ಬೀದಿ ಎಂದರೆ ಸುಮ್ಮನಲ್ಲ... ಅಲ್ಲಿ ಸಂವೇದನಾಶೀಲರಾದವರಿಗೆ ನಿತ್ಯವೂ ಕತೆ ಸಿಗುತ್ತದೆ


"ಕನ್ನಡ ಬೋಧನೆ ಎಂದರೆ ನನ್ನ ಜೀವಂತಿಕೆ ಎಂದು ಭಾವಿಸುವ ನನಗೆ ಹಿರಿಯ ಅಧ್ಯಾಪಕಿಯೊಬ್ಬರು ಹಲವು ಅನುಭವ ಪಾಠಗಳನ್ನು ಕಲಿಸಿದ ಸಾರ್ಥಕತೆ ವೈಯಕ್ತಿಕವಾಗಿ ನಾನು ಈ ಕೃತಿಯಿಂದ ಪಡೆದೆ. ಇಲ್ಲಿರುವ 43 ಪ್ರಬಂಧಗಳು 43 ಜೀವನಾನುಭವಗಳಾಗಿವೆ. ಕೊನೆಯಲ್ಲಿ ನಮ್ಮೊಳಗೊಂದು ಹೊಸ ಚಿಂತನೆಯನ್ನು ಬಿತ್ತಿ ಮುಂದೆ ಸಾಗುತ್ತವೆ," ಎನ್ನುತ್ತಾರೆ ಭವ್ಯ ಟಿ.ಎಸ್. ಅವರು ಎಂ.ಆರ್.ಕಮಲ ಅವರ `ಹೊನ್ನಾವರಿಕೆ’ ಕೃತಿ ಕುರಿತು ಬರೆದ ವಿಮರ್ಶೆ.

ಹೊನ್ನಾವರಿಕೆ ಈ ಪುಸ್ತಕದ ಶೀರ್ಷಿಕೆಯೇ ಎಷ್ಟು ಸುಂದರ. ಇಲ್ಲಿನ ಪ್ರತಿ ಪ್ರಬಂಧವೂ ಸಹ ಸಹೃದಯರ ಮನಸ್ಸನ್ನು ಆವರಿಸುತ ಲೇಖಕಿಯ ಸ್ವಂತ ಅನುಭವಗಳು ನಮ್ಮವೇ ಎನ್ನುವಂತಹ ಬಲು ಆಪ್ತ ಭಾವವನ್ನು ಮೂಡಿಸುತ್ತವೆ. ಎಂ.ಆರ್.ಕಮಲ ಮೇಡಂ ಅವರು ಕನ್ನಡ ಅಧ್ಯಾಪಕಿಯಾಗಿ ತಮ್ಮ ವೃತ್ತಿ ಜೀವನದುದ್ದಕ್ಕೂ ಪಡೆದ ರೋಚಕ ಅನುಭವಗಳ ದಾಖಲೆಯೂ ಇದೆನಿಸುತ್ತದೆ. ಲೇಖಕಿ ತಾವು ಬೋಧಿಸಿದ ಮತ್ತು ಅಧ್ಯಯನ ಮಾಡಿದ ಶ್ರೀಮಂತ ಕನ್ನಡ ಸಾಹಿತ್ಯದ ತಿರುಳನ್ನು ಪ್ರತಿ ಪ್ರಬಂಧದಲ್ಲಿ ನಮಗೆ ಉಣಬಡಿಸುತ್ತಾರೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿನಿ ಮತ್ತು ಬೋಧಕಿಯೂ ಆದ ನನಗೆ ಇದೊಂದು ಪರಾಮರ್ಶನ ಗ್ರಂಥವೂ ಆಗಿದೆ ಅನಿಸಿತು. ಆದಿಪುರಾಣದ ನೀಲಾಂಜನೆಯ ಪ್ರಸಂಗ, ಜನ್ನನ ಯಶೋಧರ ಚರಿತೆ, ರನ್ನನ ಗದಾಯುದ್ಧ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ನಾಗಚಂದ್ರನ ರಾಮಚಂದ್ರ ಚರಿತ ಪುರಾಣ ಹೀಗೆ ಅನೇಕ ಹಳಗನ್ನಡ, ನಡುಗನ್ನಡ ಸಾಹಿತ್ಯದ ತರಗತಿಗಳಿಗೆ ನಾನು ಮತ್ತೆ ಹೋಗಿ ಕುಳಿತು ಕೇಳಿದ ಭಾವ ಈ ಕೃತಿ ಓದುವಾಗ.

ಕನ್ನಡ ಬೋಧನೆ ಎಂದರೆ ನನ್ನ ಜೀವಂತಿಕೆ ಎಂದು ಭಾವಿಸುವ ನನಗೆ ಹಿರಿಯ ಅಧ್ಯಾಪಕಿಯೊಬ್ಬರು ಹಲವು ಅನುಭವ ಪಾಠಗಳನ್ನು ಕಲಿಸಿದ ಸಾರ್ಥಕತೆ ವೈಯಕ್ತಿಕವಾಗಿ ನಾನು ಈ ಕೃತಿಯಿಂದ ಪಡೆದೆ. ಇಲ್ಲಿರುವ 43 ಪ್ರಬಂಧಗಳು 43 ಜೀವನಾನುಭವಗಳಾಗಿವೆ. ಕೊನೆಯಲ್ಲಿ ನಮ್ಮೊಳಗೊಂದು ಹೊಸ ಚಿಂತನೆಯನ್ನು ಬಿತ್ತಿ ಮುಂದೆ ಸಾಗುತ್ತವೆ.

ನಾವು ಪ್ರತಿನಿತ್ಯ ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳದ ಕಣ್ಮುಂದೆ ಬಂದು ಹೋಗುವವರು ಇದ್ದಕ್ಕಿದ್ದಂತೆ ಕಣ್ಮರೆಯಾದರೆ ಹೇಗನಿಸಬಹುದೆಂಬುದನ್ನು ಚೋಟುದ್ದದ ಹುಡುಗ ಪ್ರಬಂಧ ಹೇಳುತ್ತದೆ. ನಮ್ಮೊಳಗಿನ ಸಂತಸ ಮಾತ್ರ ಉಳಿದು, ಸಣ್ಣತನ, ಆತಂಕ, ಮೂರ್ಖತನಗಳನ್ನು ಕಳೆಯುತ್ತಾ ಹೋಗಬೇಕು ಎಂಬ ಸಂದೇಶ ನೀಡಿದೆ ಕಳೆದುದು ಸಿಗದಿರಲಿ ಪ್ರಬಂಧ.

ಗೃಹಿಣಿಯೊಬ್ಬಳ ಪುಟ್ಟ ಬದುಕಿನಲ್ಲಿ ಅವಳ ಎಷ್ಟೆಲ್ಲಾ ಆಸೆ, ಕನಸುಗಳನ್ನು ಅವಳು ಗೊತ್ತಿಲ್ಲದಂತೆ ಕಳೆದುಕೊಂಡು ಬದುಕಬೇಕಾಗುತ್ತದೆ ಎಂಬುದನ್ನು ಭಾವನಾತ್ಮಕವಾಗಿ ಅರುಹುತ್ತದೆ ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ ಎಂಬ ಪ್ರಬಂಧ.

ಮನಸ್ಸಿನ ಗಡಿರೇಖೆಗಳನ್ನು ಮೀರಿ ಅಗಾಧ ಕನಸುಗಳನ್ನು ನನಸು ಮಾಡಿಕೊಳ್ಳಬೇಕು. ಜಗತ್ತನ್ನು ಸುತ್ತಬೇಕೆಂಬ ತೀವ್ರ ಹಂಬಲ ಕನಸೊಂದನ್ನು ಸುರುಳಿ ಸುತ್ತಿ ಪ್ರಬಂಧದಲ್ಲಿದೆ. ಹರಪನಹಳ್ಳಿ ಭೀಮವ್ವ ಬರೆದಿರುವ ಬಾಗಿಲು ತೆಗೆಯೆ ಎಂಬ ಕೀರ್ತನೆ ಶಿವ ಪಾರ್ವತಿಯರ ಸಂಭಾಷಣೆ ಮೂಲಕ ಮಾತಿಗಿಂತ ಮೌನದ ಅರ್ಥವಂತಿಕೆ ಮಹತ್ವದ್ದು ಎಂಬುದನ್ನು ಸೂಚಿಸುತ್ತದೆ. ಇದು ಬಾಗಿಲು ತೆಗೆಯೆ ಪ್ರಬಂಧದ ಸಾರವಾಗಿದೆ.

ಪುಸ್ತಕವೊಂದು ಎದುರಿಗಿದ್ದರೂ ಓದಲಾರದ ಅನಿವಾರ್ಯತೆಗಳು, ಜೀವನದ ಎಲ್ಲಾ ಪಾತ್ರಗಳ ನಿರ್ವಹಣೆಯ ಹೊಣೆಗಾರಿಕೆಗಳ ನಡುವೆ ನಮ್ಮ ವರ್ತಮಾನ ಕಣ್ಣೆದುರಿನ ಪುಸ್ತಕ ರೂಪದಲ್ಲಿ ಕಾಣುವುದು ವರ್ತಮಾನದ ಹುಡುಕಾಟದಲ್ಲಿ ಪ್ರಬಂಧದಲ್ಲಿ. ತಾವು ಬರೆದ ಬರಹಗಳನ್ನೆಲ್ಲಾ ಹಂಚಿಕೊಳ್ಳುವ ಮುಕ್ತ ಮನ ಕೆಲವರದಾದರೆ ಅವನ್ನೆಲ್ಲಾ ಯಾರಿಗೂ ಸಿಗದಂತೆ ಮುಚ್ಚಿಟ್ಟು ಪುಸ್ತಕ ರೂಪದಲ್ಲಿ ತರುವ ಹಂಬಲ ಕೆಲವರದ್ದು. ಆದರೆ ನಮ್ಮ ಬರಹಗಳು ಇನ್ನಾರದ್ದೋ ದನಿಯಾಗಿ ಹೊಮ್ಮಿದರೆ, ಅದು ನಿಲ್ಲದೆ ಪಯಣಿಸುತ್ತಲೇ ಸಾಗಿದರೆ ನನಗೆ ಆತಂಕವಿಲ್ಲ ಎಂದಿದ್ದಾರೆ ಲೇಖಕಿ ತಮ್ಮ ಎಲ್ಲ ಹೆಣ್ಣುಗಳ ದನಿಯಾಗಲಿ ಪ್ರಬಂಧದಲ್ಲಿ.

ಏನೂ ಮಾಡದೆ ಸುಮ್ಮನೆ ತನ್ನ ಪಾಡಿಗೆ ತಾನಿರುವ ತನ್ನ ಭಾವಲಹರಿಯಲ್ಲಿ ತಾನೊಬ್ಬಳೇ ಪಯಣಿಸುವ ಅನುಭವವೇ ಒಂದು ಲಹರಿ ಪ್ರಬಂಧವಾಗಿದೆ. ನಮ್ಮ ಜ್ಞಾನ ಹಂಚಿದಷ್ಟು ಹೆಚ್ಚುತ್ತದೆ. ಬಚ್ಚಿಡುವುದು ಅರ್ಥಹೀನವೆಂಬ ಸಂದೇಶ ಹೊತ್ತಿದೆ ಬಚ್ಚಿಟ್ಟಿದ್ದು ಪರರಿಗೂ ಅಲ್ಲ ಎಂಬ ಪ್ರಬಂಧ.

ನಮ್ಮ ಮನಸ್ಸಿಗೆ ಅಹಿತಕರವೆನಿಸಿದ ಘಟನೆ, ಸಂಬಂಧ, ನೆನಪುಗಳನ್ನು ಡಿಲಿಟ್ ಮಾಡುವಂತಿದ್ದರೆ ಎಂಬ ಚಿಂತನೆ ನೀಡುತ್ತದೆ ಡಿಲೀಟ್ ಮಾಡುತ್ತ ಬದುಕುವುದು ಪ್ರಬಂಧ. ಹೆಣ್ಣು ತನ್ನೆಲ್ಲಾ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸಲಾರದ ಸಂದಿಗ್ಧತೆಯನ್ನು ಗಂಟಲಲ್ಲಿ ಮುರಿದ ಮುಳ್ಳು ಪ್ರಬಂಧ ತಿಳಿಸುತ್ತದೆ.

ಬೀದಿ ಎಂದರೆ ಸುಮ್ಮನೆ ಅಲ್ಲ ಸಂವೇದನಾಶೀಲರಾದವರಿಗೆ ಅಲ್ಲಿ ನಿತ್ಯವೂ ಒಂದು ಕತೆ ಸಿಗುತ್ತದೆ ಎಂಬ ಧ್ವನಿ ಇದೆ ಬೀದಿಯಲ್ಲಿ ಸಿಕ್ಕ ಕತೆಗಳು ಪ್ರಬಂಧದಲ್ಲಿ. ನಾವೆಲ್ಲರೂ ಓದುವಾಗ ಬಳಸುತ್ತಿದ್ದ ರಫ್ ನೋಟ್ ಬುಕ್ ಕೆಲವೊಮ್ಮೆ ನಮ್ಮ ಬದುಕು ಸಹ ಅದರಂತೆ ಕಲಸುಮೇಲೋಗರವಾಗಿರುತ್ತದೆ. ನೀಟ್ ಆಗಿರುವುದು ಅದಕ್ಕೆ ನೀರಸವೆನಿಸಬಹುದು ಎಂಬ ಭಾವವಿದೆ ಒಂದು ರಫ್ ನೋಟ್ ಬುಕ್ ಪ್ರಬಂಧದಲ್ಲಿ.

ಹೊಯ್ಸಳ ವಿಷ್ಣುವರ್ಧನನ ರಾಣಿ ಶಾಂತಲೆ ಅವಳ ಬದುಕು, ನಿಗೂಢ ಸಾವು ಅದರ ಬಗ್ಗೆ ಲೇಖಕಿ ಓದಿದ ಶಾಂತಲಾ ಕಾದಂಬರಿ, ಮಾಚಿಕಬ್ಬೆ ಪಾತ್ರ. ಸಾವು ಮತ್ತಷ್ಟು ಬದುಕಿನೆಡೆಗೆ ನಮ್ಮನ್ನು ಸೆಳೆವ ವಿಪರ್ಯಾಸವನ್ನು ಹೇಳುವಂತಿದೆ ವಾಸ್ತವದ ಬೆಂಕಿಯಲ್ಲಿ ಸುಡದ ನೆನಪುಗಳು ಪ್ರಬಂಧ. ಎತ್ತಿನ ಗಾಡಿ ಪ್ರಯಾಣದ ಸುಂದರ ನೆನಪುಗಳು, ಗಾಡಿ ಹೊಡೆಯುವುದರ ಬಗ್ಗೆ ಲೇಖಕಿಯವರಿಗಿದ್ದ ಆಸಕ್ತಿ ಚಿತ್ರಿತವಾಗಿದೆ ಗಾಡಿಯ ಮೋಹ ಪ್ರಬಂಧದಲ್ಲಿ. ಹೆಣ್ಣಿನ ಮನಸ್ಸೊಂದು ವಸ್ತು ಸಂಗ್ರಹಾಲಯದಂತೆ. ಅವಳು ಸದಾ ತನ್ನೊಂದಿಗೆ ಹೊತ್ತು ತಿರುಗುವ ನೆನಪುಗಳ ಬುತ್ತಿ ಚಿಗುರು, ಮನೆ ಮತ್ತು ಮಣ್ಣು ಅವಳ ಮಾಂಸ ಮಜ್ಜೆಯಂತೆ‌ ಎಂಬ ನವಿರಾದ ಭಾವಗಳು ನೆನಪುಗಳ ಬುತ್ತಿ ಚಿಗುರು ಪ್ರಬಂಧದಲ್ಲಿ ಅರಳಿವೆ.

ನಮ್ಮ ದನಿ ಎಂದರೆ ಅದರೊಳಗೆ ಹಲವಾರು ದನಿ ಸೇರಿದೆ. ಕೇಳಿಸಿಕೊಳ್ಳುವ ವ್ಯವಧಾನವಿದ್ದಾಗ ಮಾತ್ರ ನಮಗೆ ವೈವಿಧ್ಯಮಯ ದನಿಗಳನ್ನು ಒಳಗಿಳಿಸಿಕೊಳ್ಳುವ ಅವಕಾಶ ಸಿಗುತ್ತದೆ ಎನ್ನುತ್ತದೆ ನಮ್ಮದೇ ಆದ ದನಿಯಿದೆಯೇ ಎಂಬ ಪ್ರಬಂಧ.

ತಮ್ಮದಲ್ಲದ ಜಾಗವನ್ನು ತಮ್ಮದು ಎಂಬಂತೆ ಹಕ್ಕು ಸ್ಥಾಪಿಸುವುದು, ಬೇಲಿಯೆಬ್ಬಿಸುವ ಮನೋಪ್ರವೃತ್ತಿ ಎಷ್ಟುಅಸಹ್ಯಕರ ಎಂಬ ವಿಡಂಬನೆ ಬೇಲಿ ಎಬ್ಬಿಸುವವರು ಪ್ರಬಂಧದಲ್ಲಿದೆ. ಲೇಖಕಿ ತಮ್ಮ ವೃತ್ತಿ ಬದುಕಿನಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಳ್ಳುವಾಗ ಎದುರಾದ ಸವಾಲುಗಳು, ವಿದ್ಯಾರ್ಥಿಗಳಿಂದ ಪಡೆದ ಅನುಭವಗಳನ್ನು ಮನಮುಟ್ಟುವಂತೆ ತಿಳಿಸಿದ್ದಾರೆ ಪ್ರವಾಸ ಕಥನ ಪ್ರಬಂಧದಲ್ಲಿ. ಕಾಲ ಎಷ್ಟೇ ಬದಲಾದರೂ ಹೆಣ್ಣಿನ ಬಗೆಗಿನ ಕೆಲವು ಧೋರಣೆಗಳಲ್ಲಿ ಬದಲಾವಣೆ ಆಗದೆ ಇರುವುದರ ಬಗ್ಗೆ ವಿಷಾದ ಹೊಮ್ಮಿಸುತ್ತದೆ ಹೆಣ್ಣೆಂದರೆ, ಬರಹಗಾರ್ತಿಯಾಗುವುದೆಂದರೆ ಪ್ರಬಂಧ.

ನೋವು ಕೂಡ ನಲಿವಿನಷ್ಟೇ ಸಹಜವಾದುದು. ಸಾವು ಸೃಷ್ಟಿಸುವ ಯಾತನೆಯ ಹಲವು ಮುಖಗಳನ್ನು ತೆರೆದಿಡುವಂತಹ ಪ್ರಬಂಧವೇ ಒಂದು ನೋವಿನ ಗೀತೆ. ಕೋಣೆಗಳಿಂದ ಕೋಣೆಗಳಿಗೆ ಹೋಗುವುದನ್ನು ತಿರಸ್ಕರಿಸುವ ಲೇಖಕಿ ತನಗೀಗ ಬಯಲು ಬೇಕಾಗಿದೆ ಎಂದು ದನಿ ಎತ್ತುತ್ತಿದ್ದಾರೆ ಬಯಲು ಬೇಕಾಗಿದೆ ಪ್ರಬಂಧದಲ್ಲಿ.

ಹಳೆಯ ಫೋಟೊವೊಂದು ಮನದಲ್ಲಿ ಮೂಡಿಸಿದ ಭಾವನೆಗಳನ್ನು ಮತ್ತು ನೆನಪುಗಳನ್ನು ಹಂಚಿಕೊಂಡಿದ್ದಾರಡ ಹಳೆಯ ಚಿತ್ರವೊಂದನ್ನು ಹಿಂಬಾಲಿಸಿ ಎಂಬ ಪ್ರಬಂಧದಲ್ಲಿ. ಕೆಲಸ, ತ್ಯಾಗ, ಇತರರಿಗಾಗಿ ಬದುಕುವುದರ ಜೊತೆಗೆ ನಮ್ಮ ವೈಯಕ್ತಿಕ ಸಂತಸದ ಕ್ಷಣಗಳನ್ನು ಕಳೆದುಕೊಳ್ಳಬಾರದೆಂಬ ಸಂದೇಶ ನೀಡುತ್ತದೆ ಕರ್ತವ್ಯದ ಗಾಣ ಎಂಬ ಪ್ರಬಂಧ.

ತಮ್ಮ ಕುಚೇಷ್ಟೆಗಳಿಂದ ಬೇರೆಯವರ ಬದುಕಿಗೆ ತೊಂದರೆ ನೀಡುವವರ ಬಗ್ಗೆ ಬೆನ್ನು ಹತ್ತುವ ಬೇತಾಳಗಳು ಪ್ರಬಂಧ ನೈಜ ಘಟನೆಗಳನ್ನು ಆಧರಿಸಿ ತಿಳಿಸುತ್ತದೆ. ಮಾತನ್ನು ಇನ್ನೊಬ್ಬರ ಮೇಲೆ ಪ್ರಯೋಗಿಸುವ ಅಸ್ತ್ರವನ್ನಾಗಿ ಉಪಯೋಗಿಸುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವನ್ನು ಕುರಿತು ಪದಗಳ ಕದನ ಪ್ರಬಂಧ ತಿಳಿಸುತ್ತದೆ.

ಪ್ರತಿಯೊಬ್ಬ ವ್ಯಕ್ತಿಯ ವಿಭಿನ್ನತೆ ಮತ್ತು ವಿಶೇಷತೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮನೋಭಾವವಿರಬೇಕು ಏಕರೂಪಗೊಳಿಸುತ್ತ ವಿಶೇಷತೆಗಳನ್ನು ನಾಶ ಮಾಡುವುದು ಸರಿಯಲ್ಲವೆಂಬ ಆಶಯವಿದೆ ಹಾಲು, ಹಕ್ಕಿ ಅಂತ ಹೇಳು? ಎಂಬ ಪ್ರಬಂಧದಲ್ಲಿ.

ಅಮ್ಮನ ಬದುಕಿನ ಬವಣೆಗಳು, ಗೋಡೆಗೆ ನವೀನರೂಪ ನೀಡುವಾಗ ಅಲ್ಲಿ ತೂಗು ಹಾಕಲಾದ ಫೋಟೋಗಳನ್ನು ಕೆಳಗಿಳಿಸುತ್ತಾ ನೆನಪುಗಳನ್ನು ಮಸುಕಾಗಿಸುತ್ತ ಸಾಗುವ ಬಗ್ಗೆ ವಿಷಾದ ಛಾಯೆಯಿದೆ ಗೋಡೆಯ ಚಿತ್ರಗಳನ್ನು ಇಳಿಸುತ್ತ ಪ್ರಬಂಧದಲ್ಲಿ. ಬಾಹ್ಯ ಕಸಕ್ಕಿಂತ ಅಪಾಯಕಾರಿಯಾದುದು ಅಂತರಂಗದ ಕಸ ಅದನ್ನು ಮೊದಲು ಸರಿಯಾಗಿ ವಿಲೇವಾರಿ ಮಾಡಬೇಕೆಂದು ಸಂದೇಶ ನೀಡುತ್ತದೆ ಒಳಗಿನ ಕಸದ ವಿಲೇವಾರಿ ಎಂಬ ಪ್ರಬಂಧ.

ನೀ ಬಾ ಬೇಗ ಚಂದಮಾಮ ಜನಪ್ರಿಯ ಸಿನಿಮಾಗೀತೆ ಲೇಖಕಿಯ ಮನದಲ್ಲಿ ಮೂಡಿಸಿದ ನೆನಪುಗಳ ಮೆಲುಕು ಕವಿಭಾವಲಹರಿಯಲ್ಲಿ ಚಂದಮಾಮ ಬೇರೆ ಬೇರೆ ಪ್ರತೀಕಗಳಾಗುವ ಬಗ್ಗೆ ಸುಂದರ ವರ್ಣನೆ ಬಾ ಬೇಗ ಚಂದಮಾಮ ಪ್ರಬಂಧದಲ್ಲಿದೆ. ರಾಜ್ ಅಪಹರಣದ ದಿನ ಪ್ರಬಂಧ ಅಂದು ಲೇಖಕಿಗೆ ಆದ ಅನುಭವದ ಬಗ್ಗೆ ಬರೆಯಲ್ಪಟ್ಟಿದೆ. ಆರು ಹಾಕಿಕೊಂಡು ಬದುಕುವುದು ಪ್ರಬಂಧದಲ್ಲಿ ಇಂದು ಪ್ರತಿಯೊಬ್ಬರೂ ತಮ್ಮದೇ ಪ್ರತಿಭೆಯನ್ನು ತೋರ್ಪಡಿಸಲು ವಿವಿಧ ರೀತಿಯಲ್ಲಿ ಪ್ರಯತ್ನ ಮಾಡುತ್ತಿರುವುದರ ಬಗ್ಗೆ ಚಿಂತನೆಯಿದೆ.

ಆರೋಪಿತ ನಡವಳಿಕೆಗಳಲ್ಲಿ ಬಂಧಿಯಾಗಿ ಪ್ರಬಂಧ ಹೆಣ್ಣು ಮತ್ತು ಗಂಡಿಗೆ ಇಂತಹುದ್ದೇ ನಡವಳಿಕೆ ಇರಬೇಕು ಎಂದು ಹೇರಿರುವುದು, ಅದರಿಂದ ಹೊರಬಂದು ಸಹಜವಾಗಿ ಬದುಕಬೇಕು ಎಂಬ ಸಂದೇಶ ನೀಡಿದೆ.

ಸಂಪ್ರದಾಯದ ಹೆಸರಿನಲ್ಲಿ ಹೆಣ್ಣು ಹೊರಬೇಕಾದ ಭಾರಗಳ ಬಗ್ಗೆ ಭಾರವೆನಿಸುವುದನ್ನೆಲ್ಲ ಕಳಚಲೇಬೇಕು ಪ್ರಬಂಧದಲ್ಲಿ ಸ್ವಂತ ಅನುಭವದ ಮೂಲಕ ತಿಳಿಸಿದ್ದಾರೆ. ಒಂದು ಹಳೆಯ ಐಡೆಂಟಿಟಿ ಕಾರ್ಡ್ ಪ್ರಬಂಧದಲ್ಲಿ ನಮ್ಮೂರು, ನಮ್ಮೂರಿನವರು ಎಂಬ ಆಪ್ತ ಭಾವನೆಗಳಿವೆ. ನೊಂದ ನೋವನ್ನಷ್ಟೇ ಹಾಡಬೇಕೇನು ಪ್ರಬಂಧದಲ್ಲಿ ನೋವುಗಳ ನಡುವೆಯೂ ನಲಿವು ಹುಡುಕಬೇಕಾದ ಅವಶ್ಯಕತೆ ವ್ಯಕ್ತವಾಗಿದೆ.

ಕಾಲಿಗೆ ಗೆಜ್ಜೆ ಕಟ್ಟಿ ಪ್ರಬಂಧದಲ್ಲಿ ಕಾಲ್ಗೆಜ್ಜೆಯೊಂದಿಗಿರುವ ಹೆಣ್ಮನದ ಭಾವನೆಗಳು, ದುರಂತಗಳ ಬಗ್ಗೆ ವಿವರಿಸಲಾಗಿದೆ. ದಿಗಂಗನೆಯರು ಅವಳೊಂದಿಗೆ ಬಿಡದೆ ಅತ್ತರು ಪ್ರಬಂಧ ಹರಿಶ್ಚಂದ್ರ ಕಾವ್ಯದ ಚಂದ್ರಮತಿ ಪ್ರಲಾಪ ಬೋಧನೆಯ ಅನುಭವ, ಒಬ್ಬರ ಅಳು ಹೇಗೆ ಎಲ್ಲರೊಳಗೂ ಅಳು ಮೂಡಿಸುತ್ತದೆ ಎಂಬುದನ್ನು ಹಲವು ನಿದರ್ಶನಗಳ ಮೂಲಕ ತಿಳಿಸಿದ್ದಾರೆ.

ಐಸಿರಿಗೆ ಆಳಾಗಿ ಬಾಳಲೇಕೋ ಪ್ರಬಂಧ ಸಿರಿ ಸಂಪತ್ತಿನ ಬಗ್ಗೆ ಇರುವ ಮೋಹ, ಅದನ್ನು ಮೀರಿ ಬದುಕುವ ಬಗೆಯನ್ನು ತಿಳಿಸುತ್ತದೆ. ಡೆಸ್ಕಿನ ಕತೆ ಪ್ರಬಂಧದಲ್ಲಿ ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಡೆಸ್ಕಿನ ಮೇಲೆ ಕೊರೆಯುವ ಹೆಸರಿನ ಬಗ್ಗೆ ರೋಚಕ ಕತೆ ತಿಳಿಸುತ್ತದೆ.

ಹರಟೆಕಟ್ಟೆಗಳ ಬೆಳಕಿನಲ್ಲಿ ಪ್ರಬಂಧ ಮನಸ್ಸಿಗೆ ಆಪ್ತವೆನಿಸುವ ಸ್ಥಳಗಳ ನೆನಪುಗಳನ್ನು ಹಂಚಿಕೊಳ್ಳುತ್ತದೆ. ನೆನಪುಗಳ ಮೂಟೆಯನ್ನು ಕೆಳಗಿಳಿಸಿದ ಕ್ಷಣ ಎಂಬ ಪ್ರಬಂಧ ಲೇಖಕಿಯವರ ವೃತ್ತಿ ಜೀವನದ ಮರೆಯಲಾರದ ಪ್ರಸಂಗಗಳನ್ನು ಚಿತ್ರಿಸುತ್ತದೆ. ಎಲ್ಲ ಪ್ರೀತಿಯ ಶಿಕ್ಷಕರಿಗೆ ಪ್ರಬಂಧ ಮಕ್ಕಳು ತಪ್ಪು ಮಾಡಿದಾಗ ಅದನ್ನು ತಿದ್ದುವ ವಿಧಾನ ಮತ್ತು ಅವರೊಂದಿಗೆ ನಡೆದುಕೊಳ್ಳುವ ರೀತಿಯನ್ನು ಕುರಿತು ಎಚ್ಚರಿಕೆ ಮೂಡಿಸುತ್ತದೆ.

ಇಲ್ಲಿನ ಎಲ್ಲಾ ಪ್ರಬಂಧಗಳು ಏನು ಹೇಳಬೇಕೋ ಅದನ್ನು ನೇರವಾಗಿ ಮನಮುಟ್ಟುವಂತೆ ಹೇಳುತ್ತವೆ. ಬದುಕಿಗೆ ಅತ್ಯಗತ್ಯ ವಿಚಾರಗಳನ್ನು ಸಣ್ಣ ಸಣ್ಣ ಸಂಗತಿಗಳ ನಿದರ್ಶನಗಳ ಮೂಲಕ ಮತ್ತು ಕನ್ನಡದ ಶ್ರೀಮಂತ ಸಾಹಿತ್ಯದ ಪಾಠಗಳನ್ನು ವಿವರಿಸುತ್ತಾ ಹೇಳಿರುವುದು ಬಹಳ ಆಪ್ತವೆನಿಸುವಂತಿವೆ.

ಭವ್ಯ ಟಿ.ಎಸ್.
ಶಿಕ್ಷಕರು. ಹೊಸನಗರ

MORE FEATURES

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...