About the Author

ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. ಬರವಣಿಗೆಯನ್ನು ಹವ್ಯಾಸವನ್ನಾಗಿಸಿಕೊಂಡಿರುವ ರಮೇಶ್ ಅವರು ಸುಮಾರು 600 ರಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲವೆನ್ನುವಂತೆ ರಮೇಶರು ಬರೆಯದ ವಿಷಯಗಳೇ ಇಲ್ಲ. ಆಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಪ್ರಿಯವೆನಿಸುವ ಕೃತಿಗಳ ರಚನೆಯಲ್ಲಿ ಅವರದ್ದು ಸಿದ್ಧಹಸ್ತ. ರಮೇಶರ ಮಕ್ಕಳ ಸಾಹಿತ್ಯದಲ್ಲಿ ವಿಜ್ಞಾನಿಗಳು, ಸ್ವಾತಂತ್ರ್ಯಯೋಧರು, ದೇಶಭಕ್ತರು, ಕವಿಗಳು, ಕಲಾವಿದರು, ದಾರ್ಶನಿಕರು, ಸಮಾಜ ಸುಧಾರಕರು ಮುಂತಾದವರ ಕುರಿತಾದ ಕೃತಿಗಳು ಸೇರಿವೆ. ಇದಲ್ಲದೆ ಅವರ ಕಥಾ ಸಂಕಲನಗಳು, ನಾಟಕಗಳು ಮುಂತಾದ ಬರಹಗಳು ಕೂಡಾ ಅನೇಕವಿವೆ. ಹಿಪೊಕ್ರೆಟಿಸ್, ಗ್ಯಾಲನ್, ಜಗದೀಶ ಚಂದ್ರಬೋಸ್, ಯೂಕ್ಲಿಡ್, ಮಹೇಂದ್ರಲಾಲ್ ಸರ್ಕಾರ್, ಭಾರತೀಯ ವಿಜ್ಞಾನಿಗಳು, ಪಾಶ್ಚಾತ್ಯ ವಿಜ್ಞಾನಿಗಳು, ಸರ್ದಾರ್ ವಲ್ಲಭಾಯ್ ಪಟೇಲ್, ಸರೋಜಿನಿ ನಾಯಿಡು, ಸ್ವಾತಂತ್ರ್ಯದ ಕಿಡಿಗಳು, ಮುಂತಾದ ನೂರಾರು ಮಕ್ಕಳ ಕೃತಿಗಳನ್ನು ಅವರು ಬರೆದಿದ್ದಾರೆ. ಪ್ರೌಢರಿಗಾಗಿ ಸೂಕ್ತಿಗಳು, ಸುಭಾಷಿತಗಳು, ರಾಷ್ಟ್ರೀಯ ದಿನಾಚರಣೆಗಳು, ಪ್ರಬಂಧಗಳು, ನಿಘಂಟುಗಳು, ನಮ್ಮ ದೇವಾಲಯಗಳು, ಕರ್ನಾಟಕದ ವಾಸ್ತುಶಿಲ್ಪ, ಭಾರತದ ನದಿಗಳು, ಭೌಗೋಳಿಕದರ್ಶನ, ವಿಜ್ಞಾನ ಕೃತಿಗಳು, ಆರೋಗ್ಯ ಭಾಗ್ಯದ ಕೃತಿಗಳು, ಔಷಯ ಪುಸ್ತಿಕೆಗಳು, ವ್ಯಕ್ತಿ ಪರಿಚಯ ಕೃತಿಗಳು ಸೇರಿ ಅವರು ಬರೆದಿರುವ ಕೃತಿಗಳ ಸಂಖ್ಯೆ 500ರ ಸಮೀಪದ್ದು. ಇಂಗ್ಲಿಷ್‌ನಲ್ಲಿ ಪ್ರಕಟವಾಗಿರುವ ಅವರ ಕೃತಿಗಳೂ ನೂರಾರು. ಅವರ ಕೃತಿಗಳು ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ.

ಬೆ.ಗೋ. ರಮೇಶ್

(22 Aug 1945)

Books by Author