‘ಸೋಮದೇವ ಮಹಾಕವಿಯ ‘ಕಥಾಸರಿತ್ಸಾಗರ’ಕ್ಕೆ ಗೊರೂರು ಗೋವಿಂದರಾಜು ಅವರ ಮುನ್ನುಡಿ


"ಸೋಮದೇವನ ಪ್ರಕಾರ ರಾಜ ಅನಂತ ಆತ್ಮಹತ್ಯೆಯಿಂದ ಮರಣಹೊಂದಿದನು. ಅವನ ರಾಣಿ ಸೂರ್ಯವತಿ ಚಿತೆಯನ್ನು ಏರಿ ಪ್ರಾಣಬಿಟ್ಟಳು. ಆ ದುಃಖದ ಸಮಯದಲ್ಲಿ ಸೋಮದೇವನು ಈ ಕಾವ್ಯವನ್ನು ರಚಿಸಿದನು," ಎನ್ನುತ್ತಾರೆ ಗೊರೂರು ಗೋವಿಂದರಾಜು. ಅವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅನುವಾದಿತ ‘ಸೋಮದೇವ ಮಹಾಕವಿಯ ‘ಕಥಾಸರಿತ್ಸಾಗರ’ ಕೃತಿಗೆ ಬರೆದ ಮುನ್ನುಡಿ.

ಸುಮಾರು 2500 ವರುಷಗಳ ಹಿಂದೆ, ಗೌತಮಬುದ್ಧನ ಕಾಲದಲ್ಲಿ ಗುಣಾಢ್ಯ ಎನ್ನುವ ಕವಿಯು ಬೃಹತ್ ಕಥಾ ಎನ್ನುವ ಕಥೆಗಳ ಪುಸ್ತಕವನ್ನು ರಚಿಸಿದನು. ಆ ಕಾಲದಲ್ಲಿ ಉಪಯೋಗದಲ್ಲಿದ್ದ ಭಾಷೆಯ ಹೆಸರು ಪೈಶಾಚಿ. ಅದೇನೂ ಅಂತಹ ಉತ್ತಮ ಭಾಷೆಯಲ್ಲ, ಹಾಗೂ ಪಂಡಿತರುಗಳು ಉಪಯೋಗಿಸುವ ಭಾಷೆಯಲ್ಲ. ಆ ಬೃಹತ್‌ಕಥಾ ಪುಸ್ತಕ ಪೂರ್ಣವಾಗಿ ಕಳೆದುಹೋಗಿದೆ. ಅದರ ವಿಷಯವೊಂದೇ ಉಳಿದಿದೆ. ಆದರೆ, ಒಳ್ಳೆಯ ವಾರ್ತೆ ಏನೆಂದರೆ ಆ ಮಹಾಗ್ರಂಥದ ಕೆಲವು ಭಾಗಗಳು ಉಳಿದುಕೊಂಡಿವೆ. ಸಂಶೋಧನೆಯ ಪ್ರಕಾರ ಮೂರು ಭಾಗಗಳು. ಒಂದನೆ ಭಾಗ ಬೃಹತ್ ಕಥಾಮಂಜರಿ, ಎರಡನೆ ಭಾಗ ಬೃಹತ್ ಕಥಾ ಶ್ಲೋಕಸಂಗ್ರಹ. ಸಂಸ್ಕೃತದ ವಿದ್ಯಾವಂತರ ಪ್ರಕಾರ ಗುಣಾಢ್ಯನನ್ನು ಮಹಾಭಾರತವನ್ನು ಸೃಷ್ಟಿಸಿದ ವ್ಯಾಸ ಮಹರ್ಷಿಗೂ, ರಾಮಾಯಣ ಕಾವ್ಯವನ್ನು ಸೃಷ್ಟಿಸಿದ ವಾಲ್ಮೀಕಿ ಮಹರ್ಷಿಗೂ ಹೋಲಿಸಬಹುದು-ವ್ಯಾಸ ಮತ್ತು ವಾಲ್ಮೀಕಿ ಮಹರ್ಷಿಗಳು ಸಂಸ್ಕೃತದಲ್ಲಿ ಕಾವ್ಯವನ್ನು ರಚಿಸಿದರು. ಗುಣಾಢ್ಯನ ಭಾಷೆ ಅಷ್ಟು ಉತ್ತಮವಾಗಿರಲಿಲ್ಲ.

ಗುಣಾಢ್ಯನಿಂದ ರಚಿಸಲ್ಪಟ್ಟ ಕಾವ್ಯಗಳು ಭಕ್ತಕಥಾಮಂಜರಿ ಮತ್ತು ಸೋಮದೇವನಿಂದ ರಚಿತವಾದ ಕಥಾಸರಿತ್ಸಾಗರ.

ಸೋಮದೇವನು ಬ್ರಾಹ್ಮಣ ರಾಮ ಎಂಬುವನ ಮಗ. ಅವನು ಕಾಶ್ಮೀರದಲ್ಲಿ ಜೀವನ ಮಾಡುತ್ತಿದ್ದ. ಕಥಾಸರಿತ್ಸಾಗರವನ್ನು ಪ್ರಾಯಶಃ 1063-1080ರ ಅವಧಿಯಲ್ಲಿ ಸೃಷ್ಟಿಸಿರಬಹುದು. ಆಗ ಕಾಶ್ಮೀರದ ರಾಜನಾದ ಅನಂತ, ಅವನ ಪತ್ನಿಯ ಹೆಸರು ಸೂರ್ಯವತಿ. ಸೋಮದೇವನು ಆಸ್ಥಾನದಲ್ಲಿ ರಾಣಿಯನ್ನು ಆನಂದಗೊಳಿಸಲು ಈ ಕಥೆಗಳನ್ನು ರಚಿಸಿದನು ಎಂದು ಪಂಡಿತರು ತಿಳಿದಿದ್ದಾರೆ. ಸೋಮದೇವನು ಈ ಕಥೆಗಳನ್ನು ತಾನೇ ಸೃಷ್ಟಿಸಿದನೋ ಅಥವಾ ಸಂಗ್ರಹಿಸಿದನೋ ಎಂದು ಚರ್ಚೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ.

ಸೋಮದೇವನ ಪ್ರಕಾರ ರಾಜ ಅನಂತ ಆತ್ಮಹತ್ಯೆಯಿಂದ ಮರಣಹೊಂದಿದನು. ಅವನ ರಾಣಿ ಸೂರ್ಯವತಿ ಚಿತೆಯನ್ನು ಏರಿ ಪ್ರಾಣಬಿಟ್ಟಳು. ಆ ದುಃಖದ ಸಮಯದಲ್ಲಿ ಸೋಮದೇವನು ಈ ಕಾವ್ಯವನ್ನು ರಚಿಸಿದನು.

ರಾಜ ಅನಂತನಿಗೆ ಕಳಸ ಮತ್ತು ಹರ್ಷ ಎನ್ನುವ ಇಬ್ಬರು ರಾಜಕುಮಾರರು. ಕಳಸನು ಅಧಮನಾಗಿ ನೀತಿರಹಿತ ಜೀವನ ಮಾಡುವವನು. ಆದರೆ ಅವನ ಸಹೋದರ ಹರ್ಷನು ಬಹಳ ಬುದ್ಧಿವಂತ. ಆದರೆ ಬಹಳ ಕಠಿಣ ಮನೋಭಾವದವನು. ಈ ಸಮಯದಲ್ಲಿ ಸೋಮದೇವನು ಈ ಕಾವ್ಯವನ್ನು ರಚಿಸಿದನು ಎನ್ನುವುದು ಹಿನ್ನೆಲೆ.

ಕೋಸಾಂಬಿಯ ರಾಜ್ಯದ ಉದಯನ ಎನ್ನುವ ರಾಜನು ಈ ಕಥೆಗಳ ಬೆನ್ನೆಲುಬು. ಅವನ ಪುತ್ರ ನರವಾಹನದತ್ತನೆಂದು ಹೆಸರು; ಅವನ ಶೌರ್ಯ, ಸುಂದರ ರಾಜಕುಮಾರಿಯರೊಂದಿಗೆ ಪ್ರೇಮದ ಆಟ, ಶತ್ರುಗಳ ಮೇಲೆ ಯುದ್ಧ, ಜಯ ಇವೇ ಕಥಾಸಂಗ್ರಹದ ಮುಖ್ಯಭೂಮಿಕೆ. ನರವಾಹನದತ್ತನು ಭೂಲೋಕ, ಆಕಾಶಲೋಕವನ್ನೆಲ್ಲಾ ಗೆದ್ದು ಸ್ವರ್ಗಲೋಕದಲ್ಲಿ ವಾಸವಾಗಿರುವ ವಿದ್ಯಾಧರ ರಾಜನಾದನು. ಈ ಕಥಾಸಂಗ್ರಹ ಪ್ರಪಂಚದ ಎಲ್ಲಾ ದೇಶಗಳಿಗೂ ಹರಡಿ ವಾಚಕರನ್ನು ಆನಂದಗೊಳಿಸಿದೆ.

ಈ ಮೊದಲೇ ಸಂಸ್ಕೃತ ಭಾಷೆಯಲ್ಲಿ ಕಥಾಸರಿತ್ಸಾಗರ ಪ್ರಕಟಿಸಿದ ಗ್ರಂಥಗಳು ವಾಚಕರಿಗೆ ದೊರೆಯುತ್ತವೆ. ಸಂಸ್ಕೃತದಿಂದ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದವರು ಸಿ.ಹೆಚ್. ಟಾನಿ ಎಂಬುವರು. ಪುಸ್ತಕದ ಹೆಸರು ‘Ocean of the Streams of Story’. ಇದನ್ನು ತರ್ಜುಮೆ ಮಾಡಲು ಟಾನಿಯವರು ನಾಲ್ಕು ವರುಷ, 1880 ರಿಂದ 1884, ತೆಗೆದುಕೊಂಡರು.

Charles Henry Tawney ಅವರ ಸಂಕ್ಷಿಪ್ತ ಜೀವನಚರಿತ್ರೆ ಹೀಗಿದೆ: ಟಾನಿ ಇಂಗ್ಲೆಂಡ್‌ನಲ್ಲಿ ಹುಟ್ಟಿ (1837) ಕೇಂಬ್ರಿಜ್ ಎನ್ನುವ ಪ್ರಪಂಚದಲ್ಲೆಲ್ಲಾ ಅತಿ ಹೆಚ್ಚು ಪ್ರಸಿದ್ಧವಾಗಿರುವ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾವಂತ. ಜರ್ಮನ್ ಭಾಷೆ, ಲ್ಯಾಟಿನ್, ಗ್ರೀಕ್ ಭಾಷೆಗಳನ್ನೆಲ್ಲಾ-ಯೂರೋಪು ಖಂಡದ ಭಾಷೆಗಳಿವು-ಕರಗತ ಮಾಡಿಕೊಂಡು ವಿದ್ಯಾವಂತರಾದವರು. ಅವರಿಗೆ ಸಂಸ್ಕೃತ, ಹಿಂದೂಸ್ಥಾನಿ, ಉರ್ದು, ಪರ್ಶಿಯನ್ ಭಾಷೆಗಳಲ್ಲಿ ಸಹ ಪಾಂಡಿತ್ಯ ಇತ್ತು. ದೇಹಾರೋಗ್ಯದ ಕಾರಣಕ್ಕಾಗಿ ಚಳಿ ಸಹಿಸದೇ, ಭಾರತ ದೇಶಕ್ಕೆ ಬಂದು, ಆಗ ರಾಜಧಾನಿಯಾಗಿದ್ದ ಕಲ್ಕತ್ತಾ ನಗರದಲ್ಲಿ ವಾಸ ಮಾಡುತ್ತಿದ್ದರು.

ಕಲ್ಕತ್ತಾ ನಗರದಲ್ಲಿ ಪ್ರಸಿದ್ಧಿ ಹೊಂದಿರುವ ಪ್ರೆಸಿಡೆನ್ಸಿ ಕಾಲೇಜಿನ ಮುಖ್ಯ ಪ್ರಾಧ್ಯಾಪಕನಾಗಿ 17 ವರ್ಷ ಕಳೆದರು. ಆ ಸಮಯದಲ್ಲಿ ಕಥಾಸರಿತ್ಸಾಗರ ಗ್ರಂಥವನ್ನು ಇಂಗ್ಲಿಷ್ ಭಾಷೆಗೆ ಸಂಸ್ಕೃತ ಭಾಷೆಯಿಂದ ತರ್ಜುಮೆ ಮಾಡಿದರು. 1880-84ರಲ್ಲಿ ಪ್ರತಿ ತಿಂಗಳೂ ಕೆಲವು ಕಥೆಗಳನ್ನು ವಿಶ್ವವಿದ್ಯಾಲಯದ ಮಾಸಪತ್ರಿಕೆಯಲ್ಲಿ ಪ್ರಕಟಿಸಿದರು.

ಟಾನಿಯು ಮುಖ್ಯಪ್ರಾಧ್ಯಾಪಕರಾಗಿರುವ ಸಮಯದಲ್ಲಿ ಜಗತ್ಪ್ರಸಿದ್ಧ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಕೆಲಸಕ್ಕೆ ಅರ್ಜಿ ಹಾಕಿದರು. ಪ್ರೆಸಿಡೆನ್ಸಿ ಕಾಲೇಜಿನ ಇತರ ಅಧಿಕಾರಿಗಳು, ಇಂಗ್ಲೆಂಡಿನ ಕೇಂದ್ರ ಸರ್ಕಾರವು-ಆಗ ಭಾರತ ದೇಶದ ರಾಜಧಾನಿ ಕಲ್ಕತ್ತಾ-ಪ್ರಾಧ್ಯಾಪಕರ ಕೆಲಸ ಬಿಳಿಯರು ಮತ್ತು ಯೂರೋಪಿನವರಿಗೆ ಕಾದಿರಿಸುವ ಆಜ್ಞೆ ಇದ್ದುದರಿಂದ ಜಗದೀಶ್ ಚಂದ್ರ ಬೋಸ್ ಅವರಿಗೆ ಕೆಲಸ ಸಿಗಲಿಲ್ಲ. ಆಗ ಟಾನಿ ಪ್ರಯತ್ನಪಟ್ಟು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ವಾದ ಮಾಡಿ ಬೋಸ್ ಅವರಿಗೆ ಮೂರು ವರುಷದ ತಾತ್ಕಾಲಿಕ ವೃತ್ತಿ ಕೊಡಿಸಿದರು. ಮೂರು ವರುಷ ಕಳೆದ ಮೇಲೆ ಚಂದ್ರ ಬೋಸ್ ಅವರ ವಿದ್ಯಾಬಲ, ಕಾರ್ಯನೀತಿ, ಪ್ರಾಮಾಣಿಕತೆಯ ಸದ್ಗುಣಗಳನ್ನು ಮೆಚ್ಚಿ ಟಾನಿಯು ಶಾಶ್ವತ ಪ್ರಾಧ್ಯಾಪಕನ ಶ್ರೇಣಿಗೆ ಎತ್ತರಿಸಿದರು. ಟಾನಿಯವರು ಕಾಳಿದಾಸನ ಮಾಲವಿಕಾಗ್ನಿಮಿತ್ರ, ಭವಭೂತಿ, ಪ್ರಬಂಧ ಚಿಂತಾಮಣಿ ಮತ್ತು ಇತರ ಸಂಸ್ಕೃತದ ಮಹಾಕಾವ್ಯಗಳನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿ, ನಿವೃತ್ತಿ ಪಡೆದು, 1922ನೇ ಇಸವಿಯಲ್ಲಿ ನಿಧನರಾದರು.

ಕಥಾಸರಿತ್ಸಾಗರದ ಕಥೆಗಳ ಸರಣಿಯನ್ನು 18 ಭಾಗಗಳಲ್ಲಿ ಪ್ರಕಟಿಸಲಾಗಿದೆ. ಸಂಸ್ಕೃತ ಭಾಷೆಯಲ್ಲಿ ಪ್ರತಿ ಭಾಗಕ್ಕೂ ಲಂಬಕ ಎಂದು, ಇಂಗ್ಲಿಷ್ ಭಾಷೆಯಲ್ಲಿ (Book) ಬುಕ್-ಪ್ರತಿ ಲಂಬಕದಲ್ಲಿ ಅನೇಕ ತರಂಗಗಳು-ಇಂಗ್ಲಿಷ್ ಭಾಷೆಯಲ್ಲಿ (Chapter) ಚಾಪ್ಟರ್ ಭಾಗಗಳನ್ನಾಗಿ ಮುದ್ರಿಸಲಾಗಿದೆ. ಈ ಕಾವ್ಯದಲ್ಲಿ ಸುಮಾರು 2,14,000 ಶ್ಲೋಕಗಳು ಮತ್ತು ಗದ್ಯವಾಕ್ಯಗಳು ಪ್ರಕಟವಾಗಿವೆ. ಪೂರ್ಣ ಕಥಾ ಸರಣಿಯಲ್ಲಿ ಸುಮಾರು 66,000 ವಾಕ್ಯಗಳು ಇರುವುದಾಗಿ ಕಂಡುಬರುತ್ತದೆ.

ದಿವಂಗತರಾದ ನನ್ನ ಪೂಜ್ಯ ಪಿತ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಈ ಗ್ರಂಥವನ್ನು ಸುಮಾರು 1949-1952ರ ಅವಧಿಯಲ್ಲಿ ಕನ್ನಡಕ್ಕೆ ತರ್ಜುಮೆ ಮಾಡಿದರು. ಟಾನಿಯವರು 1922ರಲ್ಲಿ ನಿಧನರಾದುದರಿಂದ ಆಗ ಇಂಗ್ಲಿಷಿನಲ್ಲಿ ಪ್ರಕಟವಾದ ಅವರ ಕಥಾಸರಿತ್ಸಾಗರ ನಮ್ಮ ತಂದೆಗೆ ಸಿಕ್ಕಿರಲಿಲ್ಲ. ಅವರು ತರ್ಜುಮೆ ಮಾಡಿದ ಸಂಸ್ಕೃತದಲ್ಲಿರುವ ಪುಸ್ತಕವನ್ನು ಅವರು ಇಟ್ಟುಕೊಂಡಿದ್ದರು. ಆ ಪುಸ್ತಕ ನನ್ನ ಹತ್ತಿರ ಇದೆ.

ಕನ್ನಡಕ್ಕೆ ಪೂರ್ಣ ತರ್ಜುಮೆ ಮಾಡಿದ ಮೇಲೆ ಯಾವ ಕಾರಣಕ್ಕಾಗಿಯೋ ನನಗೆ ತಿಳಿಯದು, ಅದನ್ನು ಮುದ್ರಣ ಮಾಡಲು ಕೊಡಲಿಲ್ಲ. ಈ ತರ್ಜುಮೆಗೆ ಸಹಾಯ ಮಾಡಿದ ದಿವಂಗತ ಶ್ರೀ ನರಸಿಂಹಾಚಾರ್ ಮತ್ತು ದಿವಂಗತ ಶ್ರೀ ಆರ್. ಶ್ರೀನಿವಾಸ ಅಯ್ಯಂಗಾರ್ ಅವರಿಗೆ ಅನೇಕ ಧನ್ಯವಾದಗಳು. ಹಸ್ತಾಕ್ಷರದ ಪ್ರಕಾರ ಶ್ರೀನಿವಾಸ ಅಯ್ಯಂಗಾರ್ ಲಂಬಕ 8 ಬರೆದಿದ್ದಾರೆ. ಶ್ರೀ ನರಸಿಂಹಾಚರ‍್ರು ಅಲ್ಲಲ್ಲಿ ಬರೆದಿದ್ದಾರೆ.

ಅಲ್ಲಲ್ಲಿ ಚದುರಿಹೋಗಿ, ಬೇರೆ ಬೇರೆ ಕಡೆ ಹಳೇ ಪೇಪರಿನಲ್ಲಿ ಕಟ್ಟಿ ಹಾಕಿದ್ದ ಕನ್ನಡದ ತರ್ಜುಮೆಯನ್ನು ಸಂಗ್ರಹಿಸುವ ಕಾರ್ಯ ನನ್ನದಾಯಿತು. ಈ ತರಹ ಸಂಗ್ರಹಿಸಿದ ಸುಮಾರು ಸಾವಿರ ಪುಟಗಳು, ಎಷ್ಟು ಪೂರ್ಣವಾಗಿದೆ ಎಂದು ತೀರ್ಮಾನಿಸುವುದು ನನ್ನ ಮೊದಲನೆ ಕಾರ್ಯವಾಯಿತು. ನಮ್ಮ ತಂದೆ ಅವರು ಸಂಸ್ಕೃತದ ಪುಸ್ತಕದಿಂದ ತರ್ಜುಮೆ ಮಾಡಿದ್ದರು ಅನ್ನುವುದು ಮಾತ್ರ ನನಗೆ ಗೊತ್ತಿತ್ತು.

ನನ್ನ ಕೈಯಲ್ಲಿರುವ ಹಸ್ತಾಕ್ಷರದ ಪುಸ್ತಕವನ್ನು ಟಾನಿಯವರು ಇಂಗ್ಲಿಷ್‌ನಲ್ಲಿ ತರ್ಜುಮೆ ಮಾಡಿದ ಪುಸ್ತಕದೊಂದಿಗೆ ಹೋಲಿಸಿ ನೋಡುವುದು ನನ್ನ ಮೊದಲನೆ ಕೆಲಸವಾಯಿತು. ಇದು ಪ್ರಾಯಶಃ ಇಸವಿ 2000, ಸರಿಯಾಗಿ ಜ್ಞಾಪಕವಿಲ್ಲ. ಕನ್ನಡದ ಪ್ರತಿವಾಕ್ಯವನ್ನು ಶ್ರೀ ಗೊರೂರರ ಹಸ್ತಾಕ್ಷರದಲ್ಲಿ ಇದ್ದುದು, ಇಂಗ್ಲಿಷ್‌ನಲ್ಲಿ ಇರುವ ಟಾನಿಯವರ ಪ್ರತಿವಾಕ್ಯಗಳನ್ನು ಹೋಲಿಸಿ ನೋಡಿದಾಗ ಅವೆರಡೂ ಪೂರ್ಣ ಒಪ್ಪಿಗೆ ಆದಾಗ ನನಗೆ ಬಹಳ ಸಂತೋಷವಾಯಿತು, ಇನ್ನೂ 2-3 ವರುಷಗಳ ಕಾರ್ಯ ಮಿಕ್ಕಿದ್ದರೂ ಸಹ.

ಈ ಸಮಯದಲ್ಲಿ ಇಸವಿ 1992ರಲ್ಲಿ ನಡೆದ ಘಟನೆ ಜ್ಞಾಪಿಸಿಕೊಳ್ಳುತ್ತೇನೆ. ಆ ವರುಷ ನನ್ನ ಪೂಜ್ಯ ಮಾತೃಶ್ರೀ, ಶೇಷಮ್ಮನವರು ಮೃತರಾಗಿ ನಾನು ತಂದೆ ಮತ್ತು ತಾಯಿಯಿಲ್ಲದ ನಿಜವಾದ ಅನಾಥನಾದೆ. ನನ್ನ ಮಾತೃಶ್ರೀಯವರ ಅಂತಿಮ ಕಾರ್ಯಗಳನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿ, ನಾನು ಕೆನಡಾಕ್ಕೆ ಹಿಂದಿರುಗುವ ಸಮಯ ಬಂದಿತು. ಕೆನಡಾ ದೇಶದಲ್ಲಿ ವಿಶ್ವವಿದ್ಯಾಲಯದಲ್ಲಿ ಮುಖ್ಯ ಪ್ರಾಧ್ಯಾಪಕನಾಗಿ ಕೆಲಸ ಮಾಡುವ ಹುದ್ದೆ ನನ್ನದು.

ನನ್ನ ವೈಯಕ್ತಿಕ ಕಾಗದ ಪತ್ರ ಹಾಗೂ ನಾನು ಸಂಗ್ರಹಿಸಿದ್ದ ಕಥಾಸರಿತ್ಸಾಗರ ಹಸ್ತಾಕ್ಷರ ಪುಸ್ತಕವನ್ನು ಇಡಲು ಸ್ಥಳ ಇರಲಿಲ್ಲ. ನನ್ನ ಪ್ರಿಯ ಸ್ನೇಹಿತರೊಬ್ಬರು, ಅನೇಕ ವಿಧಗಳಲ್ಲಿ ಅವರು ನನ್ನ ಸಹೋದರರಂತೆ, ವಿದ್ಯಾವಂತರು, ಕನ್ನಡ ಭಾಷಾ ಪ್ರೇಮಿಗಳು ಮತ್ತು ಜೀವನದಲ್ಲಿ ಬಹಳ ಜನರಿಗೆ ಉಪಕಾರ ಮಾಡಿದವರು. “ನೀವು ಏನೂ ಯೋಚನೆ ಮಾಡಬೇಡಿ. ನನ್ನ ಮನೆಯೇ ನಿಮ್ಮ ಮನೆ ಎಂದು ತಿಳಿದುಕೊಳ್ಳಿ. ನಿಮ್ಮ ಕಾಗದಪತ್ರಗಳನ್ನು ನಮ್ಮ ಮನೆಯಲ್ಲಿ ಇಡಿ” ಎಂದು ಆಹ್ವಾನಿಸಿದರು. ನಾನು ಅದನ್ನು ಕೃತಜ್ಞತೆಯಿಂದ ಒಪ್ಪಿಕೊಂಡೆ.

ಇಪ್ಪತ್ತುಮೂರು ವರುಷಗಳಾದ ಮೇಲೆ ಇಸವಿ 2016ರಲ್ಲಿ, ಬೆಂಗಳೂರಿನಲ್ಲಿ ಸ್ವಂತ ಎನ್ನುವ ಗೃಹಭಾಗ್ಯ ಲಭಿಸಿ, ಕೆಲಸದಿಂದಲೂ ನಿವೃತ್ತಿ ಆದುದರಿಂದ, ಬೆಂಗಳೂರಿನಲ್ಲಿ ಹೆಚ್ಚು ದಿವಸ ಇರುವ ಅವಕಾಶ ಸಿಕ್ಕಿತು.

ನಾನು ಸ್ನೇಹಿತರನ್ನು “ನಿಮ್ಮ ಮನೆಯಲ್ಲಿ ನನ್ನ ಹಳೆಯ ಕಡತ ಒಂದು ಇಟ್ಟಿದ್ದೆ. ಅದನ್ನು ತೆಗೆದುಕೊಂಡು ಹೋಗಲು ಸಾಧ್ಯವೇ” ಎಂದು ಕೇಳಿದೆ. ಅವರು “ಅದಕ್ಕೇನೂ ಅಭ್ಯಂತರವಿಲ್ಲ. ನಿಮ್ಮ ಆಸ್ತಿ ನೀವು ಎಲ್ಲಿಟ್ಟಿದ್ದಿರೋ ಅಲ್ಲೇ ಇದೆ. ಯಾರಿಗೂ ಮುಟ್ಟಲೂ ಸಹ ನಾವು ಬಿಟ್ಟಿಲ್ಲ. ಒಂದೆರಡು ದಿವಸ ಆದ ಮೇಲೆ ಬನ್ನಿ” ಎಂದು ಆಹ್ವಾನಿಸಿದರು.

ಮೂರನೇ ದಿವಸ ಸಂಜೆ ಅವರು ದೂರವಾಣಿಯಲ್ಲಿ ಮಾತಾಡಿ, “ನಾನು ಮನೆಯನ್ನೆಲ್ಲಾ ಹುಡುಕಿದೆ. ಇಲ್ಲಿ ನಿಮ್ಮ ಚೀಲ ಸಿಕ್ಕಿಲ್ಲ. ನೀವೆ ಎಂದೋ ತೆಗೆದುಕೊಂಡು ಹೋಗಿರಬೇಕು. ಸುಮಾರು ಇಪ್ಪತ್ತು ವರ್ಷದ ಮೇಲಿನ ಮಾತು, ಜ್ಞಾಪಕ ಇಲ್ಲ” ಎಂದರು.

ಮಾರನೇ ದಿವಸ, ಅದು ಶನಿವಾರ. ನಾನು ಸ್ನೇಹಿತರ ಮನೆಗೆ ಹೋದೆ. ಕಾಫಿ ತಿಂಡಿ ಆದ ಮೇಲೆ ನಾನು ಹೇಳಿದೆ,“ನಿಮ್ಮ ಮನೆಯಲ್ಲೇ ಇರಲು ಬಂದಿದ್ದೇನೆ. ನನ್ನ ಚೀಲ ಸಿಗುವ ತನಕ ನಾನು ನಿಮ್ಮ ಅತಿಥಿ” ಎಂದು ಹೇಳಿದೆ. ಅವರು ನಗುತ್ತಾ “ಹಾಗಾದರೆ ಇಲ್ಲೇ ಇದ್ದುಬಿಡಿ. ನಮಗೂ ಬಹಳ ಆನಂದ” ಎಂದು ಆಹ್ವಾನಿಸಿದರು.

ಅಂತೂ ಅವರು ತೊಂದರೆ ತೆಗೆದುಕೊಂಡು ಮನೆಯಲ್ಲಿದ್ದ ಎಲ್ಲಾ ಕಡೆಯೂ ಹುಡುಕಿದರೂ ಚೀಲ ಸಿಗಲಿಲ್ಲ. ನಾನು ಮನೆಯ ಹಿಂಭಾಗದಲ್ಲಿದ್ದ ಬೀರುವಿನ ಮೇಲೆ ಇರುವ ಕಾರ್ಡ್ಬೋರ್ಡ್ ಪೆಟ್ಟಿಗೆಯೊಂದನ್ನು ಗಮನಿಸಿದೆ. “ಆ ಪೆಟ್ಟಿಗೆ ಇನ್ನೂ ನೋಡಿಲ್ಲವಲ್ಲ” ಎಂದು ಹೇಳಿದಾಗ ಅವರು “ಅದರಲ್ಲಿ ಏನೂ ಮುಖ್ಯಕಾಗದಪತ್ರ ಇಲ್ಲ. ಬರೀ ಹಳೇ ವರ್ತಮಾನ ಪತ್ರಿಕೆಗಳು” ಎಂದರು. ಆದರೂ ನನ್ನ ಮುಖ ನೋಡಿ, ‘ಇವರು ನನ್ನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಅರ್ಥಮಾಡಿಕೊಂಡು ಕಷ್ಟದಿಂದ ಪೆಟ್ಟಿಗೆಯನ್ನು ಕೆಳಗೆ ಇಳಿಸಿದರು. ಹಳೆಯ ವರ್ತಮಾನ ಪತ್ರಿಕೆಗಳ ಕೆಳಗೆ ನನ್ನ ಚೀಲ ಸಿಕ್ಕಿತು. ನಾವೆಲ್ಲಾ ಸಂತೋಷಪಟ್ಟು ಅಂದು ಸಂಜೆ ಹೋಟೆಲಿನಲ್ಲಿ ಊಟ ಮಾಡಲು ಹೊರಟೆವು, ಖರ್ಚೆಲ್ಲಾ ಅವರೇ ಕೊಟ್ಟರು.

ಅದಾದ ನಂತರ ಸುಮಾರು 4-5 ವರುಷ ನನಗೆ ಆ ಚೀಲದೊಳಗೆ ಇರುವುದು ಏನು ಎಂದು ನೋಡಲು ಸಮಯ ಸಿಗಲಿಲ್ಲ. ಬೆಂಗಳೂರಿಗೆ ಬಂದಾಗ ಮಾತ್ರ ಆ ಅವಕಾಶ ಸಿಕ್ಕಿತು. ಈಗ ಎರಡು ವರುಷಗಳಿಂದ ಈ ಕಥಾ ಸಂಗ್ರಹದ ಕಾರ್ಯ ಮಾಡಿದ್ದೇನೆ.

ಹೀಗೆ ಶ್ರೀ ಗೊರೂರು ಅವರ ಹಸ್ತಪ್ರತಿಯನ್ನು ಟಾನಿಯವರ ಆಂಗ್ಲಭಾಷೆಯ ತರ್ಜುಮೆಯೊಂದಿಗೆ ಒಂದೊಂದು ವಾಕ್ಯವಾಗಿ ಹೋಲಿಸಿ ನೋಡಿದಾಗ ನನಗೆ ತಿಳಿದ ವಿಷಯ : ಲಂಬಕ 4 ರಿಂದ 7, ಒಟ್ಟು ನಾಲ್ಕು ಲಂಬಕಗಳು ಕಳೆದುಹೋಗಿವೆ.

ಕನ್ನಡ ಭಾಷೆಯಲ್ಲಿ ಬರೆಯುವ ಶಕ್ತಿ ಇಲ್ಲದಿದ್ದರೂ ಸಹ, ಇದನ್ನು ನಾನೇ ತರ್ಜುಮೆ ಮಾಡಿದ್ದೇನೆ. ಇದು ವಾಚಕರ ನಿರೀಕ್ಷೆಯ ಉತ್ತಮ ಮಟ್ಟಕ್ಕೆ ಬರದಿದ್ದರೆ ಅದಕ್ಕಾಗಿ ಕ್ಷಮೆ ಬೇಡುತ್ತೇನೆ.

ಇಪ್ಪತ್ತುಮೂರು ವರುಷಗಳ ಕಾಲ ನನ್ನ ಹಳೆಯ ಗಂಟನ್ನು ಕಾಪಾಡಿದ ದಂಪತಿಗಳು, ಶ್ರೀಮತಿ ಪ್ರಭಾ ಮತ್ತು ಶ್ರೀ ನಾಗರಾಜ್ ಅವರಿಗೆ ಸಹಸ್ರ ವಂದನೆಗಳು. ಶ್ರೀ ಗೊರೂರು ಅವರ ಹಸ್ತಪ್ರತಿಯನ್ನು ಕಾಪಾಡಿದುದರಿಂದ, ಹಸ್ತಪ್ರತಿಯನ್ನು ಜೋಪಾನವಾಗಿ ಜೆರಾಕ್ಸ್ ಮಾಡಿದ ಲೋಕೇಶ್ ಹಾಗೂ ಅವರ ಪುತ್ರ ಹನುಮಂತು ಅವರಿಗೆ ವಂದನೆಗಳು. ಐಬಿಹೆಚ್ ಪ್ರಕಾಶನದ ಶ್ರೀ ಸಂಜಯ ಅಡಿಗ ಅವರು ಮುದ್ರಣಕಾರ್ಯದ ಜವಾಬ್ದಾರಿಯನ್ನು ವಹಿಸಿ ಕನ್ನಡ ಪ್ರೇಮಿಗಳಿಗೆ ಈ ಪುಸ್ತಕವನ್ನು ಸುಂದರವಾಗಿ ಮುದ್ರಿಸಿದ್ದಾರೆ. ಇಂಥ ಬೃಹತ್ ಕೃತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸಾಧ್ಯವಾದಷ್ಟು ಮುದ್ರಣ ದೋಷವಿಲ್ಲದಂತೆ ನೋಡಿಕೊಂಡ ಮಿತ್ರರಾದ ಶ್ರೀ ರುದ್ರಮೂರ್ತಿಶಾಸ್ತ್ರಿಯವರಿಗೆ, ಡಿ.ಟಿ.ಪಿ.ಯಲ್ಲಿ ತಜ್ಞ (expert)ರಾದ ಕವಿತ ಜೈಕುಮಾರ ಅವರಿಗೆ ವಂದನೆಗಳು. ಕನ್ನಡ ಓದುವ ಅತ್ಯಂತ ಭಾಗ್ಯವನ್ನು ಪಡೆದಿರುವ ವಾಚಕರಿಗೆಲ್ಲಾ ನಾನು ಚಿರಋಣಿ.

- ಗೊರೂರು ಗೋವಿಂದರಾಜು

 

MORE FEATURES

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...