ದಕ್ಷ ವ್ಯವಸ್ಥೆಯೊಂದಿಗೆ ಅಚ್ಚರಿಯ ಸಾಧನೆಯತ್ತ ಸದಾ ತುಡಿವ ‘ಗ್ರೀನೆಷ್ಟ್ ಸಿಟಿ’ ಸಿಂಗಾಪುರ್

Date: 19-11-2021

Location: ಬೆಂಗಳೂರು


‘ಅಭಿವೃದ್ಧಿ ಹೆಸರಿನಲ್ಲಿ ಗಗನಚುಂಬಿ ಕಟ್ಟಡಗಳು, ರಾಶಿ ರಾಶಿ ಮೆಗಾ ಮಾಲ್ ಗಳು ಮಾತ್ರ ತಲೆಯೆತ್ತುತ್ತಿದ್ದರೆ ದೊಡ್ಡ ವಿಚಾರ ಆಗುತ್ತಿರಲಿಲ್ಲವೇನೋ..! ಇವೆಲ್ಲದರೊಟ್ಟಿಗೆ ಸಿಂಗಾಪುರ್ ಹಸಿರಿಗೂ ಪ್ರಾಮುಖ್ಯತೆ ಕೊಟ್ಟಿರುವುದು ಗಮನಾರ್ಹ ಸಂಗತಿ’ ಎನ್ನುತ್ತಾರೆ ಶ್ರೀವಿದ್ಯಾ. ಅವರು ತಮ್ಮ ಸಿಂಗಾಪುರ್ ಡೈರೀಸ್ ಅಂಕಣದಲ್ಲಿ ಸಿಂಗಾಪುರದ ದಕ್ಷ ವ್ಯವಸ್ಥೆ ಹಾಗೂ ಪರಿಸರ ಕಾಳಜಿಯ ಕುರಿತು ಬರೆದಿದ್ದಾರೆ.

ಆಗಷ್ಟೇ ಡ್ರೈವಿಂಗ್ ಲೈಸೆನ್ಸ್ ಕೈಗೆ ಬಂದಿದ್ದ ದಿನಗಳು. ಸರಿಯಾಗಿ ಗಾಡಿ ಓಡಿಸಲು ಬರುತ್ತದೋ ಇಲ್ಲವೋ, ಪರವಾನಿಗೆ ಮಾತ್ರ ಸುಲಭದಲ್ಲಿ ಸಿಕ್ಕಿತ್ತು. ಪ್ರಾಥಮಿಕ ಹಂತದ ಮಾಹಿತಿಯೇನೋ ಡ್ರೈವಿಂಗ್ ಸ್ಕೂಲ್‌ನಲ್ಲಿ ಲಭಿಸಿತ್ತು. ಆದರೆ ಅಷ್ಟೂ ಪ್ರಯೋಗಗಳು ಸ್ವಂತ ವಾಹನದಲ್ಲಿ ಭಟ್ಟಿ ಇಳಿಸುವುದಿದೆ ನೋಡಿ..! ಆ ಸಮಯಗಳಲ್ಲಿ ಸಂಭವಿಸುವ ಘಟನೆಗಳು, ಅನುಭವಗಳು ಯಾವತ್ತೂ ಮರೆಯುವಂತಿಲ್ಲ.

ಈ ವಿಚಾರದಲ್ಲಿ ಅಪ್ಪನಿಗಂತೂ ನನ್ನ ಮೇಲೆ ಸ್ವಲವೂ ನಂಬಿಕೆ ಇರಲಿಲ್ಲ. ಆದರೂ ನನ್ನ ಸಮಾಧಾನಕ್ಕೆ ಕೆಲವೊಮ್ಮೆ ಅವಕಾಶ ದಯ ಪಾಲಿಸಿದ್ದೂ ಇದೆ. ತನ್ನ ಗಾಡಿಗೂ ಪೆಟ್ಟಾಗದಂತೆ, ಮಗಳಿಗೂ ಬೇಜಾರಾಗದಂತೆ ಗೇರು ಬದಲಿಕೆಯ ಅಗತ್ಯವಿಲ್ಲದ ನೇರ ರಸ್ತೆಗಳಲ್ಲಿ ಡ್ರೈವಿಂಗ್ ಸೀಟ್ ಬಿಟ್ಟು ಕೊಡುವ ಪರಿಪಾಠ ಇಟ್ಟುಕೊಂಡಿದ್ದರು. ಹೀಗೆ ಚಾಲನೆಗೆ ಕೂತಾಗ ಎಲ್ಲಾದರೂ ಲೆಕ್ಕಾಚಾರ ತಪ್ಪಿತೋ, ಡ್ರೈವಿಂಗ್ ಕಲಿಸಿದವ, ಲೈಸೆನ್ಸ್ ಕೊಟ್ಟವನನ್ನು ಸೇರಿಸಿ ನನಗೆ ಮಂಗಳಾರತಿ ಮಾಡಿಯೇ ಕೆಳಗಿಳಿಸುತ್ತಿದ್ದರು.
ಆದರೆ ಸಿಂಗಾಪುರದಲ್ಲಿ ಚಾಲನಾ ಪರವಾನಿಗೆ ಅಷ್ಟು ಸುಲಭದಲ್ಲಿ ಕೈಗೆಟಕುವುದಿಲ್ಲ. ರಿಟನ್ ಟೆಸ್ಟ್ ಹಾಗೂ ಪ್ರ್ಯಾಕ್ಟಿಕಲ್ ಇವೆರಡರಲ್ಲೂ ಸೈ ಎನಿಸಿಕೊಂಡರೆ ಮಾತ್ರ ಡ್ರೈವರ್ ಸೀಟಿನ ಯೋಗ. ಇನ್ನೂ ಇಲ್ಲಿನ ರಸ್ತೆಗಳಲ್ಲಿ ಸಂಚರಿಸುವಾಗ ಗೇರು - ಕ್ಲಚ್ ಗಳ ನಡುವಿನ ಗುದ್ದಾಟಗಳೇ ಅಪರೂಪ. ದ್ವೀಪದಾದ್ಯಂತ ನಿರ್ಮಿಸಲ್ಪಟ್ಟಿರುವ ಸಮರ್ಪಕ ರಸ್ತೆಗಳು ಪ್ರಮುಖ ಕಾರಣವಾದರೆ, ಚಾಚು ತಪ್ಪದೆ ರಸ್ತೆ ನಿಯಮಗಳನ್ನು ಪಾಲಿಸುವ ಜನರ ಪಾತ್ರವು ಕೂಡ ಅಷ್ಟೇ ಪ್ರಧಾನವಾದುದ್ದು.

ಇವೆಲ್ಲದರ ಜೊತೆಗೆ ರಸ್ತೆಯುದ್ದಕ್ಕೂ ಕೇವಲ ಸುಸ್ಥಿತಿಯಲ್ಲಿರುವ ವಾಹನಗಳದ್ದೇ ಓಡಾಟ. ಯಾಕೆಂದರೆ ಇಲ್ಲಿ ವಾಹನಗಳಿಗೂ ಒಂದಷ್ಟು ಷರತ್ತುಗಳಿವೆ. ಕೆಲವೊಂದು ಕಾಲಕ್ಕನುಗುಣವಾಗಿ ರಚಿತಗೊಂಡರೆ, ಮತ್ತೆ ಕೆಲ ನಿಯಮಗಳು ಅದೆಷ್ಟೋ ದಶಕಗಳಿಂದ ಮುಂದುವರಿದುಕೊಂಡು ಬಂದಿವೆ. ಇವುಗಳಲ್ಲಿ 1971ರಲ್ಲಿ ಸ್ಥಾಪನೆಗೊಂಡ ಮಾಲಿನ್ಯ ವಿರೋಧಿ ಘಟಕ ಕೂಡ ಒಂದು. ಇಲ್ಲಿನ ಕೆಲ ನಿಯಮಗಳು ಈಗಲೂ ಕಟ್ಟುನಿಟ್ಟಾಗಿ ಜಾರಿಯಲ್ಲಿವೆ.

ಇದರನ್ವಯ ಹೊಗೆ ಉಗುಳುವ ವಾಹನಗಳಿಗೆ ಇಲ್ಲಿ ರಸ್ತೆಗಿಳಿಯಲು ಅನುಮತಿ ನೀಡಲಾಗುವುದಿಲ್ಲ. ಟ್ರ್ಯಾಫಿಕ್ ಸಿಗ್ನಲ್ ಹೊರತು ಪಡಿಸಿ, ಉಳಿದ ಯಾವುದೇ ಪ್ರದೇಶಗಳಲ್ಲಿ ಎಂಜಿನ್ ಆನ್ ಮಾಡಿಟ್ಟು ತಮ್ಮ ವಾಹನಗಳನ್ನು ನಿಲ್ಲಿಸುವುದು ಕೂಡ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಡಾಲರ್ ವೆಚ್ಚದಲ್ಲಿ ದಂಡ ಸುರಿಯುವ ಬದಲು ನಿಯಮ ಪಾಲನೆ ಎಷ್ಟೋ ವಾಸಿ ಎಂಬಂತಾಗಿದೆ ಜನತೆಯ ಬದುಕು. ಹೀಗೆ ಸಣ್ಣ ಸಣ್ಣ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ದಾಕ್ಷಿಣ್ಯವಿಲ್ಲದೆ ನಿಯಂತ್ರಿಸುತ್ತಾ ಪರಿಸರ ಕಾಳಜಿಯ ಬಗ್ಗೆ ಗಮನಹರಿಸುತ್ತಿದೆ ಸಿಂಗಾಪುರ.

ಇನ್ನೂ ವಾತಾವರಣ ಕಲುಷಿತಗೊಳಿಸುವುದರಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳು, ವಿದ್ಯುತ್ ಕೇಂದ್ರಗಳ ಹೆಸರು ಮೊದಲಿಗಿರುವಂತದ್ದು. ಇದಕ್ಕೂ ಕಡಿವಾಣ ಹಾಕಲು ಸರ್ಕಾರ ಈಗಾಗಲೇ “ಕಾರ್ಬನ್ ಟ್ಯಾಕ್ಸ್’ ಜಾರಿಗೆ ತಂದಿದೆ. ಇದು ಆಗ್ನೇಯ ಏಷ್ಯಾದಲ್ಲೇ ಮೊದಲ ಪ್ರಯತ್ನವಾಗಿದೆ. ಪ್ರತೀ ಒಂದು ಟನ್ ಇಂಗಾಲದ ಹೊರಸೂಸುವಿಕೆಗೆ 5 ಡಾಲರ್ ಹಣ ನಿಗದಿಪಡಿಸಲಾಗಿದೆ. ಈ ತೆರಿಗೆ ಮೊತ್ತವು ಎಲ್ಲಾ ಕೈಗಾರಿಕಾ ವಲಯಗಳಿಗೂ ಏಕರೂಪದಲ್ಲಿ ಅನ್ವಯವಾಗಲಿದೆ. ಪ್ರಸ್ತುತ ಸಿಂಗಾಪುರವು ಸುಮಾರು 63 ದ್ವೀಪಗಳನ್ನು ಹೊಂದಿದೆ. ಇವುಗಳಲ್ಲಿ 3 ದ್ವೀಪಗಳಲ್ಲಿ ಜನರು ವಾಸಿಸುತ್ತಿದ್ದರೆ, 7 ದ್ವೀಪಗಳು ಸಿಂಗಾಪುರದ ಸಶಸ್ತ್ರ ಪಡೆಗಳಿಗೆ ಒಳಪಟ್ಟಿವೆ. ಮಲಯ ಪೆನಿನ್ಸುಲಾದ ದಕ್ಷಿಣ ತುದಿಯಲ್ಲಿರುವ ನೆಲೆಸಿರುವ ಸಿಂಗಾಪುರ, ಪಶ್ಚಿಮಕ್ಕೆ ಮಲಕ್ಕಾ ಜಲಸಂಧಿ, ದಕ್ಷಿಣಕ್ಕೆ ಇಂಡೋನೇಷ್ಯಾದ ರಿಯಾವ್ ದ್ವೀಪಗಳು ಮತ್ತು ದಕ್ಷಿಣ ಭಾಗದ ಚೀನಾ ಸಮುದ್ರವು ಪೂರ್ವಕ್ಕೆ ಗಡಿರೇಖೆಯಾಗಿ ರಚನೆಗೊಂಡಿವೆ.


ಸೀಮಿತ ಪ್ರದೇಶ, ಬೆಳೆಯುತ್ತಿರುವ ಜನಸಂಖ್ಯೆ ನಿಟ್ಟಿನಲ್ಲಿ ಭವಿಷ್ಯದ ದಿನಗಳ ಬಗ್ಗೆ ಸಿಂಗಾಪುರ ದಕ್ಷ ವ್ಯವಸ್ಥೆಯತ್ತ ಹೆಜ್ಜೆ ಹಾಕಿದೆ. ಸಮಸ್ಯೆ ತಲೆದೋರಿದ ಮೇಲೆ ಪಶ್ಚಾತಾಪ ಪಡುವ ಬದಲು ಇಲ್ಲಿನ ಸರ್ಕಾರ ಬೇರುಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ಯೋಜನೆಯನ್ನು ಹೊಂದಿದೆ. ಅವುಗಳಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ವಿಷಯ ಕೂಡ ಒಂದು. ಕಳೆದ ವರ್ಷ ಸಿಂಗಾಪುರದಲ್ಲಿ 5.88 ಮಿಲಿಯನ್ ಟನ್ ಘನತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಇವುಗಳಲ್ಲಿ 3.04 ಮಿಲಿಯನ್ ಟನ್‌ಗಳನ್ನು ಮರುಬಳಕೆ ಮಾಡಲಾಗಿದೆ ಈ ತ್ಯಾಜ್ಯಗಳನ್ನು ಸುಡಲೆಂದೇ ನಾಲ್ಕು ಭಸ್ಮೀಕರಣ ಸ್ಥಾವರಗಳು ಇವೆ. ಹೀಗೆ ಸುಡುವ ವೇಳೆ ಉತ್ಪತ್ತಿಯಾಗುವ ಶಾಖದಿಂದ ಸಿಂಗಾಪುರದ ಶೇ 3ರಷ್ಟು ಭಾಗಕ್ಕೆ ವಿದ್ಯುತ್ ಪೂರೈಕೆಯಾಗುತ್ತಿದೆ.

ಸುಟ್ಟ ಬೂದಿಯನ್ನು ಹಾಗೂ ಸುಡಲು ಯೋಗ್ಯವಲ್ಲದ ಕೈಗಾರಿಕಾ ತ್ಯಾಜ್ಯಗಳು, ಕಟ್ಟಡಗಳ ಅವಶೇಷಗಳನ್ನು 350 ಹೆಕ್ಟೇರ್ ಜಾಗವನ್ನು ಹೊಂದಿರುವ ಸೆಮಕೌ ಲ್ಯಾಂಡ್‌ಫಿಲ್ ಎಂಬ ಸ್ಥಳಕ್ಕೆ ಹಡಗಿನ ಮುಖಾಂತರ ಸಾಗಿಸಲಾಗುತ್ತದೆ. ಈ ದ್ವೀಪವನ್ನು ಬೇಡದ ವಸ್ತುಗಳನ್ನು ಹೂತು ಹಾಕಲೆಂದೇ ನಿರ್ಮಿಸಲಾಗಿದೆ. ಇಲ್ಲಿ ಹಾಕಲಾಗುವ ಬೂದಿ ಹಾಗೂ ತ್ಯಾಜ್ಯಗಳಿಂದ ಸಮುದ್ರದ ನೀರಿಗೆ ಯಾವುದೇ ಹಾನಿಯಾಗದ ರೀತಿಯ ಪದರಗಳ ವ್ಯವಸ್ಥೆಯೊಂದಿಗೆ ದ್ವೀಪವನ್ನು ರಚಿಸಲಾಗಿದೆ.


ಸಿಂಗಾಪುರದಲ್ಲಿ ನೀರಿನ ಬೇಡಿಕೆ ದಿನಕ್ಕೆ 430 ಮಿಲಿಯನ್ ಗ್ಯಾಲನ್‌ಗಳಷ್ಟಿದೆ. ಜನಸಂಖ್ಯೆಯ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿಯೊಂದಿಗೆ ಈ ಅಂಕಿ ಅಂಶವು 2060 ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಬಳಸಿದ ಪ್ರತಿ ಹನಿ ನೀರನ್ನು ಮರುಬಳಕೆ ಮಾಡುವುದು ಇದೀಗ ಸರ್ಕಾರದ ಗುರಿ ಯಾಗಿದೆ. ಈ ಸಂಬಂಧ ಈಗಾಗಲೇ ನೀರಿನ ಸಂಸ್ಕರಣಾ ಘಟಕವೊಂದು ಕಾರ್ಯನಿರ್ವಹಿಸುತ್ತಿದೆ ಇದೀಗ 2ನೇ ಹಂತದ ನಿರ್ಮಾಣವು ಆರಂಭವಾಗಿದ್ದು 2025 ರ ವೇಳೆಗೆ ಪೂರ್ಣಗೊಳ್ಳಲಿದೆ. ಈ ಯೋಜನೆಯಲ್ಲಿ ಎರಡು ಪ್ರತ್ಯೇಕ ಆಳವಾದ ಸುರಂಗಗಳ ಮೂಲಕ ಬಳಸಿದ ನೀರಿನ ಹರಿವನ್ನು ಗುರುತ್ವಾಕರ್ಷಣೆಯಿಂದ ಸ್ವೀಕರಿಸಲಾಗುತ್ತದೆ. ಒಂದು ಸುರಂಗವು ಕೈಗಾರಿಕಾ ಬಳಸಿದ ನೀರನ್ನು ಸಂಗ್ರಹಿಸಿದರೆ ಇನ್ನೊಂದು ಗೃಹಬಳಕೆಯ ನೀರನ್ನು ಸಂಗ್ರಹಿಸಲಿದೆ. ಈ ಎರಡು ಮೂಲಗಳನ್ನು ಪ್ರತ್ಯೇಕವಾಗಿ ಸಂಸ್ಕರಿಸಲಾಗುತ್ತದೆ.

ಇದರ ಜೊತೆಗೆ ಆಹಾರ ತ್ಯಾಜ್ಯ ಮತ್ತು ಬಳಸಿದ ನೀರಿನ ಕೆಸರುಗಳ ಸಂಯೋಜನೆಯಿಂದ ಉತ್ಪತ್ತಿಯಾಗುವ ಜೈವಿಕ ಅನಿಲ, ವಿದ್ಯುತ್ ಉತ್ಪಾದನೆಗೆ ಬಳಕೆಯಾಗಲಿದೆ.

1965 ರಲ್ಲಿ ಸಿಂಗಾಪುರವು ಸ್ವತಂತ್ರವಾದಾಗ ಕೊಳೆಗೇರಿಗಳಿಂದ ತುಂಬಿದ ನಗರವಾಗಿತ್ತು, ದಟ್ಟಣೆಯಿಂದ ಉಸಿರುಗಟ್ಟುವ ವಾತಾವರಣವನ್ನು ಎದುರಿಸುತಿತ್ತು. ನದಿಗಳು ತೆರೆದ ಚರಂಡಿಗಳಾಗಿದ್ದವು ವ್ಯಾಪಕ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳಿಲ್ಲದ ದಿನಗಳಾಗಿದ್ದವು. ಆದರೆ ಮುಂದಿನ 50 ವರ್ಷಗಳಲ್ಲಿ ನಡೆದ ಸಾಧನೆ ಯಾರನ್ನೂ ಅಚ್ಚರಿಗೊಳಿಸುವಂತದ್ದು. ಆರ್ಥಿಕತೆ, ಮೂಲಸೌಕರ್ಯದೊಂದಿಗೆ ಸ್ವಚ್ಛ ಹಾಗೂ ಆಧುನಿಕ ಮಹಾನಗರವೇ ನಿರ್ಮಾಣಗೊಂಡಿತು.

ಅಭಿವೃದ್ಧಿ ಹೆಸರಿನಲ್ಲಿ ಗಗನಚುಂಬಿ ಕಟ್ಟಡಗಳು, ರಾಶಿ ರಾಶಿ ಮೆಗಾ ಮಾಲ್ ಗಳು ಮಾತ್ರ ತಲೆಯೆತ್ತುತ್ತಿದ್ದರೆ ದೊಡ್ಡ ವಿಚಾರ ಆಗುತ್ತಿರಲಿಲ್ಲವೇನೋ..! ಇವೆಲ್ಲದರೊಟ್ಟಿಗೆ ಹಸಿರಿಗೂ ಪ್ರಾಮುಖ್ಯತೆ ಕೊಟ್ಟಿರುವುದು ಗಮನಾರ್ಹ ಸಂಗತಿ. 2016ರ ಟ್ರೀ ಪಿಡಿಯಾದ ವರದಿ ಪ್ರಕಾರ ಏಷ್ಯಾದಲ್ಲೇ ಇದು ಗ್ರೀನೇಷ್ಟ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊಸ ಕಟ್ಟಡ ರಚನೆ ಹಾಗೂ ವಿನ್ಯಾಸಗೊಳಿಸುವ ವೇಳೆ ಹಸಿರಿಗೆ ಮಹತ್ವ ಕೊಡಲೇಬೇಕು. 2008ರ ಬಳಿಕ ಇದು ಕಡ್ಡಾಯವಾಗಿದ್ದು, ಪರಿಸರಸ್ನೇಹಿ ಸಂಬಂಧಿತ ಸರ್ಕಾರದ ನಿಯಮಗಳನ್ನು ಕಟ್ಟಡದ ಮಾಲೀಕರು ಪಾಲಿಸಲೇಬೇಕು. ಇನ್ನೂ ಪ್ರಕೃತಿ ಮೀಸಲು ಪ್ರದೇಶಗಳು, ಉದ್ಯಾನವನಗಳ ನಿರ್ಮಾಣ ಮರಗಳನ್ನು ನೆಡುವ ಅಭಿಯಾನಗಳು ನಗರದಾದ್ಯಂತ ನಡೆಯುತ್ತಲೇ ಇರುತ್ತದೆ ಅದೆಷ್ಟೋ ವರ್ಷಗಳಿಂದ ಇಷ್ಟೆಲ್ಲಾ ಯೋಜನೆಗಳನ್ನು ಕ್ರಮಪ್ರಕಾರವಾಗಿ ಮುನ್ನೆಡೆಸುತ್ತಾ ಬಂದಿದ್ದರೂ ಜಾಗತಿಕ ತಾಪಮಾನದ ಬಿಸಿ ಮಾತ್ರ ಸಿಂಗಾಪುರವನ್ನು ಬಿಟ್ಟಿಲ್ಲ.


ವಾರ್ಷಿಕ ಸರಾಸರಿ ತಾಪಮಾನವು 1980 ರಿಂದ 2020 ರವರೆಗೆ 26.9°c ನಿಂದ 28.0°c ವರೆಗೆ ಹೆಚ್ಚಾಗಿದೆ. 1970ರ ದಶಕದಿಂದೀಚೆಗೆ ಸಮುದ್ರ ಮಟ್ಟ ಏರಿಕೆಯ ಸರಾಸರಿ ಪ್ರಮಾಣವು ವರ್ಷಕ್ಕೆ 2.8 ಮಿ.ಮೀ ನಷ್ಟು ಏರುತ್ತಿದ್ದರೆ, ವಾರ್ಷಿಕ ಮಳೆಯ ಪ್ರಮಾಣವು 1980 ರಿಂದ 2019 ರವರೆಗೆ ಪ್ರತಿ ದಶಕಕ್ಕೆ ಸರಾಸರಿ 67 ಮಿಮೀ ಅಧಿಕಗೊಂಡಿದೆ.

ತಗ್ಗು ದ್ವೀಪವಾದ ಸಿಂಗಾಪುರಕ್ಕೆ ಸಮುದ್ರ ಮಟ್ಟದಲ್ಲಿನ ಏರಿಕೆ ತತ್‌ಕ್ಷಣಕ್ಕೆ ಎಚ್ಚರಿಕೆಯ ಕರೆಗಂಟೆ. ಇಲ್ಲಿನ 30ರಷ್ಟು ಪ್ರದೇಶ ಸಿಂಗಾಪುರದ ಎತ್ತರದ ದತ್ತಾಂಶ { Height Datum }1 ರ ಅನ್ವಯ 5 ಮೀ ಗಿಂತ ಕೆಳಮಟ್ಟದಲ್ಲಿದೆ. ಸಮುದ್ರದಲ್ಲಿನ ಉಬ್ಬರವಿಳಿತಗಳು ಮತ್ತು ಚಂಡಮಾರುತಗಳ ಪರಿಣಾಮ ಈ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗುವ ಭೀತಿಯಿದೆ.


ಹೀಗಾಗಿ ಇಲ್ಲಿನ ಕರಾವಳಿ ಪ್ರದೇಶಗಳನ್ನು ರಕ್ಷಿಸಲು ಸರ್ಕಾರ ಇದೀಗ ತ್ವರಿತ ಕಾರ್ಯಗಳನ್ನು ಜಾರಿಗೆ ತರಲು ಮುಂದಾಗಿದೆ. ಕರಾವಳಿ ಮತ್ತು ಪ್ರವಾಹ ಸಂರಕ್ಷಣಾ ನಿಧಿಗೆಂದೇ ಬಜೆಟ್ ನಲ್ಲಿ ಸುಮಾರು 5 ಬಿಲಿಯನ್ ಹಣ ಜೊತೆಗೆ ರಾಷ್ಟ್ರೀಯ ಕರಾವಳಿ ಸಂರಕ್ಷಣಾ ಸಂಸ್ಥೆಯೊಂದನ್ನು ರಚಿಸಿದೆ.

ಪ್ರಮುಖವಾಗಿ ಪೋಲ್ದರ್ ಗಳ{ Polder } ರಚಿಸುವಿಕೆ ಹಂತ ಹಂತವಾಗಿ ನಡೆಯುತ್ತಿದೆ. ಇದು ಸಮುದ್ರಮಟ್ಟಕ್ಕಿಂದ ತಗ್ಗು ಮಟ್ಟದಲ್ಲಿ ನಿರ್ಮಿಸುವ ಭೂಪ್ರದೇಶ ವಾಗಿದೆ. ಇದರಲ್ಲಿ ನೀರು ಭರ್ತಿಯಾಗದಂತೆ ನಡುನಡುವೆ ಚರಂಡಿಗಳು ಜೊತೆಗೆ ಕೆರಗಳನ್ನು ನಿರ್ಮಿಸಲಾಗುತ್ತದೆ. ಹೆಚ್ಚುವರಿ ನೀರನ್ನು ಮತ್ತೆ ಸಮುದ್ರಕ್ಕೆ ಪಂಪ್ ಮಾಡಲಾಗುತ್ತದೆ. ಇನ್ನೊಂದು ಡೈಕ್ {Dyke}. ಇದು ಸಮುದ್ರದಿಂದ ಪ್ರವಾಹವನ್ನು ತಡೆಗಟ್ಟಲು ನಿರ್ಮಿಸಲಾಗುವ ಉದ್ದನೆಯ ಗೋಡೆಗಳಾಗಿವೆ. ತಗ್ಗು ಪ್ರದೇಶಗಳ ಸುರಕ್ಷತೆಗೆ ಅನುಗುಣವಾಗಿ ಇವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ.

ಪ್ರಕೃತಿ ಆಧಾರಿತ ಪರಿಹಾರವು ಮನುಕುಲಕ್ಕೆ ಮತ್ತು ಜೀವವೈವಿಧ್ಯತೆಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲೂ ಮಹತ್ತರ ಯೋಜನೆಗಳನ್ನು ರೂಪಿಸುತ್ತಿದೆ. ಸಮುದ್ರದ ದಡಗಳಲ್ಲಿ ಕೃತಕ ಕೊಳಗಳ ರಚನೆ. ಕೃತಕ ತೇಲುವ ಸೇತುವೆಗಳು, ಹಾಗೂ ಸುಮಾರು 8 ಬಹುಮಹಡಿ ಎತ್ತರದ ಕೃತಕ ಬಂಡೆಗಳನ್ನು ನೀರಿನಲ್ಲಿ ಇಳಿಯ ಬಿಡಲಾಗುತ್ತದೆ. ಇದರಿಂದಾಗಿ ಕ್ರಮೇಣ ಪಾಚಿ, ಸ್ಪಂಜುಗಳು, ಚಿಪ್ಪುಮೀನುಗಳು, ಹವಳಗಳು ಸ್ವಾಭಾವಿಕವಾಗಿ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಈ ಮೂಲಕ ನಾಶವಾಗಿರುವ ಜೀವವೈವಿದ್ಯಗಳನ್ನು ಮತ್ತೆ ಹುಟ್ಟುಹಾಕುವ ಪ್ರಯತ್ನ ಇದಾಗಿದೆ.


ಇನ್ನೂ ಕರಾವಳಿ ತೀರದಾದ್ಯಂತ ಮ್ಯಾಂಗ್ರೋವ್ ಮರಗಳನ್ನು ನೆಡುವ ಅಭಿಯಾನವನ್ನು ಸರ್ಕಾರ ಹೊಂದಿದೆ. ಈಗಾಗಲೇ ಬೆಳೆದು ನಿಂತಿರುವ ಈ ಮರಗಳ ಸಂರಕ್ಷಣೆಯ ಜೊತೆಗೆ ಅಭಿವೃದ್ಧಿ ಕಾರ್ಯಗಳಿಂದ ನೆಲಸಮವಾಗಿರುವ ಹಿನ್ನಲೆಯಲ್ಲಿ ಮತ್ತಷ್ಟು ಗಿಡಗಳನ್ನು ನೆಡುವ ಕಾರ್ಯ ನಡೆಯುತ್ತಿದೆ. ಇಂಗಾಲದ ಡೈ ಆಕ್ಸೈಡ್ ನ್ನು ಹೀರುವ ಶಕ್ತಿ ಈ ಮರಗಳಿವೆ. ಅಲೆಗಳ ಚದುರುವಿಕೆಗೆ, ಕೆಸರು ಹಿಡಿದಿಟ್ಟುಕೊಳ್ಳುವ ಹಾಗೂ ಮಣ್ಣಿನ ಸವೆತವನ್ನು ತಡೆಗಟ್ಟುವಲ್ಲಿ ಕೂಡ ಇವು ಸಹಕಾರಿಯಾಗಲಿದೆ.


ಸಿಂಗಾಪುರದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು ಸಮುದ್ರ ಮಟ್ಟದಿಂದ 4 ಮೀಟರ್ ಎತ್ತರದಲ್ಲಿ ನಡೆಸಲು ಸರ್ಕಾರ ಸೂಚಿಸಿದೆ. ಈ ಹಿಂದೆ ಇದು 3ಮೀಟರ್ ಗೆ ಸೀಮಿತವಾಗಿತ್ತು. ಹೀಗೆ ಸಮುದ್ರ ಮಟ್ಟದ ಏರಿಕೆ ಹಾಗೂ ಜಾಗತಿಕ ತಾಪಮಾನವನ್ನು ಗಂಭೀರವಾಗಿ ಪರಿಗಣಿಸಿರುವ ಸಿಂಗಾಪುರ , ತನ್ನ ನಗರ ಹಾಗೂ ನಾಗರೀಕರ ರಕ್ಷಣೆಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ವಿಶ್ವದಲ್ಲೇ 4ನೇ ಅತೀ ಕಡಿಮೆ ಭ್ರಷ್ಟಾಚಾರ ಹೊಂದಿರುವ ನಗರವಾಗಿದ್ದು, ತಾನು ರೂಪಿಸಿದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಾವುದೇ ಅಡೆತಡೆಗಳು ಎದುರಾಗದು ಎಂಬುದು ನಂಬಿಕೆ.

ಈ ಅಂಕಣದ ಹಿಂದಿನ ಬರಹಗಳು:
ಅಚ್ಚರಿಯ ‘ಸಿಂಗಾಪುರ್’ ಮತ್ತು ಅದರ ಭೂವಿಸ್ತರಣಾ ಕಾರ್ಯ

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...