ಅಚ್ಚರಿಯ ‘ಸಿಂಗಾಪುರ್’ ಮತ್ತು ಅದರ ಭೂವಿಸ್ತರಣಾ ಕಾರ್ಯ

Date: 23-10-2021

Location: ಬೆಂಗಳೂರು


'ಬೆಂಗಳೂರಿನಿಂದ ಗಂಟುಮೂಟೆ ಹೊತ್ತು 2013ರಲ್ಲಿ ಸಿಂಗಾಪುರಕ್ಕೆ ಬಂದಿಳಿದಿದ್ದ ನಮಗೆ ಸಮಯ ಕಳೆದಂತೆ ಒಂದೊಂದೇ ಅಚ್ಚರಿಗಳು ಗೋಚರಿಸತೊಡಗಿದವು' ಎನ್ನುತ್ತಾರೆ ಶ್ರೀವಿದ್ಯಾ ಅವರು ತಮ್ಮ ಸಿಂಗಾಪುರ್ ಡೈರೀಸ್ ಅಂಕಣದಲ್ಲಿ ಸಿಂಗಾಪುರದ ಭೂವಿಸ್ತರಣಾ ಸೋಜಿಗಗಳ ಕುರಿತು ವಿಶ್ಲೇಷಿಸಿದ್ದಾರೆ.

ನೀರು ಅಂದ್ರೆ ಭಯ. ಕೆರೆಗಳು, ನದಿಗಳು, ಸಮುದ್ರಗಳನ್ನು ಕಂಡಾಗಲೆಲ್ಲಾ ಭಯಾನಕ ಆಲೋಚನೆಗಳು. ಆಯಾ ಪ್ರದೇಶದ ಸೊಬಗನ್ನು ಅನುಭವಿಸುವುದಿಕ್ಕಿಂತಲೂ ಏನಾದರೂ ಕೆಟ್ಟ ಘಟನೆ ಸಂಭವಿಸಿದರೆ ಅನ್ನುವ ಗುಂಗಿನಲ್ಲಿರುವುದೇ ಹೆಚ್ಚು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬೆಳೆದ ನಮಗೆ ಆನೆಗಳು, ಜಿಂಕೆಗಳು, ನವಿಲುಗಳು, ಸರೀಸೃಪಗಳು ದಿನನಿತ್ಯದ ಅತಿಥಿಗಳು. ಚಾರ್ಮಾಡಿಯಿಂದ ಉಜಿರೆಯವರೆಗಿನ ನಮ್ಮ ಶಾಲೆಯ ಪಯಣವಂತೂ ಕಾಡಿನ ಮಧ್ಯದಲ್ಲೇ ಸಾಗುತಿತ್ತು.

ನೀರಿನ ಬಗ್ಗೆ ಬಹಳಷ್ಟು ಲೆಕ್ಕಾಚಾರವನ್ನು ಹೊಂದಿರುವ ನನಗೆ ಇದೀಗ ಪ್ರತಿ ಬಾರಿಯೂ ಬಂಗಾಳ ಕೊಲ್ಲಿಯನ್ನು ದಾಟುವ ಕಥೆ ಕೇಳೋದೇ ಬೇಡ. ಸಮುದ್ರದ ಮೇಲಿನ ಸುಮಾರು 7,014.4 ಕಿಲೋಮೀಟರ್ ಪ್ರಯಾಣ, ಕೆಲವೊಮ್ಮೆ ಹವಾಮಾನದಿಂದಾಗಿ ನಡೆಯುವ ಪ್ರಕ್ಷುಬ್ಧತೆಗಳು ಒಮ್ಮೆ ನೆಲ ಮುಟ್ಟಿದರೆ ಸಾಕಪ್ಪಾ ಅನ್ನಿಸಿಬಿಡುತ್ತದೆ.

ಬೆಂಗಳೂರಿನಿಂದ ಗಂಟುಮೂಟೆ ಹೊತ್ತು 2013ರಲ್ಲಿ ಸಿಂಗಾಪುರಕ್ಕೆ ಬಂದಿಳಿದಿದ್ದ ನಮಗೆ ಸಮಯ ಕಳೆದಂತೆ ಒಂದೊಂದೇ ಅಚ್ಚರಿಗಳು ಗೋಚರಿಸತೊಡಗಿದವು. ವಿದೇಶ ಅಂದರೇನೇ ಒಂದು ಸೋಜಿಗ..! ಭಿನ್ನ ಭಿನ್ನವಾಗಿ ಕಾಣುವ ಪ್ರತಿಯೊಂದು ವಿಚಾರಗಳು ನಮ್ಮಲ್ಲಿ ಹಲವು ಕುತೂಹಲಗಳಿಗೆ ಕಾರಣವಾದವು.


Photo source: https://www.nas.gov.sg/
ಇಲ್ಲಿನ ಮರೀನಾ ಕೋಸ್ಟಲ್ ಎಕ್ಸ್‌ಪ್ರೆಸ್‌ವೇ ಸಿಂಗಾಪುರದ ಮೊದಲ ಸಾಗರದೊಳಗಿನ ರಸ್ತೆ. ಅತ್ಯಂತ ದುಬಾರಿಯ ಹಾಗೂ ಪ್ರತಿ ದಿಕ್ಕಿನಲ್ಲೂ ಐದು ಪಥಗಳನ್ನು ಹೊಂದಿರುವ ಅಗಲವಾದ ಸುರಂಗ ಮಾರ್ಗ. ಸಮುದ್ರದ ಅಡಿಯಲ್ಲಿ 5 ಕಿಮೀ ಉದ್ದಕ್ಕೆ ರಸ್ತೆ ಹಾದುಹೋಗುತ್ತವೆ. ಪ್ರತಿ ಬಾರಿಯೂ ಈ ಸುರಂಗದಲ್ಲಿ ಪ್ರಯಾಣಿಸುವ ವೇಳೆ ನನಗಂತೂ ಎಮರ್ಜೆನ್ಸೀ ಎಗ್ಸಿಟ್ ನೋಡೋದೇ ಕೆಲಸ.

ಸುಮಾರು 728.6 ಕಿಲೋ ಮೀಟರ್ ನಷ್ಟು ಭೂಭಾಗವನ್ನು ಹೊಂದಿರುವ ಸಿಂಗಾಪುರದ ಸುತ್ತಾ ಇರೋದು ಬರೀ ನೀರು. ಏರುತ್ತಿರುವ ಜನಸಂಖ್ಯೆ ಒಂದೆಡೆಯಾದರೆ, ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಮತ್ತೊಂದೆಡೆ. ಜಾಗತಿಕ ತಾಪಮಾನ ಹಾಗೂ ಹೆಚ್ಚುತ್ತಿರುವ ಮಳೆಯಿಂದಾಗಿ ಪ್ರತಿ ವರ್ಷ ಸಮುದ್ರದ ಮಟ್ಟ ಏರುತ್ತಲೇ ಇದೆ. ಪರಿಣಾಮ ಇಲ್ಲಿನ ಸಣ್ಣಪುಟ್ಟ ದ್ವೀಪಗಳು ಮುಳುಗಡೆಯ ಭೀತಿಯನ್ನು ಎದುರಿಸುತ್ತಿವೆ.

ಇದಕ್ಕೆಲ್ಲಾ ಪರಿಹಾರವಾಗಿ ಸಿಂಗಾಪುರ ಕಂಡುಕೊಂಡಿದ್ದೇ ಭೂ ಭಾಗವನ್ನು ವಿಸ್ತರಿಸುವ ಕಾರ್ಯ. ಅದೇ ಲ್ಯಾಂಡ್ ರೆಕ್ಲಮೇಶನ್. ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಯುದ್ಧಗಳ ಮೂಲ ಉದ್ದೇಶ ತನ್ನ ರಾಜ್ಯವನ್ನು ಮತ್ತಷ್ಟು ವಿಸ್ತರಿಸುವುದು. ಈ ಮೂಲಕ ತನ್ನ ಭಾಗದ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವುದು. ಇದೇ ರೀತಿಯ ಯೋಜನೆಯನ್ನು ಹೊಂದಿರುವ ಸಿಂಗಾಪುರ, ಮತ್ತಷ್ಟು ಭೂಮಿ ಪಡೆಯಲು ಆಯ್ಕೆ ಮಾಡಿಕೊಂಡಿರುವುದು ನದಿ ಮತ್ತು ಸಮುದ್ರವನ್ನು.


Photo source: https://www.nas.gov.sg/
ಹಾಗಂತ ಇದು ಇತ್ತೀಚೆಗೆ ಆರಂಭವಾಗಿರುವ ವಿದ್ಯಮಾನವಲ್ಲ. ಇದಕ್ಕೊಂದು ಇತಿಹಾಸವಿದೆ. ಇವರ ಹೆಸರು ಸರ್ ಸ್ಟಾಮ್‌ಫೋರ್ಡ್ ರಾಫಲ್ಸ್. ಸುಮಾರು 200 ವರ್ಷಗಳ ಹಿಂದೆ ಆಧುನಿಕ ಸಿಂಗಾಪುರವನ್ನು ಸ್ಥಾಪಿಸಿದ ವ್ಯಕ್ತಿ. 1819ರಲ್ಲಿ ಮೊದಲ ಬಾರಿಗೆ ಸಿಂಗಾಪುರಕ್ಕೆ ಆಗಮಿಸಿದ ರಾಫೆಲ್ಸ್, ಟ್ರೇಡಿಂಗ್ ಪೋಸ್ಟ್ ಸ್ಥಾಪಿಸಲು ನಿರ್ಧರಿಸಿದರು. ಇದಕ್ಕಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಹಕ್ಕುಗಳನ್ನು ನೀಡಿ ಜೋಹೂರಿನ ಸುಲ್ತಾನನೊಂದಿಗೆ ಒಪ್ಪಂದಕ್ಕೂ ಸಹಿ ಹಾಕಿದ್ದರು. ಡಚ್ಚರ ಪೈಪೋಟಿಗೆ ಬ್ರಿಟಿಷ್ ಬಂದರನ್ನು ಅಭಿವೃದ್ಧಿಪಡಿಸುವ ಗುರಿ ರಾಫೆಲ್ಸ್ ಅವರದ್ದಾಗಿತ್ತು. ಆ ಸಮಯದಲ್ಲಿ ಸಿಂಗಾಪುರವು ಮೀನುಗಾರಿಕೆಯ ಸಣ್ಣ ಗ್ರಾಮವಾಗಿತ್ತು. ಈ ಗ್ರಾಮವನ್ನು ಮಹತ್ವದ ವ್ಯಾಪಾರ ಕೇಂದ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ 1822 ರಲ್ಲಿ ಮೊಟ್ಟಮೊದಲ ಬಾರಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಯಿತು. ಸುಮಾರು 200 ರಿಂದ 300 ಮಂದಿ ಚೀನಿ, ಮಲಯ್ ಹಾಗೂ ಭಾರತೀಯ ಕಾರ್ಮಿಕರು ಈ ಕಾರ್ಯವನ್ನು 5 ತಿಂಗಳೊಳಗೆ ಪೂರ್ಣಗೊಳಿಸಿದ್ದರು.

ಹೀಗೆ ಮುಂದುವರಿದಿರುವ ಈ ಕಾರ್ಯದಿಂದಾಗಿ ಕಳೆದ ಎರಡು ಶತಮಾನಗಳಲ್ಲಿ ಸಿಂಗಾಪುರದ ಭೂ ವಿಸ್ತೀರ್ಣವು 25 ರಷ್ಟು ವಿಸ್ತರಿಸಿ ಕೊಂಡಿದೆ. ಮೊದಲಿದ್ದ 58,150 ಭೂ ಪ್ರದೇಶವು ಇದೀಗ 71,910 ಹೆಕ್ಟೇರ್ ಗಳವರೆಗೆ ಹರಡಿ ಕೊಂಡಿದೆ.


Photo source: https://blogs.ntu.edu.sg/hp331-2014-10/?page_id=7
ಹಾಗಾದರೆ ಏನಿದು ಲ್ಯಾಂಡ್ ರಿಕ್ಲಮೇಶನ್.? ಯಾವ ರೀತಿ ನಡೆಯುತ್ತದೆ ಈ ಕೆಲಸಗಳು ? ನಿಜಕ್ಕೂ ಕುತೂಹಲದ ವಿಚಾರವೇ..!.

ಮೊದಲಿಗೆ ಸರ್ಕಾರದಿಂದ ಗುರುತಿಸಲ್ಪಟ್ಟ ಜಾಗದ ಸಮುದ್ರದ ತಳದ ಸ್ಥಿತಿಯ ಪರಿಶೀಲನೆ ನಡೆಸಲಾಗುತ್ತದೆ. ನೀರಿನ ಗುಣಮಟ್ಟ, ನೀರಿನ ಉಬ್ಬರವಿಳಿತದ ಹರಿವು, ಸಮುದ್ರ ಜೀವಿಗಳು, ಭರ್ತಿ ಸಾಮಗ್ರಿಗಳ ಲಭ್ಯತೆ, ಆಕಾರ ಮತ್ತು ಜೋಡಣೆ ಜೊತೆಗೆ ಸೆಡೀಮೆಂಟೇಶನ್ ಅಂದರೆ ತಡೆಗೋಡೆ ಕಟ್ಟಲು ಬಳಸುವ ಸಾಮಗ್ರಿಗಳು ನೀರಿನಲ್ಲಿ ತೇಲಿ ಹೋಗದೆ ತಳದಲ್ಲಿ ಸಂಗ್ರಹವಾಗುತ್ತದೆಯೋ ಎಂಬ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ.

ಇದಾದ ಬಳಿಕ ಪರಿದಿಯ ಸುತ್ತಾ ಸಮುದ್ರದ ತಳದಲ್ಲಿ ಆಳವಾಗಿ ಗೋಡೆಗಳನ್ನು ನಿರ್ಮಿಸಲಾಗುತ್ತದೆ. ಮರಳು ಮತ್ತು ಕಲ್ಲು, ಜೇಡಿಮಣ್ಣುಗಳನ್ನು ಬಳಸಲಾಗುತ್ತದೆ. ಒಳಭಾಗದಲ್ಲಿ ಸಂಗ್ರಹವಾಗುವ ನೀರನ್ನು ಮತ್ತೆ ಸಮುದ್ರಕ್ಕೆ ಹರಿಸಲಾಗುತ್ತದೆ. ಸಾಮಾನ್ಯವಾಗಿ ಕಾಂಕ್ರೀಟ್ ಹಾಗೂ ಕೆಸರನ್ನು ಬಳಸಿ ಅಡಿಪಾಯವನ್ನು ಸ್ಥಿರಗೊಳಿಸಲಾಗುತ್ತದೆ. ಆದರೆ ಸಿಂಗಾಪುರ ಆರಂಭದಿಂದಲೂ ಸಾಂಪ್ರಾದಾಯಿಕ ರೀತಿಯಲ್ಲಿ ಮರಳನ್ನು ಬಳಸಿ ಭೂಮಿ ಪಡೆಯುವ ಕಾರ್ಯವನ್ನು ನಡೆಸುತ್ತಿದೆ.


Photo source: https://www.nas.gov.sg/
ಹೀಗಾಗಿಯೇ ಸಿಂಗಾಪುರವು ವಿಶ್ವದಲ್ಲೇ ಅತಿ ಹೆಚ್ಕು ಮರಳು ಆಮದು ಮಾಡಿಕೊಳ್ಳುವ ದ್ವೀಪ ಎನ್ನಲಾಗಿದೆ. ಕಳೆದ 20 ವರ್ಷಗಳಲ್ಲಿ 517 ದಶಲಕ್ಷ ಟನ್ ಮರಳನ್ನು ತರಿಸಿಕೊಂಡಿದೆ. ಪ್ರಾರಂಭದಲ್ಲಿ ಇಂಡೋನೇಷ್ಯಾ, ಮಲೇಷ್ಯಾ ಹಾಗೂ ಕಾಂಬೋಡಿಯ ದೇಶಗಳು ಸಿಂಗಾಪುರಕ್ಕೆ ಮರಳು ರಫ್ತು ಮಾಡುತ್ತಿದ್ದವು. ಆದರೆ ರಫ್ತಿನ ಪ್ರಮಾಣ ಅಧಿಕಗೊಳ್ಳುತ್ತಿದ್ದಂತೆ 2000 ನೇ ಇಸವಿ ಕೊನೆಯ ಹಂತದಲ್ಲಿ ಒಂದೊಂದಾಗಿ ಮೂರು ದೇಶಗಳು ನಿಷೇಧ ಹೇರಿದವು. ಪರಿಣಾಮ ಅದುವರೆಗಿನ ಭೂ ನಿರ್ಮಾಣಕ್ಕಾಗಿ ಮರಳಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಂತೆ ಮಾಡಿತು. ಬದಲಿಗೆ ಭರ್ತಿಗಾಗಿ ನಿರ್ಮಾಣ ಯೋಜನೆಗಳಿಂದ ಬಂಡೆ ಮತ್ತು ಮಣ್ಣಿನ ಅವಶೇಷಗಳನ್ನು ಬಳಸಲು ಆರಂಭಿಸಿತು.

ಇತ್ತೀಚೆಗಂತೂ ಸಿಂಗಾಪುರವು ಆಧುನಿಕ ಶೈಲಿಯಲ್ಲಿ ಭೂ ಪ್ರದೇಶವನ್ನು ರಚಿಸುವ ಕಾರ್ಯದಲ್ಲಿ ತೊಡಗಿದೆ. ಇದರ ಹೆಸರು "ಎಂಪೊಲ್ಡರಿಂಗ್". ನಿರ್ದಿಷ್ಟ ಸ್ಥಳದ ಸುತ್ತ ಸಮುದ್ರ ಮಟ್ಟದಿಂದ ಸುಮಾರು 6 ಮೀಟರ್ ಎತ್ತರದಲ್ಲಿ, 10 ಕಿಲೋಮೀಟರ್ ಉದ್ದ, 15 ಮೀಟರ್ ಅಗಲದ ಕಂದಕವನ್ನು ರಚಿಸಲಾಗುತ್ತದೆ. ಒಳಭಾಗದ ತಗ್ಗು ಪ್ರದೇಶದವನ್ನು ಸಂಪೂರ್ಣವಾಗಿ ಕಲ್ಲು ಮಣ್ಣುಗಳಿಂದ ಮುಚ್ಚುವ ಬದಲು , ನಡುನಡುವೆ ಹಳ್ಳ , ಚರಂಡಿ, ಕಾಲುವೆಗಳನ್ನು ನಿರ್ಮಿಸಲಾಗುತ್ತದೆ. ಈ ಮೂಲಕ ಮರಳಿನ ಬಳಕೆಯ ಪ್ರಮಾಣ ಕಡಿತಗೊಳಿಸುವ ವಿನೂತನ ಯೋಜನೆ ಇದಾಗಿದೆ.


Source: Ben Choong Property
ಹೀಗೆ ಸಿದ್ಧವಾದ ಭೂಮಿಯನ್ನು ಸರ್ಕಾರವು ಮೂಲಸೌಕರ್ಯ ಯೋಜನೆಗಳು, ಕೈಗಾರಿಕೆಗಳು, ಸಾರಿಗೆ ಸಂಪರ್ಕಗಳಂತಹ ಸಾರ್ವಜನಿಕ ಉಪಯುಕ್ತತೆಗಳು ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ಬಳಸುತ್ತಿದೆ. 19ನೇ ಶತಮಾನದಲ್ಲಂತೂ ಇಲ್ಲಿನ ಕರಾವಳಿ ಭಾಗವನ್ನು ಬಲಪಡಿಸಲು ಮತ್ತು ಮೀನುಗಾರಿಕಾ ಸಮುದಾಯಗಳನ್ನು ಪ್ರವಾಹದಿಂದ ರಕ್ಷಿಸಲು ಬಳಸಿಕೊಂಡಿತ್ತು. ಸಿಂಗಾಪುರದಲ್ಲಿ ಈಗ ಕಾಣಬಹುದಾದ ಚಾಂಗಿ ವಿಮಾನ ನಿಲ್ದಾಣ, ಮರೀನಾ ಬೇ ಸ್ಯಾಂಡ್ಸ್ ರೆಸಾರ್ಟ್ ಹೀಗೆ ಪ್ರಮುಖ ಹೆಗ್ಗುರುತುಗಳು ಮಣ್ಣು ಮತ್ತು ಕಲ್ಲಿನ ಒಳಹರಿವಿನಿಂದ ಒದಗಿಸಲಾದ ಹೆಚ್ಚುವರಿ ಜಾಗದಿಂದ ನಿರ್ಮಾಣಗೊಂಡವುಗಳಾಗಿವೆ.
ಹೀಗೆ ಭೂ ಪ್ರದೇಶವನ್ನು ವಿಸ್ತರಿಸುತ್ತಿರುವ ಸಿಂಗಾಪುರ ಪ್ರತಿ 1000 ನಾಗರಿಕರಿಗೆ 0.8 ಹೆಕ್ಟೇರ್ ಹಸಿರಿನಿಂದ ಕೂಡಿದ ಉದ್ಯಾನವನ್ನು ನಿರ್ಮಿಸುತ್ತಾ ಬೆಳೆಯುತ್ತಿದೆ. ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸುವ ಮೂಲಕ ವಾಸ ಯೋಗ್ಯ ನಗರ ಎಂಬ ಹೆಸರಿಗೂ ಪಾತ್ರವಾಗಿದೆ.


ಈ ಭೂಮಿ ಪುನಃಸ್ಥಾಪನೆಗೆ ಸಂಬಂಧಿಸಿ ಅಭಿವೃದ್ಧಿ ಒಂದೆಡೆಯಾದರೆ, ಅಪಾಯಗಳು ಮತ್ತೊಂದೆಡೆ. ಈ ಪ್ರಕ್ರಿಯೆಯ ಪ್ರಮುಖ ಕಾಳಜಿ ಮಣ್ಣು ಮತ್ತು ಮರಳಿನ ಆಯುಷ್ಯ. ಇವುಗಳ ಮಿಶ್ರಣದಿಂದ ರಚನೆಗೊಳ್ಳುವ ಭೂ ಪ್ರದೇಶ ಜೊತೆಗೆ ಆ ಭೂಮಿಯಲ್ಲಿ ತಲೆಯೆತ್ತುವ ಕಟ್ಟಡಗಳು. ಒಂದು ವೇಳೆ ಕಾಲಕ್ರಮೇಣ ಮಣ್ಣು ಮತ್ತು ಮರಳು ಸಂಕುಚಿತಗೊಂಡರೆ ಅಪಾಯಗಳು ಕಟ್ಟಿಟ್ಟ ಬುತ್ತಿ. ಆಯಾ ಪ್ರದೇಶಗಳಲ್ಲಿ ಕುಸಿತಗಳು ಸಂಭವಿಸುವ ಸಾಧ್ಯತೆಗಳೇ ಹೆಚ್ಚು.

2100 ರ ವೇಳೆಗೆ ಜಾಗತಿಕ ಸಮುದ್ರ ಮಟ್ಟವು 6 ಅಡಿಗಳಷ್ಟು ಏರಿಕೆಯಾಗಬಹುದು ಎಂದು ವಿಜ್ಞಾನಿಗಳ ಊಹೆ. ಕರಾವಳಿಯ ನಗರಗಳಾದ ನ್ಯೂಯಾರ್ಕ್, ಮಿಯಾಮಿ, ರಿಯೊ ಡಿ ಜನೈರೊ ಮತ್ತು ಮುಂಬೈ ಇವುಗಳ ವಿರುದ್ಧ ಮಹತ್ವದ ಯೋಜನೆಗಳನ್ನು ಕೈಗೊಳ್ಳಬೇಕಿದೆ. ಏರುತ್ತಿರುವ ಅಲೆಗಳ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳಲು ಭೂಮಿಯನ್ನು ವಿಸ್ತರಿಸುವ ಯೋಜನೆಯಲ್ಲಿ ಆಸಕ್ತಿ ತೋರಿವೆ. ಇದಲ್ಲದೆ, ಹಲವಾರು ದೇಶಗಳು ಕೂಡ ಮೂಲಸೌಕರ್ಯ ಅಭಿವೃದ್ಧಿಗಾಗಿಯೂ ಭೂ ಸುಧಾರಣೆಯನ್ನು ಅಳವಡಿಸಿಕೊಂಡಿವೆ.


Source: https://data.gov.sg

2030 ರ ವೇಳೆಗೆ ಹೆಚ್ಚುವರಿಯಾಗಿ 7-8% ರಷ್ಟು ಭೂ ಭಾಗವನ್ನು ವಿಸ್ತರಿಸುವ ಯೋಜನೆಯನ್ನು ಸಿಂಗಾಪುರ ಸರ್ಕಾರ ರೂಪಿಸಿದೆ. ಅಭಿವೃದ್ಧಿಯ ಭರದಲ್ಲಿ ಸಸ್ಯ ರಾಶಿಗಳು. ಸಮುದ್ರ ಜೀವಿಗಳು ಅಳಿವಿನಂಚಿಗೆ ತಳ್ಳಿದರೂ, ಅಷ್ಟೇ ವೇಗದಲ್ಲಿ ಪ್ರಕೃತಿ ಮೀಸಲು ಅಭಿವೃದ್ಧಿಯ ಪ್ರಯತ್ನಗಳು ನಡೆಯುತ್ತಿರುವುದು ಗಮನಾರ್ಹ ಸಂಗತಿ.

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...