ಪ್ರೀತಿ ಅರಳಿದರೆ ಬದುಕು ತೆರೆದಂತೆ


"ಬದುಕು ಭಾವತೆರೆಯ ಮೇಲಿನ ತಾವರೆ, ಪ್ರತಿಯೊಂದು ಭಾವದಲೆಗೂ ಬದುಕು ಕಂಪಿಸುತ್ತದೆ. ಬದುಕಿನಲಿ ಕಾಡಿದ ಪ್ರೇಮ, ವಿರಹ, ಸುಖ, ದುಃಖ, ಸಿಟ್ಟು ಮತ್ತು ಒಂದಿಷ್ಟು ದ್ವೇಷ ಬಹಳ ಮುಖ್ಯ," ಎನ್ನುತ್ತಾರೆ ನಂಕು(ನಂದನ ಕುಪ್ಪಳ್ಳಿ). ಇವರು ‘ಭಾವರೇಖೆ’ ( ಒಂದು ಅನಂತ ಭಾವ) ಕೃತಿಯ ಕುರಿತು ಬರೆದ ಲೇಖಕರ ಮಾತು.

ಬದುಕು ಬೆಳಕಾಗಬೇಕು, ನಾವು ಯಾವಾಗ ಬೆಳಕಿನಡೆಗೆ ನಡೆಯಲು ಆರಂಭಿಸುತ್ತೇವೆಯೋ ನಮ್ಮಷ್ಟಕ್ಕೆ ನಾವು ಬೆಳಗಲು ಆರಂಭಿಸುತ್ತೇವೆ, ಬೆಳಕು ಸದಾ ಕ್ರಿಯಾಶೀಲ, ತಾನು ಬೆಳಗುವುದಲ್ಲದೆ, ತನ್ನನ್ನು ಬಯಸುವ ಎಲ್ಲವನ್ನು ಬೆಳಕಾಗಿಸುತ್ತದೆ. ಇಲ್ಲಿ ಒಂದರಿಂದ ಇನ್ನೊಂದು ಬೆಳಗಬೇಕಷ್ಟೆ ಪ್ರೀತಿ ಬೆಳಕಿನ ಹಾಗೆ. ಅನುಭವಿಸಿದರಷ್ಟೆ ಅರಿವಿಗೆ ಬರುವುದು. ಪ್ರೀತಿ ಅರಳಿದರೆ ಬದುಕು ತೆರೆದಂತೆ!. ಬದುಕು ಪ್ರೀತಿಸುವವನ ಸ್ವತ್ತು. ಪ್ರೀತಿ ಎಲ್ಲರೆದೆಯೊಳಗಿನ ಬದುಕಿನ ಬೆಳಕಿನ ಲೋಕ. ಬದುಕಿನಲ್ಲಿ ಎಲ್ಲವನ್ನೂ ಪ್ರೀತಿಸಬೇಕಷ್ಟೆ. ಪ್ರೀತಿಸಿದಷ್ಟೂ ನಮ್ಮೊಳಗಿನ ಚೇತನ ಅನಂತವಾಗುವುದು ಮತ್ತು ಸುಂದರವಾಗುವುದು.

ಆಲೋಚಿಸಿದಂತೆ ಬದುಕು. ಬದುಕು ಭಾವತೆರೆಯ ಮೇಲಿನ ತಾವರೆ, ಪ್ರತಿಯೊಂದು ಭಾವದಲೆಗೂ ಬದುಕು ಕಂಪಿಸುತ್ತದೆ. ಬದುಕಿನಲಿ ಕಾಡಿದ ಪ್ರೇಮ, ವಿರಹ, ಸುಖ, ದುಃಖ, ಸಿಟ್ಟು ಮತ್ತು ಒಂದಿಷ್ಟು ದ್ವೇಷ ಬಹಳ ಮುಖ್ಯ. ಇವೆಲ್ಲವೂ ಬದುಕಿನ ಅಲೆಗಳು. ಇದೆಲ್ಲದರ ಭಾವ ಹಿಡಿದಿಡಲು ಪ್ರಯತ್ನಿಸಿದ್ದೇನೆ. ಬರೆದ ಕವಿತೆಗಳೆಲ್ಲ ಅನುಭಾವದ ಅಲೆಗಳಷ್ಟೆ. ಈ ಭಾವರೇಖೆಯನ್ನು ಬೆಳಕಿಗೆ ಇಟ್ಟು ನಿಮಗೆ ತೋರಿಸಲು ಪ್ರಯತ್ನಿಸಿದ್ದು ಅಷ್ಟೆ. ನಿಮ್ಮೊಳಗಿನ ಪ್ರೇಮದ ಭಾವ ಒಂಚೂರು ಜಾಗೃತಗೊಳಿಸಿದರೂ ಈ ಕವಿತೆಗಳು ಸಾರ್ಥಕವೆನಿಸುವವು.

ಮೊದಮೊದಲು ಸುಮ್ಮನೆ ಬರೆದಿದ್ದಷ್ಟೆ. ಬರೆದ್ದೆಲ್ಲ ಕವಿತೆಗಳಲ್ಲಎಂದು ಆಮೇಲೆ ಅರಿವಾದದ್ದು. ಒಂದಿಷ್ಟು ಸಾಹಿತ್ಯ ಓದು ಬಹಳ ಮುಖ್ಯ ಓದಿಗೆ ಮಾರ್ಗದರ್ಶನ ಮಾಡಿ. ಬರೆಯಲು ಪ್ರೋತ್ಸಾಹಿಸಿ ನಂತರದಲ್ಲಿ ಅದನ್ನು ತಿದ್ದಿ ನನ್ನ ಬರವಣಿಗೆಗೆ ಹೊಸ ರೂಪ ನೀಡಿದ್ದು ಗುರುಗಳು. ಇದು ನನ್ನಲ್ಲಿ ಬರೆಯುವ ವಿಶ್ವಾಸ ಮೂಡಿಸಿತು ಮತ್ತು ಭಾವಗಳನ್ನು ವ್ಯಕ್ತಪಡಿಸಲು ಮಾರ್ಗವಾಯಿತು. ಅನಿಸಿದ ಭಾವಗಳಿಗೆಲ್ಲ ಒಂದು ರೂಪ ಕೊಟ್ಟಿದ್ದೇನೆ ಅಷ್ಟೆ. ಅವು ಕವಿತೆಗಳಾದವು. ಮೊಗ್ಗು ಹೂವಾಗುವ ಹಾಗೆ. ಭಾವ ಕವಿತೆಗಳಾಗುವ ತನಕ ಕಾದು ಈಗ ಅದನ್ನೆಲ್ಲ ಒಂದು ಪುಸ್ತಕ ಮಾಡಲೇಬೇಕು ಎಂದು ಇಲ್ಲಿಯ ತನಕ ತಂದು ನಿಲ್ಲಿಸಿದ್ದಾರೆ. ನನ್ನೊಳಗಿನ ಕವಿಗೆ ಒಂದು ಜೀವಕೊಟ್ಟು ಬೆಳೆಸಿ ಮತ್ತು ಬದುಕಿನ ಏರಿಳಿತಗಳಲ್ಲಿ ಜೊತೆಗಿದ್ದು, ಬದುಕಿನ ದಾರಿ ರೂಪಿಸಿದ್ದಲ್ಲದೆ ನನ್ನಲ್ಲಿ ಬದುಕಿನ ಪ್ರೀತಿ ಹುಟ್ಟಿಸಿದ ನನ್ನ ಗುರುಗಳಾದ ಡಾ.ಶಿವಲಿಂಗೇಗೌಡ, ಇವರಿಗೆ ನಾನು ಸದಾ ಋಣಿಯಾಗಿದ್ದೇನೆ.

ಈ ಪುಸ್ತಕದಲ್ಲಿ ಕವಿತೆಗಳಿಗೆ ಜೀವಂತಿಕೆ ತುಂಬಿರುವ ರೇಖಾಚಿತ್ರಗಳೂ ಬಹಳ ಮುಖ್ಯ. ಕವಿತೆಗಳನ್ನ ಮೆಚ್ಚಿ, ಒಂದಿಷ್ಟು ತಿದ್ದಿ “ನಿಮ್ಮ ಕವಿತೆಗಳನ್ನ ಪುಸ್ತಕ ಮಾಡಬೇಕು. ನಿಮ್ಮ ಕವಿತೆಗಳಿಗೆ ನಾನೇ ರೇಖಾಚಿತ್ರ ಬರೆದು ಕೊಡುತ್ತೇನೆ" ಎಂದು ನನ್ನನ್ನು ಮೊದಲಿನಿಂದಲೂ ಗುರುಗಳಾಗಿ, ಸ್ನೇಹಿತರಾಗಿ ಪ್ರೋತ್ಸಾಹಿಸಿದ ವ್ಯಂಗ್ಯ ಚಿತ್ರಕಾರರಾಗಿ, ಪತ್ರಕರ್ತರೂ ಆಗಿ 'ರಾಂಕೊ' ಎಂದೇ ಚಿರಪರಿಚಿತರಾದ ರಾಮಚಂದ್ರ ಕೊಪ್ಪಲು ಇವರಿಗೆ ಕೃತಜ್ಞತೆಗಳು. ಗುರುಗಳಾದ ಡಾ. ಪ್ರಕಾಶ್ ಎಲ್ ಡಾ. ಸುಧಾ ಬಿ.ಎಸ್., ಹಾಗು ಸಾಹಿತ್ಯದ ಓದಿಗೆ ಪ್ರೋತ್ಸಾಹಿಸಿದ ಡಾ. ಹಿ.ಚಿ. ಬೋರಲಿಂಗಯ್ಯ ಮತ್ತು ನನ್ನ ಎಲ್ಲ ಗುರುಗಳನ್ನು ಹಾಗೆಯೇ ಚಿಕ್ಕಮಗಳೂರಿನ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಡಾ.ಸಿ.ರಮೇಶ್ ಮತ್ತು ಸಿಬ್ಬಂದಿ ವರ್ಗದವರನ್ನು ನೆನಪಿಸಿಕೊಳ್ಳುತ್ತೇನೆ.

ಚಂದವಾಗಿ ಟೈಪಿಂಗ್ ಮಾಡಿಕೊಟ್ಟ ನನ್ನ ಸಹೋದರಿ ಶ್ರೀಮತಿ ಶ್ರೀದೇವಿ ಸತೀಶ್ ಮೇಲ್ಪಾಲ್ ಇವರಿಗೆ ನನ್ನ ಪ್ರೀತಿಯ ವಂದನೆಯನ್ನು ಅರ್ಪಿಸುತ್ತೇನೆ. ಹಾಗೆಯೇ ಬದುಕಿನ ದಾರಿಯಲ್ಲಿ ಸಂಭ್ರಮ, ದುಃಖ ಮತ್ತು ಒಂದಿಷ್ಟು ಕೋಪ ಹಂಚಿಕೊಳ್ಳಲು ಸದಾ ಜೊತೆ ಇದ್ದು ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸುವ ಮತ್ತು ಸ್ವಲ್ಪ ಹುಚ್ಚುತನದಿಂದ ಬದುಕಲು ಧೈರ್ಯಕೊಟ್ಟ ಸ್ನೇಹಿತರಾದ ಶ್ರೀಕಾಂತ, ನಿರಂಜನ್, ಅನುಷ ಮತ್ತು ಚೈತ್ರ ಇವರಿಗೆ ಧನ್ಯವಾದಗಳು. ನನ್ನ ಏಳುಬೀಳುಗಳ ಜೊತೆಯಿರುವ ಅಪ್ಪ, ಅಣ್ಣ, ಚಿಕ್ಕಮ್ಮ, ಅತ್ತಿಗೆ ಮತ್ತು ಮಕ್ಕಳಾದ ನಿಸರ್ಗ, ಅಕ್ಷಯ್ ಇವರ ನೆನಹುಗಳು. ಈ ಕವನ ಸಂಕಲನವನ್ನು ಪ್ರೀತಿಯಿಂದ ಒಪ್ಪಿ ಪ್ರಕಟಿಸುತ್ತಿರುವ 'ಸುದ್ದಿ' ಪ್ರಕಾಶನದ ಪ್ರಕಾಶಕರಾದ ಶ್ರೀ ಸುನಿಲ್‌ಕುಮಾ‌ರ್ ಅವರಿಗೂ ನಾನು ಅಭಾರಿಯಾಗಿದ್ದೇನೆ. ಮುಖಪುಟವನ್ನು ಅಂದವಾಗಿ ರೂಪಿಸಿಕೊಟ್ಟ ಅರುಣ್‌ ಕುಮಾರ್ ಜಿ. ರವರಿಗೆ ಪ್ರೀತಿಯ ಧನ್ಯವಾದಗಳು. ಈ ಕವನ ಸಂಕಲನದ ಪ್ರಕಟಣೆಗಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೆರವಾದ ಎಲ್ಲರ ಪ್ರೀತಿಗೆ ನನ್ನ ಅನಂತ ಪ್ರೀತಿಯ ನಮನಗಳು ಸಲ್ಲುತ್ತವೆ.

ಸದಾ ಅಮ್ಮನ ನೆನಪುಗಳೊಂದಿಗೆ..

- ನಂಕು(ನಂದನ ಕುಪ್ಪಳ್ಳಿ)

MORE FEATURES

ಪುಸ್ತಕಗಳು ನಮ್ಮ ಜ್ಞಾನ ಭಂಡಾರದ ಕೀಲಿ ಕೈ; ಸಾಯಿಸುತೆ

25-05-2024 ಬೆಂಗಳೂರು

‘ವಿಸ್ಮಯ, ವೈಶಿಷ್ಟ್ಯ, ವೈವಿಧ್ಯ, ತುಂಬಿಕೊಂಡ ಪಾತ್ರಗಳ ಅನಾವರಣವೇ 'ಪರ್ಣಕುಟೀರ' ಎನ್ನುತ್ತಾರೆ ಸಾಯಿಸು...

ಭಾಷೆಯನ್ನು ಹೊಸ ಪ್ರಯೋಗಕ್ಕೆ ಒಡ್ಡುವ ಕ್ರಮ ಕತೆಗಳಿಗೆ ಜೀವತುಂಬಿದೆ

25-05-2024 ಬೆಂಗಳೂರು

'ಸಂಗನಗೌಡರು ತಮ್ಮ ಕತೆಗಳನ್ನು ಹೇಳಲು ಒಂದು ಲೋಕವನ್ನು ಕಟ್ಟಿಕೊಂಡಿದ್ದಾರೆ. ತಾನು ಯಾವ ಲೋಕದ ಕತೆ ಹೇಳಬೇಕೆಂಬುದಕ್ಕ...

ಹರೆಯದವರ ಮನೋಲೋಕದಲ್ಲಿ ಒಂದು ಸುತ್ತು ಸುತ್ತಿ ಬರೋಣ

25-05-2024 ಬೆಂಗಳೂರು

‘ಮೊಬೈಲ್ ಮಾಯಾಲೋಕದೊಳಗೆ, ಇಂಟರ್‌ನೆಟ್‌ನ ಜಾಲದೊಳಗೆ ಹೋಗಿ ದಿಕ್ಕುದೆಸೆ ತಪ್ಪಿರುವ ಹರೆಯದವರು ಪಾಡು, ...