ಹೊಸ ಬ್ರಾಹ್ಮಣ ಸನ್ಯಾಸಿ

Author : ಅರವಿಂದ ಮಾಲಗತ್ತಿ

Pages 108

₹ 90.00




Year of Publication: 2017
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ದಲಿತ ಸಂವೇದನೆಯ ವಿಭಿನ್ನ ಲೋಕವನ್ನು ದಾಖಲಿಸುವ ಅರವಿಂದ ಮಾಲಗತ್ತಿ ಅವರ ನಾಟಕ ’ಹೊಸ ಬ್ರಾಹ್ಮಣ ಸನ್ಯಾಸಿ’.  ಮೂಕನಿಗೆ ಬಾಯಿ ಬಂದಾಗ’ ಸಂಕಲನದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಮಾಲಗತ್ತಿ ಅವರು ’ಗೌರ್ಮೆಂಟ್‌ ಬ್ರಾಹ್ಮಣ’ ಆತ್ಮಕತೆಯೂ ಸೇರಿದಂತೆ ಹಲವು ಪ್ರಮುಖ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ವಿಭಿನ್ನ ರೀತಿಯ ಕಾಣಿಕೆ ನೀಡಿದವರು.  ಮಾಲಗತ್ತಿ ಅವರ ಹೊಸ ನಾಟಕ ಕೂಡ ಜಾತೀಯತೆ ಅದು ಉಂಟು ಮಾಡುವ ಅಸಹನೆ-ಕಿರಿಕಿರಿಗಳನ್ನು ದಾಖಲಿಸುತ್ತದೆ.

About the Author

ಅರವಿಂದ ಮಾಲಗತ್ತಿ
(01 August 1956)

ಡಾ.ಅರವಿಂದ ಮಾಲಗತ್ತಿಯವರು 01-08-1956ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ.  ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.   ಡಾ. ಅರವಿಂದ ಮಾಲಗತ್ತಿ ಕನ್ನಡ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ...

READ MORE

Reviews

ಮಾನವತ್ವವನ್ನು ಪ್ರತಿಪಾದಿಸುವ ನಾಟಕ

ಇದೊಂದು ಐತಿಹಾಸಿಕ ನಾಟಕ. ಒಡೆಯರ ಕಾಲದ (1645-1685) ಸಂಗತಿಗಳನ್ನ ಒಳಗೊ೦ಡ ವಸ್ತುವಿನದು. ನಂತರದ ದಿನಮಾನಗಳಲ್ಲಿ ಚಿಕ್ಕದೇವರಾಜ ಒಡೆಯರು ಅಧಿಕಾರಕ್ಕೆ ಬಂದ ಕಾಲದಲ್ಲಿ (1673-1704) ರಲ್ಲಿ ನಡೆದ ರೈತ ದಂಗೆಯೊಂದರ ಘಟನೆಯೊಂದಿಗೆ ತಳುಕು ಹಾಕಿ, ಕೆಲ 'ಗೃಹೀತ' (ಕಲ್ಪಿಸಿದ) ಪಾತ್ರಗಳನ್ನು ಹೊಂದಿಸಿ ಬರೆದ ನಾಟಕ ಇದೆಂದು ಕೃತಿಕಾರ ಅರವಿಂದ ಮಾಲಗತ್ತಿಯವರು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಅರಸರಿಂದ 'ಬಸವಪುರ'ವನ್ನು ದಾನವಾಗಿ ಪಡೆದು ಅಲ್ಲಿ ಸ್ವಾಮಿ

ಲಿಯೊನಾರ್ಡೊ ಸಿನ್ನಮಿ ಚರ್ಚೊದನ್ನು ಕಟ್ಟಿಸುತ್ತಾನೆ - ನಂತರದ ಸ್ಥಿತಿಗತಿಯನ್ನು ಕುರಿತು ನಾಟಕ ಚರ್ಚಿಸುತ್ತದೆ ಇದು 'ಚರ್ಚೆ'ಯಾಗದೆ ನಾಟಕವಾಗಿ ಕ್ರಿಯಾತ್ಮಕವಾಗಿರಬೇಕಿತ್ತೇನೋ ಎಂದೆನಿಸದಿರದು.

ರೈತ ದಂಗೆಯನ್ನು ಶಮನಗೊಳಿಸಲು ನಡೆದ ಸಂಧಾನದ ಸಂದರ್ಭದಲ್ಲಿ ಮಂತ್ರಿಗಳ ತಂತ್ರಗಾರಿಕೆಯಿಂದಾಗಿ ಸಂಧಾನಕ್ಕೆಂದು ಬಂದ ರೈತರ ಮಠಾಧೀಶರ ಸ್ವಾಮಿಗಳ ಶರಣರ ಕೋಲೆಯೂ ನಡೆದುಹೋಗುತ್ತದೆ. ರಾಜಕಾರಣ ಧರ್ಮಕಾರಣದ ಸಂಘರ್ಷದಲ್ಲಿ ಆಯಾ ಮತಗಳ ಮಠಾಧೀಶರು, ಗುರುಗಳು ಆಚಾರ್ಯರು ತಮ್ಮ ಜಾತಿ ಮತಧರ್ಮಗಳ ಶ್ರೇಷ್ಟತೆಗಾಗಿ ಶ್ರಮಿಸುತ್ತಾರೆ. ಸಿನ್ನಮಿ ಎಂಬ ಬ್ರಾಹ್ಮಣ ಸನ್ಯಾಸಿ ವೇಷದ ಪಾದ್ರಿಯು ಆಗಮಿಸಿ ಕ್ರಿಸ್ತ ಧರ್ಮದ ಪ್ರಚಾರದಲ್ಲಿ ತೊಡಗಿರುತ್ತಾನೆ. ನನ್ನನ್ನು ಕ್ರಿಸ್ತನೇ ಕಳಿಸಿದ್ದಾನೆಂದು ಹೇಳಿಕೊಳ್ಳುತ್ತಾ ನಾನು 'ಹೊಸ ಬ್ರಾಹ್ಮಣ ಸನ್ಯಾಸಿ' ಕೊರಳಲ್ಲಿ ಕ್ರಿಸ್ತ ಇರೋ ಬ್ರಾಹ್ಮಣ ಸಿನ್ನಮಿ. ನಿಮ್ಮ ಸುಖ ದುಃಖಗಳೆಲ್ಲಾ ನನ್ನ ಸುಖ ದುಃಖಗಳೇ ಎಂಬ ನಯವಾದ ಮಾತುಗಳಿಂದ ಪವಾಡಗಳನ್ನು ಮಾಡಿದಂತೆ ನಟಿಸುತ್ತಾ, ಜನರನ್ನು ವಂಚಿಸುತ್ತಾನೆ. ಮರುಳಾದ ಜನ ಕುರಿಗಳಂತೆ ಹಿಂಬಾಲಿಸುತ್ತಾರೆ. ಕೆಲವರು ಇವನ ವಂಚನೆಯ ಜಾಲವನ್ನು ಬಯಲಿಗೆಳೆಯುತ್ತಾರೆ. ಹಲವು ಮಠಾಧೀಶರು ಇವನ ಕುತಂತ್ರದಿಂದ ಹಿಂದೂ  ಧರ್ಮವನ್ನು ಸಂರಕ್ಷಿಸಲು ತಮ್ಮ ತಮ್ಮ ಮತಗಳನ್ನು ಭದ್ರ ಪಡಿಸಿಕೊಳ್ಳಲು ಹೆಣಗುತ್ತಿರುತ್ತಾರೆ. ಆಶೆ ಆಮಿಶಕ್ಕೊಳಗಾದ ಜನರನ್ನು ಮತಾಂತರವಾಗುವುದನ್ನು ತಡಗಟ್ಟಿ ತಮ್ಮ ತಮ್ಮ ಮತಗಳಿಗೆ ಹಿಂದಿರುಗಿಸಲು ಶ್ರಮಿಸುತ್ತಾರೆ. ಇಂಥ ಸಂದರ್ಭದಲ್ಲಿ ವೈದಿಕ -ಶೈವ, ಬಸವ-ವೀರಶೈವ ಮತಗಳ ಮತೀಯ ಸಂಘರ್ಶವೂ ಏರ್ಪಡುತ್ತಾ ಹೋಗುತ್ತದೆ. ಗುರು ಪರಂಪರೆಯ ತಿಕ್ಕಾಟದಿಂದಾಗಿ ದೀನ ದಲಿತರು ಸಂದಿಗ್ಗದಲ್ಲಿರುತ್ತಾರೆ. ಹಿಂದೂ ಧರ್ಮದ ಮತೀಯ ಒಳಗುದಿಯ ನಡುವೆಯೇ ಜೈನ ಬೌದ್ಧ ಧರ್ಮಿಯ ಶ್ರಮಣರು ನುಸುಳಿ ಶಾಂತಿ ಸೌಹಾರ್ದದ ಮಂತ್ರವನ್ನು ಜಪಿಸುತ್ತಾರೆ. ಇಷ್ಟೆಲ್ಲಾ ರಾದ್ದಾಂತ ನಡೆಯುತ್ತಿರುವಾಗ ಸಿಗ್ರಮಿ ಹೊಸ ಬ್ರಾಹ್ಮಣ ಸನ್ಯಾಸಿ ಮಾಯವಾಗಿಬಿಡುತ್ತಾನೆ. ಚರ್ಚುಗಳು ಹುಟ್ಟಿಕೊಳ್ಳುತ್ತವೆ. ಪಾದ್ರಿಗಳ ಪ್ರವೇಶವಾಗುತ್ತದೆ. ಮತ ಧರ್ಮಗಳ ನಡುವಿನ ಸಂಘರ್ಷ ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ಸಂಘರ್ಷದಂತೆ ತೋರುತ್ತದೆ. ಮತ ಧರ್ಮಗಳಿಗಿಂತ 'ಮಾನವಧರ್ಮ'ವೇ, ಮುಖ್ಯ ಎಂಬ ಮಾತುಗಳು ಕೇಳಿ ಬರುತ್ತವೆ.

ಈ ನಡುವೆ ಬರದಿಂದ ಸೊರಗಿದ ರೈತ ದಂಗೆಕೋರರು ಪರಿಹಾರಕಾಗಿ ಅರಮನೆ ನ್ಯಾಯಾಲಯಗಳಿಗು ಮುತ್ತಿಗೆ ಹಾಕುತ್ತಾರೆ. ಮಠಾಧೀಶರು ಇನ್ನಿತರ ಮತೀಯ ಪ್ರಮುಖರು ಸಂಧಾನಕಾರರಾಗಿ ಪ್ರವೇಶ ಮಾಡುತ್ತಾರೆ. ಕಂದಾಯ ಲೆವಿ ಎಲ್ಲವನ್ನು ರದ್ದುಗೊಳಿಸಬೇಕೆಂಬ ಕೋರಿಕೆಯನ್ನು ಮುಂದಿಡುತ್ತಾರೆ. ಜೊತಯಲ್ಲೇ ಧರ್ಮಕಾರಣ, ಮತಾಂತರದ ಪಿಡುಗಿಗೂ ಪರಿಹಾರ ಬೇಡುತಾರೆ.

ಸಂಧಾನಕ್ಕಾಗಿ ಬರುವ ಶರಣರಿಗು ದಂಗೆಯ ಮುಖಂಡರಿಗೂ ಮೇಲ್ಜಾತಿಯ ಪ್ರಮುಖರಿಗೂ ಪ್ರತ್ಯೇಕವಾಗಿ 'ಪ್ರಸಾದ' ವ್ಯವಸ್ಥೆಯನ್ನು ಮಾಡಿಸಿ ಸಣ್ಣ ಗುಂಪುಗಳಾಗಿ ಸರದಿಯಲ್ಲಿ ಒಳಗೆ ಬರುವಂತೆ ವ್ಯವಸ್ಥೆ ಮಾಡಿರುತ್ತಾರೆ. ಹಾಗೆ ಬಂದ ಪ್ರತಿಯೊಬ್ಬರಿಂದಲೂ ಒತ್ತಾಯದಿಂದ ಖಾಸಗಿ ಮತ್ತು ಮಠದ ಆಸ್ತಿಗಳನ್ನು ರಾಜ್ಯ ಸುಪರ್ದಿಗೆ ಬರೆಸಿಕೊಳುತ್ತಾರೆ. ಪ್ರಸಾದ ಹಾಕುವ ನೆಪದಲ್ಲಿ ಮಂತ್ರಿಗಳ ಕುತಂತ್ರದಿಂದಾಗಿ ಸಂಧಾನಕ್ಕಾಗಿ ಬಂದಿದ್ದ ಶರಣರ ಮತ್ತು ಸಂಧಾನಕಾರ ಕಗ್ಗೋಲೆಯೂ ನಡೆದು ಹೋಗುತ್ತದೆ. ಇದು ಪ್ರಸಾದದ ಮನೆಯಲ್ಲ ಸವಿನಯದಿಂದ ನಮ್ಮನ್ನು ಸಾವಿನ ಕೂಪಕ್ಕೆ ಹಾಕುತ್ತಿದ್ದಾರೆ' ಎಂದು ಚೀರುತ್ತಾ ಹೊರಬಂದ ಸಂಧಾನಕಾರನೊಬ್ಬನನ್ನು ದ್ವಾರಪಾಲಕ ಬಾಯಿ ಮುಚ್ಚಿ ಮತ್ತೆ ಸಾವಿನ ಮನೆಗೆ ತಳ್ಳುತ್ತಾನೆ.

ಇಷ್ಟೆಲ್ಲಾ ನಡೆದು ಹೋದಮೇಲೆ, ನಡೆದು ಹೋದ ಘಟನೆಗಳ ಸಮೀಕ್ಷೆ ಮಾಡಲು ಸ್ವತಃ ಚಿಕ್ಕದೇವರಾಜ ಒಡೆಯರೇ ಬರುತ್ತಾರೆ. ಭಗ್ನವಾದ ಗುಡಿ -ಚರ್ಚು-ಬಸದಿಗಳು- ಮಠಗಳು ನಾಮಾವಶೇಷವಾಗಿರುವುದನ್ನು ನೋಡುತ್ತಲೇ ತಮ್ಮ ರಾಜ್ಯದ ಹಿತಕ್ಕಾಗಿ ಮಂತ್ರಿಗಳು ನಡೆಸಿದ ಸಂಚಿನ ಕೊಲೆಗೆ ಒಪ್ಪಿಗೆ ಕೊಟ್ಟಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾರೆ. ಜಾತಿ-ಧರ್ಮ ಮತ ಇವುಗಳಿಂದ ಬಿಡುಗಡೆಯ ಸಾಧ್ಯತೆಯ ಬಗ್ಗೆ ಆಲೋಚಿಸುತ್ತಾರೆ. ನಾನು ಸೋತರೂ ಪ್ರಜೆಗಳ ಹಿತವನ್ನು ರಾಜ್ಯ ಹಿತವನ್ನು ಕಾಪಾಡಬೇಕೆಂಬ ಅರಿವುಂಟಾಗುತ್ತದೆ. ಅದಕ್ಕಾಗಿ ಜಾತಿ ಮತ ಧರ್ಮಗಳನ್ನು ಮೀರಿದ 'ಸೆಕ್ಯುಲರ್' ಮನೋಧರ್ಮವನ್ನು ತರಲು ಘೋಷಿಸುತ್ತಾರೆ. 'ಜಾತಿ- ಮತ ಧರ್ಮಗಳು ಆಹಾರ ಆಚಾರಗಳು ಎಲ್ಲವೂ ನಿಮ್ಮ ನಿಮ್ಮ ಮನೆಯಲ್ಲಿರಲಿ, ಹೊಸ್ತಿಲ ದಾಟದಿರಲಿ. ಈ ರಾಕ್ಷಸೀ ಕೃತ್ಯಗಳನ್ನು ತೊಲಗಿಸಿ ನಾವೆಲ್ಲಾ ಮನುಷ್ಯರಾಗೋಣ - ಹೊಸಬೀಜ ಬಿತ್ತಿ, ಹೊಸಬೆಳೆಯನ್ನು ಬೆಳೆಯಿರಿ, ಹೊಸಗಾಳಿ ಬೆಳಕು ತೇಲಿಬರಲಿ' ಎಂಬ ಮಾತು(ಇಂದಿನ ರಾಜಕಾರಣಿಗಳ ಭಾಷಣದಂತೆ)ಗಳೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ಆಶಯವೆಷ್ಟೇ ಗಹನವಾಗಿದ್ದರೂ, ಪುಸ್ತಕ ಭಾಷೆಯ ಸಂಭಾಷಣೆ ಚರ್ಚೆ, ಪ್ರವಚನಗಳಿಂದ ನಾಟಕ ಪರಿಣಾಮಕಾರಿಯಾಗಲಾರದು. ಓದಬಹುದಷ್ಟೆ. ರಂಗ ಪಯೋಗದಿಂದ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ಮುಟ್ಟಬೇಕಾದರೆ ಹಾಡು ಕುಣಿತ, ನಾಟಕೀಯವಾದ ಭಾಷೆ ಕ್ರಿಯೆ ಸಂರ್ಘಗಳಿಂದ ದೃಶ್ಯ ಕಟ್ಟುವ ಸಾಧ್ಯತೆಗಳನ್ನು ಒಳಗೊಂಡಿರಬೇಕು. ಆದರೂ ನಾಟಕಕಾರರ ಸದಾಶಯ ಇಂದಿನ ಭಾರತದ ಸ್ಥಿತಿಯಲ್ಲಿ ತುಂಬ ಪ್ರಸ್ತುತವಾದುದೇ ಆಗಿದೆ. ಇದನ್ನು ರಂಗರೂಪವಾಗಿಸಲು ಪರಿಶ್ರಮಿಸಿರುವ ಡಾ. ಅರವಿಂದ ಮಾಲಗತ್ತಿಯವರನ್ನು ಅಭಿನಂದಿಸೋಣ.

-ಸತ್ಯನಾರಾಯಣರಾವ್ ಅಣತಿ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಮೇ 2018)

Related Books