ಅಂಬೇಡ್ಕರ್ ಕುರಿತು ಹೊಸ ಒಳನೋಟಗಳನ್ನು ನೀಡುವ ಕೃತಿ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದಿನಚರಿ’


‘ಅಂಬೇಡ್ಕರ್ ಅವರಂತಹ ಮೇರು ವ್ಯಕ್ತಿತ್ವವನ್ನು ಒಬ್ಬರಿಂದ ಸಂಪೂರ್ಣವಾಗಿ ಅಕ್ಷರಗಳಲ್ಲಿ ಹಿಡಿಯಲು ಸಾಧ್ಯವಾಗುವುದಿಲ್ಲ ಎಂಬುದನ್ನು ಬೇರೆ ಹೇಳಬೇಕಾಗಿಲ್ಲವಷ್ಟೆ’ ಎನ್ನುತ್ತಾರೆ ಹಿರಿಯ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ. ಅವರು ಪಿ. ಆರಡಿಮಲ್ಲಯ್ಯ ಕಟ್ಟೇರ ಅನುವಾದಿಸಿರುವ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದಿನಚರಿ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ಮಿತ್ರ ಆರಡಿಮಲ್ಲಯ್ಯ ಕಟ್ಟೇರ ಅವರು ಸಾಹಿತ್ಯದ ಗಂಭೀರ ವಿದ್ಯಾರ್ಥಿ ಎಂದು ನಾನು ಬಲ್ಲೆ. ಅವರು ಕರೆ ಮಾಡಿ ಈ ಪುಸ್ತಕದ ಹಿನ್ನೆಲೆಯನ್ನು ವಿವರಿಸಿದಾಗ, ಮುನ್ನುಡಿ ಬರೆಯಲು ಒಲ್ಲೆ ಎನ್ನಲಾಗಲಿಲ್ಲ. ದೇವಿದಯಾಳ್ ಅವರ 'ಡಾ. ಬಾಬಾಸಾಹೇಬ್ ಅಂಬೇಡ್ಕರ್ ದಿನಚರಿ'ಯನ್ನು ಓದುತ್ತಾ ಹೋದಂತೆ ನನಗೆ ಅನೇಕ ಹೊಸ ವಿಷಯಗಳು ತಿಳಿಯುತ್ತಾ ಹೋದವು. ಬಾಬಾಸಾಹೇಬರ ಕುರಿತು ನಾನು ಮೊದಲು ಓದಿದ ಪುಸ್ತಕ ನಮ್ಮ ತಾಲ್ಲೂಕಿನವರೆ ಆದ ಸಿನೆಮಾ ನಿರ್ದೇಶಕರಾಗಿದ್ದ ಬಸವರಾಜ ಕೆಸ್ತೂರ್ ಅವರ 'ಮಹಾಪುರುಷ'. ಆ ನಂತರ ದೊರಕಿದ್ದು ಭಗವಾನ್ ದಾಸ್ ಅವರ ಇಂಗ್ಲಿಷಿನ 'ದಸ್ ಸ್ಟೇಕ್ ಅಂಬೇಡ್ಕರ್'. ನಮ್ಮ ವಿದ್ಯಾರ್ಥಿ ದೆಸೆಯಲ್ಲಿ ಅಂಬೇಡ್ಕರ್ ಪುಸ್ತಕಗಳು ಅಷ್ಟಾಗಿ ದೊರಕುತ್ತಿರಲಿಲ್ಲ. ಅವುಗಳು ದೊರಕುವಂತಾದದ್ದು 90ರ ದಶಕದ ನಂತರವೆ. ಕರ್ನಾಟಕ ಸರ್ಕಾರವು ಅವುಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ ಮಾಡಿಸಿ ಪ್ರಕಟಿಸಿದ್ದು ಇನ್ನೂ ತಡವಾಗಿ. ಆದುವರೆಗೂ ಲಭ್ಯವಿದ್ದದ್ದು ಧನಂಜಯ ಕೀರ್ ಬರೆದ 'ಡಾ. ಅಂಬೇಡ್ಕರ್ ಲೈಫ್ ಆ್ಯಂಡ್ ಮಿಷನ್' ಮಾತ್ರ, 1954ರಲ್ಲಿ ಪ್ರಥಮ ಮುದ್ರಣ ಕಂಡ ಈ ಪುಸ್ತಕ ಅಂಬೇಡ್ಕರ್ ಅವರ ಜೀವನದ ಹೋರಾಟ, ಧ್ಯೇಯ, ಧೋರಣೆಗಳನ್ನು ಸ್ಪಷ್ಟವಾಗಿ ಬಿಚ್ಚಿಡುತ್ತದೆ.

ಅವರಿಗೆ ದೇಶದ ಸ್ವಾತಂತ್ರ್ಯಕ್ಕಿಂತಲೂ ಹೆಚ್ಚಾಗಿ ಒಳಗಿನ ಎಲ್ಲಾ ಪ್ರಜೆಗಳಿಗೂ ಸಮಾನತೆ ಮತ್ತು ಸ್ವಾತಂತ್ರ್ಯ ತರುವುದು ಮುಖ್ಯವಾಗಿತ್ತು. ಕಾರಣ, ಜಾತಿವ್ಯವಸ್ಥೆಯಲ್ಲಿ ಅದು ಕಾಣೆಯಾಗಿತ್ತು. ಆದ್ದರಿಂದ ಜಾತಿವಿನಾಶ ಮತ್ತು ಅಸ್ಪೃಶ್ಯತೆಯ ನಿವಾರಣೆ ಅವರ ಹೋರಾಟದ ಆದ್ಯತೆಯ ವಿಷಯಗಳಾಗಿದ್ದವು. ಆ ಕಾರಣಕ್ಕೆ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಮ್ಮ ಒಡನಾಡಿಗಳ ದ್ವೇಷ ಕಟ್ಟಿಕೊಂಡರು. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಸ್ಪಷ್ಟ ಅರಿವಿದ್ದ ಬಾಬಾಸಾಹೇಬರಿಗೆ ಜಾತಿವ್ಯವಸ್ಥೆಯಲ್ಲಿ ನಿಜವಾದ ಪ್ರಜಾಪ್ರಭುತ್ವ ಅನುಷ್ಠಾನಗೊಳ್ಳಲು ಸಾಧ್ಯವಿಲ್ಲ ಎಂಬುದು ತಿಳಿದಿತ್ತು. ಸ್ವಾತಂತ್ರ್ಯ ಕೇವಲ ಕೆಲ ಅಧಿಕಾರಸ್ಥ ಜಾತಿಗಳ ಸ್ವತ್ತಾಗುತ್ತದೆ ಎಂದು ಚಿಂತಿತರಾಗಿದ್ದರು. ಈಗಿನ ಪರಿಸ್ಥಿತಿಯನ್ನು ನೋಡಿದರೆ, ಅವರ ಭವಿಷ್ಯವಾಣಿ ಎಷ್ಟು ನಿಜವಾಗಿತ್ತು ಎಂಬುದು ತಿಳಿಯುತ್ತದೆ. ಅಂಬೇಡ್ಕರ್ ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲಿಲ್ಲ ಎಂದು ಆಗಾಗ ಕೇಳುವ ಪ್ರತಿಗಳಿಗೆ ಇದು ಸ್ಪಷ್ಟ ಉತ್ತರ.

ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಲ್ಲಾ ನಾಯಕರುಗಳಲ್ಲಿ [ನೆಹರು, ಗಾಂಧಿ ಅವರನ್ನು ಸೇರಿಸಿಕೊಂಡು] ಮರಣೋತ್ತರವಾಗಿ ಅತ್ಯಂತ ವೇಗವಾಗಿ, ಊರ್ಧ್ವಮುಖಿಯಾಗಿ ಬೆಳವಣಿಗೆ ಕಾಣುತ್ತಿರುವವರಲ್ಲಿ ಅಂಬೇಡ್ಕರ್ ಒಬ್ಬರೇ ಎಂದು ಹೇಳಬಹುದು. ಇಂದು ಅವರು ಕೇವಲ ದಲಿತ ನಾಯಕರಾಗಿ ಉಳಿದಿಲ್ಲ, ಎಲ್ಲಾ ವರ್ಗದವರಿಗೂ ಬೇಕಾದವರಾಗಿದ್ದಾರೆ ಅಥವಾ ಹಾಗೆ ತೋರುತ್ತಿದ್ದಾರೆ. ಅವರ ಕಡುವಿರೋಧಿಗಳೂ ಸಹ ಬೇಕಾದಾಗ ಅವರ ಉಲ್ಲೇಖಗಳಲ್ಲಿ ನೆರಳು ಪಡೆಯುತ್ತಿದ್ದಾರೆ. ಯಾಕೆಂದರೆ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವಗಳು ಇಡೀ ಜಗತ್ತಿನೆಲ್ಲೆಡೆ ಸಮಾಜದ ಸರ್ಕಾರದ ಸುಸ್ಥಿರ ನಿಯಂತ್ರಣಕ್ಕೆ ಬೇಕಾಗಿರುವ ಮೂಲಭೂತ ತತ್ತ್ವಗಳು. ಅಂಬೇಡ್ಕರ್ ಜೀವನದ ಬಹುಮುಖ್ಯ ಕೈಂಕರ್ಯವೇನಾಗಿತ್ತೆಂದರೆ, ಭಾರತೀಯ ಆಡಳಿತ ಸೂತ್ರವು ಜಾತಿವ್ಯವಸ್ಥೆಯ ಬದಲಿಗೆ ಸಂಪೂರ್ಣವಾಗಿ ಈ ಮೂರು ತತ್ತ್ವಗಳ ಅಡಿಯಲ್ಲಿಯೇ ನಡೆಯಬೇಕಾಗಿತ್ತೆಂಬುದು.

ಅಂಬೇಡ್ಕರ್ ಅವರಂತಹ ಮೇರು ವ್ಯಕ್ತಿತ್ವವನ್ನು ಒಬ್ಬರಿಂದ ಸಂಪೂರ್ಣವಾಗಿ ಅಕ್ಷರಗಳಲ್ಲಿ ಹಿಡಿಯಲು ಸಾಧ್ಯವಾಗುವುದಿಲ್ಲ ಎಂಬುದನ್ನು ಬೇರೆ ಹೇಳಬೇಕಾಗಿಲ್ಲವಷ್ಟೆ. ಧನಂಜಯ ಕೀರ್ ಬರೆದ 'ಡಾ. ಅಂಬೇಡ್ಕರ್ ಲೈಫ್ ಆ್ಯಂಡ್ ಮಿಷನ್' ಕೃತಿಯನ್ನು ಅವರ ಆಪ್ತ ಸಹಾಯಕ ನಾನಕ್ ಚಂದ್ ರತ್ತು, ಅಂಬೇಡ್ಕರ್ ಅವರಿಗೆ ತೋರಿಸಿದಾಗ ಹೇಳಿದ ಮಾತು 'ಇದು ಸಮಗ್ರವಾದ ಕೃತಿಯಲ್ಲ. ಅವರು ಬರೆಯದೇ ಇರುವ ಅನೇಕ ಸಂಗತಿಗಳು ಇನ್ನೂ ಉಳಿದುಕೊಂಡಿವೆ... ಬರೆಯಬೇಕಾದದ್ದು ಇನ್ನೂ ಬಹಳಷ್ಟಿದೆ' ಎಂದು. ಒಂದೊಮ್ಮೆ ಅವರೇ ಬರೆದಿದ್ದರೆ ಹೇಗಿರಬಹುದಿತ್ತು ಎಂದು ಊಹಿಸಿಕೊಳ್ಳುವುದೂ ಕಷ್ಟವಾಗುತ್ತದೆ. ಸಾಮಾನ್ಯವಾಗಿ ಆತ್ಮಚರಿತ್ರೆ ಬರೆಯುವವರು- ಇನ್ನು ಎಲ್ಲ ಮುಗಿಯಿತು, ಎಂದು ನಿರಾಳವಾಗಿ ಕುಳಿತು ಚಿಂತಿಸಬಲ್ಲವರು. ಆದರೆ ಬಾಬಾಸಾಹೇಬರ ಜೀವನದಲ್ಲಿ ಆ ನಿರಾಳ ಸ್ಥಿತಿ ಒದಗಿ ಬರಲೇ ಇಲ್ಲ. ಅಂತಹ ಒತ್ತಡದಲ್ಲಿಯೆ, 'ವೆಯಿಟಿಂಗ್ ಫಾರ್ ದಿ ವೀಸಾ' ಬರೆದಿರಬೇಕು ಎನಿಸುತ್ತದೆ. ನಂತರ ನಾನಕ್ ಚಂದ್ ರತ್ತು ಅವರೇ ಬರೆದ 'ಅಂಬೇಡ್ಕರ್: ಸ್ಮೃತಿ-ಸಂಸ್ಕೃತಿ' ಒಂದು ಅಮೂಲ್ಯ ಗ್ರಂಥವಾಗಿ ಹೊರಬಂದಿದೆ. ವಿಶೇಷವಾಗಿ ಸಂಸ್ಕೃತಿ ವಿಭಾಗದಲ್ಲಿ ಮುಲ್ಕರಾಜ್ ಆನಂದ್ ಅವರಿಂದ ಹಿಡಿದು ಎಂ. ಓ. ಮಥೈ ಅವರವರೆಗೆ ಎಲ್ಲರೂ ತಮ್ಮ ತಮ್ಮ ಸಹವಾಸಕ್ಕೆ ಬಂದ ಬಗೆ ಮತ್ತು ಬಹಳ ಮುಖ್ಯವಾದ ಸಂಗತಿಗಳನ್ನು ಹಂಚಿಕೊಂಡಿರುವುದು ವಿಶೇಷವಾಗಿದೆ. ಇತ್ತೀಚೆಗೆ ಅಂಬೇಡ್ಕರ್ ಅವರ ಜೀವನ ಮತ್ತು ಬರಹಗಳ ಕುರಿತು ಹೆಚ್ಚು ಸಂಶೋಧನಾತ್ಮಕ ಪುಸ್ತಕಗಳು ಹೊರಬರುತ್ತಿವೆ. ಇದು ಅಂಬೇಡ್ಕರ್ ಅವರನ್ನು ಬಹುಮುಖೀ ಪರಿಪ್ರೇಕ್ಷ್ಯದಿಂದ ನೋಡುವ ಅಗತ್ಯವಿದೆ ಎಂದೆನಿಸುತ್ತದೆ.

ನನ್ನನ್ನು ಕಾಡಿದ ಮತ್ತೊಂದು ಆತ್ಮಕಥೆ ಡಾ. ಸವಿತಾ ಅಂಬೇಡ್ಕರ್ ಅವರ 'ಅಂಬೇಡ್ಕರ್ ಸಹವಾಸದಲ್ಲಿ'. ಅಂಬೇಡ್ಕರ್ ಅವರ ಪತ್ನಿಯಾಗಿ, ಒಡನಾಡಿಯಾಗಿ, ಒಬ್ಬ ಶುಶ್ರೂಷಕಿಯಾಗಿ ಆಕೆ ತೆರೆದಿಡುವ ಅನೇಕ ಸಂಗತಿಗಳು ಹೊರ ಪ್ರಪಂಚಕ್ಕೆ ಅದುವರೆಗೂ ಗೊತ್ತಿಲ್ಲದಿದ್ದಂತಹವು. ಹಲವು ಕಾಯಿಲೆಗಳಿಂದ ದೈಹಿಕವಾಗಿ ನಲುಗಿಹೋಗಿದ್ದ ಅಂಬೇಡ್ಕರ್ ಅವರನ್ನು ಮಗುವಿನಂತೆ ಸಲಹಿದ್ದು ಡಾ. ಸವಿತಾ. ಸಂವಿಧಾನ ರಚನೆಯ ಕಾರ್ಯ ಮುಗಿದು ಅದನ್ನು ಸಭೆಯಲ್ಲಿ ಮಂಡಿಸುವ ಸಂದರ್ಭದಲ್ಲಿ ಅವರಿಗೆ ಕುಂಡಿಯಲ್ಲಿ ಒಂದು ಹುಣ್ಣಾಗಿಬಿಟ್ಟಿರುತ್ತದೆ. ಸವಿತಾ ಅದನ್ನು ಡ್ರೆಸ್ಸಿಂಗ್ ಮಾಡುವಾಗ ಒಂದು ದೊಡ್ಡ ಗಾತ್ರದ ಹತ್ತಿ ಉಂಡೆಗೆ ಮುಲಾಮು ಸವರಿ ಹುಣ್ಣಿನ ಮೇಲೆ ಮುಚ್ಚಲು ಹೋದರೆ, ಇಡೀ ಹತ್ತಿ ಉಂಡೆ ಗಾಯದ ಒಳಗೆ ಹೊಕ್ಕಿಬಿಡುತ್ತಿತ್ತಂತೆ! ಬಾಬಾಸಾಹೇಬರು ಎಂಥ ನೋವು ಸಹಿಸಿಕೊಂಡಿರಬಹುದು? ಇಂತಹ ಅನೇಕ ಘಟನೆಗಳು ಉಲ್ಲೇಖಿಸಲು ಆ ಪುಸ್ತಕದಲ್ಲಿ ಇವೆ. ಈ ಘಟನೆಯನ್ನು ಒಮ್ಮೆ ಭಾಷಣದಲ್ಲಿ ಹೇಳುವಾಗ ನಾನು ಭಾವುಕನಾಗಿ ಮಾತು ನಿಲ್ಲಿಸಿದ್ದೆ. ಸಂವಿಧಾನ ಸಭೆಯಲ್ಲಿ ಅವರಿಗಾಗಿಯೇ ಕುಳಿತುಕೊಳ್ಳಲು ಒಂದು ಕುರ್ಚಿ ಮಾಡಿಸಿದ್ದರು. ಅದನ್ನು ಈಗ ಪುಣೆಯ ಸಿಂಬಯೋಸಿಸ್ ಮ್ಯೂಸಿಯಮ್‌ನಲ್ಲಿ ಇಡಲಾಗಿದೆ.

ದೇವಿದಯಾಳ ಅಂಬೇಡ್ಕರ್ ಅವರ ಮನೆಯಲ್ಲಿ ಗ್ರಂಥಪಾಲಕರಾಗಿದ್ದರು. ಸುಮಾರು 50,000 ಪುಸ್ತಕಗಳಿದ್ದ ಮನೆಯೆಂದರೆ ಅದು ಪ್ರಮುಖವಾಗಿ ಗ್ರಂಥಾಲಯವೆ ಆಗುತ್ತದೆ. ಬಹಳ ಹತ್ತಿರದ ಸಹವರ್ತಿಯಾಗಿದ್ದ ಅವರು ಬಾಬಾಸಾಹೇಬರ ಜೀವನದ ಅತಿ ಸೂಕ್ಷ್ಮವಾದ ಗಮನಿಕೆಗಳನ್ನು ದಾಖಲಿಸಿದ್ದಾರೆ. ಉದಾಹರಣೆಗೆ, ಅವರು ಎಷ್ಟು ಹೊತ್ತಿಗೆ ಏಳುತ್ತಿದ್ದರು. ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ಮಾಡುತ್ತಿದ್ದರು. ಮಧ್ಯಾಹ್ನದ ಭೋಜನ ಹೇಗಿರಬೇಕಾಗಿತ್ತು, ಇತ್ಯಾದಿ. ಅವರು ಐದಾರು ಜನ ಅತಿಥಿಗಳನ್ನು ಆಹ್ವಾನಿಸಿ ತಾವೇ ಸ್ವತಃ ಅಡುಗೆ ಮಾಡುತ್ತಿದ್ದರು. ಅದೊಂದು ಸೋಜಿಗವೆ! ಬಾಬಾಸಾಹೇಬರು ಮಾಡಿರುವ ಕೆಲಸಗಳನ್ನು ಗಮನಿಸಿದರೆ, ಯಾರೇ ಆದರೂ ಒಂದು ಜನ್ಮದಲ್ಲಿ ಮಾಡಿ ಮುಗಿಸುವ ಕೆಲಸವದಾಗಿರಲಿಲ್ಲ. ಅಮೆರಿಕಾ ಮತ್ತು ಇಂಗ್ಲೆಂಡ್‌ಗಳಲ್ಲಿ ಪಡೆದ ಪದವಿಗಳವೆಷ್ಟೋ! ಪಾಶ್ಚಾತ್ಯ ಪದ್ಧತಿಯಲ್ಲಿ ಅದು ಸಾಧ್ಯ. ಎಂಟು ವರ್ಷಗಳಲ್ಲಿ ಪಡೆಯಬಹುದಾಗಿದ್ದ ಒಂದು ಪದವಿಯನ್ನು ಕೇವಲ ಎರಡೂವರೆ ವರ್ಷದಲ್ಲಿ ಪಡೆದೆ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಅವರ 65 ವರ್ಷಗಳ ಆಯಸ್ಸನ್ನು ಸುಮಾರು 200 ವರ್ಷಗಳ ಅನುಭವಕ್ಕೆ ಹಿಗ್ಗಿಸಿದ್ದಾರೆ ಎಂಬುದು ನನ್ನ ಎಣಿಕೆ.

ಅವರ ಒಂದೊಂದು ಗ್ರಂಥವನ್ನು ಓದಿ ಅರಗಿಸಿಕೊಳ್ಳಲು ನಮಗೆ ತಿಂಗಳುಗಟ್ಟಲೆ ಸಮಯ ಹಿಡಿಯುತ್ತದೆ. ಒಮ್ಮೆ ಹೀಗೆ ಊಟವಾದ ಮೇಲೆ ಅತಿಥಿಗಳ ಜೊತೆಗೆ ಚರ್ಚೆಯಲ್ಲಿದ್ದಾಗ ಒಬ್ಬರು ಹೇಳುತ್ತಾರೆ: 'ಬಾಬಾಸಾಹೇಬ್ ನೀವು ಸಮಾಜಕ್ಕೆ ಮಾಡಿ ತೋರಿಸಿರುವುದೂ, ಮತ್ತೆ ಇನ್ನೂ ಏನೇನು ಮಾಡ್ತಿದಿರೋ ಅದು ದೇವತೆಗಳು ಮಾತ್ರವೇ ಮಾಡಬಲ್ಲಂತಹವು. ಅವು ಮಾನವಶಕ್ತಿಯನ್ನು ಮೀರಿದವು' ಎಂದು. ಅದಕ್ಕೆ ಅಂಬೇಡ್ಕರ್; 'ತಪ್ಪು, ಅದೆಲ್ಲಾ ನಿಮ್ಮ ಭ್ರಮೆ. ನಾನು ಏನೆಲ್ಲಾ ಮಾಡಿದ್ದೀನೋ ಅದೆಲ್ಲಾ ನನ್ನ ಶ್ರಮದಿಂದ ಸಂಪಾದಿಸಿದ್ದು. ನನಗೆ ಅಲೌಕಿಕ ಶಕ್ತಿಗಳ ಮೇಲೆ ನಂಬಿಕೆಯಿಲ್ಲ. ಯಾರು ಹೆಚ್ಚು ಕಷ್ಟಪಡುತ್ತಾರೋ ಅವರು ಸಾಮಾನ್ಯ ಮನುಷ್ಯರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ ಎಂಬುದು ನನ್ನ ನಂಬಿಕೆ. ಇದೇ ನನ್ನ ದೃಢ ವಿಶ್ವಾಸ' ಎಂದು ಹೇಳಿ, ಕಷ್ಟಪಡುವುದೆಂದರೆ ಅಗ್ನಿಶಿಖೆಯಲ್ಲಿ ಬೇಯುವುದು ಎಂಬುದನ್ನು ಗ್ರೀಕ್ ಪುರಾಣದಲ್ಲಿ ಬರುವ ದಿಮಿಟರ್ ದೇವತೆ ರಾಣಿಯ ಮಗುವಿಗೆ ದೈವತ್ವ ಪ್ರಾಪ್ತಿಯಾಗಲಿ ಎಂದು ರಾತ್ರಿ ವೇಳೆ ಅದನ್ನು ಬೆಂಕಿಯ ಕುಂಡದಲ್ಲಿಡುತ್ತಿದ್ದ ರೂಪಕಾತ್ಮಕ ಕಥೆಯನ್ನು ಹೇಳಿ ಮುಗಿಸುತ್ತಾರೆ.

ಪತ್ನಿ ರಮಾಬಾಯಿ ನಿಧನರಾದ ಮೇಲೆ ಸುಮಾರು 13 ವರ್ಷಗಳ ಕಾಲ ಬಾಬಾಸಾಹೇಬರು ಒಂಟಿಯಾಗಿದ್ದರು. ಆದರೂ ತಾವು ಸಂತೋಷದಿಂದ ದೂರವಾಗಿರಲಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಅದರ ರಹಸ್ಯವೇನೆಂದರೆ, ಜ್ಞಾನವನ್ನು ಸಂಪಾದಿಸುವುದು, ಶಿಸ್ತುಬದ್ಧ ಜೀವನ ನಡೆಸುವುದು ಮತ್ತು ಸಮಾಜಕ್ಕಾಗಿ ಬದುಕನ್ನು ಮುಡಿಪಾಗಿಡುವುದು. ಈ ಮೂರು ತತ್ತ್ವಗಳನ್ನು ಅಳವಡಿಸಿಕೊಂಡವನಿಗೆ ದುಃಖವು ಹತ್ತಿರ ಸುಳಿಯುವುದಿಲ್ಲ ಎಂಬ ಅವರ ಮಾತು ಮನೋಜ್ಞವಾಗಿದೆ. ಎಂದಿನಂತೆ ಅವರಲ್ಲಿ ಶಿಕ್ಷಣಕ್ಕೇ ಪ್ರಥಮ ಪ್ರಾಶಸ್ತ್ರ. ವಿದ್ಯೆ ಎಂಬುದು ಬಹುದೊಡ್ಡ ಶಕ್ತಿ, ವಿದ್ಯೆಯ ಜೊತೆಗೆ ಕರ್ತೃತ್ವ ಶಕ್ತಿಯೂ ಇರಬೇಕು. ಆಗ ಮಾತ್ರ ಮಹಾಪುರುಷನಾಗಲು ಸಾಧ್ಯ ಎಂದು ಹೇಳುತ್ತಾರೆ. ಮಹಾಪುರುಷನಿಗೆ ಮೂರು ಲಕ್ಷಣಗಳಿರುತ್ತವೆ. ಅವುಗಳು: ಪ್ರಾಮಾಣಿಕತೆ, ವಿವೇಕಯುಕ್ತ ಆಲೋಚನೆ ಮತ್ತು ಸಮಾಜಮುಖಿಯಾದ ಕೆಲಸ ಎಂಬ ಮಾತು ಅರ್ಥಪೂರ್ಣವಾಗಿದೆ.

ಬಾಬಾಸಾಹೇಬರ ಪುಸ್ತಕ ಪ್ರೀತಿಯ ಕುರಿತಾಗಿ ದೇವಿದಯಾಳ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಬಳಿ 100ರೂ ಇದ್ದರೆ 50ರೂ.ಗಳಿಗೆ ಪುಸ್ತಕಗಳನ್ನು ಕೊಳ್ಳುತ್ತಿದ್ದರು. ಅವುಗಳನ್ನು ಓದಿದ ಮೇಲೆ ಒಪ್ಪವಾಗಿಡುತ್ತಿದ್ದರು. ಅವರಿಗೆ ಅಗಾಧವಾದ ನೆನಪಿನ ಶಕ್ತಿಯಿತ್ತು. ಯಾವ ಪುಸ್ತಕ ಯಾವ ಕಪಾಟಿನಲ್ಲಿದೆ ಎಂದು ಹೇಳಬಲ್ಲವರಾಗಿದ್ದರು. ಅವರ ಅಧ್ಯಯನಶೀಲತೆ ಎಷ್ಟಿತ್ತು ಎಂದರೆ ಇಂಗ್ಲೆಂಡಿನಿಂದ ಮರಳಿ ಬರುವಾಗ ವೆನಿಸ್‌ನಿಂದ ಮುಂಬೈ ತಲುಪುವವರೆಗೆ 8000 ಪುಟಗಳನ್ನು ಓದಿ ಮುಗಿಸಿದ್ದರಂತೆ. ಪ್ರಯಾಣದ ಸಮಯದಲ್ಲಿ ಎಲ್ಲಿ ಹೋದರೂ ಕೈಯಲ್ಲಿ ಒಂದು ಪುಸ್ತಕ ಇದ್ದೇ ಇರುತ್ತಿತ್ತು. ಕಾರ್ಯಕಲಾಪಗಳು ಮುಗಿದ ಮೇಲೆ ಕಛೇರಿಯಲ್ಲಿಯೂ ಓದುವುದರಲ್ಲಿ ಮಗ್ನರಾಗಿರುತ್ತಿದ್ದರು ಎಂದು ಬರೆಯುತ್ತಾರೆ. ಒಮ್ಮೆ ತಾವು ಓದುವ ಕ್ರಮವನ್ನು ದೇವಿ ಅವರ ಜೊತೆಯಲ್ಲಿ ಹೀಗೆ ಹೇಳುತ್ತಾರೆ. 'ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದುವ ಪುಸ್ತಕಗಳು ಕೆಲವೇ ಕೆಲವು ಇರ್ತಾವೆ. ಒಂದು ಪುಸ್ತಕದ ಶೀರ್ಷಿಕೆಯಲ್ಲಿ ಏನಿರುತ್ತದೆ. ಕವರ್ ಪೇಜಿನ ಹಿಂಭಾಗ ಏನು ಬರೆದಿದ್ದಾರೆ. ಉಪೋದ್ಘಾತದಲ್ಲಿ ಏನಿರುತ್ತದೆ? ಪರಿವಿಡಿ ಹೇಗಿದೆ? ಇವೆಲ್ಲವನ್ನೂ ನೋಡಿ ನನಗೆ ಹೊಸ ಆಲೋಚನೆಯನ್ನು ಕೊಡುವ ಅಧ್ಯಾಯವೇನಾದರೂ ಇದೆಯೆ ಎಂದು ಹುಡುಕುತ್ತೇನೆ. ಆಗ ಆ ಪುಟವನ್ನು ಮಾತ್ರ ಓದುತ್ತೇನೆ'.

ಬಾಬಾಸಾಹೇಬರು, ದೇವಿದಯಾಳ್ ಅವರಲ್ಲಿ ಗಾಂಧಿಯನ್ನು ಕುರಿತು ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ. ಗಾಂಧಿಯವರದು ಆಡಂಬರಪೂರಿತವಾದ ಮಾತು, ನನಗೆ ಚೂರೂ ಇಷ್ಟವಾಗದು. ಆತ ತುಂಬಾ ಮಾತಾಡುವವ; ಆದರೆ ಏನೂ ಮಾಡಲಾರದವ. ಅಸ್ಪೃಶ್ಯರಿಗೋಸ್ಕರ ಸಣ್ಣಪುಟ್ಟ ಕೆಲಸಗಳನ್ನು ಮಾಡಬೇಕೆಂದುಕೊಂಡರೂ ಆತನಲ್ಲಿರುವ ಸಾಂಪ್ರದಾಯಿಕವಾದ ಮತ್ತು ಮೂರ್ಖತನವನ್ನು ನೋಡಿದರೆ, ನನಗೆ ಅಸಹ್ಯ ಹುಟ್ಟುತ್ತದೆ ಎಂದು ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ. ಇವೆಲ್ಲಕ್ಕೂ ಗಾಂಧಿಯವರಿಗೆ ಜಾತಿಪದ್ಧತಿಯ ಕುರಿತು ಅಸ್ಪಷ್ಟವಾದ ಹಾಗೂ ಗೊಂದಲಮಯ ಅಭಿಪ್ರಾಯಗಳಿದ್ದುದೇ ಕಾರಣ. ಆದರೂ ಗಾಂಧಿಯವರ ಹತ್ಯೆಯಾದ ಸುದ್ದಿ ಕೇಳಿ ಒಂದು ಕ್ಷಣ ದಿಗ್ಬ್ರಾಂತರಾಗುತ್ತಾರೆ. ಅವರ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡು ದಣಿವಾಗಿ ಪೂರ್ತ ನಡೆಯಲಾರದೆ ಹಿಂದಿರುಗುತ್ತಾರೆ. ಮತ್ತೆ ಮರುದಿನ ಸಮಾಧಿಸ್ಥಳಕ್ಕೆ ಹೋಗಿ ನೋಡಿಕೊಂಡು ಬರುತ್ತಾರೆ.

ಒಟ್ಟಿನಲ್ಲಿ ದೇವಿದಯಾಳ್ ಅವರ ಈ ಕೃತಿಯು ಅಂಬೇಡ್ಕರ್ ಅವರನ್ನು ಇನ್ನೊಂದು ಮಗ್ಗಲಿನಿಂದ ತೋರಿಸುತ್ತದೆ ಮತ್ತು ಹೊಸ ಒಳನೋಟಗಳಿಂದ ಕೂಡಿದೆ. ಆರಡಿಮಲ್ಲಯ್ಯ ಕಣ್ಣೀರ ಅವರು ಇದನ್ನು ಸಮರ್ಥವಾಗಿ ಅನುವಾದಿಸಿದ್ದಾರೆ. ಇದು ಕನ್ನಡಕ್ಕೆ ಬರಲೇಬೇಕಾಗಿದ್ದ ಕೃತಿ. ಅವರಿಗೆ ಮನಸಾರೆ ಅಭಿನಂದಿಸುತ್ತೇನೆ.

-ಡಾ. ಮೂಡ್ನಾಕೂಡು ಚಿನ್ನಸ್ವಾಮಿ

MORE FEATURES

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ

19-05-2024 ಬೆಂಗಳೂರು

`ಪ್ರಕೃತಿಯಿಂದ ನಾವು ಎಲ್ಲವನ್ನು ಪಡೆದುಕೊಳ್ಳುತ್ತೇವೆ, ಆದರೂ ಎಲ್ಲವೂ ನಮ್ಮಿಂದಲೇ ಎನ್ನುವ ಸ್ವಾರ್ಥತೆ ಮಾತ್ರ ನಾವು ಬಿಟ...

'ಕೊಡಗಿನ ಲಿಂಗರಾಜ' ಕೊಡಗಿನ ಚರಿತ್ರೆಯ ಕೆಲವು ಪುಟಗಳನ್ನು ತೆರೆದಿರಿಸುತ್ತದೆ

19-05-2024 ಬೆಂಗಳೂರು

‘ಕಥಾ ವಿನ್ಯಾಸವನ್ನು ಹೇಳುವುದಾದರೆ ಶಿಶಿಲರು ಮೊದಲ ಅಧ್ಯಾಯದಲ್ಲಿ ಭೂಮಿಕೆಯನ್ನು ಸೃಷ್ಟಿ ಮಾಡಿದ್ದಾರೆ’ ಎನ...

ವಿಮರ್ಶೆ ಎಂದರೆ ಪುಸ್ತಕದ ಆಳವಾದ ಓದು

18-05-2024 ಬೆಂಗಳೂರು

‘ವಿಮರ್ಶಾ ಬರಹಗಳ ಮುಖ್ಯ ಉದ್ದೇಶ ಓದುಗರ ಪುಸ್ತಕ ಓದಿನ ತಿಳಿವಳಿಕೆಗೆ ರಹದಾರಿ ಮಾಡಿಕೊಡುವುದಾಗಿದೆ’ ಎನ್ನು...