ಬಾಬಾ ಸಾಹೇಬರ ಜ್ಞಾನಾಮೃತವನ್ನು ಕನ್ನಡಕ್ಕೆ ತಂದಿರುವ ಕಾರ್ಯ ಮೆಚ್ಚುವಂತಹದ್ದು


ಆರಡಿ ಮಲ್ಲಯ್ಯ ಅವರ ವೈಚಾರಿಕ ಚಿಂತನೆಯ ದೂರದೃಷ್ಟಿಯಿಂದ ಬಾಬಾ ಸಾಹೇಬರ ಜ್ಞಾನಾಮೃತವನ್ನು ಕನ್ನಡಕ್ಕೆ ತಂದಿರುವ ಕಾರ್ಯವಂತೂ ಮೆಚ್ಚುಗೆಯ ಕೆಲಸವಾಗಿದೆ. ಅದರಲ್ಲೂ ಆಂಗ್ಲಭಾಷೆಯ ಮಾಹಿತಿಯನ್ನು ಕನ್ನಡಕ್ಕೆ ಅನುವಾದ ಮಾಡುವ ಕಾರ್ಯವು ಸುಲಭದ ಕೆಲಸವಲ್ಲ ಎನ್ನುತ್ತಾರೆ ಮನುಶ್ರೀ ಸಿದ್ದಾಪುರ ಅವರು ಆರಡಿಮಲ್ಲಯ್ಯ ಕಟ್ಟೇರ ಅವರು ಅನುವಾದಿಸಿರುವ "ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದಿನಚರಿ" ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಈ ಕೃತಿಯನ್ನು ಅರ್ಹನಿಶಿ ಪ್ರಕಾಶನದಿಂದ ತರಿಸಿ ಹಾಗೆ 2-3 ಪುಟಗಳಿಗೆ ಕಣ್ಣಾಡಿಸಲು ಆರಂಭಿಸಿದ್ದು ಆದಾಗಲೇ 10-12 ಪುಟಗಳು ಮುಗಿದಿತ್ತು. ಓದುವ ಆಸಕ್ತಿಯಿಂದ ಮುಂದುವರಿಸಿ ಮುನ್ನಡಿಯತ್ತ ಗಮನಿಸಿದೆ. ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು ತಮ್ಮ ವೈಚಾರಿಕ ಚಿಂತನೆಯ ಅರಿವಿನೊಳಗೆ ಸ್ವಾತಂತ್ರ್ಯ ಕೇವಲ ಕೆಲ ಅಧಿಕಾರಸ್ಥ ಸ್ವಜಾತಿಗಳ ಸ್ವತ್ತಾಗಿದೆಯೆಂಬ ಅಂಬೇಡ್ಕರ್ ಅವರು ಭವಿಷ್ಯ ಕಂಡಂತೆ, ವಾಸ್ತವದ ವಿದ್ಯಮಾನದಲ್ಲಿನ ಜ್ವಲಂತ ನಿದರ್ಶನ ಎಂಬಂತೆ ನೈಜತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ . ಇಂತಹ ಕಾಲಘಟ್ಟದಲ್ಲಿ ಬಹುಬೇಗ ಬೆಳವಣಿಗೆ ಕಾಣುತ್ತಿರುವವರಲ್ಲಿ ಬಾಬಾ ಸಾಹೇಬರು ಒಬ್ಬರು. ಅವರು ದಲಿತ ನಾಯಕರಾಗಿ ಉಳಿಯದೆ ಎಲ್ಲ ಸಮುದಾಯದವರಿಗೂ ಬೇಕಾದವರಾಗಿದ್ದರು ಎಂಬ ಅಂಶವನ್ನು ಮನಗಂಡಿದ್ದಾರೆ. ಅಂಬೇಡ್ಕರ್ ಸಹವಾಸದಲ್ಲಿ ಡಾ.ಸವಿತಾ ಅಂಬೇಡ್ಕರ್ ಅವರ ಅನೇಕ ಸಂಗತಿಗಳು ಹೊರ ಜಗತ್ತಿಗೆ ಗೊತ್ತಿರದ ಬಗ್ಗೆ, ಅಂಬೇಡ್ಕರು ಮೇರು ವ್ಯಕ್ತಿತ್ವದ ಕುರಿತಾಗಿ ಅನೇಕರು ಬರೆದಿರುವ ಕೃತಿಗಳ ಸಮಗ್ರತೆಯ ಬಗ್ಗೆ, ಅತಿ ಮುಖ್ಯವಾಗಿ ಜ್ಞಾನ ಭಂಡಾರದ ದೇಗುಲಕ್ಕೆ ಅರ್ಚಕರಂತೆ ಪ್ಯಾರಿಲಾಲ್ ಸೂಚಿತ ವ್ಯಕ್ತಿಯಾದ ದೇವಿದಯಾಳ್ ಅವರು 8 ವರ್ಷಗಳಿಗಿಂತಲೂ ಹೆಚ್ಚಿನ ದಿನಗಳ ಕಾಲ ಬಾಬಾ ಸಾಹೇಬರ ನಿಷ್ಠಾವಂತರಾಗಿ ಒಡನಾಟ ಹೊಂದಿದ್ದು, ಆ ಅವಧಿಯಲ್ಲಿನ ತೀರಾ ಹತ್ತಿರದಿಂದ ಕಂಡುಬಂದ ಸೂಕ್ಷ್ಮ ವಿಚಾರಗಳ ಸಹಿತ ತಮ್ಮ ನೆನಪಿನ ಬುತ್ತಿಯಿಂದ ಹೆಕ್ಕಿ ಹೆಕ್ಕಿ ಕೃತಿ ರೂಪ ಕೊಡುವ ಮಹತ್ವದ ನಿರ್ಧಾರಕ್ಕೆ ನಿಜಕ್ಕೂ ಶ್ಲಾಘನೀಯ.    

ಆರಡಿ ಮಲ್ಲಯ್ಯ ಅವರ ವೈಚಾರಿಕ ಚಿಂತನೆಯ ದೂರದೃಷ್ಟಿಯಿಂದ ಬಾಬಾ ಸಾಹೇಬರ ಜ್ಞಾನಾಮೃತವನ್ನು ಕನ್ನಡಕ್ಕೆ ತಂದಿರುವ ಕಾರ್ಯವಂತೂ ಮೆಚ್ಚುಗೆಯ ಕೆಲಸವಾಗಿದೆ. ಅದರಲ್ಲೂ ಆಂಗ್ಲಭಾಷೆಯ ಮಾಹಿತಿಯನ್ನು ಕನ್ನಡಕ್ಕೆ ಅನುವಾದ ಮಾಡುವ ಕಾರ್ಯವು ಸುಲಭದ ಕೆಲಸವಲ್ಲ. ಈ ನಿಟ್ಟಿನಲ್ಲಿ ಮಲ್ಲಯ್ಯ ಅವರ ಶಿಸ್ತಿನ ಓದು, ಪ್ರತಿಭೆಯ ಕ್ರಿಯಾಶೀಲತೆ ಹಾಗೂ ಧ್ಯಾನಸ್ಥ ಸ್ಥಿತಿ ಇವೆಲ್ಲವೂ ಅನುವಾದ ಕಾರ್ಯಕ್ಕೆ ಸುಲಭವಾಗಿಸಿವೆ.

ಏಕೆಂದರೆ ಇತ್ತೀಚಿಗೆ ಮೇ ತಿಂಗಳ ಮಯೂರ ಸಂಚಿಕೆಯಲ್ಲಿರುವ ವಿಶಾಖ ಎನ್ ಅವರ ಅನುವಾದ ಸಂಬಂಧಿತವಾದ "ಹರ್ಷನೀಯಂ" ಲೇಖನದಲ್ಲಿ ಅನುವಾದಕರ ಸುಖ-ದುಃಖದ ಪಾಡ್ ಕಾಸ್ಟ್ ಪರಪಂಚ -ದಲ್ಲಿ ವಿಶ್ವ ಸಾಹಿತ್ಯದ ಅನುವಾದಕರನ್ನೆಲ್ಲ ಒಂದು ವೇದಿಕೆಯಡಿ ತರುವ ಪ್ರಾಮಾಣಿಕ ಪ್ರಯತ್ನದ ಬಗ್ಗೆ ಮಾಹಿತಿಯಿದೆ.ಈ ಬಳಗದವರ ಕಾರ್ಯಕ್ಷಮತೆ ಕುರಿತಾಗಿ ಲೇಖಕ-ಪ್ರಕಾಶಕರಾದ ವಸುಧೇಂದ್ರ ಸರ್ ಇಂತಹ ಹೊಸತನದ ಸಾಹಿತ್ಯ ವಿಸ್ತಾರಕ್ಕೆ ಸೂಕ್ತ ವೇದಿಕೆ, ಇದರಿಂದ ಅನುವಾದಕರ ಪೂರ್ವಪರ ಮಾಹಿತಿಯ ಆಧಾರದಿಂದ ಪುಸ್ತಕದ ವಿಷಯದ ಜೊತೆಗೆ ವೈಯುಕ್ತಿಕ ಸಂಗತಿಗಳು, ಅನುವಾದ ಮಾಡುವವರ ಶ್ರಮದ ಬಗೆಗೆ ಹೇಳುತ, ಪೂರಕವಾಗಿ ಗಮನಾರ್ಹ ವಿಷಯವೆಂದರೆ ಪ್ರವಾಸ ಕಥನದ ಬರೆದಾಗ, ಅಲ್ಲಿನ ಇತಿಹಾಸ ವರ್ತಮಾನದ ಸೂಕ್ಷ್ಮಗಳೆಲ್ಲ ನಮಗೆ ನಿಲುಕುತ್ತವೆ. ಕನ್ನಡದಲ್ಲಿಯೂ ಈ ರೀತಿಯ ಪಾಡ್ ಕಾಸ್ಟ್ ಗಳು ಬರಬೇಕಾದ ಅವಶ್ಯಕತೆಯನ್ನು ತಿಳಿಸಿದ್ದಾರೆ  .ಹಾಗೆಯೇ ನಮಗೆ ಇಂಗ್ಲಿಷ್ ಹೆಚ್ಚಿನ ಸಂವಹನದ ಸಮಸ್ಯೆಯಿಂದಲೋ ಏನೋ, ವಿಶ್ವದ ಬೇರೆ ಭಾಷೆಗಳ ಪುಸ್ತಕಗಳ ಕಡೆಗೆ ವಿಶೇಷ ಗಮನ ಹರಿಸುತ್ತಿಲ್ಲ ಎಂಬ ವಾಸ್ತವತೆಯನ್ನು ಹಂಚಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮಲ್ಲಯ್ಯ ಅವರ ಓದಿನ ಶಿಸ್ತು, ಪ್ರಾಮಾಣಿಕ ಪ್ರಯತ್ನದಿಂದ ಅವರ ಅನುವಾದಿತ ಕೃತಿಯು ಕನ್ನಡಕ್ಕೆ ಎಂಬಂತೆ ಮೊದಲ ಪ್ರಯತ್ನದಿಂದ ಶ್ರಮಕ್ಕೆ ಫಲ ದೊರೆತಿದೆ ಎಂಬ ಅಂಶವು ವ್ಯಕ್ತವಾಗಿದೆ.

ನನಗಂತೂ ಈ ಕೃತಿಯನ್ನು ಮೊದಲಿಗೆ ಇಡೀಯಾಗಿ ಓದಿದಾಗ ಅರ್ಥಪೂರ್ಣತೆಯ ಸ್ಪಷ್ಟ ಚಿತ್ರಣ ಕಾಣಲಿಲ್ಲ..ತದನಂತರ ದಿನಾಲೂ ಇಂತಿಷ್ಟು ಪುಟಗಳನ್ನು ಓದುವ ಸಂದರ್ಭದಲ್ಲಿ ಮುಖ್ಯಾಂಶಗಳ ಟಿಪ್ಪಣಿ ಮಾಡಿಕೊಳ್ಳುವ ಮೂಲಕ, 10-12 ದಿನಗಳವರೆಗೆ  ಓದಿದಾಗ ಮಾಡಿಕೊಂಡ ಟಿಪ್ಪಣಿಗಳ ಕ್ರೊಡೀಕರಿಸಿ ತನ್ನ ಅರಿವಿಗೆ ಬಂದಂತಹ ವಿಚಾರ ಸಂಗತಿಗಳ ವಿವರಣೆಯ ಲೇಖನ ಮಾಡಿದ್ದು  ಒಂದಷ್ಟು ಖುಷಿಯ ಜೊತೆಗೆ ಅಂಬೇಡ್ಕರ್ ಅವರ ಬಗ್ಗೆ ಗೊತ್ತಿರದ ಅತಿಸೂಕ್ಷ್ಮವಾದ ಸಂಗತಿಗಳಿಂದ ವೈಚಾರಿಕತೆಯ ಸತ್ವತೆ ಗೋಚರಿಸತೊಡಗಿತು.

ಏಕೆಂದರೆ ದೇವಿದಯಾಳ್ ಅವರು ತಿಳಿಸಿರುವಂತೆ ಬಾಬಾಸಾಹೇಬರ ಬದುಕಿನ ಜೀವಾನುಭವಗಳನ್ನು ಇಡೀಯಾಗಿ ಕಟ್ಟಿಕೊಡುವುದು ಅಷ್ಟು ಸುಲಭವಲ್ಲ. ಅವರೊಬ್ಬ ಜ್ಞಾನ ಭಂಡಾರದ ನಿಧಿ. ಆಳಕ್ಕೆ ಇಳಿದಷ್ಟು ಭಂಡಾರದ ಅಮಿತದ ಗಣಿ, ಅಂತಹ ಜ್ಞಾನ ಶಿಖರದಂತಹ ವ್ಯಕ್ತಿತ್ವ ಹೊಂದಿದ್ದವರು. ಜಗತ್ತಿನ ಶ್ರೇಷ್ಠ ಮೇಧಾವಿ ಪ್ರತಿಭೆಗಳ ಸಮ್ಮೀಲನವಾಗಿದ್ದರು. ಜಾನ್ಸನ್ ಅವರ ಸಾಹಿತ್ಯಿಕ ಅಧ್ಯಯನ ಮತ್ತು ಪ್ರತಿಭೆ, ಮಾರ್ಟಿನ್ ಲೂಥರ್ ನಿರ್ಭೀತ ಸುಧಾರಣಾವಾದದ ಪ್ರೌಢಿಮೆಯಿಂದ ತಮ್ಮ ವೈಚಾರಿಕ ಸಿದ್ಧಾಂತದ ಮುಖೇನ ಧರ್ಮಾಂಧತೆಯ ಬೇರುಗಳನ್ನು ಅಲುಗಾಡಿಸಿದವರು. ಅಷ್ಟೇಕೆ ತಮ್ಮ ಪ್ರಖರ ವೈಚಾರಿಕ ಚಿಂತನೆಯ ಪ್ರಬಂಧಗಳು, ಭಾಷೆಗಳ ಬರಹಗಳಿಂದ ಫ್ರಾನ್ಸ್‌ನಲ್ಲಿನ ಸಂಪ್ರದಾಯವಾದದ ವಿರುದ್ಧ  ಹೋರಾಟಕ್ಕೆ ವೋಲ್ಟೇರ್ ನ ಮಾನಸಿಕ ಧೈರ್ಯ ಮತ್ತು ಸತ್ಯತೆಯ ಜ್ಞಾನಶಕ್ತಿಯನ್ನು ಪಡೆದುಕೊಂಡಿದ್ದರು. ಜೊತೆಗೆ ಲಿಂಕನ್ ಮತ್ತು ಗ್ಯಾರಿಬಾಲ್ಡಿಯ ದೇಶಪ್ರೇಮ ( ಪಾಟ್ರಿಯೊಟಿಸಂ)ವನ್ನು ಕಾರ್ಲ್ ಮಾರ್ಕ್ಸ್ ನ ಪಾಂಡಿತ್ಯ ಪೂರ್ಣ ಪರಿಶ್ರಮ, ಬರ್ಕ್ ನ ನಿರರ್ಗಳ ಮಾತುಗಾರಿಕೆ, ಬಿಸ್ಮಾರ್ಕ್ ನ ಸಾಮರ್ಥ್ಯವನ್ನು ಗಳಿಸಿಕೊಂಡಿದ್ದರು. ಮೇಲಿನ ಈ ಎಲ್ಲ ಅಂಶಗಳಿಗಿಂತ ಹೆಚ್ಚಾಗಿ ಬುದ್ಧನ ಕಾರುಣ್ಯ, ಪ್ರೀತಿ, ಸಹಾನುಭೂತಿ ಮತ್ತು ಪ್ರವಾದಿಯ ದೃಷ್ಟಿಯನ್ನು ಹೊಂದಿದ್ದರು ಎಂಬ ಸಂಗತಿಗಳು ವೇದ್ಯವಾಗುತ್ತವೆ. ಹೀಗೆ ಅಗಣಿತ ಸದ್ಗುಣಗಳಿಂದ ಕೂಡಿದ ಬಾಬಾಸಾಹೇಬರ ಜೀವನ ಶೈಲಿಯನ್ನು ವಿವರಿಸಲು ಸಾಧ್ಯವಾಗದಷ್ಟು ಸಂಕೀರ್ಣವಾದ ವ್ಯಕ್ತಿತ್ವ ಹೊಂದಿದ್ದವರಾಗಿದ್ದರು. ಅವರು ಬದುಕು ಸವೆಸಿದ ರೀತಿ ಅಪೂರ್ವ ಮತ್ತು ಅದ್ವಿತೀಯವಾದುದು. ಈ ಅಂಶಗಳಿಗೆ ಮೂಲವೇ ಅವಿರತ ತಪಸ್ಸಿನ ಫಲ ಎನ್ನಬಹುದು.ಈ ತಪಸ್ಸಿನ ಪರಿಶ್ರಮದ ಬಗ್ಗೆ "ಪ್ರಪಂಚಕ್ಕೆಲ್ಲಾ ರಾತ್ರಿ ಆವರಿಸಿದಾಗಲೇ ಮಹಾಪುರುಷರಿಗೆ ಮೊದಲಾಗುವುದೇನೋ"  ಎಂಬಂತಹ  ದೇವಿದಯಾಳ್ ಅವರ ಮಾತು ಸಾಕ್ಷಿಕರಿಸುತ್ತದೆ.

ಇಂತಹ ಅಪೂರ್ವ ಸಾಧನೆಗೈದ ಬಾಬಾಸಾಹೇಬರ ದಿನಚರಿ ಕೃತಿಯ ಕುರಿತಾಗಿ ವಿವರಿಸಲು ಪುಟಗಳ ಸಂಖ್ಯೆಯೇ ಸಾಲದು. ಕಾರಣವಿಷ್ಟೇ ಒಂದೊಂದು ಲೇಖನಗಳಿಂದ ಅತಿಸೂಕ್ಷ್ಮವಾದ ಸಂಗತಿಗಳು ತೆರೆದುಕೊಳ್ಳುವ ಮೂಲಕ ನಮ್ಮಲ್ಲಿ ಕುತೂಹಲ ಅಚ್ಚರಿ ಹುಟ್ಟಿಸಿದ ರೀತಿಯಂತೂ ಅತಿಶಯೋಕ್ತಿಯಲ್ಲ. ಪೂರಕವಾದ ಅಂಶಗಳಿಂದ ಹೇಳುವುದಾದರೆ, ಬಾಬಾಸಾಹೇಬರು ಉಡುಗೆ ವಿಚಾರವಾಗಿ ಒಮ್ಮೆ ಬಾರ್ ರೂಮಿನಲ್ಲಿ ಪುಸ್ತಕ ಓದುವಾಗ ವಕೀಲನೊಬ್ಬನ ವ್ಯಂಗ್ಯ ಪ್ರಶ್ನೆಗೆ ಉತ್ತರಿಸಿದ ಮಾತಿನಿಂದ ಪೆಚ್ಚಾದುದು, ಸಂದರ್ಶನ ಸಮಯದಲ್ಲಿ 'ಪೂರ್ವಿಕರ ಶೈಲಿಗಿಂತ ಆಂಗ್ಲರ ಶೈಲಿಯನ್ನು ಏಕೆ ಅನುಸರಿಸುತ್ತೀರಿ? ಎಂಬ ಪ್ರಶ್ನೆಗೆ 'ನೀವು ಯಾರನ್ನು ಪೂರ್ವಿಕರು ಎಂದು ಭಾವಿಸುತ್ತೀರ ? ಎಲ್ಲರಿಗೂ ಪೂರ್ವಿಕರು ಆಡಂ ಅಥವಾ ಈವ್ ಅಲ್ಲವೇ ?ಎಂಬ ಮಾತಿಗೆ ಮೌನವೇ ಗತಿಯಾಯ್ತು..

1944 ರಲ್ಲಿ ಸರ್.ಸಿ ಪಿ ರಾಮಸ್ವಾಮಿ ಅಯ್ಯರ್ ದಿವಾನರಾಗಿದ್ದಾಗ ಅಸ್ಪೃಶ್ಯರ ಮಂದಿರ ಪ್ರವೇಶಕ್ಕೆ ವಿರೋಧಿಸುವ ಮಾತಿಗೆ' ಆತ ನಿಜವಾಗಲೂ ದುರ್ಮಾರ್ಗಿ ,ಮಂದಿರ ಪ್ರವೇಶ ವಿರೋಧಿಸುವ ನೀಚ'ಎಂಬ ನೇರನುಡಿ, ಜ್ಞಾಪಕಶಕ್ತಿ, ಸಮಯ ಸದ್ವಿನಿಯೋಗ, ಪುಸ್ತಕ ಪ್ರೀತಿ ಓದಿನ ಹಸಿವು ಮುಂತಾದ ಪ್ರಾಸಂಗಿಕ ಅಂಶಗಳನ್ನೊಳಗೊಂಡ ಈ ಕೃತಿಯು ಓದುಗರ ಮನಸ್ಥಿತಿಯನ್ನು ಪರಿವರ್ತಿಸುವಲ್ಲಿ ಸಫಲತೆ ಖಂಡಿತ ಆಗುತ್ತದೆ. ಕೊನೆಯದಾಗಿ ಗಾತ್ರದ ದೃಷ್ಟಿಯಿಂದ ಗಮನಿಸಿದಾಗ ದೇವಿದಯಾಳ್ ಹೇಳುವಷ್ಟು ಈ ಪುಸ್ತಕ ದೊಡ್ಡದಲ್ಲದಿರಬಹುದು ಎಂಬ ಸಂದೇಶ ಓದುಗರಿಗೆ ಅನಿಸಬಹುದು. ಏನೇ ಇದ್ದರೂ ಈ ಪುಸ್ತಕದಲ್ಲಿ ದಾಖಲಿಸಿದ ವಿಚಾರಗಳಂತು ಅತ್ಯಂತ ಮೌಲಿಕವಾದವುಗಳು. ಇಂಥ ಮಹತ್ವದ ಸಮಾಚಾರಗಳನ್ನು ಒದಗಿಸಿ ಕೊಟ್ಟ ಏಕೈಕ ಹೊತ್ತಿಗೆ ಇದೊಂದೇ. ಇದುವೇ ಈ ಪುಸ್ತಕದ ದೊಡ್ಡತನ ಮತ್ತು ಚಾರಿತ್ರಿಕ ಹಿರಿಮೆ.

ಇದಕ್ಕೆ ಪೂರಕವಾಗಿ ಸುಮಾರು 50 ಪುಟಗಳಿಂದ ಕೂಡಿದ ಮೂರು ಅನುಬಂಧಗಳಲ್ಲಿ ಓದುಗರನ್ನು ಮತ್ತಷ್ಟು ಅರಿವಿನ ಆಳಕ್ಕೆ ಇಳಿಸುವ ಮೂಲಕ ಮಹತ್ವದ ವಿಚಾರಗಳನ್ನು ಅರ್ಥೈಸಿಕೊಳ್ಳಲು ಅನುವು ಮಾಡಿಕೊಡುವ ಉದ್ದೇಶದಿಂದ ಸೇರ್ಪಡೆ ಮಾಡಿದ್ದಾರೆ. ದೇವಿದಯಾಳ್ ಅವರ ಕೇಂದ್ರಾಸಕ್ತಿ ಏನಂದರೆ ಬಾಬಾಸಾಹೇಬರನ್ನು ಕುರಿತಾದ ತನ್ನ ಕಣ್ಣಾರೆ ಕಂಡ, ಕೇಳಿದ ಮಹತ್ವದ ಚಾರಿತ್ರಿಕ ಸತ್ಯಗಳನ್ನು ಈ ದಿನಚರಿ ಹೊತ್ತಿಗೆ ಮುಖೇನ ಜಗತ್ತಿಗೆ ತಿಳಿಯಪಡಿಸುವುದೇ ಆಗಿತ್ತು ಎಂಬಂತಹ ಮನೋಭಿಲಾಷೆಯನ್ನು ವ್ಯಕ್ತಪಡಿಸುತ್ತಿರುವ ಸಂಗತಿ ಗೋಚರಿಸುತ್ತದೆ.(ಈ ತರಹದ ಇನ್ನಷ್ಟು ವಿಚಾರಗಳಿರುವ ಬಾಬಾಸಾಹೇಬರ ಕುರಿತಾದ ಜ್ಞಾನ ದೀವಿಗೆಗಳು ಕನ್ನಡದಲ್ಲಿ ಮೂಡಿಬರಲಿ ಎಂದು ಆಶಿಸುತ್ತ....

ಧನ್ಯವಾದಗಳೊಂದಿಗೆ
ಮನುಶ್ರೀ ಸಿದ್ದಾಪುರ.

 

MORE FEATURES

'ಹೊಂಬಳ್ಳಿ' ಹಗುರ ಪ್ರಬಂಧ ಅಂತ ಹೇಳಿದರೂ ಗಂಭೀರ ಮಾತುಗಳು ಇಲ್ಲಿವೆ

20-05-2024 ಬೆಂಗಳೂರು

'ಈ ಪುಸ್ತಕದಲ್ಲಿರುವ ಲೇಖನಗಳನ್ನು ಓದುವಾಗ ನಾನು ನನ್ನ ಅಮ್ಮನ ಜೊತೆಗೆ ಗೆಳತಿ ಜೊತೆ ಮಾತನಾಡುತ್ತಿದ್ದೇನೆ ಎಂಬ ಆಪ್ತ...

'ಡೇರ್ ಡೇವಿಲ್ ಮುಸ್ತಫಾ' ಚಿತ್ರಕಥೆ ಪುಸ್ತಕ ಬಿಡುಗಡೆ 

19-05-2024 ಬೆಂಗಳೂರು

ಬೆಂಗಳೂರು: ಡೇರ್ ಡೆವಿಲ್ ಮುಸ್ತಫಾ ಚಿತ್ರಕಥೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು 2024 ಮೇ 19ರಂದು ಬೆಂಗಳೂರಿನ ಸುಚಿತ್ರ...

ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಕಾದಂಬರಿಕಾರ ಭಾರತೀಸುತ

19-05-2024 ಬೆಂಗಳೂರು

ಬುಕ್ ಬ್ರಹ್ಮ ವಾರದ ಲೇಖಕ ವಿಶೇಷದಲ್ಲಿ ಓದಿನೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಸೆರೆ ವಾಸ ಅನುಭವಿಸಿದ ಕನ್ನ...