ಆಧುನಿಕ ಮಾಧ್ಯಮರಂಗದ ಅಗತ್ಯಕ್ಕನುಗುಣವಾಗಿ ‘ಪತ್ರಿಕೋದ್ಯಮ ಪ್ರವೇಶ’


ಮಾಧ್ಯಮ ರಂಗಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳನ್ನು ರೂಪಿಸುವ ಪತ್ರಿಕೋದ್ಯಮ ಶಿಕ್ಷಣದ ಪಠ್ಯಕ್ರಮ, ಕಲಿಸುವ ವಿಧಾನದಲ್ಲೂ ಆಮೂಲಾಗ್ರ ಬದಲಾವಣೆಯಾಗಬೇಕು ಎಂಬ ಒತ್ತಾಯ ಅನೇಕ ವರ್ಷಗಳಿಂದಲೂ ಇದೆ. ಅದಕ್ಕೆ ಈ ವರ್ಷ ಸ್ಪಂದನೆ ಸಿಕ್ಕಿದೆ. ಹೊಸ ಶಿಕ್ಷಣ ನೀತಿಯಂತೆ ಪದವಿ ಶಿಕ್ಷಣದ ಪಠ್ಯಕ್ರಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಪತ್ರಿಕೋದ್ಯಮ ವಿಷಯದ ಪಠ್ಯಕ್ರಮವನ್ನೂ ಆಧುನಿಕ ಮಾಧ್ಯಮರಂಗದ ಅಗತ್ಯಕ್ಕನುಗುಣವಾಗಿ ರಚಿಸಲಾಗಿದೆ ಎನ್ನುತ್ತಾರೆ ಲೇಖಕ ಡಾ.ಸತೀಶ್ ಕುಮಾರ್ ಅಂಡಿಂಜೆ. ಅವರು ಲೇಖಕ ಸಿಬಂತಿ ಪದ್ಮನಾಭ ಕೆ.ವಿ ಅವರ ‘ಪತ್ರಿಕೋದ್ಯಮ ಪ್ರವೇಶ’ ಕೃತಿಯಲ್ಲಿ ಬರೆದ ಮುನ್ನುಡಿ ನಿಮ್ಮ ಓದಿಗಾಗಿ..

ಪುಸ್ತಕ: ಪತ್ರಿಕೋದ್ಯಮ ಪ್ರವೇಶ
ಲೇಖಕ: ಸಿಬಂತಿ ಪದ್ಮನಾಭ ಕೆ. ವಿ
ಪುಟಗಳು: 160
ಬೆಲೆ: ರೂ.120
ಪ್ರಕಾಶಕರು: ವಸಂತ ಪ್ರಕಾಶನ, ಬೆಂಗಳೂರು
ಸಂಪರ್ಕ: 9449525854 

ಮುನ್ನುಡಿ
ಕಾಲಕ್ಕೆ ಸ್ಪಂದಿಸುವುದು ಪತ್ರಿಕೋದ್ಯಮದ ಪ್ರಮುಖ ಲಕ್ಷಣ. ಕಾಲ ಬದಲಾದಂತೆ ಪತ್ರಿಕೋದ್ಯಮವೂ ಬದಲಾಗಿದೆ. ಸಹಜವಾಗಿಯೇ ಅದು ಸಮಾಜದ ಘಟನೆಗಳಿಗೆ ಪ್ರತಿಕ್ರಿಯಿಸುವ ಮತ್ತು ಪತ್ರಿಕ್ರಿಯಿಸಬೇಕಾದ ರೀತಿಯೂ ಬದಲಾಗಿದೆ. ಜಾಗತೀಕರಣದ ಇಂದಿನ ಯುಗದಲ್ಲಿ ದೇಶ-ಭಾಷೆಗಳ ಗಡಿಗಳು ಈಗ ಇಲ್ಲವಾಗಿ ವಿಶ್ವವೇ ಒಂದು ಪುಟ್ಟ ಹಳ್ಳಿಯಾಗಿದೆ. ಇಂದು ಹಳ್ಳಿಗೂ ದಿಲ್ಲಿಗೂ ವ್ಯತ್ಯಾಸವಿಲ್ಲದಂತಾಗಿದೆ.. ಜನರ ಜೀವನ ಶೈಲಿ, ಬೇಕುಬೇಡಗಳು, ಆದ್ಯತೆ ಅಪೇಕ್ಷೆಗಳು ಬದಲಾಗಿವೆ. ತಂತ್ರಜ್ಞಾನದಲ್ಲಾಗುತ್ತಿರುವ ವೇಗದ ಬದಲಾವಣೆ, ಅಗ್ಗವಾಗುತ್ತಿರುವ ಡೇಟಾ, ಅಂತರಜಾಲ ಸಮಾಜದ ವಿವಿಧ ಸ್ತರಗಳನ್ನು ಸುಲಭವಾಗಿ ತಲುಪುತ್ತಿರುವುದು ಇತ್ಯಾದಿಗಳಿಂದಾಗಿ ಡಿಜಿಟಲ್ ಮಾಧ್ಯಮ ಜನಪ್ರಿಯವಾಗುತ್ತಿದೆ. ಮೊಬೈಲ್ ಉಪಕರಣದೊಳಗೆ ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳೆರಡೂ ಸಂಗಮಿಸಿರುವುದರಿಂದ ಮಾಧ್ಯಮಗಳನ್ನು ಪ್ರತ್ಯೇಕವಾಗಿ ವಿಂಗಡಿಸುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಉಳಿದೆಲ್ಲ ಮಾಧ್ಯಮಗಳಿಗಿಂತಲೂ ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್‌ಬುಕ್‌ಗಳು, ವಿವಿಧ ಆ್ಯಪ್‌ಗಳು ಸುದ್ದಿಗಳನ್ನು ತಿಳಿಯಲು ಹೆಚ್ಚಾಗಿ ಬಳಕೆಯಾಗುತ್ತಿವೆ. ಓದುಗರ ಸಂಖ್ಯೆ-ಟಿಆರ್‌ಪಿಗಳ ಜಾಗದಲ್ಲಿ ಕ್ಲಿಕ್ಸ್-ವ್ಯೂಸ್ ಪರಿಕಲ್ಪನೆಗಳು ಸೇರಿಕೊಂಡಿವೆ. ಹಿಂದಿನಂತೆ ಮಾಧ್ಯಮಗಳ ಬಳಕೆದಾರರು ಈಗ ನಿಷ್ಕ್ರಿಯ ಸ್ವೀಕೃತಿದಾರರು ಅಲ್ಲ, ಸಕ್ರಿಯ ಪ್ರೇಕ್ಷಕರು. ಮಾಧ್ಯಮಗಳ ತಪ್ಪನ್ನೂ ಅವರು ಪ್ರಶ್ನಿಸುತ್ತಾರೆ. ಸಮಾಜದ ಕೆಡುಕುಗಳನ್ನೂ ಬಯಲಿಗೆಳೆಯುತ್ತಾರೆ. ಇಂತಹ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಮತ್ತು ತನ್ನತನವನ್ನು ಕಾಯ್ದುಕೊಳ್ಳುವುದು ಪತ್ರಿಕೋದ್ಯಮಕ್ಕೆ ಸವಾಲು. ಪತ್ರಿಕೋದ್ಯಮವು ತನ್ನ ಸಾಂಪ್ರದಾಯಿಕ ಓದುಗರನ್ನೂ ಉಳಿಸಿಕೊಳ್ಳಬೇಕು, ಅವರ ಅವಶ್ಯಕತೆಗಳನ್ನೂ ಪೂರೈಸಬೇಕು, ಜೊತೆಗೆ ಡಿಜಿಟಲ್ ಸ್ವರೂಪವನ್ನೂ ಪೋಷಿಸಬೇಕು. ಇಲ್ಲವಾದರೆ ಕಾಲದ ಸ್ಪರ್ಧೆಯಲ್ಲಿ ಅದು ಸೋತುಹೋಗುತ್ತದೆ. ಇದಕ್ಕೆ ಪತ್ರಿಕೋದ್ಯಮ ಶಿಕ್ಷಣ ಕೂಡಾ ಹೊರತಲ್ಲ.

ಒಂದು ಕ್ಷೇತ್ರವಾಗಿ, ವೃತ್ತಿಯಾಗಿ, ಪ್ರವೃತ್ತಿಯಾಗಿ, ಅಧ್ಯಯನ ಹಾಗೂ ಸಂಶೋಧನೆಯ ವಿಷಯವಾಗಿ ಪತ್ರಿಕೋದ್ಯಮ ಇಂದು ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಆರಂಭದಲ್ಲಿ ಅದು ಮುದ್ರಣ ಮಾದ್ಯಮಕ್ಕಷ್ಟೇ ಸೀಮಿತವಾಗಿತ್ತು. ವರ್ಷಗಳು ಉರುಳಿದಂತೆ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಾ ಹೋಯಿತು. ಮನುಷ್ಯನ ಅನ್ವೇಷಣಾ ಪ್ರವೃತ್ತಿ, ತಂತ್ರಜ್ಞಾನದಲ್ಲಿ ಆದ ಬದಲಾವಣೆ, ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಲು ಜನರು ಕಂಡುಕೊಂಡ ಬೇರೆ ಬೇರೆ ವಿಧಾನಗಳು ಇದಕ್ಕೆ ಕಾರಣ. ಅದಕ್ಕೆ ಪೂರಕವಾಗಿ ಪತ್ರಿಕೋದ್ಯಮ ಒಂದು ಜನಪ್ರಿಯ ಅಧ್ಯಯನದ ವಿಷಯವಾಗಿ ಹೊರಹೊಮ್ಮಿದೆ. ವಿಶ್ವವಿದ್ಯಾನಿಲಯಗಳಲ್ಲಿ, ಕಾಲೇಜುಗಳಲ್ಲಿ ಹೆಚ್ಚುಹೆಚ್ಚಾಗಿ ಪತ್ರಿಕೋದ್ಯಮದ ಕೋರ್ಸುಗಳು ಪರಿಚಯಿಸಲ್ಪಡುತ್ತಿವೆ. ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಳ್ಳುತ್ತಿರುವ ಯುವಕರ ಸಂಖ್ಯೆಯೂ ಹೆಚ್ಚಾಗುತ್ತಿದೆ.  ಪತ್ರಿಕೋದ್ಯಮವು ಒಂದು ವಿಶಿಷ್ಟ ಸಂಶೋಧನಾ ಕ್ಷೇತ್ರವಾಗಿ ಬೆಳೆಯುತ್ತಿದೆ. ಪತ್ರಿಕೋದ್ಯಮದ ವಿವಿಧ ಶಾಖೆಗಳಲ್ಲಿ ಸಂಶೋಧನೆ ನಡೆಸುವ, ಪಿಎಚ್‌ಡಿ, ಎಂಫಿಲ್‌ನಂತಹ ಪದವಿ ಪಡೆದುಕೊಳ್ಳಲು ಉತ್ಸುಕರಾಗಿರುವ ಮಂದಿಯ ಸಂಖ್ಯೆಯೂ ಹೆಚ್ಚಾಗಿದೆ.  

ಸಾಂಪ್ರದಾಯಿಕ ಪತ್ರಿಕೋದ್ಯಮದ ವ್ಯಾಪ್ತಿ ವಿಸ್ತರಿಸುತ್ತಾ ಸಮುದಾಯ ಪತ್ರಿಕೋದ್ಯಮ, ನವ ಪತ್ರಿಕೋದ್ಯಮ, ಅಭಿವೃದ್ಧಿ ಪತ್ರಿಕೋದ್ಯಮ, ತನಿಖಾ ಪತ್ರಿಕೋದ್ಯಮ, ಕ್ರೀಡಾ ಪತ್ರಿಕೋದ್ಯಮ, ಮೊಬೈಲ್ ಪತ್ರಿಕೋದ್ಯಮ, ಸೆಲೆಬ್ರಿಟಿ ಪತ್ರಿಕೋದ್ಯಮ ಮೊದಲಾದ ಕವಲುಗಳು ತೆರೆದುಕೊಂಡಿವೆ.  ವೃತ್ತಿಯಾಗಿ ಮಾತ್ರವಲ್ಲದೆ ಪ್ರವೃತ್ತಿಯಾಗಿಯೂ ಪತ್ರಿಕೋದ್ಯಮ ಜನಪ್ರಿಯವಾಗಿದೆ. ಯಾವುದೇ ಮಾಧ್ಯಮ ಸಂಸ್ಥೆಗಳ ಉದ್ಯೋಗಿಯಾಗದೆಯೂ ಪತ್ರಿಕೋದ್ಯಮವನ್ನು ಒಂದು ಉತ್ಕಟ ಆಸಕ್ತಿಯನ್ನಾಗಿ ಸ್ವೀಕರಿಸುತ್ತಿರುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿಯೇ ಇದೆ. ಇವರು ಹವ್ಯಾಸಿ ಪತ್ರಕರ್ತರೂ ಆಗಿರಬಹುದು, ನಾಗರಿಕ ಪತ್ರಕರ್ತರೂ ಆಗಿರಬಹುದು. ಕೆಲವು ವರ್ಷಗಳ ಹಿಂದೆ ಒಳ್ಳೆಯ ಬರವಣಿಗೆ, ಒಳ್ಳೆಯ ಮಾತುಗಾರಿಕೆ, ವಿವಿಧ ರಂಗಗಳ ಉತ್ತಮ ತಿಳುವಳಿಕೆ ಇದ್ದರೆ ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳಿಗೆ ಪ್ರವೇಶ ಸುಲಭವಾಗಿತ್ತು. ಈಗ ಮಾಧ್ಯಮರಂಗವೂ ಬದಲಾಗಿದೆ, ನಿರೀಕ್ಷೆಗಳೂ ಬದಲಾಗಿವೆ. ಬದಲಾಗಿರುವ ಕಾಲಕ್ಕೆ ತಕ್ಕಂತೆ ತಮ್ಮ ಕೌಶಲಗಳನ್ನು ಬೆಳೆಸಿಕೊಳ್ಳದೆ ಹೋದರೆ ಮಾಧ್ಯಮರಂಗಕ್ಕೆ ಪ್ರವೇಶ ಇಲ್ಲ, ಪ್ರವೇಶಿಸಿದರೂ ಯಶಸ್ಸು ಇಲ್ಲ, ಉಳಿಗಾಲವೂ ಇಲ್ಲ ಎಂಬಂತಾಗಿದೆ.

ಈ ಹಿನ್ನೆಲೆಯಲ್ಲಿ ಮಾಧ್ಯಮ ರಂಗಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳನ್ನು ರೂಪಿಸುವ ಪತ್ರಿಕೋದ್ಯಮ ಶಿಕ್ಷಣದ ಪಠ್ಯಕ್ರಮ, ಕಲಿಸುವ ವಿಧಾನದಲ್ಲೂ ಆಮೂಲಾಗ್ರ ಬದಲಾವಣೆಯಾಗಬೇಕು ಎಂಬ ಒತ್ತಾಯ ಅನೇಕ ವರ್ಷಗಳಿಂದಲೂ ಇದೆ. ಅದಕ್ಕೆ ಈ ವರ್ಷ ಸ್ಪಂದನೆ ಸಿಕ್ಕಿದೆ. ಹೊಸ ಶಿಕ್ಷಣ ನೀತಿಯಂತೆ ಪದವಿ ಶಿಕ್ಷಣದ ಪಠ್ಯಕ್ರಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಪತ್ರಿಕೋದ್ಯಮ ವಿಷಯದ ಪಠ್ಯಕ್ರಮವನ್ನೂ ಆಧುನಿಕ ಮಾಧ್ಯಮರಂಗದ ಅಗತ್ಯಕ್ಕನುಗುಣವಾಗಿ ರಚಿಸಲಾಗಿದೆ. ಮಾಧ್ಯಮರಂಗದ ಬೇಡಿಕೆಗಳಿಗೆ ಅನುಗುಣವಾಗಿ ಕೌಶಲ್ಯಗಳನ್ನು ಕಲಿಸುವ ಹೊಸ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಅದಕ್ಕೆ ತಕ್ಕಂತೆ ಮಾಹಿತಿ ಒದಗಿಸುವ ಪಠ್ಯಪುಸ್ತಕದ ಅಗತ್ಯವಿತ್ತು. ಒಬ್ಬ ನಿಜವಾದ ಪತ್ರಕರ್ತ ಹಾಗೂ ಪತ್ರಿಕೋದ್ಯಮ ಅಧ್ಯಾಪಕನ ಕರ್ತವ್ಯ ಮತ್ತು ಜವಾಬ್ದಾರಿಯಂತೆ ಹೊಸ ಪಠ್ಯಕ್ರಮಕ್ಕೆ ತಕ್ಷಣ ಸ್ಪಂದಿಸಿದ ಡಾ. ಸಿಬಂತಿ ಪದ್ಮನಾಭ ಅವರು ಬಿಎ ಮೊದಲ ಸೆಮಿಸ್ಟರ್ ಪತ್ರಿಕೋದ್ಯಮ ಪಠ್ಯಕ್ಕನುಗುಣವಾಗಿ ‘ಪತ್ರಿಕೋದ್ಯಮ ಪ್ರವೇಶ’ ಎಂಬ ಈ ಕೃತಿ ರಚಿಸಿದ್ದಾರೆ.

ಈ ಕೃತಿಯಲ್ಲಿ ಐದು ಅಧ್ಯಾಯಗಳಿದ್ದು, ಮೊದಲ ಅಧ್ಯಾಯದಲ್ಲಿ ಪತ್ರಿಕೋದ್ಯಮದ ಪರಿಚಯವಿಲ್ಲದ ವಿದ್ಯಾರ್ಥಿಗಳಿಗೆ ಅದರ ಅರ್ಥ, ವ್ಯಾಪ್ತಿ, ಮಹತ್ವ, ತತ್ವಗಳು ಮತ್ತು ಅದು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿ, ಪತ್ರಕರ್ತನ ಗುಣಗಳು, ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ವಿವರಿಸಿದ್ದಾರೆ. ಎರಡನೇ ಅಧ್ಯಾಯದಲ್ಲಿ ಪತ್ರಿಕೋದ್ಯಮ ಬೆಳೆದು ಬಂದ ಬಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಅಲ್ಲದೆ ಸ್ವಾತಂತ್ಯ್ರಹೋರಾಟದಲ್ಲಿ ಪತ್ರಿಕೆಗಳ ಪಾತ್ರ, ಭಾರತೀಯ ಪತ್ರಿಕೋದ್ಯಮದ ಪ್ರಮುಖ ರೂವಾರಿಗಳ ಕೊಡುಗೆಗಳನ್ನು ಆಸಕ್ತಿದಾಯಕವಾಗಿ ವಿವರಿಸಿದ್ದಾರೆ. ಮೂರನೇ ಅಧ್ಯಾಯದಲ್ಲಿ ಕನ್ನಡ ಪತ್ರಿಕೋದ್ಯಮದ ಇತಿಹಾಸ ಹಾಗೂ ಕನ್ನಡ ಪತ್ರಿಕೋದ್ಯಮದ ಪ್ರಮುಖರ ವಿವರಗಳಿವೆ. ನಾಲ್ಕನೇ ಅಧ್ಯಾಯದಲ್ಲಿ ಪತ್ರಿಕೋದ್ಯಮದ ವಿವಿಧ ಶಾಖೆಗಳಾದ ನಿಯತಕಾಲಿಕ ಪತ್ರಿಕೋದ್ಯಮ, ಸಮುದಾಯ ಪತ್ರಿಕೋದ್ಯಮ, ತನಿಖಾ ಪತ್ರಿಕೋದ್ಯಮ, ಅಭಿವೃದ್ಧಿ ಪತ್ರಿಕೋದ್ಯಮ, ವಾಣಿಜ್ಯ ಪತ್ರಿಕೋದ್ಯಮ, ಪ್ರಸಾರ ಪತ್ರಿಕೋದ್ಯಮ, ಬಹುಳ ಮಾಧ್ಯಮ ಪತ್ರಿಕೋದ್ಯಮ ಮತ್ತು ಪ್ರತಿಪಾದನಾ ಪತ್ರಿಕೋದ್ಯಮಗಳನ್ನು ಪರಿಚಯಿಸಿ, ಪತ್ರಿಕಾ ಸಿದ್ಧಾಂತಗಳ ಸಂಕ್ಷಿಪ್ತ ವಿವರ ನೀಡಿದ್ದಾರೆ.

ಕೊನೆಯ ಅಧ್ಯಾಯದಲ್ಲಿ ಪತ್ರಿಕೋದ್ಯಮದಲ್ಲಿ ವೃತ್ತಿಪರತೆ ಸಾಧಿಸುವುದು ಹೇಗೆ ಎಂಬುದನ್ನು ವಿವರಿಸಿ, ಮಾಧ್ಯಮರಂಗದ ಉದ್ಯೋಗಾವಕಾಶಗಳ ಪರಿಚಯ ಮಾಡಿದ್ದಾರೆ. ಭಾರತೀಯ ಪತ್ರಿಕಾ ಮಂಡಳಿ, ಭಾರತದ ಸಂಪಾದಕರ ಮಂಡಳಿ, ಭಾರತೀಯ ವೃತ್ತಪತ್ರಿಕಾ ಸಂಘ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿಗಳನ್ನು ಪರಿಚಯಿಸಿ, ಪತ್ರಿಕೋದ್ಯಮದ ಪಾರಿಭಾಷಿಕ ಪದಗಳನ್ನು ವಿವರಿಸಿದ್ದಾರೆ. ಪತ್ರಕರ್ತರಾಗಿ, ಪತ್ರಿಕೋದ್ಯಮ ಶಿಕ್ಷಕರಾಗಿ ಸುಮಾರು 17  ವರ್ಷಗಳ ಅನುಭವಿರುವ ಪದ್ಮನಾಭ ಅವರು ಈ ಕೃತಿಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮದ ಮಿತಿಯೊಳಗೆ ವಿವಿಧ ಪರಿಕಲ್ಪನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಪತ್ರಿಕೋದ್ಯಮ ವಿಷಯವನ್ನು ಹೊಸದಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದು ವಿಷಯವನ್ನು ಆಸಕ್ತಿದಾಯಕವಾಗಿ ಪರಿಚಯಿಸುವುದಲ್ಲದೆ, ಬೇರೆ ವಿಷಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಇದು ಸರಳವಾಗಿ ಪತ್ರಿಕೋದ್ಯಮದ ಪರಿಚಯ ಮಾಡಬಲ್ಲುದು.

ನಾಡಿನ ವಿವಿಧ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಪ್ರಕಟಿಸುತ್ತಿರುವ ಹವ್ಯಾಸಿ ಬರಹಗಾರರೂ ಆಗಿರುವ ಡಾ. ಸಿಬಂತಿ ಪದ್ಮನಾಭ ಅವರು ಪತ್ರಿಕೋದ್ಯಮ ಶಿಕ್ಷಕ ಹೇಗಿರಬೇಕೆಂದು ತೋರಿಸಿಕೊಟ್ಟವರು. ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಈಗಾಗಲೇ ಕೆಲವು ಕೃತಿಗಳನ್ನು ಪ್ರಕಟಿಸಿರುವ ಅವರು ಮುಂದೆ ಪತ್ರಿಕೋದ್ಯಮ ಪಠ್ಯಕ್ರಮಕ್ಕನುಗುಣವಾಗಿ ಇನ್ನಷ್ಟು ಕೃತಿಗಳನ್ನು ಪ್ರಕಟಿಸುವ ಗುರಿ ಹೊಂದಿದ್ದಾರೆ. ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಕೃತಿಗಳು ಬಂದಿರುವುದು ಕಡಿಮೆ. ಅದರಲ್ಲೂ ಪತ್ರಿಕೋದ್ಯಮ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಕೃತಿಗಳು ತುಂಬಾ ವಿರಳ. ಆ ಕೊರತೆಯನ್ನು ಪದ್ಮನಾಭ ಅವರು ತುಂಬಿದ್ದಾರೆ. ಅವರಿಂದ ಇನ್ನಷ್ಟು ಕೃತಿಗಳು ಹೊರಬಂದು, ವಿದ್ಯಾರ್ಥಿಗಳು ಅವುಗಳ ಪ್ರಯೋಜನ ಪಡೆಯಲಿ ಎಂಬ ಆಶಯದೊಂದಿಗೆ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಕೋರುತ್ತೇನೆ.

ಸಿಬಂತಿ ಪದ್ಮನಾಭ ಕೆ.ವಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
ಪತ್ರಿಕೋದ್ಯಮ ಪ್ರವೇಶ ಕೃತಿ ಪರಿಚಯ...
ಸತೀಶ್ ಕುಮಾರ್ ಅಂಡಿಂಜೆ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

 

MORE FEATURES

ವೆಬ್‌ ಸಿರೀಸ್ ಕಥೆಯೊಂದನ್ನು ಕಾದಂಬರಿಯ ಮುಖಾಂತರ ನಿಮ್ಮ ಮುಂದಿಟ್ಟಿದ್ದೇನೆ: ಭಗೀರಥ

01-05-2024 ಬೆಂಗಳೂರು

‘ಕಲೆ ಎಂಬುದನ್ನು ವಿಸ್ತರಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಅವಳಿ ಸಹೋದರರಾದ ಸಾಹಿತ್ಯ ಕ್ಷೇತ್ರ ಮತ್ತು ಸಿನಿಮಾ ಜ...

ಹೊಸ ತಲೆಮಾರಿಗಾಗಿ ‘ಅಮರ ಚಿಂತನೆ’ ಪುಸ್ತಕವನ್ನು ರೂಪಿಸಲಾಗಿದೆ

01-05-2024 ಬೆಂಗಳೂರು

'ಹೊಸ ತಲೆಮಾರಿನ ಯುವ ಮನಸುಗಳು ಹಾಗೂ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟಕೊಂಡು ಈ ಪುಸ್ತಕವನ್ನು ರೂಪಿಸಲಾಗಿದೆ. ಇ...

ದೀರ್ಘವಾದ ಬರವಣಿಗೆಯೂ ಸರಾಗವಾಗಿ ಓದಿಸಿಕೊಳ್ಳುತ್ತದೆ: ಎಲ್.ಸಿ .ಸುಮಿತ್ರಾ

01-05-2024 ಬೆಂಗಳೂರು

ಇಪ್ಪತ್ತೈದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಲೇಖಕಿಯರ ಸಂಘದ ಒಂದು ದಿನದ ಸಾವಣ ದುರ್ಗ ಪ್ರವಾಸದಲ್ಲಿ ಮೊದಲು ಉಷಾ ಅವರನ್ನ...