ಏಕಾಂತ ಹಾಗೂ ಲೋಕಾಂತದ ಬರಹಗಳಿವು..


"ಇದು ಕವನದ ಪಲ್ಲವಿ. ಈ ಹಾಡು ಏಕಾಂತಕ್ಕೂ, ಲೋಕಾಂತಕ್ಕೂ ಸೇರಿಯೇ ಸಲ್ಲುವ ಹಾಡು. ಅಂತರಂಗ ಎನ್ನುವುದು ನಮ್ಮೊಳಗಿನದ್ದು, ಏಕಾಂತದ್ದು. ಆದರೆ ಲೋಕಾಂತದ ಕಲ್ಲೊಂದು ಬಂದು ಅಂತರಂಗವನ್ನು ಕಲಕುತ್ತದೆ. ನಂತರ ಕೊಳ ಮತ್ತೆ ತಿಳಿಯಾಗುತ್ತದೆಯಾದರೂ, ಆ ಕಲ್ಲು ಅಲ್ಲಿಂದ ಮಾಯವಾಗುವುದಿಲ್ಲ, ಕರಗುವುದಿಲ್ಲ," ಎನ್ನುತ್ತಾರೆ ಎನ್.‌ ಸಂಧ್ಯಾರಾಣಿ. ಅವರು ತಮ್ಮ ʻಕದಡಿದ ಕೊಳವು ತಿಳಿಯಾಗಿರಲುʼ ಕೃತಿಗೆ ಬರೆದ ಲೇಖನ.

'ಕದಡಿದ ಕೊಳವು ತಿಳಿಯಾಗಿರಲು...' - ಇದು ನನ್ನ ಬಿಡಿಬರಹಗಳ, ಪ್ರಬಂಧಗಳ ಸಂಗ್ರಹ. ಇದು ಬಾಗೇಶ್ರೀ ಅವರ ಕವನದ ಒಂದು ತುಣುಕು.

'ಒಮ್ಮೆ ಕದಡಿದ ಕೊಳವು ಮತ್ತೆ ತಿಳಿಯಾಗಿರಲು ತಳದಿ ಮಲಗಿಹ ಕಲ್ಲು

ನಿನ್ನ ನೆನಪು...'

ಇದು ಕವನದ ಪಲ್ಲವಿ. ಈ ಹಾಡು ಏಕಾಂತಕ್ಕೂ, ಲೋಕಾಂತಕ್ಕೂ ಸೇರಿಯೇ ಸಲ್ಲುವ ಹಾಡು. ಅಂತರಂಗ ಎನ್ನುವುದು ನಮ್ಮೊಳಗಿನದ್ದು, ಏಕಾಂತದ್ದು. ಆದರೆ ಲೋಕಾಂತದ ಕಲ್ಲೊಂದು ಬಂದು ಅಂತರಂಗವನ್ನು ಕಲಕುತ್ತದೆ. ನಂತರ ಕೊಳ ಮತ್ತೆ ತಿಳಿಯಾಗುತ್ತದೆಯಾದರೂ, ಆ ಕಲ್ಲು ಅಲ್ಲಿಂದ ಮಾಯವಾಗುವುದಿಲ್ಲ, ಕರಗುವುದಿಲ್ಲ. ಬಹಿರಂಗದಲ್ಲಿ ಕಲ್ಲು ಮತ್ತು ಅಂತರಂಗದಲ್ಲಿ ಕಲ್ಲಿನ ನೆನಪು ಹಾಗೆಯೇ ಉಳಿದುಬಿಡುತ್ತದೆ. ಕೆಲವು ಕಲ್ಲುಗಳು ಚಲನೆಯನ್ನಿತ್ತು ಜೀವಂತಿಕೆಯನ್ನು ನೆನಪಿಸಿದರೆ, ಮತ್ತೆ ಕೆಲವು ಆಳಕ್ಕೆ ಹೋಗಿ ಬಗ್ಗಡವನ್ನೆಬ್ಬಿಸುತ್ತದೆ.

ಅದೇ ರೀತಿಯಲ್ಲಿ ಪ್ರತಿಯೊಬ್ಬರಲ್ಲಿಯೂ ಒಂದು ಅಂತರಂಗ ಇರುತ್ತದೆ ಅದು ಏಕಾಂತಕ್ಕೆ ಸಂಬಂಧಿಸಿದ್ದು, ಇನ್ನೊಂದು ಬಹಿರಂಗ - ಅದು ಲೋಕಾಂತಕ್ಕೆ ಸಂಬಂಧಿಸಿದ್ದು. ಆದರೆ ಒಂದರ ಹೊರತಾಗಿ ಇನ್ನೊಂದು ಪೇಲವವಾಗಿಯೂ, ಟೊಳ್ಳಾಗಿಯೂ ಉಳಿದುಬಿಡುತ್ತದೆ. ಅಂತರಂಗದ ಎಚ್ಚರವಿಲ್ಲದ ಲೋಕಾಂತ ಕೇವಲ ಶಬ್ದಗಳ ಆಡಂಬರವಾದರೆ, ಲೋಕಾಂತದಿಂದ ಕತ್ತರಿಸಿಕೊಂಡು ಅಂತರಂಗ ನಿರ್ವಾತದಲ್ಲಿ ಉಳಿದುಬಿಡುತ್ತದೆ. ಅಲ್ಲೇನೂ ಮೊಳೆಯದು, ಬೆಳೆಯದು. ಪ್ರತಿಯೊಬ್ಬರೂ ಈ ಸಮುದಾಯದ ಒಂದು ಭಾಗವೇ ಎನ್ನುವುದು ನನ್ನ ನಂಬಿಕೆ. ಹಾಗೇ ಇಲ್ಲಿ ಏಕಾಂತದ ಬರಹಗಳು ಮತ್ತು ಲೋಕಾಂತದ ಬರಹಗಳು ಎರಡೂ ಇವೆ.

ಯಾವುದೇ ಘಟನೆ ಅದು ನಡೆದ ಕಾಲಕ್ಕೆ ಒಂದು ಅಪರೂಪದ ವಿದ್ಯಮಾನ ವಾಗಿದ್ದು, ನಂತರ, ಕಾಲದ ದಾಖಲಾತಿಯಲ್ಲಿ ಕೇವಲ ಒಂದು ಸಾಲಿನ ಒಕ್ಕಣೆ ಆಗಿಬಿಡುತ್ತದೆ. ಆದರೆ ಅದರಾಚೆಗೂ ಕೆಲವೊಮ್ಮೆ ಕೆಲವು ಘಟನೆಗಳು ಮತ್ತು ಅವುಗಳ ಪ್ರಭಾವಗಳು ಕಾಲವಳಿಸಲಾಗದಂತೆ ನಿಂತುಬಿಡುತ್ತವೆ. ಅದು ಕಳೆದುಹೋದ ಮೇಲೂ ಅದರ ಅನುರಣನ ಉಳಿದೇ ಇರುತ್ತದೆ. ಹಾಗೆ ಉಳಿದ ಅನುರಣನಗಳೇ ಇಲ್ಲಿ ಬರಹಗಳಾಗಿವೆ. ಕಲಕಿದ ಕೊಳ ಮತ್ತೆ ತಿಳಿಯಾದ ನಂತರ ಬರೆದ ಬರಹಗಳು ಇವು. ಕೇವಲ ಅವುಗಳನ್ನು ಬರೆದ ಕಾಲಕ್ಕೆ ಮಾತ್ರ ಸಲ್ಲದೆ, ವಿಚಾರಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಪ್ರಸ್ತುತವಾಗಿರುವ ವಿಷಯಗಳು ಇಲ್ಲಿನ ಬರಹಗಳ ವಸ್ತು, ಅದು ಪುನೀತ್ ಆಗಿರಬಹುದು, ಗುಲಾರ್ ಆಗಿರಬಹುದು. ಕ್ರಿಕೆಟ್, ಕಾಡುವ ಹಾಡುಗಳು ಅಥವಾ ಸಿನಿಮಾ ಕುರಿತ ಬರಹವಾಗಿರಬಹುದು. ವರ್ತಮಾನದ ಚೌಕಟ್ಟನ್ನು ಮೀರಿ ಈ ಬರಹಗಳನ್ನು ನೀವು ಇಡಿಯಾಗಿ ಅಥವಾ ಬಿಡಿಬಿಡಿಯಾಗಿ ಓದಬಹುದು. ಇಲ್ಲಿ ನಿಮಗೆ ನಿಮ್ಮ ಬಾಲ್ಯದ ಒಂದು ತುಣುಕೋ, ಹಾಡಿ ಮರವೆಗೆ ಸರಿದ ಯಾವುದೋ ಹಾಡು, ಶಾಯರಿಯ ತುಣುಕು, ಕಥೆಯಲ್ಲಿನ ಒಂದು ಪಾತ್ರ ಅಥವಾ ನಿಮ್ಮದೇ ಯಾವುದೋ ಒಂದು ಅಭಿಪ್ರಾಯ, ಭಾವನೆ, ನಂಬಿಕೆಯ ತುಣುಕು ಸಿಗಬಹುದು. ಹಾಗೆ ಸಿಗಲೆಂದು ನಾನು ಆಶಿಸುತ್ತೇನೆ. ಏಕೆಂದರೆ ಬರೆಯುವವರನ್ನು, ಓದುವವರನ್ನು ಸೇರಿಸುವ ಕೊಂಡಿ ಈ ಅನುಭವಗಳು. ಹಾಗೆ ಈ ಅನುಭವಗಳು, ವಿಚಾರಗಳು ನಿಮ್ಮದೂ ಅನುಭವಗಳನ್ನು, ವಿಚಾರಗಳನ್ನು ನೆನಪಿಸಿದರೆ, ಅನುರಣಿಸಿದರೆ ಬರಹ ಸಾರ್ಥಕವಾಗುತ್ತದೆ.

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...