ಕನ್ನಡದ ಮೊಟ್ಟ ಮೊದಲ ವಚನಕಾರ; ದೇವರ(ಜೇಡರ) ದಾಸಿಮಯ್ಯ


“ಹನ್ನೆರಡನೆ ಶತಮಾನದ ಬಸವಾದಿ ಶರಣರ ಕಾಲದಲ್ಲಿ ವಚನ ಸಾಹಿತ್ಯ ವಿಫುಲವಾಗಿ ಬೆಳೆದು ಕ್ರಾಂತಿಯೇ ಉಂಟು ಮಾಡಿತು ಆದರೆ ಬಸವ ಯುಗದ ಪೂರ್ವದಲ್ಲೇ ವಚನ ರಚಿಸಿದ ದೇವರ ದಾಸಿಮಯ್ಯ ಒಬ್ಬ ಅದ್ಭುತ ವಚನಕಾರ ಅಂತ ಹೇಳಬಹುದು. ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ,” ಎನ್ನುತ್ತಾರೆ ಶರಣಗೌಡ ಬಿ.ಪಾಟೀಲ ತಿಳಗೂಳ. ಅವರು ‘ದೇವರ(ಜೇಡರ)ದಾಸಿಮಯ್ಯ’ ಕುರಿತು ಬರೆದ ಲೇಖನ.

ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅಪಾರವಾದದ್ದು ಕನ್ನಡ ನಾಡಿನಲ್ಲಿ ಅನೇಕ ಶರಣರು ಸಂತರು ವಚನಕಾರರು ತತ್ವಪದಕಾರರು ಆಗಿ ಹೋಗಿದ್ದಾರೆ. ತಮ್ಮ ಪ್ರಗತಿಪರ ಚಿಂತನೆಯ ಮೂಲಕ ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಾರ ಮರ್ಜಿ ಮುಲಾಜಿಗೂ ಒಳಗಾಗದೇ ನಿರ್ಭಯವಾಗಿ ವಚನಗಳನ್ನು ರಚಿಸಿ ಇದ್ದದ್ದು ಇದ್ದಂಗೇ ಹೇಳುವಲ್ಲಿ ಹಿಂದೆ ಮುಂದೆ ನೋಡಲಿಲ್ಲ. ನುಡಿದಂತೆ ನಡೆದು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಜನರಲ್ಲಿನ ಮೂಢನಂಬಿಕೆ ಕಂದಾಚಾರ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಅವಿರತ ಶ್ರಮಿಸಿದ್ದಾರೆ ತಮ್ಮ ಚಿಂತನೆಗಳ ಮೂಲಕ ಜನರನ್ನು ಸರಿದಾರಿಗೆ ತರಲು ಮಾರ್ಗದರ್ಶಕರಾಗಿ ಗುರುವಾಗಿ ಕಾರ್ಯ ನಿರ್ವಹಿಸಿದ್ದಾರೆ. ಶಕ್ತಿ ಇಲ್ಲದವರಿಗೆ ಶಕ್ತಿಯಾಗಿ ಧನಿ ಇಲ್ಲದವರಿಗೆ ಧನಿಯಾಗಿ ಅವರ ಜೊತೆ ಗಟ್ಟಿಯಾಗಿ ನಿಂತು ಆತ್ಮವಿಶ್ವಾಸವೂ ತುಂಬಿದ್ದಾರೆ. ಕಾಯಕದ ಮಹತ್ವ ಸಾರುತ್ತಾ ಕಾಯಕದಲ್ಲಿ ಕೈಲಾಸ ಕಾಣುವಂತೆ ಉಪದೇಶಿಸಿದ್ದಾರೆ. ನಡೆನುಡಿ ಆಚಾರ ವಿಚಾರ ನೈತಿಕ ಮೌಲ್ಯಗಳನ್ನು ಪ್ರತಿಪಾದಿಸಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ.

ಅಂದು ರಚಿಸಿದ ವಚನಗಳು ಇಂದೂ ಸಹ ಅಮೂಲ್ಯವಾಗಿ ಜನರ ಬದುಕಿಗೆ ದಾರಿ ದೀಪವಾಗಿ ಪ್ರಜ್ವಲಿಸುತ್ತಿವೆ ಜನರ ನಾಲಿಗೆ ಮೇಲೆ ನಿತ್ಯ ನಿರಂತರ ನಲಿದಾಡುತ್ತಿವೆ ನೊಂದು ಬೆಂದವರ ಬದುಕಿಗೆ ಅವು ನವ ಚೈತನ್ಯ ತುಂಬುವ ಸಂಜೀವಿನಿಯಾಗಿವೆ. ವಚನಕಾರರ ಪ್ರಗತಿಪರ ಚಿಂತನೆಗಳು ಸಮಾಜದ ಹುಳುಕಿಗೆ ಚಿಕಿತ್ಸೆ ನೀಡುವಲ್ಲಿ ಬಹು ಮಟ್ಟಿಗೆ ಯಶಸ್ವಿಯಾಗಿದ್ದು ಕಂಡು ಬರುತ್ತದೆ.

ಹನ್ನೆರಡನೆ ಶತಮಾನದ ಬಸವಾದಿ ಶರಣರ ಕಾಲದಲ್ಲಿ ವಚನ ಸಾಹಿತ್ಯ ವಿಪುಲವಾಗಿ ಬೆಳೆದು ಕ್ರಾಂತಿಯೇ ಉಂಟು ಮಾಡಿತು ಆದರೆ ಬಸವ ಯುಗದ ಪೂರ್ವದಲ್ಲೇ ವಚನ ರಚಿಸಿದ ದೇವರ ದಾಸಿಮಯ್ಯ ಒಬ್ಬ ಅದ್ಭುತ ವಚನಕಾರ ಅಂತ ಹೇಳಬಹುದು. ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆವರ ಕಾಲ ಹನ್ನೊಂದನೇ ಶತಮಾನದ ಕೊನೆಯ ಭಾಗವೆಂದು ಹೇಳಲಾಗುತ್ತಿದೆ. ಹುಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದೇನೂರು ಅನ್ನುವ ಚಿಕ್ಕ ಗ್ರಾಮದಲ್ಲಿ , ನೇಕಾರ ದಂಪತಿಗಳಾದ ರಾಮಯ್ಯ ಮತ್ತು ಶಂಕರಿಯ ಮಗನಾಗಿ ಜನಿಸಿದರು. ಬೆಳೆಯುತ್ತಲೇ ಶಿವನ ಆರಾಧಕರಾಗಿ ಶಿವತತ್ವ ಚಿಂತನೆಯ ಜ್ಞಾನ ಸಂಪಾದಿಸಿಕೊಂಡು ವಚನ ರಚಿಸಲು ಆರಂಭಿಸಿದರು. ತಮ್ಮೂರಿನ ದೇವರು ಶಿವಸ್ವರೂಪಿ ರಾಮನಾಥನನ್ನೇ ಆರಾಧ್ಯ ದೈವನಾಗಿ ಸ್ವೀಕರಿಸಿ " ರಾಮನಾಥ" ಅನ್ನುವ

ಅಂಕಿತನಾಮದಿಂದ ಸುಮಾರು ವಚನಗಳನ್ನು ರಚಿಸಿ ಮನೆಮಾತಾದರು. ಅದ್ಯಾತ್ಮದಲ್ಲಿ ದೇವರ ದಾಸಿಮಯ್ಯನಾದರೆ ವೃತ್ತಿಯಲ್ಲಿ ಜೇಡರ ದಾಸಿಮಯ್ಯರಾಗಿ ತರ್ಕ, ವಿಡಂಬನೆ , ಜ್ಞಾನದ ಮೂಲಕ ದಾಸಿಮಾರ್ಯರಾಗಿ ಇಂದಿಗೂ ಅವಿಸ್ಮರಣೀಯರಾಗಿದ್ದಾರೆ. ಕೆಲ ಸಂಶೋಧಕರು ದೇವರ ದಾಸಿಮಯ್ಯ ಬೇರೆ ಜೇಡರ ದಾಸಿಮಯ್ಯ ಬೇರೆ ಅಂತ ಪ್ರತಿಪಾದಿಸುತ್ತಾರೆ ಆದರೆ ಇಬ್ಬರೂ ಒಂದೇ ಅನ್ನುವ ಅಭಿಪ್ರಾಯಕ್ಕೆ ಬಹುತೇಕ ವಿದ್ವಾಂಸರು ಬಂದಿರುವದು ಕಂಡು ಬರುತ್ತದೆ ಆದರೂ ಯಾವುದೇ ನಿಶ್ಚಿತವಾದ ಸಾಕ್ಷಾಧಾರ ಲಭ್ಯವಾಗಿಲ್ಲ ವಚನಗಳ ಆಧಾರದ ಮೇಲೆ ದಾಸಿಮಯ್ಯನವರ ಕಾಲದ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಬಸವ ಪೂರ್ವ ಯುಗದ ಪ್ರಮುಖ ವಚನಕಾರರು ಅಂತ ಹೇಳಬಹುದು. ಬಸವಣ್ಣನವರು ಕೂಡ ಇವರನ್ನು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ. " ಭಕ್ತಿ ಎಂಥಹುದಯ್ಯ ದಾಸಿಮಯ್ಯ ಮಾಡಿದಂಥಹುದಯ್ಯಾ " ಅಂತ ಹೇಳಿರುವದು ದಾಸಿಮಯ್ಯನವರ ಭಕ್ತಿಗೆ ಹಿಡಿದ ಕನ್ನಡಿಯಾಗಿದೆ.

ದಾಸಿಮಯ್ಯನವರ ವಚನಗಳಲ್ಲಿ ರೂಪಾಲಂಕಾರ ವಿಶೇಷವಾಗಿದೆ ಸರಳತೆ, ಸಾಹಿತ್ಯಿಕ ಗುಣ, ಹಾಗೂ ಮೌಲ್ಯಗಳಿಂದ ಕೂಡಿರುವ ಇವರ ವಚನಗಳಲ್ಲಿ ವಿಡಂಬನೆಯೂ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ ಅದು ಕೆಲವೊಮ್ಮೆ ನಯವಾಗಿ ಮತ್ತೊಮ್ಮೆ ಒರಟಾಗಿ ಗೊಚರಿಸುತ್ತಿದೆ. ಭಾವ ಬುದ್ದಿಯ ಹದವಾದ ಮಿಶ್ರಣದಿಂದ ವಚನಗಳು ರಚನೆಯಾಗಿ ಜನಪರ ಕಾಳಜಿ ಬಿಂಬಿತವಾಗಿವೆ.

ಸತಿಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಅನ್ನುವಂತೆ ದಾಸಿಮಯ್ಯನವರ ಧರ್ಮ ಪತ್ನಿ ದುಗ್ಗಳೆ ಕೂಡ ಮಹಾ ಶಿವಶರಣೆಯಾಗಿದ್ದು ,ಪತಿಯ ಜೊತೆಗೂಡಿ ಕಾಯಕ ನಿಷ್ಠಳಾಗಿ ವಚನ ರಚಿಸಿದ್ದು ಕಂಡು ಬರುತ್ತದೆ.

ಮೊಲೆ ಮೂಡಿಬಂದರೆ ಹೆಣ್ಣಿಂಬುವರು
ಗಡ್ಡಮೀಸೆ ಬಂದರೆ ಗಂಡೆಬುವರು
ನಡುವೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ
ಕಾಣಾ ರಾಮನಾಥ ! ಅಂತ ತಮ್ಮ ಒಂದು ವಚನದಲ್ಲಿ ಹೇಳುತ್ತಾರೆ.

ಗಂಡು ಮತ್ತು ಹೆಣ್ಣಿನ ಸಮಾನತೆ. ಲಿಂಗತಾರತಮ್ಯದ ವಿರುದ್ದ ಸುಮಾರು ಸಾವಿರ ವರ್ಷದ ಹಿಂದೆಯೇ ವಚನಗಳಲ್ಲಿ ಉಲ್ಲೇಖಿಸಿದ್ದು ಅವರ ವೈಚಾರಿಕ ಪ್ರಬುದ್ಧತೆಗೆ ಸಾಕ್ಷಿಯಾಗಿದೆ.

ಇಳೆ ನಿಮ್ಮದಾನ ಬೆಳೆ ನಿಮ್ಮದಾನ
ಸುಳಿದು ಸೂಸುವ ಗಾಳಿ ನಿಮ್ಮದಾನ
ನಿಮ್ಮ ದಾನವನುಂಡು ಅನ್ಯರನು ಹೊಗಳುವ ಕುನ್ನಿಗಳನೇನೆಂಬೆನಯ್ಯ ರಾಮನಾಥ!

ಈ ಜಗತ್ತೇ ಶಿವಮಯವಾಗಿದ್ದು ಎಲ್ಲವೂ ಆ ಸೃಷ್ಟಿಕರ್ತನ ಮಹಿಮೆ ಆದರೆ ಆತನನ್ನು ಹೂಗಳುವ ಬದಲು ನಾವೆಲ್ಲ ಅಲ್ಪಬುದ್ದಿಯಿಂದ ಯಾರನ್ನೋ ಹೊಗಳುತ್ತಿದ್ದೇವೆ ಅಂತ ವಿಡಂಬನಾತ್ಮಕವಾಗಿ ಹೇಳುತ್ತಾರೆ.

ಹರಿದ ಗೋಣಿಯಲೊಬ್ಬ ಕವಳೆಯ ತುಂಬಿದ
ಇರುಳೆಲ್ಲ ನಡೆದನು ಸುಂಕಕಂಜಿ
ಕಳವೆಯಲ್ಲ ಹೋಗಿ ಬರಿ ಗೋಣಿ ಉಳಿದಿತ್ತು
ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ!

ಮನದಲ್ಲಿ ಕೆಟ್ಟ ಉದ್ದೇಶ ಹೊಂದಿ ಹೊರನೋಟಕ್ಕೆ ದೇವರ ಒಲವುಳ್ಳವನಂತೆ ನಟಿಸುತ್ತಾ ಜನರನ್ನು ಮತ್ತು ಸಮಾಜವನ್ನು ವಂಚಿಸುವ ವ್ಯಕ್ತಿ ಕೊನೆಗೆ ಏನನ್ನೂ ಗಳಿಸದೆ ತನ್ನಲ್ಲಿರುವದನ್ನೂ ಕಳೆದುಕೊಳ್ಳುತ್ತಾನೆ ಮನುಷ್ಯನ ದುರಾಸೆ ಚಂಚಲ ಸ್ವಭಾವ ಒಳಿತಿಗಿಂತ ಕೆಡಕೇ ಉಂಟುಮಾಡುತ್ತದೆ ಅಂತ ಹೇಳುತ್ತಾರೆ.

ಬರು ಸಠಗನ ಭಕ್ತಿ ದಿಟವೆಂದು ನಚ್ಚಲು ಬೇಡ
ಮಠದೊಳಗಣ ಬೆಕ್ಕು ಇಲಿಯ ಕಂಡು
ಪುಟನೆಗೆದಂತಾಯಿತು ಕಾಣಾ ರಾಮನಾಥ!

ಸುಳ್ಳು ಕಪಟತನ, ವಂಚನೆಯ ನಡೆನುಡಿಗಳಿಂದ ಜನರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುತ್ತಾ ಜನಮೆಚ್ಚುಗೆ ಪಡೆಯಲು ಢಾಂಬಿಕತನದಿಂದ ದೇವರ ಪೂಜೆ ಪುನಸ್ಕಾರದಲ್ಲಿ ತೊಡಗಿರುವ ವ್ಯಕ್ತಿಯನ್ನು ಒಳ್ಳೆಯವನೆಂದು ಭಾವಿಸಿ ನಂಬಬಾರದೆಂದು ನಬಿದರೆ ಮೋಸ ಹೋದಂತೆ ಅಂತ ಪ್ರತಿಪಾದಿಸುತ್ತಾರೆ.

ಕಡೆಗೀಲಿಲ್ಲದ ಬಂಡಿ
ಹೊಡೆಗೆಡೆಯದೆ ಮಾಣ್ಬುದೆ
ಕಡೆಗೀಲು ಬಂಡಿಗಾಧಾರ
ಈ ಕಡುದರ್ಪವೇರಿದ
ಒಡಲೆಂಬ ಬಂಡಿಗೆ ಮೃಢ ಭಕ್ತರ
ನುಡಿಗಡಣವೆ ಕಡೆಗೀಲು ಕಾಣಾ ರಾಮನಾಥ!

ಬಂಡಿ ಸುಗಮವಾಗಿ ಸಾಗಲು ಚಕ್ರಗಳು ಬೇಕು, ಚಕ್ರಗಳು ಸುರಳಿತವಾಗಿ ಚಲಿಸಲು ಕಡೆಗೀಲು ಅವಶ್ಯಕ ಇಲ್ಲದಿದ್ದರೆ ಬಂಡಿಯಿಂದ ಅವು ಹೊರ ಬಿದ್ದು ಅಪಾಯ ಎದುರಾಗುತ್ತದೆ ಅದೇ ರೀತಿ ಮನುಷ್ಯನ ಬದುಕಿಗು ಅರಿವು ಅನ್ನುವ ಕಡೆಗೀಲು ಅವಶ್ಯಕ ಅದರಿಂದ ಆತ ಬದುಕಿನಲ್ಲಿ ಯಾವುದೇ ಅಪಾಯವಿಲ್ಲದೇ ಸಾಗಬಲ್ಲ ಅಂತ ಹೇಳಲಾಗಿದೆ.

ದಾಸಿಮಯ್ಯರ ವಚನಗಳು ಸಂಕ್ಷಿಪ್ತತೆ ಸರಳತೆ ಮತ್ತು ಅರ್ಥವಂತಿಕೆಯನ್ನು ಲಕ್ಷಣವಾಗಿಸಿಕೊಂಡು ದಾಂಪತ್ಯ ಧರ್ಮ, ಸ್ತ್ರಿ ಪುರುಷ ಸಮಾನತೆ ,ಗುರುವಿನ ಶ್ರೇಷ್ಠತೆ, ಒಡಲ ಹಸುವಿನ ತೀವ್ರತೆ, ದಾನಗುಣ ,ಮಾನವನ ಸ್ವಾರ್ಥ, ಸಮಾಜದ ವೈಪರೀತ್ಯಗಳ ವಿಡಂಬನೆ, ಸರ್ವಸಮಾನತೆ ಕಂಡು ಬರುತ್ತದೆ. ಅವಕಾಶ ಸಿಕ್ಕಾಗಲೆಲ್ಲ ತನ್ನ ಸತಿಯನ್ನು ಹೊಗಳಿದ್ದು ಕಂಡು ಬರುತ್ತದೆ. " ನಮ್ಮ ದುಗ್ಗಳೆಯಂಥ ಸತಿ ಇದ್ದರೆ ಸಂಸಾರ ಲೇಸು ಇಲ್ಲದಿದ್ದರೆ ಸನ್ಯಾಸ ಲೇಸು ಅಂತ ಹೇಳುತ್ತಾರೆ.

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂದು ಬಳಗದ ಮೆರೆಸುವಳು
ದುಗ್ಗಳೆಯ ತಂದು ಬದುಕಿದೆನಾ
ಕಾಣಾ ರಾಮನಾಥ!

ದಾಸಿಮಯ್ಯನವರು ತನ್ನ ಸತಿಯನ್ನು ಪ್ರಶಂಸಿರುವದು ಕಂಡು ಬರುತ್ತದೆ. ಸತಿಯಿಂದಲೇ ಮುಕ್ತಿ ಸತಿಯಿಂದಲೇ ಸದ್ಗತಿ ಅನ್ನುವ ವಾದ ಎತ್ತಿ ತೋರಿಸುತ್ತದೆ. ಇವರು ವಚನ ಬರೆಯುವದರಲ್ಲಿ ಸತಿಯ ಪಾತ್ರವೂ ಮುಖ್ಯವಾಗಿದೆ.

ವಚನಕಾರರು ತಮ್ಮ ವಚನಗಳನ್ನು ಕೇವಲ ಭಕ್ತಿಗಾಗಿ ರಚಿಸಿದ್ದಲ್ಲ ಸಾಮಾಜಿಕ ಅಸಮಾನತೆ,ಕಂದಾಚಾರ, ಮೂಢ ನಂಬಿಕೆ, ಅನಿಷ್ಟ ಪದ್ಧತಿಗಳ ವಿರುದ್ದ ಸಮರವೇ ಸಾರಿದ್ದರು. ಯಾವುದೇ ಪ್ರತಿರೋಧ ಎದುರಾದರು ಹಿಂದಡಿಯಿಡದೆ ನಿರ್ಭೀತಿಯಿಂದ ವಚನ ರಚಿಸಿ ಸಾಹಿತ್ಯ ಲೋಕದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಅಂಥಹ ವಚನಕಾರರಲ್ಲಿ ದಾಸಿಮಯ್ಯ ಕೂಡ ಒಬ್ಬರು ಅವರ ವಚನ ಗಾತ್ರದಲ್ಲಿ ಚಿಕ್ಕದಾದರು ವಿಶಾಲ ಅರ್ಥ ನೀಡುತ್ತವೆ. ಅಂದಿನ ಕಾಲಘಟ್ಟಕ್ಕೆ ತಕ್ಕಂತೆ ರಚಿಸಿದ ವಚನಗಳು ಇಂದಿನ ಅಧುನಿಕ ಯುಗದಲ್ಲೂ ಶ್ರೇಷ್ಠತೆ ಕಾಯ್ದುಕೊಂಡು ಬಂದಿರುವದು ಕಾಣುತ್ತೇವೆ ದಾಸಿಮಯ್ಯ ನಾಡು ಕಂಡ ಶ್ರೇಷ್ಠ ವಚನಕಾರ ಅಂತ ನಿಸ್ಸಂದೇಹವಾಗಿ ಹೇಳಬಹುದು.

- ಶರಣಗೌಡ ಬಿ.ಪಾಟೀಲ ತಿಳಗೂಳ ಕಲಬುರಗಿ.

MORE FEATURES

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...

‘ಪಾತಕ ಲೋಕ’ ತರುಣರಿಗೆ ಅತ್ಯಂತ ಆಕರ್ಷಣೀಯ ವಸ್ತು

16-05-2024 ಬೆಂಗಳೂರು

"ನಾ ಕಂಡ ಈ ಭೂಗತ ಜಗತ್ತಿನಲ್ಲಿ ಬೆಂಗಳೂರು ನಗರ ಹಾಗೂ ಮುಂಬೈ ನಗರದ ರೌಡಿಗಳ ಸಂಪರ್ಕ ಹಾಗೂ ಮಂಗಳೂರು ನಗರದ ರೌಡಿಗಳ ...