‘ಟಾಲ್‍ಸ್ಟಾಯ್ ಸಾಹಿತ್ಯದ ನೆಲೆಗಳು’ ಕೃತಿಯ ವಿಶಾಲ ದೃಷ್ಟಿಕೋನ ಶ್ಲಾಘನೀಯ


“ಟಾಲ್‍ಸ್ಟಾಯ್ ಸಾಹಿತ್ಯದ ನೆಲೆಗಳು” ಕೃತಿಯಲ್ಲಿ ಒದಗುವ ಮಾಹಿತಿಯ ವಿಸ್ತಾರ, ಕೃತಿವಿಶ್ಲೇಷಣೆ, ವೈವಿಧ್ಯಮಯ ಅಧ್ಯಯನಗಳ ಉಲ್ಲೇಖ ಒದಗಿಸುವ ವಿಶಾಲ ದೃಷ್ಟಿಕೋನ, ಕೇವಲ ಕನ್ನಡದಲ್ಲಿ ಲಭ್ಯವಿರುವ ಟಾಲ್‍ಸ್ಟಾಯ್ ಕೃತಿಗಳು ಮತ್ತು ಆಕರ ಗ್ರಂಥಗಳನ್ನು ಬಳಸಿ ಕನ್ನಡದಲ್ಲಿ ಸೃಷ್ಟಿಸಿರುವ ಈ ಸಂಶೋಧನಾ ಕೃತಿಯ ಮಹತ್ವಾಕಾಂಕ್ಷೆಗಳು, ಶ್ಲಾಘನೀಯವಾಗಿವೆ ಎಂದಿದ್ದಾರೆ ಲೇಖಕ ಕಮಲಾಕರ ಕಡವೆ. ಅವರು ಪ್ರದೀಪ್ ಆರ್.ಎನ್ ಅವರ “ಟಾಲ್‍ಸ್ಟಾಯ್ ಸಾಹಿತ್ಯದ ನೆಲೆಗಳು” ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ. 

“ಸಕಲ ಸುಖೀ ಕುಟುಂಬಗಳ ಸುಖವೂ ಒಂದೇ ರೀತಿಯದಾದರೆ, ಪ್ರತಿಯೊಂದು ವ್ಯಾಕುಲ ಕುಟುಂಬವೂ ತನ್ನದೇ ಅನನ್ಯ ರೀತಿಯ ವ್ಯಾಕುಲತೆಯಲ್ಲಿ ಇರುತ್ತದೆ.” 

ಕಾದಂಬರಿಯ ಪ್ರಸಿದ್ಧ ಮೊದಲ ಸಾಲುಗಳಲ್ಲಿ ಅಗ್ರೇಸರ ಸಾಲು ಎಂಬ ಪ್ರಸಿದ್ಧಿ ಇರುವ ಈ ಸಾಲನ್ನು ಬರೆದ ಲಿಯೋ ಟಾಲ್‍ಸ್ಟಾಯ್, “ಎಷ್ಟು ಜಮೀನು ಬೇಕಾದೀತು ಒಬ್ಬಾತನಿಗೆ” ಎಂಬ ದೃಷ್ಟಾಂತದಲ್ಲಿ ಬಂಡವಾಳಶಾಹಿ ಸಮಾಜ ವ್ಯವಸ್ಥೆ ಬೇರೂರಿದ ಕಾಲಮಾನದಲ್ಲಿ ಮಾನವರ ದುರಾಸೆಯ ಕುರಿತಾಗಿ ಎಚ್ಚರಿಕೆಯ ಗಂಟೆ ಬಾರಿಸಿದ ದಾರ್ಶನಿಕ ಸಾಹಿತಿ. ಕ್ರಾಂತಿಕಾರಕ ಬದಲಾವಣೆಗಳ ಯುಗದಲ್ಲಿ, ಪರಂಪರಾಗತ ಜೀವನಶೈಲಿ ಆಧುನಿಕತೆಗೆ ಮುಖಾಮುಖಿಯಾಗುತ್ತಿದ್ದ ಸಂಧರ್ಭದಲ್ಲಿ ಮಾನವರ ಅಸ್ತಿತ್ವದ ಕುರಿತಾಗಿ ಅತ್ಯಂತ ಹರಿತ ಹೊಳಹುಗಳನ್ನು ಧ್ವನಿಸುವ ಬರಹಗಳ ಮೂಲಕ ಓದುಗರ ಸಂವೇದನೆಯನ್ನು ಚುರುಕಾಗಿಸಿದ ಗಂಭೀರ ಲೇಖಕ. ವೈಚಾರಿಕ ಗಾಂಭೀರ್ಯಕ್ಕೆ ಕಥನದ ಸಹಜ ಸಂವಹನದ ತೊಡುಗೆಯುಡಿಸಿ ಸಹ್ಯವಾಗಿಸಿದ ಜನಪ್ರಿಯ ಕತೆಗಾರ. ಬಲ್ಲಿದರು ಮೆಚ್ಚುವಂತೆ ಬರೆದೂ ಕೂಡ ಎಲ್ಲರನ್ನೂ ತಲುಪುವ, ಸರ್ವರನ್ನೂ ತನ್ನ ಕಲಾತ್ಮಕ ಮತ್ತು ದಾರ್ಶನಿಕ ಮೊನಚಿನಿಂದ ಸೂಜುಗಲ್ಲಿನಂತೆ ಆಕರ್ಷಿಸಿದ ಮಹಾನ್ ಗದ್ಯ ಲೇಖಕ.  

ಕಲಾತ್ಮಕ, ದಾರ್ಶನಿಕ, ಹಾಗೂ ಸಾಮಾಜಿಕ ಸ್ತರಗಳಲ್ಲಿ ತಮ್ಮ ಬರಹಗಳ ಮುಖೇನ ವಿಶ್ವಾತ್ಮಕ ಪ್ರಭಾವ ಬೀರಿರುವ ಲೇಖಕರು ವಿಶ್ವಸಾಹಿತ್ಯದಲ್ಲಿ ಅಪರೂಪ. ಅಂತಹ ಕೆಲವೇ ಕೆಲವು ಸಾಹಿತಿಗಳಲ್ಲಿ ಹತ್ತೊಂಬತ್ತನೇ ಶತಮಾನದ ಐರೋಪ್ಯ  ಸಾಹಿತ್ಯದ ಅನನ್ಯ ಬರಹಗಾರ ಲಿಯೋ ಟಾಲ್‌ಸ್ಟಾಯ್ ಒಬ್ಬರು. ಹಲವು ಬಗೆಯ ಹಿರಿಮೆಗಳನ್ನು ಅವರ ಹೆಸರೇ ಪ್ರತಿಧ್ವನಿಸಿಬಿಡುತ್ತದೆ. ಒಂದು ಶತಮಾನವೇ ಕಳೆದು ಹೋಗಿದ್ದರೂ ಆ ಹಿರಿಮೆ, ಮತ್ತದರ ಪ್ರಭೆ ಇನಿತೂ ಕಮ್ಮಿಯಾಗಿಲ್ಲ. ವಿಶ್ವಸಾಹಿತ್ಯದ ಈ ಅಜರಾಮರ ಪ್ರತಿಭೆ ತಾಯಿನಾಡಾದ ರಶಿಯಾದಲ್ಲಿ ಎಷ್ಟೋ, ಇನ್ನಿತರ ದೇಶಗಳಲ್ಲಿಯೂ ಅಷ್ಟೇ ಗೌರವಾನ್ವಿತರು. ಹಾಗಾಗಿ, ರಶಿಯಾದಿಂದ ಐದು ಸಾವಿರ ಕಿಲೋಮೀಟರು ದೂರದಲ್ಲಿ, ಟಾಲ್‍ಸ್ಟಾಯ್ ಕಾಲಾಧೀನರಾಗಿ ನೂರಕ್ಕೂ ಹೆಚ್ಚು ವರುಷಗಳ ತರುವಾಯ, “ಲಿಯೋ ಟಾಲ್‍ಸ್ಟಾಯ್ ಸಾಹಿತ್ಯದ ನೆಲೆಗಳು” ಎಂಬ ಅಧ್ಯಯನ ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಆಶ್ಚರ್ಯವಲ್ಲ. ಈ ಅಧ್ಯಯನವನ್ನು ಓದಿದಾಗ ಕೆಲವು ವಿವರುಗಳು ನಮ್ಮನ್ನು ಬೆರಗಿಗೀಡಾಗಿಸಬಹುದು. ಮುಖ್ಯವಾಗಿ, ಕನ್ನಡದಲ್ಲಿ ಈವರೆಗೆ ಅನುವಾದವಾಗಿರುವ ಟಾಲ್‍ಸ್ಟಾಯ್ ಸಾಹಿತ್ಯದ ಹರಹು ಮತ್ತು ಕನ್ನಡ ಸಾಹಿತಿ-ಚಿಂತಕರ ಮೇಲೆ ಅವುಗಳ ಪ್ರಭಾವ ವಿಶೇಷವಾದುದು. ಗಾಂಧೀಜಿ ಮತ್ತು ಕುವೆಂಪು ಅವರುಗಳಿಗೆ ಟಾಲ್‍ಸ್ಟಾಯ್ ಮೇಲೆ ಅಪಾರ ಆದರ, ಅಭಿಮಾನ ಹಾಗೂ ಶ್ರದ್ಧೆ ಇತ್ತು. ಇದು ಗಾಂಧೀಜಿ ಮತ್ತು ಕುವೆಂಪು ಅವರುಗಳ ಓದುಗರ ಮೇಲೂ ಬೀರಿದ ಪ್ರಭಾವದಿಂದಾಗಿ ಕನ್ನಡದಲ್ಲಿ ಟಾಲ್‍ಸ್ಟಾಯ್ ಸಂಕಥನ ಬೆಳೆದುಬಂದಿದೆ ಎನ್ನುವ ಹೊಳಹನ್ನು ಈ ಅಧ್ಯಯನದ ಲೇಖಕರಾದ ಪ್ರದೀಪ್ ಆರ್ ಎನ್ ಅವರು ಕೊಡುತ್ತಾರೆ. 

ಟಾಲ್‌ಸ್ಟಾಯ್ ಅವರ ಬದುಕೂ ಸಹ ಅವರ ಕಾದಂಬರಿಗಳಂತೆಯೇ ಸಂಕೀರ್ಣ. 1828ರಲ್ಲಿ ಶ್ರೀಮಂತ ಜಮೀನುದಾರ ಕುಟುಂಬದಲ್ಲಿ ಜನಿಸಿದ ಅವರಿಗೆ ಸಹಜವಾಗಿ ಆ ಸಾಮಾಜಿಕ ವರ್ಗದ ಸವಲತ್ತುಗಳು ಸುಲಭವಾಗಿ ಲಭಿಸಿದ್ದವು. ಆದರೂ ಅವರ ಅನ್ವೇಷಣೆ ಮಾತ್ರ ನಿರಂತರವಾಗಿ ಸತ್ಯ ಮತ್ತು ಅಸಲಿತನದ್ದಾಗಿತ್ತು. ಇದು ಅವರ ಬರವಣಿಗೆಗಳಲ್ಲಿ ಸ್ಪಷ್ಟವಾಗಿ ಕಾಣಬರುತ್ತದೆ - ಅದು "ವಾರ್ ಅಂಡ್ ಪೀಸ್" ಮತ್ತು "ಅನ್ನಾ ಕರೆನಿನಾ"ಗಳಂತಹ ಮಹಾಕಾದಂಬರಿಗಳಿರಬಹುದು; ಅಥವಾ ಚಿಂತನಶೀಲ ಕಥನದ "ಕನ್‍ಫೆಶನ್" ಅಥವಾ "ದ ಕಿಂಗ್‍ಡಮ್ ಆಫ್ ಗಾಡ್ ಈಸ್ ವಿಥಿನ್ ಯು" ಇರಬಹುದು; ಅಥವಾ ಸಣ್ಣ ಕಥೆ, ಪ್ರಬಂಧ ಮತ್ತು ನಾಟಕಗಳಿರಬಹುದು. ಹೀಗೆ ಟಾಲ್‍ಸ್ಟಾಯ್ ಸಂಕಥನದ ಮೂಲಸ್ರೋತವಾಗಿ ನಮಗೆ ದೊರಕುವ ಬರಹಗಳ ಹರಹು ಬಹು ವಿಶಾಲವಾದದ್ದು. ಹಾಗಾಗಿಯೇ ಜಗವು ಟಾಲ್‍ಸ್ಟಾಯ್ ಅವರನ್ನು ಕೇವಲ ಕಾದಂಬರಿಕಾರ ಎಂದಾಗಲೀ, ಸಾಹಿತಿ ಎಂದಾಗಲೀ ಕಾಣುವುದಿಲ್ಲ. ಸಾಹಿತ್ಯ ಮತ್ತಿತರ ಬರವಣಿಗೆಯ ಪ್ರಕಾರಗಳನ್ನು ತಮ್ಮ ವಸ್ತು-ಶೈಲಿಗಳ ಮೂಲಕ ಅವರು ಸಮೃದ್ಧಗೊಳಿಸಿದ್ದರೂ ಸಹ, ಅವುಗಳ ಮೂಲಕ ಪ್ರಸ್ತುತಪಡಿಸುವ ವಿಚಾರಗಳು ಹತ್ತೊಂಭತ್ತನೇ ಶತಮಾನದಂತ್ಯದ ಮತ್ತು ಇಪ್ಪತ್ತನೇ ಶತಮಾನದ ಪೂರ್ವಾರ್ಧದ ಸಂಧರ್ಭಗಳಲ್ಲಿ ವಿಶೇಷ ಆಸಕ್ತಿಯ ವಿಷಯಗಳಾಗಿ ಜನರಿಗೆ ದೊರಕಿದ್ದವು.  

ಟಾಲ್‌ಸ್ಟಾಯ್ ಅವರ ಸಾಹಿತ್ಯ ಕೃತಿಗಳ ಶಕ್ತಿ ಇರುವುದು ‘ಮಾನವ ಸ್ಥಿತಿ’ಯನ್ನು ಅನಾವರಣಗೊಳಿಸುವ ಅವರ ಅಪ್ರತಿಮ ಸಾಮರ್ಥ್ಯದಲ್ಲಿ. ಮಾನಸಿಕ ಸಂಕೀರ್ಣತೆ ಮತ್ತು ನೈತಿಕ ಅಸ್ಪಷ್ಟತೆಗಳ ಸಂಮಿಶ್ರವಾದ ಅವರ ಪಾತ್ರಗಳು ಸಮಯಾತೀತವಾದವುಗಳು; ಹಾಗಾಗಿ ಅವು ನಮ್ಮೆಲ್ಲರನ್ನೂ ತಟ್ಟುತ್ತವೆ. ಟಾಲ್‌ಸ್ಟಾಯ್ ಅವರ ಕೃತಿಗಳಲ್ಲಿ ಶೋಧನೆಗೆ ಒಳಪಡುವ ಪ್ರೀತಿ, ಶ್ರದ್ಧೆ, ಶಕ್ತಿ ಮತ್ತು ಸಾವಿನ ಅನಿವಾರ್ಯತೆಗಳಂತಹ ವಿಷಯಗಳಿಗೆ ಸಾಂಸ್ಕೃತಿಕ ಮತ್ತು ಐತಿಹಾಸಿಕ ಗಡಿಗಳ ಮಿತಿ ಇಲ್ಲ. ತಮ್ಮದೇ ಸ್ವಂತ ಅನುಭವಗಳ ಮತ್ತು ಮೌಲ್ಯಗಳ ಮೂಸೆಯಲ್ಲಿ ಬದುಕಿನ ಪುನಃಪರೀಕ್ಷೆಗೆ ತೊಡಗಿಕೊಳ್ಳಲು  ಜೀವನದ ಎಲ್ಲಾ ಹಂತಗಳ ಓದುಗರನ್ನು ಈ ಕೃತಿಗಳು ಆಹ್ವಾನಿಸುತ್ತವೆ. ಹಾಗೆಯೇ, ಅವರ ನಿರೂಪಣಾ ಶೈಲಿಯ ವಿಶೇಷತೆ ಎಂದರೆ ಅದರ ವಿಸ್ತೃತ ವಾಸ್ತವಿಕತೆ ಮತ್ತು ಆಳವಾದ ಮಾನಸಿಕ ಒಳನೋಟಗಳಿಂದ ಕೂಡಿದ ನಿರೂಪಣೆ. ಇವುಗಳಿಂದಾಗಿಯೇ, ಕಥನ ಸಾಹಿತ್ಯಕ್ಕೆ ಹೊಸ ಮಾನದಂಡಗಳನ್ನು ಅವರ ಕೃತಿಗಳು ಪರಿಚಯಿಸಿದವು ಎನ್ನಲಾಗುತ್ತದೆ. ಹತ್ತೊಂಭತ್ತನೇ ಶತಮಾನದ ರಶಿಯಾದ ಸಮಾಜದ ನಿಖರ ಚಿತ್ರಣವಿರುವ ಅವರ ಬರಹಗಳು ಐತಿಹಾಸಿಕ ದಾಖಲೆಯಾಗಿ ಮಾತ್ರವಲ್ಲದೆ ಅವರ ಕಾಲದ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಪರೀಕ್ಷಿಸಲು ವಿಮರ್ಶಾತ್ಮಕ ಮಸೂರವಾಗಿ ಅನ್ಯ ದೇಶಕಾಲಗಳ ಓದುಗರಿಗೆ ಕಂಡುಬಂದಿವೆ. ಇದಲ್ಲದೆ, ಅವರ ತಾತ್ವಿಕ ಬರಹಗಳು ನೈತಿಕ ಮತ್ತು ಆಧ್ಯಾತ್ಮಿಕ ಸ್ಪಷ್ಟತೆಯ ನಿರಂತರ ಅನ್ವೇಷಣೆಯಿಂದಾಗಿ, ಆಧುನಿಕ ಅಸ್ತಿತ್ವದ ಆಳ ಮತ್ತು ಗಹನ ಪ್ರಶ್ನೆಗಳ ಜೊತೆ ಮುಖಾಮುಖಿಯಾಗಲು ಓದುಗರನ್ನು ಆಹ್ವಾನಿಸುತ್ತವೆ.

ಟಾಲ್‍ಸ್ಟಾಯ್ ವಿಚಾರಧಾರೆಗಳಿಂದ ಪ್ರಭಾವಿತರಾದ ಗಾಂಧೀಜಿ ಅವರಾಗಲೀ, ಕನ್ನಡದ ಹಿರಿಯ ಲೇಖಕರುಗಳಾಗಲೀ ಓದಿದ್ದು ಪ್ರಾಯಶಃ ಟಾಲ್‍ಸ್ಟಾಯ್ ಅವರ ಅನುವಾದಿತ ಕೃತಿಗಳನ್ನು. ಕರ್ನಾಟಕದ ಬಹುಪಾಲು ಓದುಗರು ಕೂಡ ಕನ್ನಡದಲ್ಲಿ ಅನುವಾದವಾಗಿರುವ ಟಾಲ್‍ಸ್ಟಾಯ್ ಅವರನ್ನೇ ಓದಿರುತ್ತಾರೆ. ಅನುವಾದದಲ್ಲಿಯೂ ಲೇಖಕನೊಬ್ಬನ ಕೃತಿಗಳು ಅನ್ಯ ಕಾಲದೇಶಗಳ ಸಮಾಜಗಳ ಮೇಲೆ, ಓದುಗರ ಮೇಲೆ ತೀವ್ರ ಪರಿಣಾಮ ಬೀರಬಲ್ಲವು ಎನ್ನುವುದು ಸೋಜಿಗದ ಸಂಗತಿಯೇ ಸರಿ. ಟಾಲ್‍ಸ್ಟಾಯ್ ಅವರ ಕುರಿತಾಗಿ ಕನ್ನಡ ಓದುಗರಲ್ಲಿ ಕುತೂಹಲ ಹುಟ್ಟಿಸಿ, ಅವರ ಕೃತಿಗಳ ಓದಿಗೆ ಪ್ರೇರಣೆಯನ್ನು ದೊರಕಿಸಿದ್ದು ಕನ್ನಡದಲ್ಲಿ ಟಾಲ್‍ಸ್ಟಾಯ್ ಚಿಂತನೆಗಳಿಂದ ಪ್ರಭಾವಿತರಾಗಿ, ತಮ್ಮ ಬರಹಗಳಲ್ಲಿ ಅವುಗಳನ್ನು ಅಳವಡಿಸಿಕೊಂಡ ಕುವೆಂಪು-ಅನಂತಮೂರ್ತಿ-ಲಂಕೇಶ-ದೇವನೂರು-ನಟರಾಜ್ ಹುಳಿಯಾರು ಮೊದಲಾದವರು ಎಂದು  ತಮ್ಮದೇ ಉದಾಹರಣೆಯ ಮೂಲಕ ವಾದಿಸುತ್ತಾರೆ “ಟಾಲ್‍ಸ್ಟಾಯ್ ಸಾಹಿತ್ಯದ ನೆಲೆಗಳು” ಎಂಬ ಈ ಕೃತಿಯ ಲೇಖಕರಾದ ಪ್ರದೀಪ್ ಆರ್ ಎನ್. ಅಲ್ಲದೇ, ಟಾಲ್‍ಸ್ಟಾಯ್ ಓದಿನಿಂದಾಗಿ ತಾವೂ ಸೇರಿದಂತೆ ಕನ್ನಡಿಗರಿಗೆ ಗಾಂಧಿ ಮತ್ತು ಕುವೆಂಪು ಅವರುಗಳನ್ನು ಹೆಚ್ಚು ಹೆಚ್ಚು ಓದುವ ಪ್ರೇರಣೆ ದೊರಕಿತು ಎನ್ನುತ್ತಾರೆ. ಇದು ಬಹಳ ಮುಖ್ಯವಾದ ಒಂದು ಹೊಳಹು. ಯಾವುದೇ ಸಮಾಜದಲ್ಲಿ ಓರ್ವ ಲೇಖಕನ ಕುರಿತಾಗಿ ಸಂಕಥನ ಸೃಷ್ಟಿಯಾಗಿದ್ದರೆ ಅದರ ಪರೀಕ್ಷೆ, ಅಧ್ಯಯನಗಳು ಕೂಡ ಅಪೇಕ್ಷಣೀಯ. ಅಂತಹ ಒಂದು ಕೆಲಸವನ್ನು “ಟಾಲ್‍ಸ್ಟಾಯ್ ಸಾಹಿತ್ಯದ ನೆಲೆಗಳು” ಎಂಬ ಈ ಕೃತಿಯಲ್ಲಿ ಪ್ರದೀಪ್ ಅವರು ಕೈಗೆತ್ತಿಕೊಂಡಿರುವುದು ಶ್ಲಾಘನೀಯ. 

ಕನ್ನಡ ಅನುವಾದದಲ್ಲಿ ಲಭ್ಯವಿರುವ ಟಾಲ್‍ಸ್ಟಾಯ್ ಅವರ ಕೃತಿಗಳ ಆಧಾರದ ಮೇಲೆ ಪ್ರದೀಪ್ ಆರ್ ಎನ್ ಅವರು “ಟಾಲ್‍ಸ್ಟಾಯ್ ಸಾಹಿತ್ಯದ ನೆಲೆಗಳು” ಎಂಬ ಈ ಅಧ್ಯಯನವನ್ನು ನಡೆಸಿದ್ದಾರೆ. ಇದೊಂದು ಅನುವಾದ ಸಾಹಿತ್ಯದ ಅಧ್ಯಯನವಲ್ಲ; ಬದಲಿಗೆ, ಅನುವಾದಗಳ ಆಧಾರದ ಮೇಲೆ ನಡೆಸಿದ ಸಾಹಿತಿ ಮತ್ತು ಆತನ ಸಾಹಿತ್ಯದ ಒಟ್ಟಾರೆ ಅಧ್ಯಯನ ಆಗಿರುವುದು ನನಗೆ ವಿಶೇಷವಾಗಿ ಕಂಡಿದೆ. ಯಾಕೆಂದರೆ, ತನ್ಮೂಲಕ ಧ್ವನಿತವಾಗುತ್ತಿರುವ ಅಂಶವೆಂದರೆ, ಕನ್ನಡದಲ್ಲಿ ಲಭ್ಯವಿರುವ ಟಾಲ್‍ಸ್ಟಾಯ್ ಕೃತಿಗಳೇ ಅಧ್ಯಯನದ ಮೂಲವಾಗಬಹುದು ಎನ್ನುವುದು. ಅಥವಾ, ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಅನುವಾದಿತ ಕೃತಿಗಳನ್ನು ಮೂಲಕೃತಿಗಳಾಗಿ ನೋಡುವುದು ಸಾಧ್ಯ ಎಂಬ ಅಂಶ. ಈಗಾಗಲೇ ಅನುವಾದ ಅಧ್ಯಯನಶಾಸ್ತ್ರದ ಹಲವು ಪ್ರಮುಖ ಭಾರತೀಯ ಮತ್ತು ಪಾಶ್ಚಾತ್ಯ ವಿದ್ವಾಂಸರು ಅನುವಾದಿತ ಕೃತಿಯನ್ನು ಮೂಲಕೃತಿಯಾಗಿ ನೋಡಬೇಕಿರುವ ಅಗತ್ಯದ ಬಗೆಗೆ ಚರ್ಚಿಸಿರುವ ಹಿನ್ನೆಲೆಯಲ್ಲಿ ನನಗಿದು ಮಹತ್ವದ ಅಂಶವಾಗಿ ಗೋಚರಿಸಿತು. ಪ್ರದೀಪ್ ಅವರು ತಮ್ಮ ಈ ಅಧ್ಯಯನಕ್ಕೆ ಬಳಸಿರುವ ಆಕರ ಗ್ರಂಥಗಳು ಕೂಡ ಬಹುಪಾಲು ಕನ್ನಡದ ಕೃತಿಗಳಾಗಿರುವುದು ಕೂಡ ವಿಶೇಷವೇ. ಕೆ ವಿ ನಾರಾಯಣ ಸೂಚಿಸಿರುವ ಹಾಗೆ ಕನ್ನಡವೇ ಹೊಳಹುಗಳ ಮೂಲ ಆಕರವಾಗುವ ಪ್ರಕ್ರಿಯೆಗೆ ಒಂದು ಉದಾಹರಣೆಯಾಗಿ ಇದನ್ನು ನೋಡಬಹುದು.   

ವಸಾಹತುಶಾಹಿಯ ಬರ್ಬರತೆಗಳು, ಬಂಡವಾಳಶಾಹಿಯ ಕ್ರೂರತನಗಳು ಆಧುನಿಕತೆಯ ಕರಾಳಮುಖಗಳನ್ನು ದರ್ಶಿಸುತ್ತಿದ್ದ ಕಾಲದಲ್ಲಿ ಟಾಲ್‍ಸ್ಟಾಯ್ ಸಮಾಧಾನಿ ಚಿತ್ತ ಮಾತ್ರ ಸೂಚಿಸಬಹುದಾದ ಹೊಳಹುಗಳನ್ನು ಹಲವು ಪ್ರಕಾರಗಳ ಗದ್ಯಬರಹಗಳ ಮೂಲಕ ಪ್ರಚುರ ಪಡಿಸಿದರು. ಈ ಹರಿತ ನೈತಿಕ ಶಕ್ತಿಯೇ ಗಾಂಧೀಜಿ, ಕುವೆಂಪು ಮುಂತಾದ ನಮ್ಮ ನಾಡಿನ ಚಿಂತಕರನ್ನು ಆಕರ್ಷಿಸಿದ್ದು ಎನ್ನುವ ಪ್ರದೀಪ್, ಈ ಐರೋಪ್ಯ ಲೇಖಕನ ಕುರಿತಾಗಿ ಭಾರತೀಯರಿಗಿರುವ ಒಲವಿಗೆ ಮೂಲ ಕಾರಣವನ್ನು ತಮ್ಮ ಅಧ್ಯಯನದ ಹಲವಾರು ಹಂತಗಳಲ್ಲಿ ಪರೋಕ್ಷವಾಗಿ ಪರೀಕ್ಷಿಸುತ್ತಾರೆ. ಹತ್ತೊಂಭತ್ತನೇ ಶತಮಾನದ ಆದರ್ಶವಾದಿ, ಯುಟೋಪಿಯನ್ ಚಿಂತನಾಕ್ರಮದ ಅಗ್ರಗಣ್ಯ ದಾರ್ಶನಿಕರಲ್ಲಿ ಒಬ್ಬರಾದ ಟಾಲ್‍ಸ್ಟಾಯ್ ಅವರ ವಿಚಾರಗಳನ್ನು ಇಪ್ಪತ್ತೊಂಬತ್ತನೇ ಶತಮಾನದ ಆದಿಯಲ್ಲಿ ಹೆಚ್ಚು ಹರಿತವಾದ ವಿಮರ್ಶಾ ಪರಿಕರಗಳ ಮೂಲಕ ನೋಡುವ ಅಗತ್ಯವೂ ಇದೆ ಎಂದು ಈ ಕೃತಿಯನ್ನು ಓದುವಾಗ ನನಗನಿಸಿತು. ಆಧುನಿಕತೆಯ ಮಿತಿಗಳನ್ನು ದರ್ಶಿಸುವ ವಿಚಾರವಾದಿಗಳ ವಿಶ್ಲೇಷಣೆ ನಡೆಸುವಾಗ, ಅದರಲ್ಲೂ ಫ್ಯಾಸಿಸಂ ಎಂಬ ಭಸ್ಮಾಸುರ ತಲೆ ಎತ್ತುತ್ತಿರುವ ಕಾಲಮಾನದಲ್ಲಿ, ನಮ್ಮ ವಿಮರ್ಶಕ ಸಂವೇದನೆಯು ಗುಣಗಳ ಜೊತೆಜೊತೆಗೆ ಮಿತಿಗಳ ವಿಶ್ಲೇಷಣೆಗೆ ಕೂಡ ಒತ್ತು ಕೊಡಬೇಕಾಗುತ್ತದೆ ಎನ್ನುವ ವಿಚಾರವನ್ನು ಈ ಓದು ನನ್ನಲ್ಲಿ ಹುಟ್ಟಿಸಿತು. 

“ಟಾಲ್‍ಸ್ಟಾಯ್ ಸಾಹಿತ್ಯದ ನೆಲೆಗಳು” ಕೃತಿಯಲ್ಲಿ ಒದಗುವ ಮಾಹಿತಿಯ ವಿಸ್ತಾರ, ಕೃತಿವಿಶ್ಲೇಷಣೆ, ವೈವಿಧ್ಯಮಯ ಅಧ್ಯಯನಗಳ ಉಲ್ಲೇಖ ಒದಗಿಸುವ ವಿಶಾಲ ದೃಷ್ಟಿಕೋನ, ಕೇವಲ ಕನ್ನಡದಲ್ಲಿ ಲಭ್ಯವಿರುವ ಟಾಲ್‍ಸ್ಟಾಯ್ ಕೃತಿಗಳು ಮತ್ತು ಆಕರ ಗ್ರಂಥಗಳನ್ನು ಬಳಸಿ ಕನ್ನಡದಲ್ಲಿ ಸೃಷ್ಟಿಸಿರುವ ಈ ಸಂಶೋಧನಾ ಕೃತಿಯ ಮಹತ್ವಾಕಾಂಕ್ಷೆಗಳು, ಶ್ಲಾಘನೀಯವಾಗಿವೆ. ವಿಮರ್ಶೆ ಅಥವಾ ಸಂಶೋಧನೆಯ ಯಾವುದೇ ಕೃತಿಯು ತನ್ನ ಮೂಲಕ ಸಾಹಿತ್ಯ ಕೃತಿಗಳ ಕುರಿತಾಗಿ ಓದುಗರಲ್ಲಿ ಆಪ್ತತೆ, ಕುತೂಹಲ, ಓದುವ ಹಂಬಲ ಸೃಜಿಸಿದರೆ ಅದನ್ನು ಯಶಸ್ವೀ ಕೃತಿ ಎನ್ನಬಹುದು. ಪ್ರದೀಪ್ ಅವರ ಕೃತಿಯು ಇದನ್ನು ಮಾಡುವಲ್ಲಿ ಯಶಸ್ವಿಯಾಗಿದೆ ಅಷ್ಟೇ ಅಲ್ಲ, ಇದೇ ಕ್ಷೇತ್ರದಲ್ಲಿ ಇನ್ನೂ ಮಾಡಬಹುದಾದ ಕೆಲಸಗಳ ಕುರಿತು ಸಹ ಓದುಗರಲ್ಲಿ ಆಸಕ್ತಿ ಮೂಡಿಸುತ್ತದೆ ಎಂದು ನನಗನಿಸಿದೆ. ಅದೇ ಕಾರಣಕ್ಕೆ ಈ ಕೃತಿ ಸಮಸ್ತ ಕನ್ನಡ ಓದುಗರನ್ನು ತಲುಪಲಿ ಎಂದು ನಾನು ಹಾರೈಸುತ್ತೇನೆ.   

#ಕಮಲಾಕರ ಕಡವೆ 
ಅಹಮದ್‍ನಗರ 
ಮೇ 2024 

 

 

MORE FEATURES

ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...

26-07-2024 ಬೆಂಗಳೂರು

"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್...

ಮಲೆನಾಡ ಪರಿಸರದ ಸುಂದರ ಜೀವನವನ್ನು ಹೇಳುವ ಕೃತಿಗಳಲ್ಲಿ ಇದು ಒಂದು 

26-07-2024 ಬೆಂಗಳೂರು

‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎ...

ಈ ಕಾದಂಬರಿ ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತದೆ; ಉಪೇಂದ್ರ ಕೆ. ಆರ್

25-07-2024 ಬೆಂಗಳೂರು

‘ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ...