ಗೆದ್ದೇ ಗೆಲ್ಲುವಿರಿ ಒಂದು ದಿನ…


'ಈಗಾಗಲೇ ಅಕ್ಕಿ-ಚುಕ್ಕಿ, ನಿಸರ್ಗನಾದ, ಹೆಬ್ಬೊಳಲು, ಸಂಜೆವಿಹಾರ ಎಂಬ ನಾಲ್ಕು ಕೃತಿಗಳನ್ನು ರಚಿಸಿರುವ ಇವರು ಇದೀಗ ಹಲವು ಲೇಖನಗಳನ್ನೊಳಗೊಂಡ 'ಲೇಖನ ವಿಹಾರ' ಎಂಬ ಕೃತಿಯನ್ನು ಸಾಹಿತ್ಯ ಸರಸ್ವತಿಯ ಮಡಿಲಿಗೆ ಅರ್ಪಿಸುತ್ತಿದ್ದಾರೆ' ಎಂದಿದ್ದಾರೆ ಪತ್ರಕರ್ತ, ಲೇಖಕ ಹೊಳಲು ಶ್ರೀಧರ್. ಅವರು ಮೊಹಮ್ಮದ್ ಅಜರುದ್ದೀನ್ ಅವರ ಲೇಖನ ವಿಹಾರ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ. 

ಮಂಡ್ಯ ಜಿಲ್ಲೆಯ ಎರಡನೇ ಅತಿದೊಡ್ಡ ತಾಲ್ಲೂಕಾದ ಕೃಷ್ಣರಾಜಪೇಟೆ ವಿವಿಧ ಕಾಲಮಾನಗಳಲ್ಲಿ ಹೊಯ್ಸಳರ, ಜೈನರ, ಮೈಸೂರು ಒಡೆಯರ ಮತ್ತು ವಿಜಯನಗರದ ಅರಸರ ಪ್ರಭಾವಕ್ಕೆ ಒಳಗಾಗಿ ಬೆಳೆದು ಬಂದಿದೆ. ಈ ತಾಲೂಕು  ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದೆ.    

ಸಾಹಿತ್ಯ ಕ್ಷೇತ್ರದಲ್ಲಿ ಮೂರನೇ ಶತಮಾನದಲ್ಲಿ ಬದುಕಿದ್ದ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ಅವರಿಂದ ಪ್ರಾಚೀನ ಕವಿ ನಂಜುಂಡಾರಾಧ್ಯ ನಂತರ ಹೊಸಗನ್ನಡ ಸಾಹಿತ್ಯದ ಆದ್ಯ ಪ್ರವರ್ತಕರಾದ ಎ.ಎನ್.ಮೂರ್ತಿರಾವ್, ಹಾಸ್ಯ ಸಾಹಿತಿ ಅ.ರಾ.ಮಿತ್ರ, ಅ.ನಾ.ಸುಬ್ಬರಾಯ, ಆಕಾಶವಾಣಿ ಈರಣ್ಣ  ಖ್ಯಾತಿಯ ಎ.ಎಸ್.ಮೂರ್ತಿ, ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ, ಜಾನಪದ ಕ್ಷೇತ್ರದ ಅರ್ಚಕ ರಂಗಸ್ವಾಮಿಭಟ್ಟರು ಖ್ಯಾತ ಸಾಹಿತಿ ಸುಜನಾ, ಹಲವು ಮಹಾಕಾವ್ಯಗಳ ಕರ್ತೃ ಡಾ.ಲತಾರಾಜಶೇಖರ್, ಸಾಹಿತಿ ಡಾ. ಪದ್ಮಾಶೇಖರ್ ಮುಂತಾದ ಹಿರಿಯ ಸಾಹಿತಿಗಳು ಹೆಸರು ಮಾಡಿರುವ ಕೆ.ಆರ್.ಪೇಟೆಯ ಅಕ್ಕಿಹೆಬ್ಬಾಳು ಗ್ರಾಮದ ಅಬ್ದುಲ್ ಸತ್ತಾರ್ ಮತ್ತು ಸಮೀನಾಖಾನಂ ರವರ ಸುಪುತ್ರರಾದ ಮೊಹಮ್ಮದ್ ಅಜರುದ್ದೀನ್ ಯುವ ಸಾಹಿತಿಯಾಗಿ ಕೆಆರ್‍ಪೇಟೆ ನೆಲದ ಹಾಗೂ ಮಂಡ್ಯ ಜಿಲ್ಲೆಯ ಭರವಸೆಯ ಕವಿಯಾಗಿ, ಲೇಖಕರಾಗಿ ಹೊರಹೊಮ್ಮುತ್ತಿದ್ದಾರೆ.   

ಈಗಾಗಲೇ ಅಕ್ಕಿ-ಚುಕ್ಕಿ, ನಿಸರ್ಗನಾದ, ಹೆಬ್ಬೊಳಲು, ಸಂಜೆವಿಹಾರ ಎಂಬ ನಾಲ್ಕು ಕೃತಿಗಳನ್ನು ರಚಿಸಿರುವ ಇವರು ಇದೀಗ ಹಲವು ಲೇಖನಗಳನ್ನೊಳಗೊಂಡ 'ಲೇಖನ ವಿಹಾರ' ಎಂಬ ಕೃತಿಯನ್ನು ಸಾಹಿತ್ಯ ಸರಸ್ವತಿಯ ಮಡಿಲಿಗೆ ಅರ್ಪಿಸುತ್ತಿದ್ದಾರೆ. 'ಲೇಖನ ವಿಹಾರ' ಈ ಕೃತಿಯಲ್ಲಿರುವ ಹಲವು ಲೇಖನಗಳು ಈಗಾಗಲೇ ನಾಡಿನ ಪ್ರಸಿದ್ಧ ದೈನಿಕಗಳಾದ ವಿಜಯವಾಣಿ, ವಿಜಯ ಕರ್ನಾಟಕ, ವಿಶ್ವವಾಣಿ, ಇಂದುಸಂಜೆ ಅಲ್ಲದೇ ಪ್ರಾದೇಶಿಕ ಪತ್ರಿಕೆಗಳಾದ ಉದಯಕಾಲ, ಕೆಮ್ಮುಗಿಲು, ಮಂಡ್ಯಪ್ರೆಸ್, ಜನಮಿತ್ರ, ಸೇರಿದಂತೆ ಹಲವು ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಣೆಗೊಂಡು ಓದುಗರ ಮೆಚ್ಚುಗೆ ಪಡೆದುಕೊಂಡಿವೆ. ಸಾಮಾಜಿಕ ಜಾಲತಾಣಗಳ ದಾಸರಾಗಿರುವ ವಿದ್ಯಾರ್ಥಿ ಸಮೂಹದ ನಡುವೆ ಇಂಜಿನಿಯರಿಂಗ್ ವಿದ್ಯಾರ್ಥಿ ಅಜರುದ್ದೀನ್ ತನ್ನ ಕಲಿಕೆಯ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಬರೆಯುತ್ತಿರುವುದು ಸಾಹಸದ ಕೆಲಸವೇ ಸರಿ.   

ಇವರನ್ನು ನಾಲ್ಕಾರು ಕವಿಗೋಷ್ಠಿಗಳಲ್ಲಿ ನೋಡಿದ್ದು ಬಿಟ್ಟರೆ, ವಿವಿಧ ಪತ್ರಿಕೆಗಳ ಮೇಲೆ ಕಣ್ಣಾಡಿಸುವಾಗ ಕಂಡು ಬಂದ  ಬರೆಹಗಳ ಮೂಲಕವೇ ಪರಿಚಿತರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಫೇಸ್‍ಬುಕ್ ಗೆಳೆಯರಾದ ನಂತರ ಕವರ್ ಫೋಟೋದಲ್ಲಿ ಮುಗ್ಧ ಹಸುವಿನ ಜೊತೆಗಿನ ಅವರ ಮುಗ್ಧ ಭಾವಚಿತ್ರ ಗಮನ ಸೆಳೆಯಿತು.ಜೊತೆಗೆ ಟ್ಯಾಗ್ ಲೈನ್ 'ನಾನು ಗೆದ್ದೇ ಗೆಲ್ಲುವೆ ಒಂದು ದಿನ....' ಎಂಬ ಇವರಲ್ಲಿನ ಆಶಾವಾದ ಗಮನ ಸೆಳೆಯಿತು. 'ಗೆದ್ದೇ ಗೆಲ್ಲುವಿರಿ ಒಂದು ದಿನ' ಎಂಬ ಶುಭಹಾರೈಕೆಗಳು.

ಇನ್ನು ಇದೀಗ ಬಿಡುಗಡೆಗೊಳ್ಳುತ್ತಿರುವ ಕೃತಿಯ ವಿಚಾರಕ್ಕೆ ಬಂದರೆ ಈ 'ಲೇಖನ ವಿಹಾರ' ವೆಂಬ ಕೃತಿ 28 ಲೇಖನಗಳನ್ನು ಒಳಗೊಂಡಿದ್ದು ವ್ಯಕ್ತಿತ್ವ ವಿಕಸನ 8, ವ್ಯಕ್ತಿ ಚಿತ್ರಣ 8, ಸ್ಥಳ ಪರಿಚಯ 4, ಜಾನಪದ ಕಲೆ 3, ಹಬ್ಬಹರಿದಿನ 2, ಮಕ್ಕಳ ದಿನಾಚರಣೆ,ರಂಗಭೂಮಿ, ಪರಿಸರಕ್ಕೆ ಸಂಬಂಧಿಸಿದ ತಲಾ ಒಂದು ಲೇಖನವನ್ನು ಒಳಗೊಂಡಿದೆ.     

ಅವಶ್ಯಕತೆ ಅರಿತು ಬರುವವನೇ ನಿಜವಾದ ಸ್ನೇಹಿತ ಎಂಬ ಪ್ರಥಮ ಲೇಖನದಲ್ಲಿ  'ಸ್ನೇಹವು ನಿಮಗೆ ಸಿಹಿ ಮತ್ತು ಸಂತೋಷದ ನೆನಪುಗಳನ್ನು ನೀಡುತ್ತದೆ, ಅದನ್ನು ಜೀವಮಾನವಿಡೀ ಪಾಲಿಸಬಹುದು ಮತ್ತು ಆ ಅಮೂಲ್ಯ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾದರೆ, ನೀವು ಈ ಜಗತ್ತಿನಲ್ಲಿ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ, ಎಂದು ಹೇಳುತ್ತಾ ಸ್ನೇಹದ ಮಹತ್ವವನ್ನು ಸಾರಿದ್ದಾರೆ. 'ನಿಜವಾದ ಸ್ನೇಹಿತರು ನಮ್ಮ ಜೀವನದ ಅತ್ಯುತ್ತಮ ಆಸ್ತಿಯಂತಿದ್ದಾರೆ. ಏಕೆಂದರೆ ಅವರು ನಮ್ಮ ದುಃಖವನ್ನು ಹಂಚಿಕೊಳ್ಳುತ್ತಾರೆ, ನಮ್ಮ ನೋವನ್ನು ಶಮನಗೊಳಿಸುತ್ತಾರೆ ಮತ್ತು ನಮ್ಮನ್ನು ಸಂತೋಷಪಡಿಸುತ್ತಾರೆ' ಎಂಬ ಭಾವ ಲೇಖನದಲ್ಲಿ ಮನೆಮಾಡಿದೆ.  

ಎರಡನೇ ಲೇಖನ 'ಸ್ನೇಹ ಅತಿ ಮಧುರ ಗೆಳೆತನ ಸುಮಧುರ ಬಂಧನ' ಸಹ ಸ್ನೇಹದ ಕುರಿತದ್ದೇ ಆಗಿದ್ದರೂ ಲೇಖಕರು ಸ್ನೇಹದ ಸವಿಯನ್ನುಂಡವರಾಗಿದ್ದಾರೆ ಎಂದು ಭಾವಿಸಬಹುದು. 'ಒಂದು ಬಾರಿ ಹುಟ್ಟಿದ ಸ್ನೇಹವನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಅದಕ್ಕಾಗಿ ಪರಸ್ಪರ ತ್ಯಾಗ ಬಲಿದಾನಕ್ಕೂ ಸಿದ್ಧರಾಗಿರಬೇಕು' ಎಂಬ ಕಿವಿಮಾತನ್ನೂ ಹೇಳಿರುವುದು ಸೂಕ್ತವಾಗಿದೆ. ಸ್ನೇಹ ಹುಟ್ಟುವುದಕ್ಕೆ ಯಾವುದೇ ಕೋರ್ಸ್ ಇಲ್ಲ, ಬಡವ, ಶ್ರೀಮಂತ, ಮೇಲು-ಕೀಳು, ಸೌಂದರ್ಯ-ಕುರೂಪಿ ಇವುಗಳನ್ನು ನೋಡಿ ಹುಟ್ಟುವುದಿಲ್ಲ  ಎಂಬ ವಾಸ್ತವ ಸತ್ಯವನ್ನು ಪ್ರತಿಪಾದಿಸಿದ್ದಾರೆ.    

ಹೆದರಿಕೆಗೆ ಹೆದರಿಕೆ ಹುಟ್ಟಿಸುವಷ್ಟು ಧೈರ್ಯ ಬೆಳೆಸಿಕೊಳ್ಳಬೇಕು/ ಸಾಧನೆಯ ಹಾದಿಯಲ್ಲಿ ನಿಮಗೆ ನೀವೇ ಪ್ರೇರಣೆ/ ನಂಬಿಕೆ ಪರ್ವತವನ್ನೇ ಕದಲಿಸಬಲ್ಲದು/ ಮಾನವ ಜೀವನವೇ ಸವಾಲು ಜೀವನ/ ಆತ್ಮವಿಶ್ವಾಸ ಯಶಸ್ಸಿನ ಮೆಟ್ಟಿಲು/ ಗುರಿ ತಲುಪಲು ಬದ್ಧತೆ ಮುಖ್ಯ ಎಂಬ ಲೇಖನಗಳ ಶೀರ್ಷಿಕೆಗಳೇ ಇಡೀ ಲೇಖನದ ಸಾರವನ್ನು ನಮ್ಮ ಕಣ್ಣಮುಂದೆ ತೆರೆದಿಡುವಂತಿವೆ ಹಾಗೂ ಓದಲು ಪ್ರೇರೇಪಿಸುವಂತಿವೆ ಎಂಬುದು ನಿರ್ವಿವಾದ.ಈ ಲೇಖನಗಳು ಜೀವನ ಪಾಠದ ಮಹತ್ವವನ್ನು ಸಾರಿ ಆತ್ಮವಿಶ್ವಾಸ ನಂಬಿಕೆ ಕಳೆದುಕೊಂಡವರಿಗೆ ಭರವಸೆಯ ಮಹಾಪೂರವನ್ನೇ ಹರಿಸಿ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಿ ಧನಾತ್ಮಕ ಅಂಶಗಳನ್ನು ಜೀವನದಲ್ಲಿ ಪ್ರತಿಷ್ಟಾಪಿಸಿಕೊಳ್ಳಬಹುದಾದ ಮಹತ್ವವನ್ನು ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡುತ್ತವೆ.ಇದು ಯುವಕರಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗುವಂತೆ ಮೂಡಿಬಂದಿವೆ.   

ಈ ಲೇಖನಗಳ ಕೆಲವು ವಾಕ್ಯಗಳನ್ನು ನೋಡುವುದಾದರೆ 'ಒಬ್ಬ ವ್ಯಕ್ತಿ ಗೆದ್ದ ಅಂದ್ರೆ ಆತನ ಪ್ರಯತ್ನ ಗೆದ್ದಿದೆ ಅಂತ. ಒಬ್ಬ ವ್ಯಕ್ತಿ ಸೋತ ಅಂದ್ರೆ ಆತನ ಪ್ರಯತ್ನ ಸೋತಿದೆ ಅಂತ',  ‘ಧೈರ್ಯಂ ಸರ್ವತ್ರ ಸಾಧನಂ', 'ಪ್ರಯತ್ನಪಟ್ಟರೂ ಒಮ್ಮೊಮ್ಮೆ ನಿರೀಕ್ಷಿತ ಪ್ರತಿಫಲ ಸಿಗದು. ಅಂತಹುದರಲ್ಲಿ ಪ್ರಯತ್ನಿಸದೇ ಫಲ ನಿರೀಕ್ಷೆ ಮಾಡುವುದು ಮೂರ್ಖತನ', 'ಯಾವುದೇ ಕೆಲಸ ಆರಂಭಿಸುವ ಮೊದಲು ಬೇಕಾಗಿರುವುದು ಪೂರ್ವ ಷರತ್ತಿಲ್ಲದ ಸಂಪೂರ್ಣವಾದ ನಂಬಿಕೆ',. 'ಸಾಧನೆಯ ಹಾದಿಗೆ ಆತ್ಮವಿಶ್ವಾಸವೇ ಮೆಟ್ಟಿಲು', 'ತನ್ನ ಗುಣ, ನಡತೆ, ಸ್ವಭಾವ, ನಡವಳಿಕೆಗಳನ್ನು ತಾನೇ ಮೆಚ್ಚಿಕೊಳ್ಳುವುದು ಮತ್ತು ಸ್ವಸಾಮರ್ಥ್ಯದ ಬಗ್ಗೆ ವ್ಯಕ್ತಿಗಿರುವ ನಂಬಿಕೆಯೇ "ಆತ್ಮವಿಶ್ವಾಸ". 'ಬದ್ಧತೆ ಎಂದರೆ ಒಬ್ಬ ವ್ಯಕ್ತಿ ತಾನು ನಿರ್ವಹಿಸಲು ಇಚ್ಛಿಸಿದ ಕೆಲಸವನ್ನು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕವಾಗಿ ಪೂರ್ಣಗೊಳಿಸಲು ಪ್ರಯತ್ನಿಸುವ ಮನೋಭಾವ'.ಹೀಗೆ ಇವರ ಆಲೋಚನಾ ಲಹರಿಯ ವಿಹಾರ ಲೇಖನಗಳಲ್ಲಿ ಸಾಗುತ್ತಾ ಹೋಗುತ್ತದೆ.   

ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಡಾ.ಸರ್.ಎಂ.ವಿಶ್ವೇಶ್ವರಯ್ಯ, ಬೆಂಗಳೂರು ನಿರ್ಮಾತೃ  ಕೆಂಪೇಗೌಡ, ಪ್ರಬಂಧಕಾರ ಎ.ಎನ್.ಮೂರ್ತಿರಾವ್, ನಾಲ್ವಡಿ ಕೃಷ್ಣರಾಜ ಒಡೆಯರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ರೆಬೆಲ್ ಸ್ಟಾರ್ ಅಂಬರೀಶ್, ದಲಿತಕವಿ ಡಾ.ಸಿದ್ದಲಿಂಗಯ್ಯ ಹೀಗೆ ವಿವಿಧ ಸ್ತರಗಳ ತಮಗೆ ಇಷ್ಟವಾದ ಸಾಧಕ ವ್ಯಕ್ತಿಗಳ ಚಿತ್ರಣವನ್ನು ಓದುಗರ ಮುಂದಿಟ್ಟಿದ್ದಾರೆ. ಸರ್ವರಿಗಿಷ್ಟ ಸರ್ವಪಲ್ಲಿ ಲೇಖನದಲ್ಲಿ ರಾಧಾಕೃಷ್ಣನ್ ರವರ ಕಿರು ಪರಿಚಯ ಮಾಡಿಕೊಟ್ಟು ಶಿಕ್ಷಣದ ಮಹತ್ವ, ಶಿಕ್ಷಕರ ಹೊಣೆಗಾರಿಕೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ.   

ಭಾರತ ಕಂಡ ಅಪ್ರತಿಮ ಇಂಜಿನಿಯರ್ ಮೋಕ್ಷಗುಂಡಂ ಸರ್.ಎಂ.ವಿಶ್ವೇಶ್ವರಯ್ಯನವರ ಸಾಧನೆಗಳನ್ನು ಚಂದದಲ್ಲಿ ಮನಗಾಣಿಸಿದ್ದಾರೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಒಡಗೂಡಿ ಮೈಸೂರು ಸಂಸ್ಥಾನದ ಸರ್ವತೋಮುಖ ಬೆಳವಣಿಗೆಯ ಹರಿಕಾರರಾದ ಸರ್.ಎಂ.ವಿ ಅವರಿಗೆ ಲೇಖನದ ಮೂಲಕ ತಮ್ಮ ಗೌರವ ಸಲ್ಲಿಸಿದ್ದಾರೆ. ನಾಲ್ವಡಿಯವರ ಬಗೆಗಿನ ಲೇಖನದಲ್ಲಿ ಅವರ ಜನಪರ ಕಾರ್ಯಕ್ರಮಗಳನ್ನು,ಅವರು ಜಾರಿಗೆ ತಂದ ಸಾಮಾಜಿಕ ಸುಧಾರಣಾ ಕಾನೂನುಗಳನ್ನು ಓದುಗರ ಮುಂದಿಡುವಲ್ಲಿ ಸಫಲರಾಗಿರುವ ಲೇಖಕರು ಹೀಗೊಬ್ಬ ಅರಸರು ಕಳೆದ ಶತಮಾನದಲ್ಲಿ ನಮ್ಮ ನಾಡಿನಲ್ಲಿದ್ದರು ಎಂಬುದು ಹೆಮ್ಮೆಯ ವಿಷಯ ಎಂದು ಸ್ಮರಿಸಿ ತಮ್ಮ ಗೌರವ ಸಲ್ಲಿಸಿದ್ದಾರೆ.

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ನೆನಪನ್ನು ಅವರ ಸಾಧನೆಗಳಾದ ಪೇಟೆಗಳ ನಿರ್ಮಾಣ, ಕೆರೆಗಳ ಕೊಡುಗೆ, ದೇವಾಲಯಗಳ ನಿರ್ಮಾಣ ಮುಂತಾದ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಇನ್ನು ತಮ್ಮದೇ ಗ್ರಾಮದವರಾದ ಅಕ್ಕಿಹೆಬ್ಬಾಳಿನ ಪ್ರಬಂಧಕಾರ ಎಎನ್.ಮೂರ್ತಿರಾವ್ ವ್ಯಕ್ತಿ ಚಿತ್ರಣವನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

'ಸಣ್ಣ ಕತೆಗಳ ಜನಕ' ಎಂದೇ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರನ್ನು 'ಕನ್ನಡದ ಆಸ್ತಿ' ಎಂದು ನಿರೂಪಿಸುವ ಹಾಗೆ ಅವರ ವ್ಯಕ್ತಿ ಚಿತ್ರಣವನ್ನು ನಮ್ಮ ಮುಂದಿಟ್ಟಿದ್ದಾರೆ.

ಮಂಡ್ಯದ ಗಂಡು, ಮಾತೃಹೃದಯಿ, ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನನ, ಸಿನಿಮಾ ಲೋಕ, ರಾಜಕೀಯ, ಪಡೆದ ಪ್ರಶಸ್ತಿಗಳ ವಿವರವನ್ನು ಸಂಕ್ಷಿಪ್ತವಾಗಿ ದಾಖಲಿಸಿ ಜಿಲ್ಲೆಯ ಹೃದಯವಂತನಿಗೆ ಅಕ್ಷರ ನಮನ ಸಲ್ಲಿಸಿದ್ದಾರೆ.

ಬಂಡಾಯ, ದಲಿತಕವಿ ಡಾ.ಸಿದ್ದಲಿಂಗಯ್ಯನವರ ಹೋರಾಟದ ಬದುಕು, ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮೊಳಗೆ ಮೊಳೆಯುತ್ತಿದ್ದ ಸಿಟ್ಟು, ಆಕ್ರೋಶಗಳನ್ನು ವ್ಯಕ್ತಪಡಿಸಿದ ಕಾವ್ಯಗಳನ್ನು ನೆನಪಿಸಿದ್ದಾರೆ. ಇನ್ನುಳಿದಂತೆ ಜನಪದ ಕಲೆಗಳಾದ ಮೂಡಲಪಾಯ ಯಕ್ಷಗಾನ,ತೊಗಲು ಬೊಂಬೆಯಾಟ,ಸೂತ್ರದ ಗೊಂಬೆಯಾಟದ ವೈಶಿಷ್ಟ್ಯತೆಗಳನ್ನು ಪರಿಚಯಿಸುವುದರ ಜೊತೆಗೆ ಇಂತಹ ಕಲೆಗಳನ್ನು ಉಳಿಸಿ ಬೆಳೆಸುವ ಮಹತ್ವವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾರೆ.  

ಪ್ರವಾಸಿ ತಾಣಗಳಾದ ತಮ್ಮ ತಾಲೂಕಿನ ಗೋವಿಂದನಹಳ್ಳಿಯ ಪಂಚಲಿಂಗ ದೇವಾಲಯ, ಹೊಸಹೊಳಲಿನ ಶ್ರೀ ಲಕ್ಷ್ಮೀನಾರಾಯಣ ದೇವಾಲಯಗಳ ಸೊಬಗು ಸೌಂದರ್ಯ,ಭಕ್ತಿಯ ಮಹತ್ವ,ಐತಿಹಾಸಿಕ ಹಿನ್ನೆಲೆಯನ್ನು ವಿವರಿಸುವಲ್ಲಿ ಸಫಲರಾಗಿದ್ದಾರೆ.ಪೌರಾಣಿಕ ಹಿನ್ನೆಲೆಯುಳ್ಳ ಶ್ರೀರಾಮ ಲಕ್ಷ್ಮಣರು ವನವಾಸದ ಸಮಯದಲ್ಲಿ ಭೇಟಿ ನೀಡಿದ್ದ ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮ ಹಾಗೂ ಚುಂಚನಕಟ್ಟೆಯ ಐತಿಹಾಸಿಕ ಹಿನ್ನೆಲೆಯೊಟ್ಟಿಗೆ ಇಲ್ಲಿನ ಜಲಪಾತದ ಪರಿಸರದ ಪ್ರಕೃತಿ ಸೌಂದರ್ಯವನ್ನು ವರ್ಣಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಐಕ್ಯತೆಯ ಪ್ರತೀಕ ಗಣೇಶ ಚತುರ್ಥಿ,ಅಣ್ಣ-ತಂಗಿಯ ಅನುಬಂಧದ ಹಬ್ಬವೇ ರಕ್ಷಾಬಂಧನ ಆಚರಣೆಯ ಮಹತ್ವದ ಸಂದೇಶವನ್ನು ಪ್ರಸ್ತುತಪಡಿಸಿದ್ದಾರೆ.ವಿಶ್ವರಂಗಭೂಮಿ ದಿನದ ಪ್ರಯುಕ್ತ ಬರೆದ ಲೇಖನದಲ್ಲಿ ಮನರಂಜನೆ ಜೊತೆಗೆ ಸಾಮಾಜಿಕ ಸಂದೇಶ ಸಾರುವ ರಂಗಭೂಮಿಯ ಕಲಾವಿದರಿಗೆ ಗೌರವ ತೋರಿದ್ದಾರೆ.ನಿತ್ಯವೂ ಪರಿಸರ ದಿನವಾಗಲಿ ಎನ್ನುವ ಕಾಳಜಿಯುಳ್ಳ ಲೇಖಕರು ಮಾನವ ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಮರ ಗಿಡಗಳನ್ನು ನಾಶ ಮಾಡುತ್ತಾ ತನ್ನ ನಾಶವನ್ನು ಕೂಡ ಮಾಡಿಕೊಂಡು ಬರುತ್ತಿದ್ದಾನೆ. ತನ್ನ ನಾಶದ ಜೊತೆಗೆ ಈ ಪರಿಸರದಲ್ಲಿ ಬದುಕಿರುವ ಅನೇಕ ಜೀವಿಗಳನ್ನು ಕೂಡ ನಾಶಮಾಡುತ್ತಿದ್ದಾನೆ ಎಂಬ ವಿಷಾದಭಾವವನ್ನು ಹೊರಹಾಕಿದ್ದಾರೆ.

ಕೆಲವೊಂದು ಲೇಖನಗಳ ಹಲವಾರು ಕಡೆ ವಾಕ್ಯ ರಚನೆ ಸಹಜತೆ ಕಳೆದುಕೊಂಡಿದೆ ಎಂಬ ಭಾವ ಮೂಡುತ್ತದೆ.ಕೆಲವೆಡೆ ವಾಕ್ಯ ರಚನೆಗೆ ತಕ್ಕುದಾದ ಪದವನ್ನು ಬಳಸಲು ಸೋತಿದ್ದಾರೆ ಎನಿಸುತ್ತದೆ.ಅಲ್ಲಲ್ಲಿ ಅಕ್ಷರ ದೋಷಗಳು ಕಣ್ಣಿಗೆ ಕಾಣುವಂತೆ ಢಾಳಾಗಿ ಗೋಚರಿಸುತ್ತವೆ.ಅಂತಿಮ ಕರಡು ತಿದ್ದುವಾಗ ಅವುಗಳನ್ನು ನಿವಾರಿಸಬೇಕಾದ ಅಗತ್ಯವಿದೆ. ಕೆಲ ಲೇಖನಗಳ ಶೀರ್ಷಿಕೆಗಳು ಅಗತ್ಯಕ್ಕಿಂತ ಉದ್ದವಾಗಿವೆ. ಅನೇಕ ತತ್ವಶಾಸ್ತ್ರದ ಮಹನೀಯರ ಮಾತುಗಳನ್ನು ತಮ್ಮ ಲೇಖನಗಳುದ್ದಕ್ಕೂ ಸಾಂದರ್ಭಿಕವಾಗಿ ಬಳಸಿಕೊಂಡಿರುವುದು ಗಮನ ಸೆಳೆಯುತ್ತವೆ.   

ಒಟ್ಟಂದದಲ್ಲಿ ಹೇಳುವುದಾದರೆ ಲೇಖಕರ ಶ್ರಮ ಸಾರ್ಥಕ್ಯವನ್ನು ತಂದುಕೊಡುತ್ತದೆ. ಮುಂದೆ ಮುಂದೆ ಸಾಗುತ್ತಾ ಲೇಖಕರು ಪ್ರಬುದ್ಧತೆ ಬೆಳೆಸಿಕೊಂಡು ಪ್ರವರ್ಧಮಾನಕ್ಕೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.ಸಾಹಿತ್ಯದ ಬೆಳವಣಿಗೆಯೊಟ್ಟಿಗೆ ನಿಮ್ಮ ಜೀವನಯಾನವೂ ಯಶಸ್ವಿಯಾಗಿ ಸಾಗಲಿ.ಉಜ್ವಲ ಭವಿಷ್ಯ ನಿಮ್ಮದಾಗಲಿ.ಬರವಣಿಗೆಯನ್ನು ನಿರಂತರವಾಗಿ ಬೆಳೆಸಿಕೊಂಡು ಹೋಗಲಿ ಎನ್ನುವ ಆಶಯದೊಂದಿಗೆ ಮುನ್ನುಡಿ ಬರೆಯಬೇಕಾದ ಕಾರಣದಿಂದ 'ಲೇಖನ ವಿಹಾರ' ಮಾಡಲು ಅವಕಾಶ ಮಾಡಿಕೊಟ್ಟ ಅಜರುದ್ದೀನ್ ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು. ಒಳಿತಾಗಲಿ.

- ಹೊಳಲು ಶ್ರೀಧರ್
  ನಿವೃತ್ತ ಉಪನ್ಯಾಸಕ/ಪತ್ರಕರ್ತ
  ಮಂಡ್ಯ


 

MORE FEATURES

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...