"ನನ್ನ ಎಲ್ಲ ಕತೆಗಳನ್ನು ಅಚ್ಚು ಮಾಡುತ್ತಿರುವುದರ ಉದ್ದೇಶ ನನ್ನ ಕಥಾಸಂಕಲನಗಳು-ಮುಖ್ಯವಾಗಿ ಮೊದಲ ಮೂರು ಸಂಕಲನಗಳು- ಬಹಳ ವರ್ಷದಿಂದ ಓದುಗರಿಗೆ ದೊರೆಯದಿರುವುದು. ಅವೆಲ್ಲ ಖರ್ಚಾಗಿದ್ದರೂ, ಆಸಕ್ತರು ವಿಚಾರಿಸುತ್ತಿದ್ದರೂ ಮತ್ತೆ ಅಚ್ಚು ಮಾಡಲು ಆಗಿರಲಿಲ್ಲ," ಎನ್ನುತ್ತಾರೆ ಪತ್ರಕರ್ತ, ಲೇಖಕ ಪಿ. ಲಂಕೇಶ್ . ಅವರ "ಸಮಗ್ರ ಕತೆಗಳು" ಕೃತಿಯ ಮುನ್ನುಡಿ ನಿಮ್ಮ ಓದಿಗಾಗಿ..
1958ರಿಂದ 1991ರ ವರೆಗೆ ಬರೆದ ನನ್ನ ಎಲ್ಲ 37 ಕತೆಗಳನ್ನು ಇಲ್ಲಿ ಒಟ್ಟಿಗೇ ಅಚ್ಚುಮಾಡುತ್ತಿದ್ದೇವೆ. ಮೊದಲನೆಯ ಕಥಾಸಂಕಲನದ ಒಂದು ಕತೆ, 1958ಕ್ಕಿಂತ ಹಿಂದೆ ಬರೆದ ಹಲವಾರು ಕತೆಗಳು, 'ಕೆರೆಯ ನೀರನು ಕೆರೆಗೆ ಚೆಲ್ಲಿ' ಮತ್ತು 'ನಾನಲ್ಲ' ಸಂಕಲನಗಳು ಪ್ರಕಟವಾದ ಸುಮಾರಿನಲ್ಲಿ ಬರೆದು ವಿಶೇಷ ಸಂಚಿಕೆಗಳಲ್ಲಿ ಅಚ್ಚಿಸಿದ್ದರೂ ನನ್ನ ಕೈತಪ್ಪಿ ಹೋಗಿರುವ ಒಂದೆರಡು ಕತೆಗಳನ್ನು ಬಿಟ್ಟರೆ ಮಿಕ್ಕೆಲ್ಲ ಕತೆಗಳು ಇಲ್ಲಿವೆ. ಈ ಸಮಗ್ರ ಪುಸ್ತಕವನ್ನು ಅಚ್ಚುಮಾಡುವಾಗ ಅಳುಕಾಗುತ್ತದೆ. 1991ರ ವರೆಗಿನ ಕತೆಗಳನ್ನು ಸಮಗ್ರ ಎಂದು ಹೇಗೆ ಹೇಳುವುದು? 1991ರ ಬಳಿಕ ನಾನು ಬರೆದರೆ?
ನನ್ನ ಎಲ್ಲ ಕತೆಗಳನ್ನು ಅಚ್ಚು ಮಾಡುತ್ತಿರುವುದರ ಉದ್ದೇಶ ನನ್ನ ಕಥಾಸಂಕಲನಗಳು-ಮುಖ್ಯವಾಗಿ ಮೊದಲ ಮೂರು ಸಂಕಲನಗಳು- ಬಹಳ ವರ್ಷದಿಂದ ಓದುಗರಿಗೆ ದೊರೆಯದಿರುವುದು. ಅವೆಲ್ಲ ಖರ್ಚಾಗಿದ್ದರೂ, ಆಸಕ್ತರು ವಿಚಾರಿಸುತ್ತಿದ್ದರೂ ಮತ್ತೆ ಅಚ್ಚು ಮಾಡಲು ಆಗಿರಲಿಲ್ಲ. ಎರಡು ವರ್ಷದ ಹಿಂದೆ 'ಕಲ್ಲು ಕರಗುವ ಸಮಯ' ಪುಸ್ತಕ ಒಂದೇ ವರ್ಷದಲ್ಲಿ ಖರ್ಚಾಯಿತು. ಮತ್ತೆ ಬಿಡಿಬಿಡಿಯಾಗಿ ಅಚ್ಚು ಮಾಡಿದರೆ ಓದುಗರಿಗೆ ಎಲ್ಲ ಕತೆಗಳು ಒಂದೇ ಕಡೆ ಸಿಕ್ಕುವುದಿಲ್ಲ ಮತ್ತು ಪ್ರತೀ ಪುಸ್ತಕಕ್ಕೆ ಕನಿಷ್ಠ ಮೂವತ್ತೈದು ರೂ. ಕೊಡಬೇಕಾಗುತ್ತದೆ ಎಂಬೆಲ್ಲ ಕಾರಣಕ್ಕೆ ಈ ಪುಸ್ತಕ ಎಲ್ಲ ಕತೆಗಳನ್ನು ಒಟ್ಟಾಗಿ ಕೊಡುತ್ತಿದೆ.
ಓದುಗರಿಗೆ ಅಥವಾ ವಿಮರ್ಶಕರಿಗೆ ತಿಳಿಯದಿರಬಹುದಾದ ಕೆಲವು ಸಂಗತಿಗಳನ್ನು ಮಾತ್ರ ಈ ಮುನ್ನುಡಿಯಲ್ಲಿ ಹೇಳುತ್ತೇನೆ. ಅವು ಲೇಖಕನ ಗುಟ್ಟುಗಳಲ್ಲಿ ಕೆಲವು. ಒಂದು ಗೊತ್ತಾದ ಸಂದರ್ಭದಲ್ಲಿ ಆದ ಅಥವಾ ಹೊಳೆದ ವಿಷಯಗಳಿಗೆ ತಮ್ಮದೇ ಆದ ಜೀವ, ಮಿತಿ ಇರುತ್ತದೆ. ಅದು ಲೇಖಕನ ಉಸಿರಿನ, ಸ್ಪೂರ್ತಿಯ ಮಿತಿ ಅಥವಾ ವೈಶಿಷ್ಟ್ಯಕ್ಕೆ ಸಂಬಂಧಿಸಿದ್ದು. ಉದಾಹರಣೆಗೆ, 'ಕುರುಡು ಕಾಂಚಾಣ' ಎಂಬ ಕತೆಯ ದಮ್ಮು ನೋಡಿ. ಮಧ್ಯಮ ವರ್ಗದ ಅಧ್ಯಾಪಕನೊಬ್ಬನ ಔದಾರ್ಯ ಮತ್ತು ಸಣ್ಣತನವನ್ನು ಕುರಿತ ಈ ಕತೆ ನಿಮ್ಮನ್ನು ಮುಟ್ಟುವುದು ಅದರ ಸರಳತೆ ಮತ್ತು ಸಾಮಾನ್ಯತೆಯನ್ನು ಒಪ್ಪಿಕೊಂಡರೆ ಮಾತ್ರ ಇದನ್ನು ಸಂಕ್ಷಿಪ್ತಗೊಳಿಸಿದರೆ ಅಥವಾ ಲಂಬಿತಗೊಳಿಸಿದರೆ, ಕ್ಲಿಷ್ಟಗೊಳಿಸಿದರೆ ಅಥವಾ ದಟ್ಟಗೊಳಿಸಲೆತ್ನಿಸಿದರೆ ಅದರ ಜೀವ ಹೊರಟುಹೋಗುತ್ತದೆ. ಲೇಖಕ ಈ ಸಾಮಾನ್ಯತೆಯ ಮಿತಿಯಲ್ಲೇ ಅಂದರೆ ತನ್ನ ಮತ್ತು ವಸ್ತುವಿನ ಮಿತಿಯ
ಲ್ಲೇ ಕೆಲಸ ಮಾಡುತ್ತಾನೆ. ಹಾಗೆಯೇ ಈ ಮಿತಿಯನ್ನು ಮೀರಲು ಪ್ರಯತ್ನಿಸುತ್ತಾನೆ. ಅವನಲ್ಲಿ ಈ ಕಾತರ ಅರ್ಥ ಪೂರ್ಣವಾಗಿದ್ದು ಬರೆಯುವ ಆಶೆಗೆ ಬದ್ಧವಾಗಿದ್ದಾಗ ಬೆಳೆಯುತ್ತಾನೆ. ಹಾಗೆಯೇ ಅದೆಲ್ಲವೂ ಕೇವಲ ಮಹತ್ವಾಕಾಂಕ್ಷೆಯ ಬೆನ್ನು ಹತ್ತಿದೊಡನೆ ಸೋಲುತ್ತಾನೆ.
ಉತ್ತಮವಾದದ್ದನ್ನು ಬರೆಯುವ ಕಾತರ ಮತ್ತು ಕೇವಲ ಮಹತ್ವಕಾಂಕ್ಷೆ ಎರಡೂ ಲೇಖಕನಿಗೆ ಬೇಕು. ಆತ ಜೀವನದ ಸಂಪರ್ಕದೊಂದಿಗೇ ಬೆಳೆದಾಗ ಅವನ ಕೃತಿಗಳ ಗ್ರಹಿಕೆ ಹೆಚ್ಚುತ್ತ ಹೋಗುತ್ತದೆ. ಇದು ಕೇವಲ ಸಾಹಿತ್ಯಕ ಬೆಳವಣಿಗೆಯಲ್ಲ, ಒಂದು ಕಾಣುವ ಮತ್ತು ರೂಪಿಸುವ ವ್ಯಕ್ತಿತ್ವದ ಬೆಳವಣಿಗೆ ಇದೆಲ್ಲ ಕತೆಗಳಿಗೆ ಓದುಗರು ತಮ್ಮ ವ್ಯಕ್ತಿತ್ವ ಒಡ್ಡಿದಾಗ ಮಾತ್ರ ತಿಳಿಯುತ್ತದೆ. ಇದನ್ನೇ ನಾನು ನನ್ನ ನಿಲುವಿನಿಂದ ಇಲ್ಲಿಯ ಹಲವಾರು ಕತೆಗಳ ಉದಾಹರಣೆ ಕೊಟ್ಟು ವಿವರಿಸಬಲ್ಲೆ. 'ಮುಟ್ಟಿಸಿ ಕೊಂಡವನು' ಮತ್ತು 'ಸಹಪಾಠಿ' ಕತೆಗಳನ್ನು ಓದುತ್ತ ಅಚ್ಚರಿಗೊಂಡೆ- ಕರಡು ತಿದ್ದುತ್ತ ಅನ್ನಿಸಿದ್ದು ಇದು. ಗೆಳೆಯರೊಬ್ಬರು 'ಮುಟ್ಟಿಸಿಕೊಂಡವನು' ಕತೆ ಇನ್ನೂ ಹಲವಾರು ಘಟನೆಗಳೊಂದಿಗೆ ಮೈತುಂಬಿ ಬರಬಹುದಿತ್ತು ಅಂದರು; ಸಹಪಾಠಿ' ಕತೆ ಈ ಮೈತುಂಬಿದ ಸ್ಥಿತಿಗೆ ಉದಾಹರಣೆ ಅಂದರು. ತುಂಬಿದ ಮೈ ಕೆಲವೊಮ್ಮೆ ಚೆಂದ, ಕೆಲವೊಮ್ಮೆ ಅಲ್ಲ. ಅವೆರಡು ಕತೆಗಳಲ್ಲಿ ನನಗೆ 'ಮುಟ್ಟಿಸಿಕೊಂಡವನು' ಉತ್ತಮ. ತುಂಬ ಎಚ್ಚರವಹಿಸಿ ಬರೆದಿರುವ 'ಕಲ್ಲು ಕರಗುವ ಸಮಯ' ನನಗೆ ಇಷ್ಟ: ಈ ಎಚ್ಚರವಹಿಸುವಿಕೆಯ ಆಳದಲ್ಲೇ ಆ ಕತೆಯ ಎಚ್ಚರ ಮೀರಿದ ಕಾಳಜಿಗಳೆಲ್ಲ ಇವೆ.
ನನ್ನ ಕತೆಗಳು ನನ್ನಿಂದ ಇನ್ನೂ ಹೆಚ್ಚುಹೆಚ್ಚು ಮುಕ್ತವಾಗಿರಬೇಕು, ಜೀವನದ ಮರ್ಜಿಗಳಿಂದ ತಮ್ಮ ರೂಪ ನಿರ್ವಹಿಸಿಕೊಳ್ಳುವಂತಾಗಬೇಕು ಎಂದು ನಂಬಿರುವವನು ನಾನು. ಈ ದೃಷ್ಟಿಯಿಂದಲೂ ಇಲ್ಲಿಯ ಕತೆಗಳನ್ನು ನೋಡುವುದು ಸಾಧ್ಯವಿದೆ-ಈ ಸಲ ಇಲ್ಲಿಯ ಮೂವತ್ತೇಳು ಕತೆ ಓದುತ್ತ ಈ ಮುಕ್ತಗುಣವನ್ನು 'ನಾನಲ್ಲ' ತರಹದ ಪುಟ್ಟ ಕತೆಗಳಲ್ಲಿ, 'ಉಮಾಪತಿಯ ಸ್ಕಾಲರ್ಷಿಪ್ ಯಾತ್ರೆ' ತರಹದ ಕತೆಗಳಲ್ಲಿ ಕಂಡಿದ್ದೇನೆ. ವೈಯಕ್ತಿಕವಾಗಿ ನನಗೆ 'ದಾಳಿ' ಇಷ್ಟ ಕೆಲಸಗಳ ಒತ್ತಡದಲ್ಲಿ ಬರೆದ ಈ ಕತೆಯನ್ನು ಮತ್ತೆ ತಿದ್ದಿ ಬರೆಯಲು ನಿರಾಕರಿಸಿದೆ; ಲಂಬಿಸದಿರಲು ಹಠ ಹಿಡಿದೆ. ನನ್ನ ಮತ್ತು ಇತರರ ಕುತೂಹಲಕ್ಕಾಗಿ ಅದನ್ನು ಹಾಗೇ ಉಳಿಸಿಕೊಂಡೆ.
ಇಲ್ಲಿ ನನ್ನ ಕಥಾಸಂಕಲನಗಳು ಬಂದ ರೂಪದಲ್ಲೇ ಎಲ್ಲ ಮುನ್ನುಡಿ, ಅರಿಕೆಗಳೊಂದಿಗೆ ಕೊಡಲು ಪ್ರಯತ್ನಿಸಿದ್ದೇವೆ. ಹಾಗೆಯೇ 'ಕಲ್ಲು ಕರಗುವ ಸಮಯ' ಪುಸ್ತಕದೊಂದಿಗೆ ಹೊರಬಂದ ನನ್ನವಲ್ಲದ ಕತೆಗಳನ್ನು ಪ್ರಕಟಿಸಿದ್ದೇವೆ, ಒಟ್ಟಾಗಿ ಇಟ್ಟು ಓದಿದಾಗ ಓದುಗರಿಗೆ ಏನನ್ನಿಸುತ್ತದೋ-ಎಂಬ ಕುತೂಹಲ ಮಾತ್ರ ಇದೆ.
– ಪಿ. ಲಂಕೇಶ್
ಪಿ. ಲಂಕೇಶ್ ಅವರ ಲೇಖಕ ಪರಿಚಯಕ್ಕಾಗಿ
"ಕದಡಿದ ಕೊಳವು ತಿಳಿಯಾಗಿರಲು (ಬಿಡಿ ಬರಹ, ಪ್ರಬಂಧ) ಓದಿದೆ. ಇಲ್ಲಿನ ಹೆಚ್ಚಿನ ಲೇಖನಗಳನ್ನು ನಾನು ಈ ಮೊದಲೇ ಓದಿದ್...
"ಪುಸ್ತಕ, ಓದು ಮತ್ತು ಬರವಣಿಗೆ ಒಂದು ವರ್ಗದ ಪ್ಯಾಶನ್. ತನ್ಮಯತೆಯಿಂದ ಓದುತ್ತಾ ಕೂತ ವ್ಯಕ್ತಿ ನಮಗೆ ಯಾವತ್ತೂ ಒಂದ...
"ಈ ನಡುವೆ ದಶಕಗಳ ಹಿಂದೆಯೇ ಆಗೀಗ ಬರೆದಿಟ್ಟಿದ್ದ ಚೀಟಿಗಳು ಕಣ್ಣಿಗೆ ಬಿದ್ದಾಗೆಲ್ಲಾ 'ನಮ್ಮನ್ನು ಹೀಗೇ ಬಿಟ್ಟರ...
©2025 Book Brahma Private Limited.