ಬಂಡವಾಳ ಸಂಪುಟ – 1 : ರಾಜಕೀಯ ಅರ್ಥಶಾಸ್ತ್ರದ ಒಂದು ವಿಮರ್ಶೆ

Author : ಜಿ. ರಾಮಕೃಷ್ಣ

Pages 706

₹ 1000.00




Year of Publication: 2019
Published by: ಕ್ರಿಯಾ ಮಾಧ್ಯಮ ಪ್ರೈ.ಲಿ
Address: 37/ಎ, 4ನೇ ಅಡ್ಡರಸ್ತೆ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು – 560 086
Phone: 9448578021

Synopsys

‘ಬಂಡವಾಳ ಸಂಪುಟ 1:  ರಾಜಕೀಯ ಅರ್ಥಶಾಸ್ತ್ರದ ಒಂದು ವಿಮರ್ಶೆ’ ಯು ಮಹಾನ್ ಮಾನವತಾವಾದಿ, ಚಿಂತಕ ಕಾರ್ಲ್ ಮಾರ್ಕ್ಸ್ ರಚಿಸಿದ ‘ದಾಸ್ ಕ್ಯಾಪಿಟಲ್’ನ ಕನ್ನಡ ಅನುವಾದ.

ಸಂಪಾದಕರು ಮತ್ತು ಅನುವಾದಕರು : ಡಾ.ಜಿ.ರಾಮಕೃಷ್ಣ, ವಸಂತರಾಜ ಎನ್.ಕೆ., ಎ.ಎಸ್.ಆಚಾರ್ಯ, ಜಿ. ರಾಜಶೇಖರ, ವಿ.ಎನ್.ಲಕ್ಷ್ಮೀನಾರಾಯಣ, ವೇದರಾಜ ಎನ್.ಕೆ., ಶಿವಾನಂದ ಸಾಸ್ವೆಹಳ್ಳಿ, ನಗರಗೆರೆ ರಮೇಶ್, ಡಾ. ಟಿ. ವೆಂಕಟೇಶಮೂರ್ತಿ, ಡಾ.ಬಿ.ಆರ್.ಮಂಜುನಾಥ, ಯಡೂರ ಮಹಾಬಲ, ಟಿ.ಎಸ್.ವೇಣುಗೋಪಾಲ, ಶೈಲಜಾ, ಬಿ.ಶ್ರೀಪಾದ ಭಟ್, ಡಾ. ವಿ.ಎಸ್.ಶ್ರೀಧರ್, ಡಾ. ಎಚ್.ಜಿ.ಜಯಲಕ್ಷ್ಮಿ, ಡಾ. ಬಿ.ಎಂ. ಪುಟ್ಟಯ್ಯ, ಡಾ. ಕೃಷ್ಣಪ್ಪ ಕೊಂಚಾಡಿ, ಎಚ್.ಎಸ್. ಜಯಕುಮಾರ್, ಎಂ.ಸಿ. ಡೋಂಗ್ರೆ, ಎಚ್.ವಿ. ರಾವ್, ಡಾ. ಆರ್. ಶೋಭಾ ).

ಕಾರ್ಲ್ ಮಾರ್ಕ್ಸ್ (1818-1883) ಜನ್ಮದ್ವಿಶತಮಾನೋತ್ಸವ ಹಾಗೂ ಅವರು ರಚಿಸಿದ ಜಗತ್ಪ್ರಸಿದ್ಧ ಕೃತಿ ‘ದಾಸ್ ಕ್ಯಾಪಿಟಲ್’ನ 150ನೇ ವರ್ಷಾಚರಣೆಯ ಅಂಗವಾಗಿ ನವಕರ್ನಾಟಕ ಪ್ರಕಾಶನ ಮತ್ತು ಕ್ರಿಯಾ ಮಾಧ್ಯಮ ಸಂಸ್ಥೆಗಳು ಹಮ್ಮಿಕೊಂಡ ‘ಮಾರ್ಕ್ಸ್ 200, ಕ್ಯಾಪಿಟಲ್-150’ ಪುಸ್ತಕ ಮಾಲಿಕೆಯಲ್ಲಿ ಪ್ರಕಟವಾಗಿದೆ.

’ಬಂಡವಾಳಶಾಹಿ ವ್ಯವಸ್ಥೆ’ಗೆ ಆದಿಯೂ ಇದೆ, ಅಂತ್ಯವೂ ಇದೆ ಅದು ಅಜರಾಮರವಲ್ಲ. ಅದು ಮನುಷ್ಯ-ಸಹಜ ಅಲ್ಲ. ಮಾತ್ರವಲ್ಲ ಮನುಷ್ಯ-ವಿರೋಧಿ ಸಹ. ಬಂಡವಾಳಶಾಹಿಯು ಬಿಕ್ಕಟ್ಟುಗ್ರಸ್ತ ವ್ಯವಸ್ಥೆ. ಬಂಡವಾಳ ಮತ್ತು ಶ್ರಮದ ನಡುವೆ ಮೂಲಭೂತ ವೈರುಧ್ಯವಿದ್ದು, ಇದು ಬಂಡವಾಳಶಾಹಿ ಮತ್ತು ಕಾರ್ಮಿಕ ವರ್ಗಗಳ ನಡುವಿನ ಸತತ ವರ್ಗ ಸಂಘರ್ಷದಲ್ಲಿ ಪ್ರಕಟವಾಗುತ್ತದೆ. ತಕ್ಕ ಪರಿಸ್ಥಿತಿ ನಿರ್ಮಾಣವಾದಾಗ, ಬಂಡವಾಳವೇ ಹುಟ್ಟಿಹಾಕಿದ ಕಾರ್ಮಿಕ ವರ್ಗ ಈ ವ್ಯವಸ್ಥೆಯ ಗೋರಿ ತೋಡುತ್ತದೆ. ಕಾರ್ಮಿಕ ವರ್ಗವು ಶೋಷಣಾ ರಹಿತ ಸಮಾನ ಸಮೃದ್ಧ ಸಮಾಜವಾದಿ ಸಮಾಜ ಕಟ್ಟುತ್ತದೆ ಎಂದು ತೋರಿಸಿಕೊಟ್ಟ ಕೃತಿ ’ಬಂಡವಾಳ’.

About the Author

ಜಿ. ರಾಮಕೃಷ್ಣ

ಜಿ. ರಾಮಕೃಷ್ಣ ಸಂಸ್ಕೃತದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಮತ್ತು ಪಿಎಚ್.ಡಿ. ಪದವಿಗಳನ್ನೂ, ಪುಣೆ ಹಾಗೂ ವೇಲ್ ವಿಶ್ವವಿದ್ಯಾನಿಲಯಗಳಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿಗಳನ್ನೂ ಪಡೆದಿದ್ದಾರೆ. ಮಹಾಡಿನ ಡಾ.ಅಂಬೇಡ್ಕರ್ ಕಾಲೇಜು ಮತ್ತು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿದ್ದಾರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದುಕೊಂಡು “ಭಾರತೀಯ ವಿಜ್ಞಾನದ ಹಾದಿ” ಎಂಬ ಮೌಲಿಕ ಕೃತಿಯನ್ನು ರಚಿಸಿದ್ದಾರೆ. ಇವರ “ಮುನ್ನೋಟ' ಹಾಗೂ 'ಆಯತನ' ಗ್ರಂಥಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭ್ಯವಾಗಿದೆ. ಮಾರ್ಕ್ಸ್‌ವಾದಿ ಅಧ್ಯಯನಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಭಗತ್‌ಸಿಂಗ್, ಚೆ ಗೆವಾರಾ, ...

READ MORE

Excerpt / E-Books

ಒಂದೆಡೆ, ಶಾರೀರಿಕ ದೃಷ್ಟಿಯಿಂದ ಹೇಳುವುದಾದರೆ ಎಲ್ಲ ಶ್ರಮವೂ ಮಾನವ ಶ್ರಮಶಕ್ತಿಯನ್ನು ವ್ಯಯಿಸುವುದು. ಅಮೂರ್ತ ಮಾನವಶ್ರಮದ ಗುಣದಿಂದಾಗಿ ಅದು ಸರಕುಗಳ ಮೌಲ್ಯವನ್ನು ಸೃಷ್ಟಿಸುತ್ತದೆ ಮತ್ತು ರೂಪಿಸುತ್ತದೆ. ಇನ್ನೊಂದೆಡೆ, ಎಲ್ಲ ಶ್ರಮವೂ ವಿಶೇಷ ರೂಪದ ಮತ್ತು ನಿರ್ದಿಷ್ಟಗುರಿಯಿಂದ ವ್ಯಯಿಸಲ್ಪಟ್ಟ ಮಾನವನ ಶ್ರಮಶಕ್ತಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಅದರ ಮೂರ್ತ ಉಪಯುಕ್ತ ಶ್ರಮದ ಗುಣದಿಂದಾಗಿ ಅದು ಉಪಯೋಗ-ಮೌಲ್ಯವನ್ನು ಸೃಷ್ಟಿಸುತ್ತದೆ. ... ಬಂಡವಾಳಶಾಹಿಯು ಯಂತ್ರಗಳನ್ನು ಬಳಸಿದ ಉದ್ದೇಶ ಜನರ ಕಷ್ಟ ನಿವಾರಣೆಯಂತೂ ಖಂಡಿತಾ ಅಲ್ಲ. ಶ್ರಮದ ಉತ್ಪಾದಕತೆಯ ಇತರ ಎಲ್ಲ ಹೆಚ್ಚಳಗಳಲ್ಲಿ ಇದ್ದಂತೆ, ಯಂತ್ರಗಳು ಕಾರ್ಮಿಕನು ತನಗಾಗಿ ಮಾಡುವ ಕೆಲಸದ ದಿನದ ಭಾಗವನ್ನು ಕಡಿಮೆ ಮಾಡುವ ಮೂಲಕ ಸರಕುಗಳನ್ನು ಅಗ್ಗಗೊಳಿಸುವುದು ಅವುಗಳ ಉದ್ದೇಶವಾಗಿದೆ. ಕಾರ್ಮಿಕನು ತನಗಾಗಿ ಮಾಡುವ ಕೆಲಸದ ಭಾಗವನ್ನು ಮೊಟಕುಗೊಳಿಸಿದರೆ, ಅವನು ಬಂಡವಾಳಿಗನಿಗೆ, ಪ್ರತಿಯಾಗಿ ಏನೂ ಪಡೆಯದೇ ಕೊಡುವ ಇನ್ನೊಂದು ಭಾಗ ದೀರ್ಘಗೊಳ್ಳುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಮಿಗುತಾಯ ಮೌಲ್ಯದ ಉತ್ಪಾದನೆಗೆ ಅದೊಂದು ಸಾಧನವಾಗಿದೆ. ಚರ್ಚುಗಳ ಆಸ್ತಿಯ ಲೂಟಿ, ಸರ್ಕಾರಕ್ಕೆ ಸೇರಿದ್ದ ಜಮೀನನ್ನು ಮೋಸದಿಂದ ಕೈವಶ ಮಾಡಿಕೊಂಡದ್ದು, ಜನಸಮುದಾಯಕ್ಕೆ ಸೇರಿದ ಸಾಮುದಾಯಿಕ ಭೂಮಿಯನ್ನು ಕದ್ದದ್ದು, ಸಾಮಂತಶಾಹಿ ಹಾಗೂ ಬುಡಕಟ್ಟುಗಳಿಗೆ ಸೇರಿದ ಆಸ್ತಿಯನ್ನು ಕಬಳಿಸಿದ್ದು ಮತ್ತು ಇವೆಲ್ಲವನ್ನೂ ಯಾವ ಅಳುಕು-ಅಂಜಿಕೆಗಳಲ್ಲಿದೆ  ಹಿಂಸಾತ್ಮಕ ವಿಧಾನಗಳನ್ನು ಉಪಯೋಗಿಸಿ ಆಧುನಿಕ ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಿಕೊಂಡದ್ದು, ಇವೇ ಆದಿಮ ಬಂಡವಾಳ ಶೇಖರಣೆಯ ಕೆಲವೊಂದು ‘ಪ್ರಶಾಂತ’ ವಿಧಾನಗಳಾಗಿದ್ದವು. ಅವರು ಬಂಡವಾಳಶಾಹಿ ಮಾದರಿಯ ಕೃಷಿಗಾಗಿ ಭೂಮಿಯನ್ನು ಗೆದ್ದುಕೊಂಡರು. ಭೂಮಿಯನ್ನೂ ಬಂಡವಾಳದ ಭಾಗವಾಗಿ ಪರಿವರ್ತಿಸಿಕೊಂಡರು. ಪಟ್ಟಣಗಳಲ್ಲಿ ತಲೆ ಎತ್ತಿದ್ದ ಕೈಗಾರಿಕೆಗಳಲ್ಲಿ ದುಡಿಯಲು ಅಗತ್ಯವಾಗಿದ್ದ ‘ಮುಕ್ತ’ರೂ, ಕಾನೂನು ರೀತ್ಯಾ ಅಪರಾಧಿಗಳೆನಿಸಿ ಕೊಂಡವರೂ ಆದ ಶ್ರಮಿಕ ವರ್ಗವೊಂದು ಸದಾ ದೊರಕುವಂತೆ ಅವರ ಸರಬರಾಜನ್ನು ಖಾತ್ರಿಪಡಿಸಿಕೊಂಡರು. ಬಂಡವಾಳದೊಂದಿಗೇ ಜನ್ಮತಾಳಿ, ಅದರಡಿಯಲ್ಲೂ, ಅದರೊಂದಿಗೂ ಬೆಳೆದು ಬಂದ ಉತ್ಪಾದನಾ ವಿಧಾನಕ್ಕೆ ಬಂಡವಾಳದ ಏಕಸ್ವಾಮ್ಯವು ಕಾಲಿಗೆ ತೊಡರುವ ಬೇಡಿಯಾಗುತ್ತದೆ, ಬಂಧನವಾಗುತ್ತದೆ. ಉತ್ಪಾದನಾ ಸಾಧನಗಳ ಕೇಂದ್ರೀಕರಣ ಮತ್ತು ಶ್ರಮದ ಸಾಮಾಜೀಕರಣ ಎರಡೂ ಹೆಚ್ಚುತ್ತಾ ಹೋಗಿ, ಯಾವ ಹಂತವನ್ನು ಮುಟ್ಟುತ್ತವೆ ಎಂದರೆ, ಆ ಕ್ಷಣದಲ್ಲಿ ಅವೆರಡನ್ನೂ ಒಂದೆಡೆ ಹಿಡಿದಿಟ್ಟಿರುವ ಬಂಡವಾಳಶಾಹಿ ಬೀಜಕವಚವು ಇನ್ನು ಅಸಮರ್ಥವಾಗುತ್ತದೆ. ಕವಚವು ಹರಿದುಬೀಳುತ್ತದೆ. ಬಂಡವಾಳಶಾಹಿ ಖಾಸಗಿ ಆಸ್ತಿಯ ಮೃತ್ಯು ಗಂಟೆ ಮೊಳಗುತ್ತದೆ. ಸುಲಿಗೆಕೋರರು ಈಗ ಸುಲಿಗೆಗೆ ಒಳಗಾಗುತ್ತಾರೆ.

Reviews

ಬಂಡವಾಳ ಸಂಪುಟ-1ರ ಮುಖ್ಯ ವಿಷಯ, ಪುಸ್ತಕದ ಉಪಶೀರ್ಷಿಕೆ ಹೇಳುವಂತೆ, ಒಂದೆಡೆ (ಬೂರ್ಜ್ವಾ) ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆ. ಇನ್ನೊಂದೆಡೆ ಬಂಡವಾಳಶಾಹಿ ಉತ್ಪಾದನಾ ವಿಧಾನದ ಬಗ್ಗೆ ಸಮಗ್ರ ವಿಶ್ಲೇಷಣೆಯ ಭಾಗವಾಗಿ ಬಂಡವಾಳದ ಉತ್ಪಾದನೆಯ ಪ್ರಕ್ರಿಯೆಯ ವಿಶ್ಲೇಷಣೆ. ಬಂಡವಾಳಶಾಹಿ ವ್ಯವಸ್ಥೆಯು ಸಾರ್ವತ್ರಿಕ ಸರಕು ಉತ್ಪಾದನೆಯನ್ನು ಪ್ರಧಾನವಾಗಿ ಹೊಂದಿರುವಂತಹದ್ದೂ, ಸರಕು ಈ ಸಮಾಜದಲ್ಲಿ ಸಂಪತ್ತಿನ ಪ್ರಮುಖ ರೂಪವೂ ಆಗುವುದರಿಂದ ಸರಕಿನ ಪರಿಕಲ್ಪನೆಯನ್ನು ಅರ್ಥೈಸುವುದರೊಂದಿಗೆ ಬಂಡವಾಳ ಸಂಪುಟ-1 ಆರಂಭವಾಗುತ್ತದೆ. ನಮ್ಮ ದೇಹವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಜೀವಕೋಶವನ್ನು ಅರ್ಥ ಮಾಡಿಕೊಳ್ಳುವುದು, ಜೀವಕೋಶಗಳು ಮೂಲಧಾತುವಾಗಿರುವ ನಮ್ಮ ಅಂಗಾಂಗಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಗತ್ಯವಿರುವಂತೆಯೇ, ಬಂಡವಾಳಶಾಹಿ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಸರಕನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗುತ್ತದೆ. ಸರಕು ಉತ್ಪಾದನೆ, ವಿನಿಮಯದ ಪ್ರಕ್ರಿಯೆಯ ಎಲ್ಲಆಯಾಮಗಳನ್ನು ವಿಶ್ಲೇಷಿಸುವ ಮೂಲಕ ಬಂಡವಾಳಶಾಹಿ ವ್ಯವಸ್ಥೆಯ ಸಮಗ್ರ ವಿಶ್ಲೇಷಣೆ ಮಾಡಲಾಗುತ್ತದೆ.

ಬಂಡವಾಳ ಸಂಪುಟ-1ರ ಒಟ್ಟು ಕಥನ ಸಂಕೀರ್ಣ. ಆದರೆ ಅದನ್ನು ಪರಸ್ಪರ ಹೆಣೆದುಕೊಂಡ ಆದರೆ ವಿಭಿನ್ನವಾದ ಸರಳವಾದ ಆಸಕ್ತಿಕಾರಕವಾದ ಪ್ರಮುಖ ಮೂರು ಕಥನಗಳ ಸಂಗಮವಾಗಿ ನೋಡಬಹುದು. ಆ ಮೂರು ಕಥನಗಳೆಂದರೆ ‘ಕಾರ್ಮಿಕರ ವರ್ಗಶೋಷಣೆ ಮತ್ತು ವರ್ಗಹೋರಾಟದ ಕಥನ’, ‘ಬಂಡವಾಳಶಾಹಿ ವ್ಯವಸ್ಥೆಯ ಉಗಮ, ವಿಕಾಸಗಳ ಚರಿತ್ರೆ’ ಮತ್ತು ‘ಬಂಡವಾಳಶಾಹಿ ಉತ್ಪಾದನಾ ಪ್ರಕ್ರಿಯೆಯ ಚಲನೆಯ ನಿಯಮಗಳ ಅನ್ವೇಷಣೆ’.

’ಬಂಡವಾಳ’ ಮತ್ತು ಅದರ ಅಧ್ಯಯನ ಮಹತ್ವ ಕುರಿತು ಅರಿವಿರುವವರಲ್ಲೂ ಅದೊಂದು ಕಬ್ಬಿಣದ ಕಡಲೆ, ತಜ್ಞರು ಮತ್ತು ಅರ್ಥಶಾಸ್ತ್ರಜ್ಞರು ಮಾತ್ರ ಅದನ್ನು ಓದಲು ಸಾಧ್ಯ ಎಂಬ ಸಾಮಾನ್ಯ ಭಾವನೆ ಇದೆ. ಇದು ಬಹುಪಾಲು ನಿಜವಲ್ಲ ಎನ್ನಬಹುದು.

ಹೊಸ ಪರಿಕಲ್ಪನೆಗಳನ್ನು ಸೈದ್ಧಾಂತಿಕ ಪ್ರವರ್ಗಗಳನ್ನು ಮೊದಲ ಬಾರಿ ನಿರೂಪಿಸುವುದರಿಂದ ಮೊದಲ 3 ಅಧ್ಯಾಯಗಳಲ್ಲಿ ಕೆಲವು ಕ್ಲಿಷ್ಟವಾದ ಭಾಗಗಳು ಇವೆ ಎಂಬುದು ನಿಜ. ಆದರೆ ’ಬಂಡವಾಳ’ ಓದಲಸಾಧ್ಯವಾದ ಪುಸ್ತಕವೇನಲ್ಲ. ಈ ಪುಸ್ತಕ ಬೂರ್ಜ್ವಾ ಅರ್ಥಶಾಸ್ತ್ರದ ಸಿದ್ಧಾಂತಗಳ ಕಟು ವಿಮರ್ಶೆ-ಟೀಕೆಯನ್ನು ಒಳಗೊಂಡಿದೆ, ನಿಜ. ಆದರೆ ಅದನ್ನು ಬರೆದದ್ದು ತಜ್ಞರು ಮತ್ತು ಅರ್ಥಶಾಸ್ತ್ರಜ್ಞರ ಜತೆ ವಾಗ್ವಾದಕ್ಕೆ ಮಾತ್ರವಲ್ಲ. ಮಾರ್ಕ್ಸ್ ಇದನ್ನು ಕಾರ್ಮಿಕರು ಮತ್ತು ಕಾರ್ಮಿಕ ಚಳವಳಿಯ ನೇತಾರರು ಓದಬೇಕೆಂದು ಬರೆದಿದ್ದು. ಅವರು ಓದಿ ಅರ್ಥಮಾಡಿಕೊಂಡು ಬದಲಾವಣೆಯ ಹರಿಕಾರರಾಗಬೇಕು ಎಂಬುದು ಅವರ ಬಯಕೆಯಾಗಿತ್ತು. ಇದು ಬಹಳ ಮಟ್ಟಿಗೆ ಪಶ್ಚಿಮ ಯುರೋಪಿನಲ್ಲೂ, ರಷ್ಯಾದಲ್ಲೂ ಸಾಕಾರಗೊಂಡಿತ್ತು. ಇದನ್ನು ಎಂಗೆಲ್ಸ್ ’ಬಂಡವಾಳ’ದ ಇಂಗ್ಲಿಷ್ ಆವೃತ್ತಿಯ ಮುನ್ನುಡಿಯಲ್ಲಿ ಹೇಳುತ್ತಾರೆ. ಈಗಾಗಲೇ ನಿರೂಪಿಸಿದ ಹಾಗೆ, ’ಬಂಡವಾಳ’ದ ಪರಸ್ಪರ ಹೆಣೆದುಕೊಂಡ ಹಲವು ಕಥನಗಳೇ ಏಕತಾನತೆಯನ್ನು ಒಡೆದು ವೈವಿಧ್ಯಮಯ ವಿಷಯಗಳನ್ನು ವಿವಿಧ ಶೈಲಿಯಲ್ಲಿ ಪ್ರಸ್ತುತಪಡಿಸಿ ಆಸಕ್ತಿಕಾರಕವಾಗಿಸುತ್ತದೆ. ಅರ್ಥಶಾಸ್ತ್ರಜ್ಞ, ತತ್ವಶಾಸ್ತ್ರಜ್ಞ, ಕವಿ ಹೃದಯಿ, ಚರಿತ್ರಕಾರ, ಚಳವಳಿಕಾರ, ವಿಡಂಬನಕಾರ - ಮುಂತಾದ ಮಾರ್ಕ್ಸ್ ಅವರ ಹಲವು ’ಅವತಾರ’ಗಳು, ’ಬಂಡವಾಳ’ದ ಹಲವು ಕಥನಗಳಲ್ಲಿ ಬರುವ ಹಲವು ವಿಷಯಗಳು, ಅದಕ್ಕೆ ತಕ್ಕ ಶೈಲಿಗಳನ್ನು ಕಾಣಬಹುದು.

19ನೇ ಶತಮಾನದ ಇಂಗ್ಲೆಂಡಿನ ಸಮಾಜ, ಆರ್ಥಿಕತೆಯ ಬಗ್ಗೆ ಬರೆದ ಬಂಡವಾಳ ಸಂಪುಟ-1ನ್ನು ಈಗ ಯಾಕೆ ಓದಬೇಕು? ಸಾಮಾಜಿಕ, ಆರ್ಥಿಕ, ತಂತ್ರಜ್ಞಾನ ಮುಂತಾದ ಹಲವು ಕ್ಷೇತ್ರಗಳಲ್ಲಿ ಗುರುತು ಸಿಗದಂತೆ ಬದಲಾದ ಸಂಕೀರ್ಣವಾದ ಇಂದಿನ ಪರಿಸ್ಥಿತಿಯನ್ನು ಅರ್ಥೈಸಲು ಅದು ಹೇಗೆ ಸಹಾಯಕವಾದೀತು? ಇಂದು ಬಂಡವಾಳಶಾಹಿ ಎಷ್ಟೇ ಬದಲಾಗಿದ್ದರೂ ಅದನ್ನು ಅರ್ಥೈಸಲು ಬಂಡವಾಳ ಸಹಾಯಕವಾಗಿದೆ. ಇದು ಆಶ್ಚರ್ಯಕರ, ಆದರೂ ನಿಜ. ಈ ಪ್ರಶ್ನೆಗಳಿಗೆ ಮೇಲೆ ಹೇಳಿದ ’ಬಂಡವಾಳ’ದ ಸಾರಾಂಶದಲ್ಲೇ ಬಹುಪಾಲು ಉತ್ತರಗಳಿವೆ. ಮಾರ್ಕ್ಸ್ ಅವರ ಬಂಡವಾಳಶಾಹಿ ಪದ್ಧತಿಯ ಈ ಸಮಗ್ರ ಅಧ್ಯಯನವು, ಅದರ ಸಾರಸತ್ವವಾದ ಹಲವು ಮೂಲಭೂತ ಗುಣಲಕ್ಷಣಗಳು, ಚಲನೆಯ ನಿಯಮಗಳನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿದದ್ದೇ ಮತ್ತು ಮೂಲಭೂತವಾಗಿ ಅದು ಬದಲಾಗದ್ದೇ, ಇದಕ್ಕೆ ಕಾರಣ. ಇದು ಸಾಧ್ಯವಾಗಿದ್ದಕ್ಕೆ ’ಬಂಡವಾಳ’ದಲ್ಲಿ ಅನುಸರಿಸಲಾದ ವಿಶ್ಲೇಷಣಾ ವಿಧಾನ ಸಹ ಕಾರಣ.

’ಬಂಡವಾಳ’ ಇಂದಿಗೂ ಪ್ರಸ್ತುತ: ಇಂದಿನ ಬಂಡವಾಳಶಾಹಿಯ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲಿಕ್ಕೂ ಸಹಾಯಕ ಎನ್ನುವುದಕ್ಕೆ ಇನ್ನೊಂದು ಆಯಾಮದ ರುಜುವಾತು ಇದೆ. ಬಂಡವಾಳಶಾಹಿ ವ್ಯವಸ್ಥೆ ಬಗ್ಗೆ ಮಾರ್ಕ್ಸ್ ನಿರೂಪಿಸಿದ ಕೆಲವು ತೀರ್ಮಾನಗಳು, ವಿವರಿಸಿದ ಬಾಹ್ಯ ಗುಣಲಕ್ಷಣಗಳು, ಕೊಡುವ ಒಳನೋಟಗಳು ಇಂದಿಗೂ ಅಥವಾ ಹಿಂದೆಂದಿಗಿಂತಲೂ ಹೆಚ್ಚು ಸಾಮಾನ್ಯ ಜನರಿಗೂ ಗೋಚರವಾಗುತ್ತಿವೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಈ ಒಂದೂವರೆ ಶತಮಾನದಲ್ಲಿ ಆದ ಬದಲಾವಣೆಗಳ ನಂತರವೂ ಇವುಗಳ ಮೇಲೆ ಯಾವುದೇ ಪರಿಣಾಮಗಳಾಗಿಲ್ಲ.

ಈ ಕನ್ನಡ ಅನುವಾದಕ್ಕೆ 1887ರಲ್ಲಿ ಮೊದಲ ಬಾರಿಗೆ ಪ್ರಕಟವಾದ ’ಬಂಡವಾಳ’ ಗ್ರಂಥದ ಇಂಗ್ಲಿಷ್ ಆವೃತ್ತಿಯನ್ನು ಆಧಾರವಾಗಿ ತೆಗೆದುಕೊಳ್ಳಲಾಗಿದೆ. ಸ್ಯಾಮುವೆಲ್ ಮೂರ್ ಮತ್ತು ಎಡ್ವರ್ಡ್ ಅವೆಲಿಂಗ್ ಅನುವಾದಿಸಿ, ಸ್ವತಃ ಫ್ರೆಡರಿಕ್ ಎಂಗೆಲ್ಸ್ ಅವರೇ ಪರಿಶೀಲಿಸಿದ ಆವೃತ್ತಿ ಇದು. ಮುಂದೆ 1954ರಲ್ಲಿ ಸೋವಿಯೆಟ್ ಒಕ್ಕೂಟದ ಪ್ರಗತಿ ಪ್ರಕಾಶನವು  ಈ ಅವೃತ್ತಿಯನ್ನೇ ಪುನರ್‌ಮುದ್ರಿಸಿ ಜಗತ್ತಿನಾದ್ಯಂತ ಪ್ರಸಾರ ಮಾಡಿತು. ಇದೇ ಆವೃತ್ತಿಯು ಅಂತರ್ಜಾಲದಲ್ಲಿ ಈ ಕೆಳಗೆ ಕಾಣಿಸಿದ ಕೊಂಡಿಯಲ್ಲಿ ಲಭ್ಯವಿದೆ:  (https://www.marxists.org/archive/marx/works/1867-c1/) ಪ್ರಸ್ತುತ ಕನ್ನಡ ಅನುವಾದಕ್ಕೆ ಇದನ್ನೇ ಮುಖ್ಯ ಆಕರವನ್ನಾಗಿ ಬಳಸಲಾಗಿದೆ. ಇದರ ಜತೆಗೆ, ಸಂದೇಹಗಳು ಬಂದ ಕಡೆಗಳಲ್ಲಿ ಪೆಂಗ್ವಿನ್ ಬುಕ್ಸ್ ಮತ್ತು ನ್ಯೂ ಲೆಫ್ಟ್ ರಿವ್ಯೂ ಪ್ರಕಟಿಸಿದ ಬೆನ್ ಫೌಕ್ಸ್ ಅನುವಾದಿಸಿದ ಆವೃತ್ತಿಯ ನೆರವನ್ನೂ, (ಇದೂ ಪೂರ್ಣವಾಗಿ ಸ್ವತಂತ್ರವಾದ ಅನುವಾದವಲ್ಲ, ಆಧುನಿಕ ನುಡಿಗಟ್ಟುಗಳಲ್ಲಿ ಮಂಡಿಸಿದ, ಮೇಲಿನ ಅನುವಾದದ ಪರಿಷ್ಕೃತ ರೂಪವಷ್ಟೇ) ಜೊತೆಗೆ ’ವಿಶಾಲಾಂಧ್ರ ಪಬ್ಲಿಷಿಂಗ್ ಹೌಸ್’ ಪ್ರಕಟಿಸಿರುವ ತೆಲುಗು ಆವೃತ್ತಿಯ ನೆರವನ್ನೂ ಪಡೆಯಲಾಗಿದೆ.

ಈ ಸಂಪುಟದಲ್ಲಿ ಮಾರ್ಕ್ಸ್, ಮೊದಲ ಜರ್ಮನ್ ಆವೃತ್ತಿಗೆ ಮತ್ತು ಎಂಗೆಲ್ಸ್ ಅವರು ಮೊದಲ ಇಂಗ್ಲಿಷ್ ಆವೃತ್ತಿಗೆ ಬರೆದ ಮುನ್ನುಡಿಗಳನ್ನು ಇಡಿಯಾಗಿ ಅನುವಾದಿಸಿ ಕೊಡಲಾಗಿದೆ. ಉಳಿದ ಮುನ್ನುಡಿಗಳ ಸಾರಾಂಶವನ್ನು ಕೊಡಲಾಗಿದೆ.

- ವಿಶಾಲಮತಿ ಎನ್‌. ಕೆ. 

Related Books