About the Author

ಕನ್ನಡ ವಿಮರ್ಶಾಲೋಕದಲ್ಲಿ ಕಿ.ರಂ. ಎಂದೇ ಚಿರಪರಿಚಿತರಾಗಿದ್ದರು ಕಿತ್ತಾನೆ ರಂಗಣ್ಣ ನಾಗರಾಜ್ ಅವರು. ಅಪಾರ ಶಿಷ್ಯವರ್ಗ ಹೊಂದಿದ್ದ ಕಿ.ರಂ. ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರ ಶಿಷ್ಯವರ್ಗದಲ್ಲಿ ಕ್ಲಾಸ್‌ರೂಮ್‌ನಲ್ಲಿ ಪಾಠ ಕೇಳಿದ ವಿದ್ಯಾರ್ಥಿಗಳಿಗಿಂತ ಕಾವ್ಯಾಸಕ್ತ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಹಾಸನ ಜಿಲ್ಲೆಯ ’ಕಿತ್ತಾನೆ’ಯಲ್ಲಿ 1943ರ ಡಿಸೆಂಬರ್ 5 ರಂದು ಜನಿಸಿದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ 'ಬಿ.ಎ.ಪದವಿ' ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (ಎಂ.ಎ) ಪದವಿ ಪಡೆದರು.

ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಕಿ.ರಂ.  ಅವರು ನಂತರ ಮೂರು ದಶಕಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಪ್ರಾಧಾಪಕರಾಗಿದ್ದರು. ಎರಡು ವರ್ಷ ಹ೦ಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧಾಪಕರಾಗಿದ್ದ ಅವರು ಕನ್ನಡ ವಿಶ್ವವಿದ್ಯಾಲಯದ ಬೆಂಗಳೂರಿನಲ್ಲಿ ಕನ್ನಡ ವಿಶ್ವವಿದ್ಯಾನಿಲಯದ ವತಿಯಿಂದ ಎಂ. ಫಿಲ್ , ಪಿ ಎಚ್ ಡಿ ಪದವಿಗಾಗಿ ಸಂಶೋಧನಾ ಅವಕಾಶ ಕಲ್ಪಿಸುವ ಕಾವ್ಯಮಂಡಲ ಸಂಸ್ಥೆಯ ನಿರ್ದೇಶಕರಾಗಿದ್ದರು.  ನ್ಯಾಷನಲ್ ಕಾಲೇಜು ಹಾಗೂ ಜೈನ್ ವಿಶ್ವವಿದ್ಯಾಲಯಗಳ ಕನ್ನಡ ಸ್ನಾತಕೋತ್ತರ ಕೇಂದ್ರಗಳ ಸಂದರ್ಶಕ ಪ್ರಾಧಾಪಕರಾಗಿದ್ದ ಅವರು ಹಲವು ವಿಶ್ವವಿದ್ಯಾಲಯಗಳ ಸಾತಕೋತ್ತರ ಹಾಗೂ ಸ್ನಾತಕ ಪದವಿಗಳ ಪಠ್ಯಕ್ತಮ ರಚನೆಯಲ್ಲಿ ಭಾಗಿಯಾಗಿದ್ದರು.

ಕಿ.ರಂ. ಅವರೊಂದಿಗೆ ಪ್ರೇಮ ವಿವಾಹ ಆದ ವಿಜಯಲಕ್ಷ್ಮಿ ಹೆಸರಾಂತ ಅನುವಾದಕಿಯಾಗಿದ್ದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಸದಸ್ಯರಾಗಿದ್ದ ಕಿ.ರಂ. ಅವರು ಬರೆದದ್ದು ಬಹಳ ಕಡಿಮೆ. ’ನೀಗಿಕೊಂಡ ಸಂಸ’ ಮತ್ತು ’ಕಾಲಜ್ಞಾನಿ ಕನಕ’ ಎಂಬ ಎರಡು ನಾಟಕಗಳನ್ನು ಪ್ರಕಟಿಸಿದ್ದ ಅವರ ಎಲ್ಲ ಕೃತಿಗಳನ್ನು ನಟರಾಜ ಹುಳಿಯಾರ್‌ ಪುಸ್ತಕ ಪ್ರಾಧಿಕಾರಕ್ಕಾಗಿ ಸಂಕಲಿಸಿ ಪ್ರಕಟಿಸಿದ್ದಾರೆ..

ವಚನಕಮ್ಮಟ, ಆಪತ್ಕಾಲೀನ ಕವಿತೆಗಳು, ಕುವೆಂಪು ನುಡಿಚಿತ್ರ ,ಬಹುರೂಪಿ ಎಂಬ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಎಸ್. ವಿ. ಪರಮೇಶ್ವರಭಟ್ಟ ಪ್ರಶಸ್ತಿ, ಡಾ.ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ, ಡಾ.ಎಲ್.ಬಸವರಾಜು ಪ್ರಶಸ್ತಿ, ಕರ್ನಾಟಕ ಅಕಾಡೆಮಿ ಫೆಲೋಶಿಪ್, ಕನ್ನಡ ಪುಸ್ತಕ ಪ್ರಾಧಿಕಾರದ ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ

ಮಾನು ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

2010ರ ಆಗಸ್ಟ್,7ರಂದು ಹೃದಯಾಘಾತದಿಂದ ಮರಣಿಸಿದರು. ಅಂದು ಸಂಜೆ ಸುಚಿತ್ರಾ ಫಿಲಂ ಸೊಸೈಟಿ ಸಭಾಂಗಣದಲ್ಲಿ ಬೇಂದ್ರೆ ಕಾವ್ಯದ ಬಗ್ಗೆ ಸುಮಾರು ಎರಡು ಗಂಟೆ ಕಾಲ ಉಪನ್ಯಾಸ ನೀಡಿದ ನಂತರ ನಿವಾಸಕ್ಕೆ ತೆರಳಿದ ನಂತರ ಎದೆ ನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಕಾವ್ಯವನ್ನು ಉಂಡು-ಉಟ್ಟ ಕಿ.ರಂ. ಅವರ ಕಾವ್ಯಪ್ರೀತಿಯೇ ಅವರನ್ನು ನಾಡಿನಾದ್ಯಂತ ಶಿಷ್ಯವರ್ಗ ಹೆಚ್ಚಿಸಲು ಕಾರಣವಾಗಿತ್ತು.

ಕಿ.ರಂ. ನಾಗರಾಜ

(05 Dec 1943-07 Aug 2010)

BY THE AUTHOR