ಜೋಗಿಯ 'ಕವನ ಜೋಳಿಗೆ'ಯ ಸುತ್ತ ಒಂದು ಇಣುಕು ನೋಟ


'ಇಲ್ಲಿರುವ 36 ಕವಿತೆಗಳು ಜೋಗಿ ಅವರಿಂದ ಎರಡು ದಶಕಗಳಲ್ಲಿ ಬರೆಸಿಕೊಂಡ ಕವಿತೆಗಳಾಗಿವೆ. ಹಾಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅವರ ಅನೇಕ ಹೆಜ್ಜೆ ಗುರುತುಗಳನ್ನು ದಾಖಲಿಸುತ್ತವೆ' ಎಂದಿದ್ದಾರೆ ವಿಮರ್ಶಕಿ ಅನುಸೂಯ ಯತೀಶ್. ಅವರು ಜೋಗಿ ಅವರ ಸಾಲು, ಸಾಲು ಸಾಲು ಕವನ ಸಂಕಲನಕ್ಕೆ ಬರೆದ ವಿಮರ್ಶೆ ಇಲ್ಲಿದೆ.

ಜೋಗಿ ಅವರ ಕಥೆಗಾರರ ಕೈಪಿಡಿ, ಹಸ್ತಿನಾವತಿ, ಜಾನಕಿ ಕಾಲಂಗಳು, ಜೋಗಿ ಕಾಲಂ, ಜೋಗಿ ಕಥೆಗಳು, ಹಾರರ್ ಸ್ಟೋರಿಸ್ ಸೇರಿದಂತೆ ಅವರ ಬಹುತೇಕ ಗದ್ಯ ಸಾಹಿತ್ಯವನ್ನು ಓದಿ ಬೆರಗಾಗಿದ್ದ ನನಗೆ ಇವರ ಮೊದಲ ಕವನ ಸಂಕಲನ ಬಗ್ಗೆ ಬಹಳ ಕುತೂಹಲವಿತ್ತು‌. #ನಿರ್ಗಮನ ಕಾದಂಬರಿಯೊಂದಿಗೆ ಅವರ ಚೊಚ್ಚಲ ಕವನ ಸಂಕಲನ ಸಾಲು, ಸಾಲು, ಸಾಲು ತರಿಸಿಕೊಂಡ ಮೇಲೆ ಮೊದಲು ಕಾಡಿದ್ದು 'ಸ್ವಂತಕ್ಕೆ ಬರೆದ ಕವಿತೆಗಳು' ಎಂಬ ಟ್ಯಾಗ್ ಲೈನ್. ಕವನ ಸಂಕಲನ ಓದಿ ಮುಗಿಸುವಷ್ಟರಲ್ಲಿ ಈ ಕವಿತೆಗಳು ಜೋಗಿ ಅವರಿಗೆ ಮಾತ್ರವಲ್ಲ ನನಗೂ ಸ್ವಂತವಾದವು. ಕೃತಿಯನ್ನು ಓದಿದ ಎಲ್ಲರಿಗೂ ಇವೆಲ್ಲ ತಮ್ಮದೇ ಸ್ವಂತ ಬದುಕಿನ ಅನುಭವಗಳು ಎಂಬ ಅನುಭೂತಿ ನೀಡಿದರೆ ಆಶ್ಚರ್ಯವೇನಿಲ್ಲ. ಕಾರಣ ಇವೆಲ್ಲ ಜನಸಾಮಾನ್ಯರ ನಡುವಿನ ಸಂವೇದನೆಗಳ ಅನುಸಂದಾಗಳಾಗಿವೆ.

ಇಲ್ಲಿರುವ 36 ಕವಿತೆಗಳು ಜೋಗಿ ಅವರಿಂದ ಎರಡು ದಶಕಗಳಲ್ಲಿ ಬರೆಸಿಕೊಂಡ ಕವಿತೆಗಳಾಗಿವೆ. ಹಾಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅವರ ಅನೇಕ ಹೆಜ್ಜೆ ಗುರುತುಗಳನ್ನು ದಾಖಲಿಸುತ್ತವೆ. "ಕವಿತೆಗಳು ಎಂದಿಗೂ ಹಳತಾಗುವುದಿಲ್ಲ ಅವು ಅಭಿಜಾತ" ಎನ್ನುವ ಜೋಗಿ ಅವರ ಮಾತನ್ನು ಉಲ್ಲೇಖಿಸುವುದಾದರೆ ಇಲ್ಲಿರುವ ಕವಿತೆಗಳು ಪ್ರತಿ ಓದಿಗೂ ಹೊಸ ಸ್ವರೂಪಗಳಲ್ಲಿ ಓದುಗರನ್ನು ಆವರಿಸಿಕೊಳ್ಳುತ್ತವೆ.

ಈ ಸಂಕಲನದಲ್ಲಿನ ಕವಿತೆಗಳು ಸೊಗಸಾದ ಅಷ್ಟೇ ಚಿರಪರಿಚಿತವಾದ ಮೆಟಾಫರ್ ಗಳಿಂದ ಕೂಡಿದ್ದು ಕವಿತೆಗಳ ಮೆರಗು ಹಾಗೂ ಸೊಗಸು ಹೃದ್ಯವಾಗುತ್ತದೆ. ಗದ್ಯ ಸಾಹಿತ್ಯದಲ್ಲಿ ಪ್ರಭುತ್ವ ಮಟ್ಟದ ಹಿಡಿತ ಸಾಧಿಸಿರುವ ಜೋಗಿ ಅವರು ಪದ್ಯ ರಚನೆಯಲ್ಲೂ ತಮ್ಮ ಭಾಷಾ ಕೈಚಳಕ ತೋರಿದ್ದಾರೆ. ಸಾಹಿತ್ಯಸಕ್ತರನ್ನು ತಮ್ಮ 'ಕಾದಂಬರಿ' ಮತ್ತು 'ಅಂಕಣ ಬರಹ'ಗಳ ಮೂಲಕ ಮೋಡಿ ಮಾಡಿರುವ ಇವರು ಇದೀಗ 'ಸಾಲು ಸಾಲು ಸಾಲು' ಕವಿತೆಗಳ ನಶೆಯಲ್ಲೂ ಓದುಗರನ್ನು ಮುಳುಗಿಸಿದ್ದಾರೆ.

ಜೋಗಿ ಅವರ ಕಾವ್ಯ ಕಟ್ಟುವಿಕೆಯ ಪರಿಕರಗಳು ನಿತ್ಯ ಬದುಕಿನಿಂದ ಎದ್ದು ಬಂದಿದ್ದು ಓದುಗರ ಬೆನ್ನು ಸವರುತ್ತವೆ. ಜನಸಾಮಾನ್ಯರ ಬದುಕಿನ ನಿಜ ಅನುಭವದ ನೆಲೆಯಲ್ಲಿ ಕಲಾತ್ಮಕವಾಗಿ ನಿರ್ಮಿತಿಗೊಂಡ ಕವಿತೆಗಳು ಸಮಾಜದ ಮೇಲೆ ಗಾಢ ಪ್ರಭಾವ ಬೀರುತ್ತವೆ. ಅವು ಸಕಾರಾತ್ಮಕ ಬದಲಾವಣೆಗಳಿಗೆ ಮುಖ ಮಾಡಿಸುತ್ತವೆ. ಕೆಲವೊಂದು ಕವಿತೆಗಳಲ್ಲಿ ಬಳಸಿರುವ ಮೆಟಾಫರ್ ಗಳು ಕವಿತೆಯ ತೀವ್ರತೆಯನ್ನು ಹೆಚ್ಚಿಸಿವೆ. ಜೋಗಿ ಅವರ ಕವಿತೆಗಳಲ್ಲಿ ಶಬ್ದಗಳ ವೈಭವೀಕರಣದ ಹೊದಿಕೆ ಇಲ್ಲ. ಇವರ ಕಾವ್ಯ ಕಸುಬುದಾರಿಕೆ ಕವಿಯ ಮನೋಗತವನ್ನು ಸುಂದರವಾಗಿ ಅರ್ಥೈಸುತ್ತದೆ. ಚೇತೋಹಾರಿಯಾದ ಸಾಲುಗಳು ಓದುಗರ ಎದೆಯೊಳಗೆ ರಿಂಗಣಿಸುತ್ತವೆ. ಅವಿವೇಕದ ಆಡಂಬರಗಳನ್ನು, ಅನಗತ್ಯ ವಿಚಾರಗಳನ್ನು ಕವಿ ವೈಯಕ್ತಿಕವಾಗಿ ಪ್ರಶ್ನಿಸುವ ಎದೆಗಾರಿಕೆ ತೋರಿದ್ದಾರೆ.

ಯುವ ಜನಾಂಗಕ್ಕೆ ಭರವಸೆಯನ್ನು ಬಿತ್ತುವುದು ಇಂದಿನ ಸಾಹಿತ್ಯದ ಅತಿ ತುರ್ತಾಗಿದೆ. ಅಂತಹ ದಾರಿಯಲ್ಲಿಯೂ ಇವರ ಕವಿತೆಗಳು ಸಾಗಿವೆ. ದಾಂಪತ್ಯ ಗೀತೆ ಮತ್ತು ಪ್ರೇಮಿಗಳ ಆಲಾಪನೆಯೂ ಇವರ ಕವಿತೆಗಳಲ್ಲಿ ಕಾಣುತ್ತದೆ.

ಓದುಗರು ಈ ಕವಿತೆಗಳನ್ನು ಮೆಲುಕು ಹಾಕುತ್ತಾ ತಮ್ಮ ಲೋಕಜ್ಞಾನವನ್ನು ವಿಸ್ತರಿಸಿಕೊಳ್ಳುವ ಅವಕಾಶವಿದೆ. ಕೆಲವೊಂದು ಕವಿತೆಗಳು ಗ್ರಾಮೀಣ ಪರಿಸರದ ಪ್ರಭಾವಳಿಯನ್ನು ಹೊಂದಿವೆ. ಉಳಿದಂತೆ ಬಹುತೇಕ ಕವಿತೆಗಳು ನಗರ ಜೀವನ ಶೈಲಿಯನ್ನ ಅನಾವರಣಗೊಳಿಸಿವೆ. ಕವಿತೆಗಳಲ್ಲಿನ ಮಹಿಳಾ ಲೋಕ, ಪ್ರೇಮ ಲೋಕಗಳು ಭಾವುಕತೆಯಲ್ಲಿ ಮುಳುಗಿಸುತ್ತವೆ. ಒಂದು ಕವಿತೆಯು ಎರಡು ಮೂರು ಭಾವಗಳಿಗೆ ಜಿಗಿದರು ಯಾವುದೇ ಅರ್ಥ ವ್ಯತ್ಯಾಸವಾಗದೆ ಮೂಡಿಬಂದಿವೆ. ಅಂದರೆ ಖುಷಿ ಮತ್ತು ದುಃಖ ಎರಡು ಒಂದೇ ಪದ್ಯದಲ್ಲಿ ಮಿಳಿತವಾಗಿರುವುದು ಕೂಡ ಜೋಗಿ ಅವರ ಒಂದು ಗದ್ಯಸಾಹಿತ್ಯದ ಪ್ರಭಾವ ಎನ್ನಬಹುದು.

ಈ ಸಂಕಲನದಲ್ಲಿ ನನ್ನನ್ನು ಸಾಕಷ್ಟು ಕಾಡಿದ ಕವಿತೆಗಳೆಂದರೆ 'ಫೇರ್ ವೆಲ್' 'ಅಮ್ಮ' 'ಒಂದು ಕೇಡುಗಾಲದ ಪದ್ಯ' 'ಸಾವು' 'ಅಪ್ಪ' 'ಸೇತುವೆ ದುರಸ್ತಿಯಲ್ಲಿದೆ' 'ಕನ್ನಡಕ ಮಾರಾಟಕ್ಕಿದೆ' 'ಬಸ್ಸು' 'ಕೊಬ್ಬು' 'ಕವಿತೆ' 'ಸೂಟು' 'ಇಂದು ಪತ್ರಿಕೆಗೆ ರಜೆ' 'ಚೊಕ್ಕಾಡಿಗೆ ನಮಸ್ಕಾರ' 'ಹಯುವದನಂ ಧ್ಯಾಯೇತ್'ಮೈಸೂರು ಮಳ್ಳಿಗೆ' 'ಲಂಕೇಶ್ ಅವರ ನೇಲು ನೆನೆದು' 'ಬಿ ಆರ್ ಲಕ್ಷ್ಮಣ್ ರಾವ್' ಹಾಗೂ

'ಟಿ.ಎನ್. ಸೀತಾರಾಮ್' ಕವಿತೆಗಳು. ಈ ಕವಿತೆಗಳಲ್ಲಿ ನೈಜ ಪ್ರೀತಿಯ ಅನಾವರಣವಿದೆ, ವಿದಾಯದ ನೋವಿದೆ, ಹರೆಯದ ಉತ್ಕಟ ಮತ್ತು ಆವೇಶದ ಭಾವ ಯಾನವಿದೆ. ಹಿರಿತನಕೆ ಹಿತ ವಚನವಿದೆ, ಬದುಕಿನ ಈಜು ಪಟುಗಳಿಗೆ ಅಪಾಯ ತರುವ ಸುಳಿಗಳ ಬಗ್ಗೆ ಎಚ್ಚರಿಕೆ ಇದೆ. ಮುಸ್ಸಂಜೆಗಳನ್ನು ಮನ್ನಾ ಮಾಡಿದ್ದಾರೆ, ವೃದ್ಧಾಪ್ಯದಲ್ಲೂ ಕಾಡುವ ಗೆಳತಿಯ ನೆನಪುಗಳಿವೆ. ಪ್ರಿಯತಮೆಯನ್ನು ಅರಬ್ಬಿ ಸಮುದ್ರಕ್ಕೂ ಹೋಲಿಸಿ ವ್ಯಾಮೋಹಿ ಅಲೆಯನ್ನ ಮಾರಿಗೆ ಹೋಲಿಸುವ ಕವಿತೆಯಿದೆ. ಕಡಲನ್ನು ಸೇರಿದ ತಕ್ಷಣ ನದಿ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿ ಕವಿಗೆ ಸೋಜಿಗವಾಗಿ ಕಂಡಿದೆ.

ಕವಿ ತನ್ನ ಮನದೊಳಗಿನ ಖುಷಿ ಅಥವಾ ಬೇಗುದಿಯನ್ನ ಪದ ಭಾವಗಳ ಮೂಲಕ ಹೊರ ಹಾಕಿ ಅವುಗಳಿಂದ ಬಿಡುಗಡೆ ಪಡೆಯುತ್ತಾನೆ. ಇಲ್ಲಿ ಜೋಗಿಯು ಪತ್ರಕರ್ತರು ಆಗಿದ್ದು ಸಮಾಜದಲ್ಲಿ ಅವರಿಗೆ ಕಂಡಿದ್ದನ್ನು, ಸ್ವಾನುಭವವನ್ನು, ಸೂಕ್ಷ್ಮ ಗ್ರಾಹಿತನದಿಂದ ಕವಿತೆಯಾಗಿಸಿ ನಿರುಮ್ಮಳರಾಗಿದ್ದಾರೆ. ಕವಿಯ ಜವಾಬ್ದಾರಿ ಜನರನ್ನು, ಸಮಾಜವನ್ನು ಸದಾ ಎಚ್ಚರಿಸುತ್ತಾ ಸರಿ ದಾರಿಗಳಲ್ಲಿ ನಡೆಸುವುದಾಗಿದೆ. ಎಡವಿದಾಗ ಮೇಲೆತ್ತುವುದಾಗಿದೆ. ಅಂತಹ ಅನೇಕ ಕುರುಹುಗಳು ಇವರ ಕವಿತೆಗಳಲ್ಲಿ ಕಾಣುತ್ತವೆ. ಇಲ್ಲಿನ ಕೆಲವು ಕವಿತೆಗಳಲ್ಲಿ ಕವಿ ಆಲೋಚನೆಗಳು ಹೇಗಿರಬೇಕು ಎಂದು ಅರ್ಥೈಸುತ್ತಾ ಜಗದ ಅರಿವಿನ ಕಣಜವನ್ನು ವಿಸ್ತಾರಗೊಳಿಸುತ್ತವೆ. ಜನರಿಗೆ‌ ವಿಚಾರಗಳನ್ನು ಈಗಲೇ ತಲುಪಿಸಬೇಕೆಂಬ ಧಾವಂತದ ಹೆಜ್ಜೆಗಳನ್ನಿಡದೆ ಸಾವಧಾನದ ಕವಿತೆಗಳನ್ನು ಬರೆದಿದ್ದಾರೆ. ಈ ಎಚ್ಚರಿಕೆ ಬರಹಗಾರರಿಗೆ ಇರಬೇಕಾದುದು ಬಹು ಮುಖ್ಯ. ಚಿಂತನಾಶೀಲ ಜಗತ್ತಿನಲ್ಲಿ ಮನುಜರ ನಡೆ ಹೇಗೆ ತಿರುವುಗಳನ್ನು ಪಡೆಯುತ್ತದೆ ಎಂಬ ವಿಚಾರಗಳನ್ನು ಕವಿತೆಗಳ ಮೂಲಕ ಪರಿಚಯಿಸುತ್ತಾರೆ.

ಮುಖಪುಟದಲ್ಲಿ ಸಾಕಷ್ಟು ಜನರನ್ನು ಕಾಡಿದ್ದ ಜೋಗಿ ಅವರ ಕವಿತೆ #ಸೂಟು ಈ ಸಂಕಲನದ ಬಹುಮುಖ್ಯ ಕವಿತೆಯಾಗಿದೆ. ವ್ಯಕ್ತಿಗಿಂತ ವಸ್ತು ಪ್ರಮುಖವಾಗಿ ವ್ಯಕ್ತಿತ್ವ ಗೌಣವಾಗುವ ರೀತಿ ಇಲ್ಲಿ ತುಂಬಾ ಮನೋಜ್ಞವಾಗಿ ಮೈದಾಳಿದೆ. ಕವಿ ಕವಿತೆ ಬರೆದು ಬಂದ ಕಾಸಿನಲ್ಲಿ ಸೂಟು ಕೊಂಡು ಧರಿಸಿದ ಮೇಲೆ ಕೊನೆಗೆ ಕವಿತೆ ಮತ್ತು ಕವಿ ಅಸ್ತಿತ್ವವನ್ನು ಕಳೆದುಕೊಂಡು, ಕವಿ ತನ್ನನ್ನೇ ತಾನು ಹುಡುಕುವ ಪರಿ ಆಧುನಿಕತೆಯ ಗುಂಡಿನಲ್ಲಿ ಮುಳುಗಿರುವ ಜನರ ಆಡಂಭರವನ್ನು ಸೂಚಿಸುವ ಸಕಾಲಿಕ ಬರಹವಾಗಿದೆ.

ನಿಮ್ಮ ಸೂಟು ಚೆನ್ನಾಗಿದೆ
ನಿಮಗೆ ಸೂಟ್ ಆಗುತ್ತೆ
ಈ ಸೂಟ್ ನಿಮಗೆ ಹೇಳಿ ಮಾಡಿಸಿದಂತಿದೆ
ಅಂತೆಲ್ಲ ಹೇಳುತ್ತಾ ಕ್ರಮೇಣ
ಮಂದಿ ನನ್ನ ಚಹರೆ ದನಿ ಮುಖ ಹಾವಭಾವ ಎಲ್ಲವನ್ನು
ಮರೆತವರಂತೆ ವರ್ತಿಸ ತೊಡಗಿದರು

ಎನ್ನುತ್ತಾ ಇತರ ಕವಿಗಳಿಗೂ ಸಲಹೆಯೊಂದನ್ನು ನೀಡುತ್ತಾರೆ. ನೀವು ಬೇಕಿದ್ದರೆ ಪದ್ಯ ಬರೆಯಿರಿ ಅದರಿಂದ ಸೂಟು ಕೊಳ್ಳಿ, ಆದರೆ ನನಗೆ ದೊರೆತಂತಹ ಮಳೆಗಾಲದಲ್ಲಿ ನಡುಗುವ ಹುಡುಗಿ ಸಿಕ್ಕರೇ ನಿಮಗೆ ಆ ಸೂಟಿನಿಂದ ಮುಕ್ತಿ ದೊರೆಯವುದು. ಅದು ಸಾಧ್ಯವೇ ನೀವೇ ತೀರ್ಮಾನಿಸಿ ಎಂಬ ಸಂದೇಶ ರವಾನಿಸುತ್ತಾ ಕವಿ ಹಾಗೂ ಕವಿತೆಗೆ ಯಾವುದೂ ಪ್ರಮುಖ ಆಗಬೇಕು ಎಂಬುದನ್ನ ತಿಳಿಸುತ್ತಾರೆ.

ಕಂಡುಹಿಡಿಯುವುದು ಏನು ಕಷ್ಟವಲ್ಲ
ಅಸಲಿಯಾಗಿದ್ದರೆ
ನಡುವೆ ಒಂದು ಬೆಳ್ಳಿಗೆರೆ ಇರುತ್ತದೆ
ಬೆಳಕಿಗೆ ಹಿಡಿದು ನೋಡಿದರೆ
ಅದು ಹೊಳೆಯುತ್ತದೆ
ಅದರ ಮೇಲೆ ಬರೆದಿರುವ ಅಕ್ಷರಗಳು
ಒಳಗೊಳಗೆ ಅಡಗಿರುವುದು ಕಾಣಿಸುತ್ತದೆ
ಅನುಭವದ ನಿಕಷಕ್ಕೆ ಉಜ್ಜಿ ನೋಡಿದಾಗ
ನಿಜ ವಾಸನೆ ಹೊಡೆಯುತ್ತದೆ

ಈ ಕವಿತೆಯ ಸಾಲುಗಳನ್ನು ಓದಿದಾಗ ಇದು ಖೋಟಾ ನೋಟು ಮತ್ತು ಅಸಲಿ ನೋಟುಗಳ ಕುರಿತು ಕವಿ ಬರೆದಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಅದರ ಗೂಡಾರ್ಥ ಬೇರೆಯೇ ಇದೆ. ಇಲ್ಲಿ ಕವಿ ಹೇಳಲು ಹೊರಟಿರುವುದು ಕೃತಿ ಚೌರ್ಯದ ಬಗ್ಗೆ. ಮಾರ್ಮಿಕವಾದ ಶೈಲಿಯಲ್ಲಿ ವ್ಯಂಗ್ಯವಾಗಿ ಜಾಟಿ ಬೀಸುತ್ತಾ ನಿಮ್ಮ ಆತ್ಮದ ಬೆಳಕಲ್ಲಿಟ್ಟು ನೋಡಿದರೆ ಸತ್ಯ ಗೊತ್ತಾಗಿ ಬಿಡುತ್ತದೆ. ಹಾಗಾಗಿ ನೀವು ಇತರರ ಕವಿತೆಗಳನ್ನು ನಕಲು ಮಾಡುವ ಬದಲು ನಿಮ್ಮ ಸ್ವಂತಿಕೆಯ ನಿಮ್ಮದೇ ಹೊಕ್ಕಳ ಬಳ್ಳಿಯ ಕವಿತೆ ರಚಿಸಿ ಆದರಿಂದ ಆತ್ಮ ಸಂತೋಷ ಪಡೆಯಿರಿ ಎಂದು ಪ್ರೇರೇಪಿಸುತ್ತಾರೆ.

ದೇವರು ದೊಡ್ಡವನು

ಇಂದು ಪತ್ರಿಕೆಗೆ ರಜೆ ಎನ್ನುವಲ್ಲಿ ಕವಿ ಸುದ್ದಿ ಬಿತ್ತರಿಸುವಲ್ಲಿನ ಪತ್ರಿಕೆಗಳ ಅವಾಂತರಗಳನ್ನು, ಪಕ್ಷಪಾತವನ್ನು, ಪೇಪರ್ ಸರ್ಕ್ಯುಲೇಷನ್ ಮನೋಭಾವವನ್ನು, ದಾರಿ ತಪ್ಪುತ್ತಿರುವ ವೃತ್ತಿ ಬದ್ಧತೆಯನ್ನು ತನ್ನದೇ ಶೈಲಿಯಲ್ಲಿ ಜೋಗಿ ಅವರು ಕಟುವಾದ ಶಬ್ದಗಳಲ್ಲಿ ವಿಡಂಬಿಸಿದ್ದಾರೆ. ಅಧಿಕಾರದಲ್ಲಿರುವ ರಾಜಕಾರಣಿಗಳು, ಬಂಡವಾಳ ಶಾಹಿಗಳು, ರಾಜಕಾರಣಿಗಳ ಮುಖಸ್ತುತಿ ಮಾಡುತ್ತಾ ಸಾಮಾನ್ಯ ಜನರನ್ನು ಕಡೆಗಣಿಸುವ, ಸಾಮಾಜಿಕ ಹಿತಾಸಕ್ತಿ ತೋರದ ಪತ್ರಿಕೆಗಳ ಅಪ್ರಮಾಣಿಕತೆಯನ್ನು ತೆರೆದಿಟ್ಟಿದ್ದಾರೆ. ಬಡವರು, ಅಸಹಾಯಕರು, ಶೋಷಿತರು ನೋವು ಸಂಕಟಗಳಲ್ಲಿ ಇದ್ದಾಗ ಕ್ಯಾಮರಾ ಕಣ್ಣಿಗೆ ಅವರ ಆರ್ತನಾದ ಕಾಣುವುದಿಲ್ಲ. ಅದಕ್ಕೆ ಪತ್ರಿಕೆಗಳು ಕಿವಿಯಾಗುವುದೇ ಇಲ್ಲ. ಕೇವಲ ಉಳ್ಳವರ ಪರವಾಗಿ ಕೆಲಸ ಮಾಡುತ್ತವೆಂಬ ಕವಿಯ ಸಾತ್ವಿಕ ಆಕ್ರೋಶವನ್ನು ಇಲ್ಲಿ ನಾವು ಗುರುತಿಸಬಹುದು.

ಕನ್ನಡ ಸಾಹಿತ್ಯದಲ್ಲಿ ಅಮ್ಮನ ಬಗ್ಗೆ ಬಂದಷ್ಟು ಕಾವ್ಯ ಅಪ್ಪನ ಬಗ್ಗೆ ಬಂದಿಲ್ಲವೆಲ್ಲಬಹುದು. ಹಾಗೆಂದ ಮಾತ್ರಕ್ಕೆ ಅಪ್ಪನ ತೂಕ ಕಡಿಮೆ ಎಂದರ್ಥವಲ್ಲ. ಎಲೆಮರೆ ಕಾಯಿಯಂತೆ ದುಡಿಯುವ, ಪ್ರೀತಿಸುವ ಜೀವವದು. ಅವನ ಕುರಿತು ಕವಿತೆ ಕಟ್ಟುತ್ತಾ ಹೋಗಿದ್ದಾರೆ. ಇಲ್ಲಿ ಕವಿ ಅಪ್ಪನನ್ನ ಅಂತರ್ಮುಖಿಯಾಗಿ ಚಿತ್ರಿಸಿದ್ದಾರೆ.

ಅಂತರ್ಮುಖಿ ಅಪ್ಪ
ಹಠಾತ್ತನೇ ಸತ್ತಾಗ ಎಷ್ಟೊಂದು ಗುಟ್ಟುಗಳು
ಉಳಿದು ಹೋದವು ಅಂತರ್ಮುಖಿ ಅಪ್ಪ ಸತ್ತಾಗ
ಮಗ ಅರ್ಧ ಸಾಯುತ್ತಾನೆ

ಎನ್ನುವ ಸಾಲುಗಳು ಅಪ್ಪ ಎಲ್ಲಾ ಗುಟ್ಟುಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ನೋವಿನ, ದುಃಖದ, ಕಷ್ಟದ ಅಗ್ನಿ ಪರ್ವತವೇ ಎದೆಯೊಳಗಿದ್ದರೂ ಮನೆಯವರ ಮುಂದೆ, ಜಗದ ಮುಂದೆ ಮಾತ್ರ ಬೆವರದೇ ತಣ್ಣನೆಯ ನಗುವಿನ ಮುಖ ತೋರುತ್ತ ಮನದೊಳಗೆ ಅನುಭವಿಸುವ ಯಾತನೆಯ ಅನಾವರಣ ಈ ಕವಿತೆಯಲ್ಲಿ ವ್ಯಕ್ತವಾಗಿದೆ. ಅಪ್ಪ ಯಾವಾಗಲೂ ಮಗನಿಗೆ ಹೀರೋ ಆಗಿರುತ್ತಾನೆ, ಅಪ್ಪ ಸತ್ತರೆ ಮಗ ಅರ್ಧ ಸಾಯುತ್ತಾನೆ ಎನ್ನುವಲ್ಲಿ ಅಪ್ಪನ ಜವಾಬ್ದಾರಿ, ಮಗ ಅಪ್ಪನಿಂದ ಪಡೆಯುತ್ತಿದ್ದ ಪ್ರೀತಿ, ಕಾಳಜಿ, ಮಾರ್ಗದರ್ಶನಗಳು ಇಲ್ಲವಾದವು ಎಂಬ ಭಾವದಲ್ಲಿ ಮೂಡಿದೆ. ಅವೆಲ್ಲವನ್ನು ಸಹಿಸಿಕೊಳ್ಳುವ ಅದಮ್ಯ ಶಕ್ತಿ ಅಪ್ಪನಿಗೆ ಇರುತ್ತದೆ.

#ಸಾವು ಕವಿತೆ ನಾವೆಲ್ಲ ಅಂದುಕೊಳ್ಳುವುದಕ್ಕಿಂತ ಮತ್ತೊಂದು ಆಯಾಮದಲ್ಲಿ ಎದುರಾಗುತ್ತದೆ. ಸಾವು ಸಹಜ ಪ್ರಕ್ರಿಯೆ. ಅದು ದೈಹಿಕ ಮಾತ್ರವಲ್ಲ. ಅದು ಭಾವನಾತ್ಮಕವಾದದ್ದು, ಮಾನಸಿಕವಾದದ್ದು, ಬೌದ್ಧಿಕವಾದದ್ದು, ಸಾಂಸ್ಕೃತಿಕವಾದದ್ದು ಎಂದು ಕವಿ ಬಿಂಬಿಸಿದ್ದಾರೆ. ಈ ಎಲ್ಲಾ ವಲಯಗಳಿಗೆ ಜನ, ಸಮಾಜ ನೀಡುವ ಪೆಟ್ಟು ಕೂಡ ಸಾವು ಎನ್ನುತ್ತಾರೆ. ವ್ಯಕ್ತಿ ಜನರಿಂದ, ಸಮಾಜದಿಂದ ತಿರಸ್ಕೃತನಾದಾಗ, ಅವಮಾನಿತನಾದಾಗ, ಪ್ರೇಮದಲ್ಲಿ ಸೋತಾಗ, ಬರಹದಲ್ಲಿ ಮಾನ್ಯತೆ ಗಳಿಸದಿದ್ದಾಗ, ಶೋಷಿತರಾದಾಗ ನಾವು ಸಾಯುತ್ತೇವೆ. ಬದುಕಿನಲ್ಲಿ ಅನೇಕ ಬಾರಿ ನಾವು ಸತ್ತು ಸತ್ತು ಬದುಕುತ್ತೇವೆಂಬ ಸತ್ಯವನ್ನು ಹೊರ ಹಾಕುತ್ತಲೇ ಬದುಕಲು ನೆಮ್ಮದಿಯಾಗಿ ಬದುಕಲು ಬಿಡಿ ಎಂದು ಆಗ್ರಹಿಸುತ್ತಾರೆ. ಅವರ ಮಾತನ್ನು ಈ ಕೆಳಗಿನ ಸಾಲುಗಳು ದೃಢೀಕರಿಸುತ್ತವೆ.
ಜೀವ ನೀನು ಅಂತ ತಬ್ಬಿ

ಪ್ರೇಮಿಸಿದ ಅವಳು ಕೈ
ಕೊಟ್ಟಾಗ ಸತ್ತಿದ್ದೆ ನಾನು ಬರೆದ ಕವಿತೆಯನ್ನು ನಾನೇ
ಹರಿಯುತ್ತಾ ಸತ್ತಿದೆ
ಬದುಕೋದು ಕಲಿರಿ ಅಂತ
ಸಂಪಾದಕ ಗದರಿದಾಗ ಸತ್ತಿದ್ದೆ
ನಿಮಗೆ ತಾತ್ವಿಕ ಬದ್ಧತೆ ಇಲ್ಲ ಅಂದಾಗೊಮ್ಮೆ ಸತ್ತಿದೆ

ಕವಿ ಒಬ್ಬ ಡ್ರೈವರ್ ಕವಿತೆ ಬಸ್ಸು
ಬಸ್ಸು ಒಳಗೆ ಕೂತಿದೆ ಸಹೃದಯನ ಮನಸ್ಸು

ಕವಿ, ಕವಿತೆ, ಸಹೃದಯರನ್ನು ಡ್ರೈವರ್, ಬಸ್ಸು, ಮನಸ್ಸು ರೂಪಕಗಳ ಮೂಲಕ ಕವಿತೆಯಾಗಿಸಿದ್ದಾರೆ. ಡ್ರೈವರ್ ಬಸ್ಸನ್ನು ಹೇಗೆ ಮುನ್ನಡೆಸುತ್ತಾನೋ ಹಾಗೆ ಕವಿಯಾದವನು ಕವಿತೆಯನ್ನು ಮುನ್ನಡೆಸಬೇಕು ಎಂಬುದನ್ನ ತುಂಬಾ ಅರ್ಥಪೂರ್ಣವಾಗಿ ವ್ಯಕ್ತಪಡಿಸಿದ್ದಾರೆ. ಬಸ್ ಚಲಾಯಿಸುವ ಜಾಗ ಹೇಗೆ ಏರಿಳಿತಗಳಿಂದ ಕೂಡಿರುತ್ತದೆಯೋ ಹಾಗೇ ಕವಿಗೆ ಎಡಪಂಥ ಬಲಪಂಥಗಳು ಇರುತ್ತವೆ. ಡ್ರೈವರ್ ಸೂಕ್ಷ್ಮವಾಗಿ ಜಾಗೃತೆಯಿಂದ ಇದೆಲ್ಲವನ್ನು ಮ್ಯಾನೇಜ್ ಮಾಡುತ್ತಾನೋ ಹಾಗೆ ಕವಿಯು ಜೀವ ಪರವಾದ, ಸಮಾಜ ಮುಖಿಯಾದ, ಮನಸ್ಸನ್ನು ಪ್ರಫುಲ್ಲಗೊಳಿಸುವಂತಹ ಕಾವ್ಯ ಸೃಷ್ಟಿಸುವಲ್ಲಿ ಕಾರ್ಯ ತತ್ಪರನಾಗಬೇಕೆಂದು ಕವಿ ಕಿವಿಮಾತು ಹೇಳಿದ್ದಾರೆ.

ಮನುಷ್ಯನಿಗೆ ಕಿವಿ ಎಡಗಿವಿ ಬಲಗಿವೆ
ಸಾಹಿತ್ಯಕ್ಕೆ ಕವಿ ಎಡಕವಿ ಬಲಕವಿ
ಎಡಕವಿಯ ಪಾಲಿಗೆ ಬಲಕವಿಯು ಕುರುಡು
ಬಲಕವಿಯ ನಾಲಿಗೆ ಎಡಕ್ಕೆ ಹೊರಳದೆ ಬರಡು

ಸಾಹಿತ್ಯ ವಲಯಗಳಲ್ಲಿನ ಸೈದ್ಧಾಂತಿಕ ತತ್ವಗಳ ಸಂಘರ್ಷಗಳನ್ನು, ತೆರೆಮರೆಯಾಟಗಳನ್ನು ಈ ಕವಿತೆ ಬಯಲಿಗೆ ತರುತ್ತದೆ. ಇದು ಅತ್ಯಂತ ಸರಳವಾಗಿದ್ದರೂ ಹೇರಳವಾದ ಸಾರವನ್ನು, ಸಲಹೆಯನ್ನು ನೀಡುತ್ತದೆ. ಸಮಯ ಸಾಧಕತ್ವ ತೋರುವ ಕವಿಗಳು, ಅವಕಾಶವಾದಿಗಳಾಗಿ ತಮಗೆ ಲಾಭವಾಗುವ ಗುಂಪುಗಳಲ್ಲಿ ಗುರುತಿಸಿಕೊಂಡು ಮತ್ತೊಂದು ಪಂಥವನ್ನು ಹೀಯಾಳಿಸುವುದರಲ್ಲೇ ಕಾಲಹರಣ ಮಾಡುತ್ತಾ ಸಾಹಿತ್ಯದ ನಿಜ ಗುರಿಯನ್ನು ಮರೆತು ಇವರ ನಿತ್ಯ ಕಚ್ಚಾಡುವುದಕ್ಕೆ ಕವಿತೆ ದುಃಖಿಸುತ್ತದೆ. ಎಡ ಮತ್ತು ಬಲ ಪಂಥಗಳನ್ನು ಮರೆತು ಸಮತ್ವದಲ್ಲಿ ಸಾಗಲು ಕವಿತೆ ಹಂಬಲಿಸುತ್ತದೆ.

ಹೊರಡುವ ಮುನ್ನ ಕವಿತೆಯು ನಮ್ಮೊಳಗಿನ ಭಾವಗಳು ಉಕ್ಕೇರಿ ಬಂದಾಗಲೇ ಕಾವ್ಯಕ್ಕೆ ಜೀವ ತುಂಬಿ ಬಿಡಬೇಕು ಎಂಬ ಅರ್ಥದಲ್ಲಿ ಮೂಡಿ ಬಂದಿದೆ. ಇಂತಹ ಅನೇಕ ಅನುಭವಗಳು ನಮಗೂ ಆಗಿರುತ್ತವೆ. ಮನದೊಳಗೊಂದು ಸಾಲು ಮೂಡಿದಾಗ ಅದನ್ನು ತಕ್ಷಣ ದಾಖಲಿಸದೆ ಹೋದರೆ ಅದು ಮತ್ತೆ ನಮ್ಮ ನೆನಪಿನಾಳದಿಂದ ದೂರ ಸರಿದು ಸ್ಮರಿಸಿಕೊಳ್ಳಲು ನಾವು ಪರದಾಡಿದ ಅನುಭವಗಳನ್ನು ನೆನಪು ಮಾಡಿಸುತ್ತದೆ.

ಭಾವಗಳು ಬಸಿರಾದಾಗಲೇ ಕವಿತೆಯ ಪ್ರಸವ ಆಗಬೇಕು. ಅದನ್ನು ಮುಂದೂಡುವುದಾಗಲಿ ಅಥವಾ ಪೂರ್ವದಲ್ಲೇ ಬಲವಂತದ ಹೆರಿಗೆ ಮಾಡಿಸುವುದಾಗಲಿ ಮಾಡಿದರೆ ನೈಜತೆ ದೊರಕದು.

ಹೊರಟ ಮೇಲೆ
ಬದಲಾದಿತು ಮನಸ್ಸು
ಮರೆತು ಹೋದಿತು
ಮನದ ಬಾಗಿಲ ತನಕ
ಬಂದ ಸಾಲು
ನಿರುಮ್ಮಳವಾದ
ಮೇಲೆ ಹುಟ್ಟಿತು ಹೇಗೆ ಪದ್ಯ
ಎನ್ನುತ್ತಾರೆ.

ಅವ್ವನ ಕಸುವನ್ನು ಬಿಂಬಿಸುವ ಪಿ. ಲಂಕೇಶರ ಅವ್ವ ಪದ್ಯ ಎಲ್ಲರೆದೆಯೊಳಗೆ ಸದಾ ಅವಿಸ್ಮರಣೆಯವಾಗಿ ಅಚ್ಚಾಗಿದೆ. ಅವ್ವನ ಬಗ್ಗೆ ಕವಿತೆ ಬರೆಯದವರೇ ಇಲ್ಲ. ಜೋಗಿಯು ಅದರಿಂದ ಹೊರತಲ್ಲ. ಇವರು ಅಮ್ಮನನ್ನ ವಿಭಿನ್ನವಾಗಿ ಚಿತ್ರಿಸಿದ್ದಾರೆ.

ಅಮ್ಮನ ಸಿಟ್ಟನ್ನು ನೋಡಿದಷ್ಟು
ಅಮ್ಮನ ಪ್ರೀತಿಯನ್ನು ನೋಡಲಿಲ್ಲ ನಾನು

ಎಂದು ಆರಂಭವಾಗುವ ಕವಿತೆ
ಅಮ್ಮನ ಪ್ರೀತಿ ನೆನಪಿರುವಷ್ಟು ಅಮ್ಮನ ಸಿಟ್ಟು ನೆನಪಿಲ್ಲ ಈಗ

ಎಂಬಲ್ಲಿಗೆ ಬಂದು ನಿಲ್ಲುವಷ್ಟರಲ್ಲಿ ಅಮ್ಮನ ಪ್ರೀತಿಗೆ ಜಗದಲಿ ಮತ್ಯಾವುದು ಸಾಟಿ ಆಗದು ಎಂಬ ಭಾವ ಹೊತ್ತು ತಂದಿದೆ. ಅಮ್ಮನ ಕೋಪದ ಹಿಂದೆ ಮಕ್ಕಳ ಭವಿಷ್ಯ, ಕನಸುಗಳಿರುತ್ತವೆ ಎಂಬರಿವು ಕವಿಗಿದೆ. ಅಮ್ಮನ ಬದುಕಿನ ತಾಕಲಾಟಗಳು, ತಾಪತ್ರಯಗಳು, ಸವಾಲುಗಳು ಎಲ್ಲರ ಮನದೊಳಗೆ ಅವರವರ ಅಮ್ಮನ ನೆನಪನ್ನ ಮಾಡಿಸುವುದಂತು ಸತ್ಯ. ಅಮ್ಮ ಗಾಣದೆತ್ತಿನಂತೆ ನಿತ್ಯ ದುಡಿದು ಸವೆದರು ಅವಳಿಗೆ ಮನೆ ಬಿಟ್ಟು ಹೋಗುವ ಮನಸ್ಸಾಗಲಿಲ್ಲ ಎನ್ನುವ ಕವಿ ಅಮ್ಮನಿಗೆ ಹೋಗಲಿಕ್ಕಾದರೂ ಜಾಗವೆಲ್ಲಿತ್ತು? ಎಂಬ ಪ್ರಶ್ನೆಯನ್ನೂ ಹಾಕಿ ನಮ್ಮ ಸಮಾಜ ಹೆಣ್ಣಿಗೆ ಸ್ವತಂತ್ರ ನೀಡದೆ ಹಿರಿಯರ ಮಾತಿಗೆ ವಿರೋಧದ ದನಿಯಾಗದೆ ಬಾಳಬೇಕು ಎಂಬ ಅಸಂಬದ್ಧ ಆಚರಣೆಗಳಿಗೆ ಬೇಸರ ತಾಳುತ್ತದೆ ಕವಿತೆ.

ಅಮ್ಮನ‌ ಮೇಲೆ ಬಂದು ಕವಿತೆಗಳನ್ನೆಲ್ಲ
ಓದಿದ ಮೇಲೆಯೂ ಅಮ್ಮ ಇಡಿಯಾಗಿ ದಕ್ಕದ ಮೂರ್ತಿ
ಪೂರ್ತಿ ನೆನಪಾಗದ ಚಿತ್ರ
ಅರ್ಧ ಬರೆದ ಆತ್ಮಕಥೆ

ಎಂಬ ಸಾಲುಗಳು ಅಮ್ಮನನ್ನು ಮಹಾಕಾವ್ಯಗಳಿಂದಲೂ ಬಂಧಿಸಲಾಗದು ಎಂದು ಸಾರಿ ಸಾರಿ ಹೇಳುತ್ತವೆ.

ಬೀಳ್ಕೊಡುವುದು ಸುಲಭವಲ್ಲ
ಮನಸ್ಸು ಮುರಿಯಬೇಕು
ಮತ್ತೆ ಬಂದೇ ಬರುತ್ತಿ
ಅಂತ ನಂಬಬೇಕು

ಬೀಳ್ಕೊಡುಗೆ ನೀಡುವ ಅತೀವ ಸಂಕಟವನ್ನು ಕವಿತೆಯು ಆರ್ದ್ರಾತಾ ಭಾವದಲ್ಲಿ ಕಟ್ಟಿಕೊಡುತ್ತದೆ. ಈ ಕವಿತೆ ಪ್ರೀತಿ ಪ್ರೇಮ ಸ್ನೇಹ ಸಂಬಂಧ ಭಾಂದವ್ಯಗಳ ಮಹತ್ತನ್ನು ಸಾರುತ್ತದೆ. ನಮ್ಮ ಹೃದಯಕ್ಕೆ ಹತ್ತಿರರಾದವರು ನಮ್ಮ ಜೊತೆ ಸದಾ ಇರುವವರು ನಮ್ಮ ಪ್ರೀತಿ ಪಾತ್ರರು ನಮ್ಮಿಂದ ದೂರ ಸರಿಯುವಾಗ ಆಗುವ ಮಾನಸಿಕ ತುಮುಲಗಳು, ತಲ್ಲಣಗಳನ್ನ ನಮಗೆ 'ಫೇರ್ ವೆಲ್' ಕವಿತೆ ನೆನಪಿಸುತ್ತದೆ.

ಕವಿತೆ ಹೇಗಿರಬೇಕು ?ಎಂಬ ಜಿಜ್ಞಾಸೆಗೆ ಉತ್ತರವಂತೂ ಸಿಕ್ಕಿಲ್ಲ. ಆದರೆ ಅದು ಸಂಕೀರ್ಣವಾಗಿ ಓದುಗರಿಗೆ ಅರ್ಥವಾಗದಂತೆ, ರಶಸ್ವಾದಕ್ಕೆ ಅಡ್ಡಿಯಾಗದಂತೆ ಇರಬೇಕು. ಸರಳವಾಗಿ ಅರ್ಥವಾಗುವಂತೆ ಇರಬೇಕು ಎನ್ನುವ ಕವಿ, ಕವಿತೆ ಕೊಬ್ಬಿನಂತೆ ಇರಬಾರದು ಎನ್ನುತ್ತಾರೆ. ಬೊಜ್ಜು ದೇಹಕ್ಕೆ ಹೇಗೆ ಅಪಾಯಕಾರಿಯೋ ಹಾಗೆ ಅರ್ಥವಿಲ್ಲದ, ಅರ್ಥವಾಗದ ಕವಿತೆ ಸಾಹಿತ್ಯಕ್ಕೆ ಅನಗತ್ಯ ಎನ್ನುತ್ತಾ ಕೊಬ್ಬು ರೂಪಕದಲ್ಲಿ ಅದನ್ನ ಕಟ್ಟಿದ್ದಾರೆ. ಕವಿತೆ ಸಾಗಬೇಕಾದ ದಾರಿಯನ್ನು ಎಚ್ಚರಿಸಿದ ವಿಮರ್ಶ ಕರನ್ನು ಸ್ಮರಿಸುತ್ತಾ

ನನ್ನ ಪರಂಪರೆಯ ಬೊಜ್ಜಿಲ್ಲದ
ರೂಪಕದ ಭಾರವಿಲ್ಲದ
ಪ್ರೇಮದ ಎದುಸಿರು ಇಲ್ಲದ
ಕಾಮದ ಕೊಂಡಾಟ ಇಲ್ಲದ
ಬೆಣ್ಣೆ ಸಕ್ಕರೆ ಉಪ್ಪು ಗಿಣ್ಣು ಗಿಲೀಟು ಗತ್ತು ಗಾಂಭೀರ್ಯ
ಕೊಬ್ಬು ಮತ್ತು ಅತಿಕಾಯ ಇಲ್ಲದ
ತೆಳುವಾದ ಹಗುರ ಕವಿತೆ

ರಚಿಸುವುದಾಗಿ ಹೇಳುತ್ತಾರೆ. ಅಂದರೆ ಕವಿ ಇಲ್ಲಿ ಕಾವ್ಯವನ್ನ ನಿರಾಡಂಬರವಾಗಿ, ವಾಸ್ತವಿಕ ಪ್ರಜ್ಞೆಯಡಿಯಲ್ಲಿ, ಜನಸಾಮಾನ್ಯರ ಭಾಷೆಯಲ್ಲಿ ರಚಿಸಬೇಕೆಂದು ಬಯಸುತ್ತಾರೆ. 'ಒಂದು ಕೇಡುಗಾಲದ ಪದ್ಯ' ಶೀರ್ಷಿಕೆಯು ಮನುಷ್ಯ ತನಗೆ ತಾನೆ ಕೆಟ್ಟ ಕಾಲವನ್ನು ಸೃಷ್ಟಿಸಿಕೊಳ್ಳುತ್ತಿದ್ದಾನೆ ಎಂಬ ಸುಳಿವು ನೀಡುತ್ತದೆ.

ಕೊನೆಗೆ ಗೆಲ್ಲುವುದು ಸಿದ್ಧಾಂತವಲ್ಲ ವೈಚಾರಿಕತೆಯಲ್ಲ
ಮಾನವೀಯತೆಯಲ್ಲ
ಸತ್ಯವಲ್ಲ ಧರ್ಮವಲ್ಲ
ಆಳುವವರ ಮರ್ಮಕ್ಕೆ ಇಲ್ಲಿ ಜಯ
ಎಡ ಬಲದ ನಡುವೆ ಕೊಡೆ ಕದಿವ ಕದೀಮರಿದ್ದಾರೆ ಎಚ್ಚರಿಕೆ

ಎಂದು ಎಚ್ಚರಿಸುತ್ತಲೇ ಕವಿ ಆಳುವವರು, ಅಧಿಕಾರಸ್ಥರು ನಮಗರಿವಿಲ್ಲದಂತೆ ನಮ್ಮನ್ನು ಬಳಸಿಕೊಂಡು ಎಡಬಲಗಳ ನಡುವೆ ಕಂದಕ ಸೃಷ್ಟಿಸಿ ತಾವು ಲಾಭ ಮಾಡಿಕೊಳ್ಳುವರು ಎನ್ನುತ್ತಾ ರಕ್ತ ಬೀಜಾ ಸುರನ ಸಂತಾನಕ್ಕೆ ಹೋಲಿಸಿದ್ದಾರೆ.

'ಕನ್ನಡಕ ಮಾರಾಟಕ್ಕಿದೆ' ಕವಿತೆಯಲ್ಲಿ ಕನ್ನಡಕ ಎಂಬುದು ಮನಸ್ಸಿನ ಪ್ರತಿಫಲನವಾಗಿ ಮೂಡಿಬಂದಿದೆ. ಸ್ಥಿಮಿತವಿಲ್ಲದ ಚಂಚಲ ಮನಸ್ಸು, ಸರಿ ತಪ್ಪುಗಳನ್ನು ಸರಿಯಾಗಿ ಪರಾಮರ್ಶಿಸದ ಮನಸ್ಸು, ಮಾನವೀಯತೆಯನ್ನು ಮಣ್ಣಾಗಿಸಿ ಜಾತಿ ಮತ ಭೇದಗಳಿಂದ ಮನುಕುಲವನ್ನು ಇಬ್ಬಾಗ ಮಾಡುವ ಮನಸ್ಸು, ಮಿಥ್ಯವನ್ನು ಸತ್ಯದಷ್ಟು ಪ್ರಖರವಾಗಿ ಬಿಂಬಿಸುವ ಮನಸ್ಸು, ಆತ್ಮ ಸಾಕ್ಷಿಯನ್ನು ಮರೆತು ತನ್ನನ್ನೆ ತಾನು ಮಾರಾಟಕ್ಕೆ ಇಟ್ಟುಕೊಳ್ಳುವ ಮನಸ್ಸುಗಳ ವಿವಿಧ ಭಾವಗಳನ್ನು ಕಣ್ಣಿಗೆ ಧರಿಸಿರುವ ಕನ್ನಡಕದ ರೂಪಕದಲ್ಲಿ ಬಿತ್ತರಿಸಿದ್ದಾರೆ. ಜನರ ಮುಖವಾಡವನ್ನು ಕಳಚಿ, ತಪ್ಪನ್ನು ಖಂಡಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದ ಅಸಮರ್ಥ ನಿರ್ಧಾರಗಳನ್ನು ಕವಿ ಟೀಕಿಸುತ್ತ ಆ ರೋಗಗ್ರಸ್ತ ಕನ್ನಡಕವನ್ನು ತೆಗೆದು ಲೋಕವನ್ನು ಸ್ವಚ್ಛ ಕಣ್ಣಿನಿಂದ ನೋಡಲು ಕವಿ ಮನಸ್ಸು ಆಶಿಸುತ್ತದೆ.

'ಮದ್ಯ' ಶಿರೋನಾಮೆಯ ಕವಿತೆಯು ಹಾಸ್ಯ ಲಹರಿಯಲ್ಲಿ ಜೀವತಳೆದಿದ್ದು ಓದುಗರನ್ನು ಮುದಗೊಳಿಸುತ್ತದೆ. ಹೆಣ್ಣು ಮಕ್ಕಳು ಅಡುಗೆಗೆ ಹಾಕುವ ಎಣ್ಣೆಯಿಂದ ಹಿಡಿದು ಗಂಡಸರು ಹೊಟ್ಟೆಗೆ ಹಾಕುವ ಎಣ್ಣೆಯವರೆಗೂ ಚಲಿಸುವ ಕವಿತೆ ವೈವಿಧ್ಯಮಯವಾದ ಎಣ್ಣೆಯ ಅವಾಂತರಗಳನ್ನು ಹಾಸ್ಯ ಮಿಶ್ರಿತ ಭಾವದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.

'ಪಿ ಲಂಕೇಶ್ವರ ನೀಲು ನೆನೆದು' ಕವಿತೆ ನಾನು ಓದಿರುವ ನೀಲು ಸಂಪುಟಗಳ ಕವಿತೆಗಳನ್ನು ಮತ್ತೆ ನೆನಪಿಸಿದರೆ, ಲಾಲಿತ್ಯಪೂರ್ಣವಾಗಿ ರಚಿತವಾಗಿರುವ 'ಬಿ ಆರ್ ಲಕ್ಷ್ಮಣರಾವ್' ಕವಿತೆಯು ಅವರ ವ್ಯಕ್ತಿತ್ವ, ಗುಣ, ಸ್ವಭಾವ, ಕಾವ್ಯ ಶಕ್ತಿಯ ಮೇಲೆ ಬೆಳಕು ಚೆಲ್ಲುತ್ತದೆ. ಮೈಸೂರು ಮಳ್ಳಿಗೆ ಕವಿತೆ ಕವಿ ಕೆ.ಎಸ್.ಎನ್. ಅವರ ಕಾವ್ಯಗಳ ಮೆಲಕು ಹಾಕಿಸುತ್ತದೆ. 'ಚೊಕ್ಕಾಡಿಗೆ ನಮಸ್ಕಾರ' ಕವಿತೆ ಎಲ್ಲ ರೀತಿಯಲ್ಲೂ ತುಂಬಾ ಗಟ್ಟಿಯಾಗಿ ನಿಲ್ಲಬಹುದಾದ ಸಾಲುಗಳನ್ನು ಹೊಂದಿದ್ದು ನಾಡಿನ ಹಿರಿಯ ಕವಿಯ ಪಯಣವನ್ನು ಅಮೋಘವಾಗಿ ಹಿಡಿದಿಟ್ಟಿದೆ. ಇನ್ನು ನನ್ನ ನೆಚ್ಚಿನ ನಿರ್ದೇಶಕರಾದ ಟಿ. ಎನ್ ಸೀತಾರಾಮ್ ಅವರ ಕುರಿತಾದ ಕವಿತೆಯು ಮೊದಲನೆದಾಗಿ ನಿಮ್ಮ ಅಂತರಂಗ ಅರಿಯಲಾರದ ನನಗೆ ನಿಮ್ಮ ಬಹಿರಂಗದ ಮೇಲು ಅಧಿಕಾರವಿಲ್ಲ

ಒಳ ಹೊರಗೆಗಳ ಹೊಸ್ತಿಲಲ್ಲಿ ನಿಂತು ನೋಡಿದರೆ
ಅಷ್ಟು ಪ್ರೀತಿ ಇಷ್ಟು ಕಕ್ಕುಲಾತಿ
ಅಗಾಧ ಸಹಾನುಭೂತಿ
ಈ ಸಾಲುಗಳಲ್ಲಿ ಅವರ ಪ್ರತಿಭೆಯ ಜೊತೆಗೆ ವ್ಯಕ್ತಿಗತವಾಗಿಯೂ ಅವರನ್ನ ಓದುಗರಿಗೆ ಪರಿಚಯಿಸುತ್ತವೆ.

ಒಟ್ಟಿನಲ್ಲಿ ಜೋಗಿ ಅವರು ಕಾವ್ಯ ಕ್ಷೇತ್ರಕ್ಕೆ

'ಸಾಲು ಸಾಲು ಸಾಲು' ಕವನ ಸಂಕಲನದ ಮೂಲಕ ಹೆಜ್ಜೆಯಿಟ್ಟಿದ್ದು‌ ಪದ್ಯಗಳ ಮೇಲೆ ಗದ್ಯ ಪ್ರಹಾರ ಮಾಡಿದ್ದಾರೆ. ಜೋಗಿ ಅವರಿಂದ ಮತ್ತಷ್ಟು ಮಗದಷ್ಟು ಕವನ ಸಂಕಲನಗಳು ರಚಿತವಾಗಿ ಕಾವ್ಯಾಸಕ್ತರನ್ನು ರಂಜಿಸಲಿ ಎಂದು ಆಶಿಸುವೆ.

-ಅನುಸೂಯ ಯತೀಶ್
ವಿಮರ್ಶಕಿ ಬೆಂಗಳೂರು

 

MORE FEATURES

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...