ಅದೃಷ್ಟ-ಸಮೃದ್ಧಿಯನ್ನು ಸ್ವಾಗತಿಸುವ ಡ್ರ್ಯಾಗನ್ ನೃತ್ಯ ಮತ್ತು ಸಾಂಸ್ಕೃತಿಕ ಚರಿತ್ರೆ

Date: 18-12-2021

Location: ಬೆಂಗಳೂರು


‘ಚೀನಿಯರ ಹೊಸ ವರ್ಷ ಹಾಗೂ ಮಧ್ಯ ಶರತ್ಕಾಲದ ಉತ್ಸವದ ಸಂದರ್ಭಗಳಲ್ಲಿ ಸಿಂಗಾಪುರಕ್ಕೆ ಭೇಟಿ ನೀಡಿದರೆ ಪ್ರತಿ ದಿನವೂ ಡ್ರ್ಯಾಗನ್ ಡ್ಯಾನ್ಸ್ ಪ್ರದರ್ಶನ ಸಾಮಾನ್ಯವಾಗಿರುತ್ತದೆ’ ಎನ್ನುತ್ತಾರೆ ಶ್ರೀವಿದ್ಯಾ. ಅವರು ತಮ್ಮ ಸಿಂಗಾಪುರ್ ಡೈರೀಸ್ ಅಂಕಣದಲ್ಲಿ ಚೀನೀ ಸಾಂಪ್ರದಾಯಿಕ ಆಚರಣೆಯಲ್ಲಿ ಡ್ರ್ಯಾಗನ್ ನೃತ್ಯದ ಮಹತ್ವ ಮತ್ತು ಸಿಂಗಾಪುರ್ ನಲ್ಲಿ ಕಂಡುಬರುವ ಸಾಂಪ್ರದಾಯಿಕ ಡ್ರ್ಯಾಗನ್ ನೃತ್ಯ ಹಾಗೂ ಅದರ ಆಚರಣೆಗಳ ಕುರಿತು ವಿಶ್ಲೇಷಿದ್ದಾರೆ. 

ಇದೊಂದು ಪ್ರಾಚೀನ ಜಾನಪದ ಕಥೆ. ಜೇಡ್ ಚಕ್ರವರ್ತಿಯ ಆಡಳಿತಾವಧಿಯಲ್ಲಿ ನಡೆದ ಘಟನೆ. ಒಂದೊಮ್ಮೆ ರಾಶಿ ಚಕ್ರದ ಕ್ಯಾಲಂಡರ್ ನ್ನಲ್ಲಿ ಪ್ರಾಣಿಗಳ ಹೆಸರಿಡುವ ಬಗ್ಗೆ ಅರಮನೆಯಲ್ಲಿ ಚರ್ಚೆ ನಡೆಯುತ್ತದೆ. ಸಾಧಕ ಬಾಧಕಗಳಗಳನ್ನು ಸಮಾಲೋಚಿಸಿ ಅಂತಿಮವಾಗಿ ರಾಜನ ನಿರ್ಣಯಕ್ಕೆ ಎಲ್ಲರಿಂದ ಒಪ್ಪಿಗೆ ವ್ಯಕ್ತವಾಗುತ್ತದೆ. ಪ್ರಾಣಿಗಳ ಆಯ್ಕೆಗಾಗಿ ಸ್ಪರ್ಧೆಯೊಂದನ್ನು ಏರ್ಪಡಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಈ ಪಂದ್ಯದಲ್ಲಿ ಭಾಗವಹಿಸುವ ಎಲ್ಲಾ ಪ್ರಾಣಿಗಳು ಕೋಟೆಯನ್ನು ತಲುಪಬೇಕಾದರೆ ನದಿಯನ್ನು ದಾಟಿ ಬಂದಿರಬೇಕು ಎಂಬ ಷರತ್ತನ್ನು ಮುಂದಿಡಲಾಗುತ್ತದೆ.

ಇದನ್ನು ತಿಳಿದು ಕಾಡಿನಲ್ಲಿದ್ದ ಪ್ರಾಣಿಗಳು ಸ್ಪರ್ಧೆಗೆ ತಯಾರಾಗುತ್ತವೆ. ಈಜು ಬಾರದ ಇಲಿ ಮತ್ತು ಬೆಕ್ಕು, ಎತ್ತಿನ ಸಹಾಯ ಪಡೆದು ನದಿ ದಾಟಲು ಮುಂದಾಗುತ್ತವೆ. ಎತ್ತಿನ ಭುಜದಲ್ಲಿ ಕೂತು ನದಿಯ ದಡಕ್ಕೆ ಬರುತ್ತಿದ್ದಂತೆ ಅತಿ ಬುದ್ದಿವಂತಿಕೆ ತೋರುವ ಇಲಿ, ಬೆಕ್ಕನ್ನು ನೀರಿಗೆ ತಳ್ಳಿ ಎಲ್ಲರಕ್ಕಿಂತ ಮುಂಚಿತವಾಗಿ ಅರಸನ ಬಳಿ ತಲುಪುತ್ತದೆ ಹಾಗೂ ಮೊದಲ ಸ್ಥಾನ ಗಿಟ್ಟಿಸಿಕೊಳ್ಳುತ್ತದೆ. ಎತ್ತು ಎರಡನೇ ಸ್ಥಾನಕ್ಕೆ ತೃಪ್ತಿ ಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಅದಾದ ಬಳಿಕ ಹುಲಿ, ಮೊಲ, ಡ್ರ್ಯಾಗನ್, ಕುದುರೆ, ಹಾವು, ಆಡು, ಮಂಗ, ಹುಂಜ ನಾಯಿ ಹಾಗೂ ಹಂದಿ ಕ್ರಮವಾಗಿ ಅವುಗಳದ್ದೇ ವೇಗದಲ್ಲಿ ಅರಮನೆಗೆ ಬಂದು ಆಗಮಿಸುತ್ತವೆ. ಈ ಕಥೆಯ ಹೆಸರು "ಗ್ರೇಟ್ ರೇಸ್ ". 

ಈ ಮೂಲಕ ಚೀನಿಯರ ವರ್ಷ ನಿರ್ಣಯವನ್ನು ಜಾರಿಗೆ ತರಲಾಗುತ್ತದೆ. ಪುನರಾವರ್ತಿತ ಹನ್ನೆರಡು ವರ್ಷಗಳ ಚಕ್ರದಲ್ಲಿ ಈ 12 ಪ್ರಾಣಿಗಳ ಹೆಸರು ಮತ್ತು ಅವುಗಳ ಗುಣಲಕ್ಷಣಗಳನ್ನು ವಿವರಿಸಲಾಗುತ್ತದೆ. ಕ್ಯಾಲಂಡರ್ ನಲ್ಲಿ ಸ್ಥಾನಗಿಟ್ಟಿಸಿಕೊಂಡ ಇವಿಷ್ಟೂ ಪ್ರಾಣಿಗಳು, ದಾರಿ ಮಧ್ಯೆ ಅನುಭವಿಸಿದ ಸಂಕಷ್ಟಗಳ ಬಗ್ಗೆ ರಾಜನಿಗೆ ವರದಿ ಒಪ್ಪಿಸಬೇಕಿತ್ತು. ಆದರೆ ಹಾರುತ್ತಾ ಮೊದಲಿಗೆ ತಲುಪಬೇಕಿದ್ದ ಡ್ರಾಗನ್ ಬಗ್ಗೆ ಚಕ್ರವರ್ತಿಗೆ ಅಚ್ಚರಿ ಮೂಡಿತ್ತು. ಈ ಕುರಿತಂತೆ ವಿಚಾರಿಸಿದಾಗ, “ದಾರಿ ಮಧ್ಯೆ ಬರಗಾಲದಿಂದ ತತ್ತರಿಸಿದ್ದ ಒಂದು ಗ್ರಾಮದ ಸದಸ್ಯರು ಮಳೆ ನೀಡುವಂತೆ ತನ್ನಲ್ಲಿ ಪ್ರಾರ್ಥಿಸಿಕೊಂಡರು. ಅದಾದ ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೊಲವೊಂದು ಮರದ ದಿಮ್ಮಿನಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಅದರ ನೆರವಿಗೆ ಧಾವಿಸಿ ಬರುವ ವೇಳೆ ತಡವಾಯಿತು ಎಂದಿತಂತೆ.


ಚೀನೀ ರಾಶಿಚಕ್ರದಲ್ಲಿ ಯಿನ್ ಮತ್ತು ಯಾಂಗ್ ಎಂಬ ಪರಿಕಲ್ಪನೆಯನ್ನುಕಾಣಬಹುದು. ಪ್ರತಿಯೊಂದು ಪ್ರಾಣಿಗಳಿಗೆ ವಿರೋಧಿ ಶಕ್ತಿಗಳು ಹಾಗೂ ಬೆಸ ಸಂಖ್ಯೆಯ ವರ್ಷಗಳಿಗೆ “ಯಿನ್”ಎಂದು, ಸಮ ಸಂಖ್ಯೆಯ ವರ್ಷಗಳನ್ನು “ಯಾಂಗ್“ಎಂದು ಕರೆಯಲಾಗುತ್ತದೆ. “ಯಿನ್”ನಲ್ಲಿ ಭೂಮಿ, ಸ್ತ್ರೀ, ಕತ್ತಲೆ, ಮತ್ತು ನಿಷ್ಕ್ರಿಯ ಎಂಬ ವಿಚಾರಗಳು ಒಳಗೊಂಡರೆ, ಯಾಂಗ್ ಅನ್ನು ಪುರುಷ, ಸ್ವರ್ಗ, ಬೆಳಕು ಮತ್ತು ಸಕ್ರಿಯ ಎಂದು ಗ್ರಹಿಸಲಾಗಿದೆ.

ಈ 12 ಪ್ರಾಣಿಗಳಲ್ಲಿ ಡ್ರ್ಯಾಗನ್ ಅತ್ಯಂತ  ಪ್ರಭಾವಶಾಲಿ ಹಾಗೂ ಅದೃಷ್ಟದ ಪ್ರಾಣಿಯೆಂದು ಗುರುತಿಸಲಾಗುತ್ತದೆ. ಚೀನೀಯರು ಪೂಜಿಸುವ ದೇವರುಗಳಲ್ಲಿ ಡ್ರ್ಯಾಗನ್ ಕೂಡ ಒಂದು. ಇದು ಪೂರ್ವಜರಿಂದ ಮತ್ತು ‘ಕ್ವಿ’ ಎಂಬ ಶಕ್ತಿಯಿಂದ ವಿಕಾಸಗೊಂಡ ಒಂದು ಕಲ್ಪನೆಯ ಸರೀಸೃಪ ಎಂಬುದು ನಂಬಿಕೆ.  ಡ್ರ್ಯಾಗನ್ ದೇವರನ್ನು, ಜಲ ಮತ್ತು ಹವಾಮಾನ ವನ್ನು ಪ್ರತಿನಿಧಿಸುವ ಶಕ್ತಿಯಾಗಿ ಪೂಜಿಸಲಾಗುತ್ತದೆ. ಇದು ಯಾಂಗ್ ಅಂಶದಲ್ಲಿ ಗುರುತಿಸಲ್ಪಡುತ್ತದೆ.

ವಿಚಿತ್ರವೆಂದರೆ ಈ ಪ್ರಾಣಿಗಳ ಗುಣಲಕ್ಷಣಗಳು ಹಾಗೂ ವರ್ಷಗಳಿಗೆ ಸರಿಯಾಗಿ ಅನೇಕ ವಿವಾಹಿತ ಮಹಿಳೆಯರು, ತಾಯಂದಿರಾಗುವ ಬಗ್ಗೆ ಯೋಜನೆ ರೂಪಿಸುತ್ತಾರೆ. ಈ ಮೂಲಕ ಕುಟುಂಬ ಸದಸ್ಯರ ಜೊತೆಗಿನ ಹೊಂದಾಣಿಕೆ ಹಾಗೂ ಭವಿಷ್ಯದ ಅಭಿವೃದ್ದಿಯ ಬಗ್ಗೆ ನಿರ್ಧರಿಸುತ್ತಾರೆ. ಡ್ರ್ಯಾಗನ್ ಪ್ರಾಣಿಯ ವರ್ಷದಲ್ಲಿ ಸಿಸೇರಿಯನ್ ಡೆಲಿವರೀಗಳ ಸಂಖ್ಯೆ ಹೆಚ್ಚಾಗಿರುತ್ತದೆ ಎನ್ನಲಾಗಿದೆ.    

ಚೀನಿ ಪುರಾಣದ ಪ್ರಕಾರ ಫಲವತ್ತತೆ, ಸಮೃದ್ಧಿ, ಅಧಿಕಾರವನ್ನು ಸಂಕೇತಿಸುವ ಡ್ರ್ಯಾಗನ್ ಬುದ್ದಿವಂತ ಪ್ರಾಣಿ. ನೀರು, ಮಳೆ, ಚಂಡಮಾರುತಗಳು ಮತ್ತು ಪ್ರವಾಹಗಳ ಮೇಲೆ ಈ ಜೀವಿಯು ನಿಯಂತ್ರಣವನ್ನು ಹೊಂದಿದೆ. ಅಲ್ಲದೆ ಸಮಾಜದಲ್ಲಿನ ದುಷ್ಟಶಕ್ತಿಗಳನ್ನು ದೂರಮಾಡಿ ಅದೃಷ್ಟ ಮತ್ತು ಆಶೀರ್ವಾದಗಳನ್ನು ನೀಡುತ್ತದೆ ಎಂಬುದು ಚೀನಿ ಅಭಿಮತ.

ಡ್ರ್ಯಾಗನ್ ಗಳನ್ನು ಪೂಜಿಸುವ ಸಲುವಾಗಿ ನಡೆಯುವ ಚೀನಿ ಸಂಪ್ರದಾಯವೇ ಡ್ರ್ಯಾಗನ್ ನೃತ್ಯ. ಚೈನೀಸ್ ಡ್ರ್ಯಾಗನ್ ಉದ್ದವಾದ ದೇಹ ಮತ್ತು ಚೂಪಾದ ಉಗುರುಗಳೊಂದಿಗೆ ಹಾವಿನಂತೆ ಕಾಣುತ್ತದೆ.  ಡ್ರ್ಯಾಗನ್‌ನ ನೋಟವು ಭಯಾನಕವಾಗಿದ್ದರೂ ಪರೋಪಕಾರಿ ಮನೋಭಾವವನ್ನು ಹೊಂದಿದೆ ಎನ್ನುತ್ತಾರೆ ಚೀನೀಯರು.

ಈ ಸಂಸ್ಕೃತಿಯು 202 BCಯಲ್ಲಿದ್ದ ಹ್ಯಾನ್ ರಾಜವಂಶದಿಂದ ಚಾಲ್ತಿಯಲ್ಲಿದೆ. ಮುಂಬರುವ ಕೃಷಿ ಚಟುವಟಿಕೆಗಳಿಗೆ ಮಳೆಯ ನೆರವನ್ನು ಪ್ರಾರ್ಥಿಸುತ್ತಾ ಹಿಂದಿನ ಕಾಲದಲ್ಲಿ ಈ ನೃತ್ಯಗಳನ್ನು ಸೇವೆಯ ರೂಪದಲ್ಲಿ ನೆರವೇರಿಸುತ್ತಿದ್ದರು. ವಿಭಿನ್ನ ಕಾರ್ಯಗಳಿಗೆ ಬಗೆಬಗೆಯ ಸ್ವರೂಪದ ನೃತ್ಯಗಳನ್ನು ಪ್ರದರ್ಶಿಸಲಾಗುತ್ತದೆ. ಇವುಗಳನ್ನು ಡ್ರ್ಯಾಗನ್ ಧರಿಸಿರುವ ಬಟ್ಟೆಯ ಬಣ್ಣಗಳಿಂದ ಗುರುತಿಸ ಬಹುದಾಗಿದೆ. ಹಸಿರು ಬಣ್ಣ ದ ಡ್ರ್ಯಾಗನ್ ನೃತ್ಯ ಸುಗ್ಗಿಯನ್ನು ಸಂಕೇತಿಸುತ್ತದೆ. ಹಳದಿಯು ಸಾಮ್ರಾಜ್ಯದ ಗೌರವವನ್ನು ಗುರುತಿಸುತ್ತದೆ. ಚಿನ್ನ ಅಥವಾ ಬೆಳ್ಳಿಯ ಬಣ್ಣ ಸಮೃದ್ಧಿಯನ್ನು ಬಿಂಬಿಸುತ್ತದೆ. ಕೆಂಪು ಬಣ್ಣವನ್ನು ಉತ್ಸಾಹ ಹಾಗೂ ಅದೃಷ್ಟದ ಸಂಕೇತವಾಗಿ ಬಳಸಲಾಗುತ್ತದೆ. ಡ್ರ್ಯಾಗನ್‌ನ ತಲೆ ಮತ್ತು ಬಾಲವು ಆಕರ್ಷಕವಾಗಿ ಕಂಗೊಳಿಸುವ ನಿಟ್ಟಿನ್ನಲ್ಲಿ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ. 


ಸಣ್ಣ ಪ್ರದರ್ಶನಗಳಲ್ಲಿ ಇಬ್ಬರು ವ್ಯಕ್ತಿಗಳಿಂದ ನಿರ್ವಹಿಸಬಲ್ಲ 2 ಮೀಟರ್‌ಗಳಷ್ಟು ಉದ್ದದ ಡ್ರ್ಯಾಗನ್ ಗಳನ್ನು ಕಾಣಬಹುದು. ಹೆಚ್ಚು ಚಮತ್ಕಾರಿಕ ಮಾದರಿಗಳಿಗೆ 25 ರಿಂದ 35 ಮೀಟರ್ ಗಳ ಉದ್ದದ ಡ್ರ್ಯಾಗನ್ ಗಳನ್ನು ಬಳಸಿದರೆ,  ದೊಡ್ಡ ದೊಡ್ಡ ಮೆರವಣಿಗೆ ಮತ್ತು ಸಮಾರಂಭಗಳಲ್ಲಿ  50 ರಿಂದ 70 ಮೀಟರ್ ದೀರ್ಘವಾದ  ಡ್ರ್ಯಾಗನ್ ಗಳ ನೃತ್ಯಗಳನ್ನು ಕಾಣಬಹುದು. ಇವುಗಳ ಗಾತ್ರ ಮತ್ತು ಉದ್ದವು, ಆಯಾ ಸಮುದಾಯ ಅಥವಾ ವ್ಯಕ್ತಿಯ ಹಣಕಾಸಿನ ಸ್ಥಿತಿಗತಿ, ಲಭ್ಯವಿರುವ ಸಾಮಗ್ರಿಗಳು, ಕೌಶಲ್ಯಗಳನ್ನು ಅವಲಂಬಿಸಿರುತ್ತದೆ.

ಸಾಂಪ್ರದಾಯಿಕವಾಗಿ ಡ್ರ್ಯಾಗನ್‌ಗಳನ್ನು ಮರದಿಂದ ನಿರ್ಮಿಸಲಾಗುತಿತ್ತು. ಆದರೆ ಈಗ ಅಲ್ಯೂಮಿನಿಯಂ ಅಥವಾ ಪ್ಲಾಸ್ಟಿಕ್‌ಗಳಂತಹ ಹಗುರವಾದ ವಸ್ತುಗಳಿಂದ ತಯಾರು ಮಾಡಲಾಗುತ್ತದೆ. ಉಂಗುರ ಆಕೃತಿಯ ಜೋಡಣೆಯನ್ನು ಹೊಂದಿರುವ ದೇಹದ ಭಾಗಗಳನ್ನು ಸಂಬಂಧಪಟ್ಟ ಬಣ್ಣಗಳ ಬಟ್ಟೆಗಳಿಂದ ಮುಚ್ಚಲಾಗುತ್ತದೆ.

ಡ್ರ್ಯಾಗನ್‌ಗೆ ಶಿಫಾರಸು ಮಾಡಲಾದ ಉದ್ದವು 34 ಮೀಟರ್ ಮತ್ತು ಒಂಬತ್ತು ಭಾಗಗಳ ವಿಂಗಡಣೆಯಾಗಿವೆ. ಪಕ್ಕೆಲುಬಿನಂತಹ ಪ್ರತಿ ಚಿಕ್ಕ ವಿಭಾಗದ ಅಂತರವು 35 ಸೆಂಟಿಮೀಟರ್  ಅಂತರದಲ್ಲಿರುತ್ತದೆ.  ಡ್ರ್ಯಾಗನ್ ದೇಹದಲ್ಲಿ ಒಟ್ಟು  81 ಉಂಗುರಗಳನ್ನು ಅಳವಡಿಸಲಾಗಿರುತ್ತದೆ. ಇನ್ನು ಕೆಲವು 15 ವಿಭಾಗಗಳನ್ನು ಹೊಂದಿದ್ದರೆ ಮತ್ತೆ ಕೆಲವು  46 ವಿಭಾಗಗಳನ್ನು ಹೊಂದಿರುವ ಡ್ರ್ಯಾಗನ್ ಗಳು ಇವೆ. ಚೀನಿ ಪುರಾಣದ ಪ್ರಕಾರ ಡ್ರ್ಯಾಗನ್ ಉದ್ದವಿದ್ದಷ್ಟು ಅದೃಷ್ಟ ಹೆಚ್ಚು ಎಂಬುದು ಪ್ರತೀತಿ. ಡ್ರ್ಯಾಗನ್ ದೇಹದ ವಿಭಾಗಗಳು ಬೆಸ ಸಂಖ್ಯೆಯಲ್ಲಿ ರಚಿತವಾಗಿದ್ದರೆ ಮಂಗಳಕರ ಎನ್ನಲಾಗುತ್ತದೆ. 2002ರ ಅಕ್ಟೋಬರ್ 1ರಂದು ಹಾಂಗ್ ಕಾಂಗ್ ನ್ನಲ್ಲಿ ಬರೋಬ್ಬರಿ 5,605 ಮೀಟರ್ ಉದ್ದದ ಡ್ರ್ಯಾಗನ್ ಪ್ರದರ್ಶಿಸಲಾಯಿತು. ಇದು ವಿಶ್ವ ದಾಖಲೆಯೂ ಆಯಿತು.


ಡ್ರ್ಯಾಗನ್ ನೃತ್ಯದಲ್ಲಿ ಹಲವು ಮಾದರಿಗಳಿವೆ. ಅವುಗಳಲ್ಲಿ ಕೆಲವು ಪ್ರಮುಖವು "Cloud Cave", "Whirlpool", T'ai Chi Pattern, "Threading the Money",  "Looking for Pearl" , "Dragon Encircling the Pillar". ಎಂಬ ಹೆಸರುಗಳಿಂದ ಕರೆಯಲ್ಪಡುತ್ತವೆ. ಡ್ರ್ಯಾಗನ್ ನೃತ್ಯಕ್ಕೆ ಬಳಸುವ ಡ್ರ್ಯಾಗನ್ ದೇಹವನ್ನು ಸಾಮಾನ್ಯವಾಗಿ ಸ್ಥಳೀಯ 'ಡ್ರ್ಯಾಗನ್ ಕಿಂಗ್ ಟೆಂಪಲ್'ನಲ್ಲಿ ಇರಿಸಲಾಗುತ್ತದೆ. ಡ್ರ್ಯಾಗನ್ ನೃತ್ಯದ ದಿನದಂದು ಮಾತ್ರ ಅದನ್ನು ಹೊರತೆಗೆಯಲಾಗುತ್ತದೆ. ಡ್ರ್ಯಾಗನ್‌ನ ತಲೆ ಮತ್ತು ಬಾಲವನ್ನು ಅದರ ದೇಹಕ್ಕೆ ಜೋಡಿಸುವ  ಸಮಾರಂಭಕ್ಕೆ Eye pointing ಎಂದು ಕರೆಯಲಾಗುತ್ತದೆ.

ನೃತ್ಯದ ಸಮಯದಲ್ಲಿ ಒಂದು ದೊಡ್ಡ ಚೆಂಡಿನೊಂದಿಗೆ ಕೋಲನ್ನು ಹಿಡಿದಿರುವ ವ್ಯಕ್ತಿ ಡ್ರ್ಯಾಗನ್ ಮುನ್ನಡೆಸುತ್ತಾನೆ. ಚೆಂಡನ್ನು ಎಡಕ್ಕೆ ಮತ್ತು ಬಲಕ್ಕೆ, ಹಿಂದಕ್ಕೆ ಮತ್ತು ಮುಂದಕ್ಕೆ, ಮೇಲಕ್ಕೆ ಮತ್ತು ಕೆಳಕ್ಕೆ ಸರಿಸುತ್ತಾನೆ  ಡ್ರ್ಯಾಗನ್ ಈ ಚೆಂಡನ್ನು ಅನುಸರಿಸುತ್ತಾ ಮುಂದೆ ಸಾಗುತ್ತದೆ. ಅಲೆಗಳಲ್ಲಿ ಚಲಿಸುವ ಅದರ ದೇಹವು ನೃತ್ಯ ಮಾಡುತ್ತಿರುವಂತೆ ಭಾಸವಾಗುತ್ತದೆ. ಡ್ರ್ಯಾಗನ್ ನೃತ್ಯ ತಂಡದಲ್ಲಿ ಪ್ರದರ್ಶನ ನೀಡುವುದೆಂದರೆ ಹಲವಾರು ಸಂಯೋಜನೆಗಳನ್ನು ಮತ್ತು ಕೌಶಲ್ಯಗಳನ್ನು ಹೊಂದಿರಬೇಕು. ಸಂಕೀರ್ಣವಾದ ರಚನೆಗಳನ್ನು ಕಾರ್ಯಗತಗೊಳಿಸಲು ಉತ್ತಮ ತರಬೇತಿಯ ಜೊತೆಗೆ ತಂಡದ ಸೃಜನಶೀಲತೆಯು ಬಹು ಮುಖ್ಯವಾಗಿರುತ್ತದೆ. 

ಡ್ರ್ಯಾಗನ್ ನೃತ್ಯ ಶೈಲಿಯು ಎರಡು ಪ್ರಾಂತ್ಯಗಳ ಹೆಸರುಗಳಿಂದ ಗುರುತಿಸಲ್ಪಡುತ್ತದೆ. ದಕ್ಷಿಣದ ಶೈಲಿ ಹಾಗೂ ಉತ್ತರದ ಶೈಲಿ.  ದಕ್ಷಿಣದ ಡ್ರ್ಯಾಗನ್ ನೃತ್ಯವು ಯಾಂಗ್ಟ್ಜಿ ನದಿಯ { Yangtze River.} ಸುತ್ತಲಿನ ಪ್ರದೇಶಗಳಿಂದ ಹುಟ್ಟಿಕೊಂಡಿದೆ. ಇಲ್ಲಿನ ಡ್ರ್ಯಾಗನ್ ದೇಹವು ನೈಜ ಪ್ರಾಣಿಯ ಮೈ ರಚನೆಯನ್ನೇ ಚಿತ್ರಿಸಿರುವ ಬಟ್ಟೆಯಿಂದ ಅಲಂಕೃತಗೊಂಡಿರುತ್ತವೆ. ಈ ಭಾಗದ ಶೈಲಿಯು ಆವೇಗ, ಶಕ್ತಿ ಮತ್ತು ಭವ್ಯವಾದ ನೋಟವನ್ನು ಒತ್ತಿಹೇಳುತ್ತದೆ.  ಹೆಚ್ಚಿನ ತೂಕವನ್ನು ಹೊಂದಿರುವ ದಕ್ಷಿಣದ ಡ್ರ್ಯಾಗನ್, ಚುರುಕಾದ ಚಲನೆಯನ್ನು ಪ್ರದರ್ಶಿಸುವುದಿಲ್ಲ. ಇದನ್ನು ಸಾಂಪ್ರದಾಯಿಕವಾಗಿ ಬಿದಿರು ಮತ್ತು ಕಾಗದದಿಂದ ತಯಾರಿಸಲಾಗುತ್ತದೆ.


ಉತ್ತರದ ಡ್ರ್ಯಾಗನ್ ನೃತ್ಯ ಶೈಲಿ, ಯಾಂಗ್ಟ್ಜಿ ನದಿಯ ಉತ್ತರ ಭಾಗದಲ್ಲಿ ಹೆಚ್ಚು ಪ್ರಚಲಿತ. ಉತ್ತರದ ಡ್ರ್ಯಾಗನ್ ದೇಹ ಮತ್ತು ತಲೆಯು ಚಿಕ್ಕದಾಗಿದ್ದು ಕಾಗದ ಅಥವಾ ಸಸ್ಯಗಳ ನಾರುಗಳಿಂದ ರಚನೆಗೊಂಡಿರುತ್ತವೆ. ಸಾಮಾನ್ಯವಾಗಿ ಇವುಗಳನ್ನು ಕತ್ತಲೆ ಪರಿಸರದಲ್ಲಿ ನಡೆಸುವ ಕಾರಣ ಪ್ರತಿದೀಪಕ ವಸ್ತುಗಳನ್ನು ಅಳವಡಿಸಲಾಗುತ್ತದೆ. ಚಲನೆಗಳಲ್ಲಿ ನಮ್ಯತೆಯನ್ನು ಹೊಂದಿರುವ ಇದು, ಸಿಂಹ ನೃತ್ಯವನ್ನು ಹೋಲುತ್ತದೆ. ಪ್ರಸ್ತುತ ಉತ್ತರದ ಶೈಲಿಯು ಚೀನಾ, ಹಾಂಗ್ ಕಾಂಗ್, ಮಲೇಷಿಯಾ ಮತ್ತು ಸಿಂಗಾಪುರದಲ್ಲಿ ಜನಪ್ರಿಯವಾಗಿದೆ. 

ಚೀನಿಯರ ಹೊಸ ವರ್ಷ ಹಾಗೂ ಮಧ್ಯ ಶರತ್ಕಾಲದ ಉತ್ಸವದ ಸಂದರ್ಭಗಳಲ್ಲಿ ಸಿಂಗಾಪುರಕ್ಕೆ ಭೇಟಿ ನೀಡಿದರೆ ಪ್ರತಿ ದಿನವೂ ಡ್ರ್ಯಾಗನ್ ಡ್ಯಾನ್ಸ್ ಪ್ರದರ್ಶನ ಸಾಮಾನ್ಯವಾಗಿರುತ್ತದೆ. ಬಗೆಬಗೆಯ ಅಲಂಕಾರಗಳಿಂದ ಸಿಂಗರಿಸುವ ಇಲ್ಲಿನ ಚೈನಾ ಟೌನ್ ಪ್ರದೇಶದಲ್ಲಿ ಅದೃಷ್ಟ ಮತ್ತು ಸಮೃದ್ಧಿಯನ್ನು ಸ್ವಾಗತಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತದೆ.

ಹೊಸ ವ್ಯಾಪಾರದ ಆರಂಭ, ಗೃಹಪ್ರವೇಶ, ಈಗಿರುವ ವ್ಯಾಪಾರ - ವಹಿವಾಟು ಉತ್ತಮ ರೀತಿಯಲ್ಲಿ ಮುನ್ನಡೆಯಲು ಡ್ರ್ಯಾಗನ್ ನೃತ್ಯವನ್ನು ಆಡಿಸಲಾಗುತ್ತದೆ. ಆಯಾ ಪ್ರದೇಶಕ್ಕೆ ಸುತ್ತು ಬರುವ ಈ ಡ್ರ್ಯಾಗನ್, ಸಾಂಪ್ರದಾಯಿಕ ನೃತ್ಯವನ್ನು ನೆರವೇರಿಸಿ ಮಾಲೀಕರ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತದೆ. ಈ ನೃತ್ಯ ತಂಡದ ಜೊತೆ ಪಕ್ಕವಾದ್ಯಗಳನ್ನು ನುಡಿಸುವವರು ಗಮನಸೆಳೆಯುತ್ತಾರೆ.   ಇವರಲ್ಲಿನ ತಾಳಗಳು, ಡ್ರಮ್ ಹಾಗೂ  ಗಾಂಗ್ {Gong } ಎಂಬ ಹೆಸರಿನ ಮತ್ತೊಂದು ಉಪಕರಣದ ಜೊತೆಗಿನ ಸಂಗೀತ, ಡ್ರ್ಯಾಗನ್ ನೃತ್ಯಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತವೆ.  ಅಂದಹಾಗೆ, ಚೀನಿ ರಾಶಿ ಚಕ್ರದ ಪ್ರಕಾರ ಇಲಿ, ಮಂಗ ಹಾಗೂ ಡ್ರ್ಯಾಗನ್ ವರ್ಷಗಳಲ್ಲಿ ಹುಟ್ಟಿದವರು ಭಯಂಕರ ಸ್ಟ್ರಾಂಗ್ ಅಂತೇ ಮಾರಾಯರೇ ..!
ಈ ಅಂಕಣದ ಹಿಂದಿನ ಬರಹಗಳು:
ದಕ್ಷ ವ್ಯವಸ್ಥೆಯೊಂದಿಗೆ ಅಚ್ಚರಿಯ ಸಾಧನೆಯತ್ತ ಸದಾ ತುಡಿವ ‘ಗ್ರೀನೆಷ್ಟ್ ಸಿಟಿ’ ಸಿಂಗಾಪುರ್
ಅಚ್ಚರಿಯ ‘ಸಿಂಗಾಪುರ್’ ಮತ್ತು ಅದರ ಭೂವಿಸ್ತರಣಾ ಕಾರ್ಯ

 

 

 

 

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...