ಬಹುರೂಪಿ ನೋವುಗಳ ಸಾಕ್ಷಿಪ್ರಜ್ಞೆಯ ಕೃಷ್ಣಯ್ಯ: ಕನ್ನಡ ಕಥನಸಾಹಿತ್ಯಕ್ಕೆ ಒಂದು ಅಪೂರ್ವ ಕೊಡುಗೆ


"ಈ ಕಾದಂಬರಿಯ ತಿರುಳಿನ ಭಾಗ ಅನ್ನಬಹುದಾದ 'ಸ್ವರ'ಗಳು ಮಿಡಿಯುವುದು 'ನೊಂದವರ ಕಥನ' ಮತ್ತು' ಬೆಂದವರ ಕಥನ'ಗಳೆಂಬ ಪಕಳೆ ಪಕಳೆಗಳಲ್ಲಿ. 'ಕುರುಕ್ಷೇತ್ರದ ಶಕ್ತಿ ಕೇಂದ್ರ ಯಾವುದಯ್ಯಾ' ಎಂದು ಕೇಳುವ 'ಸ್ವರ'ವು ಕೃಷ್ಣಯ್ಯನನ್ನು ಬೆಟ್ಟುಮಾಡಿ ತೋರಿಸುತ್ತಾ ಬೇರೆ ಬೇರೆ ಪಾತ್ರಗಳಿಂದ ಆತನ ತಂತ್ರಗಾರಿಕೆಯ ಪರಿಣಾಮದ ಸಂಕಷ್ಟಗಳನ್ನು ನೋವುಗಳನ್ನು ಅನುರಣನ ಮಾಡುತ್ತದೆ," ಎನ್ನುತ್ತಾರೆ ಡಾ. ಬಿ.ಎ. ವಿವೇಕ ರೈ. ಅವರು ಡಾ. ಟಿ. ಗೋವಿಂದ ರಾಜು ಅವರ 'ಕೃಷ್ಣಯ್ಯನ ಕೊಳಲು' ಕೃತಿ ಕುರಿತು ಬರೆದ ಅನಿಸಿಕೆ.

ಡಾ. ಟಿ. ಗೋವಿಂದ ರಾಜು ಅವರ 'ಕೃಷ್ಣಯ್ಯನ ಕೊಳಲು' ಒಂದು ವಿಭಿನ್ನ ಮಾದರಿಯ ಅಪೂರ್ವ ಕಾದಂಬರಿ. ಮಹಾಭಾರತದ ಕುರುಕ್ಷೇತ್ರ ಯುದ್ಧದ ಬಳಿಕದ ಸಂಭಾವ್ಯತೆಗಳನ್ನು ಕೃಷ್ಣನನ್ನು ಕೇಂದ್ರದಲ್ಲಿ ಇರಿಸಿಕೊಂಡು ಆಧುನಿಕ ಭಾರತದ ನೋಟಗಳಿಂದ ದರ್ಶಿಸಲು ಮಾಡಿದ ಚಿಕಿತ್ಸಕ ಕಾದಂಬರಿಯಾಗಿ 'ಕೃಷ್ಣಯ್ಯನ ಕೊಳಲು' ಅನನ್ಯವಾಗಿದೆ. ಜಾನಪದದ ಸೃಜನಶೀಲ ವಿದ್ವಾಂಸರು ಆಗಿರುವ ಡಾ. ಟಿ. ಗೋವಿಂದ ರಾಜು ತಮ್ಮ ಈ ಕಾದಂಬರಿಯಲ್ಲಿ ಉದ್ದಕ್ಕೂ ಜಾನಪದ ಆವರಣವನ್ನು ಸೃಷ್ಟಿಸುತ್ತಾರೆ, ಜನಪದ ಭಾಷೆಯ ಸೊಗಡಿನ ಅನಾವರಣ ಮಾಡುತ್ತಾರೆ. ಆದ್ದರಿಂದಲೇ ಇಲ್ಲಿನ ಪಾತ್ರಗಳು ಪುರಾಣದ ಆವರಣದಿಂದ ಜಾನಪದ ಆವರಣಕ್ಕೆ ಪಾದಾರ್ಪಣ ಮಾಡುತ್ತವೆ. ಮಹಾಭಾರತದ ಕೃಷ್ಣ ದ್ವಾರಕೆಯಲ್ಲಿ ಕೃಷ್ಣಯ್ಯನಾಗಿ ನಮಗೆ ಆಪ್ತನಾಗುತ್ತಾನೆ. ಯುಗ ಮಗುಚಿದಾಗ ಹೊಸ ಜಗತ್ತೊಂದು ನಿರ್ಮಾಣವಾಗುತ್ತದೆ. ಈ ಕಾದಂಬರಿ ಆರಂಭ ಆಗುವುದೇ ಅಂತಹ ಹೊಸ ಜಗತ್ತಿನ ಪ್ರವೇಶಿಕೆಯಿಂದ. ಅದು ಆಧುನಿಕ ಶ್ವೇಚ್ಛೆಯ ಸಮಾಜದ ವಸ್ತು ಪ್ರತಿರೂಪದ ಮಾದರಿಯಾಗಿ ಕಾಣಿಸುತ್ತದೆ. ಕೃಷ್ಣಯ್ಯ - ಜಾಂಬವತಿಯರ ಮಗ ಸಾಂಬನು ಅಂತಹ ಅಶಿಸ್ತಿನ ತರುಣರ ನಾಯಕನಾಗಿ ಇದ್ದಾಗ ತನ್ನ ಕುಟುಂಬದ ಒಳಗಿನಸಂಕಷ್ಟದ ಕಾರಣದಿಂದಾಗಿ ಉಂಟಾಗುವ ಕೃಷ್ಣಯ್ಯನ ತೊಳಲಾಟದಿಂದ ಕಾದಂಬರಿ ಮೊದಲಾಗುತ್ತದೆ. ಮುಂದೆ ಕಾದಂಬರಿಯ ಉದ್ದಕ್ಕೂ ಕೃಷ್ಣಯ್ಯ ಎದುರಿಸುವ ಅಂತರಂಗದ ಮತ್ತು ಬಹಿರಂಗದ ಸವಾಲುಗಳೇ ಕೃಷ್ಣಯ್ಯ ಕೇಂದ್ರಿತ ಮಹಾಭಾರತದ ಪೋಸ್ಟ್ ಮಾರ್ಟಮ್ನ ಪದರಗಳ ರೂಪದಲ್ಲಿ ಬಿಚ್ಚಿಕೊಳ್ಳುತ್ತವೆ.

ಆಡಳಿತದ ಇಂತಹ ಜಂಜಾಟದ ನಡುವೆ ಕೃಷ್ಣಯ್ಯನಿಗೆ ಜೀವಸೆಲೆಯಾಗಿ ದೊರೆಯುವುದು ತಾತ ನಂದಕನಜೊತೆಗೆ ಬರುವ ಬಾಲರಾಧೆಯ ಆಗಮನ. ಬಾಲ್ಯದ ನಿಷ್ಕಲ್ಮಶ ಪ್ರೀತಿಯ ರೂಪಕವಾದ ಪುಟ್ಟ ರಾಧೆ ನಿಸರ್ಗದ ಸಹಜತೆಯ ಪ್ರತಿರೂಪವೂ ಹೌದು. ಆದ್ದರಿಂದಲೇ ದ್ವಾರಕೆಯ ಅಧಿಕಾರದ ಒತ್ತಡದ ನಡುವೆ ಕೃಷ್ಣಯ್ಯ ತನ್ನ ಬಾಲ್ಯದ ಸುಖವನ್ನು ಅನುಭವಿಸುತ್ತಾನೆ. ಅಂತರಂಗದ ಕಡಲಿನ ಮುಗುಳುನಗು ಪುಟ್ಟ ರಾಧೆಯ ಮೂಲಕ ಆಹ್ಲಾದವನ್ನು ಈಯುತ್ತದೆ. ನಿಸರ್ಗಕ್ಕೆ ಹಿಂದಿರುಗುವುದು ಮತ್ತು ಬಾಲ್ಯಕ್ಕೆ ಹಿಂದಿರುಗುವುದು ಈ ಕಾದಂಬರಿಯ ಮುಖ್ಯ ಆಶಯ. 'ನೆನಪುಗಳ ಕಥನ' ಎನ್ನುವ ಕಾದಂಬರಿಯ ಆರಂಭದ ಉಪಶೀರ್ಷಿಕೆಯು ಸಾರ್ಥಕವಾಗಿ 'ಕೃಷ್ಣಯ್ಯಗೆ ನೆನಪಾದುವು ಗೋವಳ ಬಾಲ್ಯವು' ಎಂಬ ಕಿರು ಅಧ್ಯಾಯದೊಂದಿಗೆ ಮುಕ್ತಾಯ ವಾಗುತ್ತದೆ. 'ನೆನಪುಗಳ ಸಂಸ್ಕೃತಿ' (Memory culture/ Memorate) ಎನ್ನುವುದು ಬಾಳಸಂಜೆಯಲ್ಲಿ ಪುನಶ್ವೇತನ ಕೊಡುತ್ತದೆ.

ಈ ಕಾದಂಬರಿಯ ತಿರುಳಿನ ಭಾಗ ಅನ್ನಬಹುದಾದ 'ಸ್ವರ'ಗಳು ಮಿಡಿಯುವುದು 'ನೊಂದವರ ಕಥನ' ಮತ್ತು' ಬೆಂದವರ ಕಥನ'ಗಳೆಂಬ ಪಕಳೆ ಪಕಳೆಗಳಲ್ಲಿ. 'ಕುರುಕ್ಷೇತ್ರದ ಶಕ್ತಿ ಕೇಂದ್ರ ಯಾವುದಯ್ಯಾ' ಎಂದು ಕೇಳುವ 'ಸ್ವರ'ವು ಕೃಷ್ಣಯ್ಯನನ್ನು ಬೆಟ್ಟುಮಾಡಿ ತೋರಿಸುತ್ತಾ ಬೇರೆ ಬೇರೆ ಪಾತ್ರಗಳಿಂದ ಆತನ ತಂತ್ರಗಾರಿಕೆಯ ಪರಿಣಾಮದ ಸಂಕಷ್ಟಗಳನ್ನು ನೋವುಗಳನ್ನು ಅನುರಣನ ಮಾಡುತ್ತದೆ. ಅದರಲ್ಲಿ ಕೃಷ್ಣಯ್ಯನ ಹೆಂಡತಿಯರ ನೋವುಗಳು ಇವೆ. ಮಗ ಸಾಂಬನ ಕೆಂಪು ಕ್ರಾಂತಿಯ ತಲೆನೋವು ಇದೆ. ಯುದ್ಧದ ಪರಿಣಾಮವಾಗಿ ಅನಾಥರಾದ ಹೆಣ್ಣು ಮಕ್ಕಳ ಗೋಳಿನ ನೋವು ಇದೆ. ಕೃಷಿಕರ ಭೂಮಿಯು ಯುದ್ದದಿಂದ ನಾಶವಾದ ವ್ಯಥೆ ಇದೆ. ಕುರುಕ್ಷೇತ್ರದ ಯುದ್ಧೋತ್ತರ ಸಂಕ್ರಮಣ ಕಾಲದ ಸಂಕಷ್ಟಗಳಿಗೆ ಕಾದಂಬರಿ ತೆರೆದುಕೊಳ್ಳುವ ಮೂಲಕ ಕೃಷ್ಣಯ್ಯ ಇಲ್ಲಿ ಬಹುರೂಪಿ ನೋವುಗಳ ಸಾಕ್ಷಿಪ್ರಜ್ಞೆಯ ಪ್ರತಿನಿಧಿ ಆಗುತ್ತಾನೆ.

'ಬೆಂದವರ ಕಥನ'ದ ದೊಡ್ಡ ಸ್ವರವೇ 'ಸತ್ತವರ ಹೊರೆ ಬದುಕಿದವರಿಗೇ ಕಣಯ್ಯಾ' ಎಂಬುದು. ಕೃಷ್ಣಯ್ಯ ತನ್ನ ಬಾಲ್ಯದ ತುಂಟಾಟಗಳಿಗೆ ಭಕ್ತರಾಗಿ ಪರಿವರ್ತನೆಗೊಂಡ ತನ್ನ ಅಭಿಮಾನಿಗಳು ಕಟ್ಟಿದ ಪವಾಡದ ಕಥೆಗಳನ್ನು ಒಡೆಯುತ್ತಾ ಹೋಗುವ ಸನ್ನಿವೇಶ ಇಲ್ಲಿ ಬರುತ್ತದೆ. ಗೋವಿಂದರಾಜು ಅವರದ್ದು 'ಪುರಾಣಭಂಜನ' ಅಲ್ಲ, ಬದಲಾಗಿ ಪುರಾಣಗಳ ತಿರುಳಿನ ಶೋಧ. Not dymythification, but search for the core motifs of mythic constructions.

ಕುರುಕ್ಷೇತ್ರ ಯುದ್ಧ ಕಲಿಸಿದ ಪಾಠ ಏನು ಎನ್ನುವುದನ್ನು ಕೃಷ್ಣಯ್ಯನನ್ನು ಗುರಿಯಾಗಿ ಮಾಡಿಕೊಂಡು ಬೆಂದವರು ಸ್ಮಶಾನಕುರುಕ್ಷೇತ್ರದಲ್ಲಿ ಎಸೆಯುವ ವಾಗ್ದಾಣಗಳ ಸಂಕಥನಗಳ ಮೂಲಕ ಈ ಕಾದಂಬರಿ ಮನೋಜ್ಞವಾಗಿ ಕಟ್ಟಿಕೊಡುತ್ತದೆ. ಮಗ ಘಟೋತ್ಕಚನನ್ನು ಕಳೆದುಕೊಂಡ ಹಿಡಿಂಬೆ, ಮುಂಡ ಇಲ್ಲದೆ ರುಂಡ ಮಾತ್ರ ಇದ್ದು ಇಡೀ ಕುರುಕ್ಷೇತ್ರ ಯುದ್ಧದ ಸಾಕ್ಷಿಪ್ರಜ್ಞೆಯಾಗುವ ದುರಂತ ಪಾತ್ರ 'ಬರ್ಬರೀಕ', ಕೃಷ್ಣನ ಕುತಂತ್ರದಿಂದ ಅಪ್ಪ ದ್ರೋಣನನ್ನು ಕಳೆದುಕೊಂಡು ಚಿರಂಜೀವಿ ಎಂಬ ಶಾಪಕ್ಕೆ ಒಳಗಾಗಿ ಕುರುಕ್ಷೇತ್ರ ರಣರಂಗದಲ್ಲಿ ಅಂಡಲೆಯುವ ಅಶ್ವತ್ಥಾಮ: ಇವರು ಎಲ್ಲರ ಜೊತೆಗೂ ಚುಚ್ಚುವ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬಂದ ಕೃಷ್ಣಯ್ಯನ ಮನೋಭೂಮಿಕೆಯ ಆಳವಾದ ನೋವಿನ ಪದರಗಳು ಸಂವಾದ ರೂಪದಲ್ಲಿ ಇಲ್ಲಿ ಕಾಣಿಸಿಕೊಂಡಿವೆ.

ಈ ಕಾದಂಬರಿಯಲ್ಲಿ ಒಂದು ಸಂಕೀರ್ಣ ಭೂಮಪ್ರತಿಮೆಯಾಗಿ ನಿಲ್ಲುವುದು 'ಕೃಷ್ಣಯ್ಯಗೆದುರಾಯಿತು ಮಹಾ ಯಕ್ಷಪ್ರಶ್ನೆ' ಎಂಬ ಅಧ್ಯಾಯ. ಕುರುಕ್ಷೇತ್ರ ಯುದ್ಧಕ್ಕೆ ತಾನು ಹೊಣೆಗಾರನೇ ಎನ್ನುವ ಅಂತರಂಗ ಶೋಧದ ಪ್ರಶ್ನೆಯನ್ನು ಹಾಕಿಕೊಂಡ ಕೃಷ್ಣಯ್ಯ ಅದಕ್ಕೆ ಪ್ರತಿಕ್ರಿಯೆಯಾಗಿ ವಿಭಿನ್ನ ವೈರುಧ್ಯದ ಉತ್ತರಗಳು ಹೊಮ್ಮಲು ಅವಕಾಶ ಕಲ್ಪಿಸುತ್ತಾನೆ. ಇಲ್ಲಿ 'ಯಕ್ಷ' ಕಥನ ಒಂದು ಸಾಧನ ಮಾತ್ರ. ಈ ಅಧ್ಯಾಯದ ಕಥನದ ಸಂರಚನೆಯನ್ನು ಗೋವಿಂದ ರಾಜು ಅದ್ಭುತವಾಗಿ ಹೆಣೆದಿದ್ದಾರೆ. ಇಲ್ಲಿನ ಪಾಪದಲ್ಲಿ ಎಲ್ಲರ ಪಾಲು ಇದೆ ಎನ್ನುವ ಸೂಕ್ಷ್ಮ ಗ್ರಹಿಕೆಯನ್ನು ಪರಿಭಾವಿಸಬಹುದು. ಚರಿತ್ರೆಯ ಅಧ್ಯಯನದಲ್ಲಿ ಬಳಸುವ Heteroglossia ಎಂಬ ಪರಿಕಲ್ಪನೆಯನ್ನು ಇಲ್ಲಿ ನೆನಪಿಗೆ ತಂದುಕೊಳ್ಳಬಹುದು.

ಕೃಷ್ಣಯ್ಯನ ಕೊಳಲು 'ಕಾದಂಬರಿಯು ಕೊನೆಯಲ್ಲಿ ಎರಡು ಶಿಖರ ಘಟನೆಗಳನ್ನು ಜೋಡಿಸಿ, ಪುರಾಣದ ಕಥೆಗೆ ಜಾನಪದ ಆರಾಧನೆಯ ಅಂತ್ಯವನ್ನು ಕಲಾತ್ಮಕವಾಗಿ ರೂಪಿಸುತ್ತದೆ.

ಕೃಷ್ಣಯ್ಯನ ಸಾವು ಬೇಡನೊಬ್ಬನು ಮೃಗಕ್ಕೆ ಪ್ರಯೋಗಿಸಿದ ವಿಷಯುಕ್ತ ಬಾಣದಿಂದ ಆಗುವ ಪುರಾಣದ ಕಥೆಯನ್ನು ಬಳಸಿಕೊಳ್ಳುವಾಗ ಗೋವಿಂದರಾಜು ಮತ್ತೆ ಮನುಷ್ಯರ ದ್ವೇಷದ ಸ್ವಭಾವದ ಕಟುವಿಮರ್ಶೆಯನ್ನು ಮಾಡುತ್ತಾರೆ. ಕೃಷ್ಣಯ್ಯ ಬೇಡನಿಗೆ ಹೇಳುವ ಮಾತು: "ನೀನು ಹೊಟ್ಟೆಪಾಡಿಗೆ ನಂಜು ಲೇಪಿಸಿದ ಬಾಣವನ್ನು ಮಿಕದ ಮೇಲೆ ಪ್ರಯೋಗಿಸುವೆ. ನಾವಾದರೋ, ದೇಹದ ತುಂಬಾ ನಂಜು ತುಂಬಿಕೊಂಡೇ ಅಧಿಕಾರಕ್ಕಾಗಿ ಕಾದಾಡುವವರಾಗಿದ್ದೆವು ಎಂಬ ಜ್ಞಾನೋದಯ ನನಗೀಗ ಆಯಿತು."

ಈ ಕಾದಂಬರಿಯ ಸೊಗಸು ಪರಿಪಕ್ವ ಆಗುವುದು ಕಾದಂಬರಿಯ ಕೊನೆಯಲ್ಲಿ. ಕೃಷ್ಣಯ್ಯ ಗೊಲ್ಲರ ಹಟ್ಟಿಯ ರಾಧೆಗೆ ಕಳಿಹಿಸಿದ ಕೊಳಲು ಮತ್ತು ನವಿಲು ಗರಿ ಹಟ್ಟಿಯ ಗೊಲ್ಲ ಗೊಲ್ಲತಿಯರಲ್ಲಿ ಅನನ್ಯತೆಯ ಗುರುತುಗಳು ಆಗಿ ಪರಂಪರೆಯ ಭಾಗ ಆಗುತ್ತವೆ. ಹಟ್ಟಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ 'ಕೊಳಲ ಹಬ್ಬ', 'ಬೆಳದಿಂಗಲಯ್ಯನ ನಾದದ ಆರಾಧನೆ'ಗಳ ಸುತ್ತ ಜಾನಪದರ ಬಾಯಿಮಾತಿನ ಪ್ರೀತಿಯ ಕೃಷ್ಣಯ್ಯ' ಕಳುಹಿಸಿದ ಕೊಳಲು ಗೋವುಗಳ ಜೊತೆಗೆ ಹಾಡು ಕುಣಿತಗಳ ಸಂತಸದ ನಿರ್ಮಲ ಬದುಕನ್ನು ಚಿರಂತನಗೊಳಿಸುತ್ತದೆ.

ಡಾ. ಟಿ. ಗೋವಿಂದ ರಾಜು ಅವರು ಪುರಾಣ, ಮಹಾಕಾವ್ಯ, ಇತಿಹಾಸ, ಸಮಕಾಲೀನ ಬದುಕು, ಜಾನಪದ ಆಚರಣೆ, ಆರಾಧನೆ ಮತ್ತು ಲೋಕದೃಷ್ಟಿಗಳನ್ನು ಅಪೂರ್ವವಾಗಿ ಬೆಸೆದ 'ಕೃಷ್ಣಯ್ಯನ ಕೊಳಲು' ಕಾದಂಬರಿಯು ಕನ್ನಡ ಕಥನಸಾಹಿತ್ಯಕ್ಕೆ ಒಂದು ಅಪೂರ್ವ ಕೊಡುಗೆ.

 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...