About the Author

ಡಾ.ಅರವಿಂದ ಮಾಲಗತ್ತಿಯವರು 01-08-1956ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ.  ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಡಾ. ಅರವಿಂದ ಮಾಲಗತ್ತಿ ಕನ್ನಡ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ಕಥೆ, ನಾಟಕ, ಸಂಶೋಧನೆ, ಸಂಪಾದನೆ, ಆತ್ಮಕಥೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು 65ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ ಜಾನಪದ. ಗಾಯಕರಾಗಿ ಹಾಡಿ, ನಟರಾಗಿ ಅಪರೂಪಕ್ಕೆ ನಟಿಸಿದ್ದೂ ಇದೆ. ಅರವಿಂದ ಮಾಲಗತ್ತಿ ಅವರ ಕೆಲವು ಕೃತಿಗಳು ಹಾಗೂ ಕೆಲವು ಬಿಡಿ ಬಿಡಿಯಾದ ಭಾಗಗಳು ಇಂಗ್ಲಿಷ್, ಹಿಂದಿ, ಮಲೆಯಾಳಂ, ಮರಾಠಿ, ತಮಿಳು, ಬೆಂಗಾಲಿ ಭಾಷೆಗೆ ಅನುವಾದಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ ಡಾ.ಅರವಿಂದ ಮಾಲಗತ್ತಿ ಅವರ ಬಗ್ಗೆ ಈಗಾಗಲೇ ಸಾಕ್ಷ್ಯಚಿತ್ರವನ್ನು ತಯಾರಿಸಿದೆ.

ಇವರ ಕವನ ಸಂಕಲನಗಳು- ಮೂಕನಿಗೆ ಬಾಯಿ ಬಂದಾಗ, ಕಪ್ಪು ಕಾವ್ಯ, ಮೂರನೇ ಕಣ್ಣು, ನಾದ ನಿನಾದ, ಅನೀಲ ಆರಾಧನಾ (ಸಂಯುಕ್ತ ಕಾವ್ಯ), ಸಿಲಿಕಾನ್ ಸಿಟಿ ಮತ್ತು ಕೋಗಿಲೆ, ಚಂಡಾಲ ಸ್ವರ್ಗಾರೋಹಣಂ, ಆಯ್ದಕವಿತೆಗಳು, ವಿಶ್ವತೋಮುಖ, ಹೂ ಬಲುಭಾರ, ಸಹಸ್ರಾಕ್ಷಿ, ಮಾ ಕಾವ್ಯ (ಕಾವ್ಯ ಸಮಗ್ರ), ರೂ ನಿಷೇಧ ಚಕ್ರಕಾವ್ಯ. ಅರವಿಂದರ ಕಥಾಸಂಕಲನ- ಮುಗಿಯದ ಕಥೆಗಳು, ಅವರ ಕಾದಂಬರಿ ಕಾರ್ಯ, ನಾಟಕಗಳು- ಮಸ್ತಕಾಭಿಷೇಕ, ಸಮುದ್ರದೊಳಗಣ ಉಪ್ಪು, ಮಚುಬದ ಮುಖ, ಹೊಸ ಬ್ರಾಹ್ಮಣ ಸನ್ಯಾಸಿ. ಇನ್ನೂ ಅರವಿಂದ ಮಾಲಗತ್ತಿಯವರ ಪ್ರವಾಸ ಕಥನ- ಚೀನಾದ ಧರಣಿಯಲ್ಲಿ, ಹಾಗೂ ಅವರ ಆತ್ಮಕಥನ ಗೌರ್ಮೆಂಟ್ ಬ್ರಾಹ್ಮಣ](ಈ ಕೃತಿ ಈಗಾಗಲೇ ಚಲನಚಿತ್ರವಾಗಿದೆ), ಹಾಗೂ ಸಂಶೋಧನಾತ್ಮಕ ವಿಮರ್ಶೆಗಳು ಕನ್ನಡ ಸಾಹಿತ್ಯ ಮತ್ತು ದಲಿತಯುಗ, ದಲಿತ ಪ್ರಜ್ಞೆ: ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ, ಸಾಂಸ್ಕೃತಿಕ ದಂಗೆ, ಬೆಂಕಿ ಬೆಳದಿಂಗಳು, ದಲಿತ ಸಾಹಿತ್ಯ ಪ್ರವೇಶಿಕೆ, ಅಂತರ್ಜಾತಿಯ ವಿವಾಹ ಎಷ್ಟು ಪ್ರಗತಿಪರ, ಪೂನಾಪ್ಯಾಕ್ಟ್ ಮತ್ತು ದಲಿತರೆತ್ತ ಸಾಗಬೇಕು, ಭೀಮ ನಡೆಯಬೇಕು, ಸಾಹಿತ್ಯ ಸಾಕ್ಷಿ, ದಲಿತ ಸಾಹಿತ್ಯ ಪರ್ವ, ದಲಿತ ಸಾಹಿತ್ಯ, ಸಾಹಿತ್ಯ ಕಾರಣ, ದಲಿತ ಮಾರ್ಗ, ಮೌಢ್ಯ ನಿಷೇಧದ ಗುದ್ದಾಟಗಳು, ಚುಟುಕು ಚಿಂತನ, ದಲಿತ ಸಾಹಿತ್ಯ ಯಾನ. ಇವರ ಜಾನಪದ ಕೃತಿಗಳು- ಆಣೀ ಪೀಣಿ, ಜಾನಪದ ವ್ಯಾಸಂಗ, ಜಾನಪದ ಶೋಧ, ತುಳುವರ ಆಟಿಕಳಂಜ ಅಂತರ್ ದೃಷ್ಟಿಯ ಸಂಶೋಧನೆ, ಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ, ಪುರಾಣ ಜಾನಪದ ಮತ್ತು ದೇಶಿವಾದ. 

ಸಂಶೋದನೆ, ಕಲೆ, ಸಾಹಿತ್ಯ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇನ್ನೂ ವಿಶೇಷ ಕೃತಿಗಳನ್ನು ರಚಿಸಿರುವ ಶ್ರೀಯುತರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗೆ ಹತ್ತೂ ಹಲವು ಪ್ರಶಸ್ತಿಗಳನ್ನ ಪಡೆದಿರುವ ಅರವಿಂದರು ಹಲವಾರು ಪ್ರಶಸ್ತಿಗಳನ್ನ ಸ್ವೀಕರಿಸದೆ ಹಿಂದುರುಗಿಸಿದ್ದಾರೆ.  

 

ಅರವಿಂದ ಮಾಲಗತ್ತಿ

(01 Aug 1956)

BY THE AUTHOR

ABOUT THE AUTHOR