ಕಾವ್ಯವೆಂಬುದು ಭಾವನೆಗಳ ಆಗರ, ಭಾವನೆಗಳ ಪ್ರಸರಣ


"ಕಾವ್ಯವೆಂಬುದು ಭಾವನೆಗಳ ಆಗರ, ಭಾವನೆಗಳ ಪ್ರಸರಣ, ಭಾವನೆಗಳ ಮನನ. ಭಾವನೆಗಳನ್ನು ಯಾವುದೇ ರೂಪದಲ್ಲಿ ವ್ಯಕ್ತಪಡಿಸಬಹದು. ಕವಿತೆ, ಕತೆ, ಕಾದಂಬರಿ, ಲೇಖನ ಇತ್ಯಾದಿ, ಆದರೆ ಕಾವ್ಯಕ್ಕೆ ಪ್ರತ್ಯೇಕತೆ ಇದೆ, ಭಾವನೆಗಳನ್ನು ಮನದಾಳಕ್ಕೆ ಇಳಿಸಿ ಚಿಂತಿಸುವಂತೆ ಮಾಡುವ ಶಕ್ತಿ ಕಾವ್ಯಕ್ಕೆ ಇದೆ," ಎನ್ನುತ್ತಾರೆ ಎಂ.ವಿ. ಶಶಿಭೂಷಣ ರಾಜು. ಅವರು ನಂದಿನಿ ಹೆದ್ದುರ್ಗ ಅವರ ‘ಒಂದು ಆದಿಮ ಪ್ರೇಮ’ ಕೃತಿ ಕುರಿತು ಬರೆದ ವಿಮರ್ಶೆ.

ನಂದಿನಿ ಹೆದ್ದುರ್ಗ ಅವರ ಕವನ ಸಂಕಲನ "ಒಂದು ಆದಿಮ ಪ್ರೇಮ"ಕ್ಕೆ ಒಂದು ಅನಿಸಿಕೆ. ನಂದಿನಿ ಹೆದ್ದುರ್ಗ ಅವರ ಬಿಡಿ ಕವನಗಳನ್ನು ಪತ್ರಿಕೆಗಳಲ್ಲಿ ಓದಿ ಖುಷಿಯಾದುದ್ದುಂಟು. ಅವರ ಶೈಲಿ, ಭಾಷೆ, ಕಾವ್ಯ ವಸ್ತು, ಸ್ತ್ರೀಪರ ಸಂವೇದನೆ ಹಾಗು ದಿಟ್ಟತನ ಆಪ್ತವಾಗುತ್ತವೆ. ಇತ್ತೀಚೆಗೆ ಅವರ ಅವರ ಸಂಕಲನ "ಒಂದು ಆದಿಮ ಪ್ರೇಮ" ದಲ್ಲಿ ಅನೇಕ ಕವನಗಳನ್ನು ಇಡಿಯಾಗಿ ಓದುವ ಅವಕಾಶ ಸಿಕ್ಕಿತು. ಒಂದೇ ಗುಕ್ಕಿಗೆ ಕವನಗಳನ್ನು ಓದಿ ಮುಗಿಸಿದರೂ, ಮತ್ತೊಮ್ಮೆ ಸಾವಕಾಶವಾಗಿ ಓದಿದ್ದೇನೆ.

ಕಾವ್ಯವೆಂಬುದು ಭಾವನೆಗಳ ಆಗರ, ಭಾವನೆಗಳ ಪ್ರಸರಣ, ಭಾವನೆಗಳ ಮನನ. ಭಾವನೆಗಳನ್ನು ಯಾವುದೇ ರೂಪದಲ್ಲಿ ವ್ಯಕ್ತಪಡಿಸಬಹದು. ಕವಿತೆ, ಕತೆ, ಕಾದಂಬರಿ, ಲೇಖನ ಇತ್ಯಾದಿ, ಆದರೆ ಕಾವ್ಯಕ್ಕೆ ಪ್ರತ್ಯೇಕತೆ ಇದೆ, ಭಾವನೆಗಳನ್ನು ಮನದಾಳಕ್ಕೆ ಇಳಿಸಿ ಚಿಂತಿಸುವಂತೆ ಮಾಡುವ ಶಕ್ತಿ ಕಾವ್ಯಕ್ಕೆ ಇದೆ. ಅಂತಹ ಶಕ್ತಿ ಕಾವ್ಯಕ್ಕೆ ತರುವುದು ಕವಿ ಅಥವಾ ಕವಿಯತ್ರಿಯ ಶಕ್ತಿ ಕೂಡ. ಕಾವ್ಯ ಬರೀ ಶಬ್ದಾಡಂಬರವಾಗದೆ, ಹಿಂದೆ ಯಾರೋ ಆಡಿದ ಮಾತಿನ ಪುನರಾವರ್ತನೆ ಆಗದೆ, ಕ್ಲೀಷೆಗಳಿಂದ ತುಂಬದೇ ಮನತುಂಬಬೇಕು. ಇವುಗಳಿಂದ ಹೊರತಾದ ಸುಂದರ ಕವನಗಳು ನಂದಿನಿ ಹೆದ್ದುರ್ಗ ಅವರ " ಒಂದು ಆದಿಮ ಪ್ರೇಮ " ಕವನ ಸಂಕಲದಲಿ ಇವೆ ಎನ್ನುವುದು ಪ್ರಶಂಶನೀಯ. ಇಲ್ಲಿ ನನಗೆ ಹೆಚ್ಚು ಇಷ್ಟವಾದ ಕೆಲವು ಕವಿತಗಳ ಬಗ್ಗೆ ನನ್ನ ಅನಿಸಿಕೆಯನ್ನು ಕಾಣಿಸಿದ್ದೇನೆ.

ಮೊದಲಿಗೆ ಅರ್ಪಣೆಯಲ್ಲಿ ಅವರು ಹೇಳಿರುವ "ನಿನ್ನನ್ನು ಮಾತ್ರ ಪ್ರೀತಿಸಲು ಸಾಧ್ಯವಾಗುವುದು ನಿಸ್ಸಹಾಯಕತೆ" ಎನ್ನುವ ನುಡಿಗಟ್ಟು ಸೊಗಸಾಗಿದೆ.

"ಬಡ ಪ್ರೇಯಸಿಯ ಆತ್ಮಕಥೆ" ಯಲ್ಲಿ ಬಂದ ಈ ಸಾಲುಗಳನ್ನು ನೋಡಿ,
ಒಲುಮೆ ಎದೆಗೆ ತಾಕಿದ
ಮರು ಕ್ಷಣವೇ
ನನ್ನ ನಾಳೆಗಳು
ಜೀವ ತಳೆದವು
ಇವು ಕವನದ ಅದ್ಬುತ ಸಾಲುಗಳು, ಇಲ್ಲಿ ಆತ್ಮವಿಶ್ವಾಸ, ಆಶಾವಾದದ ಭಾವನೆ ಕಾಣಿಸುತ್ತದೆ.

ಅದೇ ಕವನ,
ನ್ಯಾಯೋನ್ಮಾದದ ತೀರ್ಪು
ಕೊಡುವಲ್ಲಿ ನಿಸ್ಸೀಮರು
ನೀವು

ಎಂದು ಕೊನೆಯಾಗುತ್ತದೆ.

"ಒಂದು ಮರ ಕಡಿದು ಉರುಳಿಸಿದ ಮೇಲೆ' ಕವನದಲ್ಲಿ ಮರಕಡಿದರಾಗುವ ಪರಿಣಾಮಗಳನ್ನು ಅದ್ಭುತವಾಗಿ ವಿವರಿಸುತ್ತಾರೆ

ಒಂದು ಮರ ಕಡಿದು ಉರುಳಿಸಿದ ಮೇಲೆ
ಬಾಗುವುದಿಲ್ಲ
ಮಾಗುವುದಿಲ್ಲ
ಚೈತ್ರಕ್ಕೆ ಚಿಗುರಿವುದಿಲ್ಲ
ಹಕ್ಕಿ ಹಾಡುವುದಿಲ್ಲ
ಗೂಡು ಮಾಡುವುದಿಲ್ಲ
ಬೊಗಸೆ ತುಂಬಿದ ಮಳೆ
ಬಾಯಿಗಿಳಿಯುವುದಿಲ್ಲ
ಎನ್ನುತ್ತಾರೆ

ನನಗೆ ಇಷ್ಟವಾದ ಇನ್ನೊಂದು ಕವನ "ಸಂಜೆ ಮಳೆ ಬರಬಹದು"
ಕಂಡ ಕಂಡ ಕಿವಿಗಳಲ್ಲಿ
ನೋವುಗಳನ್ನೇ ಹಾಡಬಾರದು ಗೆಳತಿ
ಒಡೆದ ಕನ್ನಡಿಯೆದಿರು
ಕುಳಿತು ಬಡಬಡಿಸಬೇಡ ಗೆಳತಿ
ಬೊಗಸೆ ನೀರಲ್ಲಿ ಮುಖ ನೋಡಿಕೋ
ನಿನ್ನೊಳಗನ್ನೂ ದಾಟಿ
ಹೊಸದೂರ ಕ್ರಮಿಸಬಹದು

ಇವೆಲ್ಲಾ ಸೊಗಸಾದ ಭಾವನೆಗಳು

"ಕೊಂದವರುಳಿವರೇ" ನನ್ನ ಮತ್ತೊಂದು ಇಷ್ಟವಾದ ಕವನ.
"ಹಕ್ಕಿ ಹುಡುಗಿಯ ಹಾಡು" ಕವನದ ಈ ಅದ್ಬುತ ಸಾಲುಗಳನ್ನು ನೋಡಿ,

ಸಾವು ಮೋಹಿಸುವವರ
ಸರಧಿಯಲ್ಲಿ
ನಾನು ಮುಂಚೂಣಿಯಲ್ಲಿದ್ದೇನೆ
ಹೇಗೆ ಬರೆಯಲೋ ಹುಡುಗ
ಲೋಕ
ನೋವಿನಲ್ಲಿದೆಯೆಂದು

ಹಳೆ ಪದ್ಯ ನೀಲಿ, ಎಷ್ಟು ತ್ರಾಸ ಶಿವನೇ, ನನ್ನ ಕವಿತೆಯನ್ನು, ಈ ಚಿತ್ರಕ್ಕೊಂದು ಹೆಸರು ಕೊಡಿ, ಅಮ್ಮನಾಗುವುದೆಂದರೆ, ಒಂದಾನೊಂದು ಕಾಲಕ್ಕೆ, ಉತ್ಪಾತ ಮುಂತಾದ ಉತ್ತಮ ಕವಿತೆಗಳು ಕವನ ಸಂಕಲನದಲ್ಲಿ ಇವೆ. ಇಲ್ಲಿನ ಕೆಲವು ಕವನಗಳು ಸ್ವಲ್ಪ ಧೀರ್ಘ ಅನಿಸಿದರೂ ಓದಿ ಸವಿಯಲು, ಚಿಂತಿಸಲು ಅಡ್ಡಿಯಾಗುವುದಿಲ್ಲ.

ಇದನ್ನು ಆಗಾಗ ಹೇಳುತ್ತಿರುತ್ತೇನೆ, ಬರಹಗಾರರಿಗೆ ಸಾಮಾಜಿಕ ಬಾಧ್ಯತೆ ಇರಬೇಕು. ಬರಹ ಯಾವರೂಪದಲ್ಲಾದರೂ ಓದುಗರನ್ನು ಚಿಂತಿಸುವಂತೆ ಮಾಡಬೇಕು. ಬರಹ ಸಡಿಲವಾಗಬಾರದು. ಕಾವ್ಯ ಎದೆಯಾಳದಿಂದ ಉಕ್ಕಬೇಕು. ದೈವ ಭಕ್ತಿ, ದೇಶಭಕ್ತಿ, ಪ್ರೀತಿ-ಪೇಮದ ಕವನಗಳು ಬಂದಿವೆ, ಬರುತ್ತಿವೆ, ಮುಂದೆ ಬರುತ್ತವೆ, ಆದರೆ ಪ್ರತಿಸಲ ಬರೆದಾಗಲೂ ಹೊಸತೆಂಬಂತೆ ಬರೆಯಬೇಕು, ಓದುಗನಿಗೆ ಹೊಸ ಅನುಭವ ನೀಡಬೇಕು. ಕಾವ್ಯ ಭಾವವುಕ್ಕಿ ಮನದಲಿ ಉಳಿಯಲಾಗದೆ ಹೊರಹೊಮ್ಮಬೇಕು. ಕಾವ್ಯ ಪ್ರಸವ ವೇದನೆಯ ನಂತರ ಹುಟ್ಟುವ ಮಗುವಾಗಬೇಕು. ಪ್ರೀತಿಯೊಂದು ಮಗುವು ಹೊಸತು, ಅನನ್ಯ ಮತ್ತು ವಿಭಿನ್ನ. ಬರಹ ಗಂಭೀರವಾಗಿರಬೇಕು, ಕಾಲಹರಣಕೆ ಕಾವ್ಯ ಬರೆಯಬಾರದು. ಈ ಹಿನ್ನೆಲೆಯಲ್ಲಿ ಅವರ ನಂದಿನಿ ಹೆದ್ದುರ್ಗ ಕವನಗಳಲ್ಲಿ ಹೊಸತನ ಕಾಣಿಸಿಕೊಂಡಿದೆ ಮತ್ತು ಮನಸಿಗೆ, ಹೃದಯಕ್ಕೆ ಇಲ್ಲಿನ ಕವನಗಳು ತಾಕುತ್ತವೆ.

ಕಾವ್ಯ ಎದೆಮುಟ್ಟುವುದು ಭಾಷೆಯ ಬಳಕೆಯಿಂದ ಕೂಡ. ಈ ನಿಟ್ಟಿನಲ್ಲಿ ಕವಿಯಿತ್ರಿಯವರು ಒಳ್ಳೆಯ ಭಾಷೆ ಉಪಯೋಗಿಸಿದ್ದಾರೆ. ಕವಿಯಿತ್ರಿ ಈಗಾಗಲೇ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ಅವರ ಕವನಗಳು ಕಾವ್ಯಾಸಕ್ತರ ಮನ ಮುಟ್ಟಿವೆ. ಅವರು ಕವಿಯಲ್ಲದೆ, ಕೃಷಿಯಂತಹ ಇನ್ನೂ ಅನೇಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಇನ್ನೂ ಹೆಚ್ಚಿನ ಕಾವ್ಯಕೃಷಿ ಮಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ಬೆಳಗಲಿ ಎನ್ನುವುದೇ ನನ್ನ ಆಶಯ. ಅವರ ಪತ್ರಿಕೆಯಲ್ಲಿ ಪ್ರಕಟವಾದ ಕವನಗಳು ಇಲ್ಲಿನ ಕವನಗಳಿಗಿಂತ ಹೆಚ್ಚು ಚಿಂತಿಸುವಂತೆ ಮಾಡಿದ್ದು ನಿಜ. ಅವರ ಬೇರೆ ಪುಸ್ತಕಗಳನ್ನು ಓದುವ ಇರಾದೆ ಇದೆ. ನಂದಿನಿ ಹೆದ್ದುರ್ಗ ಅವರಿಗೆ ಶುಭವಾಗಲಿ.

- ಎಂ.ವಿ. ಶಶಿಭೂಷಣ ರಾಜು

MORE FEATURES

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...