ಅಡ್ಡದಾರಿಯಲ್ಲಿ ಆತನೇನೋ ಬೆಳದ, ಆದರೆ ಜನರ ಪಾಡು?


"ಸೀತಾಪುರದಲ್ಲಿ ನಡೆಯುವ ಪ್ರಸಂಗಗಳನ್ನೇ ಮೆಲಕುಹಾಕುತ್ತಾ ಇಡೀ ಭಾರತ ದೇಶವನ್ನು ನೆನೆದಾಗ ಅಂತಹ ಪ್ರಸಂಗಗಳು ಲೆಕ್ಕವಿಲ್ಲದಷ್ಟು ಎಂಬುದು ಮನದಟ್ಟಾಗುತ್ತದೆ. ಉದಾಹರಣೆಗೆ ಸೀತಾಪುರದಲ್ಲಿ ಸಂಭವಿಸುವ ರೇಶನ್ ವಿತರಣೆ, ಹಾಯ್ ಸ್ಕೂಲಿನ ಆರಂಭ ಎಂಬ ಈ ಸಣ್ಣ ಘಟನೆಗಳೇ ಇಡೀ ಭಾರತದೇಶದಲ್ಲಿ ದೊಡ್ಡ ದೊಡ್ಡ ಇಲಾಖೆಗಳಲ್ಲಿ ನಡೆಯುತ್ತೆನ್ನುವುದು ಅಂದಾಜುಮಾಡಬಹುದು," ಎನ್ನುತ್ತಾರೆ ಕಾರ್ತಿಕೇಯ. ಅವರು ನಾ. ಮೊಗಸಾಲೆ ಅವರ ‘ಭಾರತ ಕಥಾ’ ಕೃತಿ ಕುರಿತು ಬರೆದ ವಿಮರ್ಶೆ.

ಭಾರತ ಕಥಾ ಕಾದಂಬರಿಯು ಈಗಿನ, ಹಿಂದಿನ ಹಾಗು ಮುಂದಿನ ರಾಜಕೀಯದ ವ್ಯವಸ್ಥೆಯನ್ನು ಕೆಲವೇ ಕೆಲವು ಪಾತ್ರಗಳಿಂದ ಹಾಗು ಪ್ರಸಂಗಗಳಿಂದ ಸೀತಾಪುರ ಎಂಬ ಗ್ರಾಮದಲ್ಲಿ ಚಿತ್ರಿಸುತ್ತದೆ. ಆ ಪ್ರಸಂಗಗಳು ಕೆಲವೇ ಇರಬಹುದು, ಆದರೆ ಅದರ ಪರಿಣಾಮವು ಹಲವು ಸಂಬಂಧಗಳನ್ನು ಒಟ್ಟುಗೂಡಿಸುತ್ತದೆ, ನಂತರ ಕೆಡಿಸುತ್ತದೆ, ಮನಸ್ಸಿನ ಮೇಲೆ ಆಘಾತವನ್ನೂ ಉಂಟುಮಾಡುತ್ತದೆ. ಸೀತಾಪುರದಲ್ಲಿ ನಡೆಯುವ ಪ್ರಸಂಗಗಳನ್ನೇ ಮೆಲಕುಹಾಕುತ್ತಾ ಇಡೀ ಭಾರತ ದೇಶವನ್ನು ನೆನೆದಾಗ ಅಂತಹ ಪ್ರಸಂಗಗಳು ಲೆಕ್ಕವಿಲ್ಲದಷ್ಟು ಎಂಬುದು ಮನದಟ್ಟಾಗುತ್ತದೆ. ಉದಾಹರಣೆಗೆ ಸೀತಾಪುರದಲ್ಲಿ ಸಂಭವಿಸುವ ರೇಶನ್ ವಿತರಣೆ, ಹಾಯ್ ಸ್ಕೂಲಿನ ಆರಂಭ ಎಂಬ ಈ ಸಣ್ಣ ಘಟನೆಗಳೇ ಇಡೀ ಭಾರತದೇಶದಲ್ಲಿ ದೊಡ್ಡ ದೊಡ್ಡ ಇಲಾಖೆಗಳಲ್ಲಿ ನಡೆಯುತ್ತೆನ್ನುವುದು ಅಂದಾಜು ಮಾಡಬಹುದು. ಭಾಸ್ಕರ ಹೆಗ್ಗಡೆ ಎಂಬ ಸಾಮಾನ್ಯ ಮನುಷ್ಯನು ಸೀತಾಪುರದಲ್ಲಿ ನಡೆಯುವ ಘಟನೆಗಳ ಮೂಲಕ ಅವುಗಳನ್ನು ತನ್ನ ಚಾಣಾಕ್ಷತನದಿಂದ ಉಪಯೋಗಪಡಿಸಿಕೊಂಡು, ರಾಜಕೀಯ ಕ್ಷೇತ್ರದಲ್ಲಿ ಪ್ರವೇಶಕೊಟ್ಟು ಹೇಗೆ ಹೆಸರು ಪಡೆಯುತ್ತಾನೆಂದರೆ ಆಶ್ಚರ್ಯವಾಗುತ್ತದೆ. ಸೀತಾಪುರದ ಭಾಸ್ಕರ ಹೆಗ್ಗಡೆ ಎಂಬುವರು ಇನ್ನು ಇಡೀ ದೇಶದಲ್ಲಿ ಇನ್ನೆಷ್ಟಿರಬಹುದು?ಅದು ಲೆಕ್ಕವೇ ಇಲ್ಲ, ಇಂತಹವರು ಮನುಷ್ಯರಿಗೆ ಮಂಗಮಾಯ ಮಾಡಿ ಒಳ್ಳೆಯವರ ಹಾಗೇ ನಟಿಸುತ್ತಾ ಹಿಂದೆ ಚೂರಿ ಹಾಕುತ್ತಾ ರಾಜಕೀಯ ಕ್ಷೇತ್ರದಲ್ಲಿ ಹೆಸರು ಪಡೆದು ದೇಶವನ್ನೇ ನುಂಗಿಹಾಕುವಷ್ಟು ಬೆಳೆದುಬಿಡುತ್ತಾರೆ, ಭಾಸ್ಕರ ಹೆಗ್ಗಡೆ ಎಂಬುವನ ಸುತ್ತಮುತ್ತಲಿನಲ್ಲಿ ಜನಗಳ ಪಾಡೇನು ಎಂಬುದು ಕಾದಂಬರಿ ಓದುತ್ತಾ ಹೋದಹಾಗೆ ನಾವು ಸುಲಭವಾಗಿ ಊಹಿಸಬಹುದು.

ಈ ಕಾದಂಬರಿಯಲ್ಲಿ ಭೂಮಸೂದೆ ಜಾರಿಯಾದಾಗ ಭೂಮಿಯನ್ನು ಕಳೆದುಕೊಂಡ ಭೂಮಾಲಿಕರ ಪರದಾಟಗಳಿವೆ, ಗೇಣಿದಾರರು ತಹಶೀಲ್ದಾರರಿಗೆ ಭಾಸ್ಕರ ಹೆಗ್ಗಡೆ ಎಂಬುವನ ಮೂಲಕ ಅರ್ಜಿ ಹಾಕಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಗೇಣಿದಾರರ ಕಥೆಯಿದೆ. ತಿಮ್ಮಪ್ಪಯ್ಯನವರಂತ ಮಾಸ್ತರರು ಸೀತಾಪುರದ ರಥಬೀದಿಯಲ್ಲಿದ್ದ ತನ್ನ ಶಾಲೆಗೆ 8 ಹುದ್ದೆಯಲ್ಲಿ 3 ಬ್ರಾಹ್ಮಣರು, ನಾಲ್ಕು ಅಬ್ರಾಹ್ಮಣರಿದ್ದು ಎಂಟನೆ ಹುದ್ದೆಯನ್ನು ಬ್ರಾಹ್ಮಣ ಅಭ್ಯರ್ಥಿಗೇ ನೀಡುವುದೆಂದು ನಿಶ್ಚಯಿಸಿದಾಗ ಬ್ರಾಹ್ಮಣರಲ್ಲೇ ಯಾಕೆ ನೇಮಿಸುವುದು? ಅಬ್ರಾಹ್ಮಣರಲ್ಲೂ ಒಳ್ಳೇ ಅಭ್ಯರ್ಥಿಗಳಿದ್ದಾರೆಂದು ಗುರುವಾದ ತಿಮ್ಮಪ್ಪಯ್ಯನವರಿಗೆ ಶಿಷ್ಯನಾದ ಭಾಸ್ಕರನು ತನ್ನ ಚಾಣಾಕ್ಷತನದಿಂದ ಅವರ ವಿರುದ್ಧಹೋಗಿ ಊರಿನವರ ಮುಖ್ಯಸ್ಥರಿಂದ ನೆರವು ಪಡೆದು ತನಗೆ ಬೇಕಿರುವ ತಿರುಮಲೇಶನನ್ನು ಅಭ್ಯರ್ಥಿಯಾಗಿ ನೇಮಿಸುವ ರಾಜಕೀಯ ಪ್ರಸಂಗವೂ ಇದೆ. ಇಂತಹ ಪ್ರಸಂಗಗಳಿಂದ ಭಾಸ್ಕರ ಹೆಗ್ಗಡೆಗೆ ಈಶ್ವರ ದೇವರು ಭಸ್ಮಾಸುರನಿಗೆ ವರಕೊಟ್ಟ ಹಾಗೆ ಆಯ್ತು, ನಾಳೆ ಆತ ಸೀತಾಪುರವನ್ನೇ ನುಂಗಿ ನೀರುಕುಡಿಯಬಲ್ಲವನೆಂದು ಮಾತಾಡಿಕೊಳ್ಳುತ್ತಾರೆ. ಊರಿನಲ್ಲಿ ಏನೇ ನಡೆದರು ಅದರ ಕುರಿತು ಮಾತುಕತೆಗಳು ನಡೆಯುತ್ತಿದ್ದುದು ಸೀತಾಪುರದ ರಥಬೀದಿಯಲ್ಲಿದ್ದ ಕುಪ್ಪಣ್ಣಯ್ಯನವರ ದುರ್ಗಾ ಭವನದ ಹೋಟಲಿನಲ್ಲಿ ಹಾಗು ಕುಪ್ಪಣ್ಣಯ್ಯನವರು ಎಷ್ಟೋ ಜನರಿಗೆ ಮಾರ್ಗದರ್ಶಿಗಳಾಗಿದ್ದರು.

ಎಸ್. ಎನ್. ಭಟ್ಟರು ಪರವೂರಿನಿಂದ ಬಂದು ಜನರ ಸೇವೆ ಮಾಡಲೆಂದು ಕುಪ್ಪಣ್ಣಯ್ಯನವರ ಸಹಾಯದಿಂದ ಒಂದು ಕ್ಲೀನಿಕ್ ತೆರೆದು ಅಲ್ಲಿರುವ ಜನರಿಗೆ ನೆರವಾಗುತ್ತಾರೆ, ಕೈಯ ನಾಡಿ ಹಿಡಿದೇ ಇಂಥ ರೋಗ ಹೇಳುತ್ತಾರಂತೆ ಎಂಬಂಥ ಮಾತುಗಳು ಹರಡಿ ಹೆಸರು ಗಳಿಸುತ್ತಾರೆ, ಅವರಿಗೆ ಯುವಕ ಮಂಡಲ ಸ್ಥಾಪಿಸಬೇಕೆಂಬ ಕನಸಿರುತ್ತದೆ ಅದಕ್ಕೆ ಕುಪ್ಪಣ್ಣಯ್ಯನವರು ನೆರವಾಗುತ್ತಾರೆ. ಭಾಸ್ಕರನ ಬೆಂಬಲದಿಂದ ಮಂಡಲವು ಸ್ಥಾಪಿತವಾಗುತ್ತದೆ, ಕನಸು ಭಟ್ಟರದ್ದು ಆದರೆ ಅದರ ಉಪಯೋಗ ಭಾಸ್ಕರನಿಗಾಗುತ್ತದೆ, ಯುವಕ ಮಂಡಲ ಎಂಬುದನ್ನು ನೆಪವಿಟ್ಟುಕೊಂಡು ಮೊದಮೊದಲು ಒಳ್ಳೇ ಕೆಲಸಗಳನ್ನೇ ಮಾಡುತ್ತಾ ಭಾಸ್ಕರನು ಅಡ್ಡದಾರಿ ಹಿಡಿಯುತ್ತಾನೆ. ದಿನಗಳು ಕಳೆದಂತೆಲ್ಲಾ ಭಾಸ್ಕರನ ನಿಜಸ್ವರೂಪವು ಒಂದೊಂದೇ ಬಿಚ್ಚಿಕೊಳ್ಳುತ್ತದೆ, ತಮ್ಮ ಗ್ರಾಮದಲ್ಲಿ ರೇಶನ್ ವ್ಯವಸ್ಥೆ ಸರಿ ಇಲ್ಲವಾಗಿದ್ದು, ಅಂದರೆ ಪಕ್ಕದ ಗ್ರಾಮವಾದ ಸಾಂತೂರು ಗ್ರಾಮಕ್ಕೆ ಹೋಗಿ ರೇಶನ್ ಪಡೆಯಬೇಕು ಇದರಿಂದ ಜನರು ಪರದಾಡುತ್ತಿದ್ದಾರೆಂದು ಊರಿನ ಮುಖ್ಯಸ್ಥರಾದ ದುಗ್ಗಪ್ಪ ಹೆಗ್ಡೆಯವರು ರಾಂಪುರ ಕ್ಷೇತ್ರದ ಶಾಸಕರಿಗೆ ಕೇಳಿಕೊಂಡರೂ ಪ್ರಯೋಜನವಾಗದಿದ್ದಾಗ, ಭಾಸ್ಕರನು ತನ್ನ ಚಾಣಾಕ್ಷತನದಿಂದ ಶಾಸಕರನ್ನೇ ಒಪ್ಪಿಸಿ ರೇಶನ್ ವ್ಯವಸ್ಥೆಯನ್ನು ತನ್ನ ಹತೋಟಿಗೆ ತೆಗೆದುಕೊಳ್ಳುತ್ತಾನೆ. ಮೊದಮೊದಲು ಜನರಿಗೆ ತಾನು ಸಹಾಯಮಾಡುತ್ತಿದ್ದೇನೆಂದು ತೋರಿಸಿಕೊಳ್ಳುತ್ತಾ ಕ್ರಮೇಣ ರೇಶನ್ ಪದಾರ್ಥಗಳ ವಿತರಣೆಯಲ್ಲಿ ಆತನು ಮಾಡುತ್ತಿದ್ದ ಮೋಸವು ಜನರಿಗೆ ಅರಿವಾಗುತ್ತದೆ ಆದರೆ ಆತನನ್ನು ಎದುರಿಸಲು ಯಾರಿಗೂ ಧೈರ್ಯ ಬರುವುದಿಲ್ಲ. ಇದನ್ನು ಎದುರಿಸುವ ಭಟ್ಟರನ್ನು ವಿನಾಕಾರಣವಾಗಿ ದಂಡಿಸುವ ಭಾಸ್ಕರ ಹೆಗ್ಡೆಯ ವಿರುದ್ಧ ಪೋಲೀಸರಿಗೆ ದೂರು ನೀಡಲು ಹೋಗುವ ಕುಪ್ಪಣ್ಣಯ್ಯ ಹಾಗು ಭಟ್ಟರ ದೂರನ್ನು ಪೋಲಿಸರು ಸ್ವೀಕರಿಸುವುದೇ ಇಲ್ಲ, ಅವರು ನಿಸ್ಸಹಾಯಕರಾಗಿ ಮರಳಬೇಕಾಗುತ್ತದೆ. ಸಾತ್ವಿಕ ಪ್ರೇರಣೆಗೆ ವಿರುದ್ಧವಾಗಿ ಇರುವುದು ದೌಷ್ಟ್ಯ, ಕೆಡುಕಿನ ಪ್ರೇರಣೆಗಳೇ. ಇಂತಹ ಕೆಡುಕಿನ ಬಲವನ್ನು ಭಾಸ್ಕರನು ಊರಿನಲ್ಲಿ ಆಗಲೇ ಗಳಿಸಿರುತ್ತಾನೆ. ಮೇರಿ ಎಂಬುವಳ ಸಂಗಮಾಡಿ ಮೇರಿ ಗಂಡನನ್ನು ಬಲೆಗೆ ಹಾಕಿಕೊಂಡು ಬಾರನ್ನೂ ಸ್ಥಾಪಿಸಿ ಇನ್ನಷ್ಟು ವೃದ್ಧಿಹೊಂದುತ್ತಾನೆ. ನಂತರ ಆತನೇ ಬಾರಿನ ಓನರ್ ಆಗಿ ಊರಿನ ರಾಜಕೀಯ ವ್ಯಕ್ತಿಗಳಿಗೆ ಹತ್ತಿರವಾಗುತ್ತಾ ಅಡ್ಡದಾರಿಯಿಂದಲೇ ಅಭಿವೃದ್ಧಿ ಹೊಂದುತ್ತಾನೆ. ಇದರ ಮಧ್ಯೆ ತಮ್ಮ ಗ್ರಾಮಕ್ಕೆ ಹೈಸ್ಕೂಲ್ ಕಟ್ಟಿಸುವ ಕಾರ್ಯದಲ್ಲಿ ತೊಡಗಿ ಕೈಸುಟ್ಟುಕೊಂಡು ಹಿಂದುಳಿಯುತ್ತಾನೆ. ಆದರೆ ಆ ಕಾರ್ಯವನ್ನು ತಮ್ಮ ಗುರುಗಳಾದ ತಿಮ್ಮಪ್ಪಯ್ಯನವರು ತಮ್ಮ ಸ್ವಂತ ಹಣದಲ್ಲಿ ಮಾಡಿದರೂ ಹೆಸರು ಮಾತ್ರ ಭಾಸ್ಕರನಿಗೇ ದಕ್ಕುತ್ತದೆ.

ಈ ಕಾದಂಬರಿಯಲ್ಲಿ ಭಾಸ್ಕರನಿಗೆ ಬೆಂಬಲಿಸುವ ಪಾತ್ರಗಳು, ಅವನನ್ನು ಎದುರಿಸಲಾಗದೆ ಅವನು ಮಾಡುತ್ತಿರುವುದು ತಪ್ಪು ಅಂತ ಹೇಳುವ ಧೈರ್ಯವಿಲ್ಲದೆ ಅವನನ್ನು ಬೆಂಬಲಿಸುವ ಪಾತ್ರಗಳು, ಕುಪ್ಪಣ್ಣಯ್ಯ, ಭಟ್ಟರಂತವರು ಧೈರ್ಯ ಮಾಡಿ ಎದುರಿಸಲು ಹೋಗಿ ಅವಮಾನಿತರಾದವರು ಇದ್ದಾರೆ, ಭಾಸ್ಕರನ ಬಲದ ಕಾರಣವಾಗಿ ಜನಸಮುದಾಯದ ಬಹುತೇಕರು ಅವನನ್ನು ಬೆಂಬಲಿಸುವುದಲ್ಲದೆ ಅನುಸರಿಸುತ್ತಾರೆ. ಒಬ್ಬ ಸಾಮಾನ್ಯ ವ್ಯಕ್ತಿ ಊರಿನ ಜನರಿಗೆ ಮೊದಲು ಸಾತ್ವಿಕನೆಂದು ತೋರಿಸಿಕೊಂಡು ಒಂದು ಹಂತಕ್ಕೆ ತಲುಪಿದ ನಂತರ ಕೆಟ್ಟ ದಾರಿ ಆಯ್ಕೆ ಮಾಡಿಕೊಂಡು ಕೆಲವರನ್ನು ಎದುರಿ ಹಾಕಿಕೊಂಡು ಇನ್ನು ಕೆಲವರನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ಇಡೀ ಸೀತಾಪುರದಲ್ಲಿ ಅಲ್ಲದೆ ಸುತ್ತಲ ಗ್ರಾಮದಲ್ಲೂ ಹೆಸರು ಪಡೆದು ರಾಜಕೀಯ ಕ್ಷೇತ್ರದಲ್ಲೇ ಸ್ಥಾನ ಪಡೆಯುವುದನ್ನು ನೆನೆದ ಕುಪ್ಪಣ್ಣಯ್ಯನವರು ಸಂಕಟಪಡುತ್ತಾರೆ. ಸೀತಾಪುರದಲ್ಲಿ ಭಾಸ್ಕರನಂತವರ ಮಧ್ಯೆ ಇರುವುದು ಅಂದರೆ ಹೊಳೆಯಲ್ಲಿ ದೋಣಿ ಬಿಟ್ಟ ಹಾಗೆ, ಒಮ್ಮೆ ಆ ದಡಕ್ಕೆ, ಇನ್ನೊಮ್ಮೆ ಈ ದಡಕ್ಕೆ ಆಗಾಗ ಹೋಗಬೇಕಾಗುತ್ತದೆ. ಒಂದು ಸಾತ್ವಿಕ ಮತ್ತೊಂದು ದೌಷ್ಟ್ಯದ ದಡ, ಹೊಳೆಯಲ್ಲಿ ಸಾಗುವ ದೋಣಿಗೆ ಬರೀ ದೌಷ್ಟ್ಯವೂ ಇಲ್ಲ ಬರೀ ಸಾತ್ವಿಕವೂ ಇಲ್ಲ. ಬೆಂಗಳೂರಿಗೆ ಬಾ ಎನ್ನುವ ಮಗನ ಆಹ್ವಾನವನ್ನು ತಿರಸ್ಕರಿಸಿ ಸೀತಾಪುರದ ರಾಜಕೀಯ ಸ್ಥಿತಿಯನ್ನು ಎದುರಿಸುವ ಆಶಾವಾದವನ್ನು ಕುಪ್ಪಣ್ಣಯ್ಯನವರು ತೋರಿಸುತ್ತಾರೆ. ಶಾಲೆಗೆ ತನಗೆ ಬೇಕಾಗಿರುವ ಶಿಕ್ಕನನ್ನು ನೇಮಕ ಮಾಡುವುದು, ರೇಶನ್ ತನ್ನ ಹತೋಟಿಗೆ ತೆಗೆದುಕೊಳ್ಳುವುದು, ಯುವಕ ಮಂಡಲದ ಮುಖ್ಯಸ್ಥನಾಗುವುದು, ಹೈಸ್ಕೂಲು ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದು, ಬಾರ್ ಸ್ಥಾಪಿಸುವುದು ಇಂತಹ ಸಣ್ಣ ಸಣ್ಣ ಘಟನೆಗಳೇ ಆತನನ್ನು ಎತ್ತರಕ್ಕೊಯ್ಯುತ್ತದೆ. ಅಡ್ಡದಾರಿಯಲ್ಲಿ ಆತನೇನೋ ಬೆಳದ, ಆದರೆ ಜನರ ಪಾಡು?.

ಕಾರ್ತಿಕೇಯ

MORE FEATURES

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...