ವೃತ್ತಿ ಸಂಬಂಧ ತಾವು ಕಂಡುಂಡ ಅನುಭವಗಳ ಕುರಿತ ಲೇಖನಗಳಿವು


"ಜೇಬರ್ ಎಂದೇ ಹೆಸರಾದ ಶ್ರೀಯುತ ಜೆ.ಬಿ.ರಂಗಸ್ವಾಮಿ ಅವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಅನೇಕ ಊರುಗಳಲ್ಲಿದ್ದುದಕ್ಕಿಂತ ಹೆಚ್ಚು ಮೈಸೂರು ಮತ್ತು ಸುತ್ತ ಮುತ್ತಲ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಕಾರಣ ಇಡೀ ಕೃತಿಯಲ್ಲಿ ಮೈಸೂರು ಮತ್ತು ಸುತ್ತಮುತ್ತಲ ವೃತ್ತಿ ಸಂಬಂಧ ತಾವು ಕಂಡುಂಡ ಅನುಭವಗಳ ಕುರಿತ ಲೇಖನಗಳ ಮೊದಲ ಸಂಪುಟವಿದು," ಎನ್ನುತ್ತಾರೆ ಕೆ.ಎನ್.ಲಾವಣ್ಯ ಪ್ರಭಾ. ಅವರು ಜೆ.ಬಿ. ರಂಗಸ್ವಾಮಿ ಅವರ "ನೆನ್ನೆ ಮೊನ್ನೆ ನಮ್ಮ ಜನ" ಸಂಪುಟ 1 ಕೃತಿ ಕುರಿತು ಬರೆದಿರುವ ಪುಸ್ತಕ ವಿಮರ್ಶೆ.

"ಈ ಬರಹಗಳ ವಿಶೇಷವೆಂದರೆ ಇವು ಖಾಕಿ ಬಟ್ಟೆಯೊಳಗಿನ ಸಾಮಾನ್ಯ ವ್ಯಕ್ತಿಯ ದಿಗಿಲು, ಅಸಹಾಯಕತೆ, ಅವಮಾನ, ದ್ವಂದ್ವ, ಗೊಂದಲ, ಕ್ರೌರ್ಯ, ತರತಮ, ಚಡಪಡಿಕೆ, ಸಂಭ್ರಮ ಮತ್ತು ವಿಷಾದಗಳನ್ನು ಹೇಳುತ್ತವೆ,"- ನಾಗತಿಹಳ್ಳಿ ಚಂದ್ರಶೇಖರ.

"ಅವರ ಹೆಸರನ್ನೇ ಹಾಕದೆ ಅವರದೊಂದು ಲೇಖನ ತೋರಿಸಿದರೆ 'ಇದು ಜೇಬರ್ ಅವರದೇ ಭಾಷೆ' ಎಂದು ಹೇಳಬಹುದಾದ ಸ್ವೋಪಜ್ಞ ಭಾಷೆ ಅದು"- ಪ್ರೊ. ಎಂ. ಕೃಷ್ಣೇಗೌಡ. ಈ ಇಬ್ಬರೂ ಪ್ರಸಿದ್ಧ ವ್ಯಕ್ತಿಗಳು ಈ ಕೃತಿಯ ಬಗ್ಗೆ ನುಡಿದ ಹಾರೈಕೆಯ ಕೆಲವು ಸಾಲುಗಳಿವು.

ಜೇಬರ್ ಎಂದೇ ಹೆಸರಾದ ಶ್ರೀಯುತ ಜೆ.ಬಿ.ರಂಗಸ್ವಾಮಿ ಅವರು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ಅನೇಕ ಊರುಗಳಲ್ಲಿದ್ದುದಕ್ಕಿಂತ ಹೆಚ್ಚು ಮೈಸೂರು ಮತ್ತು ಸುತ್ತ ಮುತ್ತಲ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಕಾರಣ ಇಡೀ ಕೃತಿಯಲ್ಲಿ ಮೈಸೂರು ಮತ್ತು ಸುತ್ತಮುತ್ತಲ ವೃತ್ತಿ ಸಂಬಂಧ ತಾವು ಕಂಡುಂಡ ಅನುಭವಗಳ ಕುರಿತ ಲೇಖನಗಳ ಮೊದಲ ಸಂಪುಟವಿದು. ಇಲ್ಲಿಯ ಬಹುಪಾಲು ಲೇಖನಗಳು ಪ್ರತಿಷ್ಠಿತ "ಆಂದೋಲನ" ಪತ್ರಿಕೆಯಲ್ಲಿ ಪ್ರಕಟವಾದವು.

ಡಿಗ್ರಿ ಓದುವಾಗಲೇ ಕಮ್ಯುನಿಸ್ಟ್, ಸಮಾಜವಾದಿ ಚಳುವಳಿಗಳು ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಜೇಬರ್ ಅವರು ಸಬ್ ಇನ್ಸ್ಪೆಕ್ಟರ್ ಆದ ಮೇಲೆ ಬರೆದ ಈ ಅನೇಕ ಲೇಖನಗಳಲ್ಲಿ ಕೆಲವು ಹಂಸಕ್ಷೀರ ನ್ಯಾಯದಂತಹ ದೃಷ್ಟಿಕೋನ, ಜೀವಪರತೆ, ತಮ್ಮ ವಿದ್ಯಾರ್ಥಿ ದಿನಗಳ ಹೋರಾಟಗಳು ಚಳುವಳಿಗಳಲ್ಲಿನ ರೋಷ ಕೆಚ್ಚು ಸಮಾಜದ್ಧೋರಕ್ಕಾಗಿ ಮಾಡಿದ ಪ್ರಯತ್ನಗಳು... ಆ ನಂತರದಲ್ಲಿ ತಾವು ನಂಬಿಕೊಂಡಿದ್ದ ಸಿದ್ಧಾಂತಗಳಲ್ಲಷ್ಟೇ ಅಲ್ಲ ಎಡ ಬಲ ವಿಚಾರಧಾರೆಗಳಲ್ಲಿರುವ ಸತ್ಯಾಸತ್ಯತೆಗಳನ್ನು ಅರಿತು ಅದೆಲ್ಲದರಿಂದ ಹೊರಬಂದು ಒಬ್ಬ ಪ್ರಾಮಾಣಿಕ ಕರ್ತವ್ಯನಿಷ್ಠ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುವಾಗ... ಒಮ್ಮೆ ಹೀರೋನಂತೆ, ಮತ್ತೊಮ್ಮೆ ಪೆಕರ ಪೆದ್ದನಂತೆ, ಮಗದೊಮ್ಮೆ ಕರುಣಾಳುವಿನಂತೆ, ಇನ್ನೊಮ್ಮೆ ಅಸಹಾಯಕರಂತೆ ಹೀಗೆ ಖಾಕಿಯೊಳಗಿನ ಮನುಷ್ಯನೊಬ್ಬ ತನ್ನ ಮುಖವಾಡಗಳನ್ನು ಕಳಚಿಟ್ಟು ಕನ್ನಡಿಯೆದುರು ನಿಂತು ತಮ್ಮನ್ನು ತಾವು ತಮ್ಮ ಬರಹಗಳ ಮೂಲಕ ನೋಡಿಕೊಂಡಿರುವುದಷ್ಟೇ ಅಲ್ಲ ಓದುಗರಿಗೂ ಅಷ್ಟೇ ಸಹಜವಾಗಿ ಸರಳವಾಗಿ ಕಾಣಿಸುತ್ತಾರಲ್ಲ ಇದು ಜೇಬರ್ ಅವರ ಸರಳ ಸಹಜ ಸುಂದರ ವ್ಯಕ್ತಿತ್ವ.

50 ಲೇಖನಗಳಿರುವ 232 ಪುಟಗಳ ಈ ಕೃತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಒಡನಾಡಿದ ಅನೇಕ ರಾಜಕಾರಣಿಗಳು, ಸಿನಿಮಾನಟರು, ಕುಸ್ತಿಪಟುಗಳು, ಪೊಲೀಸ್ ಅಧಿಕಾರಿಗಳು ಮೊದಲಾದ ವ್ಯಕ್ತಿಗಳ ಅಸಾಮಾನ್ಯ ಮತ್ತು ಸಾಮಾನ್ಯ ಗುಣಸ್ವಭಾವಗಳು ನಡವಳಿಕೆ ದೃಷ್ಟಿಕೋನ ಮುಂದಾಲೋಚನೆ ನಿರ್ಧಾರಗಳು ಜೇಬರ್ ಅವರ ಮೇಲೆ ಬಹಳಷ್ಟು ಪರಿಣಾಮಕಾರಿ ಪ್ರಭಾವ ಬೀರಿದಂತೆಯೇ ಓದುಗರ ಮೇಲೆಯೂ ಪ್ರಭಾವ ಬೀರುತ್ತದೆ ಎನಿಸಿತು.

"ವ್ಯಕ್ತಿಯೊಬ್ಬ ಸತ್ತಾಗ ಹಗೆತನ ಸಲ್ಲದು ಹೋಗಿ ಶವಸಂಸ್ಕಾರದ ಕೆಲಸಗಳನ್ನು ಉಚ್ಚ ನೀಚ ಎಂದೆಣಿಸದೆ ಮಾಡಬೇಕು. ಅವರ ಮನೆಗೆ ತಿಂಡಿ ಊಟ ಒದಗಿಸಬೇಕು" ಎನ್ನುವ ಲೇಖಕರ ತಾಯಿ ಮತ್ತು ಯುಗಾದಿ ಹಬ್ಬದ ದಿನ ತಮ್ಮ ಮಕ್ಕಳು ತೊಟ್ಟುಕೊಳ್ಳಬೇಕಾದ ಹೊಸಬಟ್ಟೆಗಳನ್ನು ಬಡಮಕ್ಕಳಿಗೆ ತೊಡಿಸಿ ತಮ್ಮ‌ ಮಕ್ಕಳಿಗೆ ಬೇರೆಯದು ಕೊಡಿಸಿದ ಜೇಬರ್ ಅವರ ತಂದೆ... ಇಂತಹ ತಂದೆತಾಯಿಗಳೇ ಮಕ್ಕಳ ಭವಿಷ್ಯವನ್ನು ಬರೆಯುವ ಮೊದಲ ಗುರುಗಳು.

ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಓದಿ ನೋಡಿ ತಿಳಿದಿದ್ದ ಮಾನ್ಯ ಶ್ರೀ ದೇವೇಗೌಡರ ಅಪೂರ್ವ ವ್ಯಕ್ತಿತ್ವ ಇಲ್ಲಿ ಅನಾವರಣವಾಗಿದೆ. ಅವರ ತಾಳ್ಮೆ ಬದ್ಧತೆ ಮಮತೆ ಸೇವಾ ಮನೋಭಾವ ವಿನಯ..... ಕುಡಿತ ಧೂಮಪಾನ ವ್ಯಭಿಚಾರ ಯಾವೊಂದು ದುಶ್ಚಟವೂ ಇಲ್ಲದ ಸಭ್ಯ ವ್ಯಕ್ತಿ ದೇವೇಗೌಡರ ಬಗ್ಗೆ ಓದಿ ಗೌರವ ಮೂಡಿ ಮನಸ್ಸಿನಲ್ಲೇ ನಮಿಸಿದೆ ಎಂದರೆ ಸುಳ್ಳಲ್ಲ.

ತಮಗಿಂತಲೂ ವಯಸ್ಸಿನಲ್ಲಿ ಚಿಕ್ಕವರಾದ ಶ್ರೀನಿವಾಸ ಪ್ರಸಾದರು ವಾಜಪೇಯಿ ಸರ್ಕಾರದಲ್ಲಿ ಹೊಸದಾಗಿ ಕೇಂದ್ರ ಮಂತ್ರಿಗಳಾಗಿದ್ದಾಗ ಅವರನ್ನು ಸ್ವಾಗತಿಸಲು ಎಲ್ಲಾ ಮಂತ್ರಿಗಳೊಡನೆ ದೇವೇಗೌಡರು ಹೂವಿನ ಹಾರ ಕೈಲಿಡಿದು ಕಾಯ್ತಿದ್ದರು. ಅನೇಕರು "ಅವರು ಬಂದ ನಂತರ ಹಾರ ಹಾಕುವಿರಂತೆ ಇಲ್ಲಿ ಕೊಡಿ" ಎಂದರೂ ಕೇಳದೆ ಅಷ್ಟೂ ಹೊತ್ತು ಹಾರ ಹಿಡಿದೇ ನಿಂತು ದೇಶದ ಪ್ರಧಾನಿಯಾಗಿದ್ದ ಹಿರಿಯ ತನ್ನ ಹಿರಿತನ ಮರೆತು ತನಗಿಂತ ಜೂನಿಯರ್ ಮಂತ್ರಿಯನ್ನು ಸ್ವಾಗತಿಸಿದ ಗೌಡರ ಶಿಸ್ತು ವಿನಯ, ಸ್ವಂತ ತಮ್ಮನ ಮಗ ತಮ್ಮ‌ಪತ್ನಿ ಚೆನ್ನಮ್ಮನವರ ಮೇಲೆ ಆಸಿಡ್ ಹಾಕಿದಾಗಲೂ ಕಂಪ್ಲೆಂಟ್ ಕೊಡದೆ "ಕೌಟುಂಬಿಕ ಕಲಹ ನಾವೇ ಬಗೆ ಹರಿಸಿಕೊಳ್ಳುತ್ತೇವೆ" ಎಂದ ಅವರ ಅಪೂರ್ವ ಸಂಯಮಕ್ಕೆ ನನ್ನದೊಂದು ಹ್ಯಾಟ್ಸಾಫ್.

ಸಾರ್ವಜನಿಕ ಜೀವನದಲ್ಲಷ್ಟೇ ಅಲ್ಲ ವೈಯಕ್ತಿಕವಾಗಿಯೂ ಘನತೆಯಿಂದ ನಡೆದುಕೊಂಡ ಬದುಕು ಅವರದು. 1981ರ ಸಮಯ ವಿರೋಧ ಪಕ್ಷದ ನಾಯಕರಾಗಿದ್ದಾಗಿನ ಘಟನೆಯಿದು. ಅಸಹಾಯಕ ಜನರ ಗುಂಪಿಗೆ ಸಹಾಯ ಮಾಡಲು ಹೋಗಿ ಅವರಿಂದಲೇ ತಮ್ಮ ಬಟ್ಟೆ ಎಳೆದು ಹರಿದು ಪರಚಿ ಗಾಯಗೊಂಡ ಗೌಡರು ಯಾರ ಬಗ್ಗೆಯೂ ಕಂಪ್ಲೆಂಟ್ ಕೊಡದೆ "ಜನ ಸಮೂಹದಲ್ಲಿ ಇವು ಆಗುತ್ತವೆ" ಎಂದು ವಿರೋಧ ಬಣದ ಮಂತ್ರಿ ಕಾರು ಕಳಿಸಿದರೂ ನಾನು ಬಡಜನರ ಜೊತೆ ಬಂದಿರುವೆ ಅವರ ಜೊತೆಗೇ ಹೋಗುವೆ ಎಂದು ಬಸ್ಸಿನಲ್ಲೇ ಹೊರಟ ಅವರ ಸರಳತೆಗೆ ಸರಿಸಾಟಿ ಬೇರಿಲ್ಲ ಎನಿಸಿಬಿಟ್ಟಿತು.

ಗೋಕಾಕ್ ಚಳುವಳಿ ಸಮಯದಲ್ಲಿ ಲಕ್ಷಾಂತರ ಜನ ಸೇರಿದ್ದ ಜನಸಮೂಹವನ್ನು ಕನ್ನಡದ ಕಂಠೀರವ ಡಾ.ರಾಜಕುಮಾರ್ ಮೆಲುದನಿಯ ಶಾಂತತೆಯಲ್ಲೇ ಆಡಿದ ಎರಡೇ ಮಾತುಗಳು ಇಡೀ ಜನಸಮುದ್ರವೇ ಕಣ್ಣೀರು ಮಿಡಿಸಿದ್ದು ನಾನು ಇದುವರೆಗೂ ನೋಡಿಲ್ಲ ಎಂದು ಲೇಖಕರು ಕಟ್ಟಿಕೊಡುವ ಚಿತ್ರಣ ಕಣ್ಣೆದುರೇ ಬಂದು ಭಾವುಕಳಾದೆ. ಇದು ಯೋಗ ಧ್ಯಾನದ ಅಭ್ಯಾಸದಿಂದ ಒಲಿದ ರಾಜಣ್ಣನವರ ಅಂತಃ ಶಕ್ತಿಯ ಫಲ.

ರಾಜಾಶ್ರಯದಲ್ಲಿ ಬೆಳೆದ ಮೈಸೂರಿನ ನಾಡಕುಸ್ತಿಯ ಬಗ್ಗೆ ಕುಸ್ತಿಪಟುಗಳ ಬಗ್ಗೆ ಇರುವ ಲೇಖನಗಳು ಮನಸೆಳೆದವು. ಮೈಸೂರಿಗೆ ಬಂದು ಇಪ್ಪತ್ತೇಳು ವರ್ಷವಾಯಿತು. ಬಂದಾಗಿನಿಂದಲೂ ಕುಸ್ತಿ ನೋಡುವ ಆಸೆ ಈಗಲೂ ಹಾಗೆಯೇ ಇದೆ. ಲೇಖನಗಳನ್ನು ಓದಿ ಕುಸ್ತಿ ನೋಡಿದಷ್ಟೇ ಖುಷಿಯಾಯಿತು.

ವ್ಯವಹಾರಿಕ ಪ್ರಪಂಚದ ಕಪಟತನವರಿಯದ ಸಾಹಿತಿಗಳು ಬಹುಬೇಗ ಮೋಸ ಹೋಗುತ್ತಾರೆ. ರಾಷ್ಟ್ರಕವಿ ಜಿ.ಎಸ್.ಎಸ್. ಅಲ್ಲದೇ ನಮ್ಮ ಮೆಚ್ಚಿನ‌ ಕೃಷ್ಣೇಗೌಡರೂ ಕಾರ್ಯಕ್ರಮ ಸಂಘಟಕರಿಂದ ತಮಗೆ ಬರಬೇಕಾದ ಸಂಭಾವನೆ ಪಡೆಯದೆ ಮೋಸ ಹೋದರೂ ತಿರುಗಿ ವಸೂಲಿಯೂ ಮಾಡದೆ ಹೋದ ಒಳ್ಳೆಯತನ ಕಲಿಗಾಲದಲ್ಲಿ ಒಳ್ಳೆಯದಲ್ಲವೇ ಅಲ್ಲ. ಸಾಹಿತಿಗಳ ಕಾಪಿರೈಟ್ ಪಡೆಯದೇ ಅಥವಾ ಪಡೆದಿದ್ದರೂ ಕೊಡಬೇಕಾದ ಸಂಭಾವನೆ ಕೊಡದೆ ಮೋಸ ಮಾಡಿ ತಾವು ಲಾಭ ಮಾಡಿಕೊಂಡ ಪ್ರಕಾಶರುಗಳ ಕೈಗೆ ಸಿಕ್ಕು ನಲುಗಿದ ತ.ರಾ.ಸು. ರೂಪರಾಜ್...ಮೇಲಿನ‌ ಪೈಕಿಯವರೇ.

ಯು. ಆರ್. ಅನಂತಮೂರ್ತಿ ಅವರು ತಮ್ಮ ಜಮೀನಿಗೆ ಮುಳ್ಳುತಂತಿ ಬೇಲಿಸಲು ಹಾಕಿಸಲು ತಂದಿಟ್ಟ ಕಟ್ಟು ಕಳುವಾಗಿ ಕಂಪ್ಲೆಂಟ್ ಕೊಟ್ಟು ನಂತರದ ಪ್ರೊಸೀಜರ್ ಗಳಿಗೆ ಅಸಹನೆಯಿಂದ ಬೇಸತ್ತ ಘಟನೆ ನಗು ಉಕ್ಕಿಸಿತು.

ಗೋಕಾಕ್ ಚಳುವಳಿ ಸಮಯದ ಕೇಸಿನಲ್ಲಿ ಅನೇಕ ಸಮನ್ಸ್ ಹೋಗಿದ್ದರೂ ಕೋರ್ಟ್‌ಗೆ ಹಾಜರಾಗದ ವಿಚಾರವಾದಿಗಳಾದ ಪ.ಮಲ್ಲೇಶ್ ಮತ್ತು ಕೆ. ರಾಮದಾಸ್ ಅವರನ್ನು ಪೋಲಿಸ್ ಠಾಣೆಗೆ ಕರೆತಂದಾಗ ಅವರು ಡಿವೈಎಸ್ಪಿ ಮೇಲೆಯೇ ಮುಗಿಬಿದ್ದು ಕೂಗಾಡಿದ್ದು ನಾಚಿಕೆಗೇಡಿನ ವರ್ತನೆ ಎನಿಸಿತು. ಸಾಹಿತಿಗಳೋ ಸಂಗೀತಗಾರರೋ ರಾಜಕಾರಣಿಗಳೋ ಸಿನಿಮಾದವರೋ ಯಾರೇ ಆದರೂ ದೇಶದ ಕಾನೂನು ಸುವ್ಯವಸ್ಥೆಯ ಮುಂದೆ ದೊಡ್ಡವರಲ್ಲ ಎಂಬುದನ್ನು ಭಾರತೀಯರು ಕಲಿಯುವುದಿದೆ.

ಕರ್ಫ್ಯೂ ದಿನಗಳ ರಾತ್ರಿಯಲ್ಲಿ ಕಂಡಲ್ಲಿ ಗುಂಡಿಕ್ಕುವ ಸಂದರ್ಭ ಒಮ್ಮೆ. ಲೇಖಕರು ಜೀಪಿನಲ್ಲಿ ಗಸ್ತು ತಿರುಗುವಾಗ ಅನುಮಾನಾಸ್ಪದವಾಗಿ ಒಂದು ಮನೆಯ ಕಂಪೌಂಡ್ ಒಳಗೆ ಓಡಾಡಿದ ಒಬ್ಬ ವ್ಯಕ್ತಿಯ ಬೆನ್ನಟ್ಟಿದಾಗ ತಿಳಿದ ಸತ್ಯ, ಆತನ ಸೊಸೆಗೆ ಹೆರಿಗೆ ಬೇನೆ ರಾತ್ರಿಯಾಗಿದೆ ಆಟೋಗಳಿಲ್ಲ. ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತಾರೆ. ಆಕೆಗೆ ಗಂಡು ಮಗುವಾಗುತ್ತದೆ. ಈ ಘಟನೆಯ ಬಳಿಕ ಆಕೆಯ ಪತಿ ಜೇಬರ್ ಒಳ್ಳೆಯ ಸ್ನೇಹಿತರಾಗುತ್ತಾರೆ. ಈಗ ಆ ಮಗು ಬೆಳೆದು ಎಂಜಿನಿಯರ್ ಆಗಿ ದುಬೈಯಲ್ಲಿದ್ದಾನೆ ಎಂದ ಆ ಮಗುವಿನ ತಂದೆ ಅಮರುಲ್ಲಾ ಪಾಷಾ ಮಾತು ಕೇಳಿ ಅಂದಿನ ಕಂಡಲ್ಲಿ ಗುಂಡು ಕಾನೂನಿನ ನಿರ್ದೇಶನದಂತೆ ದುಡುಕಿ ಗುಂಡಿಕ್ಕಿದ್ದರೆ ನನ್ನನ್ನು ನಾನು ಕ್ಷಮಿಸಿಕೊಳ್ಳಲಾಗುತ್ತಿತ್ತೇ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳುವ ಜೇಬರ್ ಅವರ ಸಮಯ ಪ್ರಜ್ಞೆ ಸಂಯಮಕ್ಕೆ ಹ್ಯಾಟ್ಸಾಫ್.

ಅನುಮಾನಾಸ್ಪದವಾಗಿ ಕಂಡ ಒಬ್ಬ ವ್ಯಕ್ತಿಯನ್ನು ಪೊಲೀಸರು ಪೊಲೀಸ್ ಠಾಣೆಗೆ ಕರೆತಂದಾಗ ಆತ ಒಬ್ಬ ಸಾಮಾನ್ಯ ವ್ಯಕ್ತಿ ಎಂದು ತಿಳಿದು ವಾಪಸ್ಸು ಕಳಿಸುವಾಗ ಆತ ಹೇಳಿ ಹೋಗಿದ್ದ ಎರಡು ಭವಿಷ್ಯವಾಣಿ ಲೇಖಕರ ಜೀವನದಲ್ಲಿ ನಿಜವಾಗಿ ಬಿಡುವುದು. ಅದೇ ವ್ಯಕ್ತಿ ಇಪ್ಪತ್ತು ವರ್ಷಗಳ ನಂತರ ಕಾಶಿಯ ಗಂಗೆಯ ತಟದ ಬಳಿ ಮತ್ತೆ ಭೇಟಿಯಾಗುವುದು ಅಚ್ಚರಿ ತಂದಿತು. ಜ್ಯೋತಿಷ್ಯವೂ ಒಂದು ವಿಜ್ಞಾನ. ಅನೇಕ ರಹಸ್ಯಗಳಿವೆ ಅದರಲ್ಲಿ ಆದರೆ ಜ್ಯೋತಿಷ್ಯದ ಹೆಸರು ಹೇಳಿ ದುರ್ಬಳಕೆ ಮಾಡಿಕೊಳ್ಳುವ ಜನರೇ ಹೆಚ್ಚಾಗಿರುವುದರಿಂದ ಹಲವು ಜನರಿಗೆ ಅದರ ಮೇಲೆ ನಂಬಿಕೆಯೇ ಹೊರಟುಹೋಗಿದೆ. ಆದರೂ ಇತ್ತೀಚಿಗೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರ ಸಿಕ್ಕಾಪಟ್ಟೆ ನ್ಯೂಸ್ ಮಾಡ್ತಿದೆ ಅಂತ ಅನಿಸುತ್ತದಲ್ಲವೇ? ಎಲ್ಲವೂ ಅತಿ ಈಗ. ಬುದ್ಧನ ಸುವರ್ಣ ಮಧ್ಯಮ ಮಾರ್ಗ ಯಾರಿಗೂ ಬೇಕಿಲ್ಲ.

ಅಪರಾಧಿ ಎಂದು ಪೊಲೀಸರು ಹಿಡಿದುಕೊಂಡು ಬಂದ ಮಗನನ್ನು ಬಿಡಿಸಲು ಮುದುಕಿಯೊಬ್ಬಳು ಪೊಲೀಸ್ ಠಾಣೆಯ ಬಳಿ ಜೇಬರ್ ಅವರ ಕಾಲು ಹಿಡಿದು ಗೋಗರೆಯುವುದಲ್ಲದೇ ಕಬ್ಬಿಣದ ಸರಳಿಗೆ ತಲೆ ಗುದ್ದಿಕೊಂಡು ಹಣೆಯಲ್ಲಿ ರಕ್ತ ಹರಿಸಿಕೊಂಡೂ ತನ್ಙ ಮಗನನ್ನು ಬಿಟ್ಟುಬಿಡಿ ಎಂಬ ಗೋಗರೆದ ಮುದುಕಿ ಅನಾಥವಾಗಿ ಸಿಕ್ಕದ ಮಗುವನ್ನು ಸಾಕಿ ಬೆಳೆಸಿದ ಸಾಕುತಾಯಿಯೇ ಹೊರತು ಹೆತ್ತಮ್ಮ ಅಲ್ಲ ಎಂಬ ಸಂಗತಿ ನಮ್ಮನ್ನು ಆರ್ದ್ರಗೊಳಿಸುತ್ತದೆ.

"ಮೈಸೂರಿಗೆ ಉಗ್ರರು ನುಸುಳಿದ್ದು ಹೇಗೆ ?", "ಕಮ್ಯುನಲ್ ಗೂಂಡಾಗಳು", ಮೊದಲಾದ ಅಪರಾಧ ಜಗತ್ತಿನ ತಲ್ಲಣಗಳ ಬಗ್ಗೆ ಅವುಗಳನ್ನು ಕಣ್ಣಾರೆ ಕಂಡ ಲೇಖಕರ ಮೂಲಕ ನಾವು ತಿಳಿದುಕೊಳ್ಳುವಾಗ ಮೈ ಬೆವೆತುಹೋಗುತ್ತದೆ. "Top secret blue book" - ಅತಿಗಣ್ಯ ವ್ಯಕ್ತಿಗಳ ಭೇಟಿ ಸಂದರ್ಭದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡುವುದು, ಕಾರ್ಯ ನಿರ್ವಹಿಸುವುದು ಹೇಗೆ ಎಂಬ ಸ್ಪಷ್ಟ ಆದೇಶಗಳಿರುವ ಕೃತಿಯಲ್ಲಿರುವ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಡಿಜಿಪಿ ಮಟ್ಟದ ಅಧಿಕಾರಿ ಮಾತ್ರ ಸಣ್ಣಪುಟ್ಟ ಮಾರ್ಪಾಡು ಮಾಡಬಹುದೇ ಹೊರತು ಇತರರಿಗೂ ಅದರೊಳಗಿರುವುದು ಪೂರಾ ಗೊತ್ತಿರುವುದಿಲ್ಲ.

ಹೀಗೆ ಇಂತಹ ಜವಾಬ್ದಾರಿಗಳನ್ನೆಲ್ಲಾ ಹೊತ್ತು ಸದಾ ಮೈಯೆಲ್ಲಾ ಕಣ್ಣಾಗಿರಬೇಕಾದ ಪೊಲೀಸರು ಕೊಂಚ ಕಣ್ತಪ್ಪಿದರೂ ಇಡೀ ಸಮಾಜ ದೇಶ ಆಪತ್ತಿನಲ್ಲಿ ಸಿಕ್ಕಿಕೊಂಡು ಬಿಡುವ ವಿಷಯ ಬೆಚ್ಚಿ ಬೀಳಿಸುತ್ತದೆ. ಪೊಲೀಸರೂ ಮನುಷ್ಯರೇ ತಮ್ಮ ನೋವು ನಲಿವು ಪ್ರೇಮ ವಿರಹ ವಿಷಾದ ಸಂಕಟಗಳಿದ್ದರೂ ಅವನ್ನೆಲ್ಲಾ ಬದಿಗೊತ್ತಿ ಶಿಸ್ತು ಸಂಯಮ ಕಠಿಣ ಮನಸ್ಥಿತಿ ಬದ್ಧತೆ ತೀಕ್ಷ್ಣ ಬುದ್ಧಿಮತ್ತೆ ಚತುರತೆ ಸಮಯ ಪ್ರಜ್ಞೆ.... ಗಳಲ್ಲಿ ತಮ್ಮತನವನ್ನು ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸುವ ಸವಾಲುಗಳನ್ನು ಎದುರಿಸುವ ಪೊಲೀಸರ ಬಗ್ಗೆ ಹಗುರವಾಗ ತಮಾಷೆ ಮಾತುಗಳಿಂದ ಸಿನಿಮಾಗಳಲ್ಲಿ ಚಿತ್ರಿಸುವುದನ್ನು ನೋಡುವಾಗ ಖೇದವೆನಿಸುತ್ತದೆ.

ಹಿರಿಯ ಗೆಳೆಯರಾದ ನಿವೃತ್ತ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಎಸ್.ಕೆ.ಉಮೇಶ್ ರವರೂ ಸಹಾ ಹೀಗೆ ಹೇಳುತ್ತಾರೆ" ಸಿನಿಮಾಗಳಲ್ಲಿ ಪೆಂಗನಂತೆ ನಮ್ಮನ್ನು ಚಿತ್ರಿಸುತ್ತಾರೆ ಅದು ನಿಜವಲ್ಲ. ಪೊಲೀಸ್ ವ್ಯವಸ್ಥೆ ಎಂದರೆ ಬೇರೆಯೇ ಚಿತ್ರಣವಿದೆ. ಎಂತಹ ಭೂಗತ ವಿದ್ರೋಹಿಗಳನ್ನೂ ದರೋಡೆಕೋರರು ಅತ್ಯಾಚಾರಿಗಳನ್ನೂ ಹಿಡಿದು ಹೊಡೆದು ಹಾಕಬಲ್ಲ ಬಲ ಹಾಗೂ ತಾಂತ್ರಿಕ ಜ್ಞಾನ ನಮಗಿದೆ. ಆದರೆ....ಈ ರಾಜಕಾರಣಿಗಳು ನಾವು ಮಾಡುವ ಕೆಲಸಗಳಲ್ಲಿ‌ ಮೂಗು ತೂರಿಸುವುದನ್ನು ಬಿಟ್ಟು ನಮಗೆ ಪೂರಾ ಸ್ವಾತಂತ್ರ್ಯ ಕೊಟ್ಟರೆ ವೇಗವಾಗಿ ತನಿಖೆಗಳನ್ನು ಮಾಡಿ ಅಪರಾಧಿಗಳನ್ನು ಹಿಡಿದುಹಾಕಬಲ್ಲೆವು ಎನ್ನುವ ಉಮೇಶ್ ಅವರೂ ಸಹಾ ಪೊಲೀಸ್ ಜಗತ್ತಿನ ಕಾರ್ಯಾಚರಣೆಗಳ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ಕತೆ ಕವಿತೆ ನಾಟಕ ಕುರಿತ ಸೃಜನಶೀಲ ಸಾಹಿತ್ಯ ಕುರಿತ ಪುಸ್ತಕಗಳ ಜೊತೆಗೆ ಜನ‌ಸಾಮಾನ್ಯರೆಲ್ಲರೂ ಉಮೇಶ್ ಅವರು ಮತ್ತು ಜೇಬರ್ ಅವರು ಬರೆಯುತ್ತಿರುವ ಇಂತಹ ಪುಸ್ತಕಗಳನ್ನು ಓದಲೇಬೇಕು. ಜನ ಸಾಮಾನ್ಯರನ್ನು ನೆಮ್ಮದಿಯಿಂದಿಟ್ಟಿರುವ ಪೊಲೀಸ್ ವ್ಯವಸ್ಥೆಯ ಬೆವರಿನ ಶ್ರಮ ನಮಗೆ ಆಗಲೇ ಅರಿವಾಗಲು ಸಾಧ್ಯ.

ರಫಿ, ಓ.ಪಿ.ನಯ್ಯಾರ್ ಬಗ್ಗೆ ರಾಜೀವ್ ಗಾಂಧಿ ಇಂದಿರಾಗಾಂಧಿ ಮೈಸೂರು ಭೇಟಿ, ದಸರೆ ಮತ್ತು ಪ್ರಮೋದಾದೇವಿ ಒಡೆಯರ್, ಪ್ರಭುಶಂಕರ, ಕೆ.ಎಸ್.ಅಶ್ವತ್ಥ್ , ದೇವನೂರು, ಲಂಕೇಶ್, ತೇಜಸ್ವಿ ಜಸ್ಟಿಸ್ ವೆಂಕಟಾಚಲ, ಕಾಮರಾಜ್... ಹೀಗೆ ಸಾಹಿತಿಗಳ ರಾಜಕಾರಣಿಗಳ ಸಂಗೀತಗಾರರ ವ್ಯಕ್ತಿ ಚಿತ್ರಣಗಳು, ಅಪರಾಧ ಜಗತ್ತಿನ ಒಳಹೊರಗು ಮೊದಲಾದವನ್ನು ಕಣ್ಣಿಗೆ ಕಟ್ಟುವಂತೆ ಬರೆದಿರುವ "ನೆನ್ನೆ ಮೊನ್ನೆ ನಮ್ಮ ಜನ" ಸಂಪುಟ 1ಈ ಕೃತಿ ನನ್ನನ್ನಷ್ಟೇ ಅಲ್ಲ ಇದನ್ನು ಓದಿದ ಪ್ರತಿ ಓದುಗನಿಗೂ ಮುಂದಿನ ಸಂಪುಟಗಳಿಗಾಗಿ ಕಾಯುವಂತೆ ಮಾಡುತ್ತವೆ. ವಿಶ್ವಾಸವಿಟ್ಟು ಓದಲು ಕಳಿಸಿಕೊಟ್ಟ ಹಿರಿಯರಾದ ಜೆ.ಬಿ.ರಂಗಸ್ವಾಮಿ ಅವರ ಸಹೃದಯತೆಗೆ ಧನ್ಯವಾದಗಳು. ಆದಷ್ಟು ಬೇಗ ಮತ್ತಷ್ಟು ಸಂಪುಟಗಳು ಪ್ರಕಟವಾಗಲೆಂದು ಹಾರೈಸುವೆ.

- ಕೆ.ಎನ್.ಲಾವಣ್ಯ ಪ್ರಭಾ

 

 

MORE FEATURES

ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...

26-07-2024 ಬೆಂಗಳೂರು

"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್...

ಮಲೆನಾಡ ಪರಿಸರದ ಸುಂದರ ಜೀವನವನ್ನು ಹೇಳುವ ಕೃತಿಗಳಲ್ಲಿ ಇದು ಒಂದು 

26-07-2024 ಬೆಂಗಳೂರು

‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎ...

ಈ ಕಾದಂಬರಿ ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತದೆ; ಉಪೇಂದ್ರ ಕೆ. ಆರ್

25-07-2024 ಬೆಂಗಳೂರು

‘ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ...