ಕಣ್ಣ ಭಾಷೆ

Author : ಜ್ಯೋತಿ ಗುರುಪ್ರಸಾದ್

Pages 126

₹ 140.00




Published by: ಹೊಸಸಂಜೆ ಪ್ರಕಾಶನ
Address: ಹೊಸಸಂಜೆ ಪ್ರಕಾಶನ, ಕಾರ್ಕಳ

Synopsys

ಸಾಮಾನ್ಯ ಪದಗಳನ್ನು ಕವಿ ಅಥವಾ ಕಥೆಗಾರರು ಚಮತ್ಕಾರದಿಂದ ಬಳಸಿ ಓದುಗರನ್ನು ಬೆರಗೊಳಿಸುತ್ತಾರೆ. ಸಂಗೀತದಲ್ಲಿ ಅದೇ ಪದ ಹೊಸ ಭಾವಗಳನ್ನು ಸೃಷ್ಟಿಸಬಹುದು. ಪದಕ್ಕಿರುವ ತಾಕತ್ತು, ಬಳಸುವವನ ಶಕ್ತಿ ಎರಡೂ ದೊಡ್ಡದು.ಅ'ದಿಂದ 'ಳ' ವರೆಗಿನ ಕನ್ನಡ ವರ್ಣಮಾಲೆಯ 46 ಅಕ್ಷರಗಳಿಂದ ತಲಾ ಒಂದೊಂದು ಪದವನ್ನು ಆಯ್ದುಕೊಂಡಿರುವ ಜ್ಯೋತಿ, ಕಿರು ಟಿಪ್ಪಣಿಗಳ ಮೂಲಕ ಪದಕ್ಷಿಣೆ ಮಾಡಿಸಿದ್ದಾರೆ. ಎಲೆ ಪದದ ಉದಾಹರಣೆ ತೆಗೆದುಕೊಳ್ಳಿ. ಎಲೆಯ ಅರ್ಥವನ್ನು ಎಳೆಎಳೆಯಾಗಿ ಮೊದಲು ಬಿಡಿಸಿಟ್ಟು, 'ಕೋಟನ್ ಗಿಡದ ಎಲೆ ಮನೆಯ ಮುಂದಿನ ಅಲಂಕಾರ ಪ್ರಿಯರಿಗೆ ಹಿತವಾಗಿ ಕಂಡರೆ, ತುಳಸಿ ಎಲೆ ಶ್ರೀಕೃಷ್ಣನಿಗೆ ಅರ್ಪಿಸಬಲ್ಲ ಪ್ರೇಮದ ಸಂಕೇತವಾಗಿ, ಸತ್ಯಭಾಮೆಯ ಅಹಂಕಾರವನ್ನು ತಿಳಿಗೊಳಿಸಿದ ಸಂದೇಶವಾಗಿ, ಶುದ್ದಗಾಳಿಯ ವಾಹಕವಾಗಿ, ರೋಗಕ್ಕೆ ಮದ್ದಾಗಿ, ದೇವತೆಯ ಹೆಸರನ್ನು ಹೊತ್ತೇ ಮನ್ನಣೆ ಪಡೆದಿದೆ. ಹಾಗೆಯೇ ಮೈಯೆಲ್ಲಾ ತುರಿಕೆ ತರಿಸುವ ತುರಿಕೆ ಸೊಪ್ಪಿನ ಎಲೆಯೂ ಇದೆ! ನಮ್ಮ ಪಾತ್ರ ಯಾವ ಎಲೆಯದ್ದು?' ಎನ್ನುವ ಪ್ರಶ್ನೆಯನ್ನು ಜ್ಯೋತಿ ಗುರುಪ್ರಸಾದ್‌‌ರವರು “ಕಣ್ಣ ಭಾಷೆ”ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಜ್ಯೋತಿ ಗುರುಪ್ರಸಾದ್
(16 July 1965)

ಸೂಕ್ಷ್ಮ ಸಂವೇದನೆಯಿಂದ ಬರೆಯುವ ಜ್ಯೋತಿ ಗುರುಪ್ರಸಾದ್‌ (1965) ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಆರ್.ಜ್ಯೋತಿ ಎಂಬ ಹೆಸರಿನ ಇವರ ಕಾವ್ಯನಾಮ ಜ್ಯೋತಿ ಗುರುಪ್ರಸಾದ. ಟಿ. ನರಸೀಪುರ ಮೂಲದವರಾದ ಅವರು ಟಿ. ನರಸೀಪುರ, ಮಂಡ್ಯ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಗೃಹಸ್ಥ ಜೀವನಕ್ಕೆ ಕಾಲಿಟ್ಟು ಕಾರ್ಕಳಕ್ಕೆ ಬಂದರು. ಕಾರ್ಕಳದ ಭುವನೇಂದ್ರ ಕಾಲೇಜು, ಕ್ರೈಸ್ಟ್‌ಕಿಂಗ್‌ ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಕಾರ್ಕಳದ ಎಸ್.ವಿ.ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಜ್ಯೋತಿ ಅವರ ಮೊದಲ ಕವನ ಸಂಕಲನ’ಚುಕ್ಕಿ’ ...

READ MORE

Reviews

ಜೀವನೋತ್ಸಾಗದ ಸರಳ ಅಭಿವ್ಯಕ್ತಿಗಳು

ಜ್ಯೋತಿ ಗುರುಪ್ರಸಾದ್ ಅವರ 'ಕಣ್ಣ ಭಾಷೆ' ಕನ್ನಡದಲ್ಲೊಂದು ಹೊಸ ಪ್ರಯೋಗ, ಕನ್ನಡ ವರ್ಣಮಾಲೆಯ ಒಂದೊಂದು ಅಕ್ಷರವನ್ನೂ ಒಂದು ಜಿಗಿಹಲಗೆಯನ್ನಾಗಿ ಮಾಡಿಕೊಂಡು ತಮ್ಮ ಮನೋಲಹರಿಗೆ ಹೊಂದಿಕೆಯಾಗುವ ವಿಚಾರ, ವಸ್ತು, ಸಂಗತಿಗಳನ್ನು ಕುರಿತು ತಮ್ಮ ವಿಚಾರಗಳನ್ನು ಓದುಗ ರೊ೦ದಿಗೆ ಹಂಚಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಶೈನಾ' ಎಂಬ ಕೈಬರಹದ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣಗಳ ಸಂಗ್ರಹ ಈ ಕೃತಿ. ಹಾಗಾಗಿ ಅಂಕಣಬರಹಕ್ಕೆ ಸಹಜವಾದ ವಸ್ತು ವೈವಿಧ್ಯತೆ, ಹೆಚ್ಚು ಆಳವಿಲ್ಲದ ಹರವು ಇದರ ಲಕ್ಷಣವೂ ಆಗಿದೆ.

ಕನ್ನಡ ಭಾಷೆ ತಮಗೆ ಕಣ್ಣಿನಷ್ಟೇ ಮುಖ್ಯ. ಹಾಗಾಗಿ ತಮ್ಮ ಅಂಕಣದ ಹೆಸರೂ ಕಣ್ಣ ಭಾಷೆಯಾಯಿತು, ಈ ಭಾವಕ್ಕೊಂದು ಖಚಿತ ಅಭಿವ್ಯಕ್ತಿ ದೊರೆತದ್ದು ಕನ್ನಡ ಚಲನಚಿತ್ರ ಗೀತೆಯಿಂದ ಎನ್ನುವ ಲೇಖಕಿ ಕನ್ನಡ ವಾಙ್ಮಯದಿಂದ ಹೆಕ್ಕಿ ತೆಗೆದ ಅಸಂಖ್ಯ ಉದಾಹರಣೆಗಳನ್ನು ಬಳಸುವ ಹಾಗೇ ಕನ್ನಡ ಚಲನ ಚಿತ್ರಗೀತೆಗಳ ಸಾಲುಗಳನ್ನೂ ಚಲನಚಿತ್ರದ ಕಥೆಗಳನ್ನೂ ಉದಾಹರಿಸುವ ಮೂಲಕ ಹಳೆಯ ಎಷ್ಟೋ ಕನ್ನಡ ಚಲನ ಚಿತ್ರಗೀತೆಗಳ ಸಾಹಿತ್ಯಕ ಮೌಲ್ಯವನ್ನು ಗುರುತಿಸುವ ಕೆಲಸವನ್ನು ಮಾಡಿದ್ದಾರೆ ಎನ್ನಬಹುದು.

ತಮಿಳು ಮಾತೃಭಾಷೆಯ ಕನ್ನಡ ದಿಗ್ಗಜಗಳಾದ ಮಾಸ್ತಿ, ಪುತಿನ, ಕೈಲಾಸಂ, ಜಿ ಪಿ ರಾಜರತ್ನಂ ತರಹದವರ ಪರಂಪರೆಯ ಹೊಸ ತ;ಎಮಾರಿನ ಮುಂದುವರಿಕೆಯಾದ ಜ್ಯೋತಿ ಗುರುಪ್ರಸಾದ್ ಅವರೂ ಸಹ 'ಕಣ್ಣ ಭಾಷೆ' ಯಂತಹ ಪ್ರಯೋಗಗಳ ಮೂಲಕ ತಮ್ಮದೇ ಆದ ಕೊಡುಗೆಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡುವ ಪ್ರಯತ್ನ ನಡೆಸಿದ್ದಾರೆ. ತಮಿಳು ಅವರ ಹೆತ್ತೊಡಲಾದರೆ ಕನ್ನಡವು ಅವರನ್ನು ಪೊರೆದ ಮಡಿಲು. ಈ ಹಿನ್ನೆಲೆಯು ಅವರ ಅರಿವನ್ನು ಹೆಚ್ಚಿಸಿ ಅವರ ದೃಷ್ಟಿಯನ್ನು ವಿಶಾಲಗೊಳಿಸಿದೆ.

* ತಮ್ಮ ಬರವಣಿಗೆಯುದ್ದಕ್ಕೂ ತಾವು ಅನುಸಂಧಾನ ಮಾಡುವ ಬಹುತೇಕ ಸಂಗತಿಗಳಲ್ಲಿ ಜ್ಯೋತಿಯವರು ಸಂಭ್ರಮ ಪಡುತ್ತಾರೆ, ಸಂಭ್ರಮವನ್ನು ಹಂಚುತ್ತಾರೆ, ಸುಂದರ ಹೂದೋಟದಲ್ಲಿ ಜಿಗಿದಾಡಿ ಜೀರುಂಡೆಗಳನ್ನು ಹಿಡಿದು ಖುಷಿಪಟ್ಟು ಮತ್ತೆ ಹಾರಿ ಬಿಡುವ ಮಗುವಿನ ಹಾಗೆ, ಕುವೆಂಪು, ಬೇಂದ್ರೆ, ಅಡಿಗ, ಪಂಪ, ಶಿಶುನಾಳ ಶರೀಫ, ಜಾನಪದ, ವಚನ, ಹೀಗೆ ಎಲ್ಲೆಲ್ಲೋ ಸುಳಿದಾಡಿ ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ತಾವು ಓದಿ ಖುಷಿಪಟ್ಟ ಕಾವ್ಯದ ಸಾರವನ್ನು ವಿಫುಲವಾಗಿ ಓದುಗರಿಗೂ ಹಂಚುತ್ತಾರೆ. ಲಿಂಗ ತಾರತಮ್ಯ, ಮತೀಯವಾದ, ಪರಿಸರ ಕಾಳಜಿ, ರೈತರ ಆತ್ಮಹತ್ಯೆಯಂತಹ ಸಾಮಾಜಿಕ ಸಮಸ್ಯೆಗಳು ಹೀಗೆ ಪ್ರಚಲಿತ ಸಮಕಾಲೀನ ಸಂಗತಿಗಳನ್ನು ಸಮಸ್ಯೆಗಳನ್ನು ಕುರಿತು ಅರೋಗ್ಯಕರ ರೀತಿಯಲ್ಲಿ ವಿವೇಚಿಸುತ್ತಾರೆ. ಕೆಲವು ಸಂಗತಿಗಳನ್ನು ಕೇವಲ ಸಾಹಿತ್ಯದ ಹಿನ್ನೆಲೆಯಲ್ಲಿ ಮಾತ್ರವೇ ಪರಿಗಣಿಸದೆ ಅವನ್ನು ವಿಭಿನ್ನ ದೃಷ್ಟಿಯಿಂದಲೂ ನೋಡುತ್ತಾರೆ. ನಮಸ್ಕಾರ ಮಾಡುವ ಅಂಗಿಕ ಚಟುವಟಿಕೆಯ ಬಗ್ಗೆ ಬರೆಯುತ್ತಾ ಅಂಗವಿಕಲರ ನೋವನ್ನು ಸ್ಮರಿಸುತ್ತ ಮಾನವೀಯತೆಯನ್ನು ಮೆರೆಯುತ್ತಾರೆ. ಔಷಧಿಯ ಬಗ್ಗೆ ಬರೆಯುತ್ತಾ ಇಂದು ವೈದ್ಯಕೀಯ ಕ್ಷೇತ್ರವು ಒಂದು ದಂದೆ ಮಾತ್ರವಾಗಿರುವುದನ್ನು ಕುರಿತು ವಿಷಾದಿಸುತ್ತಾರೆ. ಒಟ್ಟಾರೆ ಒಂದು ಪುಟಿಯುವ ಜೀವನೋತ್ಸಾಹದ ಅಕ್ಷರ ಅಭಿವ್ಯಕ್ತಗಳಾಗಿರುವ ಈ ಕಿರು ಲೇಖನಗಳು ತನ್ನ ವಸ್ತು ವೈವಿಧ್ಯಮಯ ಮತ್ತು ಸರಳ ಶೈಲಿಗಳಿಂದಾಗಿ ಓದುಗರ ಮನ ಮುಟ್ಟುವಂತಿದ್ದು ಚಿಂತನೆಗೆ ಹಚ್ಚುವಂತಿವೆ. 

-ಎಂ. ರಾಜು

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಜುಲೈ 2018)

 

Related Books