ಈ ಬರೆಹಗಳಲ್ಲಿ ಒಬ್ಬ ಪ್ರಾಮಾಣಿಕ ವಿಮರ್ಶಕನಲ್ಲಿ ಇರಬೇಕಾದ ಸಮಚಿತ್ತತೆಯಿದೆ


"ನನ್ನ ಇತ್ತೀಚಿನ ಓದು" ಕೃತಿಯಲ್ಲಿ ಮೊಗಸಾಲೆಯವರ ಕಾವ್ಯ ಪ್ರತಿಭೆಯ ಕುರಿತಾದ ದೀರ್ಘ ವಿಶ್ಲೇಷಣಾತ್ಮಕ ಬರಹವನ್ನು ಬಿಟ್ಟರೆ ಉಳಿದವು ಪುಟ್ಟ, ಆದರೆ ಉತ್ತಮ ಪರಿಚಯಾತ್ಮಕ ಬರೆಹಗಳಿವೆ. ಆ ಮೂಲಕ ಮುಂಬಯಿಯ ಅನೇಕ ಲೇಖಕರ ಪರಿಚಯವು ನನಗಾದಂತಾಯಿತು. ಮೊಗಸಾಲೆಯ ಕಾವ್ಯದ ಕುರಿತಾದ ದೀರ್ಘ ಲೇಖನ ಮಾತ್ರ ಅನೇಕ ಹೊಸ ಹೊಳಹುಗಳನ್ನು ನೀಡುವ ಉತ್ತಮ ಲೇಖನವಾಗಿದೆ," ಎನ್ನುತ್ತಾರೆ ಹಿರಿಯ ಲೇಖಕ ಸುಬ್ರಾಯ ಚೊಕ್ಕಾಡಿ. ಅವರು ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ‘ಸ್ವೀಕೃತಿ’ ಮತ್ತು ‘ನನ್ನ ಇತ್ತೀಚಿನ ಓದು’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಹಿಂದೆ ಶಿಮುಂಜೆ ಪರಾರಿಯವರ ಅಭಿವಂದನಾ ಕಾರ್ಯಕ್ರಮದ ಸಂದರ್ಭದಲ್ಲಿ ನೀವು ಒಮ್ಮೆ ಮಿಂಚಿ ಮಾಯವಾದದ್ದಷ್ಟೇ, ನಿಮ್ಮ ಬಗ್ಗೆ ನನಗೆ ಗೊತ್ತು. ನಿಮಗೂ ಅಷ್ಟೇ ಇರಬಹುದು. ಕೆಲವು ದಿನಗಳ ಹಿಂದೆ ನಿಮ್ಮ "ಸ್ವೀಕೃತಿ" ಹಾಗೂ "ನನ್ನ ಇತ್ತೀಚಿನ ಓದು" ಎನ್ನುವ ಎರಡು ಪುಸ್ತಕಗಳನ್ನು ಉಪಾಧ್ಯರು ಕಳಿಸಿಕೊಟ್ಟಿದ್ದರು. ಅವುಗಳನ್ನು ಓದಿ ನಾಲ್ಕು ಸಾಲು ಬರೆಯುತ್ತಿದ್ದೇನೆ.

ನಿಮ್ಮ ಎರಡೂ ಕೃತಿಗಳಲ್ಲಿನ ಅರುವತ್ತೂ ಲೇಖನಗಳನ್ನು ಓದಿದೆ. ಇವನ್ನು ಓದಿದಾಗ ಎರಡು ಸತ್ಯಗಳು ಮನದಟ್ಟಾದವು.

1. ನನ್ನ ಓದಿನ ಮಿತಿ ಎಷ್ಟೆಂಬುದು.
2. ಪ್ರಸಿದ್ಧರಾದ ಬಲ್ಲಾಳರು, ಚಿತ್ತಾಲ ಸಹೋದರರು, ನಿಂಜೂರ್, ಜಯಂತ ಕಾಯ್ಕಿಣಿ, ಸ್ವಲ್ಪ ಮಟ್ಟಿಗೆ ಮಿತ್ರಾ ವೆಂಕಟರಾಜ್ ಹಾಗೂ ತುಳಸಿ ವೇಣುಗೋಪಾಲ್ ಅವರನ್ನು ಬಿಟ್ಟರೆ ಉಳಿದ ಅನೇಕ ಲೇಖಕರು ಹಾಗೂ ಅವರ ಕೃತಿಗಳು ಮುಂಬಯಿಯ ಗಡಿ ದಾಟಿ ಕರ್ನಾಟಕಕ್ಕೆ ಬರಲೇ ಇಲ್ಲ ಎಂಬುದು. ಜಯಂತರು ಕೂಡಾ ಬೆಂಗಳೂರಿಗೆ ಬಂದು ನೆಲಸಿ ಸಿನೆಮಾಕ್ಕೆ ಹಾಡು ಬರೆದ ಮೇಲೆಯೇ ಪ್ರಸಿದ್ಧರಾದದ್ದು.

ನಾನು ಕಂಡ ಮೇಲಿನ ಎರಡೂ ಸತ್ಯಗಳು ನಾಣ್ಯದ ಎರಡು ಮುಖಗಳೆನ್ನಬಹುದು. ಇದು, ನಮ್ಮ ಪುಸ್ತಕ ವಿತರಣಾ ವ್ಯವಸ್ಥೆಯ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಇರಲಿ.

ನಿಮ್ಮ ಪುಸ್ತಕಗಳಲ್ಲಿ ನಮೂದಿಸಲಾದ 60 ಪುಸ್ತಕಗಳ ಪೈಕಿ ನಾನು ಓದಿದವುಗಳು ಬೆರಳುಗಳೆಣಿಕೆಯವು ಮಾತ್ರ.ಹಾಗಾಗಿ ಹೆಚ್ಚಿಗೆ ಬರೆಯಲು ಕಷ್ಟ.ಇಲ್ಲಿನ ಬರೆಹಗಳಲ್ಲಿ ಕೆಲವು ಪತ್ರಿಕೆಗಳಲ್ಲಿ ಬರುವ ರೆವ್ಯೂ ಎನ್ನುವ ಪರಿಚಯಾತ್ಮಕ ಪುಟ್ಟ ಬರೆಹಗಳಾದರೆ ಕೆಲವು ಅವಲೋಕನಗಳು, ಇನ್ನು ಕೆಲವು ಪ್ರತಿಕ್ರಿಯಾತ್ಮಕ ಬರೆಹಗಳು, ಕೆಲವು ವಿಶ್ಲೇಷಣಾತ್ಮಕ ಹಾಗೂ ವಿಮರ್ಶಾತ್ಮಕ ಬರೆಹಗಳು.ಇವನ್ನೆಲ್ಲ ಒಂದು ಸೂತ್ರದಲ್ಲಿ ಹಿಡಿಯಲು ತುಂಬಾ ಕಷ್ಟ. "ಸ್ವೀಕೃತಿ"ಯಲ್ಲಿ ಸ್ವಲ್ಪ ದೀರ್ಘವಾದ ವಿಶ್ಲೇಷಣಾತ್ಮಕ ಬರೆಹಗಳೇ ಹೆಚ್ಚಿದ್ದರೆ. "ನನ್ನ ಇತ್ತೀಚಿನ ಓದು" ಕೃತಿಯಲ್ಲಿ ಮೊಗಸಾಲೆಯವರ ಕಾವ್ಯ ಪ್ರತಿಭೆಯ ಕುರಿತಾದ ದೀರ್ಘ ವಿಶ್ಲೇಷಣಾತ್ಮಕ ಬರಹವನ್ನು ಬಿಟ್ಟರೆ ಉಳಿದವು ಪುಟ್ಟ, ಆದರೆ ಉತ್ತಮ ಪರಿಚಯಾತ್ಮಕ ಬರೆಹಗಳಿವೆ. ಆ ಮೂಲಕ ಮುಂಬಯಿಯ ಅನೇಕ ಲೇಖಕರ ಪರಿಚಯವು ನನಗಾದಂತಾಯಿತು. ಮೊಗಸಾಲೆಯ ಕಾವ್ಯದ ಕುರಿತಾದ ದೀರ್ಘ ಲೇಖನ ಮಾತ್ರ ಅನೇಕ ಹೊಸ ಹೊಳಹುಗಳನ್ನು ನೀಡುವ ಉತ್ತಮ ಲೇಖನವಾಗಿದೆ.

"ಸ್ವೀಕೃತಿ" ಪುಸ್ತಕದಲ್ಲಿನ, ನನಗೆ ಇಷ್ಟವಾದ ಕುಸುಮಾಕರರ "ಮೂರನೆಯ ಆಯಾಮ" ದ ಕುರಿತು ಒಂದು ನೆನಪು. 1967ರಲ್ಲೋ ಏನೋ, ಈ ಪುಸ್ತಕವನ್ನೋದಿದ ನಾನು ರೋಮಾಂಚನಗೊಂಡು ಪತ್ರಿಕೆಯೊಂದರಲ್ಲಿ ದೀರ್ಘ ಲೇಖನ ಬರೆದಿದ್ದೆ. ಅದನ್ನು ಓದಿದ ಕುಸುಮಾಕರರು ನನಗೊಂದು ಪತ್ರವನ್ನೂ ಬರೆದಿದ್ದರು. ಆಮೂಲಕ ಅವರ ಹಾಗೂ ಅವರ ಸೋದರ ಪ್ರಹ್ಲಾದರ ಪರಿಚಯವಾಗುವಂತಾಯ್ತು. ಅವರ ಎಲ್ಲಾ ಪುಸ್ತಕಗಳನ್ನು ಓದಿದ ಸಂತೋಷ ನನ್ನದು. ಕುಸುಮಾಕರರ ಈ ಕೃತಿ ಹಾಗೂ ಉಳಿದ "ಪರಿಘ", "ನಿರಿಂದ್ರಿಯ", ಮೊದಲಾದ ಕೃತಿಗಳಬಗ್ಗೆ ವಿಸ್ತಾರವಾದ ವಿಮರ್ಶೆ ಆಗಬೇಕಾದ್ದು ಅಗತ್ಯವಾಗಿದೆ. ಅವರ ಕುರಿತು ಉಪಾಧ್ಯರು ಬರೆದ ಕೃತಿಯನ್ನು ನಾನು ಓದಿಲ್ಲ. ಅದರಲ್ಲಿ ಅವರ ಕುರಿತಾದ ವಿಸ್ತಾರ ವಿಮರ್ಶೆ ಇರಬಹುದೇನೋ.

ರಜನಿಯವರ "ಆತ್ಮ ವೃತ್ತಾಂತ" ಕೂಡಾ ನನಗೆ ತುಂಬಾ ಇಷ್ಟವಾದ ಕೃತಿ. ಒಂದು ನಾಯಿಯ ಆತ್ಮ ವೃತ್ತಾಂತವನ್ನು ಬರೆದ ರೀತಿ ಕನ್ನಡಕ್ಕೆ ಹೊಸದು. ಈ ಎರಡು ಕೃತಿಗಳಲ್ಲದೆ ಚಿತ್ತಾಲರ ಲಬಸಾಗಳು, ಮೊಗಸಾಲೆಯವರ ಉಲ್ಲಂಘನೆ, ಜನಾರ್ದನ ಭಟ್ಟರ ಉತ್ತಾಧಿಕಾರ, ಮೊದಲಾದ-ನಾನು ಓದಿರುವ-ಕೆಲವು ಕೃತಿಗಳ ಬಗ್ಗೆ ಮೌಲಿಕವಾದ ಮಾತುಗಳನ್ನಾಡಿದ್ದೀರಿ. ನನಗೆ ಇಷ್ಟವಾಯಿತು. ಉಳಿದ ಕೃತಿಗಳನ್ನು ಹೊಸ ಪರಿಚಯವೆಂಬಂತೆ ಓದಿಕೊಂಡೆ.

ನಿಮ್ಮ ಬರೆಹಗಳಲ್ಲಿ -ಒಬ್ಬ ಪ್ರಾಮಾಣಿಕ ವಿಮರ್ಶಕನಲ್ಲಿ ಇರಬೇಕಾದ ಸಮಚಿತ್ತತೆ ಇದೆ. ಎಲ್ಲೂ ಆಕ್ರೋಶವಾಗಲೀ, ಪೂರ್ವಗ್ರಹವಾಗಲೀ ಇಲ್ಲ. ಬರೆಹಗಳ ಹಿಂದೆ ಕೃತಿ ಹಾಗೂ ಕೃತಿಕಾರರ ಬಗ್ಗೆ ಇರುವ ಪ್ರೀತಿ ನಮ್ಮ ಅರಿವಿಗೆ ಬರುತ್ತದೆ. ಯಾವುದೇ ಘೋಷಿತ ಸಿದ್ಧಾಂತಗಳ ಬೆನ್ನು ಹತ್ತದ ಕೃತಿನಿಷ್ಟ ವಿಮರ್ಶೆ ನಿಮ್ಮದು. ಇಂದು ತುಂಬಾ ಅಪರೂಪವೆನಿಸುವ ಈ ಗುಣ ನಿಮ್ಮಬರೆಹಗಳಲ್ಲಿ ಕಾಣಿಸಿರುವುದು ಮೆಚ್ಚತಕ್ಕ ಸಂಗತಿಯಾಗಿದೆ. ನೀವು ಸೂಚಿರುವ ,ನಾನು ಓದದ ಕೃತಿಗಳನ್ನು ಇನ್ನಾದರೂ ಓದುವ ಮೂಲಕ ನನ್ನ ಮಿತಿಯನ್ನು ನಾನು ಮೀರಬೇಕಾಗಿದೆ .

- ಸುಬ್ರಾಯ ಚೊಕ್ಕಾಡಿ.

MORE FEATURES

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...