About the Author

ಎಸ್. ಅನಂತನಾರಾಯಣ  ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದ್ದಾರೆ. ಪ್ರೊ. ಅನಂತ ನಾರಾಯಣ ಅವರು ನವೆಂಬರ್ 30, 1925 ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಂದೆ ಆರ್. ಸದಾಶಿವಯ್ಯನವರು ಮತ್ತು ತಾಯಿ ರಂಗಮ್ಮನವರು.  ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಗಳಿಸಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ಧಾರೆ. 

ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ. ಅನಂತನಾರಾಯಣರೂ ಸಹಾ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ ಸೆರೆಮನೆವಾಸ ಕಂಡರು. ಸೆರೆಮನೆಯೊಳಗಿದ್ದಾಗಲೇ ಕವಿತೆಗಳ ರಚನೆಗಾರಂಭಿಸಿದ ಅನಂತನಾರಾಯಣರು  ‘ಬಾಡದ ಹೂ’ ಎಂಬ ನೀಳ್ಗವಿತೆಗೆ ಬಿ.ಎಂ.ಶ್ರೀ.ಯವರಿಂದ ರಜತ ಮಹೋತ್ಸವದ ಸುವರ್ಣ ಪದಕ ಸ್ವೀಕರಿಸಿದರು.

ಆಲದ ಹೂ, ತೀರದ ಬಯಕೆ, ಪಯಣದ ಹಾದಿಯಲ್ಲಿ, ಮುರುಕು ಮಂಟಪ, ಸಪ್ತಸಮಾಲೋ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ಚಿಂತನ ಬಿಂದು, ಮೆಲಕು, ವಿಚಾರ ನಿಮಿಷ ಎಂಬ ಸಂಪಾದಿತ  ಕೃತಿಗಳನ್ನು ರಚಿಸಿದ್ಧಾರೆ.

 

ಎಸ್. ಅನಂತನಾರಾಯಣ

(30 Nov 1925-25 Aug 1992)