About the Author

ಹಿರಿಯ ಸಾಹಿತಿ - ಸಂಶೋಧಕರಾದ ಎಂ. ಚಿದಾನಂದ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಜನಿಸಿದರು. ತಂದೆ ಕೊಟ್ಟೂರಯ್ಯ ಮತ್ತು ತಾಯಿ ಪಾರ್ವತಮ್ಮ. 1931ರ ಮೇ 10 ರಂದು ಜನಿಸಿದ ಅವರು ನೀತಿಗೆರೆ, ಹಿರೇಕೋಗಲೂರು, ಸಂತೇಬೆನ್ನೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದರು. ನಂತರ ದಾವಣಗೆರೆಯಲ್ಲಿ ಪ್ರೌಢಶಾಲೆ-ಇಂಟರ್ ಮೀಡಿಯಟ್ ಶಿಕ್ಷಣ (1950) ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ. (ಆನರ್ಸ್) ಪದವಿ (1953) ಪಡೆದರು. ಅಧ್ಯಾಪಕರಾಗಿ ನೇಮಕಗೊಂಡರು. ನಂತರ ಎಂ. ಎ. ಪದವಿ (1957) ಪ್ರಥಮ ರ್‍ಯಾಂಕ್‌ನೊಂದಿಗೆ ಗಳಿಸಿದರು. 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ಪ್ರೌಢ ನಿಬಂಧಕ್ಕೆ ಪಿಎಚ್.ಡಿ. ಪದವಿ (1964) ಪಡೆದರು. ಈ ಪ್ರಬಂಧವು ಕನ್ನಡ ಸಂಶೋಧನ ಕ್ಷೇತ್ರದಲ್ಲಿ ತುಂಬಾ ಮಹತ್ವಪೂರ್ಣ ಕೃತಿ ಎಂದು ಪರಿಗಣಿಸಲಾಗುತ್ತದೆ. ನಂತರ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕ (1967-68) ಆಗಿದ್ದುಕೊಂಡು ಭಾಷಾ ವಿಜ್ಞಾನದಲ್ಲಿ ಪೋಸ್ಟ್ ಡಾಕ್ಟೋರಲ್ ಅಧ್ಯಯನ ನಡೆಸಿದರು. ಎರಡನೆಯ ಬಾರಿಗೆ ಅಮೇರಿಕೆಗೆ ಭೇಟಿ (1979) ನೀಡಿ, ಸ್ಟ್ಯಾನ್‌ ಫೋರ್‍ಡ್‌ ವಿಶ್ವವಿದ್ಯಾಲಯದಲ್ಲಿ 4ನೇ ಅಂತಾರಾಷ್ಟ್ರೀಯ ಐತಿಹಾಸಿಕ ಭಾಷಾವಿಜ್ಞಾನ ಸಮ್ಮೇಳನದ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಅಮೇರಿಕದ ಹಲವು ವಿಶ್ವವಿದ್ಯಾಲಯಗಳಲ್ಲಿ ದ್ರಾವಿಡ ಭಾಷೆಗಳ ಅಧ್ಯಯನವನ್ನು ನಡೆಸಲು ಕಾರಣರಾಗಿದ್ದಾರೆ. ತಿರುವನಂತಪುರದ ದ್ರಾವಿಡ ಭಾಷಾ ವಿಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿ (1983-84) ಸೇವೆ ಸಲ್ಲಿಸಿದ್ದಾರೆ.

ಚಿದಾನಂದಮೂರ್ತಿ ಅವರು ಬಿ.ಎ. (ಆನರ್ಸ್‌) ಪದವಿ ಪಡೆದ ನಂತರ ಆರಂಭದಲ್ಲಿ ಕೆಲವು ವರ್ಷ ಪದವಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿಗೆ ವರ್ಗಾವಣೆ ಪಡೆದರು. 1960ರಲ್ಲಿ ಮೈಸೂರು ಮಾನಸ ಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾದರು. 1968ರಲ್ಲಿ ಕನ್ನಡ ಉಪಪ್ರಾಧ್ಯಾಪಕರಾದ ಅವರು ಬಳಿಕ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿ ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಸಾರ್ಥಕ ಸೇವೆ ಸಲ್ಲಿಸಿ, 19990ರಲ್ಲಿ ಸ್ವಯಂ ನಿವೃತ್ತಿ ಪಡೆದರು.

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶ, ಎಪಿಗ್ರಾಫಿಯಾ ಕರ್ನಾಟಕ, 

ಕನ್ನಡ ನಿಘಂಟಿನ ಸದಸ್ಯ ಮಂಡಳಿಗಳಲ್ಲಿ ಪದಾಧಿಕಾರಿಗಳಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು ನಂತರ ಕನ್ನಡ ನಾಡು-ನುಡಿ ಬಗೆಗಿನ ಹೋರಾಟದಲ್ಲಿ ಮಹತ್ವದ ಶಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ನಾಡು-ನುಡಿ ಬಗ್ಗೆ ಆಳವಾದ ಅರಿವು ಪರಿಜ್ಞಾನ ದೂರದೃಷ್ಟಿ ಇದ್ದು ಆ ಮೂಲಕ ಅದು ಅವರ ಪ್ರತಿ ಚಟುವಟಿಕೆಗೂ ತನ್ನದೇ ಆದ ಮಹತ್ವ ತಂದುಕೊಟ್ಟಿದೆ.

ಚಿದಾನಂದಮೂರ್ತಿ ಅವರ ಆಳವಾದ ಪರಿಶ್ರಮ, ಸಂಶೋಧನೆ ಮತ್ತು ಅಧ್ಯಯನಗಳ ಹಿನ್ನೆಲೆಯಲ್ಲಿ ಅವರಿಂದ ಇಪ್ಪತೈದಕ್ಕೂ ಹೆಚ್ಚು ಕೃತಿಗಳು, ಮುನ್ನೂರ ಐವತ್ತಕ್ಕೂ ಹೆಚ್ಚು ಸಂಪ್ರಬಂಧಗಳು, ನಾಲ್ಕುನೂರಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಇವು ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ, ಇತಿಹಾಸ ಹೀಗೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ್ದು ನಾಡು-ನುಡಿ-ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆಗಳಾಗಿವೆ.

ಅವರ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1984), ರಾಜ್ಯೋತ್ಸವ ಪ್ರಶಸ್ತಿ (1985), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ (1993), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1997), ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ತೀ, ನಂ. ಶ್ರೀ ಸ್ಮಾರಕ ಬಹುಮಾನ ಗೌರವಗಳು ಸಂದಿವೆ.

ಎಂ. ಚಿದಾನಂದಮೂರ್ತಿ

(10 May 1931)