ತಡಿಕೆಯೊಳಗಿನ ಭಾವಕೋಶ: ಎಂ.ಡಿ.ಚಿತ್ತರಗಿ


'ಇಲ್ಲಿ ಅರಳಿರುವ ಪ್ರಬಂಧಗಳು ಬದುಕಿನ ಕೆಲವಿಷ್ಟು ಹನಿಗಳೇ ಹೊರತು ಪೂರ್ಣರೂಪವಲ್ಲ. ಅದನ್ನು ಬರಹದಲ್ಲಿ ಹಿಡಿದಿಡಲಾಗದು. ಮತ್ತೆ ಮತ್ತೆ ಓದಬೇಕು; ದಣಿವಿಲ್ಲದೆ, ವಿರಾಮವಿಲ್ಲದೆ ಬೊಗಸೆ ಬೊಗಸೆ ಕುಡಿಯಬೇಕು. ಇಲ್ಲವೇ ಜೀವಂತ ಚಿತ್ರವನು ಅಪ್ಪಿಕೊಳ್ಳಬೇಕು' ಎನ್ನುತ್ತಾರೆ ಲೇಖಕ ಎಂ.ಡಿ. ಚಿತ್ತರಗಿ. ಅವರು ಎಚ್.ಎಸ್. ಸತ್ಯನಾರಾಯಣ ಅವರ ಬಿದಿರ ತಡಿಕೆ ಕೃತಿಗೆ ಬರೆದ ವಿಮರ್ಶೆ. 

ಬದುಕೆಂಬುದು ಸುಂದರ ಉದ್ಯಾನವನದಲ್ಲರಳುವ ಮಹಾಕಾವ್ಯ. ದೂರದಿ ನಿಂತು ನೋಡುವ ಸೊಬಗು, ತುಂಬಿಕೊಳ್ಳುವ ಆನಂದ, ಅನುಭವಿಸುವ ಮಾಧುರ್ಯ, ಉದ್ಘರಿಸುವ ಸಂಭ್ರಮಗಳೆಲ್ಲ ಒಂದೆ ಕಡೆಗೆ ಕೂಡಿ, ಕಾಪಿಟ್ಟ ನಂದನವನ. ಬಣ್ಣಬಣ್ಣದ ಗಿಡ-ಮರ-ಎಲೆ-ಹೂ-ಹಣ್ಣು-ಕಾಯಿಗಳು, ಚಿತ್ರಚಿತ್ತಾರದ ಹಕ್ಕಿ-ಪಕ್ಕಿ, ಚಿಟ್ಟೆಗಳು ಹಾಗೂ ಲೆಕ್ಕವಿಲ್ಲದಷ್ಟು ಪರಿಮಳದ ಸುಗ್ಗಿ-ಸೊಬಗು. ಜೊತೆಗೆ ಒಂದಿಷ್ಟು ಕಲ್ಲು-ಮುಳ್ಳು-ಜೇಡ-ಮಾಸಲು ಬಣ್ಣ! ಈ ಎಲ್ಲವೂ ಬದುಕಿನ ಕಾವ್ಯದ ನೆರಳು-ಬೆಳಕಿನ ನಿತ್ಯದ ಆಟ. ಹತ್ತಿರದಿಂದ ಕಣ್ತೆರೆದು ಕಾಣಬೇಕಷ್ಟೆ! ಕಂಡವರಿಗೆ ಸಾಲು-ಸಾಲು ಮಹಾಕಾವ್ಯ; ಕಾಣದವರಿಗೆ ಕತ್ತೆಯ ನಡಿಗೆ. ಇಂತದೊಂದು ಅನುಭವಲೋಕವನು ಕಂಡುಂಡ ಸಹೃದಯಿ ಪ್ರಪಂಚಕೆ ತೆರೆದಿಡುವ ಡಾ.ಎಚ್.ಎಸ್.ಸತ್ಯನಾರಾಯಣರ ‘ಬಿದಿರ ತಡಿಕೆ’ ಓದಿ, ಸುಖಿಸಬಹುದಾದ ಪ್ರಬಂಧ ಸಂಕಲನ.

ಬಿದಿರ ತಡಿಕೆಯ ಹಿಂದೆ ಬುದ್ದಿಭಾವದ ನೂರೆಂಟು ವಿಸ್ಮಯಗಳು. ಕಾಣದ ಕಡಲನು ಕಡೆಕಡೆದು ನಿಲ್ಲಿಸಿದ ಪ್ರಬಂಧದ ಪುತ್ಥಳಿಯಿದು. ಪ್ರಬಂಧಕಾರರ ಆತ್ಮೀಯತೆಯ ಅಪ್ಪುಗೆ, ಗೆಳೆತನ ಹಾಗೂ ಹೃದಯವಂತಿಕೆಯ ಮುತ್ತುಮಣಿಗಳನ್ನು ಒಂಭತ್ತು ಪ್ರಬಂಧಗಳು ತುಂತುಂಬಿ ಸುರಿಯುತ್ತವೆ. ಸ್ವಾನುಭವ ಕಥನಗಳಂತೆ ಕಂಡರೂ ವೈವಿಧ್ಯತೆಯ ಪ್ರಪಂಚವನ್ನು ತೊಟ್ಟುಕೊಂಡೆ ಮಾತಿಗಿಳಿಯುವ ಪ್ರಬಂಧಗಳು ಓದುಗರ ಸ್ವತ್ತಾಗಲು ಹೆಚ್ಚು ಸಮಯ ಬೇಕಿಲ್ಲ. ಬದುಕಿನೂರಿನ ಅಗಣಿತ ಲೋಕದೊಡಲನು ಬಿಚ್ಚಿಟ್ಟು, ಓದುಗರ ಓಟ-ನೋಟದ ವೈಭವದ ಅವಕಾಶವನು ಹಿಗ್ಗಿಸಬಲ್ಲವು. ಅನುಭವಿಸಬೇಕಾದ ಅಗತ್ಯ ಲೋಕವನು ಕಾಣಿಸಬಲ್ಲವು. ಇಲ್ಲಿ ಪ್ರಬಂಧದ ಜೊತೆಗೆ ಕಾವ್ಯವಿದೆ; ಕಥೆಯಿದೆ; ಜಾನಪದವಿದೆ; ಪುರಾಣದ ಪಾತ್ರಗಳ ಜೊತೆಗೆ  ಆಧುನಿಕತೆಯ ಕೂಸುಗಳಿವೆ; ಬಾಲ್ಯದ ತುಂಟತನಗಳಿಂದ ಹಿಡಿದು ಅನುಭವಲೋಕದ ಪರಿಕರಗಳೆಲ್ಲ ರೆಕ್ಕೆ ಬಿಚ್ಚಿಕೊಂಡು ಕುಣಿದಿವೆ. ಕಾವ್ಯವಂತೂ ನೆರೆತೊರೆಯಾಗಿ ತುದಿ-ಮೊದಲೆಲ್ಲ ಬಿಚ್ಚಿಕೊಳ್ಳುತ್ತ ಸಂಭ್ರಮಿಸಿದೆ. ಕಾಲದ ಹಾದಿಗುಂಟ ಎಲ್ಲ ಹಾಡುಗಳು ಕಪ್ಪು-ಬಿಳುಪನ್ನೆಲ್ಲ ಜಾಗ ಸಿಕ್ಕಲ್ಲೆಲ್ಲ ಆವರಿಸುತ್ತ ಚೆಲ್ಲಿ ಹೋಗುತ್ತವೆ.

ಪ್ರಬಂಧಕಾರರ ಆತ್ಮಚರಿತ್ರೆಯ ಜಾಡು ಹಿಡಿದಂತೆ ಕಾಣಿಸುವ ಇಲ್ಲಿನ ಪ್ರಬಂಧಗಳೆಲ್ಲ  ಬದುಕಿನುದ್ದಕ್ಕೂ ಅವರು ಕಂಡುಂಡ ಅನುಭವಗಳು ಪ್ರಾದೇಶಿಕತೆಯ ಗಡಿಯನ್ನು ದಾಟಿ ಸರಳ-ಸಹಜ ಭಾಷೆ ಮತ್ತು ಕ್ರಮದಲ್ಲಿ ತೆರೆದುಕೊಳ್ಳುತ್ತವೆ. ಸರಳ ಸಂಗತಿಗಳನ್ನು ಸೂಕ್ಷ್ಮವಾಗಿ ಗ್ರಹಿಸುವದಲ್ಲದೆ ಅದನ್ನು ದಾಖಲಿಸುವ ಅವರ ಸಹಜ ಪ್ರೀತಿ, ಹಮ್ಮು-ಬಿಮ್ಮುಗಳಿಲ್ಲದ ಒಳಗೊಳ್ಳುವಿವಿಕೆ, ವೃತ್ತಿಬದುಕಿನ ಅವಾಂತರಗಳನ್ನು ನ್ಯಾಯೋಚಿತವಾಗಿ ನೋಡುವ ದೃಷ್ಠಿಕೋನ, ಮುಗ್ಧಪ್ರಪಂಚದೆಡೆಗಿನ ಪ್ರೇಮ, ಮೌಢ್ಯತೆಯೆಡೆಗಿನ ವಿವೇಕ, ಕವಿ-ಕಾವ್ಯದೆಡೆಗಿನ ಸಾಂಗತ್ಯ, ಮುಖ್ಯವಾಗಿ ಬದುಕೆಲ್ಲವನು ತುಂಬು ಪ್ರೀತಿಯಿಂದ ಅಪ್ಪಿಕೊಳ್ಳುವ ಸ್ನೇಹ, ಪ್ರೀತಿ ಹಾಗೂ ಅಭಿಮಾನಗಳೆಲ್ಲವನು ನೈತಿಕತೆಯ ಪರದೆಯಲ್ಲಿ ತೋರುವ, ಕಬಂದ ಬಾಹುಗಳಲ್ಲಿ ಒಪ್ಪಿಸಿ ಅಪ್ಪಿಕೊಳ್ಳುವ ಜೀವನ ಕಥನಗಳ ಗುಚ್ಛವಾಗಿವೆ.

ಇಡೀ ಸಂಕಲನ ಸಮಗ್ರ ಭಾರತವನ್ನು ಪ್ರತಿನಿಧಿಸುವಂತಿದೆ. ಕನ್ನಡ ಕಾವ್ಯಪ್ರಪಂಚದ ಮೇರು ಶಿಖರಗಳೆಲ್ಲವೂ ಎಲ್ಲ ಪ್ರಬಂಧಗಳ ಒಳಮನೆಯ ಸುತ್ತ ಓಡಾಡಿಕೊಂಡಿವೆ. ಕುವೆಂಪು-ಬೇಂದ್ರೆಯಾದಿಯಾಗಿ ಶಿವರುದ್ರಪ್ಪ, ಕಣವಿ, ಪು.ತಿ.ನರಸಿಂಹಾಚರ್ಯರು ಅಜೀವ ಸದಸ್ಯರಂತೆ ಮನೆ ಮಾಡಿಕೊಂಡಿದ್ದಾರೆ. ಜೊತೆಗೆ ಹಾ.ಮಾ.ನಾಯಕ, ಕಾರಂತ, ಸಿ.ಪಿ.ಕೆ. ಕೈಲಾಸಂ, ಗಿರಡ್ಡಿಯವರಂತಹ ವಿಮರ್ಶಕರೂ ಅಲ್ಲಿಗಲ್ಲಿಗೆ ಸಾಣೆ ಹಿಡಿಯುತ್ತಾರೆ. ಸಾಹಿತಿಗಳ ಅಂತರಂಗದ ಕತ್ತಲೆ-ಬೆಳಕಿನ ದರುಶನವೂ ನಕ್ಕು, ಪಕ್ಕಕ್ಕೆ ಸರಿಯುತ್ತದೆ. ಇವರೊಂದಿಗೆ ನೆಹರೂ ಮತ್ತು ಶಾಸ್ತ್ರೀಜಿಯವರು ನೀರೆರೆದ ರಾಜಪಥದುದ್ದಕ್ಕೂ ರಾಜಕುಮಾರ ಹಾಗೂ ಅನಂತನಾಗ್  ಜೊತೆಯಾಗಿ ಹಾಡುತ್ತಾರೆ. ಪುರಾಣದ ನಳ-ಭೀಮರ ಖಾಲಿಪಾತ್ರೆಯ ಪಾಕಸಾಮ್ರಾಜ್ಯ, ಸೊಪ್ಪು, ಹೂವು, ಕಡ್ಲೆಕಾಯಿಯ ಜೊತೆಗೆ ಆಲಸ್ಯವನ್ನು ಮಾರಿ, ಪ್ರೀತಿಯನ್ನು ಉಣಬಡಿಸುವ ಈ ನೆಲದ  ಹಿರಿಯ ತಲೆಮಾರುಗಳ ಪ್ರಪಂಚ, ಪಾತ್ರೆಗಳಿಗೆ ಮಾತ್ರವಲ್ಲದೆ ಬದುಕಿಗೆಲ್ಲ ಕಲಾಯಿ ಹಾಕುವ ಶ್ರಮಿಕವರ್ಗ, ಹದವಾಗಿ ಭಟ್ಟಿ ಇಳಿಸಿದ ಸಾಂಬಾರಿನ ಕಮಲಜ್ಜಿ, ಸ್ನೇಹದ ಕಡಲನ್ನೇ ತಿರುಗಿಸಿದ ಟಿಕ್ಟಾಕ್ ಹೀರೊ ನವೀನ ಮತ್ತು  ಬಂಗಾಳದ ತಾಪಸ್ರೆಲ್ಲ ಸೇರಿ ಬಹುತ್ವದ ಭಾರತವನ್ನೂ ಹಾಗೂ ಗ್ರಾಮ್ಯಭಾರತವನ್ನು ದರ್ಶಿಸುತ್ತಾರೆ. ಜೊತೆಜೊತೆಗೆ ಉಪನ್ಯಾಸಕರ ವೈವಿಧ್ಯ ಮತ್ತು ವೈರುಧ್ಯತೆ, ಬರವಣಿಗೆಯ ಖ್ಯಾತಿಯ ಕಳಸಾಪುರದ ಪ್ರೇಮ, ಶಿಸ್ತು ಹಾಗೂ ಸಹಜ ಪ್ರೀತಿಯಿಂದ ಎದುರಾಗುವ ಮಂಗಳಮುಖಿ, ಮುಗ್ಧಪ್ರಪಂಚವನು ತೆರೆದಿಡುವ ಟಾಟಾ ಮಾಡುವ, ಬ್ಲಾಕ್ಮೇಲ್ ಮಾಡುವ ಹುಡುಗರು, ಪಿನಾಕಪಾಣಿಯ ರುಕಿಬಾಬಾನು, ಪುಣ್ಯಕೋಟಿಯ ಕುಂಟು ಹುಲಿ ಹಾಗೂ ಇನ್ನಿತರ ಪಾತ್ರಗಳೆಲ್ಲ ಬೇವು-ಬೆಲ್ಲವಾಗಿ ಕಾಣಿಸಿಕೊಳ್ಳುತ್ತಾ ರಸಾನಂದ-ಕರ್ಣಾನಂದದ ಜೊತೆಗೆ ಬಂಡಾಯದ ಬಿಸಿಯನ್ನೂ, ನೈತಿಕ ಪಾಠವನ್ನೂ ಬೋಧಿಸುತ್ತವೆ.

ಧ್ಯಾನಸ್ಥ ಸ್ಥಿತಿಯಲ್ಲಿ ಪ್ರಪಂಚವನ್ನು ಕಾಣುವ ಬೀದಿ ಬದಿ ವ್ಯಾಪಾರಿಗಳ ಪ್ರಾಮಾಣಿಕ ಪ್ರಪಂಚದ ಅನಾವರಣದ ಜೊತೆಗೆ ಆರಂಭವಾಗುವ ಪ್ರಬಂಧಗಳು  ರೈಲು ವ್ಯವಸ್ಥೆಯ ಪ್ರತಿನಿಧೀಕರಣದೊಂದಿಗೆ ಪರೀಕ್ಷೆ, ಮೌಲ್ಯಮಾಪನದಂತಹ  ವ್ಯವಸ್ಥೆಯ ಕತ್ತಲೆ-ಬೆಳಕು, ಮುನ್ನುಡಿ-ಬೆನ್ನುಡಿಗಳ ಸುತ್ತಲಿನ ವಾಸ್ತವ ಪ್ರಪಂಚ, ಮುಗ್ಧ ಮಕ್ಕಳ ಮಾಯಾಲೋಕದ ಅಚ್ಚರಿಗಳು, ಮೌಢ್ಯಪ್ರಪಂಚದ ಅನಾವರಣ, ಕನ್ನಡ ಸಾಹಿತ್ಯದ ಕಾವ್ಯಪ್ರಪಂಚ, ಸಿನೆಮಾ ಹಾಡು-ಪಾಡಿನ ಸೊಗಸು, ರೇಡಿಯೋ ಸಾಂಗತ್ಯದ ಸುಖವನ್ನು  ಹಾಗೂ ಸ್ನೇಹಲೋಕದ ತಪ್ಪು-ಒಪ್ಪುಗಳನ್ನು ವಿವಿಧ ಕಥಾನಕಗಳ ಮೂಲಕ ಬಿಚ್ಚಿಡುವ ಪ್ರಬಂಧಗಳು ಓದುಗರ ಸ್ವಾನುಭವದ ಕಥಾನಕಗಳೊಂದಿಗೆ ಜೊತೆಯಾಗುತ್ತವೆ; ನಡೆಯುತ್ತಾ ನಡೆಯುತ್ತಾ ನಮ್ಮವೇ ಪ್ರಬಂಧಗಳಾಗಿಬಿಡುತ್ತವೆ.

ನಮ್ಮ ನೋಟವನ್ನು ವಿಸ್ತರಿಸಬೇಕಾದ ಅಗತ್ಯವನ್ನು ಹೇಳುವ ಅನೇಕ ಪ್ರಬಂಧಗಳು ಗಮನ ಸೆಳೆಯುತ್ತವೆ. ವೃದ್ದಾಪ್ಯದ ಸಂಜೆಯಲ್ಲೂ ತುತ್ತಿನ ಚೀಲದ ಸಮಾಧಾನಕ್ಕೆ ಬೀದಿ ಬದಿಯಲ್ಲಿ ಕುಳಿತು ಪ್ರಾಮಾಣಿಕವಾಗಿ ವ್ಯವಹರಿಸುವ ಜೀವಗಳನ್ನು ನೋಡುವ ದೃಷ್ಠಿಯನ್ನು ಬದಲಿಸಬೇಕಾದ ಸೂಕ್ಷ್ಮವನ್ನು ಹೇಳುವ ಪ್ರಬಂಧವು ಬಾಲ್ಯದ ಹಸಿಹಸಿ ನೆನಪುಗಳನ್ನು ತಂದಿಟ್ಟು ಜೀವನಪ್ರೀತಿಯನ್ನು ಉಕ್ಕಿಸುತ್ತದೆ. “ಸ್ವಾಮೇರ್ದು ಯಾವೂರ್ ರೀ..” ಎಂದು ಮಾತಿಗಿಳಿದು, ಉತ್ತರ ಕರ್ನಾಟಕದ ಭಾಷೆಯಲ್ಲಿ ದೀರ್ಘ ಉಪನ್ಯಾಸವನ್ನೇ ಮಾಡಿದ ಹುಬ್ಬಳ್ಳಿಯ ಅಜ್ಜಿಯ ಆಪ್ತತೆ, ಬದುಕಿನ ಬಗೆಗಿನ ಪ್ರೀತಿ ಹಾಗೂ ಅವಳ ಸದೃಢ ಆರೋಗ್ಯ ಪ್ರಬಂಧಕಾರರನ್ನು ಗಮನ ಸೆಳೆಯುವುದಷ್ಟೇ ಅಲ್ಲ. ವರ್ತಮಾನದ ಮುಖವಾಡಗಳನ್ನು ಹಾಗೂ ಕಾಯಿಲೆಗಳಿಂದ ಬಾಗಿದ ಶ್ರೀಮಂತಿಕೆಯನ್ನು ಅಣುಕಿಸುತ್ತದೆ. ಹೀಗೆ ದಿನನಿತ್ಯ ಎದುರಾಗುವ ಇಂತಹ ನೂರಾರು ಪಾತ್ರಗಳೊಂದಿಗಿನ ವ್ಯವಹಾರದಲ್ಲಿನ ಕ್ರೌರ್ಯ ಯಾವ ಕಾಲಕ್ಕೂ ಖಂಡನಾರ್ಹ. ಅಕ್ಷರದ ಸಂಬಂಧಿಗಳಲ್ಲದಿದ್ದರೂ ನಾಲಿಗೆಯ ತುದಿಯಿಂದ ಪುಂಖಾನುಪುಂಖವಾಗಿ ಹೊರಡುವ ಜನಪದ ತ್ರಿಪದಿಗಳು, ಪುಣ್ಯಕೋಟಿಯಂತಹ ಹಾಡಿಗೆ ಮಿಡಿದು ಕಣ್ಣೀರಾಗುವ ತಾಯ್ತನ, ಅಕ್ಷರದ ಬೆಳಕನ್ನು ಹೇಳಿಕೊಡುವ ಸಹಜಮಾರ್ಗಗಳು ‘ಸಂಸ್ಕಾರದ ರಾಜಮಾರ್ಗ’ವನ್ನೇ ತೆರೆದಿಡುತ್ತವೆ. 

 ಭಾವೈಕ್ಯತೆಯ ಸಂಕೇತಗಾಗಿ ಕಾಣುವ ರೈಲು ವ್ಯವಸ್ಥೆಯನ್ನು ಮೆಚ್ಚುವ ಲೇಖಕರು ಮನುಷ್ಯನ ಮನಸ್ಸನ್ನು ಹಾಗೂ ಬದುಕನ್ನು ರೈಲುಕಂಬಿಗಳಿಗೆ ಹೋಲಿಸಿ ಮೂಗಿನ ನೇರಕ್ಕೆ ಸಾಗುವವರ ಕಿವಿ ಹಿಂಡುತ್ತಾರೆ. ಬದಲಾದ ಕಾಲಘಟ್ಟಕ್ಕನುಗುಣವಾಗಿ ವ್ಯವಸ್ಥೆ ಸುಧಾರಿಸಿದೆ ಎನ್ನಬಹುದಾದರೂ ಅದರ ದೋಷಗಳನ್ನು ನೇರವಾಗಿಯೆ ಖಂಡಿಸುತ್ತಾರೆ. ಸಮಯಪ್ರಜ್ಞೆಯಿಲ್ಲದ ಗಾಡಿಗಳು, ಕೊಳಕಾಗಿರುವ ಶೌಚಾಲಯಗಳು ಮತ್ತು ಮನುಷ್ಯರು, ಗೋಡೆಗಳ ಮೇಲೆ ಭವಿಷ್ಯವನ್ನು ಬರೆಯುವ ಕೊಳಕು ಲೇಖನಿಗಳು, ನಿರ್ಭೀತಿಯಿಂದ ಪ್ರಯಾಣಿಸಲಾಗದ ಸಹಾಯಕತೆ, ಕಳ್ಳರು ಮತ್ತು ದರೋಡೆಕೋರರ ಭಯ, ಶ್ರೇಣೀಕರಣದಂತೆ ಕಾಣುವ ವ್ಯವಸ್ಥೆ ಹಾಗೂ ಅಪರಿಚಿತ ಗ್ರಹಗಳಂತಿರುವ ವಿಶೇಷ ಪ್ರಯಾಣಿಕರು ಮುಂತಾದ ಸಂಗತಿಗಳನ್ನು ಒಂದೇ ಏಟಿಗೆ ಹೊಡೆದುರುಳಿಸಲು ಪ್ರಯತ್ನಿಸುತ್ತಾರೆ. ಸಾಮಾನ್ಯರೊಂದಿಗಿನ ಪ್ರಯಾಣದಲ್ಲಿ ಬಹುತ್ವದ ಭಾರತವನ್ನು ಕಾಣಬಯಸುತ್ತಾರೆ.  ಬೇಜವಾಬ್ದಾರಿ ಅಧ್ಯಾಪಕರ ಪಾಷಂಡಿತನ, ವಿದ್ಯಾರ್ಥಿಗಳ ಮನಸ್ಥಿತಿಗಳನ್ನು ನಿರ್ಭಿಡೆಯಿಂದ ಖಂಡಿಸಿ, ಇಡೀ ಪರೀಕ್ಷಾ ವ್ಯವಸ್ಥೆಯ ಬಗೆಗೆ ಆತಂಕಪಡುವ ಲೇಖಕರು ಪಾವಿತ್ರ್ಯತೆಯ ಕಾರ್ಯಕ್ಕೆ ಸುಧಾರಣೆಯ ಮಲಾಮು ಹಚ್ಚಲು ಪ್ರಯತ್ನಿಸುತ್ತಾರೆ. ಜೊತೆಗೆ ನಿರ್ಭೀತಿಯಿಂದಿರುವ ವಿದ್ಯಾರ್ಥಿಗಳನ್ನು ಮೆಚ್ಚುವುದರ ಮೂಲಕ ಸುಧಾರಣೆಗೆ ಇಂಬು ನೀಡುತ್ತಾರೆ. 

 ಬೃಹತ್ತಾದ ಸಭೆ-ಸಮಾರಂಭಗಳು ಮಾತ್ರವಲ್ಲದೆ ದೊಡ್ಡ ದೊಡ್ಡ ಉತ್ಸವಗಳಲ್ಲಿ ಜೀವಂತವಾಗಿ ಕಾಣುವ ನಳಪಾಕರ ವೃತ್ತಾಂತವನ್ನು ಚರ್ಚಿಸುವ ಲೇಖಕರು ‘ದಿನ ಪೂರ್ತಿ ಬೆಂಕಿಯೊಂದಿಗೆ ಸರಸವಾಡಬೇಕಾದ ಹೋಟಲ್ಲುಗಳ ಅಡುಗೆ ಭಟ್ಟರ ನೆನೆದು ಮರುಗುವ ಮೂಲಕ ಮತ್ತೆ ಓದುಗರ, ಸಮಾಜದ ನೋಟವನ್ನು ಸೆಳೆಯುತ್ತಾರೆ. ಪ್ರಶ್ನಿಸಲಾಗದ ಪುರಾಣಕಾವ್ಯದ ನಳ-ಭೀಮರ ಪಾಕಪ್ರಾವಿಣ್ಯತೆಯ ಪುರಾವೆಯನ್ನು ಪ್ರಶ್ನಿಸುವ ಲೇಖಕರು ಅಲಿಖಿತ ನಿಯಮಗಳ ಗೆರೆಯಲ್ಲಿ ನಿತ್ಯದ ಅಡುಗೆಮನೆಯಿಂದ ಗಂಡಸರನ್ನು ನಿಷೇದಿಸಿರುವ ಸಂಗತಿಯನ್ನು ಪ್ರಶ್ನಿಸುತ್ತಾರೆ ಹಾಗೂ ಬಂಡಾಯದ ಬಾವುಟ ಹಾರಿಸಲೂ ಸಿದ್ದರಾಗಿದ್ದಾರೆ. ಆದರೆ ಇವರ ಸಂಘದ ಸಂಖ್ಯಾಬಲ ಹೆಚ್ಚಾಗುವುದರಲ್ಲಿ ನನಗೆ ಅನುಮಾನವಿದೆ. ಆದರೆ ಅಡುಗೆಯಿಂದಾಗುವ ನಿರಾಳತೆಗಾಗಿಯಾದರೂ, ಸಾಂಬಾರಿನಂತೆ ಕಾವ್ಯವನ್ನು ಭಟ್ಟಿ ಇಳಿಸಲಾದರೂ ಒಂದಷ್ಟು ಸಂಘದ ಸಂಖ್ಯಾಬಲ ಹೆಚ್ಚಬಹುದು. ಸ್ವತಃ ಪಾಕಪ್ರವೀಣರಾದ ಲೇಖಕರ ಬಿಚ್ಚುಮನಸ್ಸನ್ನು ಅಭಿನಂದಿಸಲೇಬೇಕು. ತಮ್ಮ ಮನೆಯೊಳಗಿನ ಮೌಢ್ಯತೆಯನ್ನು ಬಿಚ್ಚಿಟ್ಟು, ತಮ್ಮನ್ನು ಮಹಾತಿಂಡೀಪೋತನೆಂದು ಒಪ್ಪಿಕೊಂಡು, ವಿ.ಸೀ. ತಾರಮಯ್ಯರನ್ನು ಬಯಲುಗೊಳಿಸುವ ಲೇಖಕರ ಮುಕ್ತತೆಯನ್ನು ಅಭಿನಂದಿಸಲೇಬೇಕು; ಸಮಾಜದ ದೃಷ್ಠಿಕೋನವನ್ನು ಬದಲಿಸಲೇಬೇಕು. ಇದು ಎಲ್ಲ ಲೇಖಕರ ಅಗತ್ಯ ಹಾಗೂ ಅನಿವಾರ್ಯ ಸಂಗತಿಗಳಾಗಬೇಕು. ಹಾಗಾದಾಗ ಇನ್ನೂ ಅತ್ಯುತ್ತಮ ಆತ್ಮಕಥನಗಳು ಕನ್ನಡಸಾಹಿತ್ಯಕ್ಕೆ ದಕ್ಕಬಹುದು.

 ಮುನ್ನಡಿಗೆ ಸೂಕ್ತ ವ್ಯಾಖ್ಯಾನವನ್ನು ನೀಡುವ ಪ್ರಬಂಧಕಾರರು ‘ಮುನ್ನುಡಿಕೋರರ’ ಜವಾಬ್ದಾರಿಗಳನ್ನು ನೆನಪಿಸಿದ್ದು ಮೆಚ್ಚತಕ್ಕದ್ದು. ಮುನ್ನುಡಿಗೊಂದು ದೀರ್ಘ ಪರಂಪರೆಯಿದ್ದು, ಕನ್ನಡದ ಶ್ರೇಷ್ಠಾತಿಶ್ರೇಷ್ಠರೆಲ್ಲ ಅದರಲ್ಲಿ ಕೃಷಿಗೈದಿದ್ದು, ಅದೊಂದು ಬೆಲೆ ಕಟ್ಟಲಾಗದ ಸಾಹಿತ್ಯ ಪ್ರಕಾರ. ಇಂದಿನ ಮುನ್ನುಡಿಕಾರರ ಮನಸ್ಥಿತಿಗಳನ್ನು, ಓರಿಜಿನಲ್-ಡುಪ್ಲೀಕೇಟ್ಗಳನ್ನು, ರೇಟು-ಕಂಡೀಶನ್ಗಳನ್ನು ಬೆತ್ತಲುಗೊಳಿಸಿದ್ದಾರೆ. ಜೊತೆಗೆ ಯುವ ಲೇಖಕರ, ಕೃತಘ್ನರ ದುರ್ವರ್ತನೆಗಳನ್ನು ಹೀಗಳೆಯಲು ಮರೆಯದ ಲೇಖಕರು ಇಬ್ಬರ ಮನಸ್ಥಿತಿಗಳನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಮುನ್ನುಡಿಯ ಅಗತ್ಯತೆಯನ್ನು ಹಾಗೂ ಪಾಲಿಸಬೇಕಾದ ನಿಯಮಗಳನ್ನು ನೆನಪಿಸುವ ಮೂಲಕ ಭವಿಷ್ಯದ ಹಾದಿಗೆ ದೀಪವಿಟ್ಟಿದ್ದಾರೆ. 

ನಿಜವಾದ ಸುಖ ಬೇಕೆಂದರೆ ಕವಿತೆ ಬರೆಯಲೇಬೇಕೆಂದಿಲ್ಲ. ಓದಿನಲ್ಲಿನ ಸುಖವನ್ನು ನೆನಪಿಸುವ ಲೇಖಕರ ನಡೆಯನ್ನು ಅಭಿನಂದಿಸಲೇಬೇಕು. ಸ್ವಾರ್ಥವಿಲ್ಲದ ಈ ಸುಖಕ್ಕಿಂತ ಮತ್ತಾವ ಸುಖ ಈ ಲೋಕದಲ್ಲಿದೆ? ಕನ್ನಡದ ಕವಿ ಮತ್ತು ಕವಿತೆಗಳು ಶಿಕ್ಷಣದ ಮೂಲಕ ಸಾಹಿತ್ಯಿಕ ಪರಿಚಾರಕರಾಗಿ ಕೆಲಸ ಮಾಡಿದ ರೀತಿಯನ್ನು ಮೆಚ್ಚುವ ಲೇಖಕರು ತಪ್ಪುತಪ್ಪಾದ ಉಚ್ಚಾರಣೆಯನ್ನು ಸ್ವವಿಮರ್ಶೆಯ ಮೂಲಕ ಖಂಡಿಸುತ್ತಾರೆ. ಆ ಮೂಲಕ ಭಾಷೆಯ, ಸಾಹಿತ್ಯದ ಶುದ್ಧತೆ, ಸ್ಪಷ್ಟತೆಗೆ ಮುದ್ರೆ ಒತ್ತುತ್ತಾರೆ. ಜೊತೆಗೆ ‘ಅಲಂಪು’ವಿನ ಇಂಪನ್ನು, ತಂಪನ್ನೂ ದರ್ಶಿಸುತ್ತಾರೆ.

ಮಕ್ಕಳ ಮುಗ್ಧ ಪ್ರಪಂಚವನ್ನು ಸಮೃದ್ಧವಾಗಿ ತೆರೆದಿಡುವ ಲೇಖಕರು ಮಕ್ಕಳ ಪ್ರತಿಭಾವಿಲಾಸವನ್ನು ಹಾಗೂ ಮಕ್ಕಳ ಮನೋಲೋಕದ ಕೆಲವು ಮಾದರಿಗಳನ್ನು ಪರಿಚಯಿಸುತ್ತಾರೆ. ಅವರ ಶಿಕ್ಷಣದಲ್ಲಿ ಶಿಕ್ಷಕರು ಹಾಗೂ ಪೋಷಕರ ಜವಾಬ್ದಾರಿಯನ್ನು ಒತ್ತಿ ಹೇಳುತ್ತಾರೆ. ಮನೋವಿಜ್ಞಾನದ ಅರಿವಿನ ಅಗತ್ಯತೆ ಎಂದಿಗಿಂತಲೂ ಇಂದು ಹೆಚ್ಚು ಅಗತ್ಯವಿದ್ದು, ಪಲಾಯನವಾದಿ ಶಿಕ್ಷಕರು ಹಾಗೂ ಒತ್ತಾಯದ ಹೇರಿಕೆಯನ್ನು ತಿರಸ್ಕರಿಸುತ್ತಾರೆ. ನಿಜವಾದ ಶಾಲೆ ಹೇಗಿರಬೇಕು? ನಿಜವಾದ ಪ್ರಶಸ್ತಿ ಹೇಗಿರಬೇಕೆಂಬುದನ್ನು ಹೇಳುತ್ತಾ ಇಂದಿನ ವರ್ತಮಾನಕ್ಕೆ ಚಾಟಿ ಬೀಸುತ್ತಾರೆ. ತಮಗೆ ಜ್ಞಾನಪೀಠ ಕೊಡಿಸಿದ ರಯಾನ್ ನನ್ನು, ಪ್ರಶ್ನಿಸುವ ಸಾಂಬಾರಮ್ಮನನ್ನು ಮರೆಯಲಾರರು. ಇಲ್ಲಿ ಲೇಖಕರು ಶಿಕ್ಷಣತಜ್ಞರಂತೆ ಭಾಸವಾಗುತ್ತಾರೆ. 

ಇಂದಿನ ಮೊಬೈಲ್ ಮಾದ್ಯಮದ ಅವಾಂತರಗಳ ಮುಂದೆ ರೇಡಿಯೋ ಇಂದಿನ ಒಂದೊಳ್ಳೆಯ ಪ್ರಪಂಚವಾಗಿ ಕಾಣುತ್ತದೆ. ಆಲಿಸುವ ಸಾಮರ್ಥ್ಯವನ್ನು ಪ್ರಬಲಗೊಳಿಸುವ, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅಂದಿನ ಮನೆಮಾತಾಗಿದ್ದ ರೇಡಿಯೋ ಶಿಕ್ಷಣದ ಭಾಗವೂ ಆಗಿತ್ತು. ಹಾಡು, ಸಂಗೀತ, ಚರ್ಚೆ, ಭಾಷಣಗಳಿಗೆ ಪೂರಕವಾಗಿದ್ದ ಅದು ಸಮಸ್ಯೆ, ಜಗಳಗಳಿಗೆ ಪರಿಹಾರವಾಗಿತ್ತು. ಸಂಭ್ರಮಕೆ ಸಾಕ್ಷಿಯಾಗಿತ್ತು; ಭವಿಷ್ಯದ ಬದುಕಿಗೆ ಬೆಳಕಾಗಿತ್ತು; ಹಳೆಯ ಹಾಡುಗಳ ಸ್ವರ, ಲಯ, ಮಾಧುರ್ಯಗಳನ್ನು ನೆನೆಯುವುದರ ಮೂಲಕ ಸೂಚ್ಯವಾಗಿ ಇಂದಿನ ಹರಕು-ಮುರುಕು ಸಿನೆಮಾ ಹಾಡುಗಳನ್ನು ಛೇಡಿಸಿದ್ದಾರೆ. ಇಂದಿಗೂ ಉಳಿಸಿಕೊಂಡಿರುವ ಅದರ ಕಂಪನ್ನು ನೆನೆನೆನೆದು ಸಂಭ್ರಮಿಸುತ್ತಾರೆ. 

ಸ್ನೇಹಕ್ಕೊಂದು ಮಹಾಸೇತುವೆಯಂತಿರುವ ಎಚ್.ಎಸ್.ಸತ್ಯನಾರಾಯಣರವರು ಅಪಾರ ಹೃದಯ ಶ್ರೀಮಂತಿಕೆಯ ಸರಳ ಸಹಜ ಮನುಷ್ಯರು. ಅದಕ್ಕೆ ಸಾಕ್ಷಿಯಾದ ಕಾರ್ಪೆಂಟರನ ಸಾಂಗತ್ಯ, ಭಾಷೆಯ ಗಡಿಯನ್ನು ಮೀರಿದ ಕಲ್ಕತ್ತಾದ ತಾಪಸ್ ಕಾಯಲ್, ಅಪರಿಚಿತ ಗೆಳೆಯರೊಂದಿಗಿನ ಒಡನಾಟ, ಒಳಪುಟಗಳಲ್ಲಿನ ಹೃದಯಮಿಡಿತಗಳು, ವಯಸ್ಸಿನ ಮಿತಿಯಿಲ್ಲದೆ ಮುಖಪುಟದ ತುಂಬ ಗೋಚರವಾಗುವ ಸ್ನೇಹಲೋಕ ಅವರ ವ್ಯಕ್ತಿತ್ವಕ್ಕೊಂದು  ಕನ್ನಡಿ. ಈ ಹಾದಿಯಲ್ಲಿನ ಕಪ್ಪುಚುಕ್ಕೆಗಳನ್ನು ದಾಟಿ ಸ್ನೇಹದ ಹಸ್ತವನ್ನು ಚಾಚುತ್ತಲೇ ಸಾಗುವ, ಸ್ನೇಹದ ಪ್ರತೀಕವಾಗಿ ಬರೆಸಿಕೊಂಡಿರುವ ಕೊನೆಯ ಪ್ರಬಂಧವು ನೂರೆಂಟು ಭಾವನೆಗಳನ್ನು ಬುಗ್ಗೆಯಂತೆ ಚಿಮ್ಮಿಸುತ್ತದೆ. ಜೊತೆಗೆ ಸ್ನೇಹಕ್ಕೊಂದು ಹೊಸಭಾಷ್ಯವನ್ನು ಬರೆದಂತಿದೆ.

ಒಟ್ಟಾರೆಯಾಗಿ ಇಲ್ಲಿ ಅರಳಿರುವ ಪ್ರಬಂಧಗಳು ಬದುಕಿನ ಕೆಲವಿಷ್ಟು ಹನಿಗಳೇ ಹೊರತು ಪೂರ್ಣರೂಪವಲ್ಲ. ಅದನ್ನು ಬರಹದಲ್ಲಿ ಹಿಡಿದಿಡಲಾಗದು. ಮತ್ತೆ ಮತ್ತೆ ಓದಬೇಕು; ದಣಿವಿಲ್ಲದೆ, ವಿರಾಮವಿಲ್ಲದೆ ಬೊಗಸೆ ಬೊಗಸೆ ಕುಡಿಯಬೇಕು. ಇಲ್ಲವೇ ಜೀವಂತ ಚಿತ್ರವನು ಅಪ್ಪಿಕೊಳ್ಳಬೇಕು. ಬಿದಿರ ತಡಿಕೆಯ ಒಟ್ಟು ನೋಟ ವಿಭಿನ್ನವಾದದ್ದು. ಪ್ರಬಂಧವೆಂದ ತಕ್ಷಣ ತಾಳುವ ಸರಳತೆಯ, ಸಹಜತೆಯ, ಹಾಸ್ಯದ ಭಾವವನ್ನಿಲ್ಲಿ ತಾಳಲು ಅವಕಾಶ ನೀಡದೆ ನವಿರಾಗಿಯೇ ಎದುರಾಗುವ ಗಂಭೀರ ವಿಚಾರಗಳನ್ನು ಮುಖ್ಯಭೂಮಿಕೆಯಲ್ಲಿಟ್ಟು ಚರ್ಚಿಸಬೇಕೆಂದು ಒತ್ತಾಯಿಸುತ್ತವೆ; ಬಂಡಾಯದ ಬಿಸಿಗೆ, ಓರೆ-ಕೋರೆಗಳಿಗೆ ವೈಚಾರಿಕತೆಯ ಸ್ಪರ್ಶ ನೀಡಿ ಒಟ್ಟು ನಡೆ-ನುಡಿಯನ್ನು ವಯೋಮಾನ ಹಾಗೂ ಪ್ರಾದೇಶಿಕತೆಯ ಹಂಗಿಲ್ಲದೆ ಬದಲಿಸಿಕೊಳ್ಳಬೇಕಾದ, ಸೂಕ್ಷ್ಮತೆಗಳನ್ನು ತೊಡಿಸಿಕೊಳ್ಳಬೇಕಾದ ಅಗತ್ಯತೆಯನ್ನು ಒತ್ತಿ ಒತ್ತಿ ಸಾರುತ್ತವೆ.

* * * * *

ಎಂ.ಡಿ.ಚಿತ್ತರಗಿ
ಕನ್ನಡ ಪ್ರಾಧ್ಯಾಪಕರು
ಹುನಗುಂದ
ಮೊ: 9686019177

 

MORE FEATURES

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...