ನಿಟ್ಟುಸಿರುಗಳನ್ನು ತರ್ಕಬದ್ಧವಾಗಿ ಪೋಣಿಸಿಕೊಡುವ “ವರ್ತಮಾನ ಭಾರತ”


'ಈ ಪುಸ್ತಕದಲ್ಲಿ, ದಿಲ್ಲಿಯ ರೈತ ಚಳುವಳಿ, ಜೆ ಎನ್ ಯು, ಭಾಷಾ ನೀತಿಗಳ ಕುರಿತ ಬರೆಹಗಳಲ್ಲಿ ಅವನ್ನು ಢಾಳಾಗಿ ಕಾಣಬಹುದು. ಅವರ ವಿದ್ವತ್ತಿನ ಕ್ಷೇತ್ರದಲ್ಲಿ (ಸಾಹಿತ್ಯ, ಜಾನಪದ) ಅವರ ಮಾತುಗಳಿರಲೀ ಅಥವಾ ಬರೆಹಗಳಿರಲೀ ಬಹಳ ಆಕರ್ಷಕ ಮತ್ತು ಅವರ ಚಿಂತನೆಗಳು ಲಾಜಿಕ್ ಸಹಿತ ಕೇಳುಗ/ಓದುಗರಿಗೆ ತಲುಪಿ, ಅವರನ್ನು ಹೌದು ಹೌದೆನ್ನಿಸುವಂತೆ ಮಾಡಬಲ್ಲವು' ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ರಾಜಾರಾಂ ತಲ್ಲೂರು. ಅವರು ಪುರುಷೋತ್ತಮ ಬಿಳಿಮಲೆ ಅವರ ವರ್ತಮಾನ ಭಾರತ ಕೃತಿಗೆ ಬರೆದ ವಿಮರ್ಶೆ ಇಲ್ಲಿದೆ. 

ಪುರುಷೋತ್ತಮ ಬಿಳಿಮಲೆಯವರ “ವರ್ತಮಾನ ಭಾರತ” ಓದಿ ಮುಗಿಸಿದೆ. ಕರ್ನಾಟಕದಿಂದ ಹೊರಗೆ ಆಯಕಟ್ಟಿನ ಜಾಗದಲ್ಲಿ ನಿಂತು ಕರ್ನಾಟಕವನ್ನು ನೋಡುವ ಒಂದು ಅಪರೂಪದ ಅವಕಾಶ ಪಡೆದಿರುವ ಬಿಳಿಮಲೆಯವರ ಈ ಬರೆಹಗಳು, ಅವರ ಎಕ್ಸ್‌ಪೋಷರ್‌ನ ಕಾರಣಕ್ಕಾಗಿಯೇ ಅನನ್ಯ ದೃಷ್ಟಿಕೋನವನ್ನು ಹೊಂದಿರುತ್ತವೆ.

ಈ ಪುಸ್ತಕದಲ್ಲಿ, ದಿಲ್ಲಿಯ ರೈತ ಚಳುವಳಿ, ಜೆ ಎನ್ ಯು, ಭಾಷಾ ನೀತಿಗಳ ಕುರಿತ ಬರೆಹಗಳಲ್ಲಿ ಅವನ್ನು ಢಾಳಾಗಿ ಕಾಣಬಹುದು. ಅವರ ವಿದ್ವತ್ತಿನ ಕ್ಷೇತ್ರದಲ್ಲಿ (ಸಾಹಿತ್ಯ, ಜಾನಪದ) ಅವರ ಮಾತುಗಳಿರಲೀ ಅಥವಾ ಬರೆಹಗಳಿರಲೀ ಬಹಳ ಆಕರ್ಷಕ ಮತ್ತು ಅವರ ಚಿಂತನೆಗಳು ಲಾಜಿಕ್ ಸಹಿತ ಕೇಳುಗ/ಓದುಗರಿಗೆ ತಲುಪಿ, ಅವರನ್ನು ಹೌದು ಹೌದೆನ್ನಿಸುವಂತೆ ಮಾಡಬಲ್ಲವು… ಇದು 30 ವರ್ಷಗಳ ಹಿಂದೂ ಸತ್ಯ, ಈವತ್ತಿಗೂ ಸತ್ಯ. ಈ ಪುಸ್ತಕದಲ್ಲೂ ಅದರ ಹೊಳಹನ್ನು ಕೊಡಬಲ್ಲ ಹಲವು ಲೇಖನಗಳಿವೆ. ಭಾರತೀಯ ಭಕ್ತಿ ಪರಂಪರೆ ಮತ್ತು ಜಾನಪದ, ಮೌಖಿಕ ಇತಿಹಾಸ, ಲಾವಣಿಗಳು ಮತ್ತು ಟಿಪ್ಪೂ ಸುಲ್ತಾನ್, ಕರ್ನಾಟಕ ಸಂಸ್ಕೄತಿಯ ನೆಲೆಗಳು ಅಂತಹ ಬರೆಹಗಳು. ಹಲವು ಮಹತ್ವದ ಸಂಗತಿಗಳನ್ನು “ಸುಲಿದ ಬಾಳೆಯ ಹಣ್ಣಿನಂದದಿ” ನಮಗೆ ಉಣ್ಣಿಸಬಲ್ಲ ಶೈಲಿ ಅವರಿಗೆ ಮಾತು-ಬರೆಹ ಎರಡರಲ್ಲೂ ಒಗ್ಗಿದೆ.

ಇಲ್ಲಿ ಕೆಲವು ಸಾಮಾಜಿಕ, ರಾಜಕೀಯ, ಆರ್ಥಿಕ ಬರೆಹಗಳೂ ಇವೆ. ಅವರ ಅನುಭವ, ಎಕ್ಸ್‌ಪೋಷರ್‌, ತರ್ಕಗಳನ್ನು ಓದುಗರಿಗೆ ದಾಟಿಸುವ ಶೈಲಿಯ ಕಾರಣಕ್ಕೆ ಅವು ಕೂಡ ಚೆನ್ನಾಗಿ ಓದಿಸಿಕೊಂಡು ಹೋಗುತ್ತವೆ. ಸದ್ಯಕ್ಕೆ ಕನ್ನಡದಲ್ಲಿ ಮಹತ್ವದ ಚಿಂತಕರೂ-ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರೂ ಆಗಿರುವ ಅವರ ಮಾತುಗಳನ್ನು ಗಮನವಿಟ್ಟು ಕೇಳುವುದು ಅಗತ್ಯವಿದೆ. ಸಾಹಿತ್ಯದ ಅಧ್ಯಾಪಕರೊಬ್ಬರು ಸಾಮಾಜಿಕ-ರಾಜಕೀಯ-ಆರ್ಥಿಕ ವಿಚಾರಗಳಿಗೆ ಇಷ್ಟು ತೀವ್ರವಾಗಿ ಸ್ಪಂದಿಸುವುದೇ ಕನ್ನಡದ ಮಟ್ಟಿಗೆ ಮೇಲು ಪಂಕ್ತಿ ಹಾಕಿಕೊಟ್ಟಂತೆ. ಕನ್ನಡದಲ್ಲಿ ಆ ಫಸಲು ಅಷ್ಟು ಕಡಿಮೆ ಇದೆ.

ಇಲ್ಲಿನ ರೈತ ಚಳುವಳಿಯ ಬರೆಹದಲ್ಲಿ ಅವರು ಕನ್ನಡದಲ್ಲಿ ರೈತ ಚಳುವಳಿಗಳ ಕುರಿತು ಬಂದಿರುವ ಸಾಹಿತ್ಯ-ಪುಸ್ತಕಗಳು-ಪ್ರಕಟಣೆಗಳ ಕುರಿತು ಚರ್ಚಿಸಿದ್ದಾರೆ. ಅವರಂತಹ ಹಿರಿಯರು ಬರೆದಾಗ ಅದು ಸತ್ಯವಾಗಿ ಉಳಿದುಬಿಡುತ್ತದೆ. ಆ ಹಿನ್ನೆಲೆಯಲ್ಲಿ ಒಂದು ಪುಟ್ಟ ಮಾಹಿತಿಯನ್ನು ಇಲ್ಲಿ ಪೂರಕವಾಗಿ ದಾಖಲಿಸಬಯಸುತ್ತೇನೆ. ರೈತ ಕಾಯಿದೆಗಳು ಸಂಸತ್ತಿನಲ್ಲಿ ಮಂಡನೆಗೊಂಡದ್ದು ಸೆಪ್ಟಂಬರ್ 17, 2020ರಂದು. ಅದಕ್ಕಿಂತ ನಾಲ್ಕು ತಿಂಗಳ ಮೊದಲೇ (ಮೇ 2020) ಈ ಕಾಯಿದೆಯ ಅಪಾಯಗಳು ಮತ್ತು ಪರಿಣಾಮಗಳ ಕುರಿತು ಕನ್ನಡದಲ್ಲಿ ಹೆಚ್ಚಿನಂಶ ಮೊದಲ ಪುಸ್ತಕವೊಂದು ಬಂದದ್ದು ರಾಜಾರಾಂ ತಲ್ಲೂರು (ಈ ಲೇಖಕ) ಬರೆದ “ದುಪ್ಪಟ್ಟು”. (ಪ್ರಕಾಶಕರು: ಬಹುರೂಪಿ, ಬೆಂಗಳೂರು). ಅದು ಕಾರಣಾಂತರಗಳಿಂದ, ಸಿದ್ಧಗೊಂಡ ಬಳಿಕ ಸುಮಾರು ಆರು ತಿಂಗಳು ವಿಳಂಬವಾಗಿ ಪ್ರಕಟಗೊಂಡಿತ್ತು. ಎರಡು ಮುದ್ರಣಗಳನ್ನು ಕಂಡ ಪುಸ್ತಕ ಅದು. ಇದಲ್ಲದೇ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಪುಸ್ತಕವೊಂದು ಕೂಡ ಸುಮಾರಿಗೆ ಇದೇ ಸಮಯದಲ್ಲಿ ಪ್ರಕಟಗೊಂಡಿತ್ತು. ಅದರ ಹೆಸರು ತಕ್ಷಣಕ್ಕೆ ನೆನಪಿಗೆ ಬರುತ್ತಿಲ್ಲ. ಈ ಮಾಹಿತಿಗಳು ದಾಖಲಿರಲಿ ಎಂಬ ಕಾರಣಕ್ಕೆ ಇಲ್ಲಿ ಹೇಳುತ್ತಿದ್ದೇನೆ.

ಹಾಗೆಯೇ, ಇಲ್ಲಿನ ಲೇಖನವೊಂದರಲ್ಲಿ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ, ನನ್ನ ಪಿಟ್ಕಾಯಣ ಅಂಕಣವನ್ನು ಉಲ್ಲೇಖಿಸಿದ್ದಾರೆ.  ಅದಕ್ಕಾಗಿ ನಾನು ಕೃತಜ್ಞ. 

ಚಿರಂತ ಪ್ರಕಾಶನದ (ಸಂಪರ್ಕ: 86609 66208) ಈ ಪುಸ್ತಕ ಭಾರತದ ಇಂದಿನ ಸ್ಥಿತಿಗಳ ಕುರಿತು ಆಸಕ್ತರೆಲ್ಲರಿಗೆ ಅಗತ್ಯ ಓದು.

MORE FEATURES

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...