About the Author

ಸೂಕ್ಷ್ಮ ಸಂವೇದನೆಯಿಂದ ಬರೆಯುವ ಜ್ಯೋತಿ ಗುರುಪ್ರಸಾದ್‌ (1965) ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಆರ್.ಜ್ಯೋತಿ ಎಂಬ ಹೆಸರಿನ ಇವರ ಕಾವ್ಯನಾಮ ಜ್ಯೋತಿ ಗುರುಪ್ರಸಾದ. ಟಿ. ನರಸೀಪುರ ಮೂಲದವರಾದ ಅವರು ಟಿ. ನರಸೀಪುರ, ಮಂಡ್ಯ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಗೃಹಸ್ಥ ಜೀವನಕ್ಕೆ ಕಾಲಿಟ್ಟು ಕಾರ್ಕಳಕ್ಕೆ ಬಂದರು. ಕಾರ್ಕಳದ ಭುವನೇಂದ್ರ ಕಾಲೇಜು, ಕ್ರೈಸ್ಟ್‌ಕಿಂಗ್‌ ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಕಾರ್ಕಳದ ಎಸ್.ವಿ.ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಜ್ಯೋತಿ ಅವರ ಮೊದಲ ಕವನ ಸಂಕಲನ’ಚುಕ್ಕಿ’ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು. 'ಮಾಯಾಪೆಟ್ಟಿಗೆ’, 'ವರನಂದಿ ಪ್ರತಿಮೆ’, 'ಜಟಾಯು ಪಕ್ಷಿಗೆ ಶ್ರದ್ಧಾಂಜಲಿ’ ಅವರ ಪ್ರಕಟಿತ ಕವನ ಸಂಗ್ರಹಗಳು. ಅಗ್ನಿ, ಸಂವಾದ, ವಾರ್ತಾಭಾರತಿ ಮೊದಲಾದ ಪತ್ರಿಕೆಗಳಲ್ಲಿ ಅವರ ಅಂಕಣ ಬರೆಹಗಳು ಪ್ರಕಟವಾಗಿವೆ. ಜ್ಯೋತಿ ಅವರ ಅಂಕಣ ಬರಹಗಳಿಗೆ ಡಾ. ಹಾಮಾನಾ ಪ್ರಶಸ್ತಿ ಬಂದಿದೆ. ಪದ್ಯ-ಗದ್ಯ ಸಾಹಿತ್ಯಕ್ಕೆ ಕಡೆಂಗೋಡ್ಲು, ಸಾಹಿತ್ಯ ಸೇತು, ನೀಲಗಂಗಾ, ಅಮ್ಮ, ಲೇಖಕಿ, ಗೀತಾ ದೇಸಾಯಿ ದತ್ತಿ, ನಿರತ ಸಾಹಿತ್ಯ, ಉಗ್ರಾಣ ಸಾಹಿತ್ಯ ಪ್ರಶಸ್ತಿ ಸಂದಿವೆ.

ಅವರ ಜಟಾಯು ಪಕ್ಷಿಗೆ ಶ್ರದ್ಧಾಂಜಲಿ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ, ವರನಂದಿ ಪ್ರತಿಮೆ’ ಕವನ ಸಂಕಲನಕ್ಕೆ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ರಾಷ್ಟ್ರೀಯ ಕಾವ್ಯ ಪುರಸ್ಕಾರ ಪ್ರಾಪ್ತವಾಗಿವೆ. ಹದಿಮೂರನೇ ಕಾರ್ಕಳ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಪಡೆದಿರುವ ಅವರು ಆಕಾಶವಾಣಿಯ ಎ ಗ್ರೇಡ್ ನಾಟಕ ಕಲಾವಿದೆ. ಅವರ ಕವಿತೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂ ಭಾಷೆಗಳಿಗೆ ಅನುವಾದಗೊಂಡಿವೆ. ಅವರ ಇತ್ತೀಚಿನ ಕೃತಿ 'ಮನಸು ಮಾಗಿದ ಸುಸ್ವರ' ದೇಸಿ  ಪುಸ್ತಕ ಪ್ರಕಾಶನದಿಂದ ಪ್ರಕಟಗೊಂಡಿದೆ. 

ಜ್ಯೋತಿ ಗುರುಪ್ರಸಾದ್

(16 Jul 1965)

Awards

BY THE AUTHOR