ಅನುಪಮಾ ಅವರ ಶೈಲಿ ಹೆಚ್ಚು ಅಬ್ಬರವಿಲ್ಲದೆ ಮನಸ್ಸನ್ನು ಆರ್ದ್ರ ಗೊಳಿಸುತ್ತದೆ


'ಅನುಪಮಾ ಅವರ ಶೈಲಿ ಹೆಚ್ಚು ಅಬ್ಬರವಿಲ್ಲದೆ, ಆಡಂಬರವಿಲ್ಲದೆ, ಶಾಸ್ತ್ರೀಯ ಚೌಕಟ್ಟುಗಳಲ್ಲಿ, ಹೊರೆ ಎನಿಸದ ಭಾವ ತೀವ್ರತೆಯಿಂದ, ಮನಸ್ಸನ್ನು ಆರ್ದ್ರ ಗೊಳಿಸುತ್ತದೆ' ಎನ್ನುತ್ತಾರೆ ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಅನುಪಮಾ ಪ್ರಸಾದ್ ಅವರ ಚೋದ್ಯ ಕತಾಸಂಕಲನದ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ. 

ಬುಕ್ ಬ್ರಹ್ಮ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದು ವಿಶೇಷವಾಗಿ ಗಮನ ಸೆಳೆದಿದ್ದ ಕಥೆ ‘ಕುಂತ್ಯಮ್ಮಳ ಮಾರಾಪು’ ಓದಿ, ಇಂಥದ್ದೊಂದು ವಿಶಿಷ್ಟವಾದ ಲೋಕವನ್ನು ಪರಿಚಯಿಸಿದ್ದ ಅನುಪಮಾ ಪ್ರಸಾದ್ ಅವರ ಇನ್ನಷ್ಟು ಕಥೆಗಳನ್ನು ಓದುವ ಆಸೆಯಾಗಿತ್ತು. ಹಲವು ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಒಂದಕ್ಕಿಂತ ಒಂದು ಚೆನ್ನಾಗಿರುವ ಒಟ್ಟು ಹದಿಮೂರು ಕಥೆಗಳು ‘ಚೋದ್ಯ’ ಸಂಕಲನದಲ್ಲಿ ಸಿಕ್ಕವು. 

‘ಮೊಲ್ಲೆ ಹೂ ಮಾದೇವಿ ಮೀಮಾಂಸೆ’ ಎನ್ನುವ ಕತೆಯಲ್ಲಿ ಹೂವು ಮಾರಿ, ಕೈಗಾಡಿಯಲ್ಲಿ ಭಜಿ ಮಾಡಿ ಮಾರಿ ಕಷ್ಟಪಟ್ಟು ದುಡಿದು ತನ್ನ ಪಾಡಿಗೆ ತಾನು ಜೀವನ ನಡೆಸುತ್ತಿದ್ದ ಮಾದೇವಿ, ಅವಳನ್ನು ಕುಡಿದು ಬಂದು ಹೊಡೆಯುವ ಗಂಡ, ಆಕಸ್ಮಿಕವಾಗಿ ತೀರಿಕೊಂಡಾಗ, ಅವಳನ್ನು ಕಾಪಾಡುವ ಪೊಲೀಸ್ ನಾಗೇಶಪ್ಪ, ಅವಳ ಮೇಲೆ ಕಣ್ಣು ಹಾಕುವ ಯಲ್ಲರೆಡ್ಡಿ, ಅವಳು ಸೊಪ್ಪು ಹಾಕದಿದ್ದಾಗ ಗಂಡನನ್ನು ಕೊಂದವಳು ಎಂದು ಮಗನನ್ನು ತಾಯಿಯ ವಿರುದ್ಧ ಎತ್ತಿ ಕಟ್ಟುವುದು, ಅವನ ಬೈಕ್ ಹಿಂದೆ ಕೂರುವ ಆಸೆಗಾಗಿ ಅಮ್ಮನನ್ನೇ ದೂರಿ ಓಡಿ ಹೋಗುವ ಮಗ ಇದೆಲ್ಲವೂ ಮತ್ತೊಂದು ಲೋಕವನ್ನೇ ತೆರೆದಿರುತ್ತದೆ. ತನ್ನದೇ ನೂರು ಹಳವಂಡಗಳು ಇದ್ದರೂ, ತಬ್ಬಲಿ ಮಕ್ಕಳಿಗೆ ದಾರಿ ತೋರಿಸುವ ಮಾದೇವಿ ನಿಜಕ್ಕೂ ಮಹಾ ದೊಡ್ಡ ಹೃದಯದವಳು. 

‘ಪುಟ್ಟ ದೇವತೆಯ ಸ್ವಪ್ನಗಳು’ ಎನ್ನುವ ಪುಟ್ಟ ಕಥೆಯಲ್ಲಿ ಘಟ್ಟದ ಸೀಮೆಯ ವರ್ಣನೆಗಳು ಚೆನ್ನಾಗಿವೆ. ದತ್ತಾತ್ರೇಯ ಅವರು ತೋಟದ ಕೆಲಸಕ್ಕೆ ಕೂಲಿ ಕೆಲಸದವರನ್ನು ಹುಡುಕುವ, ಸಿಕ್ಕ ಮೇಲೆ ಉಳಿಸಿಕೊಳ್ಳುವ, ಅವರ ದೈನಂದಿನ ಅಗತ್ಯಗಳನ್ನು ಪೂರೈಸುವ ಪಜೀತಿಗಳನ್ನು ಕಾಣಬಹುದು. ಘಟ್ಟದ ಮೇಲಿನ ಒಂದು ಪುಟ್ಟ ಸಂಸಾರ ಬಂದು ಇವರಲ್ಲಿ ಸೇರಿಕೊಂಡು, ದುಡಿಯುತ್ತಾ, ಇಲ್ಲೇ ಇರಬೇಕೇ, ಹೋಗಬೇಕೇ ಎನ್ನುವ ಜಿಜ್ಞಾಸೆಗೆ ಬಿದ್ದು ಕೊನೆಗೂ ಅವರ ತೀರ್ಮಾನ ಮಗಳ ಓದಿನ ಮೇಲೆ ನಿಲ್ಲುವುದು, ಅದರ ಆಯ್ಕೆ ಅವಳೇ ಮಾಡುವುದು ಸೊಗಸಾಗಿದೆ. 

ಮೋಳಜ್ಜಿಯ ಚೋದ್ಯಗಳು- ವಸ್ತು ಮತ್ತು ಶೈಲಿಯಿಂದ ವಿಶೇಷವಾಗಿದೆ. 

ಅನುಪಮಾ ಅವರ ಶೈಲಿ ಹೆಚ್ಚು ಅಬ್ಬರವಿಲ್ಲದೆ, ಆಡಂಬರವಿಲ್ಲದೆ, ಶಾಸ್ತ್ರೀಯ ಚೌಕಟ್ಟುಗಳಲ್ಲಿ, ಹೊರೆ ಎನಿಸದ ಭಾವ ತೀವ್ರತೆಯಿಂದ, ಮನಸ್ಸನ್ನು ಆರ್ದ್ರ ಗೊಳಿಸುತ್ತದೆ. ಸ್ತ್ರೀ ಪಾತ್ರಗಳನ್ನು ದುರ್ಬಲರಂತೆ ಬಿಂಬಿಸದೆ, ಇದ್ದುದರಲ್ಲೇ ಈಜಿ ಜಯಿಸುವ ಸಶಕ್ತರನ್ನಾಗಿ ಬಿಂಬಿಸಿರುವುದು ಇಷ್ಟವಾಯ್ತು.

ಇತ್ತೀಚೆಗೆ ಪ್ರಕಟಿಸಿದ ‘ಸಂಗಂ ಸಾಹಿತ್ಯ ಪುರಸ್ಕಾರ-2’ ರ ಅಂತಿಮ ಸುತ್ತಿನ ಐದು ಕಥಾ ಸಂಕಲನಗಳ ಪಟ್ಟಿಯಲ್ಲಿ ‘ಚೋದ್ಯ’ ಕೂಡ ಆಯ್ಕೆಯಾಗಿದೆ.

-ಪೂರ್ಣಿಮಾ ಮಾಳಗಿಮನಿ

 

MORE FEATURES

ವಿಮರ್ಶೆ ಎಂದರೆ ಪುಸ್ತಕದ ಆಳವಾದ ಓದು

18-05-2024 ಬೆಂಗಳೂರು

‘ವಿಮರ್ಶಾ ಬರಹಗಳ ಮುಖ್ಯ ಉದ್ದೇಶ ಓದುಗರ ಪುಸ್ತಕ ಓದಿನ ತಿಳಿವಳಿಕೆಗೆ ರಹದಾರಿ ಮಾಡಿಕೊಡುವುದಾಗಿದೆ’ ಎನ್ನು...

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...