ನೇಗಿಲ ತುದಿಯ ನೋವು: ಅಂದಯ್ಯ ಅರವಟಗಿಮಠ


ಬಂಡಾರ ಪ್ರಕಾಶನದ ಸಹಯೋಗದಲ್ಲಿ ‘ಬುಕ್ ಬ್ರಹ್ಮ’ ಪ್ರಕಟಿಸುತ್ತಿರುವ ‘ಒಳತಿಳಿ’ ವಾರದ ಓದು ವಿಶೇಷ ವಿಮರ್ಶಾ ಸರಣಿಯಲ್ಲಿ 11ನೇ ಭಾಗವಾಗಿ ಲೇಖಕ ಅಂದಯ್ಯ ಅರವಟಗಿಮಠ ಅವರು ಮಲ್ಲಿಕಾರ್ಜುನ ಹಿರೇಮಠರ 'ಅಮೀನಪುರದ ಸಂತೆ' ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.
ನವ್ಯೋತ್ತರ ಸಂದರ್ಭದಲ್ಲಿ ಕರ್ನಾಟಕದ ಹಲವು ಮೂಲೆಗಳಿಂದ ಮಹತ್ತರ ಸಣ್ಣಕತೆಗಳು ರಚನೆಗೊಂಡವು. ಭಿನ್ನ ಪ್ರಾದೇಶಿಕ ಭಾಷೆ, ಸಂಸ್ಕೃತಿಗಳನ್ನು ಇವು ಮೇಳೈಸಿಕೊಂಡವು. ಇಂತಹ ಭಿನ್ನ ನಡಿಗೆಯ ಸಾಲಿನಲ್ಲಿ ಮಲ್ಲಿಕಾರ್ಜುನ ಹಿರೇಮಠರ ‘ಅಮೀನಪುರದ ಸಂತೆ’ ಕಥೆಗಳು ಸೇರುತ್ತವೆ. ಪ್ರಾದೇಶಿಕ ಭಿನ್ನತೆ, ಮತ್ತು ಮನುಷ್ಯ ಪ್ರೀತಿಯ ಸೆಲೆಯನ್ನು ಹುಡುಕುವ ಸಂದರ್ಭದಲ್ಲಿ ಮೇಲಿನ ಸಂಕಲನದ ಕಥೆಗಳು ಮುಂಚೂಣಿಯಲ್ಲಿರುತ್ತವೆ. ಕತೆಗಳಲ್ಲಿ ತಂತ್ರಗಾರಿಕೆಯೇ ಮುಖ್ಯವೆನ್ನುವ ಮಾತಿಗೆ ಅಪವಾದವೆನ್ನುವಂತೆ ಅತ್ಯಂತ ಸರಳ ನಿರೂಪಣಾ ಶೈಲಿಯಲ್ಲಿ ಮೊದಲ ಓದಿಗೆ ದಕ್ಕುವಂತೆ ‘ಅಮೀನಪುರದ ಸಂತೆ’ಯ ಕಥೆಗಳು ಕನ್ನಡದ ಶ್ರೇಷ್ಟ ಕತೆಗಳ ಸಾಲಿನಲ್ಲಿ ನಿಲ್ಲುವ ರಚನೆಗಳು. ಈ ಸಂಕಲನದ ವಿಶೇಷತೆ ಇರುವುದು ಗ್ರಾಮೀಣ ಮತ್ತು ತಳವರ್ಗದ ವಸ್ತುವನ್ನು ಒಳಗೊಂಡ ಪ್ರಾದೇಶಿಕ ಭಾಷೆಯ ನಿರೂಪಣೆಯಲ್ಲಿ.

ಒಂದಡೆ ಹೊಲ ಉಳುಮೆ ಮಾಡುವ ಎತ್ತನ್ನು ಬಸವಣ್ಣನೆಂದು ಪೂಜಿಸುವ ರೈತಾಪಿ ಸಂಸ್ಕೃತಿಯು ತನ್ನ ದೈವವನ್ನೇ ಮಾರಾಟಕ್ಕಿಡುವ ಸಂದರ್ಭಕ್ಕೆ ಸಿಲುಕುತ್ತದೆ. ಎಂದಿಗೂ ಕೃಷಿ ಲಾಭದಾಯಕ ಮತ್ತು ಜೀವನೋಪಾಯದ ಮಾರ್ಗವಾಗಿ ಕಂಡಿಲ್ಲ. ಲಾಭ ನಷ್ಟದ ಲೆಕ್ಕಾಚಾರದಾಚೆ ಒಕ್ಕಲುತನ ಬದುಕಿನ ಕ್ರಮವಾಗಿಯೇ ಬೇರೂರಿದೆ. ಇಂತಹ ವಾಸ್ತವ ಸತ್ಯಗಳನ್ನು ಕಥೆ ಬಲವಾಗಿ ಪ್ರತಿಪಾದಿಸುತ್ತದೆ. ಕಥೆಯೇ ಅಂತರ್ಯದಲ್ಲಿ ಹೇಳುವಂತೆ ರೈತರನ್ನು ಹೆಚ್ಚು ಶೋಷಣೆಗೆ ಒಳಪಡಿಸುವುದು ಮಧ್ಯಮ ವರ್ಗದ ದಲ್ಲಾಳಿ ಮಂದಿ. ತಮ್ಮ ಹೊಟ್ಟೆ ಬಟ್ಟೆಯ ಪ್ರಶ್ನೆಗಿಂತ ಮುಖ್ಯವಾಗಿ ದನಕರುಗಳ ಸಂಕಟವನ್ನು ನೋಡಲಾಗದೇ ಮಾರಲು ಬಂದವರನ್ನು ತನ್ನ ಬಲೆಗೆ ಸಸ್ತಾ ದರದಲ್ಲಿ ಬೀಳಿಸಿಕೊಳ್ಳಲು ತುದಿಗಾಲಿನಲ್ಲಿರುತ್ತದೆ. ವರ್ತಮಾನಕ್ಕೆ ಸ್ಪಂದಿಸುವ ಮಹತ್ತರ ಜವಾಬ್ದಾರಿ ಸಾಹಿತ್ಯಕ್ಕಿದೆ. ಆಯಾಕಾಲದ ಸಂಕಟಗಳನ್ನು ಸಾಹಿತ್ಯ ತನ್ನೊಳಗಿರಿಸಿಕೊಂಡು ಬಂದಿದೆ. ಕನ್ನಡದ ಅನೇಕ ಸಣ್ಣಕತೆಗಳು ಇಂತಹ ಜವಾಬ್ದಾರಿ ನಿಭಾಯಿಸಿವೆ. ಅವುಗಳ ಸಾಲಿನಲ್ಲಿ ‘ಅಮೀನಪುರದ ಸಂತೆ’ ಕತೆಯು ಮುಖ್ಯವಾದದ್ದು.

ತನ್ನ ಅಂತ್ಯವನ್ನೇ ಬಯಸುವಂತಿರುವ ಇಂದಿನ ಸಮಾಜ ನೇಗಿಲು ಹಿಡಿದವನಿಗಿಂತ ಯಂತ್ರದ ಮುಂದೆ ನಿಸ್ತೇಜನಾಗಿ ಕುಳಿತಿರುವವನಿಗೆ ಹೆಚ್ಚಿನ ಮಹತ್ ನೀಡುತ್ತಿದೆ. ಬದುಕುವ ಧಾವಂತದಲ್ಲಿ ದುರ್ದರವೆನಿಸಿದ ಬೇಸಾಯದ ಬಾಳು ಅನ್ನದಾತನನ್ನು ಸಮಾಜದ ಕೊನೆಯ ಶ್ರೇಣಿಯಲ್ಲಿ ನಿಲ್ಲಿಸಿದೆ. ಇಂತಹ ನೆಲದ ನೋವನ್ನೇ ಹೇಳಹೊರಟಿರುವ ಮೊದಲ ಕಥೆ 'ಅಮೀನಪುರದ ಸಂತೆ'ಯಲ್ಲಿ ಬರಗಾಲದ್ದೇ ಮುಖ್ಯ ಪಾತ್ರ, ಕಥೆಯುದ್ದಕ್ಕೂ ಕಾಣಸಿಗುವುದು ದಾರುಣ ಬದುಕೊಂದರ ನೈಜ ಚಿತ್ರಣ, ಇಲ್ಲಿನ ಈ ಸಂತೆಯಲ್ಲಿ ಎಲ್ಲವೂ ಸಿಗುವುದು, ಜೀವಂತ ಬದುಕಿನ ಹೊರತು. ಯಾವುದೇ ಆಡಂಬರವಿಲ್ಲದೇ ಸರಾಗವಾಗಿ ಓದಿಸಿಕೊಂಡು ಹೋಗುವ ಕಥೆ ಕೊನೆಗೆ ಓದುಗನ ಮನಸ್ಸಿನಲ್ಲಿ ನೋವು ಹೆಪ್ಪುಗಟ್ಟಿಸಿ ಮೌನಕ್ಕೆ ಜಾರಿಸುತ್ತದೆ.

ಜೀವನವನ್ನು ಸಮಗ್ರವಾಗಿ ಪ್ರೀತಿಸಿಬಲ್ಲ ಈ ಸಂಕಲನದ ಮತ್ತೊಂದು ಕಥೆ ‘ಲಕ್ಕವ್ವನ ಮಂದಿ’ ಗುಳೇಕಾರ ಮಂದಿಯ ನೋವು ನಲಿವುಗಳಿಗೆ ಸಾಕ್ಷಿಯಾಗುವ ದೇವಿ ಲಕ್ಕವ್ವ ಇಲ್ಲಿ ಯಾವುದಕ್ಕಾಗಿ ಸ್ಪಂದಿಸದ ಪ್ರತಿಮೆ ಮಾತ್ರ. ಇವಳನ್ನು ಆರಾಧಿಸುವ ದಾಸರು, ಡೊಂಬರು, ಕುಂಚಿಕೊರವರು, ಅವಳ ಬಂಧುಗಳು, ದಿಕ್ಕೆಟ್ಟ ಹನಮವ್ವ ಹಾಗೂ ಅವಳ ಮಕ್ಕಳಿಗೆ ಆಸರೆಯಾಗಿ ನಿಲ್ಲುವ ಒಡ್ಡರ ನಾಗವ್ವಳು ಲಕ್ಕವ್ವನ ಸನ್ನಿಧಿಯಲ್ಲಿ ತೋರುವ ಜೀವನದ ಪ್ರೀತಿ ಅನನ್ಯವಾದದ್ದು. ಮುನ್ಸೂಚನೆಯಿಲ್ಲದೇ ಒದಗಿದ ಕಷ್ಟಗಳ ಸಂದರ್ಭದಲ್ಲಿ ನೆರವಾಗುವ ಕೊರವರ ಮುದುಕನಂತವರು ಮನುಷ್ಯತ್ವದ ಸಾದೃಶ್ಯಗಳಾಗಿ ನಿಲ್ಲುತ್ತಾರೆ. ಸಮಾಜದಲ್ಲಿ ನಿಕೃಷ್ಟರಾಗಿ ಕಡಗಣನೆಗೆ ಒಳಗಾಗಿದ್ದರೂ ಇರುವುದರಲ್ಲಿಯೇ ಸಂತೃಪ್ತಿಯ ಜೀವನ ನಡೆಸುವ ಅಲೆಮಾರಿ ಜನಾಂಗದ ದೈನಂದಿನ ಪರಿಚಲನೆಯನ್ನು ಕಥೆ ಪರಿಚಯಿಸುತ್ತದೆ.

ಬದುಕಿನ ಪ್ರತಿ ನೋವು ನಲಿವುಗಳನ್ನು ಸಮಾನರೇಖೆಯಲ್ಲಿ ಸ್ವೀಕರಿಸಿ ಖುಷಿಯಿಂದಿರುವ 'ಮಾವ'ನ ಕುರಿತು ಹೇಳುವುದು ನಂತರದ ಕಥೆ, ಮಾವನ ಸರಸ, ವಿನೋದ, ಹಳ್ಳಿಯ ಮುಗ್ದನಗು, ಕೀಟಲೆಗಳು ಎಲ್ಲವು ಚಂದವೆನಿಸುತ್ತವೆ. ಹುಡುಗರ ಚೇಷ್ಟೆಗಳಿಗೆ ಬಲಿಯಾಗಿ ಕೊನೆಗೆ ತಿಳಿದು ನಕ್ಕುಬಿಡುವ ಹೃದಯ ವೈಶಾಲತೆ ಆತನಲ್ಲಿತ್ತು. ತಾನು ಸಂತೋಷವಾಗಿರುವುದು ಮಾತ್ರವಲ್ಲದೆ ತನ್ನ ಸುತ್ತಲಿನವರೂ ಹಾಗೆಯೇ ಇರಬೇಕೆಂದು ಬಯಸುವ ಇಲ್ಲಿಯ ‘ಮಾವ’ ಬದುಕನ್ನು ಪ್ರೀತಿಸುವ ಎಲ್ಲರ ಪ್ರತಿನಿಧಿಯೆನಿಸುತ್ತಾನೆ.

ಜನನಿ ವಾತ್ಸಲ್ಯವನ್ನು ಹೇಳಹೊರಟಿರುವ ಮತ್ತೊಂದು ಕಥೆ 'ಮಾತೃದೇವೋಭವ', ಹೆಂಡತಿಯ ವಿಲಾಸ ಜೀವನ ಪೂರೈಸ ಹೊರಟಿರುವ ಪತಿರಾಯನೊಬ್ಬ ಹೇಳುವ ಸುಳ್ಳುಗಳು ತನ್ನ ಆತ್ಮಕ್ಕೆ ಮಾಡಿಕೊಂಡ ವಂಚನೆಯೆಂಬುದು ಆತ ಅರಿಯದ ಸಂಗತಿಗಳೇನಲ್ಲ. ಇಲ್ಲಿಯ ಮತ್ತೊಂದು ಮಹತ್ವದ ಕಥೆ ‘ಬಸ್ಸು ಹೊರಟು ಹೋಯಿತು’ ದಾಂಪತ್ಯ ಬಂಧಿಯಾಗಿರುವ ಬಸವರಾಜನ ಬರಡು ಬದುಕಿನ ಯಂತ್ರದಲ್ಲಿ ಪ್ರೀತಿಯ ಎರಕ ಹೊಯ್ದ ಮತ್ತೋರ್ವ ಯುವತಿ ಐಜಾಕ್ ಕೊನೆಗೆ ಕೈ ಚೆಲ್ಲಿ 'ನಮಗೆ ಬೇಕಾದ ಬಸ್ಸು ಹೋದಾಗ ಬೇಡವಾದ ಸಿಟಿ ಬಸ್ ಹಿಡಿದು ಬಂದಿರಲ್ವೇ?” ಎನ್ನುವ ಅವಳ ಮಾತುಗಳು ಆತನಿಂದ ಸ್ವಾತಂತ್ರ್ಯವನ್ನು ಬಯಸುತ್ತವೆ. ನಾವು ಹತ್ತುವ ಬಸ್ಸು ಸರಿಯಾದದ್ದಲ್ಲ ಎಂದು ತಿಳಿಯುವುದು ಹಾದಿ ಮಧ್ಯೆ ಸಿಗುವ ಮತ್ತೊಂದು ಬಸ್ಸಿನಿಂದಲೆ ಎನ್ನುವುದನ್ನು ಕಥೆ ಬದುಕಿಗೆ ಅನ್ವಯಿಸಿ ಹೇಳಹೊರಟಿದೆ.

ನಮ್ಮ ನಡುವಿನ ವ್ಯಕ್ತಿಗಳೇ ಕಥೆಯೊಳಗೆ ತೂರಿ ಬಂದು ಬದುಕಿನ ತತ್ವ ಬೋಧಿಸುತ್ತಾರೆ. ತನ್ನ ಸಾವು ನಿಶ್ಚಿತವೆಂದು ತಿಳಿದ ಬಾಲಕಿಯೊಬ್ಬಳು ಆ ಸಾವಿಗೆ ತನ್ನನ್ನು ಒಗ್ಗಿಸಿಕೊಳ್ಳುವ ಕ್ರಿಯೆಗೆ ಆಕೆಯ ದಿನಚರಿಯ ಪುಟಗಳು ಸಾಕ್ಷಿಯಾಗಿ ನಿಲ್ಲುವ ಕಥೆಯೊಂದು ಇಲ್ಲಿದೆ. ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ಆದರ್ಶಗಳ ಕುರಿತಾದ ಎಳೆಯೊಂದು ಮತ್ತೊಂದು ಕಥೆಯಲ್ಲಿದೆ. ಹಳ್ಳಿಯ ಅನುಭವಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕೆನ್ನುವ ಪ್ರೊಫೆಸರೊಬ್ಬರ ನೆಲದ ಪ್ರೀತಿಯ ಸಾಬೀತು ಪಡಿಸುವ ಕಥೆ 'ಅನುಭವ'. ಇಲ್ಲಿ ಹಳ್ಳಿತನದ ಮೇಲೆ ವ್ಯಕ್ತವಾಗಿರುವ ಸೆಳೆತಗಳೆಲ್ಲವು ನೈಜವಾಗಿವೆ. ಪ್ರೀತಿಯ ತತ್ಕಾಲೀನ ಸುಖದ ಕುರಿತಾದ 'ಗುಡ್ ಬೈ' ಕಥೆ ಕೊನೆಗೆ ವಿರಹಾಂತ್ಯವನ್ನು ಕಾಣುತ್ತದೆ. ಚಿಕೋವಾನ ಕಥೆಗಳ ಕನ್ನಡಾನುವಾದಗಳಾದ 'ದುಷ್ಟ ಹುಡುಗಿ ಹಾಗೂ 'ಕಾರಕೂನನ ಸಾವು' ಸರಳವಾಗಿ ಓದಿಸಿಕೊಂಡು ಹೋಗುವ ಶೈಲಿಯಿಂದ ಗಮನ ಸೆಳೆಯುತ್ತದೆ. ಕಥೆಗಾರ ಯಾವುದನ್ನು ಸಮಾಜದ ಆದರ್ಶವೆಂದು ಭಾವಿಸಿರುವನೋ ಅದನ್ನು ಕಥೆಗಳ ಮೂಲಕ ಹೇಳಬಯಸುತ್ತಾನೆ. ಬದುಕುವ ರೀತಿಯನ್ನು ಅರಿಯಲು “ಅಮೀನಪುರದ ಸಂತೆ' ಒಂದೊಳ್ಳೆ ಸಂಗಾತಿ. ಯಾವುದೇ ಇಸಂಗಳಿಗೆ ಒತ್ತು ಕೊಡದೇ ಸಾಗುವ ಇಲ್ಲಿನ ಕಥೆಗಳು ಬದುಕಿನ ಸೌಂದರ್ಯವನ್ನು ವಿಸ್ತರಿಸುತ್ತವೆ.

MORE FEATURES

ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...

26-07-2024 ಬೆಂಗಳೂರು

"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್...

ಮಲೆನಾಡ ಪರಿಸರದ ಸುಂದರ ಜೀವನವನ್ನು ಹೇಳುವ ಕೃತಿಗಳಲ್ಲಿ ಇದು ಒಂದು 

26-07-2024 ಬೆಂಗಳೂರು

‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎ...

ಈ ಕಾದಂಬರಿ ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತದೆ; ಉಪೇಂದ್ರ ಕೆ. ಆರ್

25-07-2024 ಬೆಂಗಳೂರು

‘ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ...