ನಾನು ನ್ಯಾಷನಲ್‌ ನಾನಿ : ಸುಧಾಮೂರ್ತಿ

Date: 20-01-2023

Location: ಜೈಪುರ


ಜೈಪುರ ಸಾಹಿತ್ಯ ಉತ್ಸವದ ಎರಡನೇ ದಿನವಾದ ಇಂದು ಮತ್ತಷ್ಟು ಕಳೆಗಟ್ಟಿದೆ. ಕುತೂಹಲಭರಿತ ಗೋಷ್ಠಿಗಳು ಸಾಹಿತ್ಯಾಸಕ್ತರು ಹಾಗೂ ಚಿಂತಕರನ್ನು ಉತ್ಸವ ತನ್ನತ್ತ ಸೆಳೆದುಕೊಳ್ಳುತ್ತಿದೆ. ಕನ್ನಡತಿ, ಇನ್ಫೋಸಿಸ್‌ ಫೌಂಡೇಷನ್‌ನ ಸುಧಾಮೂರ್ತಿ ಅವರು ಸಾಮಾಜಿಕ ಕಳಕಳಿ ಉಳ್ಳವರು. ತಮ್ಮ ಆಲೋಚನೆಗಳನ್ನು ಪುಸ್ತಕಗಳ ಮೂಲಕ ದಾಖಲಿಸಿ ಓದುಗರನ್ನು ಸೆಳೆದಿದ್ದಾರೆ. ಸುಧಾಮೂರ್ತಿ ಅವರು ಜೈಪುರ ಸಾಹಿತ್ಯ ಉತ್ಸವದಲ್ಲಿ ಮಂದಿರಾ ನಾಯರ್‌ ಅವರೊಂದಿಗೆ ಸಂವಾದ ನಡೆಸಿದರು.

ಅಪ್ಪಟ ಕನ್ನಡತಿ, ಮಕ್ಕಳ ಟೀಚರ್‌ ಸುಧಾಮೂರ್ತಿ ಐವತ್ತು ನಿಮಿಷಗಳ ಕಾಲ ಪಾಠ ಮಾಡಿದರು! ಪಾಠ ಮಾಡಿದ್ದು ಮಕ್ಕಳಿಗಲ್ಲ, ಸಾಹಿತ್ಯಾಸಕ್ತರಿಗೆ. ಹೌದು, ಜೈಪುರದ ಸಾಹಿತ್ಯ ಉತ್ಸವದಲ್ಲಿ ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ ಶುಕ್ರವಾರ ಮುಂಜಾನೆ ಆರಂಭವಾದ ಮೊದಲ ಗೋಷ್ಠಿಯನ್ನು ಲವಲವಿಕೆಯಿಂದ ನಡೆಸಿಕೊಟ್ಟರು.

ಕಾರ್ಯಕ್ರಮದ ನಿರೂಪಕಿ ಮಂದಿರಾ ನಾಯರ್‌, ವೇದಿಕೆಯತ್ತ ಬಂದ ಸುಧಾಮೂರ್ತಿ ಅವರನ್ನು ‌ʼಇಂಟರ್ನ್ಯಾಷನಲ್‌ ನಾನಿʼ ಎಂದರು. ತಮ್ಮ ಗೋಷ್ಠಿಯ ಉದ್ದಕ್ಕೂ ತಮಾಷೆ, ಸಲಹೆ, ಆಪ್ತ ಸಲಹೆ, ಎಚ್ಚರಿಕೆ, ಹಾಸ್ಯ ಎಲ್ಲದರ ಮಿಶ್ರಣವೇ ಆಗಿತ್ತು.

ನಾನೇನು ಅತ್ಯುತ್ತಮ ಅರ್ಥಶಾಸ್ತ್ರಜ್ಞಳಲ್ಲ. ಆದರೆ, ನಾನು ಹಾಕಿದ ಹತ್ತು ಸಾವಿರ ಬಂಡವಾಳದಿಂದ ಇನ್ಫೋಸಿಸ್‌ ಬೆಳೆದಿದೆ. ಇಂಜಿನಿಯರಿಂಗ್‌ ಓದುವಾಗಲೇ ನನ್ನ ಆಸಕ್ತಿಯನ್ನು ಬೆಳೆಸಿಕೊಂಡು ಸಾಧಿಸಲು ಪ್ರಯತ್ನಿಸಿದೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಉತ್ತಮ. ಅದಕ್ಕೆ ನಾನೇ ಸಾಕ್ಷಿ ಎಂದು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.

ಇನ್ನೂ, ನಾಯಿ ಇರುವವರು ಅದೃಷ್ಟವಂತರು, ಪುಣ್ಯವಂತರು. ನಿಸ್ವಾರ್ಥ ಪ್ರೀತಿ ಮತ್ತು ವಿಧೇಯತೆ ನೀಡುವುದು ನಾಯಿಗೆ ಮಾತ್ರ ಸಾಧ್ಯ. ಹಾಗೆಯೇ, ಹೆಣ್ಣು ಮಕ್ಕಳನ್ನು ಪಡೆದವರೂ ಅಷ್ಟೇ ಅದೃಷ್ಟವಂತರು. ನನಗೆ ನಲವತ್ತೈದು ವರ್ಷವಾಗಿದ್ದಾಗ, ನನ್ನ ಮಗಳು ನಾನೇನು ಆಗಬೇಕು ಎಂಬುದನ್ನು ತಿಳಿಸಿಕೊಟ್ಟಳು. ನಾನು ಶಿಕ್ಷಕಿಯಾಗಿ ಕೆಲಸ ಮಾಡಿದ್ದೆ. ಆದರೆ, ಇನ್ಫೋಸಿಸ್‌ನಲ್ಲಿ ನನಗೆ ಕೆಲಸ ಇರಲಿಲ್ಲ. ಆಗ ಮಗಳು, ನೀನು ಸಮಾಜ ಸೇವೆ ಮಾಡಬೇಕು ಎಂದಾಗಲೇ ನನಗೆ ಹೊಸ ಆಲೋಚನೆ ಹೊಳೆದದ್ದು. ಆಗಾಗ ನಾವು ಮಕ್ಕಳ ಮಾತು ಕೇಳುತ್ತಿರಬೇಕು ಎಂದು ಸುಧಾಮೂರ್ತಿ ಹೇಳಿದರು.

ನಮ್ಮ ಬಾಲ್ಯದ ದಿನಗಳೇ ಕತೆಗಳಾಗಿ ಹುಟ್ಟುತ್ತವೆ. ಅಂದಿನಿಂದ ಇಂದಿನವರೆಗೂ ನಡೆದದ್ದನ್ನು ಹೇಳಲು ನಿಮಗೆ ಸಾಕಷ್ಟಿರುತ್ತದೆ. ಹೀಗಾಗಿ, ನಾನು ಐವತ್ತೆರಡನೇ ವಯಸ್ಸಿಗೆ ಇಂಗ್ಲೀಷ್‌ ನಲ್ಲಿ ಬರೆಯಲು ಆರಂಭಿಸಿದೆ. ನೀವೂ ಕೂಡ ಯಾವ ಭಾಷೆಯಲ್ಲಾದರೂ ಬೇಕಾದರೂ ಬರೆಯಬಹುದು . . ಮುಖ್ಯವಾಗಿ ಸರಳ ಬದುಕನ್ನು ಕಟ್ಟಿಕೊಳ್ಳಬೇಕು. ಸಹಾಯ ಮಾಡುವುದು, ಸಣ್ಣ ಸಣ್ಣ ಸಂಗತಿಗಳನ್ನು ಸಂಭ್ರಮಿಸುವುದೇ ಜೀವನದ ನೆಮ್ಮದಿ ಎಂದರು.


ಗೋಷ್ಠಿಯ ಮಧ್ಯೆದಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದು ಹೀಗೆ: ನೀವು ಸುಧಾಮೂರ್ತಿ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ, ನಾರಾಯಣ ಮೂರ್ತಿಯನ್ನು ಮದುವೆಯಾಗಿ ಸುಧಾಮೂರ್ತಿಯಾದೆ ಎಂದಾಗ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ನನ್ನ ಅಳಿಯ ಬ್ರಿಟನ್ ಪ್ರಧಾನಿ ಆಗಿರುವುದು ಸಂತೋಷವಿದೆ. ಅವರು ಆ ದೇಶಕ್ಕಾಗಿ ಸೇವೆ ಮಾಡುತ್ತಿದ್ದಾರೆ, ನಾನು ಇಲ್ಲಿನ ಮಕ್ಕಳಿಗಾಗಿ ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಮತ್ತು ಅಂತಸ್ತುಗಳು ಬಂದು ಹೋಗುತ್ತವೆ. ಆದರೆ, ಸಂಬಂಧಗಳು ಮಾತ್ರ ಶಾಶ್ವತ ಎಂದರು ಸುಧಾಮೂರ್ತಿ.

ಐವತ್ತು ನಿಮಿಷಗಳ ಭಾಷಣದ ಉದ್ದಕ್ಕೂ ನಗು, ಚಪ್ಪಾಳೆ ಮತ್ತು ಹರ್ಷೋದ್ಗಾರಗಳು ಗೋಷ್ಠಿಯಲ್ಲಿ ಲವಲವಿಕೆ ವಾತಾವರಣ ಇರುವಂತೆ ಮಾಡಿತ್ತು. ಭಾಷಣದ ಕೊನೆಯಲ್ಲಿ ಸುಧಾಮೂರ್ತಿ, ನಾನು ನ್ಯಾಷನಲ್ ನಾನಿ! ಎಂದಾಗ ಇಡೀ ಗೋಷ್ಠಿಯಲ್ಲಿದ್ದ ಜನಸಮೂಹ ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿದರು. ಸುಧಾಮೂರ್ತಿ ಅವರ ಗೋಷ್ಠಿಯನ್ನು ಕೇಳಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ವೇದಿಕೆಯನ್ನು ದಾಟಿಕೊಂಡು ನಿಂತುಕೊಂಡೇ ಭಾಷಣ ಕೇಳಿದ್ದು ಜೈಪುರ ಸಾಹಿತ್ಯ ಉತ್ಸವದ ವಿಶೇಷ ಎಂದರೆ ತಪ್ಪಾಗಲಾರದು.

 

MORE NEWS

ಸುರಕ್ಷಿತ ಮತ್ತು ನೈರ್ಮಲ್ಯದ ಕುರಿತ ವಿಚಾರ ಸಂಕಿರಣ

05-02-2024 ಬೆಂಗಳೂರು

ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ...

ಯುವ ಸಾಹಿತಿಗಳ ಭರವಸೆಯ ಹುಮ್ಮಸ್ಸಿನೊಂದಿಗೆ ತೆರೆ

23-01-2023 ಜೈಪುರ

16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿ...

ಮುಂದಿನ ಪೀಳಿಗೆಯನ್ನು ಉತ್ತೇಜಿಸಿದ ಸಾಹಿತ್ಯ ಉತ್ಸವ : ಸಂಜಯ್‌ ರಾಯ್

23-01-2023 ಜೈಪುರ

ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ...