ಅಂಧಶ್ರದ್ಧೆಯ ಕತ್ತಲ ದಾರಿಗೆ, ಬುದ್ಧ ಬೆಳಕು; ಮೋದೂರು ತೇಜ


"ಬುದ್ದ, ಈ ಲೋಕ ಕಂಡಂತಹ ಅಪರೂದ ದಾರ್ಶನಿಕ. ಸಕಲ ಜೀವಿಗಳಿಗೆ ಒಳಿತನ್ನೇ ಬಯಸುವ ಕರುಣಾ ಮೂರ್ತಿ," ಎನ್ನತ್ತಾರೆ ಮೋದೂರು ತೇಜ. ಅವರು ‘ಬುದ್ಧ ಪೂರ್ಣಿಮೆ’ ಕುರಿತು ಬರೆದ ಲೇಖನ ಇಲ್ಲಿದೆ.

ಮನುಷ್ಯನ ಮನಸ್ಸಿನ ಆಳದಲ್ಲಿ ಹುದುಗಿರುವ ಅಂಧಶ್ರದ್ಧೆಯ ಕತ್ತಲು ಎಷ್ಟೊಂದು ಗಾಢವಾದದ್ದು ಎಂದರೆ, ಬುದ್ಧನ ಕಾಲದಿಂದಲೂ ತೊಳೆಯುತ್ತಾ ಬಂದರೂ ಉಳಿಯುತ್ತಲೇ ಇದೆ. ಒಂದು ಕಡೆ ಆಧುನಿಕತೆಯ ತುತ್ತ ತುದಿಯಲ್ಲಿ ನಿಂತು ಜೀವಿಸುತ್ತಿರುವ ನಾವು, ಮತ್ತೊಂದು ಕಡೆ ಅಂಧಶ್ರದ್ಧೆಯ ಅಧೋಗತಿಯಲ್ಲಿ ತೊಳಲಾಡುತ್ತಿದ್ದೇವೆ. ಈ ವೈರುಧ್ಯ ಇಂದು ನಿನ್ನೆಯದಲ್ಲ, ಅನಾದಿ ಕಾಲದಿಂದಲೂ ಇದ್ದಿದ್ದೇ. ಆದರೆ ವಿಪರ್ಯಾಸವೇನೆಂದರೆ ಇಷ್ಟೆಲ್ಲಾ ವೈಜ್ಞಾನಿಕವಾಗಿ ಬೆಳೆದಿದ್ದರೂ ವೈಚಾರಿಕವಾಗಿ ಯೋಚಿಸುವಂತಾಗಿದ್ದರೂ ಮನಸ್ಥಿತಿಗಳು ಮಾತ್ರ ಬದಲಾಗಿಲ್ಲ. ಪ್ರಕೃತಿಯ ವಿಕೋಪದಿಂದ ಕಳೆದ ವರ್ಷ ಮಳೆ ಬರಲಿಲ್ಲ ಎಂದರೂ ಜಾಗತಿಕ ತಾಪಮಾನದಿಂದ ಬಿಸಿಲು ಜಾಸ್ತಿಯಾದರೂ ಆಳುವ ಪಕ್ಷದವರ ಕಾಲ್ಗುಣ ಸರಿಯಿಲ್ಲ ಎಂದು ವ್ಯಕ್ತಿಗತ ನೆಲೆಯಲ್ಲಿ ಹೀಯಾಳಿಸುವ ಹೀನ ಮನಸ್ಥಿತಿ ನಮ್ಮಲ್ಲಿ ಈಗಲೂ ಚಾಲ್ತಿಯಲ್ಲಿದೆ. ‘ಅವರು ಆಡಳಿತ ನಡೆಸಿದರೆ ಮಳೆಯೇ ಬರುವುದಿಲ್ಲʼ ಎನ್ನುವ ಮೌಢ್ಯ ಬಿತ್ತುವ ಕೊಳಕು ಮನಸ್ಸುಗಳ ಕಾರ್ಖಾನೆಯೇ ಕಾರ್ಯನಿರತವಾಗಿರುವಾಗ ಅದನ್ನು ನಂಬುವ, ಮತ್ತಷ್ಟು ಪ್ರಚಾರಗೊಳಿಸುವ ಸಂತತಿಗೇನೂ ಕಡಿಮೆಯಿಲ್ಲ. ಇಂಥ ಅಂಧಶ್ರದ್ಧೆಯ ಅಂಧಕಾರದಲ್ಲಿ ಮನುಷ್ಯ ಮೃಗೀಯವಾಗಿ ವರ್ತಿಸುತ್ತಿರುವ ಕೇಡಿನ ಕಾಲದಲ್ಲಿ ಬುದ್ಧನ ಕರುಣಾ ಮೈತ್ರಿಯ ವಿಚಾರಗಳು ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತ ಎನಿಸುತ್ತದೆ.

ಬುದ್ದ, ಈ ಲೋಕ ಕಂಡಂತಹ ಅಪರೂದ ದಾರ್ಶನಿಕ. ಸಕಲ ಜೀವಿಗಳಿಗೆ ಒಳಿತನ್ನೇ ಬಯಸುವ ಕರುಣಾ ಮೂರ್ತಿ. ಸುಮಾರು ಎರಡುವರೆ ಸಾವಿರ ವರ್ಷಗಳ ಹಿಂದೆಯೇ ವೈಚಾರಿಕವಾಗಿ ಚಿಂತಿಸಿದ ಚಿಂತಕ. ಆತನು ಬೋಧಿಸಿದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಮುಂದೆಯೂ ಪ್ರಸ್ತುತವಾಗುತ್ತವೆ. ಆ ರೀತಿ ಕಾಲಾತೀತವಾಗಿ ನಿಲ್ಲಬಲ್ಲ ಮಾನವೀಯ ತತ್ವಗಳೆಂದರೆ ಬುದ್ಧನ ವಿಚಾರಗಳು. ದುಃಖಮಯವಾದ ಈ ಜಗತ್ತಿಗೆ ನಿಸರ್ಗದಷ್ಟು ನಿತ್ಯ ಸತ್ಯವಾದ ಮಾತುಗಳನ್ನು ಹೇಳುತ್ತಾ ನೋವಿನಿಂದ ಪಾರು ಮಾಡಿದ ಮನುಕುಲದ ಮೊದಲ ಮಾನಸಿಕ ತಜ್ಞ. ಆತನ ಮೊದಲ ಉಪದೇಶ ಕೇಳಿದ ಐದು ಜನ ಪರಿವ್ರಾಜಕರಾದ; ಕೌಂಡಿನ್ಯ, ಅಶ್ವಜಿತ್, ಕಾಶ್ಯಪ, ಬಾದುಕ, ಮಹಾನಾಮ ಹೇಳಿದ ಮಾತುಗಳು ಧರ್ಮದ ಜೀವಪರ ಚಿಂತನೆಯನ್ನು ತಿಳಿಸುತ್ತದೆ. “ಈ ಜಗತ್ತಿನ ಇತಿಹಾಸದಲ್ಲಿ ಇದುವರೆಗೂ ಯಾವೊಬ್ಬ ಧರ್ಮ ಸಂಸ್ಥಾಪಕನೂ ಮಾನವನ ದುಃಖವನ್ನು ಗುರುತಿಸುವುದು ಧರ್ಮದ ನಿಜವಾದ ತಳಹದಿ ಎಂದು ಹೇಳಿರಲಿಲ್ಲ. ಯಾವ ಧರ್ಮ ಸಂಸ್ಥಾಪಕನೂ ದುಃಖ ನಿವಾರಣೆಯೇ ಧರ್ಮದ ನಿಜವಾದ ಗುರಿ ಎಂದು ಬೋಧಿಸಿರಲಿಲ್ಲ. ಇಷ್ಟು ಸರಳವಾದ ಮತ್ತು ಸಹಜವಾದ ರೀತಿಯಲ್ಲಿ ಅನೈಸರ್ಗಿಕ ಹಾಗೂ ಅತಿಮಾನುಷ ಶಕ್ತಿಗಳಿಂದ ಮುಕ್ತವಾದ ಮೋಕ್ಷ ಮಾರ್ಗವನ್ನು ಯಾರೂ ತೋರಿರಲಿಲ್ಲ” ಎಂದು ಹೇಳಿದ ಮಾತುಗಳನ್ನು ಗಮನಿಸಿದಾಗ ಬುದ್ಧನ ವಿಚಾರಗಳ ಸ್ಪಷ್ಟತೆ ತಿಳಿಯುತ್ತದೆ.

ನೈತಿಕತೆಯ ತಳಹದಿಯ ಮೇಲೆ ತನ್ನ ಗುರಿ ಸಾಧನೆಯ ಶಿಖರ ತಲುಪಿದ ಮಹಾಪುರುಷನಾದ ಬುದ್ಧನು ತನ್ನ ಕಾಲದ ಅಸಂಬದ್ಧ ಆಚರಣೆಗಳನ್ನು, ಅಂಧಶ್ರದ್ಧೆಯ ಮೌಢ್ಯತೆಯನ್ನು ವಿರೋಧಿಸುವ ಅಪರೂಪದ ಬೌದ್ಧಿಕ ಪ್ರಜ್ಞೆಯನ್ನು ಪಡೆದಿದ್ದ. ಈ ಸೃಷ್ಟಿ ಯಾರಿಂದಲೂ ಉಗಮವಾಗಿಲ್ಲ, ವಿಕಾಸ ಹೊಂದಿದೆ. ಪ್ರತಿಯೊಂದು ಸಂಯುಕ್ತ ವಸ್ತುವೂ ನಾಶ ಹೊಂದಲೇಬೇಕು, ಇದಕ್ಕೆ ಮನುಷ್ಯನೂ ಹೊರತಲ್ಲ. ಕಾರ್ಯ-ಕಾರಣ ಪರಿಣಾಮದಿಂದ ಈ ಜಗತ್ತು ಚಲನಶೀಲವಾಗಿದೆ. ಸಾವಿನಾಚೆಗೆ ಏನೂ ಇಲ್ಲ ಎಂದು ವೈಜ್ಞಾನಿಕವಾಗಿ ತಿಳಿಸುತ್ತಾ ಅಲ್ಲಿಯತನಕ ಚಾಲ್ತಿಯಲ್ಲಿದ್ದ ಯಥಾಸ್ಥಿತಿ ವಾದವನ್ನು, ಊಹೆಗಳ ಮೇಲೆ ನಿಂತಿರುವ ಸಿದ್ಧಾಂತಗಳನ್ನು ಅಲ್ಲಗಳೆಯುತ್ತಾ ಸತ್ಯದ ಪ್ರತಿಪಾದನೆಯನ್ನು ತನ್ನ ಬೋಧನೆಗಳ ಮೂಲಕ ಜನರಿಗೆ ತಿಳಿಸಿದ. ಸ್ವಪ್ರಯತ್ನ ಮತ್ತು ಅನ್ವೇಷಣೆಯ ಮೂಲಕ ಮನುಷ್ಯ ಈ ಭೂಮಿಯ ಮೇಲೆ ಆನಂದವನ್ನು ಗಳಿಸಬಹುದೆಂದು ತೋರಿಸಿಕೊಟ್ಟ ಮಾರ್ಗದಾತ. ಮಾನವನ ಕೇಡುಗಳಿಗೆ, ದುಃಖಗಳಿಗೆ ಅವನ ಮನಸ್ಸೇ ಕಾರಣ ಎನ್ನುವುದನ್ನು ತಿಳಿದು ಅದನ್ನು ನಿವಾರಿಸುವ ನಿಟ್ಟಿನಲ್ಲಿ ತಥಾಗತನು ತಿಳಿಸಿಕೊಟ್ಟ ವಿಚಾರಗಳು ಎಲ್ಲಾ ಕಾಲಕ್ಕೂ ಸಲ್ಲುವಂತಹವು.

ಈ ಜಗತ್ತಿನಲ್ಲಿ ಪ್ರಶ್ನಾತೀತವಾದದ್ದು ಯಾವುದೂ ಇಲ್ಲ. ನನ್ನನ್ನೂ ನನ್ನ ವಿಚಾರಗಳನ್ನು ಒಳಗೊಂಡಂತೆ ಎಂದು ಹೇಳಿದ ದಾರ್ಶನಿಕ ಬಹುಶಃ ಬುದ್ಧನೆ ಮೊದಲಿಗ ಎನಿಸುತ್ತದೆ. ಬುದ್ಧನ ಸಮಕಾಲೀನ ಸಂದರ್ಭದಲ್ಲಿ ವೇದಗಳು, ದೇವರು, ಧರ್ಮದ ವಿಚಾರಗಳು ಪ್ರಶ್ನಾತೀತವಾಗಿದ್ದವು. ಅದರ ನೆಪದಲ್ಲಿ ವಿಧಿಸಿದ ಸಂಕೋಲೆಗಳಿಂದ ಜನರನ್ನು ಬಂಧಮುಕ್ತಗೊಳಿಸಿದ ಬುದ್ಧ: “ತನ್ನ ಧರ್ಮದಲ್ಲಿ ಪರಮಾತ್ಮನಿಗಾಗಲಿ, ಆತ್ಮಕ್ಕಾಗಲಿ ಸ್ಥಾನವಿಲ್ಲ. ವ್ಯಕ್ತಿಯ ಮರಣಾನಂತರದ ಬದುಕಿಗೂ ತನ್ನ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಧಾರ್ಮಿಕ ವಿಧಿಗಳಾದ ಯಜ್ಞ-ಯಾಗಗಳಿಗೂ ನನ್ನ ಧಮ್ಮಕ್ಕು ಸಂಬಂಧವಿಲ್ಲ. ಮನುಷ್ಯನೇ ನನ್ನ ಧಮ್ಮದ ಕೇಂದ್ರ. ಹಾಗೂ ಈ ಭೂಮಿಯ ಮೇಲೆ ಮನುಷ್ಯರು ಪರಸ್ಪರ ಹೊಂದಿರುವ ಸಂಬಂಧ ಮಾತ್ರ ಮುಖ್ಯವಾಗಿದೆ” ಎಂದು ಹೇಳುತ್ತಾನೆ. ಅಲ್ಲಿಯ ತನಕ ಯಾವ ಧರ್ಮವಾಗಲೀ, ತತ್ವ, ಸಿದ್ದಾಂತಗಳಾಗಲಿ ಮನುಷ್ಯ ಕೇಂದ್ರಿತ ವಿಚಾರಗಳನ್ನು ಹೊಂದಿರಲಿಲ್ಲ ಎನ್ನುವುದು ಬಹಳ ಮುಖ್ಯವಾದ ವಿಚಾರ.

ಬುದ್ಧನು ತಿಳಿಸಿದ ಧಮ್ದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಪರಿಶುದ್ಧತೆಯ ಮಾರ್ಗ, ಸಚ್ಚಾರಿತ್ರ್ಯದ ಮಾರ್ಗ ಮತ್ತು ಸದ್ಗುಣಗಳ ಮಾರ್ಗ ಅನುಸರಿಸಿದರೆ ಈ ಜಗದ ದುಃಖ ತನಗೆ ತಾನೇ ನಿವಾರಣೆ ಆಗುತ್ತದೆ. ಪರಿಶುದ್ಧತೆಯ ಮಾರ್ಗದಲ್ಲಿರುವ ಐದು ಅಂಶಗಳಾದ; 1) ಯಾವ ಜೀವಿಯನ್ನೂ ಕೊಲ್ಲಬಾರದು ಅಥವಾ ಹಿಂಸಿಸಬಾರದು. 2) ಕಳ್ಳತನ ಮಾಡಬಾರದು ಅಥವಾ ಬೇರೆಯವರಿಗೆ ಸೇರಿದ ಯಾವ ವಸ್ತುಗಳಿಗೂ ಆಸೆ ಪಡಬಾರದು. 3) ಸುಳ್ಳು ಹೇಳಬಾರದು. 4) ಯಾವಾಗಲೂ ಕಾಮಾತುರನಾಗಿರಬಾರದು ಅಥವಾ ಹಾದರತನ ಮಾಡಬಾರದು. 5) ಮದ್ಯಪಾನ ಅಥವಾ ಮಾದಕ ದ್ರವ್ಯಗಳ ಸೇವನೆ ಮಾಡಬಾರದು ಎಂದು ತಿಳಿಸುತ್ತಾನೆ. ಇವುಗಳನ್ನೇ ಪಂಚಶೀಲ ತತ್ವಗಳು ಎನ್ನುತ್ತೇವೆ. ಇಷ್ಟು ಸರಳವಾದ ಮಾರ್ಗದ ಮೂಲಕ ಮನುಷ್ಯನ ಔನ್ನತ್ಯವನ್ನು ಬಯಸುವ ತತ್ವಗಳನ್ನು ಅನುಸರಿಸದೆ, ಬದುಕುವ ಕಕ್ಕುಲಾತಿಗಾಗಿ, ಅಧಿಕಾರದ ದುರಾಸೆಗಾಗಿ ನಾವು ಯಾವ ಮಟ್ಟಕ್ಕೆ ಇಳಿಜಾರಿಗೆ ಜಾರಿದ್ದೇವೆ ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಸಮಾಜದ ಚಿತ್ರಣ ನಮ್ಮೆಲ್ಲರ ಕಣ್ಣ ಮುಂದೆ ಸುಳಿದಾಡಬಹುದು.

“ಒಂದು ಜೀವಿಗೆ ಜೀವ ನೀಡುವ ಶಕ್ತಿ ನಿನಗಿಲ್ಲ ಎಂದ ಮೇಲೆ ಪ್ರಾಣ ತೆಗೆಯುವ ಹಕ್ಕು ನಿನಗಿಲ್ಲ” ಎನ್ನುವ ಬುದ್ಧನ ಜೀವಪರವಾದ ಮಾತು ನಮಗೆ ನಾವೇ ಕೇಳಿಕೊಳ್ಳಬೇಕಾದ ತುರ್ತು ಮತ್ತು ಅನಿವಾರ್ಯತೆಯ ಅಗತ್ಯವಿದೆ. ಆ ರೀತಿ ಆತ್ಮಾವಲೋಕನ ಮಾಡಿಕೊಳ್ಳದ ಫಲವಾಗಿಯೇ ಇತಿಹಾಸದಲ್ಲಿ ನಡೆದ ಯುದ್ಧಗಳು, ನಡೆಸಿದ ಮಾರಣಹೋಮಗಳು, ರಕ್ತದ ರುಜುವಿನಲ್ಲಿ ತನ್ನ ಇರುವಿಕೆಯನ್ನು ತೋರುತ್ತಿವೆ. ನಮ್ಮ ಸ್ಮೃತಿಪಟಲದಿಂದ ಮಾಸಿಹೋಗಿರುವ ಖೈರ್ಲಾಂಜಿ, ಕಾರಂಚೇಡು, ಕಂಬಾಲಪಲ್ಲಿ, ನಿರ್ಭಯ, ದಾನಮ್ಮ ಹಾಗೂ ಇತ್ತೀಚೆಗೆ ಹತ್ಯೆಗೀಡಾದ ನೇಹಾ, ಮೀನಾ, ಅಂಜಲಿ, ಪ್ರಭುದ್ಯಾ ಅವರಂತಹ ಮುಗ್ಧ ಹೆಣ್ಣುಮಕ್ಕಳನ್ನು, ಅಸಹಾಯಕ ದಲಿತರನ್ನು ಅಮಾನುಷವಾಗಿ ಹತ್ಯೆ ಮಾಡುವ ಕ್ರೌರ್ಯದ ಮನಸ್ಥಿತಿ ಆ ಕೊಲೆಗಡುಕರಿಗೆ ಹುಟ್ಟುತ್ತಿರಲಿಲ್ಲ ಎನಿಸುತ್ತದೆ. ದ್ವೇಷ, ಅಸೂಯೆಗಳಿಂದ ತಹತಹಿಸುತ್ತಾ, ಈ ಸಮಾಜವನ್ನು ತಲ್ಲಣಗೊಳಿಸುತ್ತಿರುವ ಮನಸ್ಸುಗಳಿಗೆ ಬುದ್ಧನ ವಿಚಾರಗಳೇ ದಾರಿದೀಪ. ಪಂಚಶೀಲ ತತ್ವಗಳ ಜೊತೆಗೆ ಸಚ್ಚಾರಿತ್ರ್ಯದ ಮಾರ್ಗ ಅಥವಾ ಅಷ್ಟಾಂಗ ಮಾರ್ಗದ ಮಹತ್ವವನ್ನು ನಾವಿಂದು ಮನಗಾಣಬೇಕಿದೆ.

ಮಾನವರಿಗೆ ಆವರಿಸುವ ಅಜ್ಞಾನದ ಕತ್ತಲು ಕಳೆಯಲು ಸಮ್ಯಕ್‌ ದೃಷ್ಟಿ, ನಮ್ಮ ಚಿಂತನೆಗಳು ಶ್ರೇಷ್ಠ ಮಟ್ಟದ್ದಾಗಿರಬೇಕೆಂದು ತಿಳಿಸುವ ಸಮ್ಯಕ್‌ ಸಂಕಲ್ಪ, ಸತ್ಯ ಮಾತ್ರ ನುಡಿಯಬೇಕು, ಇತರರ ಬಗ್ಗೆ ಕೆಟ್ಟದ್ದನ್ನು ಆಡಬಾರದೆಂದು ತಿಳಿಸುವ ಸಮ್ಯಕ್‌ ವಾಚ, ನಮ್ಮ ವರ್ತನೆ ಸಾಮರಸ್ಯದಿಂದ ಕೂಡಿರಬೇಕೆಂದು ತಿಳಿಸುವ ಸಮ್ಯಕ್‌ ಕರ್ಮ, ನ್ಯಾಯ ಮಾರ್ಗದಲ್ಲಿ ದುಡಿದು ತಿನ್ನಬೇಕೆಂದು ತಿಳಿಸುವ ಸಮ್ಯಕ್ ಆಜೀವೋ, ನಮ್ಮ ಮನೋವಿಕಾರಗಳನ್ನು ತಡೆಯುವ ಸಮ್ಯಕ್ ವ್ಯಾಯಾಮ, ಸಮಾಧಾನ ಮತ್ತು ವಿಚಾರಶೀಲತೆಯನ್ನು ಮೂಡಿಸುವ ಸಮ್ಯಕ್‌ ಸತ್ತಿ ಇವುಗಳನ್ನು ಸಾಧಿಸುವಾಗ ಎದುರಾಗುವ ಐದು ಅಡ್ಡಿ-ಆತಂಕಗಳಾದ: ದುರಾಸೆ, ಕೆಟ್ಟ ಸಂಕಲ್ಪ, ಸೋಮಾರಿತನ, ಸಂಶಯ ಮತ್ತು ಅನಿಶ್ಚಿತತೆ ಇವುಗಳನ್ನು ಮೀರಬೇಕೆಂದರೆ ಮನಸ್ಸಿನ ಏಕಾಗ್ರತೆ ಉಂಟು ಮಾಡುವ ಸಮ್ಯಕ್ ಸಮಾಧಿ. ಇದರ ಜೊತೆಗೆ ಸದ್ಗುಣಗಳ ಮಾರ್ಗಗಳಾದ ಶೀಲ, ದಾನ, ಉಪೇಕ್ಖಾ, ನಿಕ್ಖಾಮ, ವೀರ‍್ಯ,(ಧೈರ್ಯ) ಕಾಂತಿ, ಸಚ್ಚ, ಅಧಿಥಾನ, ಕರುಣ, ಮೈತ್ರಿ ಈ ಸದ್ಗುಣಗಳನ್ನು ವ್ಯಕ್ತಿಗಳು ತಮ್ಮ ಶಕ್ತ್ಯಾನುಸಾರ ಬಳಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಬೇಕೆಂದು ಬುದ್ಧ ಹೇಳುತ್ತಾನೆ. ಇವುಗಳನ್ನೇ ದಶಪರಾಮಿತ ಅಂದರೆ ಪರಿಪೂರ್ಣಸ್ಥಿತಿ ಎಂದು ಕರೆಯಲಾಗುತ್ತದೆ.

ನಮ್ಮ ಸಮಾಜದಲ್ಲಿ ನಿತ್ಯ ನಡೆಯುವ, ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರಗಳಿಂದ ಕ್ಷೋಭೆಗೊಂಡು, ಗಾಯಗೊಂಡು ನರಳುತ್ತಿರುವ ಸಮಾಜಕ್ಕೆ, ವರ್ತಮಾನದ ಸಂಕಟಗಳಿಗೆ ಬುದ್ಧನ ಪಂಚಶೀಲ ತತ್ವಗಳು, ಅಷ್ಟಾಂಗ ಮಾರ್ಗ, ಸದ್ಗುಣಗಳ(ದಶಪರಾಮಿತ) ಮಾರ್ಗ ದಿವ್ಯ ಔಷಧಿಯಾಗಬಲ್ಲವು. ಬುದ್ಧ ಹೇಳಿದ ಒಂದೊಂದು ತತ್ವಗಳೂ ಮನುಷ್ಯನ ಬಿಡುಗಡೆಯ ದಾರಿಗೆ ಬೆಳಕಾಗಿ ಕಾಣುತ್ತವೆ. ಅವುಗಳನ್ನು ಅರ್ಥೈಸಿಕೊಳ್ಳದೆ ಅನುಷ್ಠಾನಕ್ಕೆ ತರದೆ ನಾವಿನ್ನು ಜಾತಿ, ದೇವರು, ಧರ್ಮ, ಆತ್ಮ-ಪರಮಾತ್ಮ ಎನ್ನುವ ಜಂಜಾಟದಲ್ಲೇ ಸಿಲುಕಿಕೊಂಡಿದ್ದೇವೆ. ಒಮ್ಮೆ ಬುದ್ಧ ತೋರಿದ ದಾರಿಯಲ್ಲಿ ನಡೆದು ನೋಡಿದರೆ ತಿಳಿಯುತ್ತದೆ. ಆ ದಾರಿ ಎಷ್ಟೊಂದು ಸರಳವಾದದ್ದು, ಸ್ವಚ್ಚವಾದದ್ದು, ಸ್ಪಷ್ಟವಾದದ್ದು ಎಂದು. ಆದರೆ ಸಾಮಾಜಿಕ ಹೊಣೆಗಾರಿಕೆಯಿಲ್ಲದೆ ಕೊಲೆ, ಹಿಂಸೆ, ಕ್ರೌರ್ಯವನ್ನೇ ವಿಜೃಂಭಿಸುವಂತೆ ಢಾಳಾಗಿ ತೋರಿಸುತ್ತಿರುವ ದೃಶ್ಯಮಾಧ್ಯಮಗಳ, ಸಾಮಾಜಿಕ ಜಾಲತಾಣಗಳ ಪ್ರೇರಣೆಯಿಂದ ತಾವು ಮಾಡಿದ ತಪ್ಪುಗಳಿಗೆ ಸ್ವಲ್ಪವೂ ಪಶ್ಚಾತ್ತಾಪ ಪಡದೆ ಸಲೀಸಾಗಿ ಬದುಕುವ ಜನರ ಮನಸ್ಸು ಜಡಗೊಂಡು ನಿರ್ಭಾವುಕವಾದ ಇಂತಹ ಕಲುಷಿತ ವಾತಾವರಣದಲ್ಲಿ “ತನಗೂ ಒಂದು ದಿನ ಸಾವಿದೆ ಎಂದು ತಿಳಿದ ಮನುಷ್ಯ ಇನ್ನೊಬ್ಬರಿಗೆ ಕೇಡು ಬಯಸಲಾರ" ಎನ್ನುವ ಬುದ್ಧನ ಮಾತು ನಮ್ಮನ್ನು ಸದಾ ಎಚ್ಚರದಲ್ಲಿರುವಂತೆ ಕಾಪಿಡುತ್ತದೆ. ಬುದ್ಧ ಎಂದರೇನೇ ಮನುಕುಲದ ಅರಿವಿನ ಮಹಾ ಮುಂಬೆಳಗು. ಆ ಬೆಳಕಿನ ದಾರಿಯಲ್ಲಿ ನಮ್ಮೊಳಗಿನ ಕತ್ತಲು ಕರಗಿಸಿಕೊಂಡು ಸಾಗೋಣ.

- ಮೋದೂರು ತೇಜ.

MORE FEATURES

ಮಣಿಪುರದ ಜನರ ನೋವಿಗೆ ದನಿಯಾಗುವ ಹೆಬ್ಬಯಕೆ ಈ ಕೃತಿಯದು

16-06-2024 ಬೆಂಗಳೂರು

'ಈ ಸಂಕಲನದ ಉದ್ದೇಶ ಮಣಿಪುರದ ಜನರ ನೋವಿಗೆ ದನಿಯಾಗುವ ಹೆಬ್ಬಯಕೆಯನ್ನು ಹೊತ್ತಿದೆ. ಮಣಿಪುರ ಘಟನೆಯನ್ನು ಖಂಡಿಸಿದ ಎಲ...

ಒಂದು ಊರಿನ ಕಥೆಯನ್ನು ನಮಗೆ ತೋಚಿದಂತೆ ಬರೆಯಲಾಗದು: ಶರಣ್ಯ ಕೋಲ್ಚಾರ್

16-06-2024 ಬೆಂಗಳೂರು

‘ಒಂದಷ್ಟು ವರ್ಷಗಳ ಹಿಂದೆ ಪ್ರತಿಯೊಂದು ಕ್ಷೇತ್ರದಲ್ಲೂ ಕೊಡಗು ಹೇಗೆ ಮುಂದುವರಿದಿತ್ತು ಎನ್ನುವುದನ್ನು ಬರಹದಲ್ಲಿ ...

ಶ್ರುತಿ ಅವರ ಮೊದಲ ಸಂಕಲನದಲ್ಲೇ ಅವರ ವೈಚಾರಿಕ ಸ್ಪಷ್ಟತೆಗೂ ಉದಾಹರಣೆಯಾಗಿ ಕವಿತೆಗಳಿವೆ

16-06-2024 ಬೆಂಗಳೂರು

‘ಇಡೀ ಸಂಕಲನದ ಪ್ರಾತಿನಿದಿಕವೆಂಬಂತೆ ಮೊದಲ ಕವಿತೆ ಇದೆ. ದನಿ, ಶೈಲಿ, ವಿಷಾದ ಎಲ್ಲವಕ್ಕೂ ಇದು ಮಾದರಿಯಂತಿದೆ&rsqu...