ಬಿಂಬ ಪ್ರತಿಬಿಂಬ ಛೇದ-ಬಂಧನದ ಬೆಸುಗೆ


ಸಾಮಾನ್ಯರ ಆಡುಮಾತಿನಲ್ಲಿ ಹೆಣ್ಣಿಗ, ಗಂಡುಬೀರಿ ಎಂಬ ಹೇಳಿಕೆಗಳು ಸರ್ವೇಸಾಮಾನ್ಯ. ಹಾಗಾದರೆ ಗಂಡಿನೊಳಗೊಬ್ಬ ಹೆಣ್ಣು ,ಹೆಣ್ಣಿನೊಳಗೊಬ್ಬ ಗಂಡು ಅವಿತಿರುವುದು ಹೌದೆ! ತನ್ನೊಳಗಿನ ವೈರುಧ್ಯದ ಕಡೆಗೆ ತಾನೇ ಆಕರ್ಷಿತ / ಆಕರ್ಷಿತೆ ಆದರೆ? ಸಿರಿಸಂಪಿಗೆ ನಾಟಕ ಇದೇ ಆತ್ಮರತಿಯ ಎಳೆಯನ್ನು ಹಿಡಿದು ಮುಂದುವರಿಯುತ್ತದೆ.ಎನ್ನುತ್ತಾರೆ ಲೇಖಕಿ ರಾಜಶ್ರೀ ಟಿ. ರೈ ಪೆರ್ಲ. ಅವರು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ'ಸಿರಿಸಂಪಿಗೆ' ನಾಟಕಕ್ಕೆ ಬರೆದ ಅನಿಸಿಕೆ ಹೀಗಿದೆ....

ಚಂದ್ರಶೇಖರ ಕಂಬಾರರ ಸಿರಿಸಂಪಿಗೆ  ಹದಿನಾರು ದೃಶ್ಯಗಳನ್ನು ಹೊಂದಿರುವ, 1991ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನನ್ಯ ನಾಟಕ ಕೃತಿ. ಇದರ ಮುದ್ರಿತ ಪ್ರತಿಗಳು ಹಲವಾರು ಸಲ ಮರುಮುದ್ರಣ ಕಂಡಿವೆ. ಬಹಳಷ್ಟು ವಿಮರ್ಶೆ, ಸೆಮಿನಾರುಗಳಲ್ಲಿ ಚರ್ಚೆಯ ವಸ್ತು ವಿಷಯವಾಗಿ ಮತ್ತು ಸಾಹಿತ್ಯ ವಿದ್ಯಾರ್ಥಿಗಳಿಗೆ ಅಧ್ಯಯನ ಕೃತಿಯಾಗಿ ಪರಿಗಣಿಸಲ್ಪಟ್ಟ, ಕನ್ನಡ ನಾಟಕ ಸಾಹಿತ್ಯದ ಮೇರು ಕೃತಿ ಸಿರಿಸಂಪಿಗೆ. ನಾಟಕದ ಮೂಲದ್ರವ್ಯ ನಾರ್ಸಿಸಸ್ ಕೂಡ ಕಂಬಾರರ ಇನ್ನೊಂದು ನಾಟಕವಾಗಿದೆ. ಆ ವಸ್ತು, ವಿಷಯ ಕಂಬಾರರನ್ನು ಬಹಳಷ್ಟು ಕಾಡಿದೆ ಎನ್ನುವುದು ಇಲ್ಲಿ ಸ್ಪಷ್ಟ, ಅಲ್ಲದೆ ನಮ್ಮೊಳಗೆ ನಾವು ಪ್ರಜ್ಞಾಪೂರ್ವಕವಾಗಿ ಅವಿತಿರಿಸುವ ಸುಪ್ತ ಮನೋಭಾವವೊಂದನ್ನು ಜಾಗೃತಗೊಳಿಸುವ ,ಗುರುತಿಸುವ ಪ್ರಕ್ರಿಯೆ ಇಲ್ಲಿ ತಣ್ಣಗೆ ನಡೆಯುತ್ತದೆ. 

ಸೂತ್ರದಾರನಾಗಿ ಕಥಾಪಾತ್ರಗಳ ಜೊತೆ ಸಂವಾದಿಸುವ ಭಾಗವತರು ಕಥೆಯ ಅನೀರಿಕ್ಷಿತ ತಿರುವುಗಳಿಗೆ  ಮುಖಾಮುಖಿಯಾಗುವುದಕ್ಕೆ ಸಹೃದಯನಿಗೆ ಸಹಕರಿಸುತ್ತಾರೆ. ಇಲ್ಲಿ ಮನಸ್ಸು ತೆರಣಿಯ ಹುಳುವಿನ ಹಾಗೆ ದೇಹದ ಒಳಗೆ ಬಂಧಿಯಾಗಲು ಇಚ್ಚಿಸದೆ ಬಯಲಾಗುತ್ತದೆ. ಮನಸು ದೇಹದಿಂದ ದೂರವಾಗಿ ತನ್ನನ್ನೇ ತಾನು ಹುಡುಕುತ್ತಾ ಅಲೆದಾಡುವಾಗ ದೇಹ  ಭೌತಿಕವಾಗಿ ತನಗೊಂದು ಅಸ್ಥಿತ್ವವಿಲ್ಲದ ಹತಾಶೆಯನ್ನು ತುಂಬಿಕೊಳ್ಳಲು ಮರುಹುಟ್ಟಿನ ಅಡ್ಡಹಾದಿ ಹಿಡಿಯುತ್ತದೆ. ಎಲ್ಲದರ ಕೊನೆಗೆ ಎರಡಾಗದೆ, ಒಂದಾಗದೆ ಬಳಲುತ್ತದೆ, ಎರಡೂ ಒಂದೇ ಎನ್ನುವುದನ್ನೂ,ಒಂದಿಲ್ಲದೆ ಇನ್ನೊಂದು ಇಲ್ಲ ಅನ್ನುವುದನ್ನು ಒಪ್ಪಿಕೊಳ್ಳುತ್ತದೆ.

ಭಾರತೀಯರಲ್ಲಿ ಪೌರಾಣಿಕವಾಗಿ ಅರ್ಧನಾರೀಶ್ವರ ಕಲ್ಪನೆಯನ್ನು ನಾವು ಸರಳವಾಗಿ ಶಿವ ಪಾರ್ವತಿ, ಗಂಡ ಹೆಂಡತಿ ಎಂದು ಸಹಜವಾಗಿ ಸ್ವೀಕಾರ ಮಾಡುತ್ತಾ ಬಂದಿದ್ದೇವೆ. ಅಲ್ಲಿ ಎರಡು ಒಂದಾಗುವುದು ಮಾತ್ರ, ಒಂದು ಎರಡಾಗುವುದರ ಬಗ್ಗೆ ನಾವು ಕಲ್ಪಿಸುವುದಿಲ್ಲ. ತುಳು ಜಾನಪದದಲ್ಲಿ ಕೆಲವು ದೈವಗಳು(ಉದಾಹರಣೆಗೆ ಬೀರಣ್ಣಳ್ವ) ಮೀಸೆ ಹೊತ್ತ ಗಂಡಸಾಗಿ ಮತ್ತು ಮೊಲೆ ಕಟ್ಟು (ಮಿರೆಕಟ್ಟ) ಇರಿಸಿಕೊಂಡು ಹೆಂಗಸಾಗಿ ಲೋಕಮುಖವಾಗುವುದು ಕೂಡ ಇದೇ ರೀತಿಯ ಕಲ್ಪನೆಯಾಗಿದೆ.

ಸಾಮಾನ್ಯರ ಆಡುಮಾತಿನಲ್ಲಿ ಹೆಣ್ಣಿಗ, ಗಂಡುಬೀರಿ ಎಂಬ ಹೇಳಿಕೆಗಳು ಸರ್ವೇಸಾಮಾನ್ಯ. ಹಾಗಾದರೆ ಗಂಡಿನೊಳಗೊಬ್ಬ ಹೆಣ್ಣು ,ಹೆಣ್ಣಿನೊಳಗೊಬ್ಬ ಗಂಡು ಅವಿತಿರುವುದು ಹೌದೆ! ತನ್ನೊಳಗಿನ ವೈರುಧ್ಯದ ಕಡೆಗೆ ತಾನೇ ಆಕರ್ಷಿತ/ ಆಕರ್ಷಿತೆ ಆದರೆ? ಸಿರಿಸಂಪಿಗೆ ನಾಟಕ ಇದೇ ಆತ್ಮರತಿಯ ಎಳೆಯನ್ನು ಹಿಡಿದು ಮುಂದುವರಿಯುತ್ತದೆ.

ಇಲ್ಲಿ ದೇಹದ ಭೌತಿಕ ಕಾಮ ಅಪೇಕ್ಷೆ ಬೇರೆ, ಮನಸ್ಸಿನ ಅಪೇಕ್ಷೆಯ ದೇಹಕಲ್ಪನೆಯೇ ಬೇರೆ. ಪ್ರತ್ಯುತ್ಪಾದನೆ ಎನ್ನುವುದಕ್ಕೆ ದೈಹಿಕ ಪಕ್ವತೆಯ ಅರ್ಹತೆ ಬೇಕೇ ವಿನಃ ಮನಸ್ಸಿನ ಪಾತ್ರ ಎಷ್ಟು? ಜಗತ್ತಿನ ಇತರ ಪ್ರಾಣಿಗಳ ಹಾಗೆ ಸೃಷ್ಟಿ ಲೈಂಗಿಕ ಕ್ರಿಯೆಯನ್ನು ಒಂದು ಭೌತಿಕ ಕ್ರಿಯೆಯಾಗಿ ಅಷ್ಟೇ ಅಪೇಕ್ಷಿಸುತ್ತದೆ. ಹೆಣ್ಣಿನ ಪಾವಿತ್ರ್ಯದ ಪ್ರಶ್ನೆ ಬಂದಾಗ ನಾಗದಿವ್ಯದಲ್ಲಿ ಶಿವನಾಗ ದೇವನ ಮಡದಿ ಸೋಲುವುದಿಲ್ಲ. ಕಾರಣ ಅವಳ ಮಟ್ಟಿಗೆ ಅವನ ದೇಹ ಮನಸು ಸೇರಿ ಒಂದು ವ್ಯಕ್ತಿತ್ವ. 

ಸಿರಿಸಂಪಿಗೆಯಲ್ಲಿ ಮನಸು ಮತ್ತು ದೇಹವನ್ನು ಇಭ್ಭಾಗ ಮಾಡಿ ಸಮಾನಾಂತರ ರೇಖೆಗಳಾಗಿ ಎರಡು ಸ್ವತಂತ್ರ ಪಾತ್ರಗಳಾಗಿ ಹರಿಯಬಿಡುವ ಕಂಬಾರರ ಅಧ್ಭುತ ಪ್ರತಿಭಾ ಕೌಶಲ್ಯಕ್ಕೆ ಸಾಟಿಯುಂಟೇ! ಇಲ್ಲಿ ನಾಯಕನಿಗೆ ನಾನು ಮತ್ತು ಅವನು ಯಾರು ಎಂಬ ಗೊಂದಲ ಬರುವುದು ಮಡದಿ ಗರ್ಭಿಣಿ ಎಂದು ಗೊತ್ತಾದ ಸಮಯದಲ್ಲಿ ಮಾತ್ರ. ನಾನು ಅಂದುಕೊಂಡ ನಾನು ನಾನಾದರೆ, ನಾನು ಮೋಹಿಸುವ ನನ್ನೊಳಗಿನ ನಾನು ಯಾರು? ಶಿವನಾಗದೇವ ಅವನೊಳಗಿನ ದ್ವಿತ್ವದ ಸುಳಿಗೆ ಬೀಳುತ್ತಾನೆ. ಅವನೊಳಗಿನ ಮನಸ್ಸು ಅವನನ್ನೇ ದೀಪದ ಮೊಲ್ಲೆಯಾಗಿ ಆಕರ್ಷಿಸಿ ಆರಾಧಿಸಲು ಪ್ರಾರಂಭಿಸುತ್ತದೆ.

ಅರೆರೆ ನೀರಲಿ ನೀರೆ ಯಾರಿವ-ಳಾರು ದೀಪದ ಮೊಲ್ಲೆಯಲ್ಲವೇ?
ದೊರಕಿ ಬಿಟ್ಟಳು ಎನುತ ಬಿಂಬದ ಮೋಹದಲಿ ಬಿದ್ದ
ಇದು ಆತ್ಮರತಿಯಲ್ಲದೆ ಇನ್ನೇನು?
ನೀರಿನಲ್ಲಿ ಹೆಣದ ಹಾಗೆ ತೇಲುತ್ತಾ ಅವರ ಪ್ರತಿಬಿಂಬ ಬಂತು, ನೋಡಿದೊಡನೆ ಅವರ ಮುಖ ಕಳೆಕಳೆಯಾಯಿತು ಎಂದು ತಾಯಿಗೆ ಜವಳಿ ವಿವರಿಸುವ ಮಾತುಗಳಿಂದಲೂ ಇದು ಸ್ಪಷ್ಟವಾಗುತ್ತದೆ. ಅವನಿಂದ ಬೇರೆಯಾದ ದೇಹ ಕಾಳಿಂಗ ಅವನ ಭೌತಿಕ ಅಸ್ಥಿತ್ವದ ರೂಪಕವಾಗಿ ಅವನ ಮಡದಿಯನ್ನು ಕಾಮಿಸುತ್ತದೆ. ಇದು ಒಂದು ರೀತಿಯಲ್ಲಿ ಮನಸು ಮೋಹಿಸದೇ, ಪ್ರೀತಿಸದೇ ದೇಹ ಕಾಮಿಸಿದ್ದರ ಸಂಕೇತ.

ಭಾಗ್ಯ ಸಿಕ್ಕವರಂತೆ ಹಿಗ್ಗಿದನು ಕಾಳಿಂಗ , ಉಬ್ಬಿದನು ಕರಣಗಳ ಕೊಬ್ಬಿನಲ್ಲಿ ಯಾರಿವಳು ಕನ್ಯೆಯೋ ಮಡದಿಯೋ ಈಕೆಯನು ಸೇರಿ ಸುಖಗಳ ಸೂರೆಗೊಳ್ಳಬೇಕೆಂದ ಇದು ಕಾಮದ ಹಸಿವು. ಇಲ್ಲಿ ಮನಸು ಮನಸು ಸೇರುವ ಅಗತ್ಯ,ಪರಸ್ಪರ ಮನವೊಲಿಸುವ ಪ್ರೇಮಕ್ಕೆ ಆಸ್ಪದವಿಲ್ಲದೆ ಅಂಗ ಸಂಗವೇ ಮುಖ್ಯವಾಗುತ್ತದೆ.

ಆದರೆ ತನ್ನೊಳಗೆ ಕಳೆದುಹೋದ ಶಿವನಾಗನಿಗೆ ಅದು ಅರ್ಥವಾಗುವಾಗ ತಡವಾಗುತ್ತದೆ. ಇಲ್ಲಿ ಅವಳಿಜವಳಿಯರದ್ದೂ ಕೂಡ ಅದೇ ಸ್ಥಿತಿ. ಒಂದರ ಮೇಲೆ ಇನ್ನೊಂದರ ಮೇಲಾಟವೇ. ಕೊನೆಗೆ ದೇಹ ಮೋಹಿಸುತ್ತದೆ. ಮನಸು ನಿರ್ಮೋಹಿ. ಒಂದು ಸಂಪೂರ್ಣ ಸತ್ತಾಗಷ್ಟೇ ಸತ್ತಿರುವುದು ತನ್ನದೇ ಭಾಗ ಎನ್ನುವುದು ಇನ್ನೊಂದು ಭಾಗಕ್ಕೆ ಅರಿವಾಗುವುದು. ಆಗ ಮನಸ್ಸು ದೇಹಕ್ಕೆ ಸೋಲುವ ಸೂಚನೆ ದೊರೆಯುತ್ತದೆ. ಎರಡಾದದ್ದು ಮತ್ತೆ ಒಂದಾಗುತ್ತದೆ ಮತ್ತು ಆ ಒಂದು ಸಾಯುತ್ತದೆ. ಕೊನೆಯಲ್ಲಿ ಸಂಪಿಗೆ ತಾನು ವಿಧವೆ ಎಂದು ಹೇಳಿಕೊಳ್ಳುತ್ತಾಳೆ.

ನಾಟಕ ಕಥೆ, ವಿಷಯ, ಶೈಲಿಗಳಲ್ಲಿ ಮಾತ್ರ ಭಿನ್ನವಾಗಿರದೆ ಒಂದು ತತ್ವಶಾಸ್ತ್ರೀಯ ಚಿಂತನೆಯನ್ನು , ಹುಡುಕಾಟವನ್ನು, ಆತ್ಮಾವಲೋಕನದ ಪ್ರಜ್ಞೆಯನ್ನು ಸಾಮಾನ್ಯನಲ್ಲಿಯೂ ಹುಟ್ಟಿಸುತ್ತದೆ.
 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...