇಕಾದ ಕೆಲವು ಮಹತ್ವದ ಅಂಶಗಳಿವೆ. ದಕ್ಕನದಲ್ಲಿ ವ್ಯಾಪಿಸಿಕೊಂಡಿರುವ ಅರಬಿ ಸಮುದ್ರದ ಕರಾ...