"ಕಥೆಯ ಹರಿವಿನ ಜೊತೆ ಸಾಗಿ ಬಂದು ಸೋಕಿದಾಗ ಅತ್ಯಂತ ಆಪ್ತವೆನಿಸುವ ಘಟನೆ ಹಾಗೂ ಸಾಲುಗಳಿವು. ನಿರ್ಗಮನವೂ ಕಾಡದಂತೆ ಹೆತ್ತವರನ್ನು ಕಳಿಸಿಕೊಡುತ್ತೇವೆ. ಅವರಾದರೂ ನಮ್ಮ ಅಗಲಿಕೆಯೇ ಬಾಧಿಸದಂತೆ, ಜೊತೆಗೆ ಮಕ್ಕಳಿರುವ ಹಾಗೂ ಯಾರೂ ಇಲ್ಲದ ಜಾಗಗಳೆರಡೂ ಒಂದೇ ಎಂಬಂತೆ ನಿರುಮ್ಮಳವಾಗಿ ನಿದ್ರಿಸುವ ಈ ಘಟನೆ ನಮ್ಮೆಲ್ಲರ ಬದುಕುಗಳ ಮೇಲೆ ನೂರು ಕ್ಯಾಂಡಲ್ ಬಲ್ಬು ಬೆಳಗಿದಂತಿದೆ," ಎನ್ನುತ್ತಾರೆ ವಿನಾಯಕ ಅರಳಸುರಳಿ. ಅವರು ಜೋಗಿ ಅವರ ‘ನಿರ್ಗಮನ’ ಕೃತಿ ಕುರಿತು ವಿಮರ್ಶೆ ನಿಮ್ಮ ಓದಿಗಾಗಿ.
ಇದೊಂದು ಹುಡುಕಾಟದ ಕಥೆ. ಯಾರನ್ನು ಹುಡುಕುವುದೂ ಆಗಬಹುದಾದ, ಹುಡುಕುವವರು ಯಾರು ಬೇಕಾದರೂ ಆಗಬಹುದಾದ, ಯಾರದ್ದೂ ಅಲ್ಲದೆಯೂ ಉಳಿಯಬಹುದಾದ ಹುಡುಕಾಟ. ಬೇರೆ ಮನೆ ಮಾಡಿಕೊಂಡಿದ್ದ ವೃದ್ಧ ಅಪ್ಪ ಅಚಾನಕ್ಕಾಗಿ ಕಾಣೆಯಾಗುವ ಮೂಲಕ ಈ ಕಥೆ ಶುರುವಾಗುತ್ತದೆ. ಆ ಬಿಂದುವಿನಿಂದಲೇ ಮಗ ತನ್ನಪ್ಪನನ್ನು ಪಡೆದುಕೊಳ್ಳುತ್ತ ಹೋಗುತ್ತಾನೆ. ಮಗನೆಂದರೆ ನಮ್ಮ-ನಿಮ್ಮಂತೆಯೇ ಕೆಲಸಕ್ಕೆ ಹೋಗುವ, ಅಪ್ಪನ ಜೊತೆ ಹೇಗಿದ್ದೀರಿ? ಏನಾದ್ರೂ ಬೇಕಾ? ಎಂದಷ್ಟೇ ಕೇಳುವ, ಅದರಾಚೆಗೆ, ಅವರಿಗೇನೂ ತೊಂದರೆಯಾಗದ ಹೊರತು, ಅವರನ್ನು ಗಮನಕ್ಕೆ ತೆಗೆದುಕೊಳ್ಳದ ಜನಸಾಮಾನ್ಯ ಮಗ. ಹೀಗೆ ಬದುಕಿನಿಂದ ಎಂದೋ ಎದ್ದು ಹೋದ (ಅಥವಾ ದಾಖಲೇ ಆಗದ) ಅಪ್ಪ ಅದೊಂದು ದಿನ ಮನೆಯಿಂದಲೂ ಕಾಣೆಯಾಗುತ್ತಾರೆ. ಹಾಗೆ ಖಾಲಿಯಾದ ಮನೆಗೆ ಬಂದು ಕುಳಿತ ಮಗ ಅವರ ಅನ್ವೇಷಣೆಯಲ್ಲಿ ತೊಡಗುತ್ತಾನೆ. ಅಲ್ಲಿ ಅಚಾನಕ್ಕಾಗಿ ಎದುರಾಗುವ ಏಕಾಂತ, ಆಗಷ್ಟೇ ನೆನಪಿಗೆ ಬರುವ ಅಪ್ಪನ ಬದುಕು ಹಾಗೂ ಅವರು ಹಾದ ದಾರಿಗಳಲ್ಲಿ ತಡವಾಗಿ ಕೈಗೊಳ್ಳುವ ಹಿಂಬಾಲಿಕೆಗಳು ತಿರುಗುತ್ತಲೇ ಇರುವ ಚಕ್ರದ ನಿರ್ಜೀವ ಭಾಗದಂತಿದ್ದ ಅವನನ್ನು ಈ ಜಗತ್ತಿಗೆ ಕರೆತರುತ್ತವೆ. ಅವರಿಲ್ಲದ ಹೊತ್ತಿನಲ್ಲಿ ಎದಿರಾಗುವ ಅವರು ಒಡನಾಡಿದ ವ್ಯಕ್ತಿಗಳು ಅವನ ಅಪ್ಪನನ್ನು ಅವನಿಗೇ ಪರಿಚಯಿಸುತ್ತ ಹೋಗುತ್ತಾರೆ.
ಹಾಗಂತ ಈ ಕಥೆ ಇಷ್ಟೇ ಅಲ್ಲ. ಎಂದಿನಂತೆ, ಸಂಪಾದನೆಗೆ ಹಾಗೂ ಸಂಪಾದನೆಗಷ್ಟೇ ತಮ್ಮನ್ನು ಕೊಟ್ಟಕೊಂಡಿರುವ ಈ ಹೊತ್ತಿನ ಜನರ ಬದುಕಿನ ಸೂಕ್ಷ್ಮಗಳೇನಕವನ್ನು ಲೇಖಕರು ತೆರೆದಿಟ್ಟಿದ್ದಾರೆ. ಪತ್ರಿಕೋದ್ಯಮದ ಒಳಗುಟ್ಟುಗಳು ಅನಾವರಣಗೊಳ್ಳುತ್ತವೆ. ಇವೆಲ್ಲವೂ ಕಥೆಯ ಜೊತೆಜೊತೆಗೇ, ಸಹಜವಾಗಿಯೇ ಸಾಗಿವೆ. ಕಾಡುವಂಥಾ ಬಹಳ ಸಾಲುಗಳು ಸಿಗುತ್ತವೆ. ಮನಸ್ಸಿನಲ್ಲಿ ಅಚ್ಚೊತ್ತುವ ಕಿರು ದೃಶ್ಯಾವಳಿಗಳು ಎದಿರಾಗುತ್ತವೆ. ಉದಾಹರಣೆಗೆ ಅಪ್ಪನ ಅನ್ವೇಶಣೆಯಲ್ಲಿ ಯಾವುದೋ ಫ್ಲಾಟಿಗೆ ಹೋಗುವ ನಾಯಕನಿಗೆ ಅಲ್ಲಿ ಪೋಲೀಸರು ರಹಸ್ಯವಾಗಿ ಬಂಧಿಸಿಟ್ಟ ಮುದುಕನೊಬ್ಬ ಕಾಣುತ್ತಾನೆ.
'ಅಪಾರ್ಟ್ಮೆಂಟಿನ ಒಂಟಿ ಕೋಣೆಯಲ್ಲಿ ನಾಳೆ ಏನೆಂದು ಗೊತ್ತಿಲ್ಲದವನಂತೆ ಮಲಗಿದ್ದ ಮುದುಕನ ಕಣ್ಣಲ್ಲಿದ್ದ ನಿರಾತಂಕ ಅವನನ್ನು ಕಂಗಾಲು ಮಾಡಿತ್ತು. ಆ ಮುದುಕನಿಗೆ ನಾಳೆಯ ಭಯವೂ ಇರಲಿಲ್ಲ. ಯಾರಾದರೂ ತನ್ನನ್ನು ಬಿಡಿಸಿಕೊಂಡು ಹೋಗಲಿ ಅನ್ನುವ ಆಸೆಯೂ ಇರಲಿಲ್ಲ. ತಾನು ಬಂಧನದಲ್ಲಿದ್ದೇನೆ ಎನ್ನುವ ಸಂಕಟವೂ ಇದ್ದಂತಿರಲಿಲ್ಲ'
ಕಥೆಯ ಹರಿವಿನ ಜೊತೆ ಸಾಗಿ ಬಂದು ಸೋಕಿದಾಗ ಅತ್ಯಂತ ಆಪ್ತವೆನಿಸುವ ಘಟನೆ ಹಾಗೂ ಸಾಲುಗಳಿವು. ನಿರ್ಗಮನವೂ ಕಾಡದಂತೆ ಹೆತ್ತವರನ್ನು ಕಳಿಸಿಕೊಡುತ್ತೇವೆ. ಅವರಾದರೂ ನಮ್ಮ ಅಗಲಿಕೆಯೇ ಬಾಧಿಸದಂತೆ, ಜೊತೆಗೆ ಮಕ್ಕಳಿರುವ ಹಾಗೂ ಯಾರೂ ಇಲ್ಲದ ಜಾಗಗಳೆರಡೂ ಒಂದೇ ಎಂಬಂತೆ ನಿರುಮ್ಮಳವಾಗಿ ನಿದ್ರಿಸುವ ಈ ಘಟನೆ ನಮ್ಮೆಲ್ಲರ ಬದುಕುಗಳ ಮೇಲೆ ನೂರು ಕ್ಯಾಂಡಲ್ ಬಲ್ಬು ಬೆಳಗಿದಂತಿದೆ. ಕಥೆ ಸಾಗುತ್ತ ಸಾಗುತ್ತ ಅಪ್ಪನಿಗಾಗಿ ಹುಡುಕುವ ಮಗ ಅನಿರುದ್ಧ ಇಷ್ಟವಾಗುತ್ತಾ ಹೋಗುತ್ತಾನೆ.
ಕಥೆಯ ಕೊನೆ ಅನಿರೀಕ್ಷಿತವಾಗಿದೆ. ಜೋಗಿಯವರ ಕಾದಂಬರಿಗಳಲ್ಲಿ ಹೆಚ್ಚು ಇಷ್ಟವಾಗುವುದು ಕಥೆ ಸಾಗಿಸಿಕೊಂಡು ಹೋಗುವ ಹರಿವು, ಕಥೆಯ ಮುಖಾಂತರ ಅವರು ನಮ್ಮ ಅಂತರಂಗಗಳಿಗೆ ಹಾಕುವ ಬ್ಯಾಟರಿ ಹಾಗೂ ನಡುನಡುವೆ ಧುತ್ತನೆ ಎದುರಾಗಿ ಎದೆಗೆ ದಾಂಗುಡಿಯಿಡುವ ಚಂದದ ಸಾಲುಗಳು. ಓದಿದ ಬಳಿಕ ಏನೋ ಬರೆಯಲೇಬೇಕು, ಅದಕ್ಕಿಂತ ಹೆಚ್ಚು ಬೇರೇನೋ ಯೋಚಿಸಬೇಕು ಅಂತೆಲ್ಲ ಅನ್ನಿಸುವ ಶಕ್ತಿ ಅವುಗಳಿಗಿರುತ್ತದೆ. 'ನಿರ್ಗಮನ' ಸಹಾ ಅಂಥದೇ ಗುಣವಿರುವ, ನಮ್ಮ ನಿಮ್ಮ ಬದುಕಿನಿಂದಲೂ ಎದ್ದು ಹೋಗಿರುವ ಅಥವಾ ಎದ್ದು ಹೋಗಬಹುದಾದ ಆದರ್ಶಗಳು ಅಪ್ಪನ ರೂಪದಲ್ಲಿ ಒಡಮೂಡಿರುವ ಕಾದಂಬರಿ.
ಒಮ್ಮೆ ಓದಿ..
- ವಿನಾಯಕ ಅರಳಸುರಳಿ.
"ಮೊದಲ ಅಧ್ಯಾಯ ಕಳಿಸಿದರು. ಓದುತ್ತಾ ಹೋದಂತೆ ಅದು ಸೀದಾ ತಲೆಯೊಳಗೆ ಇಳಿದಂತಾಗಿ, ಜೊತೆಗೆ ಲಾಜಿಕಲಿ ಘಟನೆಗಳೆಲ್ಲ ಫಿ...
"ಕನ್ನಡ ನಾಡಿನಿಂದ ಅಮೇರಿಕಾಗೆ ವಲಸೆ ಹೋಗುವ, ಅಲ್ಲಿ ತಮ್ಮ ಪ್ರತಿಭೆಯಿಂದ ಬೆಳಗುವ ಕನ್ನಡಿಗರು ತಮ್ಮ ಅಸ್ತಿತ್ವವನ್ನ...
"ದಶಕಗಳಿಂದ ಕಾವ್ಯ ಬರೆಯುತ್ತ ಬಂದಿರುವ ಗೋವಿಂದ ಹೆಗಡೆಯವರ ಮೊದಲ ಹಾಗೂ ಕೊನೆಯ ನಿಷ್ಠೆ ಕವಿತೆಯಲ್ಲಿದೆ. ಕಾವ್ಯಕ್ಕಿ...
©2025 Book Brahma Private Limited.