ಸಾಂಸ್ಕೃತಿಕ ನಾಯಕಿ ವೀರವನಿತೆ ಒನಕೆ ಓಬವ್ವ: ನೆಲ್ಲಿಕಟ್ಟೆ ಎಸ್.ಸಿದ್ದೇಶ್


ಓಬವ್ವ ಮಾತೆಯ ಸಾಹಸ ಕಾರ್ಯಕ್ಕೆ ರಾಜವೀರ ಮದಕರಿನಾಯಕರು ಅಭಿನಂದಿಸಿ, ಆ ಸಾಹಸ ಕಾರ್ಯದ ನೆನಪಿಗೆ ಇನ್ನೊಂದು ಸುತ್ತು ಕೋಟೆಯನ್ನು ಕಟ್ಟಿಸಿ, ಅದರ ಬಾಗಿಲಿಗೆ `ಒನಕೆ ಕಿಂಡಿ ಬಾಗಿಲು’ ಎಂದು ಹೆಸರಿಟ್ಟಿದ್ದು, ಓಬವ್ವಳ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದು, ಓಬವ್ವ ಮಾತೆಯ ಅಪೇಕ್ಷೆಯಂತೆ ಕುಲದೇವತೆಯಾಗಿಸಿ, ಅಗಸನಕಲ್ಲು ಗ್ರಾಮವನ್ನು ಛಲವಾದಿ ಸಮುದಾಯಕ್ಕೆ ಜಹಗಿರಿಯಾಗಿ ನೀಡಿರುವುದು, ಆ ಘಟನೆಯನ್ನು ಪದೆ ಪದೇ ನೆನೆದುಕೊಂಡು, ಮನದಲ್ಲಿ ನೊಂದುಕೊಂಡು ಓಬವ್ವ 1769ರ ಸೆಪ್ಟೆಂಬರ್‌ನಲ್ಲಿ ಸಾವನ್ನಪ್ಪಿದಾಗ ದೊರೆಗಳೇ ಬಂದು ಸಂತಾಪ ಸೂಚಿಸಿ, ರಾಜ ಮರ್ಯಾದೆಯೊಡನೆ ಇಡೀ ದುರ್ಗದ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ, ತಣ್ಣೀರು ಚಿಲುಮೆಯ ಪೂರ್ವಕ್ಕೆ ಸಮಾಧಿ ಮಾಡಿಸಿದ್ದು ದುರ್ಗದ ದೊರೆಗಳ ದಕ್ಷತೆಗೆ, ಔದಾರ್ಯಕ್ಕೆ, ಅವರ ಸಮಸಮಾಜದ ಮನೋಧರ್ಮಕ್ಕೆ, ಪ್ರಜಾವಾತ್ಸಲ್ಯಕ್ಕೆ ಹಿಡಿದ ರನ್ನಗನ್ನಡಿಯಾಗಿದೆ ಎನ್ನುತ್ತಾರೆ ಲೇಖಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್.

ಒನಕೆ ಓಬವ್ವ ಎಂದಾಕ್ಷಣ ರೋಮಾಂಚನವಾಗುತ್ತದೆ. ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಸಾಹಸ ಬೆಚ್ಚಿಬೀಳಿಸುತ್ತದೆ. ಛಲವಾದಿ ಸಮುದಾಯಕ್ಕೆ ಸೇರಿದ ಓಬವ್ವ ಸ್ವಾಮಿನಿಷ್ಠೆ, ಸಮಯ ಸ್ಫೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮ. ಪೌರಾಣಿಕ ಪರಂಪರೆಯ ಛಲದಂಕಮಲ್ಲ, ಐತಿಹಾಸಿಕ ಮಹಾತ್ಮ ಗೌತಮಬುದ್ಧನ ಅಂಗರಕ್ಷಕ ಚೆನ್ನ, ಮಹಾನ್ ಶಿವಭಕ್ತ ಶಿವನಾಗಮಯ್ಯ, ಧೀರಮಹಿಳೆ ಓಬವ್ವ, ಪತಿವ್ರತಶಿರೋಮಣಿ ವೀರಹನುಮಕ್ಕ, ಸಂವಿಧಾನಶಿಲ್ಪಿ, ವಿಶ್ವಜ್ಞಾನಿ ಅಂಬೇಡ್ಕರ್, ಅನುಭಾವಕವಿ ಚಲವಾದಿ ಚಂದಪ್ಪ, ಜನಪದಸಿರಿ ಚಲವಾದಿ ಗೌರಮ್ಮ, ಸಮಸಮಾಜದ ಕನಸುಗಾರರಾದ ಬಿ.ಬಸವಲಿಂಗಪ್ಪ, ಕೆ.ಎಚ್.ರಂಗನಾಥ್, ಸೋಸಲೆ ಸಿದ್ದಪ್ಪ, ಬಿ.ರಾಚಯ್ಯ, ಆರ್.ಭರಣಯ್ಯ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮೊದಲಾದ ಸಾಧಕರಿಗೆ ಜನ್ಮ ನೀಡಿರುವ ಛಲವಾದಿ ಜನಾಂಗವು ಆದಿದ್ರಾವಿಡ, ಆದಿಕರ್ನಾಟಕ ಬಲಗೈ, ಮಹಾರ್, ಮಾಲ, ಆದಿಮೂಲ, ದಾಸರು, ಚನ್ನಯ್ಯ, ಚನ್ನದಾಸರು, ಹೊಲಯ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಸಮುದಾಯವಿದು.

"ಇತಿಹಾಸ ಪುಟಗಳಲ್ಲಿ ನೀ ತುಂಬ ಬಹುದು| ನಿನ್ನ ಮಾತುಗಳಿಂದ, ತಿರುಚಿದ ಸತ್ಯಗಳಿಂದ ಮಣ್ಣಂತೆ ನೀ ನನ್ನ ತುಳಿಯಬಹುದು| ಆದರೂ ಧೂಳ ಕಣವಾಗಿ ನಾ ಮೇಲೇಳುತ್ತೇನೆ’’ ಎಂಬ ನಿಗ್ರೋ ಕವಯತ್ರಿ ಅಂಜತ್ರೊ ಅವರ ಕವಿವಾಣಿಯಂತೆ ಮೇಲೆದ್ದು, ಸಮಾಜಮುಖಿ ಕಾರ್ಯದಲ್ಲಿ ನಿರತವಾಗಿರುವ ಛಲವಾದಿ ಸಮುದಾಯಕ್ಕೆ ಮೌಲ್ಯಯುತವಾದ ಪೌರಾಣಿಕ ಪರಂಪರೆಯಿದೆ. ಉತ್ತಮ ಸಂಸ್ಕೃತಿ, ಸಂಸ್ಕಾರವಿದೆ. ಆಚಾರ-ವಿಚಾರ, ನಡೆ-ನುಡಿಗಳ ಪರಿಶುದ್ಧತೆ ಮತ್ತು ಕಾಯಕನಿಷ್ಠೆಯ ದೃಢಸಂಕಲ್ಪವುಳ್ಳ ಸಮುದಾಯವಿದು. ರಾಜ-ಮಹಾರಾಜರಾಗಿ ಈ ನೆಲವನ್ನಾಳಿದ ಜನಾಂಗವಿದು. ಕಪಟಿಗಳು ಕುತಂತ್ರದಿಂದ ಹೊಲದ ಒಡೆಯರನ್ನು ಹೊಲೆಯರನ್ನಾಗಿಸಿದ್ದು, ಭಾರತದ ಮೊದಲ ದೊರೆಗಳನ್ನು ದಾಸ್ಯರಾಗಿಸಿದ್ದು ಇತಿಹಾಸದಲ್ಲಿನ ದುರಂತ. ಛಲವಾದಿ ಸಮುದಾಯಕ್ಕೆ ಮೌಲ್ಯಯುತವಾದ ಪೌರಾಣಿಕ ಪರಂಪರೆಯಿದೆ. ಉತ್ತಮ ಸಂಸ್ಕೃತಿ, ಸಂಸ್ಕಾರವಿದೆ. ಆಚಾರ-ವಿಚಾರ, ನಡೆ-ನುಡಿಗಳ ಪರಿಶುದ್ಧತೆ ಮತ್ತು ಕಾಯಕನಿಷ್ಠೆಯ ದೃಢಸಂಕಲ್ಪವುಳ್ಳ ಸಮುದಾಯವಿದು. ರಾಜ-ಮಹಾರಾಜರಾಗಿ ಈ ನೆಲವನ್ನಾಳಿದ ಜನಾಂಗವಿದು. ಕಾಲಾನಂತರ ರಾಜ, ಮಂತ್ರಿ ಮಹೋದಯರ ನಂಬಿಕೆಗೆ, ಪ್ರೀತಿ-ವಿಶ್ವಾಸಕ್ಕೆ ಭಾಜನವಾದ ಸಮುದಾಯವಿದು. ಇಂಥ ಸಮುದಾಯದ ಮಕುಟಮಣಿ ಒನಕೆ ಓಬವ್ವ.

ಭಾರತದ ಚರಿತ್ರೆಯಲ್ಲಿ ಕರ್ನಾಟಕಕ್ಕೆ ವೀರೋಚಿತ ಇರಿಹಾಸವಿದೆ. ಇಂತಹ ಕರ್ನಾಟಕದಲ್ಲಿ ಚಿತ್ರದುರ್ಗ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ, ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಅಮೂಲ್ಯ ಕಾಣ್ಕೆಯನ್ನು ನೀಡಿದ ತಾಣವಾಗಿದೆ. ‘ಚಿತ್ರದುರ್ಗ’ ಹೆಸರೇ ಒಂದು ಚೈತನ್ಯದ ಜಲಪಾತ. ಸಾಹಸಿಗಳ ಇತಿಹಾಸ ಪ್ರಸಿದ್ಧ ಸಾಧನೆಗಳಿಂದ ರಾರಾಜಿಸಿದ ಮರೆಯಲಾಗದ ಮಹಾನ್ ತಾಣ. ಕರ್ನಾಟಕದ ಅಮೂಲ್ಯ ಐತಿಹಾಸಿಕ ಸ್ಮಾರಕ ಚಿತ್ರದುರ್ಗದ ಕೋಟೆ. ಮಹಾಪರಾಕ್ರಮಿ ರಾಜವೀರ ಮದಕರಿನಾಯಕರು ಆಳಿದ ಪವಿತ್ರ ಭೂಮಿಯಿದು. ಮುಗಿಲಿಗೆ ಮುತ್ತನ್ನಿಡುವಂತೆ ಗೋಚರಿಸುವ ಮನಮೋಹಕ ಬತೇರಿಗಳನ್ನೊಂದಿರುವ ಇಲ್ಲಿನ ಉಕ್ಕಿನಂತಹ ಏಳು ಸುತ್ತಿನಕೋಟೆಯನ್ನು ಹೈದರಾಲಿ ಕುತಂತ್ರದಿಂದ ವಶಪಡಿಸಿಕೊಳ್ಳಲು ಯತ್ನಿಸಿದ್ದನ್ನು ವಿಫಲಗೊಳಿಸಿ; ಚಿತ್ರದುರ್ಗದ ಕೋಟೆ ಮತ್ತು ಜನತೆಯನ್ನು ಬಹು ಅಪಾಯದಿಂದ ಪಾರುಮಾಡಿದ ಮಹಾನ್ ಶಕ್ತಿದಾತೆ ವೀರವನಿತೆ ಒನಕೆ ಓಬವ್ವ.

ಗುಡೇಕೋಟೆ ಪಾಳೆಗಾರರಲ್ಲಿ ಕಹಳೆಯವರಾಗಿ ಸೇವೆ ಸಲ್ಲಿಸುತ್ತಿದ್ದ ಛಲವಾದಿ ಜನಾಂಗದ ಚೆನ್ನಪ್ಪನ ಮಗಳಾಗಿ ಜನಿಸಿದ ಓಬವ್ವ. ಬಾಲ್ಯದಿಂದಲೂ ಸಂಕಷ್ಟಗಳ ಅನುಭವಗಳೊಂದಿಗೆ ಅನನ್ಯವಾದ ಸಂಸ್ಕಾರಗಳನ್ನು ರೂಢಿಸಿಕೊಂಡವಳು. ಚಿತ್ರದುರ್ಗದ ರಾಜವೀರ ಮದಕರಿನಾಯಕರಲ್ಲಿ ಆಪ್ತಸೇವಕರಾಗಿ, ಕಹಳೆಯವರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದ ಛಲವಾದಿ ಕಹಳೆ ಮದ್ದಹನುಮಪ್ಪ ಅವರ ಸಾತ್ವಿಕ ಸತಿಯಾಗಿ ಬಾಳಿ ಬೆಳಗಿದ ಮಹಾಮಾತೆ ಓಬವ್ವ ಕೇವಲ ವ್ಯಕ್ತಿಯಲ್ಲ, ಆ ಮಾತೆಯೊಂದು ಶಕ್ತಿಪುಂಜ. ಓಬವ್ವ ನಿಷ್ಕಲ್ಮಷ ನಾಡಭಕ್ತಿಯ ದ್ಯೋತಕ. ಇಂದಿಗೂ ಆ ಮಾತೆಯ ಹೆಸರು ಹೇಳಿದರೆ, ಕೇಳಿದರೆ ಸ್ತ್ರೀ- ಪುರುಷರಲ್ಲಿ ಸ್ಫೂರ್ತಿಯ ಬುಗ್ಗೆ ಚಿಮ್ಮುತ್ತದೆ. ಓಬವ್ವಳ ಸಾಹಸಮಯ ಜೀವನ ಆದರ್ಶಪ್ರಾಯವಾಗಿದೆ. ಇಂಥ ಮಹಾನ್ ಧೈರ್ಯನಿಧಿಯನ್ನು ಕುರಿತು ಬರೆದಿರುವ ಲೇಖನಗಳು, ಕೃತಿಗಳು ಬಹು ಕಡಿಮೆ. ಮಕ್ಕಳಿಗೆ ಪರಿಚಯಿಸುವ ಸಲುವಾಗಿ 1971ರಲ್ಲಿ ಐಬಿಎಚ್ ಪ್ರಕಾಶನ ಪ್ರಕಟಿಸಿದ ಕಮಲಾ ಹಂಪನಾ ಅವರ 'ವೀರವನಿತೆ ಓಬವ್ವ', 1973ರಲ್ಲಿ ಭಾರತ-ಭಾರತಿ ಪುಸ್ತಕ ಸಂಪದ ಪ್ರಕಟಿಸಿದ ಜಿ.ವರದರಾಜರಾವ್ ಅವರ 'ಓಬವ್ವ' ಎಂಬ ಪುಸ್ತಿಕೆಗಳು ಪ್ರಕಟವಾಗಿವೆ. ಒನಕೆ ಓಬವ್ವೆಯ ವಂಶಸ್ಥರಾದ ಪ್ರೊ.ಎ.ಡಿ.ಕೃಷ್ಣಯ್ಯ ಅವರ 'ಭಾರತದ ಧೀರಮಹಿಳೆ ಚಿತ್ರದುರ್ಗದ ಒನಕೆ ಓಬವ್ವ’ ಕೃತಿ 1979ರಲ್ಲಿ ಪ್ರಕಟವಾಗಿದೆ. ಎಚ್.ವಿ.ವೀರನಾಯಕ ಹರತಿ ಅವರ 'ದುರ್ಗದ ಸಿಂಹಿಣಿ ಓಬವ್ವ’ ಎಂಬ ಐತಿಹಾಸಿಕ ನಾಟಕ 1982ರಲ್ಲಿ ಪ್ರಕಟವಾಗಿದೆ. 1996ಲ್ಲಿ ಪ್ರಕಟವಾಗಿರುವ 'ಇತಿಹಾಸ ದರ್ಶನ’ ಸಂಪುಟ ಆರರಲ್ಲಿ ಪ್ರೊ.ಲಕ್ಷ್ಮಣ್ ತೆಲಗಾವಿ ಅವರ ‘ಚಿತ್ರದುರ್ಗದ ಒನಕೆ ಓಬವ್ವೆಯ ಘಟನೆ-ಚಾರಿತ್ರಿಕ ವಿಮರ್ಶೆ’ ಲೇಖನ ಪ್ರಕಟವಾಗಿದೆ. 1997 ರಲ್ಲಿ ಪ್ರೊ.ಕೃಷ್ಣಯ್ಯ ಅವರು ಆಂಗ್ಲಭಾಷೆಯಲ್ಲಿ Bharatada dheera Mahile Chitradurgada Onake Obavva ಕೃತಿಯನ್ನು ಪ್ರಕಟಿಸಿರುವರು. ಬಿ.ಎಲ್.ವೇಣು ಅವರ 'ವೀರ ವನಿತೆ ಒನಕೆ ಓಬವ್ವ’ ಎಂಬ ಐತಿಹಾಸಿಕ ಕಾದಂಬರಿ 2001ರಲ್ಲಿ ಪ್ರಕಟವಾಗಿದೆ. ಪ್ರೊ.ಎ.ಡಿ.ಕೃಷ್ಣಯ್ಯ ಅವರ 'ಭಾರತದ ಧೀರ ಮಹಿಳೆ ಚಿತ್ರದುರ್ಗದ ಒನಕೆ ಓಬವ್ವ’ ಕೃತಿಯನ್ನು ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಸಂಪಾದಿಸಿ, ಪರಿಷ್ಕರಿಸಿ 2007ರಲ್ಲಿ ಪ್ರಕಟಸಿರುವರು. 2007ರಲ್ಲಿ ಜಿ.ಎನ್.ಹರಿಕುಮಾರ ಗೌಡ ಅವರ ಆಂಗ್ಲಭಾಷೆಯಲ್ಲಿ The Valour Lady Onake Obavva and The two Glorious women ಕೃತಿಯನ್ನು ಪ್ರಕಟಿಸಿರುವರು. 2010ರಲ್ಲಿ ಪ್ರೊ.ಲಕ್ಷ್ಮಣ್ ತೆಲಗಾವಿ ಅವರು ’ಚಿತ್ರದುರ್ಗದ ಒನಕೆ ಓಬವ್ವ ಚಾರಿತ್ರಿಕ ವಿವೇಚನೆ’ ಕೃತಿಯನ್ನು ಪ್ರಕಟಿಸಿರುವರು. 2016ರಲ್ಲಿ ಡಾ.ಚಿನ್ನಸ್ವಾಮಿ ಸೋಸಲೆ ಅವರು 'ಒನಕೆ ಓಬವ್ವೆ : ದಲಿತ ಸಂವೇದನೆಯೊಂದಿಗೆ ಮುಖಾಮುಖಿ’ ಕೃತಿಯನ್ನು ಪ್ರಕಟಿಸಿರುವರು. ಈ ಎಲ್ಲ ಕೃತಿಗಳು ಒನಕೆ ಓಬವ್ವಳ ಸಾಹಸಗಾಥೆಯ ಮೇಲೆ ಬೆಳಕು ಚೆಲ್ಲುತ್ತವೆ.

ಮಹಾನ್ ಧೈರ್ಯನಿಧಿಯನ್ನು ಕುರಿತು ಬಿ.ಎಲ್.ವೇಣು ಅವರು ಬರೆದಿರುವ “ವೀರವನಿತೆ ಒನಕೆ ಓಬವ್ವ” ಐತಿಹಾಸಿಕ ಕಾದಂಬರಿ ಎಂಬತ್ತು ಪುಟಗಳಲ್ಲಿ ನಿರೂಪಿತವಾಗಿದೆ. ಈ ಕೃತಿ ಚಿತ್ರದುರ್ಗದ ದೊರೆ-ಪ್ರಜೆಗಳ ಸಾಮರಸ್ಯ ಬದುಕಿಗೆ, ಧೀರತನದ ಬಾಳಿಗೆ, ಸ್ವಾಮಿನಿಷ್ಠೆ ಜನತೆಯ ಸಾತ್ವಿಕ ಜೀವನಕ್ಕೆ ಹಿಡಿದ ರನ್ನಗನ್ನಡಿ. ಈ ಕೃತಿಯಲ್ಲಿ ಪ್ರಸಂಗವೊಂದನ್ನು ಕಾದಂಬರಿಕಾರರು ಚಿತ್ರಿಸಿರುವುದು ಹೀಗಿದೆ :ದಸರ ಹಬ್ಬದಲ್ಲಿ ಏರ್ಪಡಿಸಿದ್ದ ವೀರೋಚಿತ ಕ್ರೀಡೆ ಮತ್ತು ರಂಗೋಲೊ ಸ್ಪರ್ಧೆಗಳನ್ನು ವೀಕ್ಷಿಸಿದ ದೊಡ್ಡಮದಕರಿನಾಯಕರು ‘ಮುರುಘರಾಜೇಂದ್ರ ಗುರುಪಾದಸ್ವಾಮಿಗಳ ಚಿತ್ರವನ್ನು ನೋಡಿ, ಆಕರ್ಷಿತರಾಗಿ, ಮಹಾಸ್ವಾಮಿಯವರ ಚಿತ್ರಬಿಡಿಸಿದವರನ್ನು ನೋಡಬಯಸಿದಂತೆಯೇ ದಳವಾಯಿ ಭರಮಪ್ಪನಾಯಕರು ಆ ಕಲಾವಿದೆಯನ್ನು ಕರೆಸುವರು. “ಆ ಯುವತಿ ಚಲವಾದಿಗರ ಹೆಣ್ಣು ಮಹಾಪ್ರಭು” “ಧರ್ಮಶಾಸ್ತçದ ಪ್ರಕಾರ ಆಕೆ ಅಲ್ಲಿಗೆ ಬರುವಂತಿಲ್ಲ. ಇದು ದುರ್ಗದ ಸರ್ವಶ್ರೇಷ್ಠ ಅಮ್ಮನವರ ಆಲಯ” ಎಂದು ಹೇಳಿದ ಪ್ರಧಾನಿ ಕಳ್ಳಿನರಸಪ್ಪನ ಮಾತಿಗೆ “ಹಾಗೋ! ನಾವೇ ಆಕೆ ಇರುವಲ್ಲಿಗೆ ಹೋದರೆ ಧರ್ಮಶಾಸ್ತçಕೇನು ಊನವಾಗದಷ್ಟೆ” (ಪು.10) ಎಂದು ಓಬವ್ವ ಇದ್ದಲ್ಲಿಗೆ ದೊರೆಗಳು ಹೋಗುವರು. ದೊರೆಗಳ ಕಲಾರಾಧನೆ, ಪ್ರತಿಭೆಗೆ ಪ್ರೇರೇಪಿಸುವ ಮನೋಧರ್ಮ, ಸಾಮಾನ್ಯ ಮಹಿಳೆಯೆಂದೂ ಕಡೆಗಾಣಿಸದೆ, ಅಭಿನಂದಿಸುವAತಹ ಪ್ರಜಾವಾತ್ಸಲ್ಯ ಅವರ್ಣನೀಯವಾದುದು. ಓಬವ್ವಳ ಅಪ್ರತಿಮ ಕಲಾವಂತಿಕೆಯನ್ನು ಪ್ರದರ್ಶಿಸುವ ಪ್ರಸಂಗದ ಮೂಲಕ ಓಬವ್ವಳನ್ನು ಪರಿಚಯಿಸುವ ಕಾದಂಬರಿಕಾರರ ಔಚಿತ್ಯಪ್ರಜ್ಞೆ ಮೆಚ್ಚುವಂತಹದ್ದು. ಏಕೆಂದರೆ ಛಲವಾದಿ ಸಮುದಾಯದವರು ಹುಟ್ಟು ಕಲಾವಿದರು. ಶಹನಾಯಿ, ಸಮಾಳ, ಶೃತಿ, ಡೋಲು, ಉರುಮೆ, ಕಹಳೆ ಮೊದಲಾದ ವಾದ್ಯಗಳನ್ನು ನುಡಿಸುವಲ್ಲಿ ಪ್ರವೀಣರು. ಸಂಗೀತದಲ್ಲಿ ಅಷ್ಟೇ ಅಲ್ಲ, ಗ್ರಾಮೀಣ ಕಲೆಗಳಲ್ಲಿ ಅಪ್ರತಿಮ ಕಲಾವಿದರು. ಬಹುನಿಷ್ಠೆ ನೀತಿಯ, ಸ್ವಾಮಿ ನಿಷ್ಠೆಯ ಛಲವಾದಿ ಜನಾಂಗದಲ್ಲಿ ಜನಿಸಿದ ಓಬವ್ವೆಯ ನಡೆತೆಯು ಸರ್ವಜನ ಆದರಣೀಯವಾದುದು.

1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ವಿಷ್ಣುವರ್ಧನ, ಅಂಬರೀಶ್, ಜಯಂತಿ ಮೊದಲಾದವರ ಅಭಿನಯದ ನಾಗರಹಾವು ಚಲನಚಿತ್ರಕ್ಕೆ ಚಿ. ಉದಯಶಂಕರ್ ಅವರು ಬರೆದಿರುವ ಪಿ.ಬಿ.ಶ್ರೀನಿವಾಸ ಹಾಡಿರುವ, ``ಕನ್ನಡ ನಾಡಿನ ವೀರರಮಣಿಯ| ಗಂಡುಭೂಮಿಯ ವೀರ ನಾರಿಯ| ಚರಿತೆಯ ನಾನು ಹಾಡುವೆ| ಚಿತ್ರದುರ್ಗದ ಕಲ್ಲಿನಕೋಟೆ| ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ| ಮದಿಸಿದ ಕರಿಯ ಮದವಡಗಿಸಿದ | ಮದಕರಿನಾಯಕರಾಳಿದ ಕೋಟೆ| ಪುಣ್ಯ ಭೂಮಿಯು ಈ ಬೀಡು| ಸಿದ್ದರು ಹರಸಿದ ಸಿರಿನಾಡು..||ಪ|| ವೀರಮದಕರಿ ಆಳುತಲಿರಲು| ಹೈದಾರಾಳಿಯು ಯುದ್ಧಕ್ಕೆ ಬರಲು...|ಕೋಟೆ ಜನಗಳ ರಕ್ಷಿಸುತಿರಲು| ಸತತ ದಾಳಿಯು ವ್ಯರ್ಥವಾಗಲು..| ವೈರಿ ಚಿಂತೆಯಲಿ ಬಸವಳಿದ| ದಾರಿ ಕಾಣದೆ ಮಂಕಾದ..||ಪ|| ’’ ಈ ಗೀತೆ ಕನ್ನಡಿಗರ ಹೃನ್ಮನ ತುಂಬಿತು. ರೋಮಂಚನಗೊಳಿಸಿತು. ಗೀತೆಯ ಮೂಲಕ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ. ಆದರೆ 1766ರಲ್ಲಿ ಸಾಹಸದ ಘಟನೆ ನಡೆಯುತ್ತದೆ. 1969ರಲ್ಲಿ ಓಬವ್ವ ಸಾವನ್ನಪ್ಪುತ್ತಾರೆ. ಚಲನಚಿತ್ರದ ನಿರ್ದೇಶಕರು ಓನಕೆ ಕಿಂಡಿಯ ಬಳಿಯೇ ಸಾಯಿಸಿರುವುದು ಐತಿಹಾಸಿಕ ಸತ್ಯವನ್ನು ಮರೆಮಾಚಿಸಿದೆ.

ಓಬವ್ವ ಮಾತೆಯ ಸಾಹಸ ಕಾರ್ಯಕ್ಕೆ ರಾಜವೀರ ಮದಕರಿನಾಯಕರು ಅಭಿನಂದಿಸಿ, ಆ ಸಾಹಸ ಕಾರ್ಯದ ನೆನಪಿಗೆ ಇನ್ನೊಂದು ಸುತ್ತು ಕೋಟೆಯನ್ನು ಕಟ್ಟಿಸಿ, ಅದರ ಬಾಗಿಲಿಗೆ `ಒನಕೆ ಕಿಂಡಿ ಬಾಗಿಲು’ ಎಂದು ಹೆಸರಿಟ್ಟಿದ್ದು, ಓಬವ್ವಳ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದು, ಓಬವ್ವ ಮಾತೆಯ ಅಪೇಕ್ಷೆಯಂತೆ ಕುಲದೇವತೆಯಾಗಿಸಿ, ಅಗಸನಕಲ್ಲು ಗ್ರಾಮವನ್ನು ಛಲವಾದಿ ಸಮುದಾಯಕ್ಕೆ ಜಹಗಿರಿಯಾಗಿ ನೀಡಿರುವುದು, ಆ ಘಟನೆಯನ್ನು ಪದೆ ಪದೇ ನೆನೆದುಕೊಂಡು, ಮನದಲ್ಲಿ ನೊಂದುಕೊಂಡು ಓಬವ್ವ 1769ರ ಸೆಪ್ಟೆಂಬರ್‌ನಲ್ಲಿ ಸಾವನ್ನಪ್ಪಿದಾಗ ದೊರೆಗಳೇ ಬಂದು ಸಂತಾಪ ಸೂಚಿಸಿ, ರಾಜ ಮರ್ಯಾದೆಯೊಡನೆ ಇಡೀ ದುರ್ಗದ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ, ತಣ್ಣೀರು ಚಿಲುಮೆಯ ಪೂರ್ವಕ್ಕೆ ಸಮಾಧಿ ಮಾಡಿಸಿದ್ದು ದುರ್ಗದ ದೊರೆಗಳ ದಕ್ಷತೆಗೆ, ಔದಾರ್ಯಕ್ಕೆ, ಅವರ ಸಮಸಮಾಜದ ಮನೋಧರ್ಮಕ್ಕೆ, ಪ್ರಜಾವಾತ್ಸಲ್ಯಕ್ಕೆ ಹಿಡಿದ ರನ್ನಗನ್ನಡಿಯಾಗಿದೆ.

ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಸಂಪಾದಿಸಿ, ಪ್ರಕಟಸಿರುವ ಪ್ರೊ. ಎ.ಡಿ.ಕೃಷ್ಣಯ್ಯನವರ ‘ಭಾರತದ ಧೀರಮಹಿಳೆ ಚಿತ್ರದುರ್ಗದ ಒನಕೆ ಓಬವ್ವ’ ಕೃತಿಯ ಬೆನ್ನುಡಿಯಲ್ಲಿ ಅಶೋಕ್.ಎನ್. ಚಲವಾದಿ ಅವರು ಹೇಳುವಂತೆ “ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಬಹುತೇಕ ರಾಜಮಹಾರಾಜರು, ಮಂತ್ರಿಗಳು, ರಾಣಿಮಹಾರಾಣಿಯರು ಅಧಿಕಾರಕ್ಕಾಗಿ, ಸಿರಿಸಂಪತ್ತಿನ ಅನುಭೋಗ ಲಾಲಸೆಗಾಗಿ ಅಂಟಿಕೊಂಡಿರುವುದನ್ನು ಕಾಣುತ್ತೇವೆ. ಆದರೆ ಮಹಾತಾಯಿ ವೀರವನಿತೆ ಒನಕೆ ಓಬವ್ವ ಒಬ್ಬ ಸಾಮಾನ್ಯ ಕಾವಲುಗಾರನ ಹೆಂಡತಿಯಾಗಿ, ಸಾಮಾನ್ಯ ಜೀವನ ನಡೆಸುತ್ತಾ ಸಾಗುವಾಗ ತಮ್ಮನ್ನು ಸಾಕಿ-ಸಲಹುತ್ತಿರುವ ರಾಜರಿಗೆ ಆಪತ್ತು ಬಂದಾಗ: ಸಮಯ ಪ್ರಜ್ಞೆಯಿಂದ ತನ್ನಲ್ಲಿರುವ ಶಕ್ತಿಯನ್ನು ಒಗ್ಗುಡಿಸಿಕೊಂಡು, ಶತ್ರು ಸೈನ್ಯವನ್ನು ಸದೆಬಡಿದು, ದುರ್ಗಕ್ಕೆ ಒದಗುವ ಅಪಾಯವನ್ನು ತಪ್ಪಿಸಿ, ಕೋಟೆಯನ್ನು ರಕ್ಷಿಸುವಲ್ಲಿ ಸ್ವಾಮಿ ನಿಷ್ಠೆ ಪ್ರದರ್ಶಿಸಿದ ಆ ಧೀರ ಮಹಿಳೆಯ ಘಟನೆ ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿದಿದೆ.’’ ಎಂಬ ಈ ಮಾತುಗಳು ಓಬವ್ವ ಮಾತೆಯ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತವೆ.

ಇಂತಹ ವೀರ ಮಹಿಳೆ ಕುರಿತ ತಮ್ಮ ಸೃಜನಶೀಲ ಕೃತಿಯಲ್ಲಿ ಬಿ.ಎಲ್.ವೇಣು ಅವರು ಪರಿಚಯಿಸುವುದು ಹೀಗಿದೆ: ಓಬವ್ವ ರಂಗೋಲಿ ಬಿಡಿಸಿ, ರಾಜಕೃಪೆಗೆ ಪಾತ್ರಳಾಗಿದ್ದಷ್ಟೇ ಅಲ್ಲದೆ ಭತ್ತಕುಟ್ಟುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು. “ಓಬವ್ವ ಭತ್ತ ಕುಟ್ಟುವಾಗ ಆಕೆಯ “ಒನಕೆಯ ಹೊಡೆತಕ್ಕೆ ನೆಲಕಂಪಿಸುತ್ತಿತ್ತು. ಆಕೆಯ ಕಟ್ಟುಮಸ್ತಾದ ದೇಹದ ಬಲವೆಲ್ಲಾ ತೋಳಿನಲ್ಲಿ ಸೇರಿ ತೋಳುಗಳ ಸ್ನಾಯುಗಳು ಉಬ್ಬಿ ನಿಂತಿದ್ದವು. ವೀರಗಾಸೆ ಹಾಕಿ ನಿಂತು, ರೆಪ್ಪೆ ಬಡಿಯಲೂ ಬಿಡುವು ನೀಡದೆ ಒನಕೆಯನ್ನು ಎತ್ತಿತ್ತಿ “ದಪ್ ದಪ್’ ಎಂದು ಕುಟ್ಟುವ ಆಕೆಯನ್ನೇ ಪಿಳಿ ಪಿಳಿ ನೋಡತಲಿದ್ದರು. “ಬೆವರಿನ ಸ್ಪರ್ಧೆಯಲ್ಲಿ ತಲ್ಲೀನಳಾಗಿದ್ದಳು’ (ಪು.13) ಎನ್ನುವ ಕಾದಂಬರಿಕಾರರು ಮುಂದೆ ಆಕೆಗೆ ಆಕಸ್ಮಿಕವಾಗಿ ಒದಗಿಬರುವ ಸಾಹಸಮಯ ಕರ‍್ಯದಲ್ಲಿ ಯಶಸ್ವಿಯಾಗುವಂತಹ ಧೈರ್ಯ-ಸ್ಥೆöÊರ್ಯ, ಶಕ್ತಿ ಸಾಮರ್ಥ್ಯದ ಗಣಿಯಾಗಿದ್ದಳೆಂಬುದಕ್ಕೆ ಪೀಠಿಕೆಯಾಗಿದೆ ಈ ಭತ್ತಕುಟ್ಟುವ ಸ್ಪರ್ಧೆಯ ಪ್ರಸಂಗ.

ವೇಣು ಅವರು ತಮ್ಮ ಕೃತಿಯಲ್ಲಿ ಹೇಳುವುದು ಹೀಗಿದೆ : “ದುರ್ಗದ ಕೋಟೆ ಕಾಯುವುದು ಎಷ್ಟು ಪುಣ್ಯದ ಕೆಲಸವೋ, ಹೆಣ್ಣಿನ ಮಾನ ಸಂರಕ್ಷಣೆ ಅದಕ್ಕಿಂತ ಮಿಗಿಲಾದದ್ದು ಹನುಮಪ್ಪ. ಹಾಳಾದ ಕೋಟೆಯನ್ನು ಸರಿಪಡಿಸಬಹುದು. ಹಾಳಾದ ಹೆಣ್ತನವನ್ನು ಸರಿಪಡಿಸಲು ಶಿವನಿಂದಲೂ ಅಸಾಧ್ಯ. ನೀನಿಂದು ಒಂದು ಹೆಣ್ಣಿನ ಮಾನವನ್ನಲ್ಲಯ್ಯ ಕಾಪಾಡಿದ್ದು ದುರ್ಗದ ಪ್ರಭುಗಳ ಮಾನವನ್ನ”(ಪು.40) ಎಂದು ಮದ್ದಹನುಮಪ್ಪನ ಕರ್ತವ್ಯಕ್ಕೆ ಮದಕರಿನಾಯಕರು ಮೆಚ್ಚಿಗೆ ಸೂಚಿಸಿದರು. ಮುಂದೆ ಮದಕರಿನಾಯಕರು ತಾವು ಮದುವೆಯಾದ ಗುಡೇಕೋಟೆಯಲ್ಲಿನ ಕಹಳೆ ಚೆನ್ನಪ್ಪನ ಮಗಳು ಓಬವ್ವೆಯನ್ನು ವಿವಾಹವಾದ ಮದ್ದಹನುಮಪ್ಪನನನ್ನು ಕಹಳೆ ಬತೇರಿಯ ಕಾವಲಿನ ಕೆಲಸಕ್ಕೆ ನೇಮಕಮಾಡಿಕೊಂಡರು. ಆ ದಂಪತಿಗೆ ಶುಭಹಾರೈಸಿದರು. ‘ನನ್ನ ಸೋದರಿ ಓಬವ್ವೆ’ ಎಂದು ತನ್ನ ರಾಣಿಗೆ ಪರಿಚಯಿಸಿದ್ದು, ರಾಣಿ ‘ಸಂಪಿಗೆ ಮಾಲೆಯನ್ನು ಓಬವ್ವೆಗೆ ನೀಡಿದ್ದು’- ಅವರುಗಳ ಉನ್ನತ ಸಂಸ್ಕೃತಿ, ಘನವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಮದಕರಿ ಭೂಪಾಲರ ಹಾಗೂ ರಾಣಿಯ ಗೌರವಕ್ಕೆ, ಅಭಿಮಾನಕ್ಕೆ ಪಾತ್ರರಾಗಿರುವ ಕಹಳೆ ಮದ್ದಹನುಮಪ್ಪ-ಓಬವ್ವೆ- ಸ್ವಾಮಿನಿಷ್ಠೆಗೆ ಚ್ಯುತಿಬಾರದಂತೆ ಬಾಳಿರುವುದರಲ್ಲಿ ಎಳ್ಳಷ್ಟು ಅನುಮಾನವಿಲ್ಲ.

ಶತ್ರುವಿನ ಮೋಸದ ದಾಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಹಳೆ ಬತೇರಿಯಲ್ಲಿ ಕಾವಲು ಕಾಯುತ್ತಿದ್ದ ಗಂಡ ಮದ್ದಹನುಮಪ್ಪ ಊಟಕ್ಕೆ ಬರುವರೆಂದು ಕಾಯುತ್ತಿದ್ದ ಓಬವ್ವ, ಹೊತ್ತು ಕಳೆಯುವ ಸಲುವಾಗಿ ನೆರಮನೆಯಿಂದ ಒನಕೆ ಇಸೆದುಕೊಂಡು ಬಂದು ನವಣೆ ಕುಟ್ಟಿ, ಅನಂತರ ಆ ಒನಕೆ ಕೊಟ್ಟು ಬರಲು ಹೋಗುವಾಗ, ಶತ್ರುಗಳ ಪಿಸುಮಾತು ಕೇಳಿ, ಕಳ್ಳಗಂಡಿಯಲಿ ಶತ್ರುಗಳನ್ನು ಕಂಡು, ದುರ್ಗಕ್ಕೆ ಒದಗಿದ ಅಪಾಯವನ್ನು ಅರಿತು; ರಣಚಂಡಿಯಂತೆ ಶತ್ರುಗಳ ತಲೆಗಳನ್ನು ಉರುಳಿಸುವಲ್ಲಿ ಕರ‍್ಯಮಗ್ನಳಾದ ವೀರವನಿತೆ. ಈ ಪ್ರಸಂಗವನ್ನು ಬಿ.ಎಲ್. ವೇಣು ಅವರು ಚಿತ್ರಸಿರುವುದು ಹೀಗಿದೆ :“ಮೈಮೇಲೆ ಪರಿವಿಯಿಲ್ಲದೆ ದುಷ್ಟನಿಗ್ರಹಕ್ಕೆ ನಿಂತ ಓಬವ್ವೆಯಲ್ಲಿ ಅಸುರೀತನ ಕಂಡಿತು. ಜಡೆ ಬಿಚ್ಚಿ ಹೋಗಿ ಮುಡಿಗೆದರಿತ್ತು. ಹುಬ್ಬು ಕೂಡಿದವು. ಕಣ್ಣುಗಳು ಕೆಂಡದುಂಡೆಗಳಾಗಿದ್ದವು. ಹಲ್ಲುಗಳು ಮಸೆಯುತ್ತಿದ್ದವು. ಕೈಕಾಲುಗಳಿಗೆ ಬಿಡುವಿಲ್ಲ. ರಕ್ತದಲ್ಲಿ ಅವಳ ಪಾದಗಳು ಮುಳುಗಿದ್ದವು. ಊಟಕ್ಕೆಂದು ಮನೆಗೆ ಬರುತ್ತಿದ್ದ ಮದ್ದಹನುಮಪ್ಪನಿಗೆ ತಣ್ಣೀರು ದೋಣಿಯ ಬಳಿ ಬುರುವಾಗಲೆ ‘ರಪ್... ರಪ್....ಎಂಬ ಶಬ್ದ ಕೇಳಿತು... ಸರಸರನೆ ಓಡಿಬಂದ. ದೂರಕ್ಕೆ ಕಂಡಿತು ಓಬವ್ವೆಯ ಒನಕೆಯೂಟ. ದುರ್ಗದ ದುರ್ಗಿಯಂತೆಯೇ ಕಂಡಳು ಅವಳ ಬಳಿ ಓಡಿದ. ಭುಜ ಹಿಡಿದು ಅಲುಗಿಸಲು ಯತ್ನಿಸಿದ ಒನಕೆ ಅವನ ಕಡೆ ತಿರುಗಿತು. ಚಂಗನೆ ಹಿಂದಕ್ಕೆ ಹಾರಿ ಹೆಗಲಿಗೆ ನೇತು ಬಿದ್ದದ್ದ ಕಹಳೆ ತಗೆದು ಉಸಿರುಗಟ್ಟಿ ಊದಿದ ಸಿಡಿಲೆರಗಿದಂತೆ ಕಹಳೆ ಮೊಳಗಿದಾಗಲೂ ಓಬವ್ವೆಗೆ ಪರಿವೆಯಿಲ್ಲ. ಅಷ್ಟರಲ್ಲಿ ದುರ್ಗದ ದಂಡು ಓಡಿ ಬಂತು ನೂರಾರು ತಲೆಗಳನ್ನು ತರೀದು ಗುಡ್ಡೆಹಾಕಿರುವ ಓಬವ್ವೆಯ ಸ್ವರೂಪವನ್ನು ಕಂಡು ದಿಗ್ಭ್ರಾಂತರಾದರು. ಮದಕರಿನಾಯಕ, ದೊಡ್ಡ ಮದಕರಿನಾಯಕ, ಪ್ರಧಾನಿ, ದಳವಾಯಿಗಳು ಓಬವ್ವೆಯನ್ನು ಕಾಣಲೆಂದೇ ಕುದುರೆ ಏರಿಬಂದರು. ಅಪರೂಪದ ಅತಿಶಯವೆನಿಸುವ ಅಮಾನುಷ ಕೌರ್ಯವನ್ನು ಪ್ರದರ್ಶಿಸಿದ ಓಬವ್ವೆ ಹೆಣದ ರಾಶಿಯ ಮೇಲೆ ಬೊರಲು ಬಿದ್ದು ಬಿಟ್ಟಿದ್ದಳು. ಕಹಳೆ ಮದ್ದಹನುಮಪ್ಪ, ಸೈನಿಕರು ಓಬವ್ವೆಯ ಸಾಹಸವನ್ನು ವರ್ಣಿಸಿದರು... ‘ಇವಳು ಸಾಮಾನ್ಯ ಹೆಣ್ಣಲ್ಲ. ದುರ್ಗದಕಣ್ಣು’ ‘ತಂಗಿ ಓಬವ್ವೆ... ಓಬವ್ವಾ, ನನ್ ತಾಯಿ ಕಣವ್ವ ನೀನು’ (ಪು.75,76,77) ಎಂದು ಯರ‍್ಗೂ ದಕ್ಕ ಕೂಡ್ದ್ ದೊರೆಯಣ್ಣಾ ಅದೇ ನನ್ನಾಸೆ” (ಪು.78) ಎಂದು ಹೇಳಿ ದೊರೆಯ ತೋಳಿನಲ್ಲಿಯೇ ಮತಿವಿಕಲ್ಪವಾಗಿ ಅಸುನೀಗಿದಳು. ಸೇನಾ ಗೌರವದೊಂದಿಗೆ ಓಬವ್ವೆಯ ಶವದ ಮೆರವಣಿಗೆ ದುರ್ಗದ ರಾಜ ಬೀದಿಗಳಲ್ಲಿ ನಡೆದು ಅಂತಿಮ ಸಂಸ್ಕಾರ ನಡೆಯಿತು. ಸ್ವಾಭಿಮಾನ, ಸ್ವಾಮಿನಿಷ್ಠೆಯ ಓಬವ್ವೆಯನ್ನು ಗೌರವಿಸಿದ ರಾಜವೀರಮದಕರಿನಾಯಕರ ಘನವ್ಯಕ್ತಿತ್ವ ಅನುಕರಣೀಯವಾದುದು. ರಾಜನೀತಿ, ಲೋಕನೀತಿ ಮತ್ತು ಧರ್ಮನೀತಿಗಳ ತ್ರಿವೇಣಿಸಂಗಮವಾಗಿದ್ದ ಮದಕರಿನಾಯಕರ ಔನತ್ಯ ಗುಣ ಅನುಪಮವಾದುದು.

ವೇಣು ಅವರೆ ಹೇಳುವಂತೆ “ಎಲ್ಲರಂತೆ ನನಗೂ ಓಬವ್ವೆಯ ಬಗ್ಗೆ ಅಭಿಮಾನ ಅದಕ್ಕೆ ಕಾರಣವೂ ಇದೆ. ಚರಿತ್ರೆಯಲ್ಲಿ ದಿಟ್ಟತನದಿಂದ ಶತ್ರುಗಳ ಮೇಲೆ ಹೋರಾಡಿದ ಮಹಿಳೆಯರು ನಮ್ಮಲ್ಲಿ ಇಲ್ಲದೇ ಇಲ್ಲ. ಕಿತ್ತೂರ ರಾಣಿಚೆನ್ನಮ್ಮ, ರಾಣಿಅಬ್ಬಕ್ಕ, ಝೂನ್ಸಿರಾಣಿ ಲಕ್ಷ್ಮೀ ಬಾಯಿ, ದುರ್ಗದ ಓಬವ್ವನಾಗತಿ (ಗಂಡೋಬಳವ್ವ ಎಂದೇ ಖ್ಯಾತಳು) ಇತ್ಯಾದಿ ಮಹಿಳೆಯರು ಕಣ್ಣು ಮುಂದೆ ಹಾದು ಹೋಗುತ್ತಾರೆ. ಇವರೆಲ್ಲ ಮಹಾರಾಣಿಯರು, ತಮ್ಮ ರಾಜ್ಯಕ್ಕಾಗಿ, ಪಟ್ಟ ಪದವಿಗಳಿಗಾಗಿ, ಜೊತೆಗೆ ದೇಶದ ಉಳಿವಿಗಾಗಿಯೂ ಕೆಚ್ಚಿನಿಂದ ಹೋರಾಡಿದ್ದು ನಿಜ. ಆದರೆ ಓಬವ್ವ ಸಾಮಾನ್ಯ ಚಲವಾದಿಗರ ಹೆಣ್ಣುಮಗಳು. ಯಾವುದೇ ಯುದ್ಧ ತಂತ್ರ ಅರಿತವಳಲ್ಲ, ಕತ್ತಿ ಹಿಡಿದವಳೂ ಅಲ್ಲ. ತನ್ನ ದೇಶ, ದೊರೆಯ ಉಳಿವಿಗಾಗಿ ಕೈಗೆ ಸಿಕ್ಕಿದ ಒನಕೆ ಹಿಡಿದು ಬಡಿದಾಡಿದ ಧೀಮಂತೆ.”(ಪು.4) ಯಾವ ಆಸೆ, ಆಪೇಕ್ಷೆಗಳಿಲ್ಲದೆ ಸ್ವಾಮಿನಿಷ್ಠೆಗಾಗಿ ಹೋರಾಡಿದ ಧೀರ ಮಹಿಳೆ. ``ಇಳಿದು ಬಾ ತಾಯೇ| ಇಳಿದು ಬಾ ಓಬವ್ವ ಮಹಾ ತಾಯೆ| ಮತಿಗೆಟ್ಟವರ ಹುಟ್ಟಡಗಿಸು| ಅಹಂಕಾರಿಗಳ ಪಥನಗೊಳಿಸು| ಸಮ ಸಮಾಜದ ಬೀಜ ಬಿತ್ತಲು ಬಾ| ಸಮಾಜ ಘಾತಕರನು| ನಿರ್ಮಲಗೊಳಿಸು ಬಾ| ಇಳಿದು ಬಾ ತಾಯೇ| ಇಳಿದು ಬಾ ಓಬವ್ವ ಮಹಾ ತಾಯೆ| ಜಾತಿಮರದ ಬೇರು ಕಿತ್ತು| ವರ್ಣದ ಕಣ್ಣು ಕಿತ್ತು| ಮನುಷ್ಯತ್ವದ ಮರ್ಮ ತಿಳಿಸಲು| ಇಳಿದು ಬಾ ತಾಯೇ| ಇಳಿದು ಬಾ ಓಬವ್ವ ಮಹಾ ತಾಯೆ| ಭವದ ಬಾಳ ಹಸನಾಗಿಸಿ| ಮೋಹ-ದಾಹವ ದಹಿಸಿ| ಜೀವ-ಜೀವನ ಪಾವನವಾಗಿಸಲು| ಇಳಿದು ಬಾ ತಾಯೇ| ಇಳಿದು ಬಾ ಓಬವ್ವ ಮಹಾ ತಾಯೆ|- ಈ ತೆರನಾದ ಕವಿತೆಗಳಿಗೆ, ಕಾದಂಬರಿಗಳಿಗೆ, ನಾಟಕಗಳಿಗೆ, ಲಾವಣಿ ಮೊದಲಾದ ಸಾವಿಲ್ಲದ ಸಾಹಿತ್ಯಕ್ಕೆ ವಸ್ತುವಾಗಿರುವ ಓಬವ್ವ ಅಮರ ಅಮರವಾದಾಕೆ.

ಸದ್ಗೃಹಣಿ ಓಬವ್ವಳ ಪತಿ ಪ್ರೇಮ, ಅತ್ತೆ ಮಾವರನ್ನು, ಮಗನ್ನು ಪೋಷಿಸಿದ್ದು, ತಾನು ಜನಿಸಿ, ಬೆಳೆದ ಛಲವಾದಿ ಸಮುದಾಯಕ್ಕೆ ಗೌರವದ ವೀಳ್ಯವನ್ನು ದೊರೆಗಳಲ್ಲಿ ಕೇಳಿದ್ದು ಆದರ್ಶ ಮತ್ತು ಅನುಕರಣೀಯವಾದುದು. ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಸಮೀಪವಿರುವ ಅಗಸನಕಲ್ಲು ಗ್ರಾಮದ ಜಾಗದಲ್ಲಿ ಛಲವಾದಿಗಳು ವಾಸಿಸುತ್ತಿರುವುದು, ಅಲ್ಲಿಯೇ ಓಬವ್ವ ಮಾತೆಯ ದೇವಾಲಯ ಕಟ್ಟಸಿರುವುದು, ನಿತ್ಯ ಪೂಜೆ, ಧ್ಯಾನ, ದಾನದ ಕಾರ್ಯಗಳು ಜರುಗುತ್ತಿರುವುದು ಆ ಮಾತೆಯ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಹಿಡಿದ ರನ್ನಗನ್ನಡಿಯಾಗಿದೆ. ಈ ಮಾತೆಯ ಜಯಂತಿಯನ್ನು ನವೆಂಬರ್ ಹನ್ನೊಂದುರಂದು ಆಚರಿಸುವಂತೆ ಸರ್ಕಾರ ಆದೇಶಸಿರುವುದು ಅಭಿನಂದನಾರ್ಹವಾದುದು. ಒನಕೆ ಓಬವ್ವ ಶೌರ್ಯ ಪ್ರಶಸ್ತಿ, ಅಭಿವೃದ್ಧಿಪ್ರಾಧಿಕಾರ, ಸಂಶೋಧನಾ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವ ಅಗತ್ಯವಿದೆ. ಮಹಿಳೆಯರಿಗೆ ಬದುಕಿಗೆ ಅಶೋತ್ತರ ಮೂಡಿಸುವಂತಹ ಓಬವ್ವ ಮಾತೆಯ ಸಾಹಸ ಪ್ರಸಂಗದ ಅಧ್ಯಯನವು ಮನದ ಮಾಲಿನ್ಯವನ್ನು ತೊಳೆಯುವುದು. ಸೇವಾ ಬದ್ಧತೆಯನ್ನು ಸಂವರ್ಧನೆಗೊಳಿಸುವುದು.

- ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್

ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರ ಲೇಖಕ ಪರಿಚಯ...

MORE FEATURES

ಜೀವಂತಿಕೆ ತುಂಬಿದ ಬರಹಗಳು

08-05-2024 ಬೆಂಗಳೂರು

"ಶಶಿಧರ ಹಾಲಾಡಿ ಅವರು ಬಾಲ್ಯ ಕಳೆದದ್ದು ಅವರ ಹಳ್ಳಿಯ ಪರಿಸರದ ನಿಸರ್ಗದ ಮಡಿಲಲ್ಲಿ. ಹಾಗಾಗಿ ಆ ಪರಿಸರ ಅವರ ಮೇಲೆ ಗ...

ಜನಸಾಮಾನ್ಯರಿಗಷ್ಟೇ ಅಲ್ಲ; ಪತ್ರಕರ್ತರಿಗೂ ಪಠ್ಯದಂತೆ ಇಲ್ಲಿನ ಬರಹಗಳು ರೂಪುಗೊಂಡಿವೆ..

08-05-2024 ಬೆಂಗಳೂರು

"ಕಾಡಿಗೆ ನಾವು ಮನುಷ್ಯರಾಗಿ ಹೋಗಬಾರದು. ನಾವು ಕೂಡ ಒಂದು ಪ್ರಾಣಿಯಾಗಿರಬೇಕು. ಯಾವ ಪ್ರಾಣಿ, ಪಕ್ಷಿಯನ್ನು ವೀಕ್ಷಿಸ...

ಅಪಾರ ಅನುಭವ ಮತ್ತು ಅಧ್ಯಯನದ ಸಂಗಮ ಈ ಕೃತಿ

07-05-2024 ಬೆಂಗಳೂರು

"ಅಪಾರ ಅನುಭವ ಮತ್ತು ಅಧ್ಯಯನದ ಸಂಗಮವಾದ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅದರಲ್ಲೂ ಪ್ರಮುಖವಾಗಿ...