ವಿಮರ್ಶೆ-ಸಂಶೋಧನೆಗಳಲ್ಲಿ ಸಿಗದ ಖುಶಿ, ಈ ಹಗುರ ಬರೆಹಗಳಲ್ಲಿ ಸಿಕ್ಕಿದೆ: ರಹಮತ್ ತರೀಕೆರೆ


"ನಾನು ಪ್ಯಾಲೆಸ್ತೇನಿಗೆ ಹೋದಾಗಲೂ ಸುಪ್ತವಾಗಿದ್ದ ಸಂಘರ್ಷವನ್ನು ಕಂಡಿದ್ದೆ. ಈಗದು ಇಸ್ರೇಲಿನ‌ ಝಿಯೊನಿಸ್ಟರ ಯುದ್ಧದಿಂದ ಯಾವ ಬಗೆಯಲ್ಲಿ‌ ಉಧ್ವಸ್ಥಗೊಂಡಿರಬಹುದು ಎಂದು ನೆನೆದರೆ, ಮನಸ್ಸು ಖಿನ್ನವಾಗುತ್ತದೆ. 1948ರಲ್ಲಿ ಬ್ರಿಟಿಶರು ಪ್ಯಾಲೆಸ್ತೇನಿನ ಎದೆಯ ಮೇಲೆ ಬಲಾತ್ಕಾರವಾಗಿ ಹುಟ್ಟುಹಾಕಿ ಹೋದ ಹೊಸದೇಶ ಇಸ್ರೇಲ್, ಇನ್ನೆಷ್ಟು ಕಾಲ ಸಾವುನೋವಿನ ಗಂಗೋತ್ರಿಯಾಗಿ ಕಾಡಲಿರುವುದೊ ತಿಳಿಯದು," ಎನ್ನುತ್ತಾರೆ ಹಿರಿಯ ಲೇಖಕ ರಹಮತ್ ತರೀಕೆರೆ. ಅವರು ತಮ್ಮ ‘ಜೆರುಸಲೆಂ’ ಕೃತಿಗೆ ಬರೆದ ಮುಮ್ಮಾತು ನಿಮ್ಮ ಓದಿಗಾಗಿ.

`ಅಂಡಮಾನ್ ಕನಸು' `ನಡೆದಷ್ಟೂ ನಾಡು' `ಕದಳಿ ಹೊಕ್ಕುಬಂದೆ' ನಂತರ, ನನ್ನ ನಾಲ್ಕನೆಯ ತಿರುಗಾಟ ಕಥನವಿದು. ಈ ತನಕದ ಕಥನಗಳು ಭಾರತದ ಒಳಗಿನವಾಗಿದ್ದವು. ಇಲ್ಲಿನವು ಭಾರತವನ್ನೂ ಒಳಗೊಂಡಂತೆ ವಿಲಾಯತಿನವು. ಈಚಿನ ವರ್ಷಗಳಲ್ಲಿ ನಾನು-ಬಾನು, ನೇಪಾಳ ಜೋರ್ಡಾನ್, ಈಜಿಪ್ಟ್, ಪ್ಯಾಲೆಸ್ತೈನ್, ಇಸ್ರೇಲ್, ಟರ್ಕಿ, ಮಲೇಶಿಯಾ, ಭೂತಾನ, ಜರ್ಮನಿ, ನೆದರ್‌ಲ್ಯಾಂಡ್ಸ್, ಇಟಲಿ, ಕ್ರೋಶಿಯಾ, ಸ್ಲೊವೇನಿಯಾ ಮುಂತಾದ ನಾಡುಗಳಲ್ಲಿ ತಿರುಗಾಡಿದೆವು. ಈ ತಿರುಗಾಟವಾದರೂ ಭೂಮಂಡಲದ ಹೊಲದಲ್ಲಿ ಒಂದು ಅಕ್ಕಡಿಸಾಲು. ಅಲೆದಾಟದ ಹೊರಗುಳಿದಿರುವ ಲೋಕ ಅಪಾರ. ಅದನ್ನೆಲ್ಲ ಒಂದು ಜೀವಮಾನದಲ್ಲಿ ನೋಡಿ ಮುಗಿಸುವುದು ಸಾಧ್ಯವಿಲ್ಲ; ಅದರ ಜರೂರತ್ತೂ ಇಲ್ಲ. ಆದರೂ ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾದ ದೇಶಗಳಿಗೆ ಹೋಗುವ ಇರಾದೆಯಿದೆ; ನಮ್ಮ ಚರಿತ್ರೆ, ಭಾಷೆ, ಧರ್ಮ ಸಂಸ್ಕೃತಿಗಳಿಗೆ ಅನೇಕ ಬಗೆಯಲ್ಲಿ ಲಗತ್ತಾಗಿರುವ ಚೀನಾ, ಮ್ಯಾನ್ಮಾರ್, ಟಿಬೆಟ್, ಕಾಂಬೋಡಿಯಾ, ಅರೇಬಿಯಾ, ಇರಾಕ್, ಇರಾನ್, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ಥಾನಗಳನ್ನು ಸುತ್ತಬೇಕೆಂಬ ಹಂಬಲವಿದೆ. `ಕಾಲಿದ್ದರೆ ಹಂಪಿ ಕಣ್ಣಿದ್ದರೆ ಕನಕಗಿರಿ’. ಕಾಣಲು ಕಣ್ಣು ತಿರುಗಲು ಕಾಲು ಗಟ್ಟಿಯಾಗಿರುವ ತನಕ ತಿರುಗಾಡಿ ಜಗತ್ತಿಗೆ ವಿದಾಯ ಹೇಳಬೇಕು.

ಲೋಕ ಸುತ್ತುವ ಚಪಲ ಮೊಳೆತಾಗಲೆಲ್ಲ, ಜಾಗತಿಕ ಪ್ರಜ್ಞೆಯ ದೊಡ್ಡ ಲೇಖಕರಾದ ಕುವೆಂಪು ತೇಜಸ್ವಿ ಲಂಕೇಶ್ ಹೆಚ್ಚಿನ ಪ್ರವಾಸ ಮಾಡಲಿಲ್ಲ ಎನ್ನುವುದು ನೆನಪಾಗುತ್ತದೆ. ಆದರೆ ನಾನು ಕಾರಂತರ ಪಥದವನು. `ಪ್ರವಾಸಿ ಕಂಡ ಇಂಡಿಯಾ’ ಸಂಪುಟಗಳಲ್ಲಿ ಬರುವ ತಿರುಗಾಡಿಗಳು ನನ್ನ ಪೂರ್ವಜರು. ತನ್ನೊಳಗೇ ಧ್ಯಾನಿಸುತ್ತ, ಸುತ್ತಲ ಪರಿಸರದೊಡನೆ ಜೀವಂತ ಸಂಬಂಧ ಇಟ್ಟುಕೊಂಡು ಅದನ್ನೇ ಲೋಕವೆಂದು ಪರಿಭಾವಿಸಿ ಬದುಕುವ `ಕುಟೀಚಕ’ ವಿಧಾನವು ಶ್ರೇಷ್ಠವೆಂದು ಮಾನ್ಯಗೊಂಡಿದೆ. ಆದರೆ ಪ್ರತಿ ನದಿಗೂ ಯಾತ್ರಿಕನಾಗಿ ಹೋಗುವ `ಬಹೂದಕ’ ಪದ್ಧತಿಗೂ ಲೋಕಜ್ಞಾನದಲ್ಲಿ ಅದರದ್ದೇ ತಾವಿದೆ. ವಾಸ್ತವವಾಗಿ ಇವೆರಡೂ ಅಲಾಯಿದವಾಗಿ ಉಳಿಯದೆ ಅರ್ಥಪೂರ್ಣವಾಗಿ ಕೂಡಬೇಕು. ಪ್ರಶಾಂತ ಜಾಗ ಸಿಕ್ಕೊಡನೆ ಧ್ಯಾನಸ್ಥನಾಗುತ್ತಿದ್ದ ಹ್ಯೂಯನ್‌ತ್ಸಾಂಗ್, ಹತ್ತುಸಾವಿರ ಮೈಲಿ ನಡೆದು ಭಾರತಕ್ಕೆ ಬಂದಿದ್ದು ಇಂತಹ ಕೂಡಿಕೆಯ ಪ್ರತೀಕ.

ಪ್ರತಿ ದೇಶವೂ ತನ್ನ ಭೂಗೋಳ ಚರಿತ್ರೆ, ಆರ್ಥಿಕತೆ, ಧರ್ಮ ರಾಜಕಾರಣ ಭಾಷೆ ಸಾಹಿತ್ಯ ಕಲೆ ಆಹಾರ ಉಡುಗೆ ತೊಡುಗೆಗಳ ದೆಸೆಯಿಂದ, ವಿಶಿಷ್ಟ ಸಂಸ್ಕೃತಿಯನ್ನು ರೂಪಿಸಿಕೊಂಡಿದೆ. ಅದನ್ನು ಹೊಸತೆಂಬ ಬೆರಗಿನಿಂದ ಕಾಣುತ್ತಿರುವಾಗ, ಸ್ವದೇಶದ ಸಂಸ್ಕೃತಿಯ ನೆನಪುಗಳೂ ನುಗ್ಗಿ, ನಮ್ಮನ್ನೂ ಜತೆಗಿಟ್ಟು ನೋಡೆಂದು ಪ್ರಚೋದಿಸುತ್ತವೆ. ಇವನ್ನು ಜತೆಗಿಟ್ಟು ನೋಡುವಾಗ ಭಿನ್ನತೆ ಮತ್ತು ಸಾಮ್ಯಗಳು ಗೋಚರಿಸುತ್ತವೆ; ಮನುಕುಲದ ಚರಿತ್ರೆಯಲ್ಲಿ ಉದ್ದಕ್ಕೂ ನಡೆದಿರುವ ನಿರಂತರ ವಲಸೆ ಯುದ್ಧ ವ್ಯಾಪಾರ ಧರ್ಮ ಪ್ರೇಮಗಳಂತಹ ಸಂಚಲನಶೀಲ ಸಂಗತಿಗಳಿಂದ ಸಂಭವಿಸಿರುವ ಬೆರಕೆ ಮತ್ತು ಕಸಿಗಟ್ಟುವಿಕೆಗಳು ಪ್ರತ್ಯಕ್ಷವಾಗುತ್ತವೆ. ಆಗ `ವಿದೇಶಿ’ ಸಂಗತಿಯೂ ಸ್ಥಳೀಕರಣಗೊಂಡು ಬೇರುಬಿಟ್ಟು ಹಳತಾಗಿರುವುದು ತಿಳಿಯುತ್ತದೆ. ಪ್ರತಿದೇಶದ ಸಾಂಸ್ಕೃತಿಕ ಅನನ್ಯತೆಯ ಮಾಯಾಕನ್ನಡಿಯೊಳಗೆ, ನಾವೆಲ್ಲ ಒಂದೇ ನಡೆಕಟ್ಟಿಗೆ ಸೇರಿದವರೆಂಬ ಭಾವ ಹೊಳೆಯುತ್ತದೆ.

ಇದೊಂದು ಸಾಂಸ್ಕೃತಿಕ ರೂಪಾಂತರ ತತ್ವ. ಈ ತತ್ವವನ್ನು ಬಿಜಿಎಲ್ ಸ್ವಾಮಿಯವರ `ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ’ ನಾಟಕೀಯವಾಗಿ ಮಂಡಿಸಿತು. ಈ ದಿಸೆಯಲ್ಲಿ ಇಲ್ಲಿನ ಚಿಂತನೆಗಳು `ಅವಳ ತೊಡಿಗೆ ಇವಳಿಗಿಟ್ಟು ನೋಡಬಯಸಿದ’ ಕಥನಗಳು. ಎಲ್ಲಿಂದಲೊ ತಂದ ಕೊಂಬೆಯನ್ನು ಹಿತ್ತಲೊಳಗಿನ ಗಿಡಕ್ಕೆ ಕಸಿಕಟ್ಟಿದಾಗ ಹೊಮ್ಮುವ ಕೊನರಿನ ವರ್ಣಗಳು ಗಾಢವಾಗಿರುತ್ತವೆ; ಅದು ತಳೆವ ಅಲರಿನ ಪರಿಮಳ, ಹಣ್ಣಿನ ಸ್ವಾದ ಅನನ್ಯವಾಗಿರುತ್ತದೆ.

ಈ ಬರೆಹಗಳನ್ನು `ಪ್ರವಾಸ ಕಥನ’ ಎನ್ನುವುದಕ್ಕೆ ಬದಲಾಗಿ `ಪ್ರವಾಸ ಚಿಂತನೆ’ ಎಂದಿರುವೆ. ಭೇಟಿಯಾದ ಸ್ಥಳಗಳ ಮಾಹಿತಿ ಕೊಡುವುದಕ್ಕಿಂತ ಹೆಚ್ಚಾಗಿ, ಅವನ್ನು ಕಂಡಾಗ ಆದ ಅನುಭವ ಮತ್ತು ಮೂಡಿದ ಚಿಂತನೆಗಳನ್ನು ಹಂಚಿಕೊಳ್ಳುವುದಕ್ಕೆ ಯತ್ನಿಸಿರುವೆ. ಈ ಬರೆಹಗಳಿಗೆ ಕನ್ನಡ ಸಹೃದಯರು, ನನ್ನ ವಿಮರ್ಶೆ-ಸಂಶೋಧನೆಗಳಿಗಿಂತ ಮಿಗಿಲಾದ ಮನ್ನಣೆ ಕೊಟ್ಟಿರುವರು. ನನಗಾದರೂ ವಿಮರ್ಶೆ-ಸಂಶೋಧನೆಗಳಲ್ಲಿ ಸಿಗದ ಖುಶಿ, ಈ ಹಗುರ ಬರೆಹಗಳಲ್ಲಿ ಸಿಕ್ಕಿದೆ. ನನ್ನೆಲ್ಲ ಪ್ರವಾಸ ಕಥನಗಳನ್ನು ಪ್ರಕಟಿಸಿರುವ ನವಕರ್ನಾಟಕವೇ ಇದನ್ನೂ ಹೊರತಂದಿದೆ.

MORE FEATURES

'ಗಿರ್ ಮಿಟ್'; ನಗೆಯ ಹೊಸ ದಾರಿ

05-12-2025 ಬೆಂಗಳೂರು

ಆಟ, ಪ್ರಸಂಗಗಳೆಲ್ಲ ಓದುಗನನ್ನು ನಗಿಸುತ್ತವೆ. ಸಪ್ಪೆ ದೈನಿಕದ ನಡುವೆಯೂ ನಗೆಮಿಂಚು ಸಾಧ್ಯ ಅನ್ನುವುದನ್ನು ತೋರಿಸುತ್ತವೆ....

'ಪುನರ್ನವ': ಸರಳ ಕನ್ನಡದಲ್ಲಿ ಬೆರಗುಗೊಳಿಸುವ ಕಥನ

05-12-2025 ಬೆಂಗಳೂರು

ಸರಳ ಭಾಷೆಯಲ್ಲಿ ಓದುಗರನ್ನು ಮುಟ್ಟುವ ಬಲಂಧರೆಯಂತಹ ಮಹಾಭಾರತ  ನಿತ್ಯ ಓದುಗರಿಗೂ ಅಪರಿಚಿತವೆ ಎನ್ನಬಹುದಾದ ಆಕೆಯ ಪಾ...

'ಕೃಷ್ಣಯ್ಯನ ಕೊಳಲು': ಆಧುನಿಕ ರಾಜಕೀಯದ ಕನ್ನಡಿ!

04-12-2025 ಬೆಂಗಳೂರು

ಪುರಾಣದ ಕೃಷ್ಣನ ಕಥೆಯನ್ನು ನಮ್ಮ ಕಾಲದ ದೈನಂದಿನ ರಾಜಕೀಯದಿಂದ ಬಳಲುವ ಜನರ ಕಥೆಯಾಗಿಸಿ ಹೇಳುವ ಪ್ರಯೋಗವನ್ನು ಹಿರಿಯ ಲೇಖಕ...