About the Author

ದೇಜಗೌ ಎಂದು ಚಿರಪರಿಚಿತರಾಗಿದ್ದ ದೇವೇಗೌಡ ಜವರೇಗೌಡ ಕೃಷಿಕ ಕುಟುಂಬದಿಂದ ಬಂದವರು. ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ 1918ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡ- ತಾಯಿ ಚೆನ್ನಮ್ಮ. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ಎಂ.ಎ. ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ (1944) ಕೆಲಸಕ್ಕೆ ಸೇರಿದ ಅವರು ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಯಾಗಿ ನಿವೃತ್ತರಾದರು. ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ದೇಜಗೌ ಟ್ರಸ್ಟ್ ಸ್ಥಾಪಿಸಿದ ಇವರು ಜನಪದವಸ್ತು ಸಂಗ್ರಹಾಲಯ, ಮೈಸೂರು ವಿಶ್ವವಿದ್ಯಾಲಯದಲ್ಲಿ ಜನಪದ ಭಾಷಾಂತರ ಡಿಪ್ಲೋಮಾ ತರಗತಿಗಳನ್ನು ಪ್ರಾರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಮಿತಿ ಸದಸ್ಯರಾಗಿ. ಕರ್ನಾಟಕ ಜಾನಪದ ಪರಿಷತ್ತು, ರಾಜ್ಯ ಕೇಂದ್ರ ಸಾಹಿತ್ಯ ಅಕಾಡೆಮಿಗಳು ವಯಸ್ಕರ ಶಿಕ್ಷಣ ಸಮಿತಿ, ಮೊದಲಾದ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನ (1970) ಅಧ್ಯಕ್ಷತೆ ವಹಿಸಿದ್ದರು.

ಟಾಲ್‍ಸ್ಟಾಯ್ ಅವರ ಕಾದಂಬರಿ ಅನುವಾದ ಪುನರುತ್ಥಾನಕ್ಕೆ ಸೋವಿಯಟ್‍ಲ್ಯಾಂಡ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್, ತಿರುವಾಂಕೂರಿನ ದ್ರಾವಿಡಭಾಷಾ ವಿಜ್ಞಾನ ಸಂಸ್ಥೆಯಿಂದ ಫೆಲೋಷಿಪ್, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿದ್ದವು. 2016ರ ಏಪ್ರಿಲ್ 30ರಂದು ನಿಧನರಾದರು.

ಅವರ ಪ್ರಮುಖ ಕೃತಿಗಳು: 

ಕಬ್ಬಿಗರ ಕಾವಂ (ಸಂಪಾದನೆ), ಲೀಲಾವತಿ ಪ್ರಬಂಧ (ಸಂಪಾದನೆ), ಶ್ರೀರಾಮಾಯಣ ದರ್ಶನಂ ವಚನ ಚಂದ್ರಿಕೆ, ನಂಜುಂಡ ಕವಿ (ವಿಮರ್ಶೆ),  ಕಡುಗಲಿ ಕುಮಾರರಾಮ, ವಿದೇಶದಲ್ಲಿ ನಾಲ್ಕು ವಾರ (ಪ್ರವಾಸ), ಧರ್ಮಾಮೃತ ಸಂಗ್ರಹ (ಜೈನಶಾಸ್ತ್ರ), ಹೋರಾಟದ ಬದುಕು (ಆತ್ಮಕಥೆ) ಇತ್ಯಾದಿ.

ದೇಜಗೌ (ದೇ. ಜವರೇಗೌಡ)

(06 Jul 1918-30 Apr 2016)