About the Author

ಅಹಿತಾನಲ ಎಂಬ ಕಾವ್ಯನಾಮದಿಂದ ಬರೆಯುವ ವಿಜ್ಞಾನಿ ನಾಗ ಐತಾಳ ಅವರು ಜನಿಸಿದ್ದು 1932ರ ಅಕ್ಟೋಬರ್‍ 5ರಂದು. ಮೂಲತಃ ಉಡುಪಿ ಜಿಲ್ಲೆಯ ಕೋಟದವರಾದ ಅವರು ಸದ್ಯ ಕ್ಯಾಲಿಫೋರ್ನಿಯಾದ ಅರ್‍ಕಾಡಿಯಾದ ನಿವಾಸಿ ಆಗಿರುವ ಐತಾಳರು ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿಯೂ ಪದವಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಅವರು ಅಧ್ಯಯನ ಮಾಡಿದ್ದಾರೆ. 

ಭಾರತದಲ್ಲಿ ಪಿಎಚ್.ಡಿ. ಪದವಿ ಪಡೆದ ನಂತರ ಬಯೋಕೆಮಿಸ್ಟ್ರಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಕೆನಡಾಕ್ಕೆ ಹೋದರು. ಅದಾದ ಮೇಲೆ ಅಮೆರಿಕೆಗೆ ಹೋದ ಅವರು 1975ರಿಂದ 2001ರ ವರೆಗೆ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 

ತಾವಿರುವಲ್ಲಿಯೇ ಸ್ನೇಹಿತರೊಡಗೂಡಿ ’ಕನ್ನಡ ಸಾಹಿತ್ಯ ರಂಗ’ ಆರಂಭಿಸಿದರು. ಅದರ ಸ್ಥಾಪಕ ಸದಸ್ಯರಾಗಿದ್ದ ಐತಾಳರು ಸದ್ಯ ಅಧ್ಯಕ್ಷರಾಗಿದ್ದಾರೆ.

ಪ್ರಕಟಿತ ಕೃತಿಗಳು: ಅಮೆರಿಕನ್ನಡಿಗನೊಬ್ಬನ ದಿನಚರಿಯಿಮದ(ಅಮೆರಿಕಾ ಅನುಭವ ಕಥನ), ಕಾದೇ ಇರುವಳು ರಾಧೆ(ಕಿರಿ ಕಾದಂಬರಿ), ಒಂದಾನೊಂದು ಕಾಲದಲ್ಲಿ(ಕಟ್ಟುಕಥೆಗಳ ಸಂಗ್ರಹ), ಕಲಬೆರಕೆ(ಪ್ರಬಂಧ ಸಂಕಲನ), ದೂರ ತೀರದಿಂದ ಹರಿದು ಬಂದ ಕತೆಗಳು(ಕಥಾ ಸಂಖಲನ), ಜೀವನ ರಹಸ್ಯ(ವೈಜ್ಞಾನಿಕ ಗ್ರಂಥ), ತಲೆಮಾರ ಸೆಲೆ(ಕಾದಂಬರಿ), ಅಮೆರಿಕದಲ್ಲಿ ಕಂಡ ಕನಸು, ಕಟ್ಟಿದ ನೆನಪು (ಅನುಭವ ಕಥನ), ಸಾಹಿತ್ಯ ಸ್ಪಂದನ(ವಿಮರ್ಶೆ), ಸ್ಮರಣೆ ಸಾಲದೆ(ಕೆಲವು ನೆನಪುಗಳು), ಕಾಲ ಉರುಳಿ:ಉಳಿದುದು ನೆನಪಷ್ಟೆ(ನಡೆದು ಬಂದ ಹೆಜ್ಜೆಯ ಜಾಡನ್ನು ಅರಸುತ್ತಾ).

ಸಂಪಾದಿತ ಕೃತಿಗಳು: ಕಾರಂತ ಚಿಂತನ-ಕಡಲಾಚೆಯ ಕನ್ನಡಿಗರಿಂದ, ಕುವೆಂಪು ಸಾಹಿತ್ಯ ಸಮೀಕ್ಷೆ, ಯದುಗಿರಿಯ ಬೆಳಕು- ಪುತಿನ, ಕನ್ನಡಮರಚೇತನ-ಮಾಸ್ತಿ, ಗೆಲುವಿನ ಚಿಲುಮೆ-ರಾಜರತ್ನಂ, ಅನಂತ ಮುಖದ ಮೂರ್ತಿ, ಬೇಂದ್ರೆ ಅಂದ್ರೆ...., ಅಮೆರಿಕಾ ಕನ್ನಡ ಬರಹಗಾರರು, ನೆನಪಿನ ಓಣಿಯೊಳಗೆ ಮಿನಿಗುವ ದೀಪ. 

29-10-2022 ರಂದು ಅವರು ನಿಧನರಾದರು

ಅಹಿತಾನಲ (ನಾಗ ಐತಾಳ)

(05 Oct 1932-29 Oct 2022)