About the Author

ಡಾ. ಬಿ.ಎ.ವಿವೇಕ ರೈ ಸಂಸ್ಕೃತಿ ಚಿಂತಕರು. ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಅವರ ಹುಟ್ಟೂರು ಪುತ್ತೂರು ತಾಲೂಕಿನ 'ಪುಣಚಾ'. (ಜನನ: 1946ರ ಡಿಸೆಂಬರ್ 8ರಂದು), ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರ ದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. 

ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು-ಪಾಂಡಿತ್ಯ ಉಳ್ಳವರು. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರು. ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥರಾಗಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ, ಕೇಂದ್ರ-ರಾಜ್ಯ ಸಾಹಿತ್ಯ ಅಕಾಡೆಮಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಅನುಭವವಿದೆ. 12 ಕ್ಕೂ ಹೆಚ್ಚು ಮಹತ್ವದ ಕೃತಿಗಳ ರಚಿಸಿದ್ದು, ತುಳು ಸಾಹಿತ್ಯ ಚರಿತ್ರೆ, ಸಮಗ್ರ ಕನ್ನಡ ಜೈನ ಸಂಪುಟಗಳು ಸೇರಿ ಹಲವು ಕೃತಿಗಳ ಸಂಪಾದನೆ, ಕನ್ನಡ ಸಾಹಿತ್ಯದ ಜರ್ಮನ್ ಅನುವಾದ ಮಾಡಿದ್ದಾರೆ.

ಕೃತಿಗಳು: ತುಳುಗಾದೆಗಳು, ತುಳು ಒಗಟುಗಳು, ತುಳವ ಸಂಸ್ಕೃತಿ, ತುಳು ಜಾನಪದ ಸಾಹಿತ್ಯ, ಅನ್ವಯಿಕ ಜಾನಪದ, ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು, ಜರ್ಮನಿಯ ಒಳಗಿನಿಂದ, ಚಿಲಿಯಲ್ಲಿ ಭೂಕಂಪ (ಹದಿನೆಂಟು ಕಥನಗಳು), ಮೊದಲ ಮೆಟ್ಟಿಲು (ಮುನ್ನುಡಿಗಳು ಮತ್ತು ಪ್ರಸ್ತಾವನೆಗಳು), ಕನ್ನಡ ದೇಸಿ ಸಮ್ಮಿಲನದ ನುಡಿಗಳು (ಉಪನ್ಯಾಸಗಳು), ಅಕ್ಕರ ಮನೆ (ಅನುಭವ, ಸಂಸ್ಕೃತಿ ಚಿಂತನೆ, ಅನುವಾದ, ಅಂಕಣಬರಹ, ಕವನ). ಅಂಕಣ ಬರಹಗಳು : ಗಿಳಿಸೂವೆ, ಇರುಳ ಕಣ್ಣು. ಎದುರ್ರಾ ಲೇಖನಗಳು : ಹಿಂದಣ ಹೆಜ್ಜೆ, ರಂಗದೊಳಗಣ ಬಹಿರಂಗ ಬ್ಲಾಗ್ ಬರಹಗಳು : ಬ್ಲಾಗಿಲನು ತೆರೆದು, ಸಂಶೋಧನಾ ಬರಹಗಳು : ಕನ್ನಡ ನುಡಿನಡೆಯ ಬರಹಗಳು ಇತ್ಯಾದಿ, ಅನುವಾದ : ನೆತ್ತರ ಮದುವೆ (ಫೆಡರಿಕೋ ಗಾರ್ಸಿಯಾ ಲೊರ್ಕನ ನಾಟಕದ ಕನ್ನಡರೂಪ), 80 ದಿನಗಳಲ್ಲಿ ವಿಶ್ವ ಪರ್ಯಟನೆ, ಸಂಸ್ಕೃತಿ ಚಿಂತನೆ : ಅರಿವು ಸಾಮಾನ್ಯವೆ, ಸಂಪಾದಿತ ಕೃತಿಗಳು : ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು, ಕಡೆಂಗೋಡ್ಲು ಸಾಹಿತ್ಯ, ಶಾಂಭವಿ, ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯ, ಪೆರುವಾಯಿ ಸುಬ್ಬಯ್ಯ ಶೆಟ್ಟಿಯವರ ತುಳು ಗಾದೆಗಳು, ಜನಪದ ಆಟಗಳು, ತುಳು ಕಬಿತಗಳು, ಮಲೆಕುಡಿಯರು, ಭೂತಾರಾಧನೆಯ ಬಣ್ಣಗಾರಿಕೆ (ಇತರರೊಡನೆ), ಯಕ್ಷಗಾನ ಪ್ರಸಂಗ ಸಂಪುಟ, ಹೊನ್ನಕಂಠಿ (66ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಂಕ), ಶತಮಾನದ ಕೊನೆಯಲ್ಲಿ ಶಿವರಾಮ ಕಾರಂತ, ಅಗ್ರಾಳ ಪುರಂದರ ರೈ ಸಮಗ್ರ ಸಾಹಿತ್ಯ, ರಾಘವಾಂಕನ ಸಮಗ್ರ ಕಾವ್ಯ, ರೂಪಾಂತರ (ಸಿ.ಎನ್.ರಾಮಚಂದ್ರನ್ ಬರಹ ಬದುಕು). ಗ್ರಂಥ ಸಂಪಾದನೆ : ತುಳು ಸಾಹಿತ್ಯ ಚರಿತ್ರೆ (ಬೃಹತ್ ಗ್ರಂಥ), ಸಮಗ್ರ ಕನ್ನಡ ಜೈನ ಸಾಹಿತ್ಯ-19 ಸಂಪುಟಗಳು, ಶರಣರ ವಚನಗಳ ತುಳು ಭಾಷಾಂತರ, ಮಂಗಳೂರು ದರ್ಶನ (ಮೂರು ಸಂಪುಟಗಳು), ಮಂಗಳೂರು ನಗರದ ಇತಿಹಾಸ ಸಂಶೋಧನೆ., ತುಳು ಪುಸ್ತಕಗಳು : ತುಳು ಬರವು ಸರವು, ನಾಲಾಯಿಡ್ಡ್ ನಾಲೂರುಗು ವಚನ. ಅಲ್ಲದೇ, ಇಂಗ್ಲಿಷ್ ಕೃತಿಗಳು: 'Siri Epic' as performed by GopalaNaika (two volumes), the tuebingen tulu manuscript, classical kannada poetry and prose: A reader (ಪ್ರಾಚೀನ ಕನ್ನಡ ಕಾವ್ಯಗಳ ಆಯ್ದ ಭಾಗಗಳ ಇಂಗ್ಲಿಷ್ ಅನುವಾದ). in her right hand she held a silver knife with small bells, English grammer just for you, oral traditions in south india, 'die fliegende eidenchse'.

ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ಜಾನಪದ, ಸಂಸ್ಕೃತಿ, ದೇಸಿ ಸಮ್ಮೇಳನ ಹಾಗೂ ಕುವೈಟ್‌ನ ವಿಶ್ವ ತುಳು ಸಮ್ಮೇಳನದ ಅಧ್ಯಕ್ಷತೆಯ ಗೌರವ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿವೆ.

ಸದ್ಯ, ಜರ್ಮನಿಯ ವ್ಯೂತ್‌ಬರ್ಗ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿದ್ದು, ಕನ್ನಡ-ತುಳು ಭಾಷಾ ಸಂಪತ್ತನ್ನು ವಿಶ್ವಕ್ಕೆ ಪರಿಚಯಿಸಿದ ಪ್ರಾಜ್ಞರು.

 

ಬಿ.ಎ. ವಿವೇಕ ರೈ

(08 Dec 1946)

Books about Author