ಬೊಂಬಿನ ಬೇಲಿಯ ಸುತ್ತ : ಅನು ಬೆಳ್ಳೆ


ಕಾದಂಬರಿಕಾರ ಅನು ಬೆಳ್ಳೆ (ರಾಘವೇಂದ್ರ ಬಿ ರಾವ್) ಅವರ ಬೊಂಬಿನ ಬೇಲಿ ಕಾದಂಬರಿಯಲ್ಲಿನ ಲೇಖಕರ ಮಾತು ನಿಮ್ಮ ಓದಿಗಾಗಿ...

ಕೊರೋನ ಸಂದರ್ಭದಲ್ಲಿ ನಾನು ಬರೆದ ಕಾದಂಬರಿಗಳಲ್ಲಿ ಬೊಂಬಿನ ಬೇಲಿ ಕೂಡ ಒ೦ದು. ಮಂಗಳವಾರ ಪತ್ರಿಕೆಯ ಸಂಪಾದಕರಾದ ಎನ್ನೇಬಿ ಸರ್ ಅವರು ಕಾದಂಬರಿ ಇದ್ದರೆ ಕಳುಹಿಸಿ ಎಂದಾಗ ಸಂತೋಷದಿಂದ ಕಳುಹಿಸಿದೆ. ಅದು ಸ್ವೀಕೃತವಾಗಿ ಎರಡೇ ವಾರಗಳಲ್ಲಿ 'ಸೀಳು ದಾರಿ' ಹೆಸರಿನಲ್ಲಿ ಧಾರಾವಾಹಿಯಾಗಿಯೂ ಪ್ರಕಟವಾಗತೊಡಗಿತು. ಸುಮಾರು ನಾಲ್ಕು ವರ್ಷಗಳ ನಂತರ ಮಂಗಳ ಪತ್ರಿಕೆಯಲ್ಲಿ ಮತ್ತೆ ನನ್ನ ಕಾದಂಬರಿಯೊಂದು ಧಾರಾವಾಹಿಯಾಗಿ ಪ್ರಕಟವಾದಾಗ ನನ್ನ ಸಂತೋಷ ಹೇಳತೀರದು.

ವರ್ಷಕ್ಕೆ ಒಂದಾದರೂ ಪತ್ತೇದಾರಿ ಕಾದಂಬರಿಯನ್ನು ಬರೆಯಬೇಕೆನ್ನುವ ತುಡಿತಕ್ಕೆ ಟಿಸಿಲೊಡೆದದ್ದು ʻಬೊಂಬಿನ ಬೇಲಿʼ. ಈ ಕಥೆ ಹುಟ್ಟಿದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ. ನಾನು ಓದಿದ ಕಾದಂಬರಿಯೊಂದರ ಸಾಲು ಈ ಕಾದಂಬರಿಗೆ ಪ್ರೇರಣೆಯೆಂದರೆ ತಪ್ಪಾಗಲಾರದು. ಅಲ್ಲಿಯ ನಾಯಕಿ ಆತಂಕದಿಂದ ಬೊಂಬಿನ ಬೇಲಿ ಹಿಡಿದು ಸಾಗುವ ದೃಶ್ಯ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿದಿತ್ತು. ಅದರಿಂದ ಬಿಡುಗಡೆ ಹೊಂದಬೇಕಾದರೆ ಒಂದು ಕಥೆ ಬರೆಯಬೇಕಿತ್ತು. ಅದೇ ಸಂದರ್ಭದಲ್ಲಿ ಮೂಡುಬಿದಿರೆಯ 'ಸೋನ್ಸ್ ಫಾರ್ಮ್'ಗೆ ಭೇಟಿ ನೀಡಿದ್ದೆವು. ಸುಮಾರು ನಲವತ್ತು ಐವತ್ತು ಜಾತಿಯ ಬಿದಿರಿನ ತಳಿಗಳನ್ನು ನೋಡಿದೆ. ಒಂದೊಂದು ಒಂದೊಂದು ರೀತಿ ನಯನ ಮನೋಹರವಾಗಿದ್ದವು. ಪ್ರತಿಯೊಂದು ತಳಿಯ ಬಳಿಯೂ ಅವುಗಳ ವೈಜ್ಞಾನಿಕ ಹೆಸರು, ಉಪಯೋಗ ಮುಂತಾದವುಗಳನ್ನು ಬರೆದಿದ್ದರು. ಹಿಂದೆಲ್ಲಾ ಬೊಂಬಿನ ಗಳೆಗಳಿಂದ ಬೇಲಿಯನ್ನು ಕಟ್ಟುತ್ತಿದ್ದರು. ಅದನ್ನು ನುಸುಳಿ ಯಾವ ಕಾಡು ಪ್ರಾಣಿಗಳು ಸುಲಭವಾಗಿ ಒಳಗೆ ಬರುತ್ತಿರಲಿಲ್ಲ. ಅದೇ ಬೊಂಬಿನ ಬೇಲಿ ನನ್ನ ಕಾದಂಬರಿಯ ಕಥಾವಸ್ತು.

ನನ್ನ ಬಹುತೇಕ ಪತ್ತೇದಾರಿ ಕಾದಂಬರಿಗಳಲ್ಲಿ ಅಮಾಯಕ ಹೆಣ್ಣು ತನಗರಿವಿಲ್ಲದಂತೆ ಯಾವುದೋ ಸಮಸ್ಯೆಯೊಳಗೆ ಸಿಲುಕಿ ಪತ್ತೇದಾರಿ ನಡೆಸುವ ಅನಿವಾರ್ಯತೆ ಎದುರಾಗುತ್ತದೆ. ಅಂತಹುದೇ ಸನ್ನಿವೇಶದಲ್ಲಿ ಇಲ್ಲಿಯ ಕಥಾನಾಯಕಿ ಬೊಂಬಿನ ಬೇಲಿಯ ರಹಸ್ಯವನ್ನು ಬಿಡಿಸುತ್ತಾಳೆ. ಪುಟ ಪುಟಗಳಲ್ಲೂ ಕುತೂಹಲ ಹುಟ್ಟಿಸುವ ಈ ಕಾದಂಬರಿ ನನ್ನೆಲ್ಲಾ ಓದುಗರಿಗೆ ಖುಷಿ ಕೊಡಬಹುದೆನ್ನುವುದು ನನ್ನ ಅನಿಸಿಕೆ.

- ಅನು ಬೆಳ್ಳೆ (ರಾಘವೇಂದ್ರ ಬಿ ರಾವ್)

****

ಕತೆಯ ಆಯ್ದ ಭಾಗ...

ದೂರದಲ್ಲಿ ಸಿಳ್ಳಿನ ಸದ್ದು ಕೇಳಿಸಿತು. ವೈದ್ಯ ಕೂಡ ಸಿಳ್ಳು ಹಾಕಿದ. ಪೊದೆಯ ಅಡ್ಡದಿಂದ ಹೊರಗೆ ಜಿಗಿದ ದಿಶಾಂತ್ ವೈದ್ಯನ ಹತ್ತಿರಕ್ಕೆ ಬಂದ.

“ಇಲ್ಲಿಯೇ ಗಣಪತಿರಾಯರ ಮನೆ ಇರೋದು. ಅವಳು ನಮ್ಮ ಮನೆಯಲ್ಲಿಲ್ಲ. ಇಲ್ಲಿಗೆ ಬಂದಿದ್ದಾಳೆ. ನಾನು ಒಂದೇ ಒಂದು ಬಾರಿ ಇತ್ತ ಕಡೆಗೆ ಬಂದಿರೋದು. ನೀನು ಕಾರಿನ ಬಳಿಯೇ ಇರು. ನಾನು ವಿಚಾರಿಸಿಕೊಂಡು ಬರುತ್ತೇನೆ” ವೈದ್ಯನ ಪ್ರತಿಕ್ರಿಯೆಗೂ ಕಾಯದೆ ತರಗೆಲೆಯಿಂದ ಮುಚ್ಚಿದ ಮಣ್ಣಿನ ರಸ್ತೆಯನ್ನು ಹಿದಿದು ವೇಗವಾಗಿ ನಡೆದ ದಿಶಾಂತ್. ಅವನು ಕಣ್ಮರೆಯಾಗುತ್ತಲೇ ವೈದ್ಯ ಕಾರಿನತ್ತ ನಡೆದ.

ಒಂದೇ ಒಂದು ಕ್ಷಣ ತಲೆಗೆ ಏನೋ ಭಾರವಾದ ವಸ್ತು ತಾಗಿದಂತಾಯಿತು. ಸಾವರಿಸಿಕೊಳ್ಳುವಷ್ಟರಲ್ಲಿ ಇನ್ನೊಂದು ಬಲವಾದ ಏಟು ಬಿತ್ತು!

ವೈದ್ಯನ ಊಹೆ ನಿಜವಾಗಿತ್ತು!

ಯಾರೋ ಅವನನ್ನು ಹಿಡಿದು ಬಡಿಯುತ್ತಿದ್ದರು. ವೈದ್ಯ ಮಾತಿಲ್ಲದೆ ನೆಲಕ್ಕೊರಗಿದ.

ದಿಶಾಂತ್ ಬರುವುದರೊಳಗೆ ಎಲ್ಲವೂ ಮಿಂಚಿನಂತೆ ನಡೆದು ಹೋಯಿತು. ಅವನು ಧಾವಿಸಿ ಬಂದವನೇ ಕಾರಿನ ಪಕ್ಕದಲ್ಲಿಯೇ ರಸ್ತೆಯ ಮೇಲೆ ಬಿದ್ದಿದ ವೈದ್ಯನನ್ನು ಎತ್ತಿಕೊಂಡ. ಮತ್ತೆ ಕಾರಿನತ್ತ ಓಡಿ ನೀರಿನ ಬಾಟಲಿಯನ್ನು ತಂದು ವೈದ್ಯನ ಮುಖಕ್ಕೆ ಸಿಂಪಡಿಸಿದ. ವೈದ್ಯ ಕಣ್ಣು ತೆರೆಯುತ್ತಿದ್ದಂತೆ ದಿಶಾಂತ್ ನೆಮ್ಮದಿಯ ನಿಟ್ಟುಸಿರಿಟ್ಟ.

“ನಿನಗೆ ಏನೂ ಆಗಿಲ್ಲಾಂತ ಅಂದುಕೊಳ್ತೀನಿ”

ಏಟು ತಿಂದವನು ತಲೆಯ ಹಿಂಭಾಗವನ್ನು ಗಟ್ಟಿಯಾಗಿ ಒತ್ತಿಕೊಂಡ. ರಕ್ತ ಒಸರುತ್ತಿತ್ತು.

“ಓಹೋ! ತಲೆಯ ಹಿಂಭಾಗಕ್ಕೆ ಸರಿಯಾದ ಏಟು ಬಿದ್ದಿದೆ. ಹೇಗಾಯ್ತು?” ಸುತ್ತಲೂ ಒಮ್ಮೆ ದೃಷ್ಟಿ ಹಾಯಿಸಿದ. ಹಿಮಾಂಶುವಿಗೆ ಎಲ್ಲವೂ ನೆನಪಾದವು. ಯಾರೋ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಯಾಕಾಗಿ ಹಲ್ಲೆ ನಡೆದಿದೆ? ದಿಶಾಂತ್ ಸಂಭಾವಿತನಂತೆ ತನ್ನ ಆರೈಕೆಗೆ ನಿಂತಿದ್ದಾನೆ. ಅವನೇ ಉದ್ದೇಶ ಪೂರ್ವಕವಾಗಿ ಇಲ್ಲಿ ನಿಲ್ಲಿಸಿ ಹಲ್ಲೆ ಮಾಡಿಸಿದ್ದಾನೆ. ಮುಂದೆ ತನ್ನನ್ನು ನಿಹಾರಿಕಾಳಿಂದ ದೂರ ಹೋಗುವಂತೆ ಜೀವ ಬೆದರಿಕೆ ಹಾಕುತ್ತಾನೆ.

ಹಿಮಾಂಶು ಎದ್ದು ಕುಳಿತುಕೊಳ್ಳುವ ಪ್ರಯತ್ನ ಭಾರವಾದಂತಾಯಿತು. ಅವನು ಮಾತನಾಡುವ ಸ್ಥಿತಿಯಲ್ಲಿಲ್ಲ. ನಡೆದುಹೋದದ್ದು ಸಿನಿಮೀಯ ಮಾದರಿಯಲ್ಲಿ. ಹತ್ತಿರವಿದ್ದವನ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ.

***

MORE FEATURES

‘ನನ್ನ ವಿಳಾಸ’ ಎಂಬ ಕವನ ಸಂಕಲನದ ಅವಲೋಕನ

14-05-2024 ಬೆಂಗಳೂರು

'ನನ್ನ ವಿಳಾಸ' ಬರೆದಿರುವ ಕೃತಿಯ ಕವಿ ಮೊಹಮ್ಮದ್ ಅಜರುದ್ದೀನ್ ರವರ ಭಾವನಾತ್ಮಕ ಅಲೆಗಳಲ್ಲಿ ಮಿಂದು ಬರೆದಂತಹ ಕವ...

ಬರವಣಿಗೆಯನ್ನು ಒಂದು ಸಶಕ್ತ ಮಾಧ್ಯಮವನ್ನಾಗಿ ಮಾಡಿಕೊಂಡು ಮಿಂಚಿರುವ ಸುಧಾ ಮೂರ್ತಿ

14-05-2024 ಬೆಂಗಳೂರು

‘ಸುಧಾಮೂರ್ತಿ ಅವರ ಚಿಂತನೆಗಳು ನಮ್ಮನ್ನು ಉನ್ನತಿಗೆ ಕೊಂಡೊಯ್ಯುವ ಉದಾತ್ತ ವಿಚಾರಗಳಿಂದ ತುಂಬಿವೆ. ಅವರ ಸಾಹಿತ್ಯ,...

‘ಕಥೆಯೊಳಗೆ ಕಥೆ’ ಹೇಳುವ ತಂತ್ರವನ್ನು ಈ ಕಾದಂಬರಿಯಲ್ಲೂ ಬಳಸಿಕೊಳ್ಳಲಾಗಿದೆ

14-05-2024 ಬೆಂಗಳೂರು

'ಪರರ ಮೋಜಿಗಾಗಿ ಪ್ರಾಣ ಕಳೆದುಕೊಂಡು ಪ್ರತೀಕಾರದ ಜಿದ್ದಿಗೆ ಬಿದ್ದ ಆತ್ಮದ ಕತೆ ಇದು. ಈ ಕಾದಂಬರಿ ಹಾರರ್ ಜಾನರ್&zwn...