ವಾರದ ಲೇಖಕ ವಿಶೇಷದಲ್ಲಿ ‘ಕವಿಭೂಷಣ’ ಬೆಟಗೇರಿ ಕೃಷ್ಣಶರ್ಮ ಸ್ಪೆಷಲ್‌


ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕಾದಂಬರಿಕಾರ, ಕವಿ, ಪತ್ರಿಕೋದ್ಯಮಿ ‘ಆನಂದಕಂದ’ ಕಾವ್ಯನಾಮಧಾರಿತ ಬೆಟಗೇರಿ ಕೃಷ್ಣಶರ್ಮ ಕುರಿತ ಒಳನೋಟ.

'ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು'.. ಈ ಹಾಡನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು ಆನಂದಕಂದ. ಅಂದರೆ ಆನಂದ ಕಂದ ಕಾವ್ಯನಾಮದಿಂದ ಪ್ರಸಿದ್ಧರಾಗಿ, ಕವಿಭೂಷಣ ಎಂದೇ ಪುರಸ್ಕೃತರಾದವರು ಬೆಟಗೇರಿ ಕೃಷ್ಣಶರ್ಮ.

ಬೆಟಗೇರಿ ಕೃಷ್ಣಶರ್ಮ ಅವರು 1900 ಏಪ್ರಿಲ್ 16ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ.

ಬಾಲ್ಯದಿಂದಲೇ ಕವನರಚನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಕೃಷ್ಣಶರ್ಮ ಅವರಿಗೆ, ತಾಯಿಯ ಬಾಯಲ್ಲಿ ಕೇಳಿದ ದಾಸರ ಭಕ್ತಿ ಗೀತೆಗಳು, ಜನಪದದ ಲಾವಣಿಗಳು ಬರವಣಿಗೆಯತ್ತ ಪ್ರೇರೇಪಿಸಿದವು. 1918ರಲ್ಲಿ ಇವರ ಅನೇಕ ಕವನಗಳು ಧಾರವಾಡದ ಕವಿತಾ ಪತ್ರಿಕೆ ‘ಪ್ರಭಾತ’ ಪ್ರಕಟವಾದವು. ಇವರ ಕವನಗಳನ್ನು ಮೆಚ್ಚಿದ ಕಾವ್ಯಾನಂದರು ಕೃಷ್ಣಶರ್ಮ ಅವರಿಗೆ "ಕವಿಭೂಷಣ"ಎಂಬ ಬಿರುದನ್ನು ಕೊಟ್ಟರು.

ಕೃಷ್ಣಶರ್ಮರು 12ನೇ ವರ್ಷದವನಿರುವಾಗ ತಂದೆ, 15ನೇ ವರ್ಷಕ್ಕೆ ಅಣ್ಣ ಹಣಮಂತರಾಯ, 18ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ 14ನೇ ವಯಸ್ಸಿನಲ್ಲಿ ವಿಷಮಶೀತ ಜ್ವರ ಹಾಗೂ 15ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. 1928ರಲ್ಲಿ ತುಳಸೀಬಾಯಿಯೊಂದಿಗೆ ಮದುವೆಯಾದರು. ಕೃಷ್ಣಶರ್ಮರು 56 ವಯಸ್ಸಿನವರಿದ್ದಾಗ ಮಗಳು ಹಾಗೂ ಮರು ವರ್ಷವೇ ಪತ್ನಿ ಕೂಡ ತೀರಿ ಹೋದರು. ಹೀಗೆ ಸಾಲು ಸಾಲು ಸಾವುಗಳು ಅವರನ್ನು ಕಾಡಿತ್ತು.

ಇನ್ನು ಇವರ ಬರವಣಿಗೆಯ ಮಗ್ಗುಲನ್ನು ನೋಡುವುದಾದರೆ, ಆನಂದಕಂದ ಎನ್ನುವ ಕಾವ್ಯನಾಮದಿಂದ ಕವನ, ಸಣ್ಣಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶುಸಾಹಿತ್ಯ, ಮೀಮಾಂಸೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ ಮತ್ತು ಪತ್ರಿಕಾ ಸಂಪಾದನೆಗಳಂತಹ ನಿರಂತರ ಕಾಯಕಗಳ ಮೂಲಕ ಇಡೀ ನಾಡನ್ನು ಬೆಳಗಿ, ಕನ್ನಡ ನಾಡಿನ ಅಸಂಖ್ಯಾತ ಪ್ರತಿಭೆಗಳನ್ನೂ ಹುಟ್ಟುಹಾಕಿದರು.

ರಾಷ್ಟ್ರೀಯ ಚಳುವಳಿಗಾಗಿ, ಕನ್ನಡ ಸ್ವಯಂಸೇವಕರಿಗಾಗಿ, ಕಾಂಗ್ರೆಸ್ ಅಧಿವೇಶನಗಳಿಗಾಗಿ ಅವರು ಕವನ ರಚಿಸಿ ಕೊಟ್ಟರು.

ಭಾರತದ ಸ್ವಾತಂತ್ರ್ಯ ಪ್ರಾಪ್ತಿ, ಕರ್ನಾಟಕತ್ವದ ಜಾಗೃತಿ ಮತ್ತು ಕರ್ನಾಟಕ ಏಕೀಕರಣಕ್ಕೆ ತಮ್ಮ ಶಕ್ತಿ ಸರ್ವಸ್ವವನ್ನೂ ಧಾರೆಯೆರೆದು ದುಡಿದ ಕನ್ನಡ ಸಾಹಿತಿಗಳಲ್ಲಿ ಇವರದು ಸಿಂಹಪಾಲು.

ನಾಡ ಅಭಿಮಾನ ಎಚ್ಚರಿಸಲು ನಾಡಹಬ್ಬದ ಆಚರಣೆ ಎಂಬ ಕಲ್ಪನೆ ಇವರದೇ. ಅದಕ್ಕಾಗಿ ಇವರು ಕನ್ನಡ ನಾಡನ್ನೆಲ್ಲಸುತ್ತಿದರು. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಜನ ಜಾಗೃತಿಗಾಗಿ ಬಳಸಿ, ಆ ಇತಿಹಾಸವನ್ನು ತಮ್ಮ ಮೂರು ಕಾದಂಬರಿಗಳಿಗೆ ವಸ್ತುವಾಗಿ ಮಾಡಿಕೊಂಡರು.

ಕೃತಿಗಳು; ತಿರಕರ ಪಿಡುಗು, ನವಿಲು ಗರಿ, ಜನಪದ ಜೀವನ, ಮಗಳ ಮದುವೆ, ವಿರಹಿಣಿ, ಸಂಸಾರ, ಬಡತನದ ಬಾಳು, ಕರ್ನಾಟಕ ಜನಜೀವನ, ರಾಜಯೋಗಿ,ನನ್ನ ನೆನಪುಗಳು(ಆತ್ಮಚರಿತ್ರೆ) ಹೀಗೆ 50ಕ್ಕಿಂತಲೂ ಹೆಚ್ಚಿನ ಕೃತಿಗಳನ್ನು ಹೊರತಂದಿದ್ದಾರೆ.

ಇವರು ತಮ್ಮ ಬಹುಪಾಲು ತಮ್ಮ ಜೀವನವನ್ನು ಧಾರವಾಡದಲ್ಲಿ ಕಳೆದು 1982 ಅಕ್ಟೋಬರ್ 30ರಂದು ಧಾರವಾಡದಲ್ಲಿಯೇ ನಿಧನರಾದರು.

MORE FEATURES

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...

‘ಪಾತಕ ಲೋಕ’ ತರುಣರಿಗೆ ಅತ್ಯಂತ ಆಕರ್ಷಣೀಯ ವಸ್ತು

16-05-2024 ಬೆಂಗಳೂರು

"ನಾ ಕಂಡ ಈ ಭೂಗತ ಜಗತ್ತಿನಲ್ಲಿ ಬೆಂಗಳೂರು ನಗರ ಹಾಗೂ ಮುಂಬೈ ನಗರದ ರೌಡಿಗಳ ಸಂಪರ್ಕ ಹಾಗೂ ಮಂಗಳೂರು ನಗರದ ರೌಡಿಗಳ ...