ತೆರೆಮರೆಯ ಹತ್ತಾರು ಜೀವಗಳ ಬದುಕು ಇಲ್ಲಿ ಅಕ್ಷರವಾಗಿವೆ


'ನಂದೀಶ್‌ರಿಗೆ ಕನ್ನಡ ಸಾಹಿತ್ಯದಲ್ಲಿ ಅತೀವ ಆಸಕ್ತಿ. ಕುವೆಂಪು, ತೇಜಸ್ವಿ, ಕಾಯ್ಕಿಣಿಯರೇ ಇವರಿಗೆ ಸ್ಫೂರ್ತಿ. ಅನುಗುಣವಾಗಿ ಇಲ್ಲಿ ಅವರೆಲ್ಲರ ಬಗ್ಗೆ ಹಲವಾರು ಲೇಖನಗಳಿವೆ. ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರೊಡನೇ ಒಂದು ಆತ್ಮೀಯ ಸಂದರ್ಶನ ಸಹ ಇದೆ' ಎನ್ನುತ್ತಾರೆ ಲೇಖಕ ಡಾ. ಪ್ರದೀಪ್ ಕೆಂಜಿಗೆ. ಅವರು ಪತ್ರಕರ್ತ, ಲೇಖಕ ನಂದೀಶ್ ಬಂಕೇನಹಳ್ಳಿ ಅವರ ಕಣ್ಣ ಕನ್ನಡಿಯಲ್ಲಿ-1 ಕೃತಿಗೆ ಬರೆದ ಅರ್ಥಪೂರ್ಣ ಮುನ್ನುಡಿ ನಿಮ್ಮ ಓದಿಗಾಗಿ.

ಇದು ಕೇವಲ ಹತ್ತು ಹನ್ನೆರಡು ವರ್ಷಗಳ ಸಂಗತಿ.

ಇದೊಂದು ಮೂರಾಲ್ಕು ರಸ್ತೆಗಳು ಸೇರುವ ಊರು. ಎಡಬಲಕ್ಕೆ ಹೊರಳಿದರೆ ನಿತ್ಯ ಹಸಿರು ಹೊದ್ದ ಸಹ್ಯಾದ್ರಿ ಗಿರಿಶ್ರೇಣಿ. ದೂರದ ತಪ್ಪಲಿನಲ್ಲೆಲ್ಲೊ ಕಂಡು ಕಾಣದಂತೆ ಮಂಜಿನಲ್ಲಿ ಮಾಯವಾಗುವ ಕುಗ್ರಾಮಗಳು. ವಿಳಾಸ ಕಳೆದುಕೊಂಡ ಚದುರಿದ ಮನೆಗಳು. ಅದು ಬಿಟ್ಟು ಮುಂದಕ್ಕೆ ಮುಗ್ಗರಿಸಿದರೆ ಎಂದೋ ಇದ್ದ ಅಥವಾ ಇರದ ಊರಿನ ದಿಕ್ಕು ತೋರಿಸುವ ಕೈಗಂಬ. ಧರ್ಮಸ್ಥಳ, ಸುಬ್ರಮಣ್ಯ ದಾಟಿದರೆ ವಾಣಿಜ್ಯ ನಗರಿ ಕುಡ್ಲ. ಬೆನ್ನ ಹಿಂದೆ ವಾಣಿಜ್ಯ ಮರೆತ ವಹಿವಾಟಿನಲ್ಲಿ ತೊಡಗಿಸಿಕೊಂಡ ಮೂಡಿಗೆರೆ, ಬಣಕಲ್. ನಡು ರಾತ್ರಿ ನಿದ್ದೆಗೆ ಬಿದ್ದಿದ್ದ ಪ್ರಯಾಣಿಕರನ್ನು ಎಬ್ಬಿಸಲು ಬಸ್ ಕಂಡಕ್ಟರ್ 'ಯಾಶ್ರೀ ಕೊಟ್ಟಿಗೆಹಾರ' ಎಂದು ಕೂಗಿದಾಗ ಅಷ್ಟೆ ಆ ಊರಿನ ಹೆಸರು ಗುರುತಾಗುತ್ತಿದ್ದದ್ದು. ಈಗ ಕಾಲ ಬದಲಾಗಿದೆ. ವಿಲ್ಲುಪುರಂ ಹೈವೆ ಕೊಟ್ಟಿಗೆಹಾರದ ಮೂಲಕ ಹಾದು ಹೋಗುತ್ತಿದೆ. ತನ್ನ ಜೊತೆಗೆ ಭಾರತಾದ್ಯಂತ ಬೀಸುತ್ತಿರುವ ಆರ್ಥಿಕ, ಸಾಮಾಜಿಕ ಪಲ್ಲಟದ ಸುಂಟರಗಾಳಿಯನ್ನು ಹೊತ್ತು ತಂದಿದೆ. ಎಡಬಲದ ಗಿರಿಗಳ ಬೋಳುನೆತ್ತಿಯ ಮೇಲೆ, ಬೆಂಗಳೂರಿನಲ್ಲಿ ನಿಖರ ವಿಳಾಸ ಬಿತ್ತರಿಸುವ, ರಾತ್ರಿ ಇಡಿ ಮಿಂಚುವ ದೀಪಗಳ ರೆಸಾರ್ಟ್‌ಗಳು ಬಂದಿವೆ. ಲಂಡನ್, ನ್ಯೂಯಾರ್ಕ್ ಕಾಫಿ ಮಾರುಕಟ್ಟೆಯ ಬಗ್ಗೆ ತಲೆಕೆಡಿಸಿಕೊಳ್ಳುವ ವರ್ತಕರು ಇಲ್ಲಿದ್ದಾರೆ. ಸ್ವತಃ ಕಾರು ಬೈಕುಗಳನ್ನು ಏರಿ ಅಡಿಕೆ ತೋಟಕ್ಕೆ ಧಾವಿಸುವ ಕಾರ್ಮಿಕರು, ಪರಕ್ಕಿಂತ ಇಹದತ್ತಲ್ಲೇ ಮುಖಮಾಡಿ ಘಟ್ಟ ಇಳಿಯುತ್ತಿರುವ ಯಾತ್ರಿಕರು ಇವರನ್ನೆಲ್ಲಾ ಓಲೈಸುವ ಅನಿವಾರ್ಯತೆ ಈಗ ಕೊಟ್ಟಿಗೆಹಾರಕ್ಕಿದೆ. ಅಂತೆ ಹತ್ತಾರು ಹೋಟೆಲ್‌ಗಳು, ತರಹೇವಾರಿ ಅಂಗಡಿಗಳು, ವ್ಯಾಪಾರ ವ್ಯವಹಾರಗಳು ತಲೆ ಎತ್ತಿವೆ. ಜೊತೆಗೆ ಮಾದಕ ವಸ್ತುಗಳ ಜಾಲ, ಅನೈತಿಕ ಚಟುವಟಿಕೆಗಳ ಕೇಂದ್ರ ಆಗುತ್ತಿದೆ. ಅಂತೂ ಸುತ್ತಮುತ್ತಲಿನ ಸಣ್ಣಪುಟ್ಟ ಕೃಷಿಕರು ಸಹ 'ನಮ್ಮ ಒಂದೆ ತ್ವಾಟಕ್ಕಿಂತ ಇಲ್ಲಿನ ಒಂದು ನೀರುದೋಸೆ ಕಾವಲಿನೇ ಹೆಚ್ಚು ಲಾಭ ತರುತ್ತೆ' ಅನ್ನುವಂತಾಗಿದೆ.

ಇಲ್ಲಿ ಹೈವೆ ನಿಮಿತ್ತ ಮಾತ್ರ. ಬದಲಾವಣೆಯ ಹಾದಿ ಅಂತ್ಯಗಳು ಸುಲಭಗ್ರಾಹ್ಯವಾಗುವುದಿಲ್ಲ. ಅದು ಬೀರುವ ಪರಿಣಾಮ ಮಾತ್ರ ನಿತ್ಯ ವೇದ್ಯ. ಸಾಮಾನ್ಯ ಜನರಿಗೆ ಅದು ಪ್ರತಿ ದಿನದ ಅನುಭವ.

ಕಿರಿಯ ಮಿತ್ರ ನಂದೀಶ್ ತಮ್ಮ ಅಂಕಣ ಬರಹಗಳ ಮೂಲಕ ಈ ಅನುಭವಗಳನ್ನು ಅರ್ಥೈಸುವ, ಓದುಗರೊಂದಿಗೆ ಹಂಚಿಕೊಳ್ಳುವ ಯತ್ನದಲ್ಲಿದ್ದಾರೆ. ಪ್ರತಿ ವಾರ ಅವರು ಸ್ಥಳೀಯ ಪತ್ರಿಕೆಯೊಂದಕ್ಕೆ ಬರೆದ ಅಂಕಣಗಳ ಸಂಕಲನ ಇದು. ವ್ಯಕ್ತಿ, ವಸ್ತು, ವಿಷಯಗಳಿಗೆ ಬರವಿಲ್ಲದ ಕೊಟ್ಟಿಗೆಹಾರದ ತಮ್ಮ ಪುಟ್ಟ ಸ್ಟುಡಿಯೊದಲ್ಲಿ ಕುಳಿತು ಬೆರಗು, ಅಚ್ಚರಿ, ಕುತೂಹಲದಿಂದ ಲೋಕವನ್ನು ನೋಡುತ್ತಾ ಬದುಕನ್ನು ಕೆದಕುತ್ತಾ ಹೊಮ್ಮಿದ ಲೇಖನಗಳಿವು.

ಅಂಕಣ ಬರಹಗಳಿಗೆ ಹಲವು ಪರಿಮಿತಿಗಳಿರುತ್ತವೆ. ನಿಯತಕಾಲ ಮತ್ತು ನಿಯಮಿತ ಪುಟಸಂಖ್ಯೆಗಳ ಒತ್ತಡದ ಜೊತೆಗೆ ಓದುಗರಿಗೆ ರುಚಿಸುವಂತೆ ಆಕರ್ಷಕವಾಗಿಸುವಂತೆ ಬರೆಯುವ ಅನಿವಾರ್ಯತೆ ಇರುತ್ತದೆ. ಸದಾ ಸಾಹಿತ್ಯದ ಗುಂಗಿನಲ್ಲಿರುವ ನಂದೀಶ್, ಈ ಪರಿಮಿತಿಗಳೊಳಗೆ ಸೃಜನಶೀಲರಾಗುತ್ತಾ ಸಣ್ಣಕತೆ, ಪ್ರಬಂಧ, ಅನುಭವ ಕಥನ ಹೀಗೆ ಹಲವು ಪ್ರಕಾರಗಳನ್ನು ಇಲ್ಲಿ ಉಪಯೋಗಿಸಿದ್ದಾರೆ. ಆದರೆ ಅವರು ಅನನ್ಯ ಅನಿಸುವುದು ಇದರಲ್ಲಿರುವ ವ್ಯಕ್ತಿ ಸಂದರ್ಶನಗಳಿಂದ. ಸಮಾಜದ ಮುಖ್ಯವಾಹಿನಿಯಿಂದ ಉಪೇಕ್ಷಿಸಲ್ಪಟ್ಟ, ಅನಿವಾರ್ಯವಾಗಿ ಕೆಲವೊಮ್ಮೆ ಸ್ವಇಚ್ಛೆಯಿಂದ ದೂರಾಗಿ ಬದುಕು ಸಾಗಿಸುತ್ತಿರುವ ಹಲವು ಜೀವಿಗಳ ಅಪರೂಪದ ಸಂದರ್ಶನಗಳು ಇಲ್ಲಿವೆ. ತಾವೇ ಸ್ವತಃ ಮೂಲೆಮೂಲೆಯ ಹಳ್ಳಿಗಳಿಗೆ ಹೋಗಿ ಅಮಾಯಕ ಜೀವಿಗಳನ್ನು ಭೇಟಿ ಮಾಡಿ ಪುರುಸೊತ್ತಾಗಿ ಅವರೊಡನೇ ಬೆರೆತು ಮಾಡಿರುವ ಈ ಸಂದರ್ಶನಗಳು ಮನ ತಟ್ಟುತ್ತವೆ. ತನ್ನ ಹೆತ್ತಮ್ಮನಿಗೆ ಹೆರಿಗೆ ಮಾಡಿಸಿದ ಹತ್ತು ವರ್ಷದ ಪುಟ್ಟ ಬಾಲೆ, ಮುಂದೆ ಸೂಲಗಿತ್ತಿಯಾಗಿ ಬಡಜನರ ಆಸರೆಯಾಗಿ ಬದುಕಿನ ಸಾರ್ಥಕ್ಯ ಕಂಡುಕೊಂಡಿರುವ ಕಮಲಮ್ಮ, ಸಮಾಜದ ಅಮಾನವೀಯ ನಡೆ ನುಡಿಗೆ ಸೆಡ್ಡು ಹೊಡೆದು ಬದುಕುತ್ತಿರುವ ದಿಟ್ಟೆ ಮಂಗಳಮುಖಿ ಸ್ಫೂರ್ತಿ, ಹೆತ್ತವರನ್ನು ನಲವತ್ತೆರಡು ವರ್ಷದಿಂದ ಹುಡುಕುತ್ತಲ್ಲೆ ಇರುವ ಅಬ್ಬಾಸ್, ಬಡಜನರ ಸೇವೆಗೆಂದೆ ಹುಟ್ಟಿದಂತಿರುವ ಆಂಬುಲೆನ್ಸ್ ಆರೀಪ್ ಇಂತಹ ತೆರೆಯ ಮರೆಯ ಹತ್ತಾರು ಜೀವಗಳು ಮನಬಿಚ್ಚಿ ಬದುಕನ್ನು ಹಂಚಿಕೊಂಡಿದ್ದಾರೆ.

ಚಿತಗಾರವೊಂದರಲ್ಲಿ ಶವಗಳಿಗೆ ಅಗ್ನಿಸ್ಪರ್ಶ ಮಾಡುತ್ತಾ ಒಬ್ಬಂಟಿಯಾಗಿ ರಾತ್ರಿ ಇಡಿ ಮಸಣವನ್ನು ಕಾಯುವ ಕಾಯಕದ ಭಾಗ್ಯಮ್ಮ ಹೇಳುವ ಮಾತುಗಳು ಇವು "ಈ ಸ್ಮಶಾನ ಶಾಂತವಾದ ಜಾಗ. ಹೊರಗಡೆ ಪ್ರಪಂಚ ನೋಡಿದ್ರೆ ಹೆದರಿಕೆ ನನಗೆ" ಇಂದಿನ ಡಿಜಿಟಲ್ ಯುಗದ ವೇಗ ಉತ್ಕರ್ಷದ ಹಿನ್ನೆಲೆಯಲ್ಲಿ ಬಹುಜನರ ಸ್ಥಿತಿ ಮತ್ತು ವಿಹ್ವಲತೆ ಇದೆ ತೆರೆನಾದದ್ದು.

ಇನ್ನೊಂದು ಮನದಲ್ಲಿ ಉಳಿಯುವ ಸಂದರ್ಶನ ನರಸಿಂಹ ಹೆಬ್ಬಾರರದ್ದು. ಭಾರತ ಚೀನಾ ಯುದ್ಧ ಸಮಯ ಅಂದರೆ ಆರು ದಶಕಗಳಿಂದ ದಿನದ ಒಂದು ಹೊತ್ತಿನ ಊಟ ಬಿಟ್ಟು ಉಳಿಸಿದ ಹಣವನ್ನು ಪ್ರತಿ ತಿಂಗಳು ಭಾರತದ ಸೈನ್ಯಕ್ಕೆ ಕಳಿಸುತ್ತಿರುವ ದೇಶಪ್ರೇಮಿ ಇವರು. “ಗಡಿ ಕಾಯುವ ಯೋಧ ಮತ್ತು ಅನ್ನ ಬೆಳೆಯುವ ರೈತ ಇವರಿಬ್ಬರ ಋಣ ಪ್ರತಿಯೊಬ್ಬರ ಮೇಲಿದೆ" ಅನ್ನುತ್ತಾರೆ. "ದೇಶ ನನಗೇನೂ ಕೊಟ್ಟಿದೆ ಅನ್ನುವುದಕ್ಕಿಂತ ದೇಶಕ್ಕೆ ನಾವೇನೂ ಕೊಟ್ಟಿದ್ದೇವೆ ಅನ್ನುವುದು ಮುಖ್ಯ" ಎನ್ನುವಾಗ ಓದುಗರ ಎದೆ ತುಂಬಿ ಬರುತ್ತದೆ. ಆದರೆ ಇಂತಹ ಅಸಂಖ್ಯಾತ ದೇಶಪ್ರೇಮಿಗಳ ಭಾವನೆಗಳನ್ನು ನಮ್ಮ ವ್ಯವಸ್ಥೆ ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿದೆ ಅಂದರೆ, ಸೈನಿಕರ ಶವಪೆಟ್ಟಿಗೆಯ ಹಗರಣದಿಂದ ಹಿಡಿದು ಸಾವಿರಾರು ಕೋಟಿಗಳ ಶಸ್ತ್ರಾಸ್ತ್ರಗಳ ಹಗರಣಗಳ ದೊಡ್ಡ ಪಟ್ಟಿಯೇ ನಮ್ಮೆದುರಿಗೆ ಇದೆ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಇಡಿ ಜಗತ್ತಿನಾದ್ಯಂತ ವ್ಯಾಪಿಸಿರುವ ವ್ಯಾಧಿ. ಪ್ರಸ್ತುತದ ಪ್ರಮುಖ ಇತಿಹಾಸಕಾರ, ಚಿಂತಕ ಯುವಾಲ್ ಹರಾರೆ ಅನ್ನುತ್ತಾನೆ "ಈಗ ನಾವು ದೇಶಕ್ಕಾಗಿ ಏನು ಮಾಡಿದ್ದೇನೆ ಎಂದು ಕೇಳಿ ಕೊಳ್ಳುವ ಕಾಲದಿಂದ ಮುಂದೆ ಹೋಗಲೇ ಬೇಕಾಗಿದೆ. ನಮ್ಮ ದೇಶ ಮನುಕುಲದ ಉಳಿವಿಗೆ ಆ ಮೂಲಕ ನನ್ನ ಉಳಿವಿಗೆ ಏನು ಮಾಡಿದೆ ಎಂದು ಕೇಳಬೇಕಾದ ಕಾಲ ಬಂದಿದೆ" ಅಣುಸಮರ ಸಾಧ್ಯತೆ ಹಾಗೂ ಪರಿಸರ ವಿನಾಶದ ಹಿನ್ನಲೆಯಲ್ಲಿ ಆತ ನುಡಿದ ಮಾತುಗಳಿವು.

ನಂದೀಶ್‌ರಿಗೆ ಕನ್ನಡ ಸಾಹಿತ್ಯದಲ್ಲಿ ಅತೀವ ಆಸಕ್ತಿ. ಕುವೆಂಪು, ತೇಜಸ್ವಿ, ಕಾಯ್ಕಿಣಿಯರೇ ಇವರಿಗೆ ಸ್ಫೂರ್ತಿ. ಅನುಗುಣವಾಗಿ ಇಲ್ಲಿ ಅವರೆಲ್ಲರ ಬಗ್ಗೆ ಹಲವಾರು ಲೇಖನಗಳಿವೆ. ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರೊಡನೇ ಒಂದು ಆತ್ಮೀಯ ಸಂದರ್ಶನ ಸಹ ಇದೆ. ಹಾಗೆ ಸಿನಿಮಾ ರಂಗದ ಬಗ್ಗೆ ಸಹ ಕೆಲವು ಅಂಕಣಗಳಿವೆ. ಜನರ ಆಸಕ್ತಿಗೆ ಸ್ಪಂದಿಸಿರುವ ಬರಹಗಳು.

ಸಾಹಿತ್ಯ ಸೃಷ್ಟಿ ಮತ್ತು ಪತ್ರಿಕಾ ಬರವಣಿಗೆ ಅಪರೂಪವಲ್ಲದ, ಹಲವು ಸಲ ಪರಸ್ಪರ ಪೂರಕ ಕ್ರಿಯೆಗಳು. ಬಹಳಷ್ಟು ಪ್ರಖ್ಯಾತ ಸಾಹಿತಿಗಳು ಎರಡರಲ್ಲೂ ಸಹಜವೆಂಬಂತೆ ತೊಡಗಿಸಿಕೊಂಡಿರುವುದನ್ನು ಕಾಣುತ್ತೇವೆ. ಗೆಳೆಯ ನಂದೀಶ್ ಸಹ ಇಂತಹ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗೆ ಈ ಪ್ರಕಟಣೆಯಲ್ಲಿ ತಮ್ಮ ನಿಲುವು ಕಾಳಜಿ ಹಾಗೂ ಪ್ರಾಮಾಣಿಕತೆಯನ್ನು ಸ್ಪಷ್ಟಪಡಿಸಿದ್ದಾರೆ. ಅವರ ಓದಿನ ಮತ್ತು ಅರಿವಿನ ಹರವು ಮತ್ತು ಆಳ ಹೆಚ್ಚಿದಂತೆ ಇನ್ನೂ ಉತ್ತಮ ಬರಹಗಳನ್ನು ಖಂಡಿತ ನಿರೀಕ್ಷಿಸಬಹುದು. ಮುಂದಿನ ಪಯಣಕ್ಕೆ ಶುಭ ಹಾರೈಕೆಗಳು.

ಡಾ. ಪ್ರದೀಪ್ ಕೆಂಜಿಗೆ,
ಲೇಖಕರು ಮತ್ತು ಸಂಶೋಧಕರು

 

MORE FEATURES

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...