ಹೊಸ ಶಿಕ್ಷಣ ನೀತಿಯ ಮಿತಿ ಮತ್ತು ಗತಿ : ಸಿದ್ದನಗೌಡ ಪಾಟೀಲ


"ಈ ಕೃತಿಯಲ್ಲಿನ ಲೇಖನಗಳನ್ನುಬರೆದವರು ದಶಕಗಳ ಕಾಲ ಶಿಕ್ಷಣ, ಸಾಹಿತ್ಯ ಸಾಂಸ್ಕೃತಿಕ, ವೈದ್ಯಕೀಯ ಶಿಕ್ಷಣ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು, ಬದುಕಿನುದ್ದಕ್ಕೂ ವೈಜಾರಿಕ, ವೈಜ್ಞಾನಿಕ ಚಿಂತನೆಗಳನ್ನು ತಮ್ಮ ಬದುಕು, ಬರಹಗಳಲ್ಲಿ ಅಳವಡಿಸಿಕೊಂಡವರು. ಶಿಕ್ಷಣ ಸಂಸ್ಥೆಗಳಲ್ಲಿ ಪಾಠ ಪ್ರವಚನ ಮಾಡಿದವರು, ಅಂಥವರು ಶಿಕ್ಷಣ ಕ್ಷೇತ್ರದ ಪ್ರಜಾವಂತರ ಪ್ರತಿನಿಧಿಗಳಾಗಿ ಈ ಕೃತಿಯಲ್ಲಿನ ತಮ್ಮ ಲೇಖನಗಳಲ್ಲಿ ಹಲವಾರು ಮೌಲಿಕ ಪ್ರಶ್ನೆಗಳನ್ನು ಎತ್ತಿದ್ದಾರೆ ಎನ್ನುತ್ತಾರೆ ಸಿದ್ದನಗೌಡ ಪಾಟೀಲ. ಅವರು ರಾಷ್ಟ್ರೀಯ ಶಿಕ್ಷಣ ನೀತಿ 2020 ಒಂದು ನೋಟ ಕೃತಿಯಲ್ಲಿ ಬರೆದ ಮುನ್ನುಡಿ ನಿಮ್ಮ ಓದಿಗಾಗಿ

ಪ್ರಸ್ತುತ ಕೇಂದ್ರ ಸರಕಾರ 29 ಜುಲೈ, 2020ರಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆದು ಜಾರಿಗೆ ತಂದಿತು. ಸ್ವತಂತ್ರ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಜಾರಿಗೆ ಬಂದ ಮೂರನೇ ಶಿಕ್ಷಣ ನೀತಿ ಇದು. ಸಾಮಾನ್ಯವಾಗಿ ಮಾನವನ ವಿಕಾಸದ ಹಂತದಲ್ಲಿ ಆಗುವ ಬದಲಾವಣೆಗಳು, ಹೊಸ ರೀತಿಯ ಜೀವನ ವಿಧಾನ, ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗುವ ಹೊಸ ಆವಿಷ್ಕಾರಗಳು, ಪರಿಣಾಮವಾಗಿ ಬದಲಾಗುವ ಉತ್ಪಾದನಾ ವಿಧಾನ, ಜೀವನ ವಿಧಾನ, ಇದೆಲ್ಲದರ ಪರಿಣಾಮವಾಗಿ ರೂಪುಗೊಳ್ಳುವ ಹೊಸ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ವ್ಯವಸ್ಥೆ - ಇವೆಲ್ಲವನ್ನು ಕಾಲಕಾಲಕ್ಕೆ ಪರಿಗಣಿಸಿ ಶಿಕ್ಷಣ ವ್ಯವಸ್ಥೆ ನವೀಕರಣಗೊಳ್ಳುತ್ತಲೇ ಇರುತ್ತದೆ. ಹೊಸ ಪೀಳಿಗೆ ತಮ್ಮ ಸಮಕಾಲೀನ ಬದುಕನ್ನು ಅರ್ಥಮಾಡಿಕೊಳ್ಳುತ್ತಲೇ ಇತಿಹಾಸವನ್ನು ಅರ್ಥೈಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆ ಹಿನ್ನೆಲೆಗಳಲ್ಲಿ ಪ್ರತಿಯೊಂದು ದೇಶದಲ್ಲೂ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ, ನವೀಕರಣಗೊಳಿಸುವ ಪ್ರಕ್ರಿಯೆ ಸಹಜವಾದದ್ದು. ಬ್ರಿಟಿಷರು ಭಾರತಕ್ಕೆ ಬಂದಾಗ ಎರಡು ರೀತಿಯ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿತ್ತು. ಹಿಂದೂ ಮತರ‍್ಮ ಕೇಂದ್ರಿತ ಗುರುಕುಲ ಪಾಠಶಾಲೆಗಳು ಮತ್ತು ಇಸ್ಲಾಂ ಕೇಂದ್ರಿತ ಮದರಸಾಗಳು. ಬ್ರಿಟಿಷ್ ಹಾಗೂ ಇತರೆ ಯುರೋಪಿನ ವ್ಯಾಪಾರಿ ಕಂಪನಿಗಳ ಪ್ರವೇಶದ ಜೊತೆಗೇ ಕ್ರಿಶ್ಚಿಯನ್ ಕೇಂದ್ರಿತ ಮಿಶನರಿ ಶಾಲೆಗಳು ಬಂದವು. ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲಿ ಆಳುವ ವರ್ಗದ ಶೋಷಣೆಗೆ, ಹಿತಾಸಕ್ತಿಗೆ ಪೂರಕವಾಗಿ ಪ್ರಭುತ್ವ ರೂಪಿಸಿದ ಶಿಕ್ಷಣ ವ್ಯವಸ್ಥೆಯ ಇತಿಹಾಸ ಮೆಕಾಲೆ (1835)ವರೆಗೂ ಹೋಗುತ್ತದೆ. ನಂತರ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಪೂರಕವಾಗಿ, ಆಡಳಿತ ವರ್ಗದ ಹಿತಾಸಕ್ತಿಗನುಗುಣವಾಗಿ, ಮೆಕಾಲೆ ಮೇಲ್ವರ್ಗದವರಿಗಾಗಿ ರೂಪಿಸಿದ ಶಿಕ್ಷಣ ನೀತಿಯಿಂದ ಆರಂಭವಾಗಿ ವುಡ್ಸ್ ಪ್ರಸ್ತಾವನೆ (1854), ಮೋರಿ ಕಮಿಟಿ (1858), ಹಂಟರ್ ಕಮಿಶನ್ (1882), ರಾಯಲ್ ಕಮಿಶನ್ (1902) ಹೀಗೆ ವಿವಿಧ ಹಂತಗಳಲ್ಲಿ, ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ಸಮಿತಿಗಳು ಶಿಕ್ಷಣದ ವ್ಯವಸ್ಥೆಯನ್ನು ಭಾರತದಲ್ಲಿ ರೂಪಿಸಿದ್ದವು. ಬ್ರಿಟಿಷ್ ಕಾಲದ ಶಿಕ್ಷಣ ವ್ಯವಸ್ಥೆ ಸಾಮ್ರಾಜ್ಯಶಾಹಿಗಳ ಸುಲಿಗೆ, ಆಡಳಿತಕ್ಕೆ ಪೂರಕವಾಗಿದ್ದರೂ ಮುಂಚಿನ ಸನಾತನೀಯ ಪಾಠಶಾಲೆಗಳ, ಗುರುಕುಲಗಳ ಮಡಿವಂತ ಶಿಕ್ಷಣಕ್ಕಿಂತ, ಮದರಸಾ ಮತ್ತು ಮಿಶನರಿಗಳ ಮತೀಯ ಕೇಂದ್ರಿತ ಶಿಕ್ಷಣಕ್ಕಿಂತ ಒಂದು ಹಂತದವರೆಗಿನ ಸಾರ್ವತ್ರಿಕತೆ, ತಾಂತ್ರಿಕತೆ, ವೈಜ್ಞಾನಿಕತೆ,ವೈಚಾರಿಕತೆಯ ಮಾಧ್ಯಮವಾಗಿ ಬೆಳೆಯಿತು. ಸಾವಿತ್ರಿಬಾಯಿ ಫುಲೆಯಂಥವರು ಆರಂಭಿಸಿದ್ದ 'ಅಸ್ಪಶ್ಯರಿಗೂ ಮಹಿಳೆಗೂ ಶಿಕ್ಷಣ' ಎಂಬ ಅಕ್ಷರ ಆಂದೋಲನಕ್ಕೆ ಆ ಕಾಲದಲ್ಲಿಯೇ ಚಾಲನೆ ಸಿಕ್ಕಿತು, ಆ ಚಳುವಳಿ ಸನಾತನ ಶಿಕ್ಷಣ ವ್ಯವಸ್ಥೆಗೆ ಪ್ರತಿಯಾದ, ಪಠ್ಯಾಯವಾದ ನೀತಿಯಾಗಿತ್ತು. ಬ್ರಿಟಿಷರ ಆಡಳಿತದ ಕಾಲದಲ್ಲಿಯೇ ಶಿಕ್ಷಣ ವ್ಯವಸ್ಥೆಯ ವ್ಯಾಪ್ತಿಗೇ ಬರದ, ಕುಲಕಸಬುಗಳಾಗಿಯೇ ಉಳಿದಿದ್ದ, ಕಂಬಾರಿಕೆ, ಕುಂಬಾರಿಕೆ, ಬಡಗತನ, ನೇಕಾರಿಕೆ, ಕಟ್ಟಡ ನಿರ್ಮಾಣ, ಕೃಷಿ ಮುಂತಾದ ಕ್ಷೇತ್ರಗಳ ಜ್ಞಾನ, ತಂತ್ರಜ್ಞಾನ ವಿವಿಧ ಇಂಜನಿಯರಿಂಗ್ ಕೋರ್ಸುಗಳ ಭಿನ್ನ ಶಾಸ್ತ್ರಗಳ ಹೆಸರಿನಲ್ಲಿ ಶಿಕ್ಷಣ ವ್ಯವಸ್ಥೆಯ ಭಾಗವಾದವು. ಅದು ಸಾಮ್ರಾಜ್ಯಶಾಹಿ ಆರ್ಥಿಕ ಮತ್ತು ಕೈಗಾರಿಕಾ ನೀತಿಯ ಭಾಗವಾಗಿ ನಡೆದಿತ್ತೆಂಬುದನ್ನು ಮರೆಯಲಾಗದು.

ಸ್ವಾತಂತ್ರ‍್ಯಾನಂತರ ಹೊಸ ಸ್ವಾವಲಂಬಿ, ಸೌಹಾರ್ದ, ಒಕ್ಕೂಟ ವ್ಯವಸ್ಥೆಯ ಭಾರತ ಕಟ್ಟಲು ರೂಪಿಸಿಕೊಂಡ ಶಿಕ್ಷಣ ವ್ಯವಸ್ಥೆಗೆ ಜನಕೇಂದ್ರಿತವಾದ ಹಿತಾಸಕ್ತಿ ಇರಬೇಕಾದ ಅವಶ್ಯಕತೆ ಇತ್ತು. ಅದಕ್ಕೆ ಪೂರಕವಾಗಿ ಶಿಕ್ಷಣದ ಸಾರ್ವತ್ರಿಕತೆ ಆ ಸಂದರ್ಭದ ತುರ್ತು ಅಗತ್ಯವಾಗಿತ್ತು. ಆಗ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಕೊಠಾರಿ ಕಮಿಟಿಯನ್ನು ರಚಿಸಿ ಅದರ ಶಿಫಾರಸ್ಸಿನನ್ವಯ 1968ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದರು. ಕೊಠಾರಿ ಕಮಿಟಿಯ ಶಿಫಾರಸುಗಳು ಶಿಕ್ಷಣ ನೀತಿಯಾಗಿ ಜಾರಿಯಾಗುವ ಮುನ್ನ 1968ರಲ್ಲಿ ಲೋಕಸಭೆಯಲ್ಲಿ ಸುದೀರ್ಘವಾಗಿ ಚರ್ಚೆಗೆ ಒಳಗಾಗಬೇಕಾಯಿತು. ದೇಶದ ಹಲವಾರು ಶಿಕ್ಷಣ ತಜ್ಞರ ಸಲಹೆಗಳನ್ನು ಪಡೆಯಲಾಯಿತು. ಆ ಮೂಲಕ ಭಾರತದ ಪ್ರಾಥಮಿಕ, ಮಾಧ್ಯಮಿಕ ಹಂತದ ಶಿಕ್ಷಣ ವ್ಯವಸ್ಥೆಗೆ ತಳಪಾಯವನ್ನು ನಿರ್ಮಿಸಲಾಯಿತು. ಅದೇ ರೀತಿ ಎರಡನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 1986ರಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿಯವರು ಘೋಷಿಸಿದ್ದರು. ಅದು 1968ರ ರಾಷ್ಟ್ರೀಯ ಶಿಕ್ಷಣ ನೀತಿಯ ಮುಂದುವರಿದ ನೀತಿಯಾಗಿತ್ತು. ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ವಿಶೇಷ ಗಮನಕೊಟ್ಟ, ತಾಂತ್ರಿಕ ಮತ್ತು ಉನ್ನತ ಶಿಕ್ಷಣಕ್ಕೆ ಒತ್ತುಕೊಟ್ಟ ಶಿಕ್ಷಣ ನೀತಿಯಾಗಿತ್ತು. ಆ ಶಿಕ್ಷಣ ನೀತಿಯ ಕರಡನ್ನು 8 ಆಗಸ್ಟ್ 1986ರಂದು ಸಂಸತ್ ಸಭೆಯಲ್ಲಿ ಮಂಡಿಸಲಾಯಿತು. ವಿವರವಾದ ವಿಮರ್ಶೆ, ಚರ್ಚೆಯಾದ ಮೇಲೆ ಸಂಸತ್ತು ಈ ಎರಡನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿತು. ಈ ಶಿಕ್ಷಣ ನೀತಿಯೂ ರಾಷ್ಟ್ರಮಟ್ಟದಲ್ಲಿ ವಿವರವಾದ ಚರ್ಚೆಗೆ ವಿಮರ್ಶೆಗೆ ಒಳಪಟ್ಟಿತು. ಈ ಮಧ್ಯೆ ಶಿಕ್ಷಣ ಕ್ಷೇತ್ರದ ವಿವಿಧ ಹಂತದ, ಕ್ಷೇತ್ರಗಳ ಸುಧಾರಣೆಗಾಗಿ ರಾಧಾಕೃಷ್ಣನ್ ಸಮಿತಿ (1948-49), ಮುರಳಿಧರ ಕಮಿಶನ್ (1952), ಮುಂತಾದ ಸಮಿತಿಗಳನ್ನು ರಚಿಸಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಸುಧಾರಣೆಗಾಗಿ ಕ್ರಮ ಕೈಗೊಳ್ಳಲಾಗಿತ್ತು.

2014ರಲ್ಲಿ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದ ಮರು ವರ್ಷದಿಂದಲೇ ಕೃಷಿ, ಕೈಗಾರಿಕೆ, ನೈಸರ್ಗಿಕ ಸಂಪನ್ಮೂಲ ಇಂಥ ಹಲವಾರು ಕ್ಷೇತ್ರಗಳಲ್ಲಿ ಮೂಲಭೂತವಾದ ಬದಲಾವಣೆ (ಸುಧಾರಣೆ ಅಲ್ಲ)ಯನ್ನು ತರುವ ಯೋಜನೆಗಳನ್ನು ರೂಪಿಸಿದರು. ಅದರಂತೆ ಶಿಕ್ಷಣ ವ್ಯವಸ್ಥೆಯೂ ಸಹ ಬದಲಾವಣೆಯ ಪ್ರಕ್ರಿಯೆಗೊಳಗಾಗಿ ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸಮಿತಿಯ ಮೂಲಕ ಹೊಸ 'ರಾಷ್ಟ್ರೀಯ ಶಿಕ್ಷಣ ನೀತಿ - 2020' ಸಿದ್ಧಗೊಂಡಿತು.

ಡಾ|| ಕಸ್ತೂರಿ ರಂಗನ್ ಅವರ ಸಮಿತಿ 2008ರ ಡಿಸೆಂಬರ್‌ನಲ್ಲಿ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ಸರಕಾರ ಈ ಕರಡು ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಕಾಲೇಜು, ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು, ಶಿಕ್ಷಕರ ಸಂಘಟನೆಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು - ಹೀಗೆ ಎಲ್ಲ ವೇದಿಕೆಗಳಲ್ಲಿ, ಚರ್ಚೆಗೆ ಒಳಪಡಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಬೇಕಾಗಿತ್ತು. ಹೆಸರಿಗೆ ಮಾತ್ರ ಕೆಲವು ದಿನ ಜಾಲತಾಣದಲ್ಲಿ ಪ್ರಕಟ ಮಾಡಿ ಅಭಿಪ್ರಾಯ ಕೇಳಿತು. ಸಾರ್ವಜನಿಕವಾಗಿ ಪ್ರಚಾರ ಮಾಡದೇ ಸೀಮಿತ ಅವಧಿಯಲ್ಲಿಯೂ ಬಂದ ಸಲಹೆಗಳನ್ನು ಪರಿಗಣಿಸದೆ 29 ಜುಲೈ 2020ರಂದು ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆದು ಅಧಿಕೃತ ರಾಷ್ಟ್ರೀಯ ಶಿಕ್ಷಣ ನೀತಿಯನ್ನಾಗಿ ಜಾರಿಗೆ ತಂದಿದೆ. ಗಮನಿಸಬೇಕಾದ ಸಂಗತಿಯೆಂದರೆ 1968ರ ಮತ್ತು 1986ರ ರಾಷ್ಟ್ರೀಯ ಶಿಕ್ಷಣ ನೀತಿಗಳು ಜಾರಿಗೆ ಬರುವ ಮುನ್ನ ಲೋಕಸಭೆಯಲ್ಲಿ ಚರ್ಚೆಗೊಳಗಾದಂತೆ ಶ್ರೀ ಮೋದಿಯವರ ಸರಕಾರದ 2020ರ ಶಿಕ್ಷಣ ನೀತಿ ಸಂಸತ್ತಿನಲ್ಲಿ ಚರ್ಚೆಯಾಗದೇ ಜಾರಿಯಾಯಿತು. ಇದು ಯಾವುದೇ ಸರಕಾರ ನಡೆದುಕೊಳ್ಳುವ ಪ್ರಜಾಸತ್ತಾತ್ಮಕ ವಿಧಾನವಲ್ಲ. ಅದೂ ಶಿಕ್ಷಣ ಕ್ಷೇತ್ರದಂಥ ಅತ್ಯಂತ ಮಹತ್ವದ ಕ್ಷೇತ್ರದ, ದೇಶದ ಇಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಕ್ಷೇತ್ರದ ಕುರಿತು ಇಂಥ ನಿರ್ಲಕ್ಷ್ಯವೇ? ಎಂಬ ಪ್ರಶ್ನೆ ದೇಶದಾದ್ಯಂತ ಕೇಳಲ್ಪಟ್ಟಿತು. ಇದು ನಿರ್ಲಕ್ಷ್ಯವಾಗಿರಲಿಲ್ಲ. ಉದ್ದೇಶಪೂರ್ವಕ ನಡೆ ಎಂಬುದನ್ನು ಸಾಂದರ್ಭಿಕ ಘಟನೆಗಳು ಸಬೀತುಪಡಿಸಿವೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿದ ಸಂದರ್ಭವನ್ನು ಗಮನಿಸಬೇಕು. 2019ರ ನವೆಂಬರ್‌ನಲ್ಲಿ ಚೀನಾದ ಹುಬೆ ಪ್ರಾಂತದಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕು, 2020ರ ಫೆಬ್ರವರಿ ಹೊತ್ತಿಗೆ ಭಾರತವನ್ನೂ ಒಳಗೊಂಡು ಏಶಿಯಾ, ಯುರೋಪಿನ ಹಲವಾರು ದೇಶಗಳನ್ನು ವ್ಯಾಪಿಸಿತ್ತು. 11 ಮಾರ್ಚ್ 2020ರಂದು ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಜಾಗತಿಕ ಸಾಂಕ್ರಮಿಕ ರೋಗವೆಂದು ಘೋಷಣೆ ಮಾಡಿತು. 24 ಮಾರ್ಚ್2020ರಂದು ರಾತ್ರಿ 8 ಘಂಟೆಗೆ ಪ್ರಧಾನಿ ಮೋದಿಯವರು ದೇಶವ್ಯಾಪಿ ಲಾಕ್‌ ಡೌನ್‌ ಘೋಷಣೆ ಮಾಡಿದರು. ಮುಂದ ಇಡೀ ದೇಶ, ಜನ ಭಯಭೀತರಾಗಿ ಮನೆ ಸೇರಿದರು. ಕಾಲೇಜು, ವಿಶ್ವವಿದ್ಯಾಲಯಗಳು ಬಂದ್‌ ಆಗಿದ್ದವು. ನಿತ್ಯಾವಶ್ಯಕ ವಸ್ತುಗಳನ್ನು ಪಡೆಯಲೂ ಜನ ಹೊರಬರಲಾಗದ ಸ್ಥಿತಿಯಲ್ಲಿದ್ದಾಗ, ದೇಶದಲ್ಲಿ 2020ರ ಜುಲೈ ಅಂತ್ಯಕ್ಕೆ 20 ಲಕ್ಷಕ್ಕೂ ಹೆಚ್ಚು ಜನ ಕೊರೋನಾ ಸೋಂಕಿಗೆ ಒಳಗಾದ, 40,000ಕ್ಕೂ ಹೆಚ್ಚು ಜನ ಸಾವಿಗೀಡಾದ ವರದಿಗಳು ಬಂದು ಜನ ದಿಕ್ಕೇ ತೋಚದೆ ಕುಳಿತಾಗ 29 ಜುಲೈ 2020ರಂದು ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕೇವಲ ಸಚಿವ ಸಂಪುಟದ ಒಪ್ಪಿಗೆ ಪಡೆದು ಜಾರಿಯಾಗುತ್ತದೆ. ಯಾಕೀ ಅವಸರ? ಯಾಕೀ ಗುಟ್ಟು? ಪ್ರಶ್ನೆ ಇನ್ನೂ ಪ್ರಸ್ತುತವಾಗಿದೆ.

ಈ ಕೃತಿಯಲ್ಲಿನ ಲೇಖನಗಳನ್ನು ಬರೆದವರು ದಶಕಗಳ ಕಾಲ ಶಿಕ್ಷಣ, ಸಾಹಿತ್ಯ ಸಾಂಸ್ಕೃತಿಕ, ವೈದ್ಯಕೀಯ ಶಿಕ್ಷಣ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು, ಬದುಕಿನುದ್ದಕ್ಕೂ ವೈಜಾರಿಕ, ವೈಜ್ಞಾನಿಕ ಚಿಂತನೆಗಳನ್ನು ತಮ್ಮ ಬದುಕು, ಬರಹಗಳಲ್ಲಿ ಅಳವಡಿಸಿಕೊಂಡವರು. ಶಿಕ್ಷಣ ಸಂಸ್ಥೆಗಳಲ್ಲಿ ಪಾಠ ಪ್ರವಚನ ಮಾಡಿದವರು, ಅಂಥವರು ಶಿಕ್ಷಣ ಕ್ಷೇತ್ರದ ಪ್ರಜಾವಂತರ ಪ್ರತಿನಿಧಿಗಳಾಗಿ ಈ ಕೃತಿಯಲ್ಲಿನ ತಮ್ಮ ಲೇಖನಗಳಲ್ಲಿ ಹಲವಾರು ಮೌಲಿಕ ಪ್ರಶ್ನೆಗಳನ್ನು ಎತ್ತಿದ್ದಾರೆ, ವಸ್ತುನಿಷ್ಠ ನೆಲೆಯಿಂದ 'ರಾಷ್ಟ್ರೀಯ ಶಿಕ್ಷಣ ನೀತಿ 2020’ ನ್ನು ವಿಮರ್ಶೆ ಮಾಡಿದ್ದಾರೆ. ನಾಡಿನ ಹಿರಿಯ ಚಿಂತಕರ ಶಿಕ್ಷಣ ಪದ್ಯರೂ ಆದ ಡಾ| ಜಿ. ರಾಮಕೃಷ್ಣ ಅವರು 'ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020'ರ ಪ್ರತಿ ಅಂಶವನ್ನೂ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಸಂವಿಧಾನದ ಹೆಸರಿನಲ್ಲಿಯೇ ಸಂವಿಧಾನ ಬಾಹಿರವಾದ ಹಲವಾರು ಅಂಶಗಳನ್ನೂ ಈ ನೀತಿಯಲ್ಲಿ ಗುರುತಿಸಿದ್ದಾರೆ. ಸಂವಿಧಾನದ ಏಳನೇ ಅನುಸೂಚಿಯಲ್ಲಿ ಬರುವ ರಾಜ್ಯ ಪಟ್ಟಿ, ಕೇಂದ್ರ ಪಟ್ಟಿ ಮತ್ತು ಸಹವತಿ ಪಟ್ಟಿಯ ನೀತಿಗಳನ್ನೇ ಉಲ್ಲಂಘಿಸಿದ ಈ ಶಿಕ್ಷಣ ನೀತಿ ಒಕ್ಕೂಟ ವ್ಯವಸ್ಥೆಗೆ ಹೇಗೆ ಮಾರಕವಾಗಿದೆಯೆಂದು ವಿಶ್ಲೇಷಿಸಿದ್ದಾರೆ. ಭಾಷೆ, ಸಂಸ್ಕೃತಿ, ಪರಂಪರೆಯ ಹೆಸರಿನಲ್ಲಿ ಶಿಕ್ಷಣವನ್ನು ಸನಾತನೀಯಗೊಳಿಸುವ ಅಪಾಯವನ್ನು ಗುರುಸಿದ್ದಾರೆ. ಅವರ ಸುದೀರ್ಘವಾದ ಮೌಲಿಕ ಲೇಖನ ಈ ಕೃತಿಯ ತಾತ್ವಿಕ ಮುನ್ನೋಟದಂತಿದೆ. ಇನ್ನೊಬ್ಬ ಹಿರಿಯ ಸಾಹಿತಿ, ಶಿಕ್ಷಣ ತಜ್ಞ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪನವರು ಅಂಗನವಾಡಿಗಳಿಂದ ಉನ್ನತ ಶಿಕ್ಷಣದವರೆಗಿನ ವ್ಯಾಪ್ತಿಯ ಈ ಶಿಕ್ಷಣ ನೀತಿಯ ಅವೈಜ್ಞಾನಿಕ, ಅವಾಸ್ತವಿಕ ಅಂಶಗಳ ವಿವರಗಳನ್ನು ವಿವರವಾಗಿ ದಾಖಲಿಸಿದ್ದಾರೆ. “ 'ಮಾತುಗಳ ಮಧ್ಯೆ ಇರುವ 'ಮೌನ'ಗಳು ಮತ್ತೇನನ್ನೋ ಮಾತನಾಡುವ ಅಪಾಯವೂ ಇರುತ್ತದೆ" ಎಂದು ಈ ಶಿಕ್ಷಣ ನೀತಿಯ 'ಗುಪ್ತ ಕಾರ ಸೂಚಿ'ಯ ಕಡೆಗೆ ಗಮನ ಸೆಳೆಯುತ್ತಾರೆ. ನಾಡಿನ ಶಿಕ್ಷಣ ತಜ್ಞ ಡಾ| ನಿರಂಜನಾರಾಧ್ಯ ರಾಷ್ಟ್ರೀಯ ಶಿಕ್ಷಣ ನೀತಿಯ ಅಪಾಯಗಳ ಕುರಿತು ನಿರಂತರವಾಗಿ ಮಾತನಾಡಿದವರು. ಜನಜಾಗೃತಿಗಾಗಿ ಶ್ರಮಿಸಿದವರು. ಅವರ ಲೇಖನ ಈ ಕೃತಿಯ ಸಾರ ಸಂಗತ ರೂಪದಲ್ಲಿದೆ. ನಾಡಿನ ಹಿರಿಯ ವಿದ್ವಾಂಸರೂ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರೂ ಬಿಳಿಮಲೆಯವರು ಭಾಷಾ ಶಾಸ್ತ್ರದ ಹಿನ್ನೆಲೆಯಿಂದ ಈ ಶಿಕ್ಷಣ ನೀತಿ ಸ್ಥಳೀಯ, ಪ್ರಾದೇಶಿಕ, ಹಲವಾರು ಮಾತೃಭಾಷೆಗಳಿಗೆ ಹೇಗೆ ಮಾರಕವಾಗಿದೆ ಎಂದು ವಿವರವಾಗಿ ಬರೆದಿದ್ದಾರೆ. 'ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ' ಎಂಬ ಅವರ ಲೇಖನ ಶಿಕ್ಷಣದ ವ್ಯಾಪಾರೀಕರಣದ ಉದ್ದೇಶದ ಮೇಲೂ ಬೆಳಕು ಚೆಲ್ಲುತ್ತದೆ. ವಿಶ್ವ ವ್ಯಾಪಾರಿ ಸಂಘಟನೆ, ಗ್ಯಾಟ್ಗೆ ಈ ನೀತಿ ಹೇಗೆ ಪೂರಕವಾಗಿದೆ ಎಂಬುದನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸಿದ್ದಾರೆ. ವೈದ್ಯರೂ, ಸಾಮಾಜಿಕ ಚಿಂತಕರೂ ಆದ ॥ ಶ್ರೀನಿವಾಸ ಕಕ್ಕಿಲ್ಲಾಯ ಅವರು ಉನ್ನತ ಹಾಗೂ ವೈದ್ಯಕೀಯ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವ, ಆಧುನಿಕ ವೈದ್ಯ ಪದ್ಧತಿಯ ಮೇಲೆ ಆವೈಜ್ಞಾನಿಕ ವೈದ್ಯ ಪದ್ಧತಿಗಳನ್ನು ಹೇರುವ ಆಪಾಯಗಳ ಸಂಭವನೀಯ ದುಷ್ಪರಿಣಾಮಗಳ ಕುರಿತು ಹೇಳಿದ್ದಾರೆ. ಸ್ವತಃ ಶಿಕ್ಷಕರೂ ಶಿಕ್ಷಣ ಕ್ಷೇತ್ರದ ಕುರಿತು ಹಲವಾರು ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ಮಹಾಬಲೇಶ್ವರ ರಾವ್‌ ಅವರು 'ಶಿಕ್ಷಕರ ಶಿಕ್ಷಣ - ಪ್ರೀತಿಯ ನಾಟಕ, ಕಾದ ಕಬ್ಬಿಣದ ಬರೆ" ಎಂಬ ಲೇಖನದಲ್ಲಿ ಶಿಕ್ಷಕ ತರಬೇತಿಗಳ ಹೆಸರಿನಲ್ಲಿ ಈ ಶಿಕ್ಷಣ ನೀತಿ ಹೇಗೆ ಪ್ರಾದೇಶಿಕತೆಯನ್ನು ನಾಶಮಾಡುತ್ತದೆ ಎಂದು ವಿವರಿಸುತ್ತಾರೆ. ಅಲ್ಲ ದಾಖಲಾತಿ ಅಥವಾ ಶೂನ್ಯ ದಾಖಲಾತಿಯ ನೆಪದಲ್ಲಿ ಸಾರ್ವತ್ರಿಕ ಮತ್ತು ಅನುದಾನಿತ ಶಾಲಾ ವ್ಯವಸ್ಥೆಯನ್ನು ಈ ಹೊಸ ಶಿಕ್ಷಣ ನೀತಿಯನುಸಾರ ಹೇಗೆ ನಾಶ ಮಾಡಲಾಗುತ್ತದೆ ಎಂಬುದನ್ನು ವಿವರವಾಗಿ ಬರೆದಿದ್ದಾರೆ. ಒಟ್ಟಾರೆ ಈ ಕೃತಿಯ ಎಲ್ಲ ಲೇಖಕರೂ ಈ 'ರಾಷ್ಟ್ರೀಯ ಶಿಕ್ಷಣ ನೀತಿ: 2020'ರ ನೇರ ಹಾಗೂ ಪರೋಕ್ಷ ದುಷ್ಪರಿಣಾಮಗಳ ಕುರಿತು ಹೇಳಿದ್ದಾರೆ. ಅಲ್ಲಲ್ಲಿ ಬರುವ ಧನಾತ್ಮಕ ಅಂಕಗಳನ್ನೂ ಗುರುತಿಸಿದ್ದಾರೆ. ಆದರೆ ಅವುಗಳನ್ನು ಜಾರಿ ಮಾಡುವ ಸಾಂಸ್ಥಿಕ ವ್ಯವಸ್ಥೆಯ ಬಗ್ಗೆ ಅನುಮಾನಗಳನ್ನು ವ್ಯಕ್ತ ಮಾಡಿದ್ದಾರೆ.

***

ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿದೆ. ದೇಶದ ಅಮಾಯಕ ಜನ, ಪ್ರಜ್ಞಾವಂತ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ತಜ್ಞರು ಈ 'ಗುಪ್ತಕಾರ ಸೂಚಿ'ಯನ್ನು ಅರ್ಥಮಾಡಿಕೊಂಡು, ಅದು ಜಾರಿಯಾಗದಂತೆ ಪ್ರತಿರೋಧ, ಪ್ರತಿಭಟನೆ ವ್ಯಕ್ತಪಡಿಸಬೇಕು. ಜನಾಂದೋಲನ ರೂಪಿಸಬೇಕು. ಅಂಥ ಜನಾಂದೋಲನಕ್ಕೆ ಕೈಪಿಡಿಯಾಗಿ ಈ ಕೃತಿ ಉಪಯುಕ್ತವಾಗಲಿ, ಉಪಯುಕ್ತವಾಗುತ್ತದೆಂದು ನನ್ನ ನಂಬಿಕೆ.

-ಸಿದ್ದನಗೌಡ ಪಾಟೀಲ

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...