ವಾರದ ಲೇಖಕ ವಿಶೇಷದಲ್ಲಿ ಹೊಸಗನ್ನಡದ ಮೊದಲ ಕಾದಂಬರಿಗಾರ್ತಿ ನಂಜನಗೂಡು ತಿರುಮಲಾಂಬ


ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಪ್ರಕಾಶಕಿ, ಹೊಸಗನ್ನಡದ ಮೊದಲ ಕಾದಂಬರಿಗಾರ್ತಿ, ಪತ್ರಿಕಾ ಸಂಪಾದಕಿ, ಮುದ್ರಕಿ ಎಂದೇ ಪ್ರಖ್ಯಾತರಾಗಿ, ಸ್ತ್ರೀ ಕುಲದ ಏಳಿಗೆಗೆ ಹಗಲಿರುಳು ಶ್ರಮಿಸಿದ ದಿಟ್ಟ ಮಹಿಳೆ ‘ನಂಜನಗೂಡು ತಿರುಮಲಾಂಬ’ ಅವರ ಕುರಿತ ಒಂದು ನೀಳ ನೋಟ..

ಅಂದಿನ ಮಡಿವಂತಿಕೆಯ ಸಮಾಜದಲ್ಲಿ ಹಲವಾರು ಟೀಕೆಗಳು ಬಂದರೂ, ಧೃತಿಗೆಡದೆ ತಮ್ಮ ಸಾಹಿತ್ಯ ಸೇವೆಯನ್ನು ಮುಂದುವರೆಸಿದ ದಿಟ್ಟ ಸಾಹಿತಿ.

‘ಸತೀಹಿತೈಷಿಣೀ’ಯ ರೂವಾರಿಯಾಗಿ ತನ್ನದೇ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ಪ್ರಕಾಶಕಿ, ಹೊಸಗನ್ನಡದ ಮೊದಲ ಕಾದಂಬರಿಗಾರ್ತಿ, ಪತ್ರಿಕಾ ಸಂಪಾದಕಿ, ಮುದ್ರಕಿ ಎಂದೇ ಪ್ರಖ್ಯಾತರಾಗಿ, ಸ್ತ್ರೀ ಕುಲದ ಏಳಿಗೆಗೆ ಹಗಲಿರುಳು ಶ್ರಮಿಸಿದ ದಿಟ್ಟ ಮಹಿಳೆ ‘ನಂಜನಗೂಡು ತಿರುಮಲಾಂಬ’.

ಇವರು ನಂಜನಗೂಡಿನಲ್ಲಿ 1887ರಲ್ಲಿ ಮಾ. 25ರಂದು ಹುಟ್ಟಿದರು. ಇವರ ತಂದೆ ವೆಂಕಟಕೃಷ್ಣ ಅಯ್ಯಂಗಾರ್ ವಕೀಲರಾಗಿದ್ದವರು, ತಾಯಿ ಅಲಮೇಲಮ್ಮನವರು. ಇವರ ಮನೆ ಭಾಷೆ ತಮಿಳು. ಆದರೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇತ್ತು. ಇದರ ಜತೆಗೆ ತೆಲುಗು ಭಾಷೆಯು ಇವರಿಗೆ ತಿಳಿದಿತ್ತು.

ಅಂದು ಬಾಲ್ಯ ವಿವಾಹವೆಂಬುದು ಸಾಮಾನ್ಯವಾಗಿದ್ದ ಕಾಲ. ಹಾಗಾಗಿ ಹತ್ತನೇ ವಯಸ್ಸಿಗೇ ಮದುವೆಯಾಯಿತು. ಗಂಡನನ್ನು ನೋಡಿದ್ದು ಒಂದೇ ಬಾರಿ, ಮದುವೆಯಲ್ಲಿ. ಆದರೆ ಪ್ಲೇಗಿಗೆ ಗಂಡ ಬಲಿಯಾಗಿ ಹದಿನಾಲ್ಕನೇ ವಯಸ್ಸಿಗೇ ವಿಧವೆಯಾದರು. ಸಾಹಿತ್ಯ ಪ್ರಿಯರಾಗಿದ್ದ ತಂದೆ ಅಂದಿನ ಕಾಲಕ್ಕೇ ಮಗಳನ್ನು ಪ್ರಾಥಮಿಕ ಶಾಲೆಯವರೆಗೆ ಓದಿಸಿದ್ದ ವಿಶಾಲ ಮನೋಭಾವದವರು. ತಾವು ಓದಿದ ಸಾಹಿತ್ಯ ಲೋಕದ ಪುಸ್ತಕಗಳನ್ನು ಮಗಳಿಗೂ ದೊರಕುವಂತೆ ಮಾಡಿದರು. ಹೀಗಾಗಿ ಪುಸ್ತಕಗಳೇ ಇವರ ಸಂಗಾತಿಯಾದವು. ರಾಮಾಯಣ, ಮಹಾಭಾರತ, ಭಾಗವತಗಳ ವಾಚನವಷ್ಟೇ ಅಲ್ಲದೆ ನಂಜನಗೂಡು ಶ್ರೀಕಂಠಶಾಸ್ತ್ರೀ, ಬೆಳ್ಳಾವೆ ಸೋಮನಾಥಯ್ಯ, ಎಂ. ವೆಂಕಟಾದ್ರಿ ಶಾಸ್ತ್ರಿ ಮುಂತಾದವರ ಕಥೆ ನಾಟಕಗಳನ್ನು ಓದತೊಡಗಿದರು. ಹೀಗೆ ಸಾಹಿತ್ಯದಿಂದ ಮನವನ್ನು ಗಟ್ಟಿಗೊಳಿಸುತ್ತಾ ತಮ್ಮ ಕಳೆದುಹೋದ ಬದುಕಿಗಾಗಿ ಕಂಬನಿ ಮಿಡಿಯದೆ ಲೋಕದ ಜನರ ಕಷ್ಟಕಾರ್ಪಣ್ಯಗಳ ಕಡೆಗೆ ತಮ್ಮ ಮನಸ್ಸನ್ನು ತಿರುಗಿಸಿಕೊಂಡರು.

ತಮ್ಮ ಬಿಡುವಿನ ವೇಳೆಯಲ್ಲಿ ಅಕ್ಕಪಕ್ಕದ ಮಕ್ಕಳಿಗೆ ಪಾಠ ಹೇಳಿಕೊಡಲು ಪ್ರಾರಂಭಿಸಿದರು. ಕ್ರಮೇಣ ಅವರ ಮನೆ ಒಂದು ಪಾಠಶಾಲೆಯಾಗಿ ರೂಪುಗೊಂಡಿತು. ಇದರಿಂದ ಮಹಿಳೆಯರೂ ಪ್ರೇರಿತರಾಗಿ ತಾವೂ ಕಲಿಯಲು ಬರತೊಡಗಿದರು. ಕ್ರಮೇಣ ಇವರ ಮನೆ "ಮಾತೃಮಂದಿರ" ಎಂದೇ ಹೆಸರುವಾಸಿಯಾಯಿತು. ಇದರಿಂದ ಉತ್ಸಾಹಗೊಂಡ ತಿರುಮಲಾಂಬಾರವರು "ಸನ್ಮಾರ್ಗ ದರ್ಶಿನಿ"ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.

ಹೀಗಾಗಿ ಇವರ ಚಿಂತನೆಗಳು ವಿಸ್ತಾರಗೊಂಡು ನಾಟಕ, ಕಥೆ, ಕಾದಂಬರಿ, ಭಕ್ತಿಗೀತೆಗಳನ್ನು ಬರೆಯತೊಡಗಿದರು.

ಇನ್ನು 1913ರಲ್ಲಿ ಇವರ ಪ್ರಥಮ ಕಾದಂಬರಿ "ಸುಶೀಲೆ" ಪ್ರಕಟಗೊಳ್ಳುತ್ತೆ. ಈ ಕಾದಂಬರಿ ಪ್ರಕಟವಾಗಿ ಬಹು ಯಶಸ್ಸನ್ನು ಪಡೆದು ಕೆಲಕಾಲದಲ್ಲೇ 4 ಮುದ್ರಣಗಳನ್ನು ಕಂಡಿತು. ಜೊತೆಗೆ ಏಳು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು.

ಇವರ ಕೃತಿಗಳು: ನಭಾ, ವಿದ್ಯುಲ್ಲತಾ, ವಿರಾಗಿಣಿ, ಮಣಿಮಾಲಾ, ಗಿರಿಜಾಬಾಯಿ, ಚಂದ್ರವದನ, ಮಾತೃ ನಂದಿನಿ, ದಕ್ಷಕನ್ಯೆ(ಕಾದಂಬರಿಗಳು)
ನಾಟಕಗಳು: ಸಾವಿತ್ರಿಬಾಯಿ ಚರಿತ್ರೆ, ಜಾನಕಿ ಕಲ್ಯಾಣ, ಚಂದ್ರವದನಾ
ಕವನ ಸಂಕಲನ: ರಮಾನಂದ ಭಕ್ತಿಗೀತಾವಳಿ

ಇದೆಲ್ಲದರ ಜತೆಗೆ ಇವರು ಮನೆಮದ್ದನ್ನು ಮಾಡುತ್ತಾ ಹಳ್ಳಿ ಜನರ ಪಾಲಿಗೆ ವೈದ್ಯೆಯೂ ಆಗಿದ್ದರು. ಪ್ಲೇಗ್ ಬಂದಾಗ ಸುತ್ತಲಿನ ಹಳ್ಳಿಗಳಲ್ಲಿ ಜನರ ಸೇವೆ ಮಾಡಿ ಸ್ಪಂದಿಸುತ್ತಿದ್ದರು.

ಹೀಗೆ ಹೊಸಗನ್ನಡದ ಪ್ರಪ್ರಥಮ ಲೇಖಕಿ, ಪತ್ರಿಕಾ ಸಂಪಾದಕಿ, ಪ್ರಕಾಶಕಿ ಶ್ರೀಮತಿ ನಂಜನಗೂಡು ತಿರುಮಲಾಂಬ ರವರು 31-8-1982ರಂದು ಇಹಲೋಕದಿಂದ ಮರೆಯಾದರು. ಆದರೆ ಇವರು ತೋರಿದ ಬೆಳಕು ಎಂದೆಂದಿಗೂ ಸಾಹಿತ್ಯ ಲೋಕದಲ್ಲಿ ಪ್ರಕಾಶಿಸುವಂತಹುದು.

MORE FEATURES

ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...

26-07-2024 ಬೆಂಗಳೂರು

"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್...

ಮಲೆನಾಡ ಪರಿಸರದ ಸುಂದರ ಜೀವನವನ್ನು ಹೇಳುವ ಕೃತಿಗಳಲ್ಲಿ ಇದು ಒಂದು 

26-07-2024 ಬೆಂಗಳೂರು

‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎ...

ಈ ಕಾದಂಬರಿ ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತದೆ; ಉಪೇಂದ್ರ ಕೆ. ಆರ್

25-07-2024 ಬೆಂಗಳೂರು

‘ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ...