ಲೇಖಕಿ ಆಹಾರದ ವಿಚಾರದಲ್ಲಿ ಪಟ್ಟ ಬವಣೆ ಕಣ್ಣಿಗೆ ಕಟ್ಟುವಂತಿದೆ


"ಟೆರ್ರಕೋಟ ವಾರಿಯರ್ಸ್ ನ ಕತೆ, ಸಾಕ್ಷ್ಯ ರೂಪದಲ್ಲಿ ದೊರೆತ ಪಳಿಯುಳಿಕೆಗಳು ಹೊಸದೊಂದು ಲೋಕಕ್ಕೆ ಕರೆದೋಯ್ಯುತ್ತದೆ ಓದುಗರನ್ನು. ದೊರೆಯ ಪರ ಆ ರೈತರು, ಜನರು ತೋರುತ್ತಿದ್ದ ವಿಶ್ವಾಸ, ಬದ್ಧತೆ ಮೆಚ್ಚ ತಕ್ಕಂತದ್ದು. ಆ ಉತ್ಕನನದ ಕತೆ ಬಹಳ ರೋಚಕ," ಎನ್ನುತ್ತಾರೆ ನಯನ ಬಜಕೂಡ್ಲು. ಅವರು ಎಸ್. ಪಿ. ವಿಜಯಲಕ್ಷ್ಮಿ ಅವರ ‘ನಕ್ಷತ್ರಗಳ ನೆಲದಲ್ಲಿ’ ಪ್ರವಾಸ ಕಥನ ಕುರಿತು ಬರೆದಿರುವ ವಿಮರ್ಶೆ.​​​​​​

ಪುಸ್ತಕ :- ನಕ್ಷತ್ರಗಳ ನೆಲದಲ್ಲಿ (ಪ್ರವಾಸ ಕಥನ)
ಲೇಖಕರು :- ಎಸ್. ಪಿ. ವಿಜಯಲಕ್ಷ್ಮಿ
ಪ್ರಕಾಶಕರು :-ವರ್ಣ ಪಬ್ಲಿಕೇಷನ್
ಪುಟಗಳು :-308
ಬೆಲೆ :-300/-
ಮೊಬೈಲ್ :- 9980712738

ಕೃತಿಯ ಹೆಸರು ನೋಡಿ ಮೊದಲು ತಲೆಗೆ ಬರುವುದು ಯಾವುದು ಈ ನಕ್ಷತ್ರಗಳ ನೆಲ?. ಪುಟ ತೆರೆದರೆ ಈ ಪ್ರಶ್ನೆಗೆ ಉತ್ತರ ಪ್ರವಾಸದ ಬಗ್ಗೆ ಬರೆಯುವ ಮೊದಲು ಲೇಖಕಿಯೇ ನೀಡಿದ್ದಾರೆ. ಚೀನಾ ಅಂದೊಡನೆ ನನಗೆ ಮೊದಲು ನೆನಪಾಗುವವರು ಆಧ್ಯಾತ್ಮಿಕ ಗುರು, ಬೌದ್ಧ ಸನ್ಯಾಸಿ ದಲೈ ಲಾಮಾ ಅವರು, ಅಲ್ಲಿ ಗಟ್ಟಿಯಾಗಿ ಬೇರೂರಿರುವ ಬೌದ್ಧ ಧರ್ಮ, ಬೌದ್ಧ ಭಿಕ್ಷುಗಳು.

ಆಹಾರ ಮನುಷ್ಯನ ಮೂಲಭೂತ ಅವಶ್ಯಕತೆ. ನಾನರಿತಿರುವಂತೆ, ಕೇಳಿರುವಂತೆ ಶಾಖಾಹಾರಿಗಳು ಚೀನಾ ದೇಶಕ್ಕೆ ಹೋದರೆ ಆಹಾರದ ಸಮಸ್ಯೆಯನ್ನು ಎದುರಿಸುತ್ತಾರೆ, ಏಕೆಂದರೆ ಸಿಕ್ಕಿದನ್ನೆಲ್ಲ ತಿನ್ನುವುದು ಇವರ ಜಾಯಮಾನವಾಗಿರುವುದಿಲ್ಲ ಹಾಗಾಗಿ. ಶಾಖಾಹಾರಿಗಳ ಈ ಆಹಾರದ ಸಮಸ್ಯೆ ಬೇರೆ ದೇಶದಲ್ಲಿ ಹೇಗೂ ಇದ್ದೆ ಇದೆ ಇತ್ತೀಚಿಗೆ ನಮ್ಮ ರಾಜ್ಯದ ಕೆಲವು ಭಾಗಗಳಲ್ಲೂ ಇದನ್ನು ಅನುಭವಿಸುವಂಥಾಗಿದೆ ಅನ್ನುವುದು ನನಗಾದ ಅನುಭವ. ಲೇಖಕಿ ಆಹಾರದ ವಿಚಾರದಲ್ಲಿ ಪಟ್ಟ ಬವಣೆ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಕೆಲವೊಂದು ಕಷ್ಟಗಳನ್ನು ಕಡೆಗಣಿಸಿ, ಹೊಂದಿಕೊಂಡು ಹೋದರಷ್ಟೇ ಅಷ್ಟು ದೂರ ಹೋಗಿ ಪ್ರವಾಸದ ಸವಿಯನ್ನು ಸವಿಯಬಹುದು ಅನ್ನುವ ಲೇಖಕಿಯ ಮಾತುಗಳು ಪ್ರವಾಸದಲ್ಲಿ ಅವರಿಗೆ ಇರುವ ಉತ್ಸಾಹವನ್ನು ಬಿಂಬಿಸುತ್ತವೆ.

ಬಹಳ ಹಿಂದಿನಿಂದಲೂ ಚೀನಾ- ಭಾರತದ ಸಂಬಂಧ ಅಷ್ಟಕಷ್ಟೇ. ಭಾರತ ಮಾತ್ರವಲ್ಲ ಬೇರೆ ದೇಶಗಳೊಂದಿಗೂ ಚೀನಾದ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದ ಮೊಂಡು ಮನಸ್ಥಿತಿಯ ಜನಗಳೇ ಸಿಗುತ್ತಾರೆ ಅಲ್ಲಿ. ಕರೋನ ಮಹಾಮಾರಿಯನ್ನು ಹುಟ್ಟು ಹಾಕಿದ ಕುಖ್ಯಾತಿ ಹೊಂದಿದ ದೇಶ. ಈ ಮೊಂಡುತನದಿಂದಲೇ ಚೀನಾ ಯಾರೊಂದಿಗೂ ಸೇರಲಾರದೆ ಒಂಟಿಯಾಗಿ ನಿಂತಿದೆ ಇವತ್ತು. ಆದರೆ ಚೀನಾ ದೇಶದಲ್ಲಿ ತಯಾರಾದ ವಸ್ತುಗಳು ಇವತ್ತು ಎಲ್ಲೆಡೆ ವ್ಯಾಪಿಸಿವೆ, ಅದರ ಹಿಡಿತದಿಂದ ಇನ್ನೂ ಮುಕ್ತಿ ದೊರೆತಿಲ್ಲ ಅನ್ನುವುದೊಂದು ಕರಾಳ ಸತ್ಯ. ಚೀನಿ ಜನರು ಉಳಿದ ದೇಶದ ಜನರಿಗಿಂತ ದುಪ್ಪಟ್ಟು ಶ್ರಮ ಜೀವಿಗಳು. 4 -5 ವರ್ಷ ವಯಸ್ಸಿನಿಂದಲೇ ಅವರು ಮಕ್ಕಳನ್ನು ಕರಾಟೆ, ಕವಾಯತ್ತು, ಕಸರತ್ತಿಗೆ ಕಳುಹಿಸಲು ಸಜ್ಜಾಗುತ್ತಾರೆ. ಹಾಗಾಗಿಯೇ ಅವರು ದೈಹಿಕವಾಗಿಯೂ ಸದೃಢರಾಗಿರುತ್ತಾರೆ. ಚೀನಾದ ಮಹಾ ಗೋಡೆ ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಇದನ್ನು ನೋಡಲು ತೆರಳುತ್ತೇವೆ ಅನ್ನುವಾಗ ಲೇಖಕಿಯಲ್ಲಿ ಹೊಮ್ಮುವ ಸಂತಸ, ಉತ್ಸಾಹ ಪದಗಳಾಗಿ ಹರಿದು ಜನರನ್ನು ಆಕರ್ಷಿಸುತ್ತದೆ.

ಮಾವೊ -ತ್ಸೆ -ತುಂಗನ ಇತಿಹಾಸ ಚೀನಾದ ಜನರ ಮನಸ್ಸಲ್ಲಿ ಬಂಡತನ, ಅವರನ್ನು ಹೇಗೆ ಮತ್ತಷ್ಟು ಒರಟುಗೊಳಿಸಿತು ಅನ್ನುವುದನ್ನು ಪರಿಚಯಿಸುತ್ತದೆ. ಇಲ್ಲಿ ಏಳುತ್ತಿದ್ದ ದಂಗೆಗಳು ಆ ದೇಶದ ಆಂತರಿಕ ಕಲಹಕ್ಕೆ, ರಾಜಕೀಯಕ್ಕೆ, ಆಡಳಿತಕ್ಕೆ ಸಾಕ್ಷಿ.

ಮಾವೊ -ತ್ಸೆ -ತುಂಗನ ಕ್ರೂರತನ, ಅವನು ಗುಬ್ಬಿಗಳನ್ನು ಕೊಲ್ಲಲು ನೀಡಿದ ಆದೇಶ, ಪ್ರಕೃತಿಯ ಮೇಲಿನ ಈ ಘೋರ ಅತ್ಯಾಚಾರದಿಂದ ಪ್ರಕೃತಿ ಕೆರಳಿದ ಬಗೆ ಇವೆಲ್ಲವೂ ಹೃದಯವಿದ್ರಾವಕವಾಗಿದೆ. ಮಾವೋ ನ ಈ ಮತಿಗೆಟ್ಟ ನಡೆಯಿಂದಲೇ ಚೀನಾ ಇವತ್ತು ಕಷ್ಟ, ವಿಚಿತ್ರ ರೋಗಗಳ ಗೂಡಾಗಿದೆ ಹಾಗೂ ತಾನೂ ಇದರೊಳಗೆ ಸಿಲುಕಿ ನಲುಗುವುದಲ್ಲದೆ ಇತರ ದೇಶಗಳಿಗೂ ಹರಡಿ ನರಳಿಸುತ್ತಿರುವುದೊಂದು ದುರಂತ.

ಟೆರ್ರಕೋಟ ವಾರಿಯರ್ಸ್ ನ ಕತೆ, ಸಾಕ್ಷ್ಯ ರೂಪದಲ್ಲಿ ದೊರೆತ ಪಳಿಯುಳಿಕೆಗಳು ಹೊಸದೊಂದು ಲೋಕಕ್ಕೆ ಕರೆದೋಯ್ಯುತ್ತದೆ ಓದುಗರನ್ನು. ದೊರೆಯ ಪರ ಆ ರೈತರು, ಜನರು ತೋರುತ್ತಿದ್ದ ವಿಶ್ವಾಸ, ಬದ್ಧತೆ ಮೆಚ್ಚ ತಕ್ಕಂತದ್ದು. ಆ ಉತ್ಕನನದ ಕತೆ ಬಹಳ ರೋಚಕ.

ಸುಂದರ ಗುಹೆಯೊಂದರ ಕುರಿತಾಗಿ ವರ್ಣಿಸುತ್ತಾ ಲೇಖಕಿ ಅಲ್ಲಿನ ಚಿಕಿತ್ಸಾ ಪದ್ಧತಿಗೆ ಬರುತ್ತಾರೆ. ವೈದ್ಯಕೀಯ ರಂಗ ಇವತ್ತು ಜನರ ಪ್ರಾಣ ಉಳಿಸುವುದಕ್ಕಿಂತ ಹೆಚ್ಚಾಗಿ ಇಲ್ಲದ ಕಾಯಿಲೆಗಳನ್ನು ಸೃಷ್ಟಿಸಿ, ಅನಗತ್ಯ ಚಿಕಿತ್ಸೆಗಳನ್ನು ಜನರಿಗೆ ಸೂಚಿಸಿ ಹಣ ಮಾಡುವ ವ್ಯಾಪಾರಿ ಕೇಂದ್ರಗಳಾಗಿವೆ. ಇದು ಚೀನಾದಲ್ಲಿ ಮಾತ್ರವಲ್ಲ ಭಾರತದಲ್ಲೂ ನಡೆಯುತ್ತಿರುವ ಸತ್ಯ. ಅಲ್ಲಿನ ಚಿಕಿತ್ಸಾ ಪದ್ಧತಿ, ವೈದ್ಯಕೀಯ ಕ್ಷೇತ್ರದ ಬಗ್ಗೆ ಲೇಖಕಿ ವಿವರಿಸುವಾಗ ಓದುತ್ತಾ ಹೋದಂತೆ ಅಲ್ಲಿನ ವೈದ್ಯರು ಟೂರಿಸ್ಟ್ ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಚಿಕಿತ್ಸೆ ಪಡೆಯಲು ನೀಡಿದ ಸಲಹೆಗಳನ್ನು ಓದುವಾಗ ಏನೂ ಆಗದೆ ಒಮ್ಮೆ ಅದರಿಂದ ಹೊರ ಬಂದಿರಲಿ ನಮ್ಮವರು ಅನ್ನುವ ಭಾವ ಆವರಿಸಿದ್ದು ಸುಳ್ಳಲ್ಲ. ಅಲ್ಲಿನವರ ಮೋಡಿಗೆ ಒಳಗಾಗದೆ ಹೊರ ಬಂದಿದ್ದನ್ನು ಓದಿದ ನಂತರವೇ ಒಂದು ಸಮಾಧಾನ.

ಜೇಡ್ ಬುದ್ಧ ಟೆಂಪಲ್ ಹಾಗೂ ಕೊನೆಯಲ್ಲಿ ಮತ್ತಷ್ಟು ಕೆಲವು ಆಕರ್ಷಕ ವಿಚಾರಗಳನ್ನು ಉಲ್ಲೇಖಿಸುವುದರೊಂದಿಗೆ ಕೊನೆಗೊಳ್ಳುವ ಚೀನಾ ಪ್ರವಾಸ ಕಥನ. ಎಷ್ಟೇ ತೋರಿಕೆಯ ತಳುಕು ಬಳುಕು ಇದ್ದರೂ ಚೀನಾ ತನ್ನ ಬಡತನ, ಸಿಡುಕುತನ, ಅಹಂಕಾರದ ಹುಳುಕುತನವನ್ನು ಮುಚ್ಚಿಟ್ಟುಕೊಳ್ಳುವಲ್ಲಿ ಸಫಲವಾಗಿಲ್ಲ ಅನ್ನುವುದು ಈ ಪ್ರವಾಸದಲ್ಲಿ ಅರ್ಥವಾಗುತ್ತದೆ. ಕೆಲವು ಕೆಟ್ಟದ್ದು ಮಾತ್ರವಲ್ಲ ಹಲವಾರು ಒಳ್ಳೆಯ ಸಂಗತಿಗಳು ಚೀನಾದಲ್ಲಿ ಇವೆ ಅನ್ನುವುದು ಸುಳ್ಳಲ್ಲ. ಅಷ್ಟಕ್ಕೂ ಎಷ್ಟೇ ಕೆಟ್ಟದಿದ್ದರೂ ಅದರಲ್ಲೂ ಒಳ್ಳೆಯದನ್ನು ಹುಡುಕುವುದು ಭಾರತೀಯರ ರಕ್ತದಲ್ಲೇ ಇದೆ ಅಲ್ಲವೇ?.

ಕೆಲವು ವರ್ಷಗಳ ಹಿಂದೆ ಎಲ್ಲೆಲ್ಲೂ ಸುದ್ದಿ ಮಾಡಿ ಜನಮನ ಗೆದ್ದ ಆಂಗ್ಲ ಚಿತ್ರ ಟೈಟಾನಿಕ್ ನಿಂದ ಪ್ರೇರಿತರಾಗಿ ನೋಡಲೇಬೇಕೆಂದು ಲೇಖಕಿಯ ಮನಸ್ಸಲ್ಲಿ ಆಸೆಯನ್ನು ಹುಟ್ಟು ಹಾಕಿದ ಪ್ರವಾಸ ಅಲಸ್ಕಾದ ಹಡಗುಯಾನ. ಒಂದು ಮನೆಯೊಳಗೆ ಇರುವಾಗ ಮಾತಿನಲ್ಲಿ ಅರುಹದಿದ್ದರೂ ಮನಸುಗಳು ಹೇಗೆ ಬೆಸೆಯುತ್ತವೆ, ಒಬ್ಬರ ಆಲೋಚನೆ ಇನ್ನೊಬ್ಬರ ಮನಸ್ಸನ್ನು ಮುಟ್ಟುತ್ತದೆ ಅನ್ನುವ ಕುರಿತು ಬರೆದ ಕೆಲವು ವಿಚಾರ, ಮಾತುಗಳು ಬಹಳ ಇಷ್ಟವಾದುವು ಹಾಗೂ ಸತ್ಯ ಕೂಡಾ. ನಾವು ಏನನ್ನು ನಿರಂತರವಾಗಿ ಆಲೋಚಿಸುತ್ತ ಇರುತ್ತೇವೋ ಅವುಗಳು ಒಂದು ಸಿಕ್ಸ್ತ್ ಸೆನ್ಸ್, ಅಲೆಗಳು, ತರಂಗಗಳ ರೂಪದಲ್ಲಿ ನಮ್ಮ ಸುತ್ತ ಇರುವವರನ್ನು ತಾಕುತ್ತವೆ . ಹಾಗಾಗಿ ನಾವು ಸದಾ ಸಕಾರಾತ್ಮಕ ಚಿಂತನೆಗಳನ್ನೇ ಮಾಡುತ್ತಿರಬೇಕು ಅನ್ನುವ ಕಾನ್ಸೆಪ್ಟ್ ಬಹಳ ಚೆನ್ನಾಗಿದೆ ಹಾಗೂ ಬದುಕಿನಲ್ಲಿ ನಾವು ಅಳವಡಿಸಿಕೊಳ್ಳಬೇಕಾದಂತದ್ದು.

ಪ್ರವಾಸದಲ್ಲಿ ನಾವು ಬೇರೆ ಬೇರೆ ಮನಸ್ಥಿತಿಯ ಜನರೊಂದಿಗೆ ಬೆರೆಯಬೇಕಾಗುತ್ತದೆ. ಹಾಗಾಗಿ ತಾಳ್ಮೆ, ಸೌಜನ್ಯ, ಸಹನೆ, ಹೊಂದಾಣಿಕೆ ಇವೆಲ್ಲವೂ ನಮ್ಮಲ್ಲಿರಬೇಕಾಗುತ್ತದೆ. ಇದಲ್ಲದೆ ಬೇರೆಯವರೊಂದಿಗೆ ಬೆರೆಯದೆ ನಮ್ಮಷ್ಟಕ್ಕೆ ನಾವು ಸಾಗುತ್ತಿದ್ದರೆ ಒಂಟಿಗಳಾಗಿ ಉಳಿಯುತ್ತೇವೆ. ಯಾರೂ ನಮ್ಮನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಅನ್ನುವುದನ್ನು ಕೆಲವು ಘಟನೆ, ಆದ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸ್ಪಷ್ಟಪಡಿಸುತ್ತಾರೆ ಲೇಖಕಿ. ಎಲ್ಲರೊಂದಿಗೆ ಬೆರೆತು ಹೊಂದಿಕೊಂಡು ಹೋಗುವ ಮನಸ್ಥಿತಿ ಇದ್ದರೆ ಇಡೀ ಜಗತ್ತೇ ಸುಂದರವಾಗುತ್ತದೆ ನಮ್ಮ ಪಾಲಿಗೆ.

ಶುಭ್ರ, ರಮ್ಯ ಮನೋಹರ, ನದಿ ಸರೋವರ, ಮರ-ಗಿಡಗಳಿಂದ ಆವೃತ ತಾಣ, ಪ್ರಕೃತಿ, ಹಿಮದಿಂದಾವೃತ ಪರಿಸರ, ಸ್ವರ್ಗ ಅನ್ನಿಸುವ ಪ್ರದೇಶ, ಹಡಗುಯಾನ, ಆ ಹಡಗಿನೊಳಗಿನ ಐಷಾರಾಮಿ ವ್ಯವಸ್ಥೆಯ ಪರಿಚಯ ಓದುಗರನ್ನೊಂದು ಅದ್ಭುತ ಅನ್ನಿಸುವ ಪ್ರಪಂಚದೊಳಗೆ ಕರೆದೊಯ್ಯುತ್ತದೆ. ಪ್ರತಿಯೊಂದಕ್ಕೂ ಸಿಡಿಮಿಡಿ ಗೊಳ್ಳುತ್ತಿದ್ದ ಜೋಡಿಯೂ ಲೇಖಕಿಯ ಜೊತೆ ಪ್ರವಾಸದ ಕೊನೆಯಾಗುತ್ತಾ ಬರುವಾಗ ಸ್ನೇಹ ಹಸ್ತ ಚಾಚಿ ಹೊಂದಿಕೊಂಡು ಸಾಗುವುದು ಲೇಖಕಿಯ ಸರಳತನ, ಸ್ನೇಹ ಪರ ನಡವಳಿಕೆಯ ಪರಿಚಯ ನೀಡುತ್ತದೆ. ಹಾಗೂ ಈ ಭಾಗ ಮನಸ್ಸಿಗೆ ಬಹಳ ಮುದ ನೀಡುತ್ತದೆ. ಇಂತಹ ಒಂದು ಪ್ರವಾಸವನ್ನು ಕೈಗೊಳ್ಳುವುದು ಅದೃಷ್ಟವಿದ್ದಲ್ಲಿ ಮಾತ್ರ ಸಾಧ್ಯ. ಆದರೆ ಪ್ರವಾಸದ ಸವಿಯನ್ನು ಉಣ ಬಡಿಸುವಲ್ಲಿ ಈ ಪ್ರವಾಸ ಕಥನವು ಸ್ವಲ್ಪವೂ ಹಿಂದುಳಿದಿಲ್ಲ. ಕಲ್ಪನೆಯ ಸುಂದರ ಲೋಕಕ್ಕೆ ಈ ಕೃತಿ ಸೆಳೆದೊಯ್ಯುವುದು ಸುಳ್ಳಲ್ಲ. ತಮ್ಮ ಅನುಭವವನ್ನು ಬರಹದ ರೂಪಕ್ಕೆ ತಂದು ಪುಸ್ತಕ ರೂಪದಲ್ಲಿ ಓದುಗರ ಮುಂದಿಟ್ಟ ಲೇಖಕಿ ವಿಜಯಲಕ್ಷ್ಮಿಯವರಿಗೆ ಧನ್ಯವಾದಗಳು.

- ನಯನ ಬಜಕೂಡ್ಲು

MORE FEATURES

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...